ಮೆಟ್ಟಿಲು ಇಳಿಯುತ್ತಿರುವ ಸದ್ದು ..
ಸೀಮಾ ತನ್ನ ಕ್ಲಿನಿಕ್ಕಿಗೆ ಬಂದ ಅನಾರೋಗ್ಯದ ತಪಾಸಣೆಗೆ ಬಂದಿದ್ದವರ ಹತ್ತಿರ ಮಾತನಾಡುತ್ತಿದ್ದಳು.. ಕರ್ಟನ್ ಹಾಕಿದ್ದರಿಂದ ಹೊರಗೆ ಬಂದವರ ಮುಖ ದರ್ಶನವಾಗಿರಲಿಲ್ಲ..
ಬಂದಿದ್ದವರ ಆರೋಗ್ಯದ ತಪಾಸಣೆ ಮಾಡಿ.. ನಿಯಮಿತವಾದ ಆಹಾರ, ಪಥ್ಯ, ಮಾತ್ರೆಗಳು, ಬೆಳಗಿನ ಹೊತ್ತಿನ ವಾಯು ವಿಹಾರ.. ಅದು ಇದು ಅಂತ ಹೇಳಿ.. ಅವರನ್ನು ಬೀಳ್ಕೊಟ್ಟಳು..
ಹಿಂದೆ ಉಪಚರಿಸಿದ್ದವರ ಕರೆ ಬಂತು.. ಹಾಗಾಗಿ ಫೋನಿನಲ್ಲಿ ಮಾತಾಡುತಿದ್ದಳು.. ಸುಮಾರು ಹೊತ್ತು ಆದ ಮೇಲೆ.. ಆ ಕರೆಯಲ್ಲಿದ್ದವರು ಸಮಾಧಾನವಾದಂತೆ ಕಂಡಿತು ಅನ್ನಿಸುತ್ತೆ.. ಫೋನ್ ಕೆಳಗಿಟ್ಟು.. ಬಾಯಾರಿಕೆಯಾಗಿದ್ದರಿಂದ ನೀರು ಕುಡಿಯಲು ಹೋದಳು..
ಅಲ್ಲಿ ಒಬ್ಬರು ಕುಳಿತಿದ್ದರು.. ಕೋಲು ಮುಖ.. ಲಕ್ಷಣವಾಗಿ ಬಾಚಿದ್ದ ತಲೆಗೂದಲು.. ಜಡೆ ಇತ್ತು.. ಪಂಜಾಬಿ ಶೈಲಿಯ ಚೂಡಿದಾರ.. ಅದರ ಮೇಲೆ ಒಂದು ದುಪ್ಪಟ್ಟ.. ಕೊಂಚ ಅಗಲವಾದ ಹಣೆ.. ಎರಡು ಹುಬ್ಬಿನ ನಡುವೆ ಇಟ್ಟಿದ್ದ ಕೆಂಪನೆ ಬಿಂದಿ..
ಸೀಮಾ ಒಂದು ಕ್ಷಣ ಅವಕ್ಕಾದಳು..
"ಅರೆ ಸವಿತಕ್ಕ.. ಬಹಳ ಖುಷಿಯಾಯಿತು.. ನಿಮ್ಮನ್ನು ನೋಡಿ.. ವರ್ಷಕ್ಕೆರಡು ಬಾರಿ ನಿಮ್ಮ ದರ್ಶನವಾಗುತ್ತೆ.. ಆದರೆ ನಿಮ್ಮ ನೆನಪು ಸದಾ ಇರುತ್ತೆ.. ಶ್ರೀ ನಿಮ್ಮ ಫೋಟೋ ನೋಡದೆ ಯಾವುದೇ ಕೆಲಸ ಮಾಡೋಲ್ಲ.. ನೀವು ನಿಮ್ಮ ಮನೆಗೆ ಶಕ್ತಿ.. ಆ ಶಕ್ತಿಯೇ ನನಗೆ ಶ್ರೀ ರಕ್ಷೆ.. "
"ಸೀಮಾ ನೀವು ಎಷ್ಟು ಚಂದ ಕಾಣಲಿಕ್ಕೆ ಹತ್ತೀರಿ.. ಗುಂಡು ಗುಂಡು ಮುಖ.. ಪುಟ್ಟ ಪುಟ್ಟ ಕಣ್ಣುಗಳು.. ಪುಟ್ಟ ಬಾಯಿ... ಕಂದು ಬಣ್ಣದ ಕಣ್ಣುಗಳು.. ಸುಂದರಿ ನೀವು.. "
"ಸವಿತಕ್ಕ ಇದೇನು ನೀವು ತಾವು ಅಂತ ಕರೀತಾ ಇದ್ದೀರಾ.. "
"ಸೀಮಾ ಸುಮ್ಮನೆ ಹಾಗೆ ಕರೆದೆ.... ಹೇಗಿದ್ದೀಯಾ.. ಹೇಗೆ ನೆಡೀತ ಇದೆ ಕ್ಲಿನಿಕ್.. ನಿನ್ನ ನಗು ಮೊಗ ನೋಡಿದರೆ ಸಾಕು ಬಂದವರ ಆರೋಗ್ಯ ೭೦% ಸುಧಾರಿಸುತ್ತದೆ.. ಇನ್ನೂ ನೀ ಕೊಡುವ ಔಷಧಿ.. ಬೇಗ ಗುಣವಾಗ್ತಾರೆ.. ನಿನ್ನ ಧೈರ್ಯ ನಮ್ಮ ಶ್ರೀಗೆ ಬಲ ಕಣೆ.. ನೀ ಧೈರ್ಯವಾಗಿದ್ದರೆ ನಮ್ಮ ಶ್ರೀ ಧೈರ್ಯವಾಗಿರುತ್ತಾರೆ.. "
"ಹೌದು ಸವಿತಕ್ಕ.. ನಿಮ್ಮ ಮಾತು ನಿಜ ಶ್ರೀಗೆ ಧೈರ್ಯ ಕೊಡ್ತಾನೆ ಇರ್ತೀನಿ.. ಸ್ಪೂರ್ತಿಯಾಗಿ ನೀವಿದ್ದೀರಾ.. ಇನ್ನೇನು ಬೇಕು.. ಸಂಕಷ್ಟಗಳು ಸೂರ್ಯನ ಮುಂದೆ ಮಂಜಿನ ಹನಿಯಾಗುತ್ತದೆ"
"ಎಷ್ಟು ಚೆನ್ನಾಗಿ ಮಾತಾಡ್ಲಿಕೆ ಹತ್ತಿ.. ಸೂಪರ್ ಸೀಮಾ.. ನಿನ್ನ ಮಾತುಗಳು ಕೇಳೋಕೆ ಬಾಳ ಚಂದ"
"ಸವಿತಕ್ಕ ಸಕತ್.. ನಮ್ಮ ಭಾಷೆ ಎಷ್ಟು ಚೆನ್ನಾಗಿ ಮಾತಾಡ್ತೀರಾ.. ಸೂಪರ್"
"ಬೆಳಗಾವಿಯಾದರೇನು ಬೆಂಗಳೂರು ಆದರೇನು ಕಲೀಬೇಕು ಮೊದಲು ಮಾತಾಡಲು.. ಅಂತ ಶ್ರೀ ಯಾವಾಗಲೂ ವಿಷುವರ್ಧನ್ ಚಿತ್ರದ ಹಾಡು ಹೇಳ್ತಾ ಇರ್ತಾರೆ ಅಲ್ಲವೇ.. "
"ಅಯ್ಯೋ ಸವಿತಕ್ಕ ಶ್ರೀ ಬಗ್ಗೆ ಮತ್ತು ಸಿನಿಮಾ ಹಾಡಿನ ಬಗ್ಗೆ ಹೇಳಬೇಡಿ.. ಯಾವ ಹಾಡು ಆದರೂ ಸರಿ ಅದಕ್ಕೆ ತಮ್ಮ ಪದಗಳನ್ನು ಹಾಕಿ ನಗಿಸ್ತಾರೆ.. "
"ನೀನೇನು ಕಮ್ಮಿ ಸೀಮಾ.. ಶ್ರೀ ಗುಡಿ ಕಟ್ಟಿದರೆ ನೀ ಕಳಸ ಇಡ್ತೀಯಾ.. ನಿಮ್ಮಿಬ್ಬರ ಜುಗಲ್ ಬಂದಿ ಬಾಳಾ ಚಲೋ ಇರ್ತಾವೆ.... "
ಇಬ್ಬರೂ ಜೋರಾಗಿ ನಕ್ಕರು.. ಪಾನಿ ಪುರಿ ಗಾಡಿಯ ಸದ್ದಿಗೆ ಇಬ್ಬರೂ ಮುಸಿ ಮುಸಿ ನಕ್ಕು.. ಪಾನಿ ಪುರಿ ಸವಿಯಲು ಇಬ್ಬರೂ ಒಮ್ಮೆ ಆಲಂಗಿಸಿಕೊಂಡು ಹೆಗಲ ಮೇಲೆ ಕೈ ಇಟ್ಟು ಮೆಟ್ಟಿಲು ಹತ್ತಿ ಹೊರಟರು.. !
ಸೀಮಾ +ಸವಿತಾ = ಸೀಮಿತ |
****
ಜೀವನ ಕಾಲ್ಪನಿಕ ಕಥಾವಸ್ತುವಲ್ಲ ಅಂತಾರೆ.. ಜೀವನ ನಿಜ ಅಂತಾರೆ.. ಆದರೆ ಕಾಲ ತಂದು ಒಡ್ಡಿದ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಸಾಕ್ಷತ್ಕಾರ ಅಂತ ಅಣ್ಣಾವ್ರು ಸಾಕ್ಷತ್ಕಾರ ಚಿತ್ರದಲ್ಲಿ ಹೇಳಿದಂತೆ.. ಬದುಕು ಕೊಟ್ಟ ಪರೀಕ್ಷೆಯಲ್ಲಿ ಗೆದ್ದವರು ಯಾರೋ.. ಸೋತವರು ಯಾರೋ ಎಂದು ಯೋಚಿಸದೆ... ಬಂದ ಬದುಕನ್ನು ಕಟ್ಟಿ ನೆಡೆವ ಧೈರ್ಯ ಸಿಗುವುದು ಯಾವಾಗ.. ಮನವನ್ನು ಅರಿತ ಸಂಗಾತಿ ಜೊತೆಯಾದಾಗ..
ಸವಿತಾ ಸೀಮಾ ಮುಖಾ ಮುಖಿ ಭೇಟಿಯಾಗಲಿಲ್ಲ.. ಆಗಿದ್ದರೆ ಈ ಲೇಖನ ಬರುತ್ತಿರಲಿಲ್ಲ.. ಹ ಹ ಹ..
ಪ್ರಶ್ನೆ ಅದಲ್ಲ.. ಕೋ ಕೋ ಆಟದಲ್ಲಿ ಒಬ್ಬರು ಓಡಿ ಓಡಿ ಸುಸ್ತಾಗಿ ಇನ್ನೊಬ್ಬರಿಗೆ ಕೊಕ್ ಕೊಟ್ಟು ಪಂದ್ಯ ಮುಂದುವರೆಸುವಂತೆ.. ನನ್ನ ಬದುಕಲ್ಲಿ ಇರುವ ಇವರಿಬ್ಬರು ನನ್ನ ಬದುಕಿನ ಪಂದ್ಯವನ್ನು ಬೀಳದಂತೆ ಎತ್ತಿ ನಿಲ್ಲಿಸುತ್ತಿದ್ದಾರೆ.. ಇವರ ಜೊತೆಯಲ್ಲಿ ಒಂದು ಕಡೆ ಶೀತಲ್ ಅಪ್ಪ ನಾನಿದ್ದೇನೆ ಜೊತೆಯಲ್ಲಿ ಅಂದರೆ.. ಅತ್ತ ಕಡೆಯಿಂದ ಹಾಯ್ ಅಮ್ಮ ನಾ ನಿನ್ನ ಜೊತೆ ಎಂದು ಐಶ್ವರ್ಯ ಕಿರು ನಗೆ ಬೀರುತ್ತಾಳೆ..
ಬದುಕು ಒಂದು ರೈಲು ಬಂಡಿ.. ಇಂಧನ ಹಾಕುತ್ತಲೇ ಇರಬೇಕು.. ಮುಂದೆ ಸಾಗುತ್ತಲೇ ಇರಬೇಕು.. !!
ಇಂದು ಸವಿತಾಳ ಜನುಮದಿನ... ಒಂದು ಸಾರ್ಥಕ ಬದುಕನ್ನು ಕಂಡ ಆ ಮಹಾನ್ ಶಕ್ತಿಗೆ ಒಂದು ಅಭಿನಂದನೆಗಳು.. ಮತ್ತೆ ಸದಾ ನೆನಪಲ್ಲಿ ಇರುವ ಸಾರ್ಥಕತೆ ಅದೇ ಸವಿತಾರ್ಥಕತೆ.. !