ನಾವು ಚಿಕ್ಕವರಾಗಿದ್ದಾಗ.. ದೊಡ್ಡವರ ಚಪ್ಪಲಿಗಳನ್ನು ಹಾಕಿಕೊಂಡು ನೆಡೆಯುವ ಅಭ್ಯಾಸ ಇರುತ್ತದೆ.. ಅದೇನೋ ಅರಿಯದು.. ದೊಡ್ಡವರ ಚಪ್ಪಲಿಗಳು ಅಥವ ಷೂಗಳನ್ನೂ ಹಾಕಿಕೊಂಡು ಅಸಡ ಬಿಸಡ ನೆಡೆಯುವುದರಲ್ಲಿ ಏನೋ ಒಂದು ಖುಷಿ.. !
ಅಪ್ಪ ಮೇರುವ್ಯಕ್ತಿತ್ವದ ದಂತ ಕತೆ.. ಚಿಕ್ಕವರಾಗಿದ್ದಾಗಿನಿಂದ ಅವರ ಬಣ್ಣ ಹಚ್ಚಿದ ಅನುಭವ.. ತಾನು ಅಪ್ಪನಂತೆ ಆಗಬೇಕೆಂದು.. ಅವರು ತುಳಿದ ಹಾದಿಯಲ್ಲಿಯೇ ಆದರ್ಶ ಬದುಕನ್ನು ಕಟ್ಟಿಕೊಂಡವರು ಲೋಹಿತ್ ಅನ್ನುವ ಹೆಸರಿನಿಂದ ಮೊದಲುಗೊಂಡು.. ಅಪ್ಪನ ಹಾದಿಯಲ್ಲಿಯೇ ನೆಡೆದು ಪುನೀತ್ ರಾಜಕುಮಾರ್ ಹೆಸರಿನಿಂದ ಲೋಕಪ್ರಿಯರಾದವರು..
ಆ ಸ್ಟಾರ್ ಈ ಸ್ಟಾರ್ ಅಂತ ನೂರೆಂಟು ಹೆಸರು.. .. ಸ್ಟಾರುಗಳು ಬರುತ್ತಾರೆ... ಆದರೆ ಯಾಕೋ ಪುನೀತ್ ಇವರೆಲ್ಲರಿಗಿಂತ ಭಿನ್ನ ಹಾದಿ ತುಳಿದು ತಮ್ಮನ್ನೇ ಪುನೀತರನ್ನಾಗಿ ಮಾಡಿಕೊಂಡರು..
ವಸಂತಗೀತ ಚಿತ್ರದಲ್ಲಿ ಪುಟ್ಟ ಮಗುವಾಗಿ ಕುಣಿದು ನಲಿದು "ಏನು ಸಂತೋಷವೋ ಏನು ಉಲ್ಲಾಸವೋ" ಎಂದು ಹಾಡುತ್ತಾ ಕುಣಿದು.. ತನ್ನನು "ಭಾಗ್ಯವಂತ" ಎಂದು ತಿಳಿದು ಭಕ್ತಿ ಪ್ರಹ್ಲಾದನಾದ.. ಅಣ್ಣಾವ್ರು ಆರ್ಭಟಿಸಿದ ಪಾತ್ರದ ಮುಂದೆ ಗಡ ಗಡ ನಡುಗುತ್ತಲೇ, ಅಣ್ಣಾವ್ರ ಎದುರು ಪಾತ್ರ ಮಾಡಿದ ಲೋಹಿತ್.. ಮತ್ತೆ ಮತ್ತೆ ಪುಟ್ಟ ಪುಟ್ಟ ಪಾತ್ರಗಳಲ್ಲಿ ಮಿಂಚಿದರು..
ನನ್ನ ಹೆಸರು.. ರಾಮ್ ದೊಡ್ಡವನಾದ ಮೇಲೆ ರಾಮ್ ಪ್ರಸಾದ್ ಅಂತ ಇಟ್ಕೋತೀನಿ ಅಂತ ವಿಭಿನ್ನವಾದ ಶೈಲಿಯಲ್ಲಿ ಹೇಳುತ್ತಾ.. ಚಲಿಸುವ ಮೋಡಗಳಲ್ಲಿ ತಾನು ಕರಗಿ ಹೋದ ಪುನೀತ್ ನಮ್ಮೆಲ್ಲರ ಹೃದಯದಲ್ಲಿ ವಿಭಿನ್ನವಾಗಿ ನಿಲ್ಲುತ್ತಾರೆ..
ಕಸ್ತೂರಿ ನಿವಾಸದಲ್ಲಿ ಅಣ್ಣಾವ್ರ ಪಾತ್ರ ಹೇಳುತ್ತದೆ.. :"ಕೊಟ್ಟಿದ್ದನ್ನ ಹೇಳಬಾರದು.. ಕೊಡೋದನ್ನ ಮರೆಯಬಾರದು" .. ತನ್ನ ಪುರುಸೊತ್ತು ಇಲ್ಲದ ಸಿನಿಪಯಣದಲ್ಲಿ ಹತ್ತಾರು ಚಟುವಟಿಕೆಗಳನ್ನು ಮಾಡುತ್ತಾ, ಅನೇಕಾನೇಕ ಸಮಾಜಮುಖಿ ಕೆಲಸ ಮಾಡುತ್ತಾ.. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಎಂದು ಬದುಕಿ ತೋರಿಸಿದರು..
ಬದುಕಿದ್ದಾಗ ಅವರ ಸಮಾಜಮುಖಿ ಚಟುವಟಿಕೆಯನ್ನು ಎಲೆ ಮರೆಯ ಕಾಯಿಗಳ ಹಾಗೆ ನೋಡಿಕೊಂಡಿದ್ದ ಪುನೀತ್.. ತಮ್ಮ ಇಹಲೋಕದ ಜೀವನ ಮುಗಿಸುತ್ತಿದ್ದಂತೆ, ಅವರ ಸಮಾಜಮುಖಿ ಕಾರ್ಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಕೆಲಸಗಳ ವಿವರ ಓಡಾಡುತ್ತಿದೆ..
ಬದುಕಿದ್ದಾಗ ಬದುಕಿ, ಹೋದಮೇಲೂ ಬದುಕಿ ಎನ್ನುವ ಉದಾತ್ತ ಜೀವನದ ಪರಿ ಇದು..
ಕಾಂತಾ ಆಕಾಶ್ ನೋಡಿದೆಯ ಅಂತ ನನ್ನ ಆಪ್ತ ಗೆಳೆಯ ಶ್ರೀಕಾಂತ್ ಕೇಳಿದಾಗ.. ಹೋಗಲೇ ಯಾಕೋ ನೋಡಬೇಕು ಅನ್ನಿಸಿಲ್ಲ ಅಂತ ಪ್ರಾಮಾಣಿಕವಾಗಿ ಹೇಳಿದ್ದೆ.. ನಮ್ಮ ಕನ್ನಡ ಚಿತ್ರಗಳಲ್ಲಿ ಆ ರೀತಿಯ ನೃತ್ಯ, ಹೊಡೆದಾಟ ಮಾಡುವರು ಕಡಿಮೆ ಕಣೋ.. ತೆಲುಗು ನಟರು ಮಾಡುವಂತೆ ನೃತ್ಯ, ಹೊಡೆದಾಟದ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸುತ್ತಾರೆ ನಮ್ಮ ಪುನೀತ್ ರಾಜ್ ಕುಮಾರ್ ಎಂದಾಗ ಮನಸ್ಸಿಗೆ ಅಷ್ಟು ನಾಟಿಸಿಕೊಳ್ಳದ ನಾನು.. ಅವರ ಅರಸು ಚಿತ್ರ ನೋಡಿ ಮಂತ್ರ ಮುಗ್ಧನಾದೆ..
"ಅಜ್ಜಿ ನನಗೆ ತುಂಬಾ ಹೊಟ್ಟೆ ಹಸೀತಾ ಇದೆ.. ಒಂದು ಬಾಳೆ ಹಣ್ಣು ಕೊಡ್ತೀಯ... ಒಂದು ತಿಂಗಳಾದ ಮೇಲೆ,, ನಿನಗೆ ಒಂದು ಲಕ್ಷ ಕೊಡ್ತೀನಿ" ಅಂತಹ ಹೇಳುವ ದೃಶ್ಯ.. ಹೊಟ್ಟೆ ಹಸಿದ ಕಾರಣ.. ಬಾಳೆ ಹಣ್ಣನ್ನು ತಿಂದದ್ದೇ ಅಷ್ಟೇ ಅಲ್ಲದೆ, ಬಾಳೆ ಹಣ್ಣಿನ ಸಿಪ್ಪೆಯಲ್ಲಿ ಅಂಟಿಕೊಂಡಿದ್ದ ಬಾಳೆ ಹಣ್ಣಿನ ಅಂಶವನ್ನು ನೆಕ್ಕಿ ನೆಕ್ಕಿ ತಿನ್ನುವ ದೃಶ್ಯದಲ್ಲಿ ಅಕ್ಷರಶಃ ಅದ್ಭುತ ಕಲಾವಿದ ನೋಡಲು ಸಿಕ್ಕಿದರು..
ಅಲ್ಲಿಂದ ಮುಂದೆ ಅವರ ಅನೇಕ ಉತ್ತಮ ಚಿತ್ರಗಳನ್ನು ನೋಡಿದೆ... ವಂಶಿ ಚಿತ್ರದಲ್ಲಿ ಮಳೆಯಲ್ಲಿ ಮಾರುಕಟ್ಟೆಯಲ್ಲಿ ಲಾಂಗನ್ನು ಉಲ್ಟಾ ಹಿಡಿದು ಹೊಡೆದಾಡುತ್ತಿದ್ದಾಗ, ಅವರ ಅಮ್ಮನಿಗೆ ದುಷ್ಟನೊಬ್ಬ ಒದ್ದಾಗ.. ಲಾಂಗನ್ನು ಮತ್ತೆ ಉಲ್ಟಾ ತಿರುಗಿಸಿಕೊಂಡು, ಹೊಡೆದಾಡುವ ದೃಶ್ಯ ನನ್ನ ಅಚ್ಚು ಮೆಚ್ಚಿನದು..
ಅದೇ ಅರಸು ಚಿತ್ರದಲ್ಲಿ.. "ಒಬ್ಬಳು ಬದುಕು ಏನೆಂದು ಹೇಳಿದಳು.. ಇನ್ನೊಬ್ಬಳು ಬದುಕು ಹೀಗೆ ಎಂದು ತೋರಿಸಿದಳು.. ಇಬ್ಬರು ನನಗೆ ಎರಡು ಕಣ್ಣುಗಳಿದ್ದ ಹಾಗೆ.. " ಎನ್ನುವ ದೃಶ್ಯದ ಅಭಿನಯ ಇಷ್ಟವಾಗುತ್ತದೆ.. ಸಮಯದ ಗೊಂಬೆಯ ಅಂತಿಮ ದೃಶ್ಯದಲ್ಲಿ ಅಣ್ಣಾವ್ರು "ಯೋಗಿ ಪಡೆದದ್ದು ಯೋಗಿಗೆ ಜೋಗಿ ಪಡೆದದ್ದು ಜೋಗಿಗೆ" ಎಂದು ಹೇಳುವ ದೃಶ್ಯ ನೆನಪಿಗೆ ಬರುತ್ತದೆ..
ಮಿಲನ ಚಿತ್ರದಲ್ಲಿ ಜೀವನದಲ್ಲಿ ಸೋತು ಹೋಗಿದ್ದ ನಾಯಕಿಗೆ ಮತ್ತೆ ಬದುಕುವುದಕ್ಕೆ, ಜೀವನವನ್ನು ಗೆಲ್ಲುವುದಕ್ಕೆ ಸಹಾಯ ಮಾಡುತ್ತಾ ತಿಳಿ ಹೇಳುವ ಮಾತುಗಳ ಅಭಿನಯ ಇಷ್ಟವಾಗುತ್ತದೆ..
ಹುಡುಗರು ಚಿತ್ರದಲ್ಲಿ ತಮ್ಮ ಬದುಕನ್ನೇ ಹಾಳುಮಾಡಿಕೊಂಡರೂ ಸ್ನೇಹಿತನಿಗೆ ಅವನ ಒಲವಿನ ಹುಡುಗಿಯನ್ನು ಮದುವೆ ಮಾಡಿಸಿ ನಂತರ, ಅವರಿಬ್ಬರೂ ಬೇಡದ ಕಾರಣಕ್ಕೆ ದೂರವಾಗಲು ನಿರ್ಧರಿಸಿದಾಗ "ತಂದೆ ತಾಯಿಗಳು ಲವ್ ಲವ್ ಎಂದರೆ ಯಾಕೆ ಹೆದರು ಸಾಯ್ತಾರೆ ಗೊತ್ತಾ.. ನಿಮ್ಮಂತವರಿಂದಾಗಿ.. ಅವರು ಅಂದುಕೊಂಡಿದ್ದಕ್ಕಿಂತ ಒಂದು ಕೈ ಹೆಚ್ಚಾಗಿ ಬದುಕಿ ತೋರಿಸಿ.. ನಿಮಗೆ ಸಲಾಂ ಹೊಡೆಯುತ್ತಾರೆ.... ಈ ದೃಶ್ಯವನ್ನು ಹತ್ತು ಹಲವಾರು ಬಾರಿ ನೋಡಿದ್ದೇನೆ.
ಪೃಥ್ವಿ ಚಿತ್ರದ ಜಿಲ್ಲಾಧಿಕಾರಿಯ ಗತ್ತು, ಅಷ್ಟೇ ಸರಳ ಸ್ವಭಾವದ ಪತಿಯಾಗಿ, ತನ್ನ ಮಡದಿಗೆ ಸಾಂತ್ವನ ಹೇಳುವ ರೀತಿ.. "ನಮ್ಮ ಜಿಲ್ಲೆಯನ್ನು ಕಾಪಾಡಬೇಕು.. ನನ್ನ ನಂಬಿದ ಜನಕ್ಕೆ ಮೋಸ ಮಾಡಬಾರದು ಎನ್ನುವಂತಹ ಮಾತುಗಳನ್ನು ಹೇಳುವಾಗ ಅವರ ಅಭಿನಯ ಇಷ್ಟವಾಗುತ್ತದೆ..
ಹತ್ತು ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ನನಗೆ ಲೋಹಿತ್/ಪುನೀತ್/ ಅಪ್ಪು ಎಂದ ಕೂಡಲೇ ಕಣ್ಣಿಗೆ ಕಾಡುವುದು, ಕಾಣುವುದು ಬೆಟ್ಟದ ಹೂವು ಚಿತ್ರದ ಅಂತಿಮ ದೃಶ್ಯ.. ಇಡೀ ಚಿತ್ರದಲ್ಲಿ ಮನೆಯ ಜವಾಬ್ಧಾರಿಯನ್ನು ಹೊತ್ತು.. ನೆಡೆಯುತ್ತಿದ್ದರೂ ತನ್ನ ಕನಸಿನ ರಾಮಾಯಣ ದರ್ಶನಂ ಪುಸ್ತಕವನ್ನು ಕೊಂಡು ಕೊಳ್ಳಲು ಹತ್ತು ಹತ್ತು ಪೈಸೆ ಕೂಡಿಸುತ್ತಾ. .. ಹತ್ತು ರೂಪಾಯಿಗಳಾದ ಮೇಲೆ ಪುಸ್ತಕ ತೆಗೆದುಕೊಳ್ಳಬೇಕು ಎಂದುಕೊಂಡರೂ, ಮನೆಯಲ್ಲಿ ತನ್ನ ತಂಗಿ, ತಮ್ಮ, ಅಮ್ಮನಿಗಾಗಿ ಕಂಬಳಿ ತೆಗೆದುಕೊಂಡು.. ಅವರಿಗೆ ಹೊದ್ದಿಸಿ, ಮನೆಯ ಹೊರಗೆ ಕೂತು ಕಣ್ಣೀರಿಡುವ ದೃಶ್ಯ.. ನಿಜಕ್ಕೂ ಕಲಾವಿದ ಬೆಳೆಯುವ ಹಾದಿಯಲ್ಲಿದ್ದಾನೆ ಎಂದು ತೋರಿಸಿದ ಅಭಿನಯವದು..
ಸಾಮಾನ್ಯ ಚಿತ್ರರಂಗದಲ್ಲಿ, ಬಾಲಕಲಾವಿದರು, ನಾಯಕನಾಗಿ ಮತ್ತೆ ಮಿಂಚುವ ಸಾಧ್ಯತೆ ಕಡಿಮೆ.. ಅವರ ಮುಗ್ಧತೆಯೋ, ಮಾತಾಡುವ ದನಿಯೋ, ಸರಳವಾಗಿ ಅಭಿನಯಿಸುವ ನೈಜತೆಯೋ ಇವೆಲ್ಲಾ ದೊಡ್ಡವರಾಗಿ ನಾಯಕ ಪಟ್ಟಕ್ಕೆ ಏರಿದ ಮೇಲೂ ಜನರು ಅದೇ ರೀತಿಯ ಬಾಲಕಲಾವಿದನ ಮುಖವನ್ನೇ ನೆನಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ.. ಬಾಲಕಲಾವಿದರು ನಾಯಕರಾಗಿ ಗೆದ್ದ ಉದಾಹರಣೆಗಳು ಕಡಿಮೆ.. ಆದರೆ ಅದಕ್ಕೆ ಸವಾಲಾಗಿ ಗೆದ್ದು ನಿಂತವರು ಪುನೀತ್..
ಕತ್ತಲಲ್ಲಿ ನ್ಯಾಯವಿಟ್ಟನೋ ನಮ್ಮ ಶಿವ ಕಣ್ಣುಗಳ ಕಟ್ಟಿ ಬಿಟ್ಟನೋ.. ಚಲಿಸುವ ಮೋಡಗಳ ಹಾಡಿನಂತೆ.. ಬೆಳಕಿನ ಜಗತ್ತಿನಿಂದ ಜಗಮಗ ಬೆಳಗುವ ತಾರಾ ಮಂಡಲಕ್ಕೆ ಜಾರಿಯೇ ಹೋದರು..
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಎಂದು ಹಾಡುತ್ತಾ.. ಬೆಳ್ಳಿ ಪರದೆಯ ಮೇಲೆ ಜಾರಿ ಹೋದರು.. ಸಿನಿರಸಿಕರ ಮನದಲ್ಲಿ ಸದಾ ಹಸಿರಾಗುತ್ತಾರೆ..
ಮಾಡಿದ್ದು ಕೆಲವು ಚಿತ್ರಗಳಾದರೂ.. ಜೀವ ತುಂಬಿಸಿ ಅಭಿನಯಿಸಿ.. ಅಣ್ಣಾವ್ರ ಹಾದಿಯಲ್ಲಿ ಸಾಗಬಹುದು ಎಂದು ತೋರಿಸಿದರು.. ಆದರೆ ವಿಧಿಯ ಆಟ ಬೇರೆಯೇ ಇತ್ತು ಅನಿಸುತ್ತದೆ..
ಭಾಗ್ಯವಂತನಾಗಿ ಬಂದು ವಸಂತ ಮಾಸದಲ್ಲಿ ಗೀತೆ ಹಾಡುತ್ತಾ ಜೀವನ ಎಂದರೆ ಚಲಿಸುವ ಮೋಡಗಳು .. ಅದಕ್ಕೆ ಹೊಸಬೆಳಕು ಮೂಡುತ್ತಲೇ ಇರುತ್ತದೆ.... ನಾನು ಅಪ್ಪಾಜಿಯ ಜೊತೆ ಸೇರಿಕೊಂಡು ಎರಡು ನಕ್ಷತ್ರಗಳಾಗಿದ್ದೇವೆ.. ಜೀವನವನ್ನು ಅಪ್ಪಬೇಕು..ಎಂದು ತೋರಿಸಿಕೊಟ್ಟ ನಾಯಕ ಪುನೀತ್ ರಾಜ್ ಕುಮಾರ್..
ತಮ್ಮ ಬಾಲ್ಯ ಜೀವನದ ಅಭಿನಯಗಳಿಗೆ ಗುರು ಎಂದು ಹಿರಿಯ ಕಲಾವಿದ ಹೊನ್ನವಳ್ಳಿ ಕೃಷ್ಣ ಅವರನ್ನು ನೆನಪಿಸಿಕೊಳ್ಳುತಿದ್ದರು.. ಕೃಷ್ಣ ನೀನು ಮಾಡು ನಾನು ಮಾಡುತ್ತೇನೆ ಅಂತ ಹಲವಾರು ಸಂದರ್ಶನಗಳಲ್ಲಿ ಹೇಳುತ್ತಿದ್ದದ್ದು ಅವರ ಸರಳ ಮುಗ್ಧತೆಗೆ ಸಾಕ್ಷಿ..
ಆಡಿಸಿ ನೋಡು ಬೀಳಿಸಿ ನೋಡು.. ಉರುಳಿ ಹೋಗದು..
ಹೌದು..
ಬೆಳ್ಳಿ ಪರದೆಯ ಮೇಲೆ ಪುನೀತ್ ರಾಜ್ ಕುಮಾರ್ ಇಂದಿಗೂ .. ಎಂದಿಗೂ ಪವರ್ ಸ್ಟಾರ್..!!!
Missing him badly....
ReplyDelete💔💔💔😥
ReplyDeleteಓಂ ಶಾಂತಿ....
ReplyDeleteಸತ್ಯ ಸಂಗ್ರಹಣೆ
ReplyDeleteಭಾವುಕನಾದೆ .... ಲೋಹಿತನ ಎಲ್ಲಾ ಚಲನಚಿತ್ರಗಳು ಕಣ್ಣು ಮುಂದೆ ಬಂದವು ... ಅಮರನಾದನು ರಾಜಕುಮಾರ .. ತನ್ನ ಅಪ್ಪಾಜಿಯ ಅಪ್ಪಿಕೊಳ್ಳಲು ಹೋದ ಅಪ್ಪು
ReplyDelete