Tuesday, June 8, 2021

ನಾಗರಾಜ ಚಿಕ್ಕಪ್ಪ - ಬದುಕುವುದನ್ನು ಕಲಿಸಿದ ಯೋಗಿ ಪುರುಷರು!!!

ಶ್ರೀಕಾಂತಾ ಜಗತ್ತಿಗೆ ಅಳುತ್ತಾ ಬರ್ತೀವಿ.. ಆದರೆ ನಗು ನಗುತ್ತಾ ಜೀವನ ಸಾಗಿಸಬೇಕು.. 

ನಾಗರಾಜ ಚಿಕ್ಕಪ್ಪ ಈ  ಮಾತನ್ನು ಹೇಳಿದಾಗ ತಕ್ಷಣ ನನಗೆ ನೆನಪಿಗೆ ಬಂದದ್ದು ಅಮಿತಾಬ್ ಬಚ್ಚನ್ ಅವರ ಮುಕದ್ದರ್ ಕಾ ಸಿಕಂದರ್ ಚಿತ್ರದ "ರೋತೇ ಹುವೇ ಆತೇ ಹೇ ಸಬ್.. ಹಸ್ತಾ ಹುವಾ ಜೋ ಜಾಯೆಗಾ ಓ ಮುಕದ್ದರ್ ಕಾ ಸಿಕಂದರ್ ಜಾನೇಮನ್ ಕೆಹಲಾಯೇಗ.. "

ಅವರ ನಗು.. ತಮ್ಮನ್ನೇ ತಾವು ಹಾಸ್ಯ ಮಾಡಿಕೊಂಡು ನಗುವ ಪರಿ ಯಾವ ಮಟ್ಟದ್ದು ಎಂದರೆ.. ಈ ಘಟನೆ ಉದಾಹರಣೆ.. 

ಕಳೆದ ವರ್ಷ ಇದೆ ಮೇ ತಿಂಗಳ ಅಂತ್ಯದಲ್ಲಿ ಲಾಕ್ ಡೌನ್ ಇದ್ದರೂ.. ಅವರ ಮನೆಗೆ ಹೋಗಿದ್ದೆ.. ಅವರ ಆರೋಗ್ಯ ತುಸು ಏರು ಪೇರಾಗಿತ್ತು.. 

"ಹೇಗಿದ್ದೀರಾ ಚಿಕ್ಕಪ್ಪ" ಅಂದೇ 

"ಶ್ರೀಕಾಂತಾ ನಾನು ನೋಡು ಹೀಗಿದ್ದೀನಿ.. ನನ್ನನ್ನು ಕರೆದುಕೊಂಡು ಹೋಗೋಕೆ ಯಮಕಿಂಕರರು ಬರ್ತಾರೆ.. ನಾಗರಾಜ ನೆಡೆಯೇರಿ ಹೋಗೋಣ ಅಂತಾರೆ.. ನಾನು ನೆಮ್ಮದಿಯಾಗಿ ತಿಂಡಿ ತಿನ್ನುತ್ತಾ.. ನೋಡ್ರಪ್ಪಾ.. ನನ್ನನ್ನು ಕರೆದುಕೊಂಡು ಹೋಗೋಕೆ ಆ ಕೋಣನ ಮೇಲೆ ಕೂತಿರುವ ನಿಮ್ಮ ಬಾಸನ್ನು ಕರೆದುಕೊಂಡು ಬನ್ನಿ.. ಆಮೇಲೆ ಮಾತಾಡೋಣ ಅಂತ ನನ್ನ ಪಾಡಿಗೆ ತಿನ್ನುತ್ತಾ ಕೂತೆ.. "

"ಆಗ.. ಯಮಕಿಂಕರರು  ತಮ್ಮ ಕೋಡುಗಳ ಮಧ್ಯೆ ತಲೆ ಕೆರೆದುಕೊಂಡು.. ಸೀದಾ ಯಮನ ಹತ್ತಿರ ಹೋಗಿ.. ಸ್ವಾಮಿ ಅವರು ಬರಲ್ವಂತೆ.. ನೀವೇ ಹೋಗಬೇಕಂತೆ.. ಅಂತಾರೆ.. "

"ಆಗ ಯಮರಾಜ.. ಎನ್ರೋ ಆ ನಾಗರಾಜನ ಗೋಳು.. ಹೋಗ್ಲಿ ಬಿಡಿ.. ಇನ್ನೊಂದಷ್ಟು ವರ್ಷ ಇರ್ಲಿ.. ಸುಮ್ಮನೆ ಇಲ್ಲಿ ಬಂದು ತಲೆ ತಿಂತಾನೆ.. ಅವನು ಕೇಳುವ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿರೋಲ್ಲ.. ಅಂತ ಯಮನೇ ಸುಮ್ಮನಾಗಿ ಬಿಟ್ಟಿದ್ದಾನೆ .. "

ಇದು ಅವರ ಹಾಸ್ಯ ಪ್ರಜ್ಞೆ.. 

ನನಗೆ ಹೊಟ್ಟೆ ಹುಣ್ಣಾಗುವಷ್ಟು ನಗು.. ಆದರೆ ಅವರು ತಮ್ಮ ದೇಹದಲ್ಲಿ ನೆಡೆಯುತ್ತಿದ್ದ ನೋವಿನ ಹೋರಾಟದ ನಡುವೆಯೂ ಸುತ್ತ ಮುತ್ತಲ ಜಗತ್ತನ್ನು ನಗುವಿನ ಅಲೆಗಳಲ್ಲಿ ತೇಲಿಸುತ್ತಿದ್ದ ಪರಿ ಅಚ್ಚರಿಗೊಳಿಸುತ್ತಿತ್ತು.. ಒಬ್ಬ ಮನುಷ್ಯ ಈ ಪಾಟಿ ತಮ್ಮ  ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುತ್ತಿದ್ದ ಪರಿ ಯಾವ ಯೋಗಿಗೂ ಕಮ್ಮಿ ಎನಿಸುತ್ತಿರಲಿಲ್ಲ.. !

ಯೋಗಿ ಎಂದಾಗ ನೆನಪಾಗುತ್ತೆ.. 

ಅವರ ಅಕ್ಕನ ಮಗ ಅಂದರೆ ನನ್ನ ಸೋದರತ್ತೆಯ ಮಗ ಶ್ರೀ ನಾಗಭೂಷಣ ಅವರ ಆಶ್ರಮದ ಬಗ್ಗೆ ನನ್ನ ಹಿಂದಿನ ಲೇಖನದಲ್ಲಿ ಪರಿಚಯ ಮಾಡಿಕೊಟ್ಟಿದ್ದೆ.. 

ಆ ಆಶ್ರಮದಲ್ಲಿ ನಮ್ಮ ಚಿಕ್ಕಪ್ಪ ದೊಡ್ಡಪ್ಪನ ಕುಟುಂಬ ಸೇರಿದಾಗ..  ನೆಡೆದ ಘಟನೆ ಇದು..

ಪೈಪ್ ಹಾಕಿ ತುಸು ಎತ್ತರದಿಂದ ನೀರನ್ನು ಬಿಡುವ ವ್ಯವಸ್ಥೆ ನಾಗಭೂಷಣ ಮಾಡಿದ್ದ.. ನಾಗರಾಜ ಚಿಕ್ಕಪ್ಪನವರಿಗೆ ತುಸು ಬೆನ್ನು ನೋವು ಕಾಡುತ್ತಿದ್ದರಿಂದ.. ಬಲವಂತವಾಗಿ ನೀರನ್ನು ಬೆನ್ನಿನ ಮೇಲೆ ಬಿಟ್ಟಾಗ ಅವರಿಗೆ ಹಾಯ್ ಅನಿಸಿತು.. ಚೆನ್ನಾಗಿದೆ ಕಣೋ ಅಂತ ಚಿಕ್ಕಪ್ಪ ಹೇಳಿದರು.. 

ಆ ಸಮಯದಲ್ಲಿ ನಾನು ಪೂರ್ತಿ ಒದ್ದೆ ಮುದ್ದೆಯಾಗಿದ್ದರೂ..ಈ ಸುಂದರ ಘಟನೆಯನ್ನು ನನ್ನ ಮೂರನೇ ಕಣ್ಣಿನಲ್ಲಿ ಸೆರೆಹಿಡಿಯಲು ಮುಂದಾದೆ.. 

ಯಾವಾಗಲೂ ತುಸು ಮುಂದಾಲೋಚನೆ ಮಾಡುವ ನನ್ನ ಇನ್ನೊಬ್ಬರು ಕುಮಾರ ಚಿಕ್ಕಪ್ಪ ತಕ್ಷಣ ಒಂದು ವಿಭೂತಿ, ಒಂದು ಕಾವಿ ಪಂಚೆ,  ಶಲ್ಯ ತಂದೆ ಬಿಟ್ಟರು.. ಆ ವಾತಾವರಣ ಇನ್ನಷ್ಟು ಸುಂದರವಾಯಿತು ತಕ್ಷಣ ಆಶ್ರಮದಲ್ಲಿದ್ದ ಛತ್ರಿ ಚಾಮರವನ್ನು  ತಂದರು.. ಭರ್ಜರಿ ದೃಶ್ಯವದು.. 


ಕಾಷಾಯ  ವಸ್ತ್ರದಲ್ಲಿ ಅಪ್ಪಟ ಯೋಗಿಯಾಗಿಯೇ ಕಾಣುತ್ತಿದ್ದರು... ಅವರಿಗೆ ಆ ಯೋಗಿಗಳ ಮೇಲೆ ಅಸಾಧ್ಯವಾದ ನಂಬಿಕೆ, ಗೌರವ, ಒಲವು ಇದ್ದದ್ದರಿಂದ ಅವರ ಆರಂಭಿಕ ಕೆಲ ವರ್ಷಗಳನ್ನು ಸಾಧು ಸಂತರು, ಸನ್ಯಾಸಗಳ ಜೊತೆಯಲ್ಲಿಯೇ ಕಳೆದು ಬಂದಿದ್ದರು ಎಂದು ಅವರೇ ಒಮ್ಮೆ ಹೇಳಿದ್ದರು.. ಆ ಬಲವಾದ ಸೆಳೆತದಿಂದ ಅವರ ಮೂರು ಗಂಡು ಮಕ್ಕಳಿಗೆ ಸಂತರ ಹೆಸರನ್ನೇ ಇಟ್ಟಿದ್ದಾರೆ.. ನರೇಂದ್ರ, ರಜನೀಶ, ಜ್ಞಾನೇಶ್ವರ.. 

ತಮ್ಮ ತುಂಬು ಕುಟುಂಬದಲ್ಲಿ ಯಾವಾಗಲೂ ನಗು ಇರಲೇಬೇಕು ಅಂತ ಒಂದಲ್ಲ ಒಂದು ರೀತಿಯಲ್ಲಿ ತಮಾಷೆ ಮಾತುಗಳನ್ನು ಆಡುತ್ತಲೇ ಇರುತ್ತಿದ್ದರು .. ಪದ್ಮ ಚಿಕ್ಕಮ್ಮ ಅರ್ಥಾತ್ ಅವರ ಮಡದಿ.. ತಮ್ಮ ಪತಿಗೆ ಇಂಜೆಕ್ಷನ್ ಕೊಡುವಾಗಲೆಲ್ಲ.. ನರ್ಸ್ ಪದ್ಮ ಬಂದಳು ಅಂತ ಹಾಸ್ಯಮಾಡುತ್ತಿದ್ದರು .. ಮೊಮ್ಮಕ್ಕಳು ತಾತಾ ತಾತಾ ಎಂದು ಅವರ ತಾತನಿಂದ ಪುರಾಣ ಪುಣ್ಯ ಕಥೆಗಳನ್ನು ಕೇಳುತ್ತಾ.. ಹಲವಾರು ಬಾರಿ ಅವರೇ ಪಾತ್ರಗಳಾಗಿ, ಮೊಮ್ಮಕ್ಕಳ ಕೈಯಿಂದ ಗದೆ, ಬಿಲ್ಲು, ಬಾಣಗಳಿಂದ ಏಟು ತಿಂದದ್ದು ಉಂಟು.. ಮೊಮ್ಮಕ್ಕಳಿಗೆ ಗೆಳೆಯನಾಗಿ, ಮಕ್ಕಳಿಗೆ ಮಾರ್ಗದರ್ಶಕರಾಗಿ ... ನಮ್ಮೆಲ್ಲರಿಗೂ ಹಾಸ್ಯದ ಗುರುವಾಗಿ, ಬದುಕನ್ನು ನೋಡುವ ಶೈಲಿಯನ್ನು ಕಲಿಸಿದ ನಾಗರಾಜ್ ಚಿಕ್ಕಪ್ಪನವರಿಗೆ ಈ ಅಕ್ಷರಗಳೇ ನಮನಗಳು.. 

ಚಿಕ್ಕಮ್ಮ ಅಕ್ಷರಶಃ ಸಾವಿತ್ರಿಯಂತೆ ಚಿಕ್ಕಪ್ಪನ ನೆರಳಾಗಿ ಅವರ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದರು.. ಕಾಲ ಕಾಲಕ್ಕೆ ಮಾತ್ರೆಗಳು, ಇಂಜೆಕ್ಷನ್, ಅವರ ಶುಶ್ರೂಷೆ ಎಲ್ಲವನ್ನು ಚಾಚೂತಪ್ಪದೆ ಸಹನಶೀಲರಾಗಿ ನೋಡಿಕೊಳ್ಳುತ್ತಿದ್ದರು .. 

ಶ್ರವಣ ಕುಮಾರನ ಕತೆ ನಮಗೆಲರಿಗೂ ಗೊತ್ತಿದೆ.. ಆದರೆ ನಾಗರಾಜ ಚಿಕಪ್ಪನ ಮನೆಯಲ್ಲಿ ಒಂದಲ್ಲ ಮೂರು ಮಂದಿ ಶ್ರವಣಕುಮಾರರು.. ತಮ್ಮ ಅಪ್ಪನ ಆರೋಗ್ಯವನ್ನು ಎಡಬಿಡದೆ ನೋಡಿಕೊಳ್ಳುತ್ತಿದ್ದರು.. ಸೊಸೆಯಂದಿರು ಮಗಳಾಗಿ ಮೂವರು ಸುಮ, ರೂಪ ಮತ್ತು ಆಶಾ ತಮ್ಮ ಮಾವನನ್ನ ಅಪ್ಪನಾಗಿ ನೋಡಿಕೊಳ್ಳುತ್ತಿದ್ದರು.. 

ಇಂತಹ ಒಂದು ತುಂಬು ಕುಟುಂಬದ ಯಜಮಾನರಾಗಿ ಸಾರ್ಥಕ ಬದುಕನ್ನು ಕಂಡು.. ಅನಾರೋಗ್ಯದ ನೋವಿನಲ್ಲೂ ನಗುವುದು ಹೀಗೆ ಎಂದು ಕಲಿಸಿಕೊಟ್ಟ ಚಿಕ್ಕಪ್ಪನಿಗೆ ನನ್ನ ನಮನಗಳು.. !

ಚಿಕ್ಕಪ್ಪ ಅವರ ತಂದೆ ತಾಯಿಯರನ್ನು, ಅಕ್ಕಂದಿರನ್ನು,ಅಣ್ಣಂದಿರನ್ನು, ತಮ್ಮನನ್ನು ಭೇಟಿ ಮಾಡಲು ಹೊರಟೆ ಬಿಟ್ಟರು. 

ಚಿಕ್ಕಪ್ಪ.. ನಿಮ್ಮ ಹಾಸ್ಯ ಪ್ರಜ್ಞೆ, ವಿಚಾರವನ್ನು ಮಂಥನ ಮಾಡುವ ಪರಿ.. ಒಳ್ಳೆಯದನ್ನು ಒಳ್ಳೆಯದರಿಂದ ಒಳ್ಳೆಯದಾಗಿ ತೆಗೆದು ಒಳ್ಳೆಯದನ್ನೇ ಬಡಿಸಿದ ರೀತಿ .. ತಮ್ಮನ್ನು ತಾವೇ ಹಾಸ್ಯ ಮಾಡಿಕೊಳ್ಳುತ್ತಾ ಬದುಕುವ ರೀತಿಯನ್ನು ಕಲಿಸಿದ ಚಿಕ್ಕಪ್ಪ ನೀವು ಸದಾ ನಮ್ಮೊಳಗೇ ಜೀವಂತ.. !

10 comments:

  1. ಅಕ್ಷರಷಃ ಎಲ್ಲ ಮಾತುಗಳೂ ಅಣ್ಣನಿಗೆ ಸಲ್ಲುತ್ತೆ... ಶ್ರೀಕಾಂತ

    ReplyDelete
  2. ಬದುಕನ್ನು ಭಾವಾಜೀ ತೆಗೆದುಕೊಳ್ಳುತ್ತಿದ್ದ ಪರಿ ಅನುಕರಣೀಯ, ನಿನ್ನ ಅಕ್ಷರ ನಮನ ಬಹಳ ಸೊಗಸಾಗಿದೆ, ಭಗವಂತ ಭಾವಾಜೀಯವರ ಆತ್ಮಕ್ಕೆ ಸದ್ಗತಿಯನ್ನು ದಯಪಾಲಿಸಲಿ ಓಂ ಶಾಂತಿಃ ಶಾಂತಿಃ.

    ReplyDelete
  3. ಚಿಕ್ಕಪ್ಪನ ಆತ್ಮಕ್ಕೆ ಶಾಂತಿ ಸಿಗಲಿ ಓಂ ಶಾಂತಿ

    ReplyDelete
  4. This is truly celebrating life....Nagraj Chikkappa will always remain in our thoughts and prayers🙏

    Om Shanti...🙏🙏🙏😔

    ReplyDelete
  5. ನಮ್ಮ ಕಣ್ಣೆದುರಿಗೆ ಒಬ್ಬ ಸತ್ಪುರುಷರ ಬದುಕನ್ನು ತೆರೆದಿಟ್ಟಿರುವಿರಿ. ಇದು ನಮಗೆಲ್ಲರಿಗೂ ಮಾರ್ಗದರ್ಶಕವಾಗಿದೆ. ಧನ್ಯವಾದಗಳು, ಗುರುರಾಜರೆ.

    ReplyDelete
  6. ಓಂ ಶಾಂತಿ
    ನಾಗರಾಜ ಭಾವನವರ ಶ್ರದ್ಧಾಂಜಲಿ ಬರಹ ಅರ್ಥಗರ್ಭಿತವಾಗಿದೆ. ಕೃತಯ ಜೊತೆಗೆ ಹಾಕಿರುವ ಛಾಯಾ ಚಿತ್ರ, ತುಂಬಾ ಚೊಕ್ಕವಾಗಿದೆ.ಮಕ್ಕಳು,ಸೊಸೆಯಂದಿರು ಬಹಳ ಶ್ರದ್ಧೆಯಿಂದ ಅವರನ್ನು ಕಾಪಾಡಿದ್ದಾರೆ.

    ಬಾವನವರಿಗೆ ಭಗವಂತ ಸದ್ಗತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ

    ReplyDelete
  7. Very nice explanation Srikantha. Real tribute to departed soul. Many happy moments, good experience and style of living are explained in a dignified manner. Thanks for sketching a brief but interesting moments with Nagaraj. May the soul take better and enlightened birth. It’s our humble prayer to thee. 🙏🙏🙏🙏

    ReplyDelete
  8. ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುವ ಅವರ ಗುಣ ಅನುಕರಣೀಯ. ಅವರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ 🙏🙏

    ReplyDelete
  9. ಚಿಕ್ಕಪ್ಪನವರು ಬದುಕನ್ನು ನಗುನಗುತ್ತಾ ಸ್ವೀಕರಿಸಿದ ಪರಿ ನಮಗೆಲ್ಲ ಅನುಕರಣೀಯ. ಅದನ್ನು ನೀನು ಸಹಜವಾಗಿ, ಸೊಗಸಾಗಿ ಪರಿಚಯಿಸಿದ್ದೀಯ ಶ್ರೀಕಾಂತ
    ಅವರ ಆತ್ಮಕ್ಕೆ ಶಾಂತಿ ಸಿಗಲಿ

    ReplyDelete