ಮಧ್ಯಾನ್ಹ ತಾನೇ ಬಿಡುಗಡೆಯಾಗಿದ್ದ "ಗೌರಿ.. ಮುತ್ತುಗವನದಲ್ಲಿ ಬಿರಿದ ಕೆಂಡ ಸಂಪಿಗೆ" ಓದೋಣ ಕಾರ್ಯಕ್ರಮ ಮುಗಿದ ನಂತರ ಮನೆಗೆ ಬಂದ ಮೇಲೆ ಕೈಗೆ ತೆಗೆದುಕೊಂಡೆ
"ಮಗು ಶ್ರೀಕಾಂತ.. .. "
ನಾನೊಬ್ಬನೇ ಕೂತಿದ್ದೆ .ಲ್ಯಾಪ್ಟಾಪ್ ಹಿಡಿದು ಕೂತಿದ್ದೆ..
"ಮತ್ತೆ ಅದೇ ಧ್ವನಿ.. ಮಗು ಶ್ರೀಕಾಂತಾ.. "
ಯಾರಪ್ಪ ಇದು.. ಅಂತ ಆ ಕಡೆ ಈ ಕಡೆ ನೋಡಿದೆ..
ಕೈಯಲ್ಲಿದ್ದ ಪುಸ್ತಕದಿನ ಆ ಧ್ವನಿ ಹೊರಬರುತ್ತಿತ್ತು.. ಕಿವಿಯ ಹತ್ತಿರ ಹಿಡಿದುಕೊಂಡೆ.. ಹೌದು ಪುಸ್ತಕದೊಳಗಿಂದ ಧ್ವನಿ ಹೊರಬರುತ್ತಿತ್ತು..
ಮೈಯೆಲ್ಲಾ ಕಂಪಿಸಿತು..ಕೈಯಲ್ಲಿದ್ದ ಪುಸ್ತಕ ಜಾರಿತು.. ಕೆಳಗೆ ಬಿದ್ದಾಗ ಆ ಪುಸ್ತಕದ ರಕ್ಷಾಪುಟವನ್ನೇ ಎವೆಯಿಕ್ಕದೆ ನೋಡಿದೆ.. ನಗು ನಗುತ್ತಿದ್ದ ಅಜ್ಜಿ ಅಜ್ಜ ಫೋಟೋದಿಂದ ನಕ್ಕಂತೆ ಭಾಸವಾಯಿತು.. "ಮೊದಲು ನಿನ್ನ ಮನದಲ್ಲಿರುವ ಮಾತುಗಳನ್ನು ಬರೆದು ಬಿಡು.. ಆಮೇಲೆ ಪುಸ್ತಕ ಓದು.. "
ಅಜ್ಜಿ.. (ಅಜ್ಜಯ್ಯನ ಹತ್ತಿರ ಮಾತಾಡಿದ್ದು ಬಹಳ ಕಡಿಮೆ).. ಯಾಕೆ ಏನಾಯಿತು..
"ನೋಡಪ್ಪ ಮಗು ನಿನ್ನ ಮನದಾಳದಲ್ಲಿ ಸೇರಿಕೊಂಡ ಮಾತುಗಳಿಗೆ ಅಕ್ಷರ ರೂಪ ಕೊಟ್ಟು ಬಿಡು.. ನೀ ಪುಸ್ತಕದ ಬರಹಗಳನ್ನು ಓದಿದರೆ.. ಆ ಭಾವಗಳು ನಿನ್ನ ಅಕ್ಷರಗಳಲ್ಲಿ ಸೇರಿಕೊಳ್ಳುತ್ತದೆ.. ಹಾಗಾಗಿ ನಿನ್ನ ಮನದಲ್ಲಿರುವ ಪದಗಳು ಹೊರಬರಲ್ಲ.. ಮನದಾಳದ ಮಾತುಗಳು ಬೇಕು.. "
ಸಾಮಾನ್ಯ ನನ್ನಿಂದ ನನ್ನ ಅಪ್ಪ ಸ್ವರ್ಗದಿಂದ ಹೇಳುವ ಮಾತುಗಳು ಇಂದಿಗೂ ಸರ್ವ ತಂತ್ರ ಸ್ವತಂತ್ರದಿಂದ ಕೂಡಿರುತ್ತದೆ..ಆದರೆ ಅಜ್ಜಿ ಬಗ್ಗೆ ಬರೆಯುವ, ಅಜ್ಜಿಯ ಮಾತುಗಳನ್ನು ಅಜ್ಜಿಯ ಕಾರ್ಯಕ್ರಮದ ವಿವರಗಳನ್ನ ಹೇಳುವಾಗ ಇನ್ನೊಂದು ಬರಹ ಪ್ರೇರಕವಾಗಬಹುದೇ.. ಗೊತ್ತಿಲ್ಲ.. ಆದರೂ ಯಾಕೆ ಅಜ್ಜಿಯ ಮಾತುಗಳನ್ನು ಮೀರುವುದು ಎಂದು.. ಪುಸ್ತಕ ಪಕ್ಕದಲ್ಲಿಟ್ಟೇ..
"ಸರಿಯಾದ ನಿರ್ಧಾರ ಮಗು.. ಬರಹ ಮುಗಿಸು ನಂತರ ಸ್ವತಂತ್ರ ನಿನಗೆ ನಿನ್ನ ಭಾವನೆಗಳಿಗೆ"
ಸರಿ ಅಜ್ಜಿ..
**************
ಒಂದು ಶನಿವಾರ ಸಂಜೆ.. ಸತೀಶನ ಕರೆ ಬಂತು.. "ಹತ್ತೊಂಭತ್ತನೇ ತಾರೀಕು ಭಾನುವಾರ ಅಜ್ಜಿಯ ಬಗ್ಗೆ ಒಂದು ಪುಸ್ತಕದ ಕಾರ್ಯಕ್ರಮ ಮಾಡುತ್ತಿದ್ದೇವೆ.. ಆಹ್ವಾನ ಪತ್ರಿಕೆ ಕಳಿಸುತ್ತೇನೆ.. ಎಲ್ಲರೂ ಬರಬೇಕು.. "
"ಹ ಸೂಪರ್ ಸೂಪರ್ ಬರ್ತೀನಿ.. "
"ಇನ್ನೊಂದು ವಿಚಾರ.. ಅಮ್ಮನ ಬಗ್ಗೆ ಬರೆದು ಕೊಡು.. "
"ಏ ನೀನೆ ವಿಕಿಪೀಡಿಯ. ನಿನಗೆ ಗೊತ್ತಿರುವಷ್ಟು ನನಗೆಲ್ಲಿ ಅರಿವಿದೆ" ಅಂದೇ
"ಅದೆಲ್ಲ ಬಿಡು.. ಬರೆದುಕೊಡು. ಅಷ್ಟೇ.. "
"ಸರಿ ಕಣೋ.. ಬರೆದುಕೊಡ್ತೀನಿ"
ಆಫೀಸ್ ಕೆಲಸದ ಒತ್ತಡ.. ಅದೂ ಇದೂ .. ಆಗಿರಲಿಲ್ಲ.. ಹಾಗೂ ಹೀಗೂ ಶುಕ್ರವಾರದ ಒಂದು ದಿನ ಬೆಳಿಗ್ಗೆ ಆಫೀಸಿಗೆ ಹೋದ ತಕ್ಷಣ.. ಹತ್ತು ನಿಮಿಷದಲ್ಲಿ ಒಂದು ಬರಹ ಮೂಡಿಬಂತು.. ವಾಟ್ಸಾಪ್ ಕಳಿಸಿದೆ.. "ಪುಸ್ತಕದ ಸಂಪಾದಕತ್ವಕ್ಕೆ ಇನ್ನೂ ಸಮಯವಿದ್ದರೆ ಸೇರಿಸಿಕೋ.. ಅದನ್ನು ನಿನಗೆ ಬೇಕಾದ ಹಾಗೆ ತಿದ್ದುಪಡಿ ಮಾಡಿಕೊಳ್ಳುವ ಸ್ವಾತಂತ್ರ್ಯ ನಿನಗಿದೆ" ಎಂದು ಕಳಿಸಿದೆ.. ನಂತರ ಅದರ ಬಗ್ಗೆ ಯೋಚನೆ ಬಿಟ್ಟೆ..
"ತುಂಬಾ ಚೆನ್ನಾಗಿದೆ ಶ್ರೀಕಾಂತಾ.. ಬಳಸಿಕೊಂಡಿದ್ದೇನೆ" ಅಂತ ಸಂದೇಶ ಬಂತು..
**********
ಭಾನುವಾರ ಬೆಳಿಗ್ಗೆ ಲಘುಬಗೆಯಿಂದ ಹೊರಟೆವು.. ಗೊತ್ತಿದ್ದ ಸಂಭಾಂಗಣ.. ಆದರೆ ಇತ್ತೀಚಿನ ಆರೇಳು ವರ್ಷಗಳ್ಲಲಿ ಅಲ್ಲಿಗೆ ಹೋಗಿದ್ದೆ ಇಲ್ಲ.. ಅದು ಹೊಸ ವಿನ್ಯಾಸದಲ್ಲಿ ನವೀಕರಣಗೊಂಡಿದೆ ಎಂದು ಕೇಳಿದ್ದೆ.. ಸತೀಶನೂ ಅದರ ಬಗ್ಗೆ ಒಂದಷ್ಟು ವಿಷಯ ಹೇಳಿದ್ದ ಮತ್ತು ತಾನೂ ಅದರ ಸದಸ್ಯ ಮಂಡಳಿಯಲ್ಲಿ ಇದ್ದೀನಿ..ನಾವೆಲ್ಲ ಸೇರಿ ಅದನ್ನು ಹೊಸದು ಮಾಡಿದ್ದೇವೆ ಎಂದಿದ್ದ..
ಅಚ್ಚುಕಟ್ಟಾದ ಸಭಾಂಗಣ.. ಧ್ವನಿ ವ್ಯವಸ್ಥೆ ಅತ್ಯುತ್ತಮ.. ಆಸನಗಳು . ನೆರಳು ಬೆಳಕಿನ ಸಂಯೋಜನೆ ಎಲ್ಲವೂ ಅತ್ಯುತ್ತಮ.. ಜೊತೆಯಲ್ಲಿ ಕಾರುಗಳಿಗೆ ಅಚ್ಚುಕಟ್ಟಾದ ಸ್ಥಳಾವಕಾಶ..
ಉಪಹಾರದ ಅಚ್ಚುಕಟ್ಟಾದ ವ್ಯವಸ್ಥೆ.. ನಮಗೆ ಚಿರಪರಿಚಿತವಾದ ರವಿ ಮತ್ತು ತಂಡದ ಊಟೋಪಚಾರದ ವ್ಯವಸ್ಥೆ.. ಇನ್ನೇನು ಬೇಕು.. ಕಂಡ ಬಂಧು ಬಳಗವನ್ನೆಲ್ಲ ಮಾತಾಡಿಸಿ.. ತಿಂಡಿಗೆ ಕೈ ಇಟ್ಟಾಗ.. ಮನಸ್ಸು ಹಾಯ್ ಎನಿಸಿತು.. ಉಪ್ಪಿಟ್ಟು.. ಕೇಸರಿ ಬಾತ್.. ಚಟ್ನಿ.. ಆಹಾ.. ಸೊಗಸಾಗಿತ್ತು.. ಕಾಫೀ ಎಂದೇ.. ಟೀ ಅಂದ್ರು.. ಸರಿ ಸಿಕ್ಕಿದ್ದು ಸೀರುಂಡೆ ಅಂತ ಬಿಸಿಬಿಸಿಯಾಗಿದ್ದ ಟೀ ಕುಡಿದು ಅಂಗಣಕ್ಕೆ ಕಾಲಿಟ್ಟೆ.
ಕಾರ್ಯಕ್ರಮದ ನಿರೂಪಣೆ ಶುರು ಮಾಡಿದರು.. ಇದು ಮನೆಯ ಕಾರ್ಯಕ್ರಮವಾಗಿದ್ದರಿಂದ.. ಅವರೇ ಇವರೇ.. ಅದು ಇದು ಅನ್ನುವ ಮಾತುಗಳಿಗೆ ಅವಕಾಶವಿರಲಿಲ್ಲ.. ಮನೆಯಲ್ಲಿ ಹೇಗೆ ಮಾತುಗಳಿರುತ್ತಿದ್ದೆವೋ ಹಾಗೆ ಇಲ್ಲೂ ಕೂಡ..
ಪುಟ್ಟ ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮ ಚಾಲೂ.. ಅಜ್ಜಿಯ ಬಗ್ಗೆ ಅವರ ಮೊಮ್ಮಕ್ಕಳು ಹಂಚಿಕೊಂಡ ಕೆಲವು ನೆನಪುಗಳು.. ತನಗೆ ಹೇಳಿ ಕೊಟ್ಟ ಹಾಡನ್ನು ವಧುಪರೀಕ್ಷೆಯಲ್ಲಿ ಹಾದಿ ವರನನ್ನು ವರಿಸಿದ ಕ್ಷಣಗಳು.. ಕೌಶಿಕ ಗ್ರಾಮದ ನೆರೆಹೊರೆಯವರು ಅಜ್ಜಿ ಮಾಡಿದ ಸಹಾಯಗಳನ್ನು, ಅವರು ಕೊಟ್ಟ ಮಾರ್ಗದರ್ಶನ ಬಾಳಿಗೆ ಬೆಳಕಾಗಿದ್ದು.. ಹೀಗೆ ಹತ್ತಾರು ನೆನಪಿನ ಬಿಳುಲುಗಳು ಗೌರಮ್ಮಜ್ಜಿ ಎಂಬ ಆಲದ ಮರದಿಂದ ಇಳಿದು ಬಂತು..
ಶಿವ ಶಿವೆಯ ನೃತ್ಯ.. ಅದ್ಭುತ ಆಂಗೀಕ ಅಭಿನಯ, ಸೊಗಸಾದ ಭಾವಾಭಿನಯ, ಅಭಿನಯ ಸೂಸುವ ಕಣ್ಣುಗಳು.. ವಾಹ್ ಎನಿಸಿತು.. ಗೌರಮಜ್ಜಿಯ ಮರಿ ಮೊಮ್ಮಕ್ಕಳ ನೃತ್ಯಾಭಿನಯ ಅಮೋಘವಾಗಿತ್ತು..
ಕೌಶಿಕದ ಸೊಸೆ ರತ್ನಗಳು ಹಾಡಿದ ಹಾಡು. ಸೊಗಸು.. ಗೌರಮ್ಮಜ್ಜಿಯ ಮತ್ತಷ್ಟು ನೆನಪುಗಳನ್ನು ಹಂಚಿಕೊಂಡರು.. ಅದರ ಜೊತೆ ಜೊತೆಯಲ್ಲಿಯೇ ಅಜ್ಜಿಯ ಬದುಕನ್ನು ಮತ್ತೊಮ್ಮೆ ಅಂತ ಅವರ ಜೀವನದ ಅನೇಕ ಚಿತ್ರಗಳ ಗುಚ್ಛಗಳನ್ನು ತೋರಿಸಿದರು..
ಮರಿಮೊಮ್ಮಗಳು ವೇದಿಕೆಯಲ್ಲಿಯೇ ಚಿತ್ರಿಸಿದ ಗೌರಮಜ್ಜಿಯ ಚಿತ್ರಕಲೆ..
ಹೀಗೆ ಬಾಳೆಯೆಲೆಯ ಊಟದಲ್ಲಿ ಒಂದೊಂದಾಗಿ ಬರುವ ಭಕ್ಷ್ಯ ಭೋಜ್ಯಗಳಂತೆ ಒಂದೊಂದಾಗಿ ಬರುತ್ತಿದ್ದವು.. ಒಂದರ ಹಿಂದೆ ಅದನ್ನು ಮೀರಿಸುವ ಇನ್ನೊಂದು ಕಾರ್ಯಕ್ರಮ..
ಇಡೀ ಕೌಶಿಕದ ಕುಟುಂಬ ಒಂದು ವೇದಿಕೆಯಲ್ಲಿ ನೆರೆದಾಗ ತ್ಸುನಾಮಿಯನ್ನು ಬೆಚ್ಚಿ ಬೀಳಿಸುವಷ್ಟು ಜೋರಾಗಿ ಕರತಾಡನವಾಯಿತು...
ನೂರು ವಸಂತಗಳು.. ಅಬ್ಬಬ್ಬ ಇದನ್ನು ನೆನೆಯುವುದೇ ಒಂದು ಅದ್ಭುತವಾಗಿರುವಾಗ.. ಇಂತಹ ಕಾರ್ಯಕ್ರಮಗಳು ನೆಡೆಯುವುದು ಇನ್ನಷ್ಟು ಅದ್ಭುತ.. ಅದರ ಜೊತೆಯಲ್ಲಿ ಸಿಹಿ ಒಬ್ಬಟ್ಟಿಗೆ ಸಿಹಿ ಬಾದಾಮಿ ಹಾಲು ಹಾಕಿಕೊಂಡು ತಿಂದಂತೆ.. ಅಜ್ಜಿಯ ಬದುಕನ್ನು ಒಂದು ಪುಸ್ತಕದ ರೂಪದಲ್ಲಿ ಪ್ರಕಟಿಸುವುದು.. ಅದು ಇನ್ನೊಂದು ಅದ್ಭುತ ಕ್ಷಣ..
ಸಾಮಾನ್ಯ ಅಜ್ಜಿ ಎಂದರೆ ಎಲ್ಲರಿಗೂ ನೆನಪಾಗುವುದು.. ಒಂದು ಗ್ರಾಮ.. ಅಲ್ಲೊಂದು ಮಣ್ಣಿನ ರಸ್ತೆ.. ಆ ರಸ್ತೆಯಲ್ಲಿ ಒಂದು ಹಳೆಯ ತಲೆಮಾರುಗಳು ಜೀವಿಸಿದ್ದ ಕೆಂಪನೆ ನಾಡಹೆಂಚಿನ ಒಂದು ಮನೆ..ಅದಕ್ಕೆ ದೊಡ್ಡದಾದ ಬಾಗಿಲು.. ಅದಕ್ಕೆ ಅಷ್ಟೇ ದೊಡ್ಡದಾದ ಚಿಲಕ ಮತ್ತು ಬೀಗ..
ಆ ಹಳ್ಳಿಮನೆಯನ್ನು ಸಾಕ್ಷತ್ಕರಿಸಿದ ಪುಟ್ಟ ಮನೆಯನ್ನು ಸಿದ್ಧಪಡಿಸಿದ್ದು ಅಜ್ಜಿಯ ಮಗಳ ಸೊಸೆ..
ಅತಿಥಿಗಳನ್ನು ವೇದಿಕೆಗೆ ಕರೆತರುವ ಸಮಯವಾಗಿತ್ತು.. ಶ್ರೀ ನಾಗರಾಜ್ ಅವರು.. ಶ್ರೀ ಸೂರ್ಯಪ್ರಕಾಶ್ ಪಂಡಿತ್, ಗೌರಮಜ್ಜಿಯ ಹಿರಿಯ ಮಗ ಅಣ್ಣಯ್ಯ ಎಂದೇ ಹೆಸರಾಗಿರುವ ರಾಮಕೃಷ್ಣ ಜೋಯಿಸ್ ಅರ್ಥಾತ್ ಅಣ್ಣಯ್ಯ..
ವೇದಿಕೆಯನ್ನು ಅಲಂಕರಿಸಿ, ಅವರ ಪ್ರಸ್ತಾವನೆ ಪರಿಚಯ ಮಾಡಿಕೊಂಡ ಮೇಲೆ.. ಪುಸ್ತಕ ಬಿಡುಗಡೆಯಾಯಿತು..ಎಲ್ಲರಿಗೂ ಕುತೂಹಲ. .. ಪುಸ್ತಕದ ಬಗ್ಗೆ ಹೇಗಿದೆ ಎಂದು ನೋಡುವ ತವಕ.. ಲೇಖನಗಳನ್ನು ಬರೆದುಕೊಟ್ಟವರಿಗೆ ತನ್ನ ಲೇಖನ ಸೇರಿಸಿದ್ದಾರೆಯೇ ಇಲ್ಲವೇ ಎನ್ನುವ ಕಾಡುವ ಪ್ರಶ್ನೆ.. ಹೀಗೆ ಎಲ್ಲವೂ ಅಡಕವಾಗಿತ್ತು..
ಶ್ರೀ ನಾಗರಾಜ್ ಅವರು.. ಮನೆಯ ಬಾಗಿಲಿನ ಕೀಲಿಯನ್ನು ತೆಗೆದು.. ಆ ಪುಸ್ತಕದ ಗೊಂಚಲನ್ನು ಅಲ್ಲಿದ್ದವರಿಗೆಲ್ಲ ಕೊಟ್ಟು ಕುಳಿತರು..
ಪುಸ್ತಕದ ಪರಿಚಯದ ಹೊಣೆಗಾರಿಕೆಯನ್ನು ಶ್ರೀ ಸೂರ್ಯಪ್ರಕಾಶ್ ಪಂಡಿತ್ ಅವರಿಗೆ ವಹಿಸಿದಾಗ ಅವರ ಮಾತುಗಳು ಕೇಳುತ್ತಾ ಕೂತಿದ್ದೆ..
ನನ್ನ ಫ್ರೆಂಡ್ ಕಮ್ ಮಗಳು ವಾಪಸ್ ಮನೆಗೆ ಬರುವಾಗ ಹೇಳಿದ್ದು.. ಅಪ್ಪ ಅವರ ಮಾತುಗಳು ನಿಮಗೆ ಇಷ್ಟವಾಯ್ತು ಅಂತ ಗೊತ್ತಾಯ್ತು.. ನನಗೆ.. ಡ್ರೈವಿಂಗ್ ಮಾಡುತಿದ್ದೆ.. ಅಚ್ಚರಿ.. ಯಾಕೆ ಪಾಪ ಅಂದೇ..
ಅವರು ಮಾತುಗಳಲ್ಲಿ ಕುಮಾರವ್ಯಾಸ ಭಾರತ ಅಂತ ಹೇಳಿ ಮಹಾಭಾರತದ ಬಗ್ಗೆ ಒಂದು ಸ್ವಲ್ಪ ಹೊತ್ತು ಮಾತಾಡಿದರು.. ನೀವು ಅಲ್ಲಿಯೇ ಶರಣಾಗಿಬಿಟ್ಟಿರಿ ಅಂತ ಹೇಳಿದಳು.. (ನನಗೆ ಮಹಾಭಾರತದ ಹೆಚ್ಚಿನ ಆಸಕ್ತಿಯೂ, ಅಥವ ಅದರ ಬಗ್ಗೆ ಒಂದು ರೀತಿಯ ಹುಚ್ಚೊ .. ಒಟ್ಟಿನಲ್ಲಿ ಅವಳ ಮಾತಿನಲ್ಲಿ ನಿಜವಿತ್ತು ಅನ್ನೋದು ಸುಳ್ಳಲ್ಲ)
ಅದ್ಭುತವಾಗಿ ಮಹಾಭಾರತದಲ್ಲಿನ ತಾಯಿಯ ಬಗೆಗಿನ ಸಂಬಂಧ ಹೇಳುತ್ತಾ.. ತಾಯಿಯ ಪಾತ್ರ ಒಂದು ಮನೆಯನ್ನು, ಹಳ್ಳಿಯನ್ನು, ಊರನ್ನು, ನಗರವನ್ನು, ರಾಜ್ಯವನ್ನು, ದೇಶವನ್ನುಒಟ್ಟಿನಲ್ಲಿ ಒಂದು ಆರೋಗ್ಯಕರ ಸಮಾಜದ ಬೆಳವಣಿಗೆಗೆ ಹೇಗೆ ಕಾರಣವಾಗುತ್ತದೆ ಎಂದು ಕುಮಾರವ್ಯಾಸನ ಭಾರತದಿಂದ ಒಂದು ಪುಟ್ಟ ಪದ್ಯವನ್ನು ಹೇಳಿದರು.. ನಾರಾಯಣ ಕೃಷ್ಣನಾಗಿ ಹುಟ್ಟಿ ಬೆಸೆದುಕೊಂಡ ಸಂಬಂಧದ ಬಗ್ಗೆ ಆ ಪದ್ಯವಿತ್ತು.. ಅದನ್ನು ಬಿಡಿಸಿ ಬಿಡಿಸಿ.. ಹಲಸಿನ ಹಣ್ಣನ್ನು ಬಿಡಿಸಿ ಸಿಹಿಯಾದ ಹಲಸಿನ ತೊಳೆಯನ್ನು ಕೊಡುವಂತೆ ಬಡಿಸಿದ್ದು ಆಹಾ ಅನಿಸಿತು.. ಮುಂದಿನ ಸುಮಾರು ನಿಮಿಷಗಳು ಅವರ ಅದ್ಭುತವಾದ ಮಾತುಗಳ ಅಲೆಯಲ್ಲಿ ನಾ ತೇಲಿಹೋಗಿದ್ದೆ..
ಅಷ್ಟಕ್ಕೇ ನಿಂತಿತ ಎಂದರೆ ಇಲ್ಲ ಇಲ್ಲ.. ವಿಷಯಗಳ ಕಾರ್ಮೋಡ ಆ ಆ ಸಭಾಂಗಣದಲ್ಲಿ ಹನಿ ಹಣಿಯಲು ಶುರು ಮಾಡಿತು..ಅದು ಶ್ರೀ ನಾಗರಾಜ್ ಅವರ ಮಾತುಗಳಿಂದ..
ದೇಶ ಕಟ್ಟುವಿಕೆ, ಸಮಾಜ ಬೆಳೆಯುವಿಕೆ, ಅದರಲ್ಲಿ ತಾಯಿಯ ಪಾತ್ರ.. ಮನೆಯೆಂದರೆ ಹೇಗಿರಬೇಕು.. ಮನಸ್ಸು ಎಂದರೆ ಹೇಗಿರಬೇಕು.. ಯಾವ ವಿಚಾರವನ್ನು ಹೇಗೆ ಆವರಿಸಿಕೊಳ್ಳಬೇಕು.. ಹೇಗೆ ಆಚರಿಸಬೇಕು.. ಹೀಗೆ ಹತ್ತಾರು ವಿಷಯಗಳ ದ್ವೀಪಗಳನ್ನು ಗೌರಮ್ಮಜ್ಜಿಯ ಬದುಕಿನ ಜೊತೆಗೆ ಸಮೀಕರಿಸಿ. ಆ ಎಲ್ಲಾ ದ್ವೀಪಗಳಿಗೆ ಗೌರಮ್ಮಜ್ಜಿಯ ಬದುಕು, ಅವರ ವ್ಯಕ್ತಿತ್ವ ಸೇತುವೆಯನ್ನಾಗಿಸಿ.. ಅವುಗಳಲ್ಲಿ ನಾವು ಕೂಡ ಪಯಣಿಸಬಹುದು.. ಅಂತಹ ರಹದಾರಿ ಗೌರಮಜ್ಜಿಯ ಬದುಕು ಎಂದು ಹೇಳಿದ್ದು.. ಆ ಸಹೃದಯ ಜೀವಿಯ ಬದುಕಿನ ಸಾರ್ಥಕತೆ ಎಂದು ಹೇಳುವುದರಲ್ಲಿ ಅತಿಶಯೋಕ್ತಿ ಅನಿಸದು..
ಮನೆಮಂದಿಯೆಲ್ಲಾ ಕೂಡಿ ಹಾಡಿದ ಸಮೂಹ ಗಾನ.. ಕುಟುಂಬದ ಏಕತೆಯನ್ನು ಪ್ರಚುರಪಡಿಸಿತು..
ಗೌರಿ ಎನ್ನುವ ಪುಸ್ತಕದ ಅತಿ ದೀರ್ಘವಾದ ಐದಾರು ಗಜಪ್ರಸವದ ಸಮಯವನ್ನು ಹಿಡಿದುಕೊಂಡ ಈ ಪುಸ್ತಕ, ಅದರ ಸಂಪಾದಕತ್ವ, ಅದರ ಹರಿವು, ಬಂಧು ಮಿತ್ರರಿಂದ ಹರಿದು ಬಂದ ನೆನಪುಗಳ ಅಕ್ಷರಮಾಲೆ.. ಅದಕ್ಕೆ ಮುನ್ನುಡಿ, ಬೆನ್ನುಡಿಯ ಶ್ರೀ ರಕ್ಷೆ, ಈ ಮಹಾಜೀವಿಯ ಬದುಕಿನ ಹಾದಿಯನ್ನು ಪುಸ್ತಕ ರೂಪದಲ್ಲಿ ಬಿಡುಗಡೆಗೊಳಿಸಲು ಮುಖ್ಯ ಅತಿಥಿಗಳ ಸಹಯೋಯೋಗ ಎಲ್ಲವನ್ನೂ ಸತೀಶ ನಿರರ್ಗಳವಾಗಿ ಚಿತ್ರಿಸಿದ್ದು ಖುಷಿ ಕೊಟ್ಟಿತು. .. ಅಂದರೆ ಒಂದು ಸಣ್ಣ ಬೀಜ ಮಹಾವೃಕ್ಷವಾಗಲು ಬೇಕಾದ ಸಮಯದಂತೆ.. ಈ ರೀತಿಯ ಒಂದು ಸಾರ್ಥಕತೆಯ ಬದುಕನ್ನು ಒಂದಷ್ಟು ಪುಟಗಳಲ್ಲಿ ಹಿಡಿದಿಡುವುದು ಗಂಗಾಮಾತೆಯನ್ನು ಒಂದು ಕಳಸದಲ್ಲಿ ಹಿಡಿದಿಟ್ಟಂತೆ ..ಅಂದರೆ ನಮಗೆ ದಕ್ಕಿದಷ್ಟೇ ದಕ್ಕಿತು ಎನ್ನುವ ಸಂತಸ.. ಇನ್ನಷ್ಟು ಲೇಖನಗಳು ಹರಿದು ಬರುವುದಿತ್ತು.. ಆದರೆ ಸಮಯದ ಅಭಾವ, ಮತ್ತೆ ಇದನ್ನು ಮುಂದೂಡಲು ಒಪ್ಪದ ಮನಸ್ಸು.. ಹೀಗಾಗಿ ಸಿಕ್ಕಿದಷ್ಟು ಪುಷ್ಪಗಳು ಈ ಗೌರಿ ಪೂಜೆಗೆ ಸಮರ್ಪಿತವಾದವು..
ಸಂಸ್ಕಾರ, ಆಚಾರ, ವಿಚಾರಗಳು ಇರುವಂತಹ ಈ ಕಾರ್ಯಕ್ರಮ ಬರಿ ಮನೋರಂಜನೆಯ ಸರಕಾಗಬಾರದು.. ಅದೊಂದು ಅನುಸರಿಸುವ ಮೆಟ್ಟಿಲಾಗಬೇಕು ಎಂದ ಅನಂತಿ ಮಾವನವರ ಮಾತು ಅಕ್ಷರಶಃ ನಿಜ.. ಅದಕ್ಕೆ ಇಂಬು ಕೊಟ್ಟಿದ್ದು.. ಇವರ ವಂದಾರ್ಪಣೆಯ ಮುಂಚೆ ಹರಿದ ನಾದಗಂಗೆ. ತ್ರಿವಳಿ ಕಲಾವಿದರ ಜುಗಲ್ ಬಂಧಿ.. ಅದ್ಭುತವಾಗಿತ್ತು..
ಸಂಗೀತ ರಾಗಗಳ ಜ್ಞಾನ ಅಪಾರವಾಗಿ ಕಡಿಮೆ ಇರುವ ನನಗೆ.. ಆ ಕಲಾವಿದರನ್ನು ಮಾತಾಡಿಸಿ, ಅವರ ಸಂಗೀತ ಪ್ರತಿಭೆಗೆ ಅಭಿನಂದನೆ ಹೇಳಿದಾಗ (ನನ್ನ ಮಡದಿ ತಿದಿ ಒತ್ತಿ ಒತ್ತಿ .. ಆ ಕಲಾವಿದರಿಗೆ ಅಭಿನಂದನೆಗಳನ್ನು ಹೇಳಿ ಹೇಳಿ ಅಂತ ದಂಬಾಲು ಬಿದ್ದಿದ್ದಳು.. ನನ್ನ ಹಾಗೆ ಅವರಿಗೆ ಅನೇಕಾನೇಕ ಸಂಗೀತಾಸಕ್ತರು ಅಭಿನಂದನೆ ಸಲ್ಲಿಸಲು ಅವರ ಹಿಂದೆ ನಿಂತಿದ್ದಾಗ.. ಆ ಸಾಲನ್ನು ಹೇಗೆ ಮುರಿಯುವುದು ಎಂಬ ಹಿಂಜರಿಕೆಯೂ ಅದಕ್ಕೆ ಕಾರಣವಾಗಿತ್ತು.. ಜೊತೆಗೆ ಕಲಾವಿದರಿಗೆ ಅಭಿನಂದನೆ ಸಲ್ಲಿಸುವುದು ನನ್ನ ಪಟ್ಟಿಯಲ್ಲಿ ಯಾವಾಗಲೂ ಅಗ್ರಸ್ಥಾನದಲ್ಲಿರುತ್ತದೆ.. ಅದು ಬೇರೆ ಕತೆ)
"ಸರ್ ರಾಗದ ಬಗ್ಗೆ ಜ್ಞಾನವಿಲ್ಲದಿದ್ದರೇನಂತೆ.. ಸಂಗೀತವನ್ನು ಆಸ್ವಾಧಿಸುವ ಗುಣ ಇದೆಯಲ್ಲ ಅದೇ ಕಲಾವಿದರಿಗೆ ಸ್ಫೂರ್ತಿ.. ನೀವು ಕೂತು ಕೇಳಿದ್ದೀರಾ ಎಂಬ ನಿಮ್ಮ ಮಾತೆ ನಮಗೆ ಸಿಗುವಂಥ ಗೌರವ.. "
ಅಬ್ಬಬ್ಬಾ ತುಂಬಿದ ಕೊಡ ತುಳುಕೋದಿಲ್ಲ ಎಂದರೆ ಇದೆ ಅಲ್ಲವೇ ..
ಊಟದ ಸಮಯದಲ್ಲಿ ಅನೇಕ ಬಂಧುಮಿತ್ರರು ಸಿಕ್ಕಿದರು.. ಅವರ ಜೊತೆಗಿನ ಮಾತುಗಳು, ಒಂದಷ್ಟು ಫೋಟೋಗಳು.. ಒಂದಷ್ಟು ಪುಟ್ಟ ಪುಟ್ಟ ಹರಟೆ, ತಮಾಷೆಗಳು.. ಮತ್ತು ಕೆಲವೇ ತಿಂಗಳುಗಳ ಹಿಂದೆ ಮದುವೆಯಾಗಿರುವ ಅನೇಕ ಪ್ರಣಯದ ಪಕ್ಷಿಗಳು.. ಮದುವೆಯಾಗಿ ವರ್ಷಗಳೇ ಕಳೆದಿದ್ದರೂ ಇಂದಿಗೂ ಪ್ರಣಯದ ಪಕ್ಷಿಗಳೇ ಆಗಿರುವ ಅನೇಕ ಜೋಡಿಗಳು.. ಹಿರಿಯ ಜೀವಗಳು, ಅನೇಕ ತಲೆಮಾರುಗಳನ್ನು ಕಂಡ ಹಿರಿಯ ಜೋಡಿಗಳು.. ಅವರೆಲ್ಲ ಎಲ್ಲರನ್ನೂ ಗುರುತಿಸಿ ಗುರುತಿಸಿ ತಮ್ಮ ಸಂಬಂಧಗಳನ್ನು ಹೇಳಿಕೊಂಡು ತಮ್ಮ ಬದುಕಿನ ಆಲದ ಬಿಳಲುಗಳನ್ನು ಪರಿಚಯ ಮಾಡಿಕೊಟ್ಟ ಆ ಕ್ಷಣಗಳು.. ಗೌರಮಜ್ಜಿಯ ಸಾರ್ಥಕ ಬದುಕಿನ ಅಳಿಸಲಾಗದ ಹೆಜ್ಜೆ ಗುರುತುಗಳನ್ನು ನಮಗೆ ಪರಿಚಯ ಮಾಡಿಕೊಟ್ಟವು..
*******
ಒಂದು ಲೋಟ ಕಾಫೀ ಹಿಗ್ಗಿದ ಮೇಲೆ.. ಉಫ್ ಅಂತ ಸುಮ್ಮನೆ ಕೂತೆ.. ಪುಸ್ತಕದ ಕಡೆ ನೋಡಿದೆ.. ಅದೇ ಅಜ್ಜಿ.. ಆದರೆ ಇನ್ನಷ್ಟು ನಗುಮೊಗದಲ್ಲಿ.. ಅಜ್ಜನ ಮೊಗದಲ್ಲಿ ಇನ್ನಷ್ಟು ಹೊಳಪಿತ್ತು .
ಅಜ್ಜಯ್ಯ "ಗೌರಿ ನೋಡು ನೀ ಹೇಳಿದ್ದು ಸರಿ.. ಪುಸ್ತಕ ಓದಿದ್ದರೆ .. ಅಲ್ಲಿರುವ ಭಿನ್ನ ವಿಭಿನ್ನ ಬರಹಗಾರರ ನೋಟಗಳು ಇವನ ಬರವಣಿಗೆಯ ಮೇಲೆ ಪ್ರಭಾವ ಬೀರುತಿತ್ತು.. ಈಗ ನೋಡು ನೀನು ಹೇಳಿದೆ ಅಂತ.. ಅವನು ಪುಸ್ತಕ ಮುಚ್ಚಿಟ್ಟ ನಿರರ್ಗಳವಾಗಿ.. ಕಾರ್ಯಕ್ರಮದ ವಿವರ ಹರಿಯಿತು.. "
"ಹೌದು ರೀ.. ನಾನು ಮಾಡ್ತಿದ್ದದ್ದು ಹಾಗೆ.. ರಂಗೋಲಿ ಹಬ್ಬದ ಸಮಯದಲ್ಲಿ ರಂಗೋಲಿ ಹಾಕಬೇಕು ಅಂದರೆ ನಾ ಆಚೀಚೆ ಮನೆಯ ರಂಗೋಲಿ ನೋಡುತ್ತಿರಲಿಲ್ಲ.. ನನ್ನ ಮನಸ್ಸಲ್ಲಿ ಬಂದಿದ್ದ ರೇಖಾಚಿತ್ರಗಳನ್ನು ರಂಗೋಲಿಯಾಗಿ ಪರಿವರ್ತಿಸುತ್ತಿದ್ದೆ.. ಅದಕ್ಕೆ ಕಾರ್ಯಕ್ರಮದಲ್ಲ ಹೇಳಿದರಲ್ಲ.. ಸಭಾಂಗಣದ ಹೊರಗೆ ಹಾಕಿದ ರಂಗೋಲಿ ನೋಡಿದರೆ.. ಗೌರಮ್ಮಜ್ಜಿಯ ಮಾರ್ಗದರ್ಶನ ರಂಗೋಲಿಯ ಹಾಗೆ ಬಂದಿದೆ ಅಂತ.. "
"ನಿಜಕ್ಕೂ ಹೌದು.. ಗೌರಿ ಶತಮಾನೋತ್ಸವದಾಚೆ ಕಂಡ ನಮ್ಮ ಬದುಕು, ನಾವು ಸವೆಸಿದ ಜೀವನ, ತಲೆಮಾರುಗಳನ್ನು ಕಂಡ ನಮ್ಮ ಮನೆಯಲ್ಲಿ ಬೆಳೆದ ನಮ್ಮ ಕುಟುಂಬದ ಕುಡಿಗಳು, ಅದರ ಮರಿ ಕುಡಿಗಳು, ಅದರ ಮುಂದುವರೆದ ಪರಂಪರೆ.. ಪ್ರತಿಯೊಂದರಲ್ಲೂ ನಾವು ಪಾಲಿಸಿದ ಅಚ್ಚುಕಟ್ಟುತನ ಇಲ್ಲಿ . ಒಂದು ಸುಂದರವಾದ ಕಾರ್ಯಕ್ರಮವಾಗಿ ಮೂಡಿಬಂದಿದೆ.. "
"ಹೌದು ಕಣ್ರೀ ನೀವು ಹೇಳೋದು ಅಕ್ಷರಶಃ ನಿಜ.. ಇದೊಂದು ಜೇನು ಗೂಡು ಕಟ್ಟಿದ ಹಾಗೆ.. ಪ್ರತಿಯೊಂದು ಕೂಡ ಮಧುರ ಹನಿಗಳನ್ನು ಅನೇಕಾನೇಕ ಹೂಗಳಿಂದ ತಂದು ಜೇನುಗೂಡನ್ನು ಕಟ್ಟಿದ ಹಾಗೆ.. ಇಲ್ಲಿ ಪ್ರತಿಯೊಬ್ಬರ ಪರಿಶ್ರಮವೂ ಅಡಗಿದೆ. ತೆರೆಮರೆಯಲ್ಲಿ, ತೆರೆಯ ಮೇಲೆ, ತೆರೆಯ ಆಚೆ ಹತ್ತಾರು ಕೈಗಳ ಪರಿಶ್ರಮ ಈ ಕಾರ್ಯಕ್ರಮದ ರೂಪಿಗೆ ಸಹಕಾರವಾಗಿದೆ.. ಅವರನ್ನೆಲ್ಲಾ ಹೆಸರಿಸಿ ಧನ್ಯವಾದಗಳನ್ನು ಹೇಳಿದ ಹಾಗೆ.. ನಾವೂ ಕೂಡ ನಮ್ಮ ಕುಟುಂಬದ ಪರಿವಾರದವರಿಗೆ, ನಮ್ಮ ಕುಟುಂಬದ ಏಳಿಗೆಗೆ ಸಹಕಾರಿಯಾದ ಪ್ರತಿಯೊಬ್ಬರಿಗೂ ಸಹಸ್ರ ಸಹಸ್ರ ಶುಭ ಹಾರೈಕೆಗಳು.. "
ಲೋಕಾಃ ಸಮಸ್ತಾಃ ಸುಖಿನೋ ಭವಂತು.."
ಅಜ್ಜಿ "ಓಹ್ ನಿಮ್ಮ ಸಾಯಂ ಸಂಧ್ಯಾವಂದನೆಯ ಸಮಯವಾಯಿತು.. ಸ್ವರ್ಗದಲ್ಲಿಯೇ ಇದ್ದರೂ ದೇವರ ಮನೆಯಲ್ಲಿ ದೀಪ ಹಚ್ಚಬೇಕು ಅಲ್ಲವೇ.. ನಾನು ಬರುತ್ತೇನೆ" ಎಂದು ಎದ್ದು ಒಬ್ಬರ ಕೈ ಒಬ್ಬರು ಹಿಡಿದು ಮನೆಯೊಳಗೇ ಹೊರಟರು..
"ಅದು ಸರಿ.. ಇಡೀ ಕಾರ್ಯಕ್ರಮ ಹೇಗಿತ್ತು ರೀ?
"ಅಜ್ಜಯ್ಯ ಅಲ್ಲಿ ನೋಡು ನಮ್ಮ ಮರಿಮೊಮ್ಮಗಳು ತನ್ನ ನೃತ್ಯ ಕಾರ್ಯಕ್ರಮದಲ್ಲಿ ತೋರಿಸಿದ್ದಾಳೆ.. "
ಸಂಧ್ಯಾರಾಧನೆ, ಸಂಧ್ಯಾವಂದನೆ ಮೇ ಆದ ಮೇಲೆ ಮತ್ತೆ ಸಂಜೆಯ ಗಾಳಿಗೆ ಜಗಲಿಯ ಮೇಲೆ ಕೂತು ಅಜ್ಜ ತಮ್ಮ ಲ್ಯಾಪ್ಟಾಪ್ ತೆಗೆದು.. ಗೌರಿ ಬಾ ಇಲ್ಲಿ.. ಕೆಲವು ಕ್ಯಾಂಡಿಡ್ ಫೋಟೋಗಳು ಇವೆ ನೋಡೋಣ.. ..
ಅಜ್ಜಿ ಬಿಸಿ ಬಿಸಿ, ಜೊತೆಗೆ ಆಲೂ ಬೋಂಡಾ ಮಾಡಿಕೊಂಡು..ನೋಡಿದ ಕೆಲವು ಚಿತ್ರಗಳು . !
ಶುಭಂ ಭವತು ಎಂದರು ಅಜ್ಜಯ್ಯ!
ಅಲ್ಲಿಗೆ ನೂರು ವಸಂತ ನೂರು ನಮನ ಕಾರ್ಯಕ್ರಮ ಸಾಂಗೋಪಾಂಗವಾಗಿ ಸಾಗಿ ಅಂದುಕೊಂಡಿದ್ದ ಗುರಿ ಸೇರಿತು ಅಂದರು ಅಜ್ಜಿ ಗೌರಮ್ಮಜ್ಜಿ!
*********
ಪೋಸ್ಟ್ ಮಾಡಿದ ಮೇಲೆ ಮತ್ತೊಮ್ಮೆ ಕೈಗೆ ತೆಗೆದುಕೊಂಡೆ ..
ಅಜ್ಜಿ ಹೇಳಿದರು "ಈಗ ಓದು ಮಗು.. ನವರತ್ನಗಳಲ್ಲಿ ಹವಳದ ಹೊಳಪು ಕಡಿಮೆ ಅಂತ ಕಾರ್ಯಕ್ರಮದಲ್ಲಿ ಹೇಳಿದ್ದರಲ್ಲವೇ.. ಈ ಹವಳಕ್ಕೆ ಚಿನ್ನದ ಚೌಕಟ್ಟು ಸಿಗುತ್ತದೆ..ಶುಭವಾಗಲಿ ಮಗು" ಎನ್ನುತ್ತಾ ಮತ್ತೆ ಪುಸ್ತಕದೊಳಗೆ ಹೋಗಿ ಕೂತರು..
No comments:
Post a Comment