Tuesday, July 26, 2022

ಒಂದು ಅನುಭವ....ಪದಗಳಲ್ಲಿ‌ ಮೂಡಿಸುವ ಪ್ರಯತ್ನ...!!!

"ಅಣ್ಣಾ ಈಗ ಸಮಯ ಎಷ್ಟು?"

"ಅಕ್ಕ ವಾಚ್ ನಿಂತು ಹೋಗಿದೆ!!!"

ಒಂದು ಮುಗುಳುನಗೆಯ ದೋಣಿ ಎರಡೂ ಕಡೆ ಹಾಯ್ದು ಹೋಯ್ತು.. 

"ಅಣ್ಣಾ ನಿಮಗೆ ಹೇಗೆ ಅನ್ನಿಸುತ್ತೋ ಹಾಗೆ ಅಲಂಕಾರ ಮಾಡಿ.. ನೋಡಿ ಅಲ್ಲಿ ಇದೆ.. ಇಲ್ಲಿ ಇದೆ" 

ಅಷ್ಟೇ ಹೇಳಿದ್ದು.. 

ಆನಂದ್ ಭಾಯ್ ಜೊತೆ ಇದ್ದರು.. ಅವರ ಕೈಗೆ ನನ್ನ ಕೈ ಜೋಡಿಸಿದೆ.. 

ಆನಂದ್ ಭಾಯ್  ಅಲ್ಲಿದ್ದ ಪರಿಕರಗಳನ್ನು ಒಂದೊಂದಾಗಿ ತೆಗೆದು ಕೊಡುತ್ತಿದ್ದರು.. ನನಗೆ ಅನಿಸಿದಂತೆ, ಅಲ್ಲಿದ್ದ ಉಳಿದ ಅಕ್ಕಂದಿರು ಹೇಳಿದಂತೆ ಒಂದೊಂದೇ ಜೊತೆಯಾಗಿ.. ಸುಂದರವಾದ ಅಂಗಣ ಇನ್ನಷ್ಟು ಸುಂದರವಾಗಿ ಸಜ್ಜಾಗುತಿತ್ತು.. ಶೋ ಕೇಸ್ ನೋಡಿದಾಗ ಏನೋ ಖಾಲಿ ಖಾಲಿ ಅನ್ನಿಸುತ್ತಿತ್ತು.. ಸರಿ ಇದಕ್ಕೆ ಒಂದು ರೂಪು ಕೊಡೋಣ ಅಂತ.. ನನ್ನ ಸ್ವಲ್ಪ ತರಲೆ ತಲೆಗೆ ಕೆಲಸ ಕೊಟ್ಟೆ..

ಅಣ್ಣಾ ಸ್ವರ್ಗ ಸ್ವರ್ಗ ಸುಂದರವಾಗಿದೆ ಅಂತ ಅಕ್ಕಾ ಹೇಳಿದಾಗ ಮನಸ್ಸು ನಿರಾಳ.. 

ಬೆಳಿಗ್ಗೆ ಬೇಗ ಬನ್ನಿ ಅಣ್ಣ ಅನ್ನುವ ಮಾತಿನೊಂದಿಗೆ ದಿನ ಮುಗಿದಿತ್ತು.. 

ಬೆಳಿಗ್ಗೆ ಹೋದಾಗ.. ಅಣ್ಣಾ ಶಿವಲಿಂಗಕ್ಕೆ ನಿಮಗೆ ಬೇಕು ಅನಿಸಿದ ಹಾಗೆ ಅಲಂಕಾರ ಮಾಡಿ.. ನೋಡಿ ಹೂ ಎಲ್ಲಾ ಇದೆ.. 

ಶಿವನಿಗೆ ಕೈ ಮುಗಿದೆ.. ಕಮಾನ್ ಶ್ರೀ ಅಂದ ಹಾಗೆ ಭಾಸವಾಯಿತು.. 


ಅಲ್ಲಿಂದ ಶುರುವಾಯ್ತು.. ಅಲ್ಲಿದ್ದ ಹೂವುಗಳನ್ನು ಬಿಡಿಸಿ.. ಒಂದೊಂದೇ ಜೋಡಿಸುತ್ತಾ ಹೋದೆ..  ನಮ್ಮ ಬದುಕನ್ನು ರೂಪಿಸುವ ದೇವರಿಗೆ ಒಂದು ಪುಟ್ಟ ಅಲಂಕಾರ.. ಮನಸ್ಸು ನಿರಾಳ.. 

"ಅಣ್ಣ ಬೇಗ ಬನ್ನಿ" ಮತ್ತೊಮ್ಮೆ ಹೆಡ್ ಮೇಡಂ ಉವಾಚ.. 

ಸರಿ ಬೇಗ ಬೇಗ ತಿಂಡಿ ಎಲ್ಲಾ ಸಿದ್ಧ ಮಾಡಿ ಮಗಳ ಜೊತೆ ಹೋದೆ.. ಕ್ಯಾಮೆರಾ ಕಣ್ಣಿಗೆ ಒಂದಷ್ಟು ದೃಶ್ಯಗಳನ್ನು ಸೆರೆ ಹಿಡಿವ ತವಕ.. ಶುರು ಮಾಡಿದೆ.. ಕೆಲವು ಅದ್ಭುತ ಅನಿಸುವ ಫ್ರೇಮುಗಳು ಕ್ಯಾಮೆರಾದೊಳಗೆ ನುಗ್ಗಿತು.. 








ಅಣ್ಣಾ ನೀವು ಹೋಗಿ ರಾಖಿ ಕಟ್ಟಿಸಿಕೊಳ್ಳಿ ಅಂತ ಬಂದ ದನಿಗೆ ತಿರುಗಿ... ಅಲ್ಲಿ ಸದ್ದಿಲ್ಲದೇ, ಕಣ್ಣಿನಲ್ಲಿಯೇ ತಮ್ಮ ಶಕ್ತಿ ಧಾರೆಯೆರೆಯುತ್ತಿರುವ ಮಾತೆಯನ್ನು ಕಂಡಾಗ ಮಾತೆ ಹೊರಬರುತ್ತಿರಲಿಲ್ಲ.. ಮೈಯಲ್ಲಿ ಸಣ್ಣಗೆ ಕಂಪನ.. ಈ ರೀತಿಯ ಅನುಭವ ಹಲವಾರು ಬಾರಿ ಆಗಿದ್ದರೂ, ಪ್ರತಿ ಅನುಭವ ಒಂದು ವಿಭಿನ್ನ ರೂಪ ನೀಡುವುದು ಸಹಜ.. ಸುಮ್ಮನೆ ಅವರನ್ನೇ ನೋಡುತ್ತಾ ಕೂತಿದ್ದೆ.. ಪಕ್ಕದಲ್ಲಿ ಕೂತಿದ್ದವರಿಗೆ ದೃಷ್ಟಿಸಿ.. ತಮ್ಮ ಅನುಭವ ಶಕ್ತಿಯನ್ನು ನೀಡುತ್ತಿದ್ದ ಪ್ರಸಂಗ.. ನಾ ಸುಮ್ಮನೆ ಕಣ್ಣು ಮುಚ್ಚಿ ಆ ದಿವ್ಯ ಅನುಭವದ ತರಂಗಗಳನ್ನು ಆಸ್ವಾದಿಸುತಿದ್ದೆ.. 

ನನ್ನ ಸರದಿ ಬಂತು.. ಕಣ್ಣಿನಲ್ಲಿ ಮಾತೆಯ ಮಮತೆ.. ಕಣ್ಣಿನಲ್ಲಿ ಸಾಂತ್ವನ ನೀಡುತ್ತಿರುವ ಭಾವ.. ಕಣ್ಣಿನಲ್ಲಿ ಶ್ರೀ ಬದುಕು ಸುಂದರವಾಗಿದೆ.. ಜೀವನವೂ ಸುಂದರವಾಗುತ್ತದೆ ಎನ್ನುವ ಆತ್ಮ ವಿಶ್ವಾಸ ಕೊಡುವ ನೋಟ.. ಕಣ್ಣಿನಲ್ಲಿ ಯಾವುದಕ್ಕೂ ಹೆದರಬೇಡ.. ದೇವರಿದ್ದಾನೆ.. ನಿನ್ನ ಜೊತೆ ಎನ್ನುವ ಧೈರ್ಯದ ಮೂಕ ಅಭಿನಯ.. 

ಒಂದು ರೀತಿಯಲ್ಲಿ ಸ್ಕ್ಯಾನ್ ಮಷೀನ್ ನಮ್ಮೊಳಗೇ ಹೋಗಿ.. ಎಲ್ಲಾ ಒಳ್ಳೆಯ ಯೋಚನೆಗೆಗಳನ್ನು ತೊಳೆದು, ಒಗೆದು, ಒಣಗಿಸಿ ಮತ್ತೆ ನಮ್ಮೊಳಗೇ ತುಂಬಿ ಕಳಿಸುವಂತಹ ದೃಶ್ಯವದು.. ಅಬ್ಬಬ್ಬಾ ಎಂದರೆ ನೂರಾ ಇಪ್ಪತ್ತು ಸೆಕೆಂಡುಗಳು ಅಷ್ಟೇ.. ಮನಸ್ಸು ಹಕ್ಕಿಯಾಗಿತ್ತು.. ಎಪ್ಪತೈದು ಕೆಜಿ ತೂಗುವ ದೇಹ.. ಏಳೂವರೆ ಗ್ರಾಂ ಆಗಿದೆ ಅನ್ನುವ ಸುಂದರ ಅನುಭವ.. 

ದೇವರ ಜೊತೆಗಿನ ಭೇಟಿ ಹಾಗೆ ಅಲ್ಲವೇ.. ಏನೂ ಕೇಳದೆ ಎಲ್ಲವನ್ನೂ ಕೊಡುವ ದೈತ್ಯ ಶಕ್ತಿಗೆ ಇನ್ನೊಂದು ಹೆಸರು "ದೇವರು" ಅದನ್ನು ದೇವರು ಅನ್ನುತ್ತೇವೆ, ಬಾಬಾ ಎನ್ನುತ್ತೇವೆ, ಮಹಾಮಹಿಮ ಎನ್ನುತ್ತೇವೆ.. ಆದರೆ ಕಡೆಗೆ ನಿಲ್ಲುವ ಹೆಸರು "ಪರಮಾತ್ಮ"

ಅಂತಹ ದಿವ್ಯ ಅನುಭವವನ್ನು ಮೂಡಿಸಿದ ರಾಜರಾಜೇಶ್ವರಿ ನಗರದ ರಾಜಯೋಗ ಕೇಂದ್ರ್ರ ಅಕ್ಕ ಪ್ರಮೀಳಾ ಅಕ್ಕ ಅವರಿಗೆ ಅನಂತಾನಂತ ಧನ್ಯವಾದಗಳು.. !!! 

Saturday, July 23, 2022

ನಾವಿರುವ ಕ್ಷಣವೇ ......ಒಲಿದ ಜೀವ!

ಹನ್ನಾ ಹಾಡುಗಳ‌ ಬಗ್ಗೆ ಒಂದಷ್ಟು ಮಾತು ಹೇಳಿ!

"ಮಾತುಗಳು, ಹಾಡುಗಳು ಹೃದಯದಾಳದಿಂದ ಬರಬೇಕು...ಆಗ ಅದರ ಮಹತ್ವ ಮತ್ತು ಕಾಲಾವಧಿ ಅಧಿಕ"

"ಹೌದು ಹನ್ನಾ ಇವತ್ತು ವಿಶೇಷ ದಿನ...ಮಾಮೂಲಿಗಿಂತ ಏನಾದರೂ ಬೇರೆ ಬರೆಯಿರಿ...!"

"ಹಾ ಕಣೋ...ಬೆಂಕಿಯ ಬಲೆ ಚಿತ್ರದ " ಒಲಿದ ಜೀವ ಜೊತೆಯಲಿರಲು ಬಾಳು ಸುಂದರ " ಇದರಲ್ಲಿ ಎಸ್ಪಿಬಿ "ಒಲಿದ" ಪದದ ಉಚ್ಚಾರಣೆ ಕೇಳು.."



ಬೆಸುಗೆ ಚಿತ್ರದ "ಬೆಸುಗೆ ಬೆಸುಗೆ ಹಾಡಿನ ಅಂತ್ಯದಲ್ಲಿ " ಜನಮು ಜನಮುಕೂ "ಆತ್ಮದ" ಬೆಸುಗೆ..."ಆತ್ಮ" ಪದವನ್ನ ಉಚ್ಚರಿಸುವ ರೀತಿ ಗಮನವಿಟ್ಟು ಕೇಳು"


ಐತ್_ಬಾರ್ ಚಿತ್ರದ "ಕಿಸಿ ನಝರ್ ಕೋ‌ ತೇರಾ" ಹಾಡಿನಲ್ಲಿ ಇತ್ತಿಚೀಗಷ್ಟೇ ನಮ್ಮನಗಲಿದ ಗಾಯಕ ಭೂಪಿಂದರ್ ಸಿಂಗ್ "ಏಹಸಾಅಅಆಆಆಆಆಆಆಸ್" ಎಷ್ಟು ಅರ್ಥಗರ್ಭಿತವಾಗಿ ಹಾಡಿದ್ದಾರೆ...

"ಲಾವಾರಿಸ್ ಚಿತ್ರದಲ್ಲಿ ಬಿಗ್ ಬಿ "ಕಬ್ ಕೆ ಬಿಚಡೇ" ಹಾಡಿನಲ್ಲಿ ನಾಯಕಿಯನ್ನ ನೋಡುವ ಶೈಲಿ‌ ನಿನಗೆ ಬಲು ಇಷ್ಟ...ಈ ಹಾಡು ನಮ್ಮ ಜೀವನ ಗೀತೆಯೂ ಆಗಿದೆ...ಅಲ್ವೇ""

"ಚಂದನದ ಗೊಂಬೆಯ "ಮನೆಯನು ಬೆಳಗಿದೆ ಇಂದು" ಈ ಹಾಡು ನಿನಗೆ ಅರ್ಪಿತ...."

ಥ್ಯಾಂಕ್ ಯೂ ಹನ್ನಾ...ಈ ಹಾಡುಗಳನ್ನು ಕೇಳಿದಾಗೆಲ್ಲ ಮೈ ಜುಮ್ ಎನಿಸತ್ತದೆ...ಎಷ್ಟು ಸೊಗಸಾದ ಹಾಡುಗಳು, ಸಾಹಿತ್ಯ...!ಇನ್ನೂ ಒಂದು ಹಾಡಿದೆ...ನನ್ನಷ್ಟವಾದದ್ದು...ಅದು ಹಾಕಿಲ್ಲ ಇಲ್ಲಿ...?"

"ಸಿಂಗಾರ ಸೀಲಾಅಆಆಆಆಆಆಅಆ' ಅದ್ನ ಮರೆಯೋದು ಸಾಧ್ಯವೇ....ಅದು ಸದಾ ಇರೋ ಕೇಳೋ ಹಾಡದು....!


"ಹ ಹ ಹ ಹ ಹ'

ಬದುಕು ವಿಶೇಷ ಅನಿಸೋದು ನಾವು ಮಾಡುವ ಯೋಜನೆಗಳಲ್ಲಿ‌‌ ಧುಮುಕೋದು‌..ಬದುಕಿನ ಪ್ರತಿ ಕ್ಷಣಗಳನ್ನು ನಗು ನಗುತ್ತಾ ಕಳೆವಾಗ...ಅನುದಿನವೂ...ಅನು ಕಣವೂ..ಆನಂದವೇ!"

ವಿಶೇಷ ದಿನಕ್ಕೆ ಸಮಯಕ್ಕೆ ಶುಭಾಶಯಗಳು ಸೀಮು!"