ಜಿ ಕೆ ವೆಂಕಟೇಶ್ ಕರುನಾಡಿನ ದೊಡ್ಡ ಸಂಗೀತ ನಿರ್ದೇಶಕರು.. ಅವರೊಂದು ಕಾರ್ಯಕ್ರಮದಲ್ಲಿ ಹೇಳುತ್ತಿದ್ದರು ಕರುನಾಡು ನನ್ನನ್ನು ಯಾವತ್ತೂ ಮರೆಯೋದಿಲ್ಲ.. ಯಾಕೆ ಅಂದರೆ "ಯುಗಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ" ಕುಲವಧು ಚಿತ್ರದ ಈ ಹಾಡು ಪ್ರತಿ ಯುಗಾದಿಗೂ ಈ ಹಾಡು ಹಾಡದೆ ಹಬ್ಬ ಶುರುವಾಗದು... ಹಾಗೆಯೇ ಕಣ್ತೆರೆದು ನೋಡು ಚಿತ್ರದ "ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ" ಕರುನಾಡ ರಾಜ್ಯೋತ್ಸವಕ್ಕೆ ಚಾಲನೆ ನೀಡುವ ಹಾಡು.. ಅಂತ ಹೇಳಿದ್ದರು..
ನಿಜ ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಕವಿತೆಯಂತೆ ಅನೇಕ ಬಾರಿ ಧಾರವಾಡದ ಮೂಲಕ ಹಾದು ಹೋಗಿದ್ದರೂ ಸಾಧನೇಕೇರಿಯ ಬಗ್ಗೆ ಕೇಳಿದ್ದರೂ, ನೋಡಬೇಕೆಂಬ ಆಸೆಯಿದ್ದರೂ ಅನೇಕ ಕಾರಣಗಳಿಂದ ಹೋಗಲಾಗಿರಲಿಲ್ಲ..
ಭಗವಂತ ಹೇಳುವಂತೆ ಎಲ್ಲದ್ದಕ್ಕೂ ಒಂದು ಸಮಯ ಅಂತ ಇರುತ್ತದೆ.. ಅದು ಒದಗಿ ಬಂದಾಗ ಯಾವುದೇ ಅಡತಡೆಗಳು ಇರಲಾರದು..
ಮಾರ್ಚ್ ತಿಂಗಳಲ್ಲಿ ಒಂದು ಮಾತು ಕತೆ
"ಬನ್ನಿ ಶ್ರೀಕಾಂತ್ ಧಾರವಾಡಕ್ಕೆ"
ಅಂತ ಆತ್ಮೀಯವಾಗಿ ಆಹ್ವಾನ ಕೊಟ್ಟಾಗ
"ಹೌದು ಸರ್ ಬರುತ್ತೇನೆ.. ಬೇಂದ್ರೆ ಅಜ್ಜನ ಮನೆ ನೋಡಬೇಕು.. ಸಾಧನೇಕೇರಿಯಲ್ಲಿ ಹೆಜ್ಜೆ ಇಡಬೇಕು" ಅಂದಾಗ ..
"ಬನ್ನಿ ಬನ್ನಿ ಬೇಂದ್ರೆ ಅಜ್ಜನನ್ನು ಕಣ್ಣಾರೆ ನೋಡಿದ್ದೇನೆ.. ಅಲ್ಲಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನದು"
ಸಾಹಸ ಪ್ರವೃತ್ತಿ ಜೀವನದ ಜಂಜಾಟದಲ್ಲಿ ಕಡಿಮೆಯಾಗಿತ್ತು.. ಇವರ ಆತ್ಮೀಯ ಮಾತುಗಳು ಆ ದೀಪಕ್ಕೆ ಎಣ್ಣೆ ಹಾಕಿದಂತೆ ಮತ್ತೆ ಪ್ರಜ್ವಲಿಸತೊಡಗಿತು..
ದಾರಿಯುದ್ದಕ್ಕೂ ಮಳೆ.. ಮಳೆ.. ರಸ್ತೆಯೆಲ್ಲ ಒದ್ದೆಮಯ ... ಆಗಸ ಬೇಂದ್ರೆ ಅಜ್ಜನನ್ನು ನೋಡುತ್ತೇನೆ ಎನ್ನುವ ಸಾಹಸಕ್ಕೆ ಆನಂದಭಾಷ್ಪ ಸುರಿಸುತಿತ್ತು ಅನಿಸುತ್ತದೆ.. ಎಡಬಿಡದೆ ಮಳೆ..
ನನ್ನ ಮಡದಿಯ ಅಕ್ಕ ಮತ್ತು ಭಾವ ಅವರ ಮನೆಗೆ ಕಾಲಿಟ್ಟಾಗ ಒಂದು ಆತ್ಮೀಯವಾದ ಹಸ್ತಲಾಘವ.. ಬನ್ನಿ ಬನ್ನಿ ಅಂತ ಪ್ರೀತಿಯ ಮಾತುಗಳು.. ಆಗಸ ನೋಡಿದೆ.. ಬೇಂದ್ರೆ ಅಜ್ಜ ಶಭಾಷ್ ಕಾಲ ಕೂಡಿ ಬಂದಿದೆ ಎನ್ನುವಂತೆ ಹೆಬ್ಬೆರಳು ತೋರಿದರು..
ಭರ್ಜರಿ ಊಟ.. ತರಕಾರಿ ತುಂಬಿದ ಹುಳಿ, ಅನ್ನ, ಪೂರಿ, ಉಪ್ಪಿನಕಾಯಿ, ಮಜ್ಜಿಗೆ, ಬಾದಾಮ್ ಪುರಿ, ಕುಂಬಳಕಾಯಿಯ ಸಿಹಿ ತಿಂಡಿ... ಹೆಬ್ಬಾವಾಗಿದ್ದೆ.. ಕಾರಣ ಹೊಟ್ಟೆ ತುಂಬಿ ಹೋಗಿತ್ತು.. ಇದಕ್ಕೆ ಮುಂಚೆ ಕುಡಿದಿದ್ದ ಚಹಾ ಈ ಭೂರಿ ಭೋಜನದ ಬಿರುಗಾಳಿಗೆ ಎದರಿಕೊಂಡು ಉದರದೊಳಗೆ ಬಚ್ಚಿಟ್ಟುಕೊಂಡಿತ್ತು.
"ನೋಡಿ ಶ್ರೀಕಾಂತ್ ನಿಮ್ಮ ದೇವರು ಓಡಾಡಿದ ಸಾಧನಕೇರಿ.. ಇದೋ ನೋಡಿ ಅವರ ಮನೆ.. ಇಲ್ಲಿ ಬೇಂದ್ರೆ ದರ್ಶನದ ಭವನ.. "
"ನಿಮ್ಮ ದೇವರ ಜೊತೆ ನಿಂತುಕೊಳ್ಳಿ.. ಫೋಟೋ ತೆಗೆಯುತ್ತೇನೆ" ಎನ್ನುತ್ತಾ ಹುಮ್ಮಸ್ಸು ತುಂಬಿ ಫೋಟೋ ತೆಗೆದರು..
ಬಾಗಿಲಿನ ಬಳಿ ಕಂಚಿನ ಬೇಂದ್ರೆ ಅಜ್ಜನ ಮೂರ್ತಿ ಮೆಲ್ಲನೆ ಕರೆದಂತೆ "ಬಾರೋ ಶ್ರೀಕಾಂತ ಅಂತೂ ಇಂತೂ ಇಲ್ಲಿಗೆ ಬರುವ ಸಂಕಲ್ಪ ನಿಜವಾಯಿತು.. "
"ಅಜ್ಜ ಇದು ನನ್ನ ಗುರುಗಳು ಕಂ ಭಾವನವರ ಮಾರ್ಗದರ್ಶನ.. ಅವರೇ ಈ ಸಾಹಸದ ರೂವಾರಿ.. ಈ ಶ್ರೇಯಸ್ಸು ಅವರಿಗೆ ಸಲ್ಲಬೇಕು.. "
"ಹೌದು ಹೌದು ಈ ಮಗು ಬಾಲ್ಯದ ದಿನಗಳನ್ನು ನಮ್ಮ ಮನೆಯ ಮುಂದೆ ಅಡ್ಡಾಡಿದ್ದನ್ನು ನಾನು ಕಂಡಿದ್ದೇನೆ.. ಮುಗ್ಧ ಮುಖ .. ಸೌಮ್ಯ ನಗು.. ಅಪಾರ ಬುದ್ದಿಮತ್ತೆ.. ತುಂಬಿಕೊಂಡಿರುವ ಈ ಮಗು ಇಂದು ಬೆಳೆದು ಅನೇಕರಿಗೆ ಮಾರ್ಗದರ್ಶನ ನೀಡುತ್ತಿರುವುದು ಹೆಮ್ಮೆಯ ಸಂಗತಿ.. ಈ ಧಾರವಾಡ ಮಣ್ಣಿನ ಗುಣವೇ ಹಂಗೆ.. ಹೋಗು ಮಹಡಿ ಹತ್ತಿ ನೋಡು ನನ್ನ ಜೀವನದ ಅನೇಕ ಮಗ್ಗುಲುಗಳನ್ನು ಚಿತ್ರಗಳಲ್ಲಿ ಸೆರೆಹಿಡಿದ್ದಿದ್ದಾರೆ.. ನೋಡಿ ಬಾ ಶುಭವಾಗಲಿ" ಎಂದು ಹರಸಿದರು..
ಮಹಡಿಯಲ್ಲಿ ನನ್ನ ಬೆನ್ನ ಹಿಂದೆಯೇ ಗುರುಗಳು "ನೋಡಿ ಶ್ರೀಕಾಂತ್ ಬೇಂದ್ರೆಯವರ ಕವಿತೆಗಳು, ಸಂಕಲನಗಳು.. ಅವರನ್ನು ಬಣ್ಣದಲ್ಲಿ ಚಿತ್ರಿಸಿರುವ ಚಿತ್ರಗಳು, ಅವರ ಜೀವನದ ಅತ್ತ್ಯುತ್ತಮ ಕ್ಷಣಗಳ ಚಿತ್ರಗಳು.. ಸ್ನಾತಕೋತ್ತರ ಪದವಿಯ ಪತ್ರಗಳು.. .. ನೋಡುತ್ತಾ ಬನ್ನಿ" ಅಂತ ಹೇಳುತ್ತಾ ಒಂದೊಂದೇ ವಿಶೇಷಣಗಳನ್ನು ನನಗೆ ಪರಿಚಯ ಮಾಡಿಕೊಡುತ್ತಾ ಬಂದರು..
ಅದೊಂದು ಅದ್ಭುತ ಕ್ಷಣ..
ಮತ್ತೆ ಕೆಳಗೆ ಇಳಿದ ಮೇಲೆ ಬೇಂದ್ರೆ ಅಜ್ಜನ ಕಂಚಿನ ಮೂರ್ತಿ ನೋಡಿದೆ..
"ಶ್ರೀಕಾಂತ ಬದುಕು ಒಂದು ಹೂವಿನ ಹಾಸಿಗೆಯಲ್ಲ.. ಬದಲಿಗೆ ಅದೊಂದು ಸಾಧನೆ ಮಾಡುವ ಹಾದಿ.. ಅದೊಂದು ಸಾಧನ ಕೇರಿ... ಇಲ್ಲಿ ಸಾಧಿಸುವುದಕ್ಕೆ ಕೊನೆಯೇ ಇಲ್ಲ.. ನೋಡಿದಷ್ಟು ಇನ್ನಷ್ಟು ಕಾಣುವ ಸಾಗರದಂತೆ.. "ಸಾವಿರ"ದ ಸಾವಿರಾರು ಸಾಧನೆಗಳ ಲೋಕವಿದು.. ಜೀವನದಲ್ಲಿ ಬೆಂದವರೆಲ್ಲ ಬೇಂದ್ರೆಯಾಗಬಹುದು... ನಾನು ಹಾಗೆ ಬೆಂದು ಬೆಂದು ಬೇಂದ್ರೆಯಾದೆ.. ನಾ ಏನೂ ವಿಶೇಷ ವ್ಯಕ್ತಿಯಲ್ಲ .. ಅಂಬಿಕೆಯಮಗನಾಗಿ ಆಕೆ ಹೇಳಿಕೊಟ್ಟ ಒಂದಷ್ಟು ಪದಗಳು ಸರಿಸಿ ನಾಕುತಂತಿ ಅಂತ ಮೀಟಿದೆ.. ಅಷ್ಟೇ.. .. "
ಅದ್ಭುತ ಮಾತುಗಳನ್ನು ಕೇಳಿಸಿಕೊಂಡ ನಂತರ ಹೊರಗೆ ಬಂದೆ.. ಶ್ರೀಕಾಂತ್ ಜೊತೆಯಲ್ಲಿ ಒಂದು ಫೋಟೋ ತೆಗೆದುಕೊಳ್ಳೋಣ ಅಂದರು ಗುರುಗಳು..
ಅಷ್ಟರಲ್ಲಿಯೇ ಅವರು ಬೇಂದ್ರೆ ಅಜ್ಜನ ಮನೆಯ ಹತ್ತಿರ ಒಂದು ಸುತ್ತು ಹೋಗಿಬಂದರು.. ಬೇಂದ್ರೆ ಅಜ್ಜನ ಮೊಗವನ್ನು ನೋಡಿದೆ..
"ಮಗು ನೀನು ನನ್ನನ್ನು ನೋಡಿದ್ದೇ.. ಆದರೆ ನಿನ್ನನ್ನು ಮುಖತಃ ಭೇಟಿ ಮಾಡಲು ಆಗಿರಲಿಲ್ಲ.. ಇಂದು ಪುಣ್ಯ ಅನಿಸುತ್ತದೆ.. ನಿನ್ನನ್ನು ನೋಡುವ ಅವಕಾಶ ಸಿಕ್ಕಿತು.. ನಿನ್ನ ಪರಿವಾರದವರನ್ನು ಇಲ್ಲಿಗೆ ಕರೆದು ತಂದಿದ್ದೀಯ.. ಬಹಳ ಒಳ್ಳೆಯ ಕೆಲಸ ಮಾಡಿದೆ.. ನೀನು ಅನೇಕರಿಗೆ ಮಾರ್ಗದರ್ಶನ ನೀಡುತ್ತಿದ್ದೆಯ.. ಮುಂದುವರೆಸು.. ನಿನ್ನ ಮುಗ್ಧ ನಗುವಿನಂತೆ ನಿನ್ನ ಬದುಕು ಸುಂದರವಾಗಿರುತ್ತದೆ. ಮುಂದಿನಬಾರಿ ಇಲ್ಲಿ ಅನ್ನೂ ಅನೇಕರ ಮಹಾನ್ ಆತ್ಮಗಳು ಓಡಾಡಿದ ಜಾಗಗಳಿವೆ.. ಅದನ್ನು ಎಲ್ಲರಿಗೂ ಪರಿಚಯಿಸು.. ನಿನಗೆ ಶುಭವಾಗಲಿ.. ನಿನ್ನ ಕುಟುಂಬಕ್ಕೆ ನಿತ್ಯ ಯುಗಾದಿಯ ಸಂತಸ ತುಂಬಿರಲಿ.. .. ಶ್ರಾವಣ ಬಂತು ನಾಡಿಗೆ ಎನ್ನುವ ಹಾಡಿನಂತೆ ಶ್ರಾವಣ ಮಾಸ ಶುರುವಾಗುತ್ತಿದೆ.. ಶುಭವಾಗಲಿ"
ನನ್ನ ಗುರುಗಳು ಅಜ್ಜನ ಈ ಮಾತುಗಳನ್ನು ಕೇಳಿಕೊಂಡು ಸಂತಸದಿಂದ "ಶ್ರೀಕಾಂತ್ ನಿಮ್ಮಿಂದ ನಮಗೂ ಈ ಅವಕಾಶ ಸಿಕ್ಕಿತು.. ನೆಡೆಯಿರಿ ಇನ್ನೊಂದು ಅದ್ಭುತ ಜಾಗವನ್ನುತೋರಿಸುತ್ತೇನೆ .. ಇದು ಸರ್ ಎಂ ವಿಶ್ವೇಶ್ವರಯ್ಯ ಅವರು ನಿರ್ಮಿಸಿದ ಕೆರೆಯನ್ನು ತೋರಿಸುತ್ತೇನೆ"
ವಾಹ್ ಮತ್ತೊಂದು ಸುಂದರ ಪ್ರೇಕ್ಷಣೀಯ ಸ್ಥಳಕ್ಕೆ ಹೋದೆವು.. ವಿಶಾಲವಾದ ಜಲರಾಶಿ.. ಸಸ್ಯಕಾಶಿ.. ತಂಪಾದ ವಾತಾವರಣ.. ತಣ್ಣನೆ ಗಾಳಿ.. ಇಲ್ಲೇ ವಿಶ್ರಮಿಸಿಕೊಳ್ಳೋಣ ಅಂತ ಒಂದಷ್ಟು ಹೊತ್ತು ಮಾತಾಡುತ್ತಾ ಮನೆಯ ಕಡೆ ಹೊರಟೆವು..
ದಾರಿಯಲ್ಲಿ LEA ಹೋಟೆಲಿಗೆ ಹೋಗಿ ಬೆಲ್ಲದ ಚಹ.. ಆ ಚಳಿಗೆ ಮೆಣಸಿನ ಕಾಯಿ ಬಜ್ಜಿಯನ್ನು ಹೊಟ್ಟೆಗೆ ಇಳಿಸಿದೆವು..
ನಮ್ಮ ಗುರುಗಳು LEA ಹೋಟೆಲಿನ ಇತಿಹಾಸವನ್ನು ಪುಟ್ಟದಾಗಿ ಹೇಳಿದರು.. ಪ್ರತಿಯೊಂದು ತಾಣದಲ್ಲೂ ವಿಶೇಷಣಗಳು ಇರುತ್ತವೆ.. ಅದನ್ನು ತಿಳಿದುಕೊಂಡು ಸರಳಮಾತುಗಳಲ್ಲಿ ಹೇಳುವ ಗುರುಗಳ ಜ್ಞಾನ ಭಂಡಾರಕ್ಕೆ ಒಂದು ನಮಸ್ಕಾರ ಸಲ್ಲಿಸಿದೆ..
ಗುರುಗಳು ಹೇಳಿದರು "ಶ್ರೀಕಾಂತ್ ಇಲ್ಲಿ ನೋಡಿ ಈ ಆಲದ ಮರ.. ಅದು ತನ್ನ ಬಿಳುಲುಗಳನ್ನು ಎಷ್ಟು ಭೂಮಿಗೆ ಸೇರಿಸುತ್ತದೆಯೋ ಅದು ಇನ್ನಷ್ಟು ಹರಡಿಕೊಂಡು ವಿಶಾಲವಾಗುತ್ತದೆ.. ನಮ್ಮಲ್ಲಿರುವ ಜ್ಞಾನ ಭಂಡಾರವನ್ನು ಹಂಚಿದಷ್ಟು ಬೆಳೆಯುತ್ತದೆ.. "
ಅಮೃತವಾಣಿ ನಮ್ಮ ಗುರುಗಳದ್ದು.. ಆ ಮಾತುಗಳನ್ನು ಮೆಲುಕು ಹಾಕುತ್ತ ಮನೆಗೆ ಬಂದು ಅವರನ್ನು ಬೀಳ್ಕೊಟ್ಟು ಹೊರಡುವಾಗ ವಂದನಕ್ಕ ಹೇಳಿದ್ದು "ಬೆಸ್ಟ್ supporting actors ನಾವೆಲ್ಲ" ಅಂತ..
ಆ ದಿನದ ಕಾರ್ಯಕರ್ಮಕ್ಕೆ ಒಂದು ಉತ್ತಮ ಶೀರ್ಷಿಕೆ ಸಿಕ್ಕಿತು..
ಮನ ತುಂಬಿ ಮಾತಾಡುವ ಗುರುಗಳ ಕುಟುಂಬಕ್ಕೆ ಧನ್ಯವಾದಗಳನ್ನು ಹೇಳುತ್ತಾ ವನಜಕ್ಕ ಅವರ ಮನೆಗೆ ಕಾಲಿಟ್ಟೆವು..
ವಂದನಕ್ಕ ವಾರ ಮನೆಯಲ್ಲಿ ಜ್ಞಾನ ಭಂಡಾರವನ್ನು ತುಂಬಿಕೊಂಡು ಬಂದರೆ.. ಇಲ್ಲಿ ಪ್ರಾಪಂಚಿಕ ಜ್ಞಾನವನ್ನು ತುಂಬಿಕೊಂಡೆವು.. ದೇಹವನ್ನು ಕಾಡುವ ಆರೋಗ್ಯದ ಸಮಸ್ಯೆಯನ್ನು ಮೆಟ್ಟಿ ನಿಲ್ಲುವುದು ಹೇಗೆ.. ಹೇಗಿರಬೇಕು. ಹೇಗಿದ್ದರೆ ಚನ್ನ.. ಇದರ ಬಗ್ಗೆ ಸುಮಾರು ಅರ್ಧಗಂಟೆಗೂ ಮಿಗಿಲಾಗಿ ನಿರರ್ಗಳವಾಗಿ ಮಾತಾಡಿದ ಬಾವನವರಿಗೆ ಅನಂತ ಧನ್ಯವಾದಗಳು..
ಹಿರಿಯ ಜೀವಿಗಳು ಓಡಾಡಿದ ಮನೆಯನ್ನು ಒಮ್ಮೆ ನೋಡಿ ಬಂದು.. ಆ ಮಹಾನ್ ಚೇತನಗಳು ಉಸಿರಾಡಿದ ತಾಣದಲ್ಲಿ ನಾವೂ ಸ್ವಲ್ಪ ಹೊತ್ತು ನಿಂತಾಗ.. ಆ ಉಸಿರಿನ ಅನುಭವ ಆಗಿದ್ದು ಸುಳ್ಳಲ್ಲ..
ಪ್ರೋತ್ಸಾಹ ಉತ್ಸಾಹ ಹುಮ್ಮಸ್ಸು ಸ್ಫೂರ್ತಿ ಇವೆಲ್ಲ ಬಜಾರಿನಲ್ಲಿ ಸಿಗುವ ವಸ್ತುಗಳಲ್ಲ.. ಬದಲಿಗೆ ಈ ರೀತಿಯ ಸುಂದರ ಮನೋಭಾವದ ವ್ಯಕ್ತಿಗಳ ಜೊತೆಯಲ್ಲಿ ಕಳೆಯುವ ಒಂದೆರಡು ಕ್ಷಣಗಳು ಬದುಕಿಗೆ ಸಾರ್ಥಕತೆ ಮೂಡಿಸುತ್ತೆ.
ಒಂದು ಸುಂದರ ದಿನವನ್ನು ಅಷ್ಟೇ ಸುಂದರವಾಗಿ ಕಳೆದ ತೃಪ್ತಿ ನನ್ನದಾಗಿತ್ತು. ಅದಕ್ಕೆ ಅಲ್ಲವೇ ಅಜ್ಜ ಹೇಳಿದ್ದು "ಬೆಂದರೆ ಬೇಂದ್ರೆಯಾಗಬಹುದು"