Saturday, September 17, 2022

ಬದುಕೇ ಹಸಿರು ಪ್ರೀತಿ ಬೆರೆತಾಗ!!!

 ಜಗತ್ತೇ ನಮದು ಅಂತ ಜಗವನ್ನೇ ಮರೆತು ಮಾತಾಡುತ್ತಿದ್ದ ಸುಂದರ ಜೋಡಿಯದು..

ಜೀವನದಲ್ಲಿ ಅನೀರಿಕ್ಷಿತ ತಿರುವುಗಳನ್ನು ಕಂಡ ಜೋಡಿಯದು..ಹಿಂದಿನ ಜನ್ಮದಲ್ಲಿ ಪ್ರಾಯಶಃ ಪ್ರಕೃತಿಯ ರುದ್ರತಾಂಡವವೋ...ದೈವ ಕುಪಿತವಾಗಿ ಶಾಪ ಕೊಟ್ಟೋ ..ಇಲ್ಲವೇ ದೇವತೆಗಳ ಶಾಪದಿಂದ ಭುವಿಗಿಳಿದಿದ್ದ ಗಂಧರ್ವ ಜೋಡಿಯೋ ಒಟ್ಡಿನಲ್ಲಿ ನಾಲ್ಕು ಮಂದಿಯ ಕಣ್ಣಲ್ಲಿ ಸಂತಸ ಉಕ್ಕಿಸುತ್ತಿದ್ದ ಜೋಡಿಯದು..

ಆ ಜೋಡಿ ಇದೆ ಎಂದರೆ ಯಾವ ಪ್ರವಾಸವೂ ಪ್ರಯಾಸವಾಗುತ್ತಿರಲಿಲ್ಲ...ಆರಾಮಾಗಿ ಖುಷಿ ಖುಷಿಯಾಗಿ ನಲಿಯುತ್ತಿದ್ದ ಜೋಡಿಯದು..ಗ್ರಹಗಳ ವ್ಯಾಪಾರವೋ..ಹಣೆ ಬರಹವೋ..ವಿಧಿವಲಾಸವೋ ಅತಿಯದು..ಜೀವನದ ಮುಖ್ಯ ಘಟ್ಟದಲ್ಲಿ ಅಪಾರವಾದ ಸಂಕಷ್ಟಗಳಿಗೆ ಹೆಗಲು ಕೊಟ್ಟ ಜೋಡಿಯದು...ಕಷ್ಡವೇನೆ ಇರಲಿ...ಮೊಗದಲ್ಲಿ ನಗು ಸದಾ ಸೂರ್ಯ ಚಂದ್ರರು ಇರುವಷ್ಡೇ ಶಾಶ್ವತವಾಗಿ‌ ಮನೆ ಮಾಡಿತ್ತು..

ಅರೇ ಬರೀ ಪೀಠಿಕೆ ಆಯ್ತು ಅಂದ್ರ ಇರ್ರಪ್ಪ ಅಸಲಿ ಇಸ್ಯಕ್ಕೆ ಬರ್ತೀನಿ...

ಸರಿ ಜಗವ ಮರೆತು ಲೋಕಾಭಿರಾಮವಾಗಿ ಮಾತಾಡುತ್ತಾ ಕುಳಿತಿದ್ದರು..ಮಾತುಗಳು ಸಾಗಿತ್ತು...ಕಾರ್ಪೊರೇಟ್ ವಲಯದಲ್ಲಿ‌ ಕೆಲಸದ ಒತ್ತಡ..ಅದನ್ನು ನಿಭಾಯಿಸುವ ಚೈತನ್ಯ.. ಅದನ್ನು ಸಂಭಾಳಿಸಬೇಕಾದರೆ ಬೇಕಾಗುವ ಮಾನಸಿಕ ದೃಢತೆ..ಹೀಗೆ ಮಾತು ಸಾಗಿತ್ತು..

"ಹೌದು ಡಿಯರ್...ಈಗಿನ‌ ಕಾಲದಲ್ಲಿ ಯಾವುದು ಶಾಶ್ವತವಲ್ಲ..ಕಾರ್ಪೊರೇಟ್ ರಾಕ್ಷಸ ಯಾರನ್ನು ಬಿಡುವುದಿಲ್ಲ...ಹಿಂಡಿ ಹಿಪ್ಪೆ ಮಾಡುತ್ತದೆ...ಯಾರನ್ನೂ ನಂಬಿಕೊಂಡಿರೋಲ್ಲಾ...ಅಷ್ಟೇ ಏಕೆ ಮನೆಯಲ್ಲೇ ಒಬ್ಬರ ಮೇಲೆ ಒಬ್ಬರು ಅವಲಂಬಿತರಾಗಿರೋಲ್ಲಾ ಅರ್ಥಾತ್ depend ಆಗಿರೋಲ್ಲ.." ಹೆಣ್ಣು ದನಿ ಉಲಿಯಿತು...

ಅಲ್ಲಿ ತನಕ ಜಗತ್ತೇ ನಮದು ಎಂದಿದ್ದ ಜೋಡಿಯ ಗಂಡು...ಅಚಾನಕ್

 T R A I N 

P U L L

C H A I N

FAN 

S W I T C H...ಅಂತ ಅಲ್ಲಿದ್ದ ಅಕ್ಷರಗಳನ್ನು ಓದಲು ಶುರು ಮಾಡಿತು..

"ಅರೇ ಯಾಕೇ ಡಿಯರ್ ಏನಾಯಿತು..ಅಂಜಿಕಿ ಆಗ್ತಾ ಇದೆ...ಯಾಕೇ ಹಿಂಗೆ ಬಡ ಬಡಿಸ್ತಾ ಇದ್ದೀರಾ..."

ಮನೆ ಮನೆ ಮನೆ .ನಮ್ಮ‌‌ ಮನೆ ..ನಮ್ಮ ಸಂಸಾರ ನಮ್ಮ ಬಳಗ ಎಂದು ಯಾವಾಗಲೂ ಪ್ರಾಣ ಬಿಡುತ್ತಿದ್ದ ಅವನಿಗೆ ಅಚಾನಕ್ ಸಂಕಷ್ಟಗಳ‌‌ ಮಾಲೆ...ಆತ್ಮ ವಿಶ್ವಾಸವೇ ಕುಗ್ಗುವಂತಹ ಘಟನಾವಳಿಗಳು.. ಅವನ‌ ಜಂಘಾ ಬಲವನ್ನೇ ಅಲುಗಾಡಿಸಿತ್ತು..ಜೊತೆಗೆ ಮಾಮೂಲಾಗಿ ಆಡಿದ್ದ "ಕುಟುಂಬದಲ್ಲೇ  ಯಾರು ಯಾರಿಗೂ ಆಗೋಲ್ಲ" ಎನ್ನುವ ಮಾತು ಹೃದಯ ಬಡಿತವನ್ನು ಹೆಚ್ಚಿಸಿದ ಸಮಯವಾಗಿತ್ತು...

ಇದನ್ನು ಅರಿತ ಅವನ ಮನೋನಾಯಕಿ...ತಬ್ಬಿ ಹಿಡಿದು ತಾನು ಇರುವುದು ಸಾರ್ವಜನಿಕ ಸ್ಥಳ‌ ಅನ್ನೋದನ್ನು ಮರೆತು ಎದೆಗಾನಿಸಿಕೊಂಡು ಸಾಂತ್ವನ ನೀಡಿದಾಗ ಮತ್ತೆ ಎದೆ ಬಡಿತ 72ಕ್ಕೆ ಬಂದಿತು..

"ಡಿಯರ್ ಈಗ ಓಕೇನಾ" ಅಂದಾಗ..ಹೌದು ಎದೆ ಬಡಿತ 72.._ಅದರ ಅರ್ಧ 36 ಅಂದಾಗ. ಇಬ್ಬರೂ ಮತ್ತೆ ಜಗತ್ತನ್ನು ಮರೆತು ನಗಲು ಶುರು ಮಾಡಿದರು...

ಪಕ್ಕದಲ್ಲಿ ಇಡ್ಲಿ ವಡೆ ಚಪಾತಿ ಬಿರ್ಯಾನಿ ಪಲಾವ್ ಮಾರುವವನ ಮೊಬೈಲಿನಲ್ಲಿ ಅಣ್ಣಾವ್ರ "ಬದುಕೇ ಹಸಿರು ಪ್ರೀತಿ ಬೆರೆತಾಗ" ಹಾಡು ತೇಲಿ ಬಂತು...!









1 comment:

  1. ಪರಸ್ಪರಾವಲಂಬನೆಯೇ ಬದುಕಿನ ನೈಜ ಸುಖ!

    ReplyDelete