Wednesday, August 24, 2022

ನೀ ಮುಡಿದ ಮಲ್ಲಿಗೆ.....!

ನೀ‌‌ ಮುಡಿದ ಮಲ್ಲಿಗೆ ಹೂವಿನ‌ ಮಾಲೆ

ನಿನಗೆಂದೇ ಬರೆದ ಪ್ರೇಮದ ಓಲೆ...!


ನೀ‌ ಮುಡಿದ ಮಲ್ಲಿಗೆ ಹೂವಿನ‌ ಮಾಲೆ..                          ನಿನಗೆಂದೇ ಬರೆದ ಪ್ರೇಮದ ಓಲೆ..

ರೇಡಿಯೋದಲ್ಲಿ ಗಾಂಧಿನಗರ ಚಿತ್ರದ ಅಣ್ಣಾವ್ರ ಹಾಡು ಬರುತಿತ್ತು..

ಮಲ್ಲಿಗಿ‌ ಮಾಲಿ ತನ್ನಿ...

ಯಾಕೋ...

ಮುಂಜಾನೇ ಯಾಕೋ ಅನಿಸಿತು ಇವತ್ತು ಮಾಲಿ‌ ಮುಡೀಬೇಕು ಅಂತ...!

ಅಯ್ಯೋ ರಾಣಿ ನಿನಗೋಸ್ಕರ ಚಂದ್ರನನ್ನೇ ತರುವೇ ಎನ್ನುವಾಗ ಮಲ್ಲಿಗೆ ಹೂವು ತಾನೆ..ತರ್ತೀನಿ ಬಿಡು...

ಕಿಸಿಕಿಸಿ‌ ನಗಿಸಿ ಹೊರಟೇ..

ಮಳೆ ಶುರುವಾಯ್ತು...

ನನ್ನ ಒಲವಿನ ಹುಡುಗಿ ಮೊದಲ ಬಾರಿ ಹೂವು ಬೇಕೆಂದು ಕೇಳಿದಳು...ಸೀದಾ ಅಣ್ಣಾವ್ರ ಹಾಡೇ ನೆನಪಿಗೆ ಬಂದಿತ್ತು...

ಒಳ ಉಡುಪು ನೆಂದು ಹೋಗುವಷ್ಟು ಜೋರಾದ ಮಳೆ...ಆದರೆ ಹೃದಯದಲ್ಲಿ ಪ್ರೇಮದ ಅಲೆಗಳ ಬೋರ್ಗರೆತದ ಮುಂದೇ ಈ ಮಳೆಯ ಹನಿಗಳು ಏನು ಅಲ್ಲಾ...

ಹೃದಯದ ರಾಣಿ ಕೇಳಿದ ಹೂವನ್ನು ಅರಸುತ್ತಾ ಹೋದೆ..ಅಂದು ಭಾನುವಾರ..ಮದುವೆ..ಮುಂಜಿ..ಪೂಜೆ..ಅದು ಇದು ಅಂತ ಹೂಗಳ ಅಂಗಡಿಗಳು ಬಿಕೋ‌ ಎನ್ನುತ್ತಿದ್ದವು...ಕೆಲವು ಅಂಗಡಿಗಳಲ್ಲಿ ಹೂವಿದ್ದವು...ಆದರೆ ಆಗಲೆ ಅಂತಿಮ ಘಟ್ಟ ಮುಟ್ಟಲು ಸಿದ್ಧವಾಗಿದ್ದಂತೆ ಕಾಣುತ್ತಿತ್ತು..

ಯಾಕೋ ಮನಸ್ಸು ಬರಲಿಲ್ಲ...ನನ್ನ ಹುಡುಗಿ ಮೊದಲ ಬಾರಿಗೆ ಬೇಕು ಅಂದಿದ್ದಾಳೆ ನಿರಾಸೆ ಮೂಡಿಸಲು ಮನಸ್ಸಾಗದೇ..ಆ ಮಳೆಯಲ್ಲಿಯೇ ಅಲೆದೆ...

ಬೈಕು ನೆಂದ ನಾಯಿಯಾಗಿತ್ತು..ಹೆಲ್ಮೆಟ್ ಹಾಕಿದ್ದರು ಆ ಹೊರಗಿನ‌‌ ಮಳೆಯ ಭೋರ್ಗರೆತ ತಲೆಯನ್ನು ಪೂರ್ತಿ ಒದ್ದೆ ಮಾಡಿತ್ತು...

ಅನತಿ ದೂರದಲ್ಲಿ ಒಂದು ಹಣ್ಣು ಹಣ್ಣು ಅಜ್ಜಿ ತಲೆ ಮೇಲೆ ಒಂದು ಪ್ಲಾಸ್ಟಿಕ್ ಹಾಳೆಯನ್ನು ಹಾಕಿಕೊಂಡು ತನ್ನ ಮುಂದೆ ಒಂದು ಬುಟ್ಟಿಯಲ್ಲಿ ಒಂದೆರೆಡು ಮಳ ನಳ ನಳಿಸುವ ಮಲ್ಲಿಗೆ ಹೂಗಳ ಮಾಲೆಯನ್ನು ತೆಳುವಾದ ಪ್ಲಾಸ್ಡಿಕ್ ಕವರಿನ ಹಾಳೆಯಿಂದ ಮುಚ್ಚಿದ್ದು ಕಂಡಿತು..

ನನ್ನ ಬೈಕ್ ನನ್ನ ಮಾತು ಕೇಳದೆ ಅಜ್ಜಿ ಮುಂದೆ ಬಂದು ನಿಂತಿತು...

ಏನಪ್ಪ ಪೂರಾ ನೆಂದು ಹೋಗಿದ್ದೀಯಲ್ಲ..ಸ್ವಲ್ಪ ನಿಂತು ಹೋಗಬಾರದಿತ್ತೆ...ಈ ಆಕಾಲಿಕ ಮಳೆಯಲ್ಲಿ ನೆಂದರೆ ತಲೆನೋವು..ಶೀತ..ಜ್ವರ..ಬರುತ್ತದೆ ಕಣಪ್ಪ..

ಇಲ್ಲ ಅಜ್ಜಿ ನನ್ನ ಮಡದಿ ಎಂದೂ ಕೇಳದವಳು ಇಂದು ಮಲ್ಲಿಗೆ ಹೂವು ಬೇಕು ಎಂದಳು...ಪೇಟೆಯೆಲ್ಲಾ ಸುತ್ತಿದೆ...ಯಾಕೋ ಗಮನ ಸೆಳೆಯುವ ಹೂವು ಸಿಗಲಿಲ್ಲ....ಸದಾ ನನ್ನ ಮಾತು ಕೇಳುವ ಬೈಕ್.. ಅರಿವಿಲ್ಲದೇ‌ ಸೀದಾ ನಿನ್ನ ಮುಂದೆ ಬಂದು ನಿಂತಿದೆ...ಪ್ರೀತಿಯ ಮಡದಿಯ ಆ ನಿರ್ಮಲ ಪ್ರೀತಿಯ ಜ್ಯೋತಿ ಒಳಗೆ ಬೆಳಗುತ್ತಿರುವಾಗ..ಈ ಚಳಿ..ಮಳೆ ಏನು ಮಾಡುತ್ತದೆ ಅಜ್ಜಿ...

ಹೌದಾ ಅಪ್ಪ...ಅನ್ಯೋನ್ಯ ಜೋಡಿ ಅನಿಸುತ್ತೆ..ಸದಾ ಸುಖವಾಗಿರಿ...ಅಂದ ಹಾಗೆ ಎಷ್ಟು ಮಳ ಬೇಕಪ್ಪ...?

ಅಜ್ಜಿ ಕುಕ್ಕೆಯಲ್ಲಿ ಎಷ್ಟಿದೆ...

ಒಂದೆರೆಡು ಮೂರು ಮಳ ಇದೆಯಪ್ಪ...ಏನು‌ ಮಾಡಲಿ ಇದನ್ನ ಮಾರಿ ಬಂದ ಹಣ ಕೊಟ್ಟರೆ ಮಾತ್ರ ಮನೆಯಲ್ಲಿ ಊಟ...ಇಲ್ಲದೇ ಇದ್ರೇ ಹೊಟ್ಟೆಗೆ ಲಾಟರಿ ಕಣಪ್ಪ..

ಕರುಳು ಚುರ್ ಅಂತು...ಅಜ್ಜಿಯ ಕಥೆಯನ್ನು ಕೇಳುವ ಆಸೆಯಿದ್ದರೂ‌ ಅದನ್ನು ಕೇಳಿ ಅಜ್ಜಿ ಮನಸ್ಸಿಗೆ ನೋವು ಕೊಡಬಾರದು...ಜೊತೆಯಲ್ಲಿ ಮಳೆಯ ಕಾರಣ ಅಜ್ಜಿ ನೊಂದು ಅತ್ತರೂ ಮಳೆ ಹನಿಗಳ‌ ಜೊತೆಯಲ್ಲಿ ಕಣ್ಣೀರು ಕರಗುತ್ತದೆ...ಬೇಡವೆಂದು...ಮನಸ್ಸಿಗೆ ಹೇಳಿಕೊಂಡು ಅಜ್ಜಿ ತಗೋ...ಎಂದು ಪರ್ಸನಲ್ಲಿ ಐದು ನೂರುಗಳ ಐದು ನೋಟು ಕೊಟ್ಟು.. ಜೊತೆಯಲ್ಲಿ ಮೂರು ಮಳದ ದುಡ್ಡು ಬೇರೆ ಕೊಟ್ಟಾಗ...ಬೇಡಪ್ಪ‌ ...ಇದಿಷ್ಟೇ ಹೂವಿನ‌ದ್ದು ಮಾತ್ರ ಸಾಕು...ಇದು ಬೇಡ ಅಂದಳು ಸ್ವಾಭಿಮಾನಿ ಅಜ್ಜಿ...

ಮರು ಮಾತಾಡದೆ..ದುಡ್ಡು ಪಡೆದು ಹೂವನ್ನು ಇಟ್ಟುಕೊಂಡು...ರಸ್ತೇ ಎಂದು ನೋಡದೇ ಅಜ್ಜಿಗೆ ನಮಸ್ಕರಿಸಿ ಹೊರಟೆ..

ಮನೆಗೆ ಬಂದು ಮಲ್ಲಿಗೆ ಹೂವು ಕೊಟ್ಟಾಗ ಅವಳ‌ ಮುಖ ಅರಳಿತ್ತು..ನನ್ನ ಹೃದಯ ಅಣ್ಣಾವ್ರ "ಹೃದಯದಲಿ ಇದೇನಿದು ನದಿಯೊಂದು ಓಡಿದೆ..." ಹಾಡು..

ಜೀವನ ಸುಂದರ ಅಂತ ಅನಿಸೋದು ಈ ರೀತಿಯ ಪುಟ್ಟ ಪುಟ್ಟ ಸಂತಸದ ಸಂಗತಿಗಳಿಂದ...

ಇಬ್ಬರಿಗೂ ಖುಷಿಯಾಯಿತು...ಆದರೆ ಬರುವಾಗ ಮಳೆಯ ಹನಿಗಳಲ್ಲಿ ಬೆರೆತ ಕಣ್ಣೀರಿನ ಪ್ರತಿ ಹನಿಗಳು ಅಜ್ಜಿಗೆ ಒಂದು ಕಲ್ಪವೃಕ್ಷದಂತಹ ಛಾಯೆ ನೀಡಬೇಕು‌‌ ಅನಿಸಿತು...

ಮಲ್ಲಿಗೆ ಹೂವನ್ನು ಕಂಡ ಮಡದಿ..

Thank you... Very nice..Thanks for loving me so much...Love you too... 

ಮಳೆ ನೀರಲ್ಲಿ ನೆಂದರೂ ಅದು  ಪ್ರೇಮದ ಅಲೆಯ ಮುಂದೆ ಏನು ಅನ್ನಿಸಲಿಲ್ಲ ಅಂತ ಹೇಳಿದ್ದು ತುಂಬು ಭಾವನೆಯಲ್ಲಿ ಬಂದ ಮಾತು..ನಿಮ್ಮ ಈ ಪ್ರೀತಿಯನ್ನು ಪಡೆಯುವುದು ತುಂಬಾ ಭಾಗ್ಯದ ಮಾತಾಗಿದೆ..

ನಿಜಕ್ಕೂ ನೀವು ತಂದು ಕೊಟ್ಟ ಮಲ್ಲಿಗೆ ಹೂವಲ್ಲಿ ಅಳೆಯಲು ಆಗದ ಪ್ರೀತಿ..ನಿಜಕ್ಕೂ  ಇಂಥಹ ಘಳಿಗೆಗಳು ತುಂಬಾ ಖುಷಿ ನೀಡುತ್ತವೆ..

ಭಗವಂತನ ಮನೆಯಲ್ಲಿ ನಿಮ್ಮ ನಿಸ್ವಾರ್ಥ ಸೇವೆ ನಿಜಕ್ಕೂ ಹೆಮ್ಮೆಯ  ಮಾತು..ಅದು ಅಷ್ಟು ಸರಳವಾಗಿ ಯಾರಿಗೂ ಮನದಲ್ಲಿ ಬರುವುದಿಲ್ಲ..

ಅದರ ಜೊತೆಗೆ ನನಗೆ ಇನ್ನೊಂದು ಖುಷಿ ಕೊಡುವ ಮಾತೆಂದರೆ ನಾನು ಮೆಚ್ಚಿದ  ಪ್ರೀತಿಗೆ ಸ್ವಯಂ ಪರಮಾತ್ಮನು ಮೆಚ್ಚಿಕೊಂಡು ಆರಿಸಿದನಲ್ಲಾ ಅಂತ ತುಂಬಾ ಹೆಮ್ಮೆ ಆಗುತ್ತದೆ. ಇದೊಂದು  ಚಮತ್ಕಾರದ ಮಾತು.ಜೊತೆಗೆ  ಇಡೀ ವಸುದೈವ ಕುಟುಂಬ ನಿಮ್ಮನ್ನು ಇಷ್ಟ ಪಡುತ್ತದೆ  ಅದೂ ಕೂಡಾ ತುಂಬಾ ಹೆಮ್ಮೆಯ ಮಾತು..

Love you a lot .It's really god made pair..🥰

ಅಜ್ಹಿಯ ಬದುಕಿನ ಕತೆ ಕಣ್ಣೀರು ತರಿಸಿದರೆ ಮಡದಿಯ ಪ್ರೀತಿಯ ಮಾತುಗಳು ಪನ್ನೀರು ತರಿಸಿತು...

ಕಣ್ಣೀರು.ಪನ್ನೀರಿನ ಉಗಮ ಸ್ಥಾನ ಕಣ್ಣುಗಳೇ ಆದರೂ ಅದಕ್ಕೆ ಸಿಗುವ ಸನ್ನೆಗಳು ಹೃದಯದಿಂದ...ಎರಡರ ರುಚಿಯೂ ಉಪ್ಪೇ ಆದರೂ‌ ಅದು‌ ಕೊಡುವ ಅನುಭವ ಭಿನ್ನ...

ಅಜ್ಜಿಯ ಕಥೆ ಸಂಕ್ಷಿಪ್ತವಾಗಿ ಹೇಳಿದೆ ಕೊಂಚ ಹಣ ಸಹಾಯವನ್ನೂ ಕೂಡ ನಯವಾಗಿ ಬೇಡ ಎಂದಿದ್ದರ ಬಗ್ಗೆಯೂ ಹೇಳಿದೆ..

ಯಾವಾಗಲೂ‌ ಮಿಂಚಿನಂತೆ ಯೋಚಿಸುವ...ಲಕ್ಷ್ಮಣ ರೇಖೆ..ಆ ರೇಖೆ..ಈ‌ ರೇಖೆ ಎಂಬ ನಿಯಮಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ನನ್ನ ಹುಡುಗಿ...ಮೂರು ದಿನದಲ್ಲಿ‌ ಆ ಅಜ್ಜಿಗೆ ಒಂದು ಭಧ್ರತೆ ನೀಡಿದಳು...

ಅಜ್ಜಿ ಈಗ ನೆಮ್ಮದಿ ಕೇಂದ್ರದಲ್ಲಿ ಭಗವಂತನ ಜ್ಞಾನದ ಹಾದಿಯಲ್ಲಿ ಸಂತೃಪ್ತ ಜೀವನ ನೆಡೆಸುತ್ತಿದ್ದಾಳೆ..

ನಾವು ನೋಡಲು ಹೋದಾಗಲೆಲ್ಲಾ..ಮಲ್ಲಿಗೆ ಮಾಲಿ ನನ್ನಾಕೆಗೆ...ಆ ಪರಿಮಳ ನನ್ನ ಹೃದಯಕ್ಕೆ...!

1 comment: