Thursday, December 12, 2013

ಛಲದೋಳ್...............................................!

"ಶ್ರೀಕಾಂತ ನೀನು ಕಾರು ತಗೊಂಡೆ, ಮನೆ ಕಟ್ಟುವ ಹಾಗೆ ಕೂಡ ಆಗಲಿ, ನೀನು ವಿಜಯ ಮುರುಳಿ ಎಲ್ಲರೂ ಚೆನ್ನಾಗಿರಿ.. ಆದರೆ ನೀವು ಏನೇ ಮಾಡಿದರೂ ನಮಗೆಲ್ಲ ಸಂತೋಷವೇ ಆದರೆ....  ಆ ಮಗು ಸಾಧಿಸುತ್ತಿದೆಯಲ್ಲ ಅದು ನಿಜವಾದ ಛಲ.. " ನಮ್ಮ ಪ್ರೀತಿಯ ನಗುಮೊಗದ ರಾಮಿ ಚಿಕ್ಕಪ್ಪ ಮತ್ತು ರಾಜು ಚಿಕ್ಕಮ್ಮ ಈ ಮಾತನ್ನು ಹೇಳಿದಾಗ ಕಣ್ಣಲ್ಲಿ ನೀರು ಧುಮುಕಲಿಕ್ಕೆ ಸಿದ್ಧವಾಗಿತ್ತು.. ತಡೆದುಕೊಂಡೆ...

"ನಿಜವಾಗಿಯೂ ಶ್ರೀಕಾಂತ.. ಕೃಷ್ಣವೇಣಿ ತನ್ನ ಜೀವನದಲ್ಲಿ ಏನೇನೋ ನಡೆದರೂ ಅದನ್ನು ಛಲದಿಂದ ಸ್ವೀಕರಿಸಿ ಹೆಜ್ಜೆ ಇಡುತ್ತಿರುವ ರೀತಿ ನಿಜಕ್ಕೂ ಹೆಮ್ಮೆ ತರುತ್ತದೆ.. ಆಲ್ವಾ ಮಗು" ಎಂದರು ರಾಮಿ ಚಿಕ್ಕಪ್ಪ!

ನಾನು ಏನು ಹೇಳುವ ಸ್ಥಿತಿಯಲ್ಲಿರಲಿಲ್ಲ.. ನಾನು ಹೇಳಿದ್ದು ಒಂದೇ ಮಾತು "ಚಿಕ್ಕಪ್ಪ.. ಜೀವನಲ್ಲಿ ಏನಾದರೂ ಸಾಧಿಸಬೇಕಾದರೆ ಸ್ಪೂರ್ತಿ ಬೇಕು ಎಂದು ನಾ ಎಲ್ಲೂ ಹುಡುಕುವುದೇ ಇಲ್ಲ.. ನನ್ನ ಅಕ್ಕನ ಛಲದ ಜೀವನವೇ ಸಾಕ್ಷಿ..." ಅಷ್ಟು ಹೇಳಿದೆ.. ನನಗೆ ತಡೆಯಲಾಗಲಿಲ್ಲ.. ಕಣ್ಣಲ್ಲಿ ಜಿನುಗುತ್ತಿದ್ದ ಜೋಗದ ಜಲಪಾತವನ್ನು ಹಾಗೆ ತಡೆದಿರಿಸಿಕೊಂಡೆ.. ಕಾರಣ ನಾ ಅಳುವುದಿಲ್ಲ ಎಂದು ಅಣ್ಣನಿಗೆ (ಅಪ್ಪ) ಪ್ರಮಾಣ ಮಾಡಿದ್ದೆ :-)

ಹೌದು ಇವತ್ತು ನನ್ನ ಅಕ್ಕನ ಜೀವನದಲ್ಲಿ ಒಂದು ಸುಂದರ ದಿನ.  ಕ್ರಮಬದ್ಧವಾಗಿ ಶಿಸ್ತಿನ ಹಾಗೂ ಛಲದ ನೊಗವನ್ನು ಹೆಗಲಿಗೇರಿಸಿ ಜೀವನದಲ್ಲಿ ಕಾಣುವ ಏಳಿಗೆಗಳನ್ನು ಮೆಟ್ಟಿಲಾಗಿಯೂ.. ಬೀಳುಗಳನ್ನು ಆಲದ ಮರದ ಬಿಳಲುಗಳ ಹಾಗೇ ಅದನ್ನೇ ಹಿಡಿದುಕೊಂಡು ಮೇಲೆ ಏರುತ್ತಿರುವ ಹಾಗೆ ಪ್ರತಿ ಹಂತದಲ್ಲೂ ಕ್ರಮಬದ್ಧವಾಗಿ ಏರು ಹಾದಿಯಲ್ಲಿ ನಡೆಯುತ್ತಿರುವ ಅಕ್ಕ ಇಂದು ಒಂದು ಕಾರಿನ ಒಡತಿಯಾದಳು. ಅವಳ ಸಾಧನೆಗೆ ಕ್ಯಾಲೆಂಡರ್ ಕೂಡ ಶರಣಾಗಿ ಕ್ರಮಬದ್ಧವಾಗಿ ನಿಂತವು.. ೧೧/೧೨/೧೩.... ಇದಕ್ಕಿಂತ ಇನ್ನೇನೂ ಬೇಕು.. ಅಲ್ಲವೇ
ಸರದಿಯಲ್ಲಿರುವ ಹೆಸರು - ಐದನೇ ಹೆಸರು!!!
ಮನಸ್ಸು ಹಾಗೆ ಮೂವತ್ತು ವಸಂತಗಳ  ಹಿಂದೆ ಓಡಿತು.. ನಾವು ತ್ಯಾಗರಾಜನಗರದಲ್ಲಿ ಇದ್ದಾಗ.. ಅಪ್ಪ ಪ್ರತಿ ವರುಷವೂ  ಸಜ್ಜನರಾವ್ ವೃತ್ತದ ಬಳಿ ಇರುವ ಸತ್ಯನಾರಾಯಣ ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತಿದ್ದರು. ಸುಮಾರು ಮೂರು ಅಥವಾ ನಾಲ್ಕು ವರ್ಷ ಅಲ್ಲಿಯೇ ಪೂಜೆ ಮಾಡಿಸಿದ್ದ ನೆನಪು. ಅಮೃತ ಶಿಲೆಯಲ್ಲಿ ರಚಿಸಿರುವ ಸತ್ಯನಾರಾಯಣನ ಮೂರ್ತಿ ಸುಂದರವಾಗಿದೆ. ಆ ದೇವಸ್ಥಾನದ ಮುಂದೆ ಹೋದಾಗಲೆಲ್ಲ ಅದೇ ನೆನಪುಗಳು ಕಾಡುತ್ತಿದ್ದವು.
ಸಜ್ಜನ್ ರಾವ್ ವೃತ್ತದ ಶ್ರೀ ಸತ್ಯನಾರಾಯನ ಸ್ವಾಮೀ ದೇವಾಲಯ

ಚಿತ್ರ ಕೃಪೆ - ಅಂತರ್ಜಾಲ 
 ಭೌತಿಕವಾಗಿ ನಮ್ಮ ಅಪ್ಪ ಜೊತೆಯಲ್ಲಿಲ್ಲದಿದ್ದರೂ....  ಅಕ್ಕನ ಕಾರನ್ನು ಡ್ರೈವ್ ಮಾಡಿಕೊಂಡು ಆ ದೇವಸ್ಥಾನದ ಮುಂದೆ ಬಂದು ನಿಂತಾಗ ಹಾಗೆ ಮನಸ್ಸು ಹಳೆಯ ನೆನಪುಗಳನ್ನು ಮೆಲುಕು ಹಾಕಿತು.. ಅಪ್ಪ ಅಲ್ಲಿಯೇ ನಿಂತು ಮಗಳ ಏಳಿಗೆಯನ್ನು ಕಂಡು ಸಂತಸಗೊಂಡಂತೆ ಭಾಸವಾಯಿತು!

"ಅಮ್ಮ.. ಚೆನ್ನಾಗಿದ್ದೀಯ.. ಇರು ಅಕ್ಕ ನಿನಗೆ ಒಂದು ಸಂತೋಷದ ಸುದ್ಧಿ ಹೇಳುತ್ತಾಳೆ" ಎಂದು ಹೇಳಿ ಅಕ್ಕನಿಗೆ ಫೋನ್ ಕೊಟ್ಟೆ. ಎರಡು ನಿಮಿಷ ಅಮ್ಮ ಮಗಳು ಸಂಭಾಷಣೆ.. ಅಕ್ಕನ ಕಣ್ಣಲ್ಲಿ ಸಾಧನೆಯ ಮಜಲನ್ನು ಏರಿದ ಸಂತಸವಿತ್ತು ಜೊತೆಯಲ್ಲಿ ಅಮ್ಮನ ಹೃದಯ ಸಂತಸದಿಂದ ಬೀಗುತ್ತಿದ್ದ ಧ್ವನಿ ನನಗೆ ಕೇಳಿಸುತಿತ್ತು. ಅಮ್ಮ ತನ್ನನ್ನು ಎತ್ತಿ ಮುದ್ದಾಡಿ ಊರಿನ ಮಗಳಂತೆ ಬೆಳೆಸಿದ ಕಿತ್ತಾನೆ ಗ್ರಾಮಕ್ಕೆ ಹೋಗಿದ್ದ ಕಾರಣ ಧ್ವನಿಯಲ್ಲಿ ಮಾತ್ರ ಅವರ ಸಂತಸದ ಸಿಂಚನವಾಯಿತು. 
ಸುವರ್ಣ ಹಸ್ತಾಕ್ಷರದ ಸಮಯ!!!
"ಛಲದೋಳ್ ಸುಯೊಧನನ್" ಎಂದ ಆದಿ ಕವಿ ಪಂಪ ಹೇಳಿದರೆ..ನನಗೆ ಸಾದೃಶ್ಯ ವಾಗಿ ಕಂಡ ಅಕ್ಕನ ಬದುಕು ನಿಜಕ್ಕೂ "ಛಲದೋಳ್ ನನ್ನ ಅಕ್ಕ" ಎಂದು ಹೇಳುವಂತೆ ಪ್ರೇರೇಪಿಸಿತು. ನಾನು ಇಂದು ಈ ಮಟ್ಟಿಗೆ ನಿಂತಿದ್ದೇನೆ ಅಂದರೆ ಅಪ್ಪ ಅಮ್ಮನ ರಕ್ಷಾ ಕವಚದ ಜೊತೆಯಲ್ಲಿ ಅಕ್ಕನ ತ್ಯಾಗ ಮತ್ತು ಅವಳ ಮಮಕಾರದ ಪಾಲು ಬಹು ದೊಡ್ಡದು.

ಹೊಸ ಚೈತನ್ಯ ರಥಕ್ಕೆ ಸಾರಥಿಯಿಂದ  ಒಲವಿನ ಪೂಜೆ!
ಅಪ್ಪ ಅಮ್ಮನ  ಅನುಪಸ್ಥಿತಿಯಲ್ಲಿ ಅಪ್ಪ ಅಮ್ಮನ ಸ್ಥಾನದಲ್ಲಿ ನಿಂತು ಈ ಸಂತಸವನ್ನು ದುಪ್ಪಟ್ಟು ಮಾಡಿದ ಅಣ್ಣ ಮತ್ತು ಅತ್ತಿಗೆಗೆ ಎಷ್ಟು ಕೃತಜ್ಞತೆಗಳನ್ನು ಹೇಳಿದರೂ ಸಾಲದು. ಒಂದು ಕುಟುಂಬ ಒಟ್ಟಿಗೆ ನಿಲ್ಲಬೇಕಾದರೆ ಮನಸ್ಸು ಮನಸ್ಸು ಸೂಜಿ ಹಾಗೂ ದಾರದಂತೆ ಇರಬೇಕು ಎನ್ನುವ ತತ್ವ ನಮ್ಮ ಅಪ್ಪ ಅಮ್ಮ ಹೇಳಿಕೊಡದೇ ಅವರೇ ಜೀವನದಲ್ಲಿ ಅಳವಡಿಸಿಕೊಂಡದ್ದು ನಮ್ಮ ಕುಟುಂಬದ ಯಶಸ್ಸಿಗೆ ಕಾರಣವಿರಬಹುದು ಎನ್ನುವ ಅಭಿಪ್ರಾಯ ನನ್ನದು.

ಒಲವಿನ ಪೂಜೆಗೆ ಒಲವೆ ಮಂಧಾರ.. ಒಲವೆ ಬದುಕಿಗೆ ಬಂಗಾರ!!!

ಅಣ್ಣ ಇತ್ತೀಚಿಗೆ ತಾನೇ ಸ್ವಿಫ್ಟ್ ಕಾರ್ ಕೊಂಡಿದ್ದ.. ಅದರ ಪಕ್ಕದಲ್ಲಿಯೇ ಅಕ್ಕನ ಕಾರು.. ಇದಕ್ಕಿಂತ ಸಂತಸ ಇನ್ನೇನು ಬೇಕು.. ಇಬ್ಬರೂ ಜೀವನದ ಆರಂಭದಲ್ಲಿ ನೋವು ತಿಂದಿದ್ದರೂ ಛಲ ಬಿಡದ ತ್ರಿವಿಕ್ರಮನಂತೆ ಹೋರಾಡಿ ಯಶಸ್ಸಿನ ಮೆಟ್ಟಿಲನ್ನು ಏರುತ್ತಾ ಸಾಗಿದ್ದಾರೆ.  ಇವರ ಜೀವನವೇ ನನಗೆ ಆದರ್ಶ..

ಅಕ್ಕ ಹಾಗೂ ಅಣ್ಣನ ಚೈತನ್ಯ ರಥಗಳು.. !
ಅಕ್ಕನ ಮಗ .... ಆದಿತ್ಯ ಮುಂದಿನ ವಾರಸುದಾರ!!!
ಈ ಸುಂದರ ಸಡಗರದ ಕೆಲವು ಮಧುರ ಕ್ಷಣಗಳು ದಾಖಲು ಮಾಡಬೇಕೆನ್ನುವ ನನ್ನ ಆಸೆಗೆ  ಜೊತೆಯಾಗಿ ನಿಂತದ್ದು ನನ್ನ ಮೂರನೇ ಕಣ್ಣು ಅದಕ್ಕೆ ನನ್ನ ಮನಸಾರೆ ಪ್ರಣಾಮಗಳು!!!

ಸುಮಧುರ ಕ್ಷಣಗಳಿಗೆ ಸುಂದರ ಚೌಕಟ್ಟು !!!
ಜೀವನದಲ್ಲಿ ಬರುವ ತಿಮಿಂಗಿಲಗಳ ಒಡನಾಟವನ್ನು ಖುಷಿಯಿಂದ ಬರಮಾಡಿಕೊಳ್ಳಿ ಮತ್ತು ಆನಂದದಿಂದ ಅನುಭವಿಸಿ ಈ ಸಿದ್ಧಾಂತವನ್ನು ಮತ್ತೊಮ್ಮೆ ಸಾಧರಪಡಿಸುವ ಅವಕಾಶ ನನ್ನದಾಯಿತು!!!

ಲೇಖನ ಓದಿ ಶುಭ ಹಾರೈಸಿದ್ದಕ್ಕೆ ನಿಮಗೆ ಸಿಹಿಯ ಲೇಪನ!!!
enjoy the sharks in your life!!!

11 comments:

 1. ಅಪ್ಪ-ಅಮ್ಮ ಕಣ್ಣು ಬಿಟ್ಟ ಪ್ರತಿ ಮಗುವಿನ ದೇವರುಗಳು... ಅಕ್ಕ ಅಣ್ಣ...ಅವರ ಇನ್ ಚಾರ್ಜ್ ಡ್ಯ್ಟೂಟಿ ನಿರ್ವಹಿಸುವ ಕಕ್ಕುಲತೆಯ ಒಂದೇ ಬಳ್ಳಿಯ ಹೂಗಳು...ಇವರನ್ನೆಲ್ಲಾ ಸ್ಮರಿಸಿ ಅವರಿಗೆ ಆಭಾರಿಯಾಗಿರುವ ಗುಣ ನಿಜಕ್ಕೂ ಅನುಕರಣೀಯ ಶೀಮನ್...ತುಂಬಾ ಮನಮುಟ್ಟುವಂತೆ ಇದೆ ನಿಮ್ಮ ಲೇಖನ.

  ReplyDelete
 2. ಒಡಹುಟ್ಟಿದವರ ಬಾಂದವ್ಯ ಬೆಸೆಯುವ ನಿಮ್ಮ ಬಗ್ಗೆ ನನಗೆ ತುಂಬಾ ಹೆಮ್ಮೆ, ಅವರ ಕಿರು ಪರಿಚಯ, ನಿಮ್ಮ ತಂದೆಯವರ ಆದರ್ಶ, ಅವರ ನಡೆ ನುಡಿ, ನಿಮ್ಮ ಅಕ್ಕನವರ ಛಲದ ಸಾಧನೆಯ ಬದುಕು, ಅಣ್ಣನವರ ಮಮತೆ, ಹಿರಿಯರ ಆಶಿರ್ವಾದ ಇವುಗಳ ವಾಸ್ತವ ಪ್ರಪಂಚ ದರ್ಶನ ಮೋದಿಸಿದೆ. "ಒಂದೇ ಬಳ್ಳಿಯ ಹೂ ಗಳು ನಗುತ್ತಿದ್ದರೆ ಚಂದ" ಎನ್ನುವ ಪಾಠ ಅರಿತವರಿಗೆ ಇಂತಃ ಸುಖ ಸಿಗುತ್ತೆ . ಬಹಳ ಒಳ್ಳೆಯ ವಿಚಾರ ಹಂಚಿಕೊಂಡ ನಿಮಗೆ ಥ್ಯಾಂಕ್ಸ್

  ReplyDelete
 3. ತುಂಬಾ ಸಂತೋಷವಾಯಿತು! ನಿಮ್ಮ ಅಕ್ಕನವರಿಗೆ ನನ್ನ ಕಡೆಯಿಂದಲೂ ಅಭಿನಂದನೆಗಳನ್ನು ತಿಳಿಸಿ... "ಛಲದೋಳ್ ಸುಯೋಧನನ್" ಎಂಬ ಹೋಲಿಕೆ ಬಹಳ ಇಷ್ಟವಾಯಿತು.. ಈ ಲೇಖನ ನಿಜವಾಗಿಯೂ ಬಾಳ ಹಾದಿಯ ಹೋರಾಟದಲ್ಲಿರುವವರಿಗೆ ಒಂದು ಸ್ಪೂರ್ತಿದಾಯಕ ನಿದರ್ಶನ. ಒಂದೆ ಬಳ್ಳಿಯಲ್ಲಿ ಅರಳಿ ನಗುವ ಹೂಗಳು ಒಟ್ಟೊಟ್ಟಿಗೆ ಗೊಂಚಲಂತೆ ಇದ್ದರೆ ಚೆಂದವೆನಿಸುವುದು... ಜೀವನದ ಈ ಮಹತ್ವದ ನಡಿಗೆಯಲ್ಲಿ ಜೊತೆಗಿರುವ ನೀವೆಲ್ಲರೂ ನೂರು ಕಾಲ ಹೀಗೆ ನಗು ನಗುತಾ ಜೊತೆ ಜೊತೆಯಾಗಿರಿ ಎಂದು ದೇವರಲ್ಲಿ ನನ್ನ ಪ್ರಾರ್ಥನೆ. ಶುಭವಾಗಲಿ!

  ReplyDelete
 4. ಅಕ್ಕನಿಗೆ ಶುಭಾಶಯಗಳು.
  ಅವರ ಬಗ್ಗೆ, ಅವರ ಹೋರಾಟದ ಬಗ್ಗೆ ನೀವ್ಯಾಕೆ ಇನ್ನಷ್ಟು ಬರೀಬಾರದು ?
  ನಮ್ಮಂಥ ಕೆಲವರಿಗೆ ಸ್ಪೂರ್ತಿಯಾಗಬಹುದು. ಶುಭ ಘಳಿಗೆಯಲ್ಲಿ ಸಿಹಿಯಾದ ಪೋಸ್ಟು
  ವಂದನೆಗಳು

  ReplyDelete
 5. ಶ್ರೀಕಾಂತ್ ಈಗಿನ ಕಾಲದಲ್ಲೂ ನಿಮ್ಮಂತಹ ಜನರಿರುವದರಿಂದಲೆ ಅಲ್ಪ ಸ್ವಲ್ಪ ಮಳೆಬೆಳೆಯಾಗುತ್ತಿರುವುದು. ಅಣ್ಣ ಅಕ್ಕನ ನಿಮ್ಮ ಜೀವನ ಕಥೆ ನೆನೆದು ಅವರಿಗೆ ಸದಾ ಒಳಿತಾಗಲಿ ಎಂದು ಹಾರೈಸುತ್ತೀರಿ. ಅಲ್ಲದೆ ಅಕ್ಕ ಅಣ್ಣ ಎಲ್ಲರನ್ನು ಎಷ್ಟು ಪ್ರೀತಿಯಿಂದ ಗೌರವಿಸುತ್ತೀರಿ ನಿಜಕ್ಕೂ ಸಂತೋಷವಾಗುತ್ತೆ. ನಿಮ್ಮೆಲ್ಲರ ಸಂಬಂಧಗಳು ಚಿರಕಾಲ ಹಸಿರಾಗಿರಲಿ ಎಂದು ಆಶಿಸುತ್ತೇನೆ ಶ್ರೀಕಾಂತ್.
  ಹೊಸ ಕಾರ್ ತೆಗೆದುಕೊಂಡ ಅಕ್ಕನಿಗೆ ಅಭಿನಂದನೆಗಳು.

  ReplyDelete
 6. ತಡೆದು ಕೊಡುತಾನೆ ಭಗವಂತ, ಅಕ್ಕನ ಮುಂದಿನ ಗಾಡಿ BMW ಆಗಿರಲಿ. ತುಂಬ ಆಪ್ತ ಬರಹ.

  ReplyDelete
 7. Congrats Akka!!! You are inspiration for many people and Our big salute to you for what you are today with so many obstacles in life...we wish you will be blessed with lot more in future

  Venki & Family

  ReplyDelete
 8. ಅಭಿನಂದನೆಗಳು ಶ್ರೀಕಾಂತಣ್ಣ. ನಮ್ಮ ಸಂಪಾದನೆಯಲ್ಲಿ ಕೊಂದ ಸೈಕಲ್ಲೇ ಅಷ್ಟು ಖುಷಿ ಕೊಡುವಾಗ ಕಾರು ಎಷ್ಟು ಖುಷಿ ಕೊಟ್ಟಿರಬೇಡ. ಮೆಹನತ್ ಕ ಫಲ್ ಹಮೇಶಾ ಮೀಟಾ ಹೋತಾ ಹೈ.

  ಅಕ್ಕನವರ ಸಾಧನೆಗಳು ಇನ್ನೂ ವೃದ್ಧಿಸಲಿ.

  ReplyDelete
 9. ಸಾಧನೆಯ ಓದಿ ಖುಷಿಯಾಯ್ತು. ನನ್ನ ಕಡೆಯಿಂದಲೂ ಶುಭಾಶಯಗಳು :-)

  ReplyDelete
 10. ಓದಿದ ಹರಸಿದೆ ಆಶೀರ್ವದಿಸಿದ ಮನಗಳಿಗೆ ನನ್ನ ಮತ್ತು ಕುಟುಂಬದ ನಮನಗಳು

  ReplyDelete
 11. ದೃಷ್ಟಿ ತೆಗೆಸಿಕೊಳ್ಳಿ . ನಿಮ್ಮ ಮತ್ತು ನಿಮ್ಮ ಕುಟುಂಬದ ಭಾಂದವ್ಯ ಮನ ಮುಟ್ಟುವ ಹಾಗಿದೆ. ನಿಮ್ಮಕ್ಕನಿಗೆ ನಮ್ಮ ಕಡೆಯಿಂದ ಒಂದು ಶುಭಾಶಯ. :) ಜೀವನ ಇನ್ನು ಇಂತಹ ಸುಂದರ ಕ್ಷಣಗಳನ್ನು ನಿಮ್ಮೆಲ್ಲರ ಪಾಲಿಗೆ ಕೊಡಲಿ.

  ReplyDelete