ಬ್ಯುಗಲ್ ರಾಕ್ ಅರ್ಥಾತ್ ಕಹಳೆ ಬಂಡೆಯ ಹತ್ತಿರ ಕೂತಿದ್ದೆ.. ಡಿವಿಜಿ ಅಜ್ಜ ಒಂದು ಛತ್ರಿಯ ಕೆಳಗೆ ಬಂಗಾರದಂತಹ ರವಿ ಕಿರಣಗಳನ್ನು ಆಸ್ವಾದಿಸುತ್ತಾ ಕುಳಿತಿದ್ದರು.. ಸ್ವಲ್ಪ ಹೊತ್ತಿನ ಮುಂಚೆ ವಿದ್ಯಾರ್ಥಿ ಭವನದ ಘಮ ಘಮ ಮಸಾಲೆ ದೋಸೆಯ ಸ್ವಾಧ ಇನ್ನೂ ನಾಲಿಗೆಯ ಮೇಲೆ ಕುಣಿಯುತಿತ್ತು..
ಕ್ಷಣ ಕ್ಷಣಕ್ಕೂ ಕಹಳೆ ಬಂಡೆಯ ದ್ವಾರದತ್ತ ಕಣ್ಣು ಹಾಯಿಸುತ್ತಿದ್ದರು. ಯಾರದೋ ಬರುವಿಕೆಯ ನಿರೀಕ್ಷೆಯಲ್ಲಿದ್ದರು..
ಅನತಿ ಕ್ಷಣ.. ಶ್ವೇತ ವಸ್ತ್ರಧಾರಿ... ನಗುಮೊಗದ ಉದ್ದ ನಾಮದವರೊಬ್ಬರು.. ಅರೆ ಇವರು ನಮ್ಮವರು ಅಪ್ಪ ಅಂದರೆ ಹೀಗಿರಬೇಕು ಎನಿಸುವರೊಬ್ಬರು.. ನಾ ಬದುಕಿ ಅಭಿಮಾನದಿಂದ ಎನ್ನುವರೊಬ್ಬರು ಬಂದರು.. ಆಗ ನೆಡದದ್ದೆ ಈ ಸಂಭಾಷಣೆ..
ಅಲ್ರಪ್ಪ.. ಇವ ಮತ್ತೆ ನಮ್ಮನ್ನೆಲ್ಲ ಅಕ್ಷರಗಳಲ್ಲಿ ಬಂದಿಸೋಕೆ ಹೊರಟಿದ್ದಾನೆ.. ನನ್ನ ಬಗ್ಗೆ ಹೇಳಿ ವರ್ಷಗಳೇ ಆಯ್ತು.. ಅಲ್ಲಿಯೇ ಅದು ಕುಂಟುತ್ತಿದೆ.. ಒಂದೆರಡು ಭಾಗಗಳು ಬಂದವು.. ನಂತರ ಸದ್ದಿಲ್ಲ.. ಈಗ ಮತ್ತೆ ಸಾಹಸ ಅನ್ನುತ್ತಿದ್ದಾನೆ.. ಎನ್ರಪ್ಪ ಮಾಡೋದು.. ಅಂದ ಹಾಗೆ ಅಜ್ಜ ನಿಮಗೆ ಜನುಮದಿನದ ಶುಭಾಶಯಗಳು.. !
ನೋಡಿ ಅವ ಮಾಡೋದು ಮಾಡಲಿ.. ನಮ್ಮ ಆಶೀರ್ವಾದ ಅವನ ಮೇಲೆ ಇರಲಿ ಅಷ್ಟೇ.. ನನ್ನ ಬಗ್ಗೆ ಅಂತಲೂ ಹೇಳಿದ್ದಾನೆ ಆದರೆ ಶುರು ಮಾಡಿಯೇ ಇಲ್ಲ... ಆದರೆ ನಂಬಿಕೆಯೇ ದೇವರು.. ಕಾಯೋಣ ನಾವೆಲ್ಲಾ ಅವನೊಳಗೆ ಅವನ ಬರವಣಿಗೆಯಲ್ಲಿ ಬಂದೆ ಬರುತ್ತೇವೆ.. ಡಿವಿಜಿ ಅಜ್ಜ ನಿಮಗೆ ಜನುಮದಿನದ ಶುಭಾಶಯಗಳು.. !
ಅಭಿಮಾನಿ ದೇವರುಗಳಿಗೆ ನಮಸ್ಕಾರ.. ಎಲ್ಲರೂ ಕ್ಷೇಮವೇ.. ಯೋಚಿಸಬೇಡಿ.. ಅವನಿಗೆ ಐವತ್ತು ಆಯಿತು.. ಆದರೆ ನನ್ನ ಬಗ್ಗೆ ನಲವತ್ತೈದರಲ್ಲಿಯೇ ಅಟಕಾಯಿಸಿಕೊಂಡು ಕೊಂಡು ಕೂತಿದ್ದಾನೆ.. ಆದರೆ ಎಲ್ಲರನ್ನು ಸಲಹುವ ಭಗವಂತ ಭಗವಂತ ಇದ್ದ ಹಾಗೆ.. ನಮ್ಮೆಲ್ಲರ ಸಿನಿಬದುಕು ಅವನ ಅಕ್ಷರಗಳಲ್ಲಿ ಬಂದೆ ಬರುತ್ತದೆ .. ತಲ್ಲಣಿಸದಿರು ಕಂಡ್ಯ ತಾಳು ಮನವೇ.. ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ಅಂತ ಕನಕದಾಸರು ಹೇಳಿಲ್ಲವೇ... ಶ್ರೀ ಗುಂಡಪ್ಪನವರಿಗೆ ಜನುಮದಿನದ ಶುಭಾಶಯಗಳು..
ಎಲ್ಲರಿಗೂ ನಮಸ್ಕಾರ.. ಅಜ್ಜ ಇಲ್ಲಿಯೇ ಇದ್ದಾರೆ ಅಜ್ಜ ನಮಸ್ಕಾರ.. ನಿಮ್ಮ ಜನುಮದಿನಕ್ಕೆ ಶುಭಾಶಯಗಳು.. ಅಜ್ಜ ನಿಮ್ಮಿಂದ ನನಗೆ ಈ ಲೋಕದಲ್ಲಿ ಒಂದು ಹೆಸರಾಯಿತು.. ಅಂದುಕೊಂಡಿದ್ದ ಮುಗಿಸಿದೆ ಎನ್ನುವ ತೃಪ್ತಿ ನನ್ನದು.. ಯುಗಯುಗಕ್ಕೂ ಸಲ್ಲುವ ನಿಮ್ಮ ಬೆಲೆಕಟ್ಟಲಾಗದ ಅಕ್ಷರಗಳನ್ನು ಉಪಯೋಗಿಸಿಕೊಂಡು ಅದಕ್ಕೊಂದು ಚೌಕಟ್ಟು ಹಾಕಿದೆ ಎನ್ನುವ ನಂಬಿಕೆ ನನ್ನದು.. ನನ್ನ ಪ್ರೀತಿಯ ಹುಡುಗ ಇವನು.. ಖಂಡಿತ ಏನೋ ಮಾಡೋಕೆ ಹೊರಟಿದ್ದಾನೆ.. ನನ್ನ ಸತತ ನಾಲ್ಕು ಜನುಮದಿನಗಳಿಗೆ ನಿಮ್ಮನ್ನು ಅಕ್ಷರ ರೂಪದಲ್ಲಿ ಕರೆದುಕೊಂಡು ಬಂದು ಆಶೀರ್ವಾದ ಕೊಡಿಸಿದ ಹುಡುಗ ಇವನು.. ಇವನ ಪ್ರಯತ್ನಕ್ಕೆ ನಿಮ್ಮ ಆಶೀರ್ವಾದ ಇರಲಿ ಅಜ್ಜ..
ಅಲ್ಲಿಯ ತನಕ ಸುಮ್ಮನೆ ಎಲ್ಲರ ಮಾತನ್ನು ಕೇಳುತಿದ್ದ ಅಜ್ಜ.. ಮೆಲ್ಲನೆ ನಕ್ಕು.. ಇಳಿಯುತ್ತಿದ್ದ ಕನ್ನಡಕವನ್ನು ಸರಿಮಾಡಿಕೊಂಡು.. ಬಾಲಣ್ಣ (ಅಭಿಮಾನ್ ಸ್ಟುಡಿಯೋದ ಬಾಲಕೃಷ್ಣ), ರಾಜಣ್ಣ (ಕರುನಾಡಿನ ಅಣ್ಣಾವ್ರು ಶ್ವೇತಾ ವಸ್ತ್ರಧಾರಿ), ಅಶ್ವಥ್ (ಅಪ್ಪ ಅಂದರೆ ಹೀಗಿರಬೇಕು ಎಂದು ಬೆಳ್ಳಿ ಪರದೆಯ ಮೇಲೆ ತೋರಿಸಿದ ಅಶ್ವಥ್), ಮಗು ರವಿ (ಕಗ್ಗ ದ ರಸಧಾರೆ ಹರಿಸಿದ ರವಿ ತಿರುಮಲೈ ನಾಮಧಾರಿಯಾಗಿ) ಎಲ್ಲರಿಗೂ ಶುಭ ಆಶೀರ್ವಾದಗಳು.. ನಿಮ್ಮ ಅಭಿಮಾನ.. ನಿಮ್ಮ ಹೆಮ್ಮೆ.. ನಿಮ್ಮ ಆತ್ಮೀಯತೆ..ನಿಮ್ಮ ಪ್ರೀತಿ ನನ್ನನ್ನು ಈ ಲೋಕದಲ್ಲಿ ಜೀವಂತವಾಗಿರಿಸಿದೆ.. ಆಗಲಿ ನೀವೆಲ್ಲ ಹೇಳಿದ ಹಾಗೆ ನನ್ನ ಆಶೀರ್ವಾದಗಳು ಇದ್ದೆ ಇರುತ್ತವೆ.. ಈ ಹುಡುಗನಿಗೆ ಶುಭಕೋರೋಣ.. ಹಾಗೆಯೇ ನಿಮ್ಮೆಲ್ಲರ ಶುಭಾಶಯಗಳು ನನ್ನ ಸ್ವರ್ಗದ ಬದುಕಿಗೆ ಸ್ಫೂರ್ತಿ ಕೊಡುತ್ತಿದೆ..
ಅಂದ ಹಾಗೆ ಶ್ರೀ ನಿನ್ನ ಯೋಜನೆ ಏನು.. ಇವರೆಲ್ಲರೂ ನಿನ್ನ ಮೇಲಿನ ನಂಬಿಕೆಯನ್ನು ವಿಶ್ವಾಸವನ್ನು ತಮ್ಮ ಮಾತುಗಳಲ್ಲಿ ಹೇಳಿದ್ದಾರೆ.. ನೀ ಏನು ಮಾಡೋಕೆ ಹೊರಟಿದ್ದೀಯ.. ಅದನ್ನು ಕತೆ ಮಾಡದೆ ಚುಟುಕಾಗಿ ಹೇಳುತ್ತೀಯಾ.. ಗಾಂಧಿ ಸುಬ್ಬಮ್ಮನ ಅಂಗಡಿಯ ಕುರುಕುಲು.. ಆಂಬೊಡೆ .. ತೆಗೆದುಕೊಂಡು ಹೋಗಬೇಕು.. ಪೊಟ್ಟಣ ಕಟ್ಟಿಯಾಗಿದೆ ಅಂತ ಆ ಅಂಗಡಿಯ ಹುಡುಗ ಕೂಗಿ ಹೇಳಿ ಹೋಗಿದ್ದಾನೆ.. ಬೇಗ ಶುರು ಮಾಡು..
ಅಜ್ಜ ನಿಮಗೆ ಜನುಮದಿನದ ಶುಭಾಶಯಗಳು.. ನನ್ನೊಳಗೆ ನನ್ನ ಅಪ್ಪ ಕೂತು ಹೇಳುತ್ತಾರೆ ಅದನ್ನು ಬರೆಯೋದಷ್ಟೇ ನನ್ನ ಕೆಲಸ.. ಈ ಮಹನೀಯರೆಲ್ಲ ನನ್ನ ಮೇಲಿನ ನಂಬಿಕೆಯನ್ನು ತಮ್ಮ ಮಾತುಗಳಲ್ಲಿ ಹೇಳಿದ್ದಾರೆ.. ಅದನ್ನು ನಿಭಾಯಿಸೋದಷ್ಟೇ ಕೆಲಸ.. ಬರಹ ನಾಲ್ಕು ಮಂದಿಗೆ ಇಷ್ಟವಾಗಿದೆ ಅಂದರೆ ಆದರೆ ಶ್ರೇಯಸ್ಸು ನನ್ನ ಜನುಮದಾತನಿಗೆ..
ಇರಲಿ ಅಜ್ಜ ನಿಮ್ಮ ಪ್ರಶ್ನೆಗೆ ಉತ್ತರ.. ನಿಮ್ಮ ಕಗ್ಗಗಳನ್ನು ಜನಮಾನಸಕ್ಕೆ ತಲುಪಿಸಿದ ಖ್ಯಾತಿ ಅನೇಕರಿಗೆ.. ಆದರೆ ನನಗೆ ಪರಿಚಯವಿರುವ ಒಂದಿಬ್ಬರ ಅತ್ಯುತ್ತಮ ಪ್ರಯತ್ನ ನನ್ನನ್ನು ಈ ಒಂದು ಸಾಹಸಕ್ಕೆ ಕೈಹಾಕುವಂತೆ ಪ್ರೇರೇಪಿಸಿದೆ.. ನಿಮ್ಮ ಅತ್ಯುತ್ತಮ ಕಗ್ಗಗಳ ಲಹರಿಯನ್ನು ನನ್ನಿಷ್ಟದ ಸಿನೆಮಾದೃಶ್ಯಗಳಿಗೆ ಹೊಂದಿಸಿ.. ನಿಮ್ಮ ಕಗ್ಗದ ಹೂರಣವನ್ನು ಸಿನಿಮಾ ದೃಶ್ಯಗಳಲ್ಲಿ, ಹಾಡುಗಳಲ್ಲಿ,, ಸಾಹಸಗಳಲ್ಲಿ.. ಹೊಂದಿಕೊಂಡಿಕೊಂಡಿರುವ ಬಗ್ಗೆ ನನ್ನ ಅರಿವಿಗೆ ಬಂದ ರೀತಿಯಲ್ಲಿ ಹೇಳುವ ಒಂದು ಪ್ರಯತ್ನ ಮಾಡಬೇಕು ಎನಿಸಿತು.. ಅದಕ್ಕೆ ಸ್ಫೂರ್ತಿ ಕಗ್ಗ ರಸಧಾರೆಯ ನನ್ನ ಗುರು ಸಮಾನರು ಹಾಗೂ ನಿಮ್ಮ ಪ್ರೀತಿಯ ಶ್ರೀ ರವಿ ತಿರುಮಲೈ ಸರ್.. ಮತ್ತೆ ಪುಟ್ಟ ಪುಟ್ಟ ವಿಡಿಯೋ ತುಣುಕು ಮಾಡಿ ಮೂರು ನಾಲ್ಕು ನಿಮಿಷಗಳ ಮಾತುಗಳಲ್ಲಿ ಕಗ್ಗದ ಮಾರ್ಗವನ್ನು ತೋರಿಸುತ್ತಿರುವ ನಟಿ, ಬರಹಗಾರ್ತಿಯಾಗಿರುವ ದೀಪ ರವಿಶಂಕರ್ ಮೇಡಂ.. ಅಷ್ಟೇ ಅಜ್ಜ ನನ್ನ ಆಸೆ.. ನಿಮ್ಮ ಆಶೀರ್ವಾದವಿರಲಿ..
ಮಗು ಶ್ರೀ ಉತ್ತಮ ಯೋಚನೆ ಯೋಜನೆ.. ಆಗ ನನ್ನ ಮನಸ್ಸಿಗೆ ಬಂದಿದ್ದನ್ನು ನಾಲ್ಕು ಸಾಲುಗಳಲ್ಲಿ ಗೀಚಿದ್ದೇ.... ಅಂದು ವಾಮನರೂಪದಲ್ಲಿದ್ದ ಆ ನನ್ನ ಚುಟುಕು ಬರಹಗಳು ಇಂದು ವಿರಾಟ್ ರೂಪ ಹೊಂದಿ ತ್ರಿವಿಕ್ರಮನ ಹಾಗೆ ನಿಂತಿರುವುದು ಸೋಜಿಗವೇ ಸರಿ.. ಖುಷಿಯ ವಿಚಾರವೆಂದರೆ.. ಅಂದು ಬರೆದ ಈ ಕಗ್ಗಗಳು ಮಂಕುತಿಮ್ಮನ ಜಗತ್ತಿನಲ್ಲಿ ಕೋಟ್ಯಂತರ ಮನಸ್ಸಿಗೆ ದಾರಿ "ದೀಪ"ವಾಗಿದೆ., "ರವಿ"ಕಿರಣವಾಗಿದೆ ಎಂದು ತಿಳಿದು ಬಹಳ ಖುಷಿಯಾಗಿದೆ.. ಆಗಲಿ ನಿನ್ನ ಪ್ರಯತ್ನಕ್ಕೆ ಶುಭವಾಗಲಿ.. ಸರ್ವೇ ಜನ ಸಮಸ್ತ ಸುಖಿನೋಭವಂತು.. ನಾ ಹೊರಟೆ.. ಬಾಲಣ್ಣ, ರಾಜಣ್ಣ, ಅಶ್ವಥ್, ರವಿ ಹೋಗೋಣವೆ .. ನಮ್ಮ ಪುಷ್ಪಕ ವಿಮಾನದಲ್ಲಿ ಸುಬ್ಬಮ್ಮನ ಅಂಗಡಿಯ ತಿನಿಸುಗಳು ಸಿದ್ಧವಾಗಿವೆ.. ಶ್ರೀ ನಿನಗೆ ಶುಭ ಹಾರೈಕೆಗಳು..
ನಾ ತಲೆಬಾಗಿಸಿ ನಿಂತಿದ್ದೆ.. ಕಣ್ಣುಗಳು ಮಂಜಾಗಿದ್ದವು .. ಮನದಲ್ಲಿ
ಜಗದಲ್ಲಿ ಇರದೇ ಇರುವುದು ಎಲ್ಲಿದೆಯೋ
ಜಗದಲ್ಲಿ ಜಾಗವ ಮಾಡಿಕೊಂಡು
ಕಲಿತು ಸಾರ್ಥಕ ಪಡಿಸಿಕೊ ಬದುಕನ್ನು ಮಂಕುತಿಮ್ಮ!!!
ಪುಷ್ಪಕ ವಿಮಾನ ಹಾರಲು ಶುರುಮಾಡಿತು.. ಹಾರುತ್ತ ಹಾರುತ್ತಾ ಗಗನದಲ್ಲಿ ಚುಕ್ಕೆಯಾಯಿತು.. !
ಡಿ. ವಿ ಜಿ ಅಜ್ಜನವರಿಗೆ ಹುಟ್ಟುಹಬ್ಬದ ಶುಭಾಶಯಗಳು..
ReplyDeleteತುಂಬ ದೊಡ್ಡ ಮಹಾನಿಯರನ್ನು ಒಟ್ಟುಗೂಡಿಸಿ ಕಥೆಯ ರೂಪದಲ್ಲಿ. ಸಾರದಲ್ಲಿ ವಿಸ್ತಾರವನ್ನು ಅಡಗಿಸಿ , ವರ್ಣಿಸಿದ್ದು ಅವರ್ಣಿಯವಾದದ್ದು ಹೊನ್ನು..
ಶ್ರೀ ನಿಮಗೆ ಶುಭ ಹಾರೈಕೆಗಳು :)
ReplyDeleteಮೊದಲು ಮಣಿಗಳ ಪೋಣಿಸಿದ ರೀತಿಗೆ...
ReplyDeleteಉಘೇ...
ಡಿ.ವಿ.ಜಿ ಅವರ ಜನುಮ ದಿನಕ್ಕೆ ಉತ್ತಮ ನುಡಿ ನಮನವಿದು...
ದೀಪಾ ಮೇಡಂಗೂ ಅನಂತ ವಂದನೆಗಳು...
ತಿರುಮಲೈ ಸಾರ್ ಚಿರಂಜೀವಿ...
ಸುಂದರ ಬರವಣಿಗೆ
ReplyDeleteಡಿ ವಿ ಜಿ ರವರಿಗೆ ಜನುಮ ದಿನದ ಶುಭಾಶಯಗಳು 💐🙏
ಶ್ರೀ ನಿನಗೆ ಶುಭವಾಗಲಿ ಹಾಗೂ ನಿನ್ನ ಬರವಣಿಗೆಯ ಶೈಲಿ ಹೀಗೆ ಸಾಗಲಿ ಎಂದು ಆಶಿಸುವೆ
ಶ್ರೀಕಾಂತ, ದೊಡ್ಡವರನ್ನೆಲ್ಲ ನೆನೆಯುವ ನಿಮ್ಮ ರೀತಿ ಅನನ್ಯವಾಗಿದೆ. ಡಿವಿಜಿಯವರಿಗೆ ನಿಮ್ಮ ವಿನಯಭರಿತ ಹಾರೈಕೆಗಳೂ ಸಂದಿವೆ. ನಿಮ್ಮ ಜೊತೆಗೆ, ನಾನೂ ಸಹ ಪೂಜ್ಯ ಡಿವಿಜಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಅರ್ಪಿಸುತ್ತೇನೆ.
ReplyDeleteIt will be a unique perspective to explore and you are one of few who can do it. All my best wishes for your new journey 💖
ReplyDeleteಸರ್, ಧನ್ಯವಾದಗಳು. ನಿಮ್ಮನ್ನು ನೋಡಿಲ್ಲ, ಮಾತನಾಡಿಲ್ಲ. ಆದರೂ ಅದೆಷ್ಟು ಅಭಿಮಾನ, ಅದೆಷ್ಟು ಆತ್ಮೀಯತೆಯಿಂದ ನನ್ನನ್ನು ಪ್ರೋತ್ಸಾಹಿಸುತ್ತೀರಿ, ಪ್ರೀತಿ ತೋರಿಸುತ್ತೀರಿ, ಮನಸ್ಸು ತುಂಬಿ ಬರುತ್ತದೆ ನನಗೆ. ಇಷ್ಟು ದೊಡ್ಡ ಮೊತ್ತದ ಅಭಿಮಾನಕ್ಕೆ ನಾನು ಅರ್ಹಳೋ ಅಲ್ಲವೋ ಗೊತ್ತಿಲ್ಲ. ಆದರೆ ಆ ಅರ್ಹತೆ ನನಗಿರಲಿ, ಬರಲಿ ಎಂದು ಸದಾ ಹಾತೊರೆಯುತ್ತೇನೆ, ಆ ದಿಸೆಯಲ್ಲಿ ನನ್ನ ಪ್ರಯತ್ನ ನಿರಂತರವಾಗಿಟ್ಟುಕೊಳ್ಳುತ್ತೇನೆ. ಹಾಗೆ ಮಾಡಲು ಸದಾ ಪ್ರೇರೇಪಿಸುವ ನಿಮ್ಮಂಥವರ ಸದಾಶಯಗಳೇ ಇಲ್ಲಿಯವರೆಗೆ ನನ್ನನ್ನು ಕಾದಿದೆ, ಮುಂದೆಯೂ ಕಾಯುತ್ತದೆ. ಧನ್ಯವಾದಗಳು. ಇದನ್ನು ಮೀರಿದ ಭಾವ ನನ್ನಲ್ಲಿದೆ ಆದರೆ ಶಬ್ದ ಸಂಪತ್ತಿಲ್ಲ.
ReplyDeleteದೀಪಾ