Tuesday, November 15, 2022

ಅದೊಂದು ಸುಂದರ ಗುರುಕುಲ.. !

 ಅದೊಂದು ಸುಂದರ ಗುರುಕುಲ.. 

ಕಾಡಿನ ಮಧ್ಯೆ ಒಂದು ಸುಂದರ ಕೆರೆ.. ಅದರ ಸುತ್ತಲೂ ಪುಟ್ಟ ಪುಟ್ಟ ಕುಟೀರಗಳು.. ಪ್ರತಿ ಕುಟೀರಗಳಲ್ಲಿ ಶಿಷ್ಯರಿಗೆ ಅಧಿಕಾರ ಕೊಟ್ಟು.. ಆ ಗುಡಿಸಲನ್ನು ನೋಡಿಕೊಳ್ಳುವ ಜವಾಬ್ಧಾರಿ ಕೊಡಲಾಗಿತ್ತು.. ತಮ್ಮ ಪರ್ಣ ಕುಟೀರಗಳನ್ನು ಬೆಳೆಸುವ ಬೆಳಗಿಸುವ ಕಾಯಕ ಅವರದಾಗಿತ್ತು.. 

ಅಂತಹ ಒಂದು ಪರ್ಣಕುಟೀರದಲ್ಲಿ ಸದಾ "ಸಂತೋಷ"ವೇ ತುಂಬಿತ್ತು.. ಕಾರಣ ಅದರ ಜವಾಬ್ಧಾರಿ ಹೊತ್ತವರ ಹೆಸರೇ ಅದಾಗಿತ್ತು..  ಆ ಪರ್ಣಕುಟೀರದಲ್ಲಿದ್ದವರೆಲ್ಲಾ "ರವಿ"ಯ ಬೆಳಕಿನಲ್ಲಿ ಪ್ರತಿ ಕ್ಷಣ ಹೊಳೆಯುವ ಮಣಿಗಳಾಗಿದ್ದರು.. 

ಸುಮಾರು ಎರಡು ವರ್ಷಗಳ ಹಿಂದೆ ಆ ಕುಟೀರಕ್ಕೆ ಸೇರಿಕೊಂಡ ಶಿಷ್ಯನೊಬ್ಬ ಅಲ್ಲಿದ್ದ ಹಿರಿಯ ಶಿಷ್ಯರ ಹತ್ತಿರ ಒಂದು ಪ್ರಶ್ನೆ ಕೇಳಿದ!

"ಅಣ್ಣ .. ಈ ಕುಟೀರದಲ್ಲಿ ಎಂಥಹ ಸಂಭ್ರಮ ಕಾಣುತ್ತಿದ್ದೇನೆ ಅಣ್ಣ.. ಪ್ರತಿ ಕ್ಷಣವೂ ಒಂದು ಸಂತಸದ ಕ್ಷಣಗಳು ನಮಗೆ ಎದುರಾಗುತ್ತಲೇ ಇರುತ್ತವೆ.. ಮನಸ್ಸಿಗೆ ಏನೋ ಒಂದು ರೀತಿಯ ಉಲ್ಲಾಸ ಅನಿಸುತ್ತೆ"

" ಹೌದು ತಮ್ಮ.. ಇಲ್ಲೊಂದು ಸಂಭ್ರಮದ ವಾತಾವರಣವಿದೆ.. ಇತ್ತೀಚಿಗಷ್ಟೇ ಒಂದು ಸುಂದರ ಕಾರ್ಯಕ್ರಮ ನೆಡೆಯಿತು.. ಅದರ ಬಗ್ಗೆ ನಮ್ಮ ಗುರುಗಳು ಬಹಳ ಸುಂದರವಾಗಿ ಕಟ್ಟಿ ಕೊಟ್ಟಿದ್ದಾರೆ.. ತಗೋ ಅದನ್ನೊಮ್ಮೆ ಓದು... ನೋಡು ಖುಷಿಪಡು .. "


ಚಿತ್ರ ಕೃಪೆ : ಅವಿರತ ಪರಿಶ್ರಮದ ತಂಡ 

ಕಾಡಿನಲ್ಲೆಲ್ಲ ಸಂಭ್ರಮದ ವಾತಾವರಣ ಎಲ್ಲಿ ನೋಡಿದರಲ್ಲಿ ಕೆಂಪು ಹಳದಿ.. ಕರುನಾಡಿನ ಹೆಣ್ಣು ಮಕ್ಕಳ ಸೌಭಾಗ್ಯದ ಗುರುತು ಎಲ್ಲೆಡೆ ಹರಡಿತ್ತು.. ಅಲ್ಲಿದ್ದ ಶಿಷ್ಯ ಗಣಗಳು ಎಲ್ಲರೂ ಒಪ್ಪುವ ವೇಷ ಭೂಷಣಗಳಲ್ಲಿ ಮಿಂಚುತ್ತಿದ್ದರು.. ಪ್ರತಿಯೊಬ್ಬರ ಮೊಗದಲ್ಲಿ ಹಬ್ಬದ ಸಂಭ್ರಮ.. ಅಲ್ಲವೇ..... ತಾಯಿ ಭುವನೇಶ್ವರಿಯನ್ನು ಅರ್ಚಿಸಲು ದಿನ ಮುಹೂರ್ತ ಬೇಡ. .. ಅನುಕ್ಷಣವೂ, ಅನುದಿನವೂ ನಮ್ಮ ನರನಾಡಿಗಳಲ್ಲಿ ಭಾಷೆಯ ಅಭಿಮಾನ ಹರಿದಾಡುತ್ತಲೇ ಇರುತ್ತದೆ...ಅದೇ ಕರುನಾಡಿನ ನಿತ್ಯೋತ್ಸವ....ಆದರೂ ಎಲ್ಲರನ್ನೂ ಒಟ್ಟು ಗೂಡಿಸಿ ನಿಲ್ಲಬೇಕು ಅಂದಾಗ ತಾರೀಕು ಕೂಡ ನಮಗೆ ಜೊತೆಯಾಯಿತು.. 

ಹನ್ನೊಂದು ಹನ್ನೊಂದು ಇಪ್ಪತ್ತೆರಡು.. ಹೌದು ಎರಡು ಸಾವಿರದ ಇಪ್ಪತ್ತೆರಡನೆ ಇಸವಿ.ನವೆಂಬರ್ ಮಾಸದ ಹನ್ನೊಂದನೇ ದಿನ.. 

ಹೌದು ನವೆಂಬರ್ ಕರುನಾಡಿನ ಜನತೆಯಲ್ಲಿ ಎಂದಿಗೂ ಮಾಸದ ಮಾಸ...!

ಕಾರ್ಯಕ್ರಮ ಅಂದರೆ ಆ ಪರಿಸರದ ಮಹತ್ವನ್ನು ಎತ್ತಿ ಹಿಡಿಯುವ ಯಾವುದಾದರೂ ಒಂದು ಕಲೆ ಅಲ್ಲಿ ಬರಬೇಕು.. ಆಗ ಬಂದದ್ದೇ ಕಂಸಾಳೆ.. 

ಅಬ್ಬಾ ಶಿಷ್ಯ ಕೋಟಿಗಳೇ ನೀವು ನೋಡಬೇಕಿತ್ತು.. ಆ ಹಾವಭಾವ.. ಆ ತಾಳ ಲಯ.. ಅವರ ನೃತ್ಯ, ದೇಹವನ್ನು ದಂಡಿಸುವಂಥಹ ನೃತ್ಯ.. ಆ ಕಂಸಾಳೆಯನ್ನು ಹಿಡಿದು ತಾಳ ಹಾಕುತ್ತಾ ಅವರು ನೀಡಿದ ಸುಮಾರು ಒಂದು ಅರ್ಧ ಘಂಟೆಯ ಕಾರ್ಯಕ್ರಮ ಚಪ್ಪಾಳೆ ಗಿಟ್ಟಿಸಿತು..








ಹಾಗೆ ಆ ಕಡೆ ಈ ಕಡೆ ನೋಡಿದರೆ.. ಜ್ಞಾನ ಹೆಚ್ಚಿಸುವ ಕವಿವರೇಣ್ಯರ ರಚನೆಗಳು, ಲೇಖಕರ ಅದ್ಭುತ ಪುಸ್ತಕಗಳು, ಮನಸ್ಸನ್ನು ಉಲ್ಲಾಸದಿಂದ ಇರಿಸಿಕೊಳ್ಳಲು ಬೇಕಾದ ಪುಸ್ತಗಳು.. ಮಸ್ತಕಕ್ಕೆ ಇನ್ನಷ್ಟು ಇಂಬು ಕೊಡುವ ಪುಸ್ತಕಗಳು ಬೇಕಾದಷ್ಟು ಇದ್ದವು.. 










ಎಲ್ಲರೂ ಇದ್ದ ಮೇಲೆ ಅಣ್ಣಾವ್ರು ಇರಲೇ ಬೇಕಲ್ಲವೇ.. ಕರುನಾಡಿನ ಭಾಷೆಗೆ ಒಂದು ತೀವ್ರ ಸ್ವರೂಪದ ಮೆಚ್ಚುಗೆ, ಗಮನಿಸುವಿಕೆ ಮತ್ತು ಆರಾಧನೆ ಮಾಡುವಂತಹ ಮೊದಲೇ ಇದ್ದ ಮನಸ್ಸನ್ನು ಇನ್ನಷ್ಟು ಎತ್ತರಕ್ಕೆ ಒಯ್ದಿದ್ದು ಅವರ ವ್ಯಕ್ತಿತ್ವ, ಅವರ ಸದಭಿರುಚಿಯ ಚಿತ್ರಗಳು ಹಾಗೂ ಒಬ್ಬ ಸಂತನಂತೆ ಭಾಷೆಯ ಏಳಿಗೆಗೆ ದುಡಿದ ಅವರ ಮೇರು ವ್ಯಕ್ತಿತ್ವ.. ಹೌದು ಅಣ್ಣಾವ್ರ ಬಗ್ಗೆ ಅವರ ಪುತ್ರ ಪುನೀತ್ ಅವರ ಮೂಸೆಯಿಂದ ಅರಳಿದ ಪುಸ್ತಕವಿತ್ತು.. 


ಭಾಷೆಯ ಬಗ್ಗೆ ಅಭಿಮಾನ ಹೌದು.. ಸನ್ಮಾನ ಹೌದು.. ಸಂತೋಷ ಹೌದು.. ಎಲ್ಲವೂ ಸರಿ.. ಅದನ್ನು ಬಿತ್ತರಗೊಳಿಸುವ ಒಂದು ನೆಪ ಬೇಕಲ್ಲವೇ.. ಬೇಕಾದಷ್ಟು ವಿಭಿನ್ನ ವಿನ್ಯಾಸಗಳ ಅಂಗಿಗಳು ಅಲ್ಲಿ ಜಮಾಯಿಸಿದ್ದವು.. ಕರುನಾಡಿನ ಹೆಮ್ಮೆಯ ಲಾಂಛನ, ನಕ್ಷೆ, ಬಾವುಟ, ಕೆಲವು ನುಡಿಗಳನ್ನು ಹೊತ್ತ ಟೀ ಶರ್ಟ್ ಅನೇಕರ ಸುಂದರ ಮನಸ್ಸನ್ನು ಅಲಂಕರಿಸಿದ್ದವು. 

ಗಿಡ ನೀಡಿ.. ಮರ ಬೆಳೆಸಿ.. ಪರಿಸರ ಬೆಳಗಲಿ, ಬೆಳೆಯಲಿ.. ನಿಜ ಅದಕ್ಕೆಂದೇ ಅನೇಕಾನೇಕ ಅಲಂಕಾರಿಕ ಗಿಡಗಳು ಮೇಳೈಸಿದ್ದವು.. ತಮಗೆ ಇಷ್ಟ ಬಂದ ಸಸ್ಯಗಳನ್ನು ಪಡೆದು ಮನೆಯನ್ನು, ಅಂಗಳವನ್ನು ಸಸ್ಯಕಾಶಿ ಮಾಡುವ ಹಂಬಲ ಹಲವರದ್ದು.. 

ಸಮಾರಂಭವೆಂದರೆ ಮಸ್ತಕಕ್ಕೆ ಖುಷಿ ಕೊಡುವಂತದ್ದು ಇದ್ದೆ ಇರುತ್ತದೆ.. ಆದರೆ ನಾಲಿಗೆ ಆಹಾ ಅನ್ನುವಂತಹ ಸವಿ ಬೇಕು ಅಲ್ಲವೇ.. ಬಾಳೆಯ ಎಳೆಯಲ್ಲಿ ಅಂತಹ ಭಕ್ಷ್ಯ ಭೋಜ್ಯಗಳು ಹರಿದಾಡಿತು.. ನಂತರ ಬಂದವರ ಉದರ ಸೇರಿ ಕೃತಜ್ಞತಾ ಭಾವ ಹೊಂದಿದವು.. 

ಎಲ್ಲರ ಮನಸ್ಸಲ್ಲಿ, ಎಲ್ಲರ ಬಾಯಿಯಲ್ಲಿ ಒಂದೇ ಅಭಿಮತ.. ಬಾಳೆ ಎಲೆ ಊಟ ಟಾಪ್ ಕ್ಲಾಸ್... ಎಲ್ಲಾ ಕ್ರಾಯಕ್ರಮಗಳ ಯಶಸ್ಸು ನೆಲೆ ನಿಲ್ಲೋದು ಆಹಾರದ ಬಾಣಲೆಯಲ್ಲಿ.. ಅದರಲ್ಲಿ ಗೆದ್ದೇ ಬಿಟ್ಟಿತು ಈ ಸುಂದರ ತಂಡ...!

ಗುರುಗಳು ಬರೆದು‌ ಕೊಟ್ಟಿದ್ದ ವೀಕ್ಷಕ ವಿವರಣೆಯ ಪುಟಗಳು ಮುಗಿದಿತ್ತು...ಶಿಷ್ಯರುಗಳು ಕುತೂಹಲ ತಡೆಯಲಾಗದೆ..ಮುಂದೇನಾಯ್ತು‌ ಎಂದು ತಿಳಿಯುವ ಕಾತುರ ಕಾಂತಾರ ಸಿನಿಮಾದ ಅಂತಿಮ ದೃಶ್ಯಕ್ಕಿಂತಲೂ ಮಿಗಿಲಾಯ್ತು...

ಕುಣಿದಾಯಿತು.. ಬಟ್ಟೆ ಧರಿಸಿ ಮೆರೆದಾಯ್ತು.. ಪುಸ್ತಕಗಳನ್ನು ಕೊಂಡಾಯಿತು.. ಅಲಂಕಾರಿಕ ಜುಮುಕಿಗಳು, ಬಿಂದಿಗಳು, ಕ್ಲಿಪ್, ಬಳೆಗಳು ಹೆಣ್ಣು ಮಕ್ಕಳ ಚೀಲ ಸೇರಾಯ್ತು.. ಮುಂದೆ ಗುರುಗಳೇ.. 

"ಶಿಷ್ಯರೇ.. ಮುಂದೆ ನೆಡೆದದ್ದು ಇನ್ನಷ್ಟು ಖುಷಿಯ ಕ್ಷಣಗಳು... 

ಕರುನಾಡಿನ ನಾಡಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ್ದು.. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಹಾಡಿದ ನಾಲ್ಕು ಮಂದಿಯಲ್ಲಿ ಇಬ್ಬರ ಮಾತೃ ಭಾಷೆ ಕನ್ನಡವಲ್ಲ.. ಕರುನಾಡ ಭಾಷೆ ಸುಲಿದ ಬಾಳೆ ಹಣ್ಣಿನಂತೆ.. ಕಬ್ಬಿನ ರಸದಂತೆ.. ಹೌದು ಅದಕ್ಕೆ ಅಲ್ಲವೇ ಅಣ್ಣಾವ್ರು ಹಾಡಿದ್ದು "ಜೇನಿನ  ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿ ನುಡಿಯೋ.. "

ಜ್ಞಾನ ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ರೀತಿಯಲ್ಲಿ ಅದ್ಭುತ ಸಾಧನೆ ಮಾಡಿರುವ ಇಬ್ಬರು ಮಹನೀಯರನ್ನು ಪರಿಚಯ ಮಾಡಿಕೊಟ್ಟರು ಈ ಕಾರ್ಯಕ್ರಮದ ರೂವಾರಿಗಳು ಮನಿಷಾ ಹಾಗೂ ಶರನ್ ..ಅದನ್ನು ವಿವರಣಾ ಪೂರ್ವಕವಾಗಿ ಬಿಡಿಸಿಟ್ಟರು ರವಿಕುಮಾರ್...






ಡಾ. ಸುಬ್ಬಣ್ಣ ಅಯ್ಯಪ್ಪನ್ ಅವರು ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತಿನ ಮುಖಸ್ಥರಾಗಿ ನೇಮಕಗೊಂಡು ಈ ಸಂಸ್ಥೆಯ ಕಾರ್ಯಗಳನ್ನು ನಿರ್ದೇಶಿಸುತ್ತಿದ್ದಾರೆ.  ಡಾ. ಅಯ್ಯಪ್ಪನ್ ಅವರು ಮೂಲತಃ ಒಬ್ಬ ಮತ್ಸ್ಯವಿಜ್ಞಾನಿ. ಭಾರತದ ನೀಲ ಕ್ರಾಂತಿಗೆ ಅವರ ಕೊಡುಗೆಯನ್ನು ಗಮನಿಸಿ ಭಾರತ ಸರಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅವರು ಮೀನುಗಾರಿಕೆ ಮತ್ತು ಸಾಗರ ಅಣುಜೀವಶಾಸ್ತ್ರ ಕಾರ್ಯಕ್ಷೇತ್ರಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.  ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದು ಹೆಚ್ಚಿನ ವಿದ್ಯಾಭಾಸವನ್ನು  ಮಂಗಳೂರಿನ ಮೀನುಗಾರಿಕೆ ಕಾಲೇಜಿನಲ್ಲಿ  ಪಡೆದು ಅನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್. ಡಿ, ಪದವಿ ಗಳಿಸಿದ್ದಾರೆ

 ಶ್ರೀ ರಮೇಶ್ ಅವರು ಕ. ವಿ. ತಂ. ಅ  ಸಂಸ್ಥೆಯ ಮೂಲಕ ಇಡೀ ವರ್ಷ ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಸಂಚರಿಸಿ ಅನೇಕ ಕಾರ್ಯಕ್ರಮಗಳನ್ನು ಉತ್ಸಾಹದಿಂದ ನಡೆಸುತ್ತಿದ್ದಾರೆ.  ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಒಲವನ್ನು ಸೃಷ್ಟಿಸುವುದು ಮತ್ತು ಪೋಷಿಸುವುದರಲ್ಲಿ ಅವರಿಗೆ ಅತೀವ ಆಸಕ್ತಿ.. 

ಇಬ್ಬರ ಗೌರವಾನ್ವಿತರ ಪರಿಚಯವಾಗಿದ್ದು ಈ ಕಾಡಿಗೆ ಒಂದು ಹೆಮ್ಮೆ ಶಿಷ್ಯರೇ ಎಂದು ಗುರುಗಳು ಸ್ವಲ್ಪ ಹೊತ್ತು ಸುಮ್ಮನೆ ಕುಳಿತರು.. 

"ಗುರುಗಳೇ ಏನಾಯಿತು.. ಯಾಕೆ ಸುಮ್ಮನಾದಿರಿ.. ?"

"ಶಿಷ್ಯರೇ.. ಭರ್ಜರಿ ಊಟ ಮಾಡುವಾಗ.. ತರಹಾವರಿ ಖಾದ್ಯಗಳು ಬರುತ್ತಲೇ ಇರುತ್ತವೆ.. ಒಂದು ಸಣ್ಣ ವಿರಾಮ ಇನ್ನಷ್ಟು ಹೆಚ್ಚಿನ ಸವಿ ಭೋಜನವನ್ನು ಮಾಡಲು ನಮ್ಮ ದೇಹಕ್ಕೆ ಅನುವು ಮಾಡಿಕೊಡಬೇಕು ಅಲ್ಲವೇ.. ಹಾಗೆ ಮುಂದಿನ ಕಾರ್ಯಕ್ರಮ ನೋಡಿದಾಗ ನೀವೇ ಆಹಾ ಎನ್ನುತ್ತೀರಿ ಅದಕ್ಕೆ ಅಲ್ಪ ವಿರಾಮವಷ್ಟೇ.. !!!"

ಸರಿ ಮುಂದುವರೆಸಿ ಗುರುಗಳೇ.. ನಮ್ಮ ಮಸ್ತಕದಲ್ಲಿ.. ಹೃದಯದಲ್ಲಿ ಇನ್ನಷ್ಟು ಜಾಗ ಮಾಡಿಕೊಂಡೆವು ಇವಾಗ.. 

ಮತ್ತೆ ಶುರುವಾಯಿತು.. ಕಾರ್ಯಕ್ರಮದ ವಿವರಣೆ.. 


"ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ಕೊಡುವ ನಮ್ಮ ಸತ್ ಸಂಪ್ರದಾಯವನ್ನು ಮುಂದುವರೆಸುತ್ತ.. ಗಣ್ಯರು ಜ್ಯೋತಿ ಬೆಳಗಿದರು.. ಶ್ರೀ ಸುಬ್ಬಣ್ಣನವರು ಮುಂದಿನ ಸಾಲಿನಲ್ಲಿ ನೆರೆದಿದ್ದ ಕೆಲವರನ್ನು ಕರೆದು ನೀವು ಜ್ಯೋತಿ ಬೆಳಗಿಸಿ ಎಂದು ಆಹ್ವಾನ ಕೊಟ್ಟದ್ದು ಮೆಚ್ಚುವ ಅಂಶವಾಗಿತ್ತು.. ನಾನು ..ನೀನು ...ಎನ್ನದೆ ನಾವು ಎನ್ನುವ ಭಾವ ಅಲ್ಲಿತ್ತು.... !!!

ಈ ಕಾರ್ಯಕ್ರಮದ ನಾಯಕ ಶ್ರೀ ರವಿ ಕುಮಾರ್ ಅವರ ಸ್ವಾಗತ ಮಾತುಗಳನ್ನು ಹೇಳುತ್ತಾ.. ಬಂದಿದ್ದ ಗಣ್ಯರು ತಮ್ಮ ಆಪ್ತ ಮಿತ್ರರ ವಲಯದಲ್ಲಿ ಇರುವವರು ಎನ್ನುವ ಮಾತು ವಾಹ್ ಎನಿಸಿತು.. ಗಂಧದ ಮರದ ಜೊತೆ ಇದ್ದಾಗ ಬದುಕು ಘಮ ಘಮ ಅಲ್ಲವೇ ... !


ಈ ಕಾರ್ಯಕ್ರಮದ ಯಶಸ್ಸಿಗೆ ಜೇನು ಗೂಡುಕಟ್ಟುವಂತೆ ಅನೇಕಾನೇಕ ಶಕ್ತಿಗಳು ಕೆಲಸ ಮಾಡಿದ್ದವರನ್ನು ವೇದಿಕೆಗೆ ಕರೆಸಿ ಗೌರವ ನೀಡಿದರು.. ಇದು ನಾಯಕತ್ವದ ಅದ್ಭುತ ಶಕ್ತಿ.. ನಾನಲ್ಲ ...ನಾವುಗಳು ..ಎನ್ನುವ ಈ ರೀತಿಯ ಗುಣ ಎಲ್ಲರನ್ನು ಎತ್ತರೆತ್ತರಕ್ಕೆ ಕರೆದೊಯ್ಯುತ್ತದೆ.. 

ಶ್ರೀ ರಮೇಶ್ ಅವರ ಮಾತುಗಳು ಒಂದು ಜಲಪಾತದಂತೆ ಬಂದಿತು.. ಅವರ ಕಾರ್ಯಕ್ಷೇತ್ರ, ಅವರ ಸಮಾಜ ಮುಖಿ ಚಟುವಟಿಕೆಗಳು, ತಮ್ಮ ತಂಡದಿಂದ ವಿಜ್ಞಾನವನ್ನು ಪಸರಿಸುತ್ತಿರುವ ರೀತಿ ಎಲ್ಲವನ್ನು ಚುಟುಕಾಗಿ ವಿವರಿಸಿದರು.. 



ಶ್ರೀ ಸುಬ್ಬಣ್ಣ ಅವರು ಬಂದು ನಿಂತರು. ಮೈಕ್ ಕೂಡ ಒಮ್ಮೆ ನಿಶ್ಯಬ್ಧವಾಯಿತು ಅವರ ಮಾತುಗಳನ್ನು ಕೇಳಲು.. ಆದರೆ ಎಲ್ಲರಿಗೂ ಧ್ವನಿಯನ್ನು ತಲುಪಿಸುವ ಮೈಕ್ ಸುಮ್ಮನೆ ಇರಲು ಸಾಧ್ಯವೇ.. ಟಕ್ ಟಕ್ ಟಕ್ ಮೈಕ್ ಗಂಟಲು ಸರಿ ಮಾಡಿಕೊಂಡು.. ತನ್ನ ಸೇವೆಯನ್ನು ಸಲ್ಲಿಸಲು ಶುರು ಮಾಡಿತು.. 

ಒಂದು ಸಣ್ಣ ಒರತೆಯಾಗಿ ಶುರುವಾದ ಶ್ರೀ ಸುಬ್ಬಣ್ಣ ಅವರ ಮಾತು, ಝರಿಯಾಗಿ, ನದಿಯಾಗಿ, ಜಲಪಾತವಾಗಿ, ಶರಧಿಯನ್ನು ಸೇರಲು ಹರಿಯುವ ನೀರಿನಂತೆ ಆಯಿತು.. ಅಬ್ಬಬ್ಬಾ ಅವರು ಮಾತಾಡದ ವಿಷಯಗಳು ಇರಲಿಲ್ಲ .. ನಂಜನಗೂಡಿನ ಒಂದು ಸಣ್ಣ ಶಾಲೆಯಿಂದ ಡಲ್ಲಾಸ್, ಅಮೇರಿಕಾ ತನಕ ಅವರ ವಾಗ್ಝರಿ ಹರಿದಿತ್ತು... ಯುವಕರಿಗೆ ಬೇಕಾದ ಮಾತುಗಳು, ಹಿರಿಯರಿಗೆ ಬೇಕಾದ ವಿಷಯಗಳು, ತಾನು ವಿಜ್ಞಾನ ಪ್ರಭಾವಲಯದಲ್ಲಿ ಮೀಯುತ್ತಿರುವ ಬಗ್ಗೆ.. ಕ್ರಿಕೆಟ್, ಹಾಸ್ಯ, ಕಾಂತಾರಾ ಸಿನಿಮಾ ಎಲ್ಲವನ್ನು ಬೆರೆಸಿ.. ಅದ್ಭುತ ರಸಾಯನ ಮಾಡಿಕೊಟ್ಟರು.. 

ಅವರು ಮಾತಾಡುವಷ್ಟು ಸಮಯ ಅಂಗಳದಲ್ಲಿ ಸೂಜಿ ಬಿದ್ದರು ಕೇಳಿಸುವಷ್ಟು ತನ್ಮಯತೆ ಇತ್ತು... ಅದ್ಭುತ ಮಾತುಗಾರರು ಅವರು... 

ಅರೆ ಗಡಿ ಮೀರಿ ಸಾಧನೆ ಮಾಡಿ, ಸಾಧನೆ ಮಾಡುತ್ತಿರುವ ನಮ್ಮ ಭಾಷೆ ನಿತ್ಯ ನೂತನ ಅಲ್ಲವೇ.. ಅದಕ್ಕೆ ವಿಶ್ವ ವಿನೂತನ ವಿದ್ಯಾ ಚೇತನ ಹಾಡನ್ನು ಕರುನಾಡಿನ ಬಾವುಟದ ರಂಗಿನ ವೇಷಭೂಷಣ ಧರಿಸಿದ್ದ ಹೆಣ್ಣು ಮಗುವಿನ ಹಾಡಿನ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಯಿತು.. 


ನಾವು ಹೇಗಾದರೂ ಇರಲಿ ನಾವು ಮಾಡುವ ಕೆಲಸ ಹತ್ತಾರು ಶ್ರಮಿಕರನ್ನು ಗುರುತಿಸಬೇಕು ಎನ್ನುವ ಭಾವ ಹೊತ್ತು ಬೆಳೆದು.. ಕಳೆದ ವರ್ಷ ನಮ್ಮನ್ನು ಅಗಲಿದ ಶ್ರೀ ಪುನೀತ್ ರಾಜ್ ಕುಮಾರ್ ಅವರ ಬದುಕಿನ ಗೀತೆ ಎಂದೇ ಹೆಸರಾಗಿರುವ ಬೊಂಬೆ ಹೇಳುತೈತೆ ಹಾಡು ಶ್ರೀಧರ್ ಅವರ ಮಧುರ ಕಂಠದಲ್ಲಿ ಮೂಡಿ ಬಂತು.. 


"ಇದೆ ನಾಡು ಇದೆ ಭಾಷೆ" ಎಂದು ಪಕ್ಕದ ರಾಜ್ಯದ ಎಸ್ಪಿ ಬಾಲಸುಬ್ರಮಣ್ಯಂ ತೆರೆಯ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡ ತಿರುಗು ಬಾಣ ಚಿತ್ರದ ಹಾಡನ್ನು ಹಾಡಿದರು.. 

ದೀಪ ಹಚ್ಚಲೇ ಬೇಕು.. ಕರುನಾಡಿನ ದೀಪವನ್ನು ಹಚ್ಚಿದ ಮಹನೀಯರ ಶ್ರಮ ನಮ್ಮ ಭಾಷೆ ಬೆಳೆಯಲು ಕಾರಣವಾಗಿದೆ.. "ಹಚ್ಚೇವು ಕನ್ನಡದ ದೀಪ" ಸುಂದರ ನೃತ್ಯದಿಂದ ಕೂಡಿ ಬಂತು.. 

ಸಿಕ್ಕಾಗೆಲ್ಲ ಮಾತಾಡುವುದು ಒಂದು ಕಲೆ.. ಸಿಕ್ಕಿದ್ದನ್ನು ಮಾತಾಡುವುದು ಇನ್ನೊಂದು ಕಲೆ.. ಎರಡನ್ನು ಬೆರೆಸಿ.. ನಾವು ವಿಷಯ ಕೊಡುತ್ತೇವೆ ನೀವು ಮಾತಾಡಿ ಎಂದು ಸ್ಪರ್ಧೆ ಮಾಡಿದ್ದರು.. ಅದರಲ್ಲಿ ಮಾತಾಡಿ ಗೆದ್ದವರಿಗೆ ಬಹುಮಾನಗಳನ್ನು ನೀಡಿದರು.. 












ಭಾಷೆ ಯಾವುದಾದರೇನು ಭಾವ ನವನವೀನ.. ಅಲ್ಲವೇ.. ಕನ್ನಡ ಮಾತೃಭಾಷೆಯಾಗದಿದ್ದರೆ ಏನು.. ನಮಗೆ ಕನ್ನಡದ ಬಗ್ಗೆ ಅಭಿಮಾನ ಎಂದು ಬೇರೆ ಭಾಷೆಯನ್ನು ಮಾತಾಡುವವರಾದರೂ... ಕನ್ನಡೇತರರು ಸ್ಪರ್ಧಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ನೀಡಿದರು.. 

ಕಣ್ಣಿಗೆ ಕಾಣದ್ದು ಕ್ಯಾಮೆರಾ ಕಂಡಿತು ಎನ್ನುತ್ತಾರೆ.. ಹೌದು ಕಣ್ಣು ನೋಡಿದ್ದು ಮರೆಯಬಹುದು.. ಆದರೆ ಕ್ಯಾಮೆರಾ ಕಣ್ಣಿನ ಜಾದೂ ನಿಮ್ಮ ಹತ್ತಿರ ಇದ್ದರೆ ಪ್ರದರ್ಶಿಸಿ ಎಂದು ಆಹ್ವಾನ ನೀಡಿದ್ದರಿಂದ ಹತ್ತಾರು ಅತ್ಯುತ್ತಮ ಚಿತ್ರಗಳು ಬಂದಿದ್ದವು.. ಅದರಲ್ಲಿನ ವಿಜೇತರಿಗೆ ಬಹುಮಾನ ನೀಡಿದರು.. 

ನಾವು ಹೇಗಿದ್ದೇವೆ ಮುಖ್ಯ.. ಹೇಗೆ ಸಿದ್ಧವಾಗಿದ್ದೇವೆ ಅದೂ ಮುಖ್ಯ.. ಕಾರ್ಯಕ್ರಮಕ್ಕೆ ಸಜ್ಜಾಗಿ ಬಂದಿದ್ದ ಇಬ್ಬರಿಗೆ ಅತ್ಯುತ್ತಮ ವೇಷಭೂಷಣದ ವಿಭಾಗದಲ್ಲಿ ಗುರುತಿಸಿ ಗೌರವಿಸಿದರು.. 

ಎಲ್ಲರೂ ಮಂತ್ರ ಮುಗ್ಧರಾಗಿ ಕೇಳುತ್ತಿದ್ದರು.. ಗುರುಗಳು ಸಣ್ಣಗೆ ಕೆಮ್ಮಿದರು... ಶಿಷ್ಯರಿಗೆಲ್ಲ ಮೈ ಜುಮ್ ಎಂದಿತು.. ಗುರುಗಳೇ ನಿಮ್ಮ ವಿವರಣೆ.. ನಾವೇ ಅಲ್ಲಿ ಹೋಗಿದ್ದೆವು ಎನ್ನುವಂತೆ ಮಾಡಿದೆ.... ನಾವುಗಳು ಹೋಗಬೇಕಿತ್ತು ಎನ್ನುವ ಹಂಬಲವನ್ನು ನಿಮ್ಮ ವಿವರಣೆ ತೀರಿಸಿತು.. 

"ಶಿಷ್ಯರೇ.. ಕರುನಾಡಿನ ವರನಟ ಹೇಳಿದ್ದು ಕನ್ನಡ ನಾಡಲ್ಲಿ ಇರುವವರೆಲ್ಲಾ ಕನ್ನಡ ಮಾತಾಡಬೇಕು..ಅದೇ ನನ್ನ ಆಸೆ.."

ಶತಾಯುಷಿಗಳಾಗಿ ಇಗೋ ಕನ್ನಡ ಎಂಬ ಅಭೂತಪೂರ್ವ ಮಾಲಿಕೆಯನ್ನು ತಂದಿದ್ದ ಕೀರ್ತಿ ಶೇಷ ಶ್ರೀ ಜಿ ವೆಂಕಟ ಸುಬ್ಬಯ್ಯನವರು ಹೇಳಿದ್ದು.. "ನಮ್ಮ ಭಾಷೆಗೆ ಅಳಿವಿಲ್ಲ.. ವರ್ಷಗಳು ಕಳೆದ ಹಾಗೆ ಅನೇಕಾನೇಕ ಪದಗಳು ಕನ್ನಡೀಕರಣವಾಗಿ ಪದ ಸಂಪತ್ತು ಬೆಳೆಯುತ್ತದೆ"

ಎಷ್ಟು ನಿಜ ಈ ಮಾತು.. ಕನ್ನಡ ಭಾಷೆಗೆ ಉಳಿವು ಇದೆ.. ಬೆಲೆಯೂ ಇದೆ.. ಕನ್ನಡ ಸಾರ್ವಕಾಲಿಕ.. 

ಶಿಷ್ಯರೆಲ್ಲಾ ಜೋರಾಗಿ ಚಪ್ಪಾಳೆ ತಟ್ಟುತ್ತಾ ಹೇಳಿದರು "ಗುರುಗಳೇ ಈ "ಸಂತೋಷ" ಸದಾ ಇರುತ್ತದೆ.. "ರವಿ" ಬೆಳಕಿನಂತೆ.. !


ಗುರುಗಳೇ ಒಂದಷ್ಟು ಅದ್ಭುತ ಕ್ಷಣಗಳನ್ನು ಮನ ಮುಟ್ಟುವಂತೆ ತೆರೆದಿಟ್ಟ ನಿಮಗೆ ನಮೋ ನಮಃ...ಈ ಸುಂದರ ಕಾರ್ಯಕ್ರಮವನ್ನು..ಸಂಭ್ರಮವನ್ನು ಆಯೋಜಿಸಿದ ಸಂಸ್ಥೆಗೂ..ಅವಿರತ ಪರಿಶ್ರಮದಿಂದ ಸಮಾರಂಭವನ್ನು ಹಬ್ನವನ್ನಾಗಿ ಮಾರ್ಪಡಿಸಿದ ತಂಡಕ್ಕೆ ಅಭಿನಂದನೆಗಳು...!

ಪೂರ್ಣ. ಚಿತ್ರೀಕರಣವಾಗದೇ..ಹಾಡು ಮಾತ್ರ ವಿಶ್ವ ಪ್ರಸಿದ್ಧವಾದ ಶ್ರೀ‌ ಶಿವಶಂಕರ್ ರಚಿಸಿದ "ಸಂಗಮ" ಚಿತ್ರದ ಹಾಡಿನಂತೆ ನನ್ನ ಆಸೆ..

"ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ...ಭಿಕ್ಷಕನಾದರೂ ಕನ್ನಡ ನಾಡಲ್ಲೆ........"