ಮಧುರ ಮಕ್ಕಳೇ..
ಇನ್ನೂ ಮುರಳಿ ಓದಲು ಶುರು ಮಾಡಿರಲಿಲ್ಲ..
ಒಬ್ಬ ಬಿಳಿವಸ್ತ್ರ ಧಾರಿ ಎದ್ದು ನಿಂತ.. ಕುರುಚಲು ಫ್ರೆಂಚ್ ಗಡ್ಡ .. ಹಣೆಯಲ್ಲಿ ಚಂದನದ ಜೊತೆ ಕುಂಕುಮ.. ನೀಟಾಗಿ ಕ್ರಾಪ್ ತೆಗೆದು ಬಾಚಿದ್ದ ತಲೆಗೂದಲು.. ಎಡಗೈಗೆ ಒಂದು ಬೆಳ್ಳಿಯ ಬಳೆ .. ಬಲಗೈಯಲ್ಲಿ ವಾಚ್.. ಜೊತೆಗೆ ಆತನ ತಂಗಿ ಕಟ್ಟಿದ್ದ ರಕ್ಷಾ ಬಂಧನದ ರಾಖಿ..
"ಅಜ್ಜ ಇವತ್ತು ಒಂದು ಪುಟ್ಟ ಕಥೆ ಹೇಳ್ತೀಯ.. ನಿನ್ನ ಬಾಯಲ್ಲಿ ಚಂದದ ಕತೆ ಚೆನ್ನಾಗಿರುತ್ತೆ.. ಮತ್ತು ನೀತಿಯುಳ್ಳ ಕಥೆಯಾಗಿರುತ್ತೆ.. ಹೇಳು ಅಜ್ಜ"
"ಮಧುರ ಮಕ್ಕಳೇ.. ..ನಿಮ್ಮ ನಡುವಿನಿಂದ ಎದ್ದು ಬಂದ ಈ ಹುಡುಗ ಹೇಳಿದಂತೆ ಇಂದು ಜ್ಞಾನ ಕೊಡುವ ಒಂದು ಪುಟ್ಟ ಘಟನೆ ಹೇಳುತ್ತೇನೆ ಕೇಳಿ.. "
ಪ್ರಶ್ನೆ: ಕುದುರೆಯ ಹತ್ತಿರವೇ ಯಾವಾಗ ಕೆರೆ ಬರುತ್ತದೆ?.. ಬರಲು ಸಾಧ್ಯವೇ?
ಉತ್ತರ: ಭಗವಂತನಿಗೆ ಸಂಪೂರ್ಣ ಶರಣಾದಾಗ ಕುದುರೆಯ ಹತ್ತಿರವೇ ಕೆರೆ ಬರುತ್ತದೆ!!!
ಗೀತೆ : ನಾನೂ ನೀನು ನೆಂಟರಯ್ಯ ನಮಗೆ ಭೇದ ಇಲ್ಲವಯ್ಯಾ.. ವಿಠಲ ರಂಗಾ..
ಓಂ ಶಾಂತಿ.... ಮಕ್ಕಳೇ ಮಹಾರಾಷ್ಟ್ರದಲ್ಲಿರುವ ಪಂಡರಾಪುರದ ವಿಠಲನ ಪರಮ ಭಕ್ತ ..ಗೋರಾ ಎನ್ನುವ ಕುಂಬಾರ ಅರ್ಥಾತ್ ಮಣ್ಣಿನಿಂದ ಮಡಕೆ ಕುಡಿಕೆ ಮಣ್ಣಿನ ಸಾಮಾನುಗಳನ್ನು ಮಾಡುತ್ತಾ ಸಂತೆಯಲ್ಲಿ ಮಾರಿ ಕುಟುಂಬವನ್ನು ನೆಡೆಸುತ್ತಿದ್ದ ಪರಮ ಭಕ್ತ.. ಸದಾ ಭಾವಂತನ ನಾಮಸ್ಮರಣೆಯಲ್ಲಿಯೇ ಪ್ರತಿ ಕ್ಷಣವನ್ನು ಕಳೆಯುತ್ತಿದ್ದ ಮಹಾನ್ ಭಕ್ತ..
ಕತೆಯನ್ನು ಪುಟ್ಟದಾಗ ಮೊಟಕು ಮಾಡಿ ಹೇಳುತ್ತೇನೆ.. ಗೋರನನ್ನು ಪುಟಕ್ಕೆ ಇಟ್ಟ ಚಿನ್ನ ಮಾಡಬೇಕು ಎಂಬ ಸಂಕಲ್ಪದಿಂದ ಭಗವಂತ ಗೋರನಿಗೆ ನಾನಾ ಪರೀಕ್ಷೆ ಒಡ್ಡಿ ಆತನ ಎರಡು ಕೈಗಳನ್ನೂ ಕಳೆದುಕೊಳ್ಳುವ ಹಾಗೆ ಮಾಡುತ್ತಾನೆ.. ನಂತರ ಆತನ ಸೇವೆಗಾಗಿ ಸಾಕ್ಷತ್ ವಿಠಲನೇ ಆತನ ಮನೆಗೆ ರಂಗ ಎಂಬ ಹೆಸರಿನಿಂದ ಸೇವಕನಾಗಿ ಬರುತ್ತಾನೆ..
ಸ್ವಲ್ಪ ಸಮಯದ ನಂತರ.. ಗುಡಿಯಲ್ಲಿ ವಿಠಲನನ್ನು ಕಾಣದೆ ಪರಿತಪಿಸುವ ಸಂತ ನಾಮದೇವರು ಅಲ್ಲಿದ್ದ ವಿಠಲನ ಮೂರ್ತಿಯ ಮುಂದೆ ನನ್ನ ವಿಠಲ ಎಲ್ಲಿ ಎಂದು ಪ್ರಶ್ನಿಸಿದಾಗ.. ಮೂರ್ತಿಯಿಂದ ವಿಠಲನ ರಾಣಿ "ನಾಮದೇವ ಭಕ್ತ ವತ್ಸಲ ತನ್ನ ಭಕ್ತರ ಮನೆಯಲ್ಲಿ ಸೇವೆ ಮಾಡಿಕೊಂಡಿದ್ದಾರೆ ಎಂದು ಉತ್ತರ ಬರುತ್ತದೆ.. " ಅಚ್ಚರಿಗೊಂಡ ನಾಮದೇವರು ಎಲ್ಲಿ ಮನೆ ಎಂದು ವಿಚಾರಿಸಿದಾಗ ಗೋರನ ಮನೆ ಎಂದು ಉತ್ತರ ಬರುತ್ತದೆ..
ಅಲ್ಲಿಂದ ಕಟ್ ಮಾಡಿ ಗೋರನ ಮನೆಗೆ ಬರುವ ನಾಮದೇವರು.. ಗೋರಣ್ಣ ನನ್ನ ವಿಠಲನನ್ನು ತೋರಿಸು ಎಂದಾಗ... "ಇಲ್ಲೆಲ್ಲಿ ವಿಠಲ ಸ್ವಾಮೀ.. ಪಂಡರಾಪುರದಲ್ಲಿ.. ಎಷ್ಟೋ ವರ್ಷಗಳ ಅಸೆ .. ಪಂಡರಾಪುರದಲ್ಲಿ ವಿಠಲನ ದರ್ಶನ ಮಾಡಬೇಕು.. "
ನೀನೇಕೆ ಅಲ್ಲಿಗೆ ಹೋಗಬೇಕು ಗೋರಣ್ಣ ವಿಠಲನೇ ನಿನ್ನ ಮನೆಗೆ ಬಂದಿದ್ದಾನೆ.. ಎಲ್ಲಿ ತೋರಿಸು.. ಎಲ್ಲಿ ತೋರಿಸು..
"ನನ್ನ ಮನೆಯಲ್ಲಿ ನಾನು, ನನ್ನ ಮಡದಿಯರು ರಂಗಣ್ಣ ಇಷ್ಟೇ" ಅಂತ ಇನ್ನೂ ಪೂರ್ಣ ಮಾಡಿರಲಿಲ್ಲ ಅಷ್ಟಕ್ಕೇ ಸಂತ ನಾಮದೇವರು. ರಂಗಣ್ಣನೇ ನನ್ನ ವಿಠಲ.. ತೋರಿಸು ತೋರಿಸು.. ಎಂಥ ಅಂದಾಗ ಅಚ್ಚರಿ, ಗಾಬರಿ, ಸಂತಸ. .ದುಃಖ ಹತಾಶೆ ಎಲ್ಲವೂ ಒಮ್ಮೆಲೇ ಗೋರನಿಗೆ
ಮಕ್ಕಳೇ.. ನಾನು ಪ್ರಶ್ನೆ ಕೇಳಿದ್ದೆ ಕುದುರೆ ಕೆರೆಯ ಹತ್ತಿರಕ್ಕೆ ಹೋಗಬೇಕು ಇಲ್ಲವೇ ಕೆರೆಯೇ ಕುದುರೆ ಹತ್ತಿರ ಬರಬೇಕು.. ಇಂದು ಕುದುರೆಯೇ ಕೆರೆಯ ಹತ್ತಿರಕ್ಕೆ ಬಂದಿದೆ.. ಇದೆ ಭಕ್ತರ ಪುಣ್ಯ..
ಎಲ್ಲರಿಗೂ ಸಂತಸ.. ಮತ್ತೆ ಆ ಹುಡುಗ ಎದ್ದು ನಿಂತು.. "ಅಜ್ಜ ಭಕ್ತರ ಪುಣ್ಯವೇ ಭಗವಂತ ನೀಡುವ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಹಾಗೆಮಾಡುತ್ತದೆ .. ಹಾಗೆಯೇ ಗೋರನ ಅಪರಿಮಿತ ಭಕ್ತಿ. .ಭಗವಂತನನ್ನೇ ಅವನ ಮನೆಗೆ ಕರೆಸಿತು.. ಅಲ್ಲವೇ ಅಜ್ಜ"
"ಹೌದು ಮಗು.. ಇಂದು ಕೂಡ ಹಾಗೆಯೇ ಆಯಿತು ನೋಡು.. ಒಬ್ಬರು ನನ್ನ ಕ್ಷೇತ್ರದಲ್ಲಿ ಸೇವೆ ಮಾಡುತ್ತಾ ಮೂವತ್ತು ವರ್ಷಗಳು ಕಳೆದಿದ್ದಾರೆ.. ಅವರ ಸಂಪರ್ಕಕ್ಕೆ ಬಂದ ಯಾರನ್ನೂ ಸುಮ್ಮನೆ ಕೂರಲು ಬಿಡದೆ ಒಂದಲ್ಲ ಒಂದು ಸೇವೆಯಲ್ಲಿ ಎಲ್ಲರನ್ನೂ ತೊಡಗಿಸುವ ಮುಗ್ಧ ಹೆಣ್ಣು ಮಗು ... ಅವರ ಪತಿರಾಯ ತನ್ನದೇ ಆದ ರೀತಿಯಲ್ಲಿ ತಾನು ನಂಬಿದ ಸರಿ ದಾರಿಯಲ್ಲಿ ನೆಡೆಯುತ್ತಾ ತನ್ನ ಬರವಣಿಗೆಯಿಂದ ಎಲ್ಲರಿಗೂ ಇಷ್ಟವಾಗುವ ಹುಡುಗ.. ಅವರ ಮಗಳು ಗರ್ಭದಲ್ಲಿದ್ದಾಗಲೇ ಈ ಶಕ್ತಿಯನ್ನು ಬಳುವಳಿಯಾಗಿ ಪಡೆದವಳು. ಇನ್ನೊಬ್ಬ ಮಗಳು ತಾವರೆ ಎಲೆಯ ಮೇಲಿನ ನೀರಿನ ಬಿಂದುವಿನ ಹಾಗೆ ಅಂಟಿಕೊಂಡು ಇರದೇ.. ಬಿಟ್ಟು ನಿಲ್ಲದೆ.. ತನ್ನದೇ ರೀತಿಯಲ್ಲಿ ಜ್ಞಾನ ಮಾರ್ಗದಲ್ಲಿ ನೆಡೆಯುವಳು.. ಇಂತಹ ಸುಂದರ ಪರಿವಾರಕ್ಕೆ ನನ್ನ ಮುದ್ದು ಮಕ್ಕಳು ಸೌಭಾಗ್ಯಾ ದೀದಿ, ಇಂದ್ರಾಣಿ ದೀದಿ, ರಾಜ್ ಭಾಯ್, ಆನಂದ್ ಭಾಯ್ ಇವರೆಲ್ಲ ನನ್ನ ನಿಮ್ಮೆಲ್ಲರ ನೆಚ್ಚಿನ ಮಧುವನಕ್ಕೆ ಬಂದು ತಮ್ಮದೇ ರೀತಿಯಲ್ಲಿ ಸೇವೆ ಮಾಡುವ ಮಕ್ಕಳು.. ಇವರೆಲ್ಲ ತಮ್ಮ ಕೆಲಸದ ನಡುವೆ ಕೂಡ ರಾಜರಾಜೇಶ್ವರಿ ನಗರದ ರಾಜ ಯೋಗ ಕೇಂದ್ರದಲ್ಲಿ ಅಪಾರ ಶ್ರಮ ವಹಿಸಿ, ಇಂದು ಈ ಕೇಂದ್ರ ಹೆಸರು ಮಾಡಿದೆ ಎಂದರೆ ಇದಕ್ಕೆ ಇವರು ಕಾರಣ.. ಇವರುಗಳು ಸಂಪಾದಿಸಿದ ಪುಣ್ಯದ ಒಂದು ದೃಷ್ಟಿಯನ್ನು ಈ ದಂಪತಿಗಳ ಮನೆಗೂ, ಮನೆಯವರಿಗೂ ಕೊಟ್ಟು ಸಕಲವೂ ಅನುಗ್ರಹವಾಗಲಿ ಎಂದು ಆಶೀರ್ವಾದ ಮಾಡಿ ಬಂದ ಸುಂದರ ಕ್ಷಣವದು.. ಈ ಮುದ್ದು ಮಕ್ಕಳಿಗೆ ಆ ಭಗವಂತ ಸದಾ ಒಳ್ಳೆಯದನ್ನೇ ಮಾಡುತ್ತಾನೆ.. ಇವರಿಂದ ರಾಜರಾಜೇಶ್ವರಿ ನಗರದ ರಾಜಯೋಗ ಕೇಂದ್ರ ಇನ್ನಷ್ಟು ಬೆಳೆಯುತ್ತದೆ.. ಇನ್ನಷ್ಟು ಬೆಳಗುತ್ತದೆ.. ಇಡೀ ಪ್ರದೇಶಕ್ಕೆ ಇದು ಒಂದು ಮಾದರಿ ರಾಜಯೋಗ ಕೇಂದ್ರವಾಗುತ್ತದೆ.. ಸೌಭಾಗ್ಯ ಅಕ್ಕನವರ ನೇತೃತ್ವದಲ್ಲಿ ಈ ಕೇಂದ್ರ ಅತ್ಯುತ್ತಮ ಸೇವೆ ಮಾಡುವ ಕೇಂದ್ರವಾಗಿ ಹೆಸರು ಮಾಡುತ್ತದೆ.. ಈ ಕೇಂದ್ರದ ಯಶಸ್ಸಿಗೆ ಇದು ನನ್ನ ಆಶೀರ್ವಾದ ..
ಆ ಹುಡುಗನಿಗೆ ಮಧುವನ ನೋಡಬೇಕು ಎನ್ನುವ ಆಸೆ ಇದೆ.. ಅದಕ್ಕಿಂತಲೂ ಹೆಚ್ಚು ತನ್ನ ಕ್ಯಾಮೆರಾದಲ್ಲಿ ಅಲ್ಲಿನ ಪ್ರತಿ ದೃಶ್ಯವನ್ನು ಸೆರೆಹಿಡಿಯಬೇಕು ಎನ್ನುವ ಕಾತುರ.. ಜೊತೆಗೆ ಅವನ ಇಷ್ಟದ ನಿರ್ದೇಶಕರ ಒಂದು ಚಿತ್ರ ನಮ್ಮ ತಾಣದಲ್ಲಿಯೇ ಚಿತ್ರೀಕರಣ ವಾಗಿರೋದು.. ಮತ್ತೆ ಅದೇ ಜಾಗದಲ್ಲಿ ತಾನೂ ಕೂತು ಫೋಟೋ ತೆಗೆಯಬೇಕು ಎನ್ನುವ ಆಸೆ.. ಇದೆ ಇವ ಕುದುರೆಯಾದರೆ.. ಮಧುವನದ ಮಂದಿ ಕೆರೆ.. ಇಂದು ಕೆರೆಯೇ ಕುದುರೆಯ ಹತ್ತಿರ ಬಂದಿದೆ.. ಅದೇ ಅಲ್ಲವೇ ಈ ಮನೆಯ ಪುಣ್ಯ..
ಸಕಲವೂ ಸಕಾಲಕ್ಕೂ ಒಳೆಯದಾಗಲಿ ಎಂದು ಹಾರೈಸುತ್ತೇನೆ.. ಆಶೀರ್ವದಿಸುತ್ತೇನೆ..
ಮಧುರಾತಿ ಮಧುರ ... ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ... ಪ್ರೀತಿಯ ಮಾತಾ-ಪಿತಾ ಅಜ್ಜನ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ಅಜ್ಜನ ನಮಸ್ತೇ!!!
ಧಾರಣೆಗಾಗಿ ಮುಖ್ಯಸಾರ:
೧. ಭಗವಂತನ ಸ್ಮರಣೆ ಸದಾ ಇರಲಿ.. ಭಗವಂತನಿಂದ ಪರೀಕ್ಷೆ ಖಂಡಿತ ಇರುತ್ತದೆ.. ಆದರೆ ಆ ಪರೀಕ್ಷೆಗೆ ಉತ್ತರವನ್ನು, ಪರಿಹಾರವನ್ನು ಆತನೇ ಕೊಡುತ್ತಾನೆ..
೨. ನಂಬಿದವರಿಗೆ ಭಗವಂತ ಎಂದಿಗೂ ಕೈ ಬಿಡುವುದಿಲ್ಲ..
ವರದಾನ:
ಭಕ್ತಿ ಎಂಬುದು ಭಗವಂತ ಜನರಿಗೆ ಕೊಟ್ಟಿರುವ ವರದಾನ.. ಅದನ್ನು ನಂಬಿದಾಗ. ಅದನ್ನು ಕೈ ಹಿಡಿದಾಗ ಎಲ್ಲವೂ ಸರಳ.. ಎಲ್ಲವೂ ಸುಂದರ
ಸ್ಲೋಗನ್:
ನಂಬಿದ ದಾರಿಯನ್ನು ಎಂದಿಗೂ ಮರೆಯಬಾರದು.. ಎಂದಿಗೂ ಬದಲಿಸಬಾರದು.. ಕುದುರೆಯ ಹತ್ತಿರವೇ ಕೆರೆ ಬರಲು ಆಗ ಮಾತ್ರ ಸಾಧ್ಯ..
ಆ ಮರೆತಿದ್ದೆ ಕೆರೆಯೇ ಕುದುರೆಯ ಹತ್ತಿರ ಬಂದದ್ದಕ್ಕೆ ಒಂದಷ್ಟು ಚಿತ್ರಗಳಿವೆ ನೋಡಿ "ಆನಂದ" ಪಡಿ.. ನೀವೇ "ರಾಜ" ಎಂದು ಕೊಳ್ಳಿ.. ಸ್ವರ್ಗದ "ಇಂದ್ರ" ನೀವೇ ಅಂದುಕೊಳ್ಳಿ.. ಜೊತೆಗೆ ಇದು ನಿಮಗೆ ನಾನು ಆಶೀರ್ವದಿಸಿದ "ಸೌಭಾಗ್ಯ"