Saturday, May 29, 2021

ಕಾಡುವ ಕಾಡು ... !

ಸಂಗಮೇಶನ ತಲೆಯೊಳಗೆ ಗಡಿಗೆಯಷ್ಟು ವಿಷಯಗಳು ತುಂಬಿತ್ತು.. ನೂರೆಂಟು ಕಾರಣಗಳು,  ಹತ್ತಾರು ಅಡೆತಡೆಗಳು, ಹಲವಾರು ತಲೆನೋವುಗಳು.. ಅದನ್ನೆಲ್ಲಾ ಮರೆಯಲಿಕ್ಕಾಗಿ ಅಜ್ಞಾತ ಗುಂಪೊಂದು ಕರೆ ನೀಡಿದ ಚಾರಣಕ್ಕೆ ಹೊರಟೇ ಬಿಟ್ಟಿದ್ದ. 

ಆನ್ಲೈನ್ ನಲ್ಲಿ ಅರ್ಜಿ ತುಂಬಿ, ಅದಕ್ಕೆ ನಮೂದಿಸಿದ ಹಣವನ್ನು ಗೂಗಲ್ ಪೆ ಮೂಲಕ ಕಳಿಸಿದ್ದ.. ಮರಳಿ ಉತ್ತರ ಬಂದಿತ್ತು.. ಇಂತಹ ದಿನ.. ಇಷ್ಟು ಹೊತ್ತಿಗೆ .. ಇಂತಹ ಜಾಗಕ್ಕೆ ಬರಬೇಕು.. ಮತ್ತು ಪಟ್ಟಿ ಮಾಡಿದ ವಸ್ತುಗಳನ್ನು ತರಬೇಕು.. 

ಚಾರಣಕ್ಕೆ ಇವನು ಮೊದಲೋ.. ಇವನಿಗೆ ಚಾರಣ ಮೊದಲೋ.. ಆ ಗೊಂದಲ ಗೂಡಿನಿಂದಲೇ ಎಲ್ಲವನ್ನು ಅಣಿಗೊಳಿಸಿ... ಐದು ಕಿಮಿ ಇದ್ದ ಆ ಗುಂಪು ಹೇಳಿದ ಜಾಗಕ್ಕೆ ನೆಡೆದೆ ಹೊರಟಿದ್ದ.. 

ಅದೇನೋ ಹುಚ್ಚು.. ತಲೆ ಜೇನುಗೂಡಾದಾಗ.. ಜೇನು ನೊಣವನ್ನು ಹೊರಗೆ ಹಾರಿ ಬಿಡಲು ಇದೆ ಸರಿಯಾದ ಮಾರ್ಗ ಎಂದು.. ತನ್ನ ಮನೆಯಿಂದ ಹೊರಟ.. 

ಕಂಡು ಕಾಣದೇ ..  ಪರಿಚಯವಿದ್ದ ಜನರು.. ಅದೇ ಅಂಗಡಿ ಸಾಲು.. ಅದೇ ಮನೆಗಳು.. ಕತ್ತಲಿನಲ್ಲಿ ಜಗಮಗ ಬೆಳಕಿನಲ್ಲಿ ಓಲಾಡುತಿದ್ದ ಬೀದಿ ದೀಪದ ಕಂಬಗಳು.. ಮೂಲೆಯಲ್ಲಿ ನಿಂತು ಪದೇ ಪದೇ ಕೂಗುತ್ತಿದ್ದ  ನಾಯಿ .. ಯಾವುದು ಬದಲಾಗಿರಲಿಲ್ಲ.. 

ತನ್ನ ಗೆಳತಿಯ ಪಿಜಿ ಮುಂದೆ ಹಾದು ಹೋದಾಗ ಮನದಲ್ಲಿ ಒಂದು ಝೇಂಕಾರದ ದನಿ ಮೀಟಿ ಬಂದಿತ್ತು..  ಭೇಟಿ ಮಾಡಿ ಒಂದು ವಾರವಾಗಿತ್ತು.. ಮೊಬೈಲ್ ಮರೆತು ಹೋದ ಕಾರಣ ಸಂಪರ್ಕವಿರಲಿಲ್ಲ.. ಆದರೂ ಮೇಲ್ ಕಳಿಸಿದರೆ ಪುಟ್ಟದಾಗಿ ಐ ಯಾಮ್ ಫೈನ್ ಎಂದು ಉತ್ತರ ಕಳಿಸಿದ್ದಳು. 

ಸಂಗಮೇಶ ತನ್ನ ಮಾಮೂಲಿ ಅಂಗಡಿಯಲ್ಲಿ ಕಿಂಗ್ ಹಚ್ಚಿಸಿಕೊಂಡು ಹೊಗೆ ಬಿಡುತ್ತಾ ಮುಂದುವರೆದ 

ತನ್ನ ಗೆಳತಿಗೆ ಕೆಲವೇ ಕೆಲವು ಗೆಳೆತಿಯರಿದ್ದರು.. ಬಾಲ್ಯದಲ್ಲಿಯೇ ಅವಳ ಅಪ್ಪ ಅಮ್ಮ ಅಣ್ಣ ತಮ್ಮ ಅಕ್ಕ ಎಲ್ಲರೂ ಒಂದು ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದರಿಂದ ಅನಾಥಳಾದ ಅವಳನ್ನು ಅವಳ ನೆರೆಹೊರೆಯವರೊಬ್ಬರು ಅನಾಥಾಶ್ರಮಕ್ಕೆ ಸೇರಿಸಿದ್ದರು.. ಅಲ್ಲಿಂದ ಓದಿ ಮುಂದಕ್ಕೆ ಕೆಲಸ ಅಂತ ಸಿಕ್ಕಾಗ ಆಶ್ರಮ ಬಿಟ್ಟು ಪಿಜಿ ಸೇರಿ ತನ್ನ ಕಾಲ ಮೇಲೆ ತಾನು ನಿಂತಿದ್ದಳು.. 

ಅವಳ ಆಪ್ತ ಗೆಳತೀ ಮಧುವಿಗೆ ತುರ್ತು ಸಹಾಯ ಬೇಕಿದ್ದರಿಂದ ತಮಿಳುನಾಡಿನ ಮಧುರೈಗೆ ಹೋಗಿದ್ದಳು.. ಅವರಿಬ್ಬರ ಗೆಳೆತನ ಎಷ್ಟು ಬಲವಾಗಿತ್ತು ಎಂದರೆ.. ಅವಳು ಕರೆದಾಗಲೆಲ್ಲ ಕಣ್ಣನ್ನು ಕೂಡ ಮಿಟುಕಿಸದೆ... ಬಸ್ ಸೀಟ್ ನಿಗದಿ ಮಾಡಿ ಹೋಗುತ್ತಿದ್ದಳು.. ಹಲವಾರು ಬಾರಿ ಬಸ್ಸಲ್ಲಿ ಕೂತ ಮೇಲೆ.. ಕೆಲವೊಮ್ಮೆಊರು ತಲುಪಿದ ಮೇಲೆ ಮೆಸೇಜ್ ಮಾಡುತ್ತಿದ್ದಳು.. ಸಂಗಮೇಶ ಹಲವಾರು ಬಾರಿ  ಅವರಿಬ್ಬರ ಗೆಳೆತನದ ಮೇಲೆ ಕೋಪ ಬಂದರೂ ಅಷ್ಟು ಆಪ್ತ ಗೆಳೆತನ ಇರಬೇಕು ಬದುಕಿಗೆ ಎಂದು ತನಗೆ ತಾನೇ ಸಮಾಧಾನ ಪಟ್ಟುಕೊಂಡು ಅವಳಿಗೆ ಸಹಕಾರ ನೀಡುತ್ತಿದ್ದನು.. 

ರೀ ಸಿಗರೇಟು ಹಚ್ಚಿಸಿಕೊಂಡು ತಲೆ ಕೆರೆದುಕೊಂಡು ರಸ್ತೆ ಮಧ್ಯೆದಲ್ಲಿಯೇ ಹೋಗಿ.. ನಾವೆಲ್ಲಾ ಫುಟ್ ಪಾತ್ ಉಪಯೋಗಿಸುತ್ತೇವೆ.. ಪಕ್ಕದಿಂದ ಒಂದು ಬೈಕಿನವ ಕೂಗುತ್ತಾ ಹೋದಾಗ ಮತ್ತೆ ಇಹಲೋಕಕ್ಕೆ ಬಂದ ಸಂಗಮೇಶ.. 

ಮೇಘನಾಳ ಬಗ್ಗೆ ಯೋಚಿಸಿದಷ್ಟೂ ಅವನ ತಲೆ ಮೊಸರು ಗಡಿಗೆಯಾಗುತ್ತಿತ್ತು.. ಇಬ್ಬರ ಅನುರಾಗಕ್ಕೆ ಭರ್ತಿ ಮೂರು ವರ್ಷವಾಗಿತ್ತು.. ಕೆಲವೇ ವಾರಗಳಲ್ಲಿ ಮದುವೆಯಾಗುವವರಿದ್ದರು.. ಸಂಗಮೇಶನ ಮನೆಯಲ್ಲಿ ಯಾವುದೇ ತಕರಾರಿರಲಿಲ್ಲ.. ಎಲ್ಲರೂ ಮೇಘನಾಳನ್ನು ಒಪ್ಪಿದ್ದರು.. ಹಾಗಾಗಿ ಯಾವುದೇ ಸಮಸ್ಯೆ ಇರಲಿಲ್ಲ..

ಒಂದು ದೊಡ್ಡ ಸಾಫ್ಟ್ವೇರ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಳು. .ಸಂಗಮೇಶ ಒಂದು ದೊಡ್ಡ ಬಹು ಅಂತಾರಾಷ್ಟ್ರೀಯ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದ.. ಹಣಕಾಸಿನ ಸಮಸ್ಯೆಗಳು ಅವರಿಬ್ಬರಿಗೆ ತಾಕುತ್ತಿರಲಿಲ್ಲ.. ಮದುವೆಗೆ ಮುನ್ನವೇ ಇಬ್ಬರೂ ಸೇರಿ ಒಂದು ದೊಡ್ಡ ಫ್ಲಾಟ್ ಕೊಂಡು ಕೊಂಡಿದ್ದರು.. ಜೊತೆಗೆ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿ ಸಿದ್ಧ ಮಾಡಿಕೊಂಡಿದ್ದರು.. ಮದುವೆಯಾಗೋದು.. ಆ ಮನೆಯ ಗೃಹಪ್ರವೇಶ ಮಾಡೋದು  ಆಸೆಯಾಗಿತ್ತು.. 

ಇದಕ್ಕೆಲ್ಲ ಸಿದ್ಧತೆ ಮಾಡಿಕೊಳ್ಳುವಾಗ ದಿಢೀರ್ ಅಂತ ಮೇಘನಾ ಮದುರೈಗೆ ಹಾರಿದ್ದಳು.. ಸಂಗಮೇಶನ ಪ್ಲಾನ್ ಎಲ್ಲಾ ಉಲ್ಟಾ ಪಲ್ಟಾ ಆಗೋದರಿಲ್ಲಿತ್ತು.. ಆಗಲೇ ತಲೆ ಕೆಟ್ಟು ಈ ಚಾರಣಕ್ಕೆ ಹೊರಟಿದ್ದ.. 

"ಬಾನಿಗೆ ನೀಲಿಯ ಮೇಘಕ್ಕೆ ಬೆಳ್ಳಿಯ ಬಣ್ಣವ ತಂದವನೆ" ಹಾಡು ಮೊಬೈಲಿನಿಂದ ಹೊರಹೊಮ್ಮುತ್ತಿದ್ದಾಗಲೇ ತಿಳಿಯಿತು.. ತನ್ನ ಮೊಬೈಲ್ ಕರೆ ಬರುತ್ತಿದೆ ಎಂದು.. 

"ಹಲೋ".. 

"ಸಂಗಮೇಶ್ ಅವರ" 

"ಹೌದು ಸರ್"

"ಸರ್.. ಟಿ ಟಿ ಇಲ್ಲೇ ರಾಮ ಶ್ರೀ ಟಾಕೀಸಿನ ಮುಂದೆ ನಿಂತೈತೆ. ಬನ್ನಿ ಸರ್.. ಎಲ್ಲರೂ ಬಂದವ್ರೆ.. ನಿಮಗೆ ಕಾಯ್ತಾ ಇವ್ನಿ" 

"ಎರಡು ನಿಮಿಷ ಸರ್ ಬಂದೆ.. ಹತ್ತಿರದಲ್ಲಿಯೇ ಕಾಫೀ ಕಟ್ಟೆ ಹತ್ತಿರ ಬಂದೆ.. ಎರಡೇ ನಿಮಿಷ"

"ಸರಿ ಸರ್"

ಟಿ ಟಿ ಯಲ್ಲಿ ಕೂತ.. ಎಲ್ಲರ ಪರಿಚಯವಾಯಿತು.. ಎಲ್ಲರೂ ತನ್ನ ವಯಸ್ಸಿನವರೇ.. ಜೋಡಿ ಜೋಡಿ ಬಂದಿದ್ದರು.. ಸಹೋದ್ಯೋಗಿಗಳು.. ಪರಿಚಯದವರು.. ಗೆಳೆಯರು.. ಹೀಗೆ ಹನ್ನೊಂದು ಮಂದಿ ಇದ್ದರು.. ತಾನೊಬ್ಬ ಸೇರಿ ಹನ್ನೆರಡು.. ಡ್ರೈವರ್ ಒಬ್ಬ ಹದಿಮೂರು.. 

ತುಂಬಿ ತುಳುಕುತ್ತಿತ್ತು.. ಎಲ್ಲರ ಪರಿಚಯ ಆಗಿದ್ದರಿಂದ.. ಒಂದು ಅರ್ಧ ಘಂಟೆಯಲ್ಲಿಯೇ ಎಲ್ಲರೂ ಮಾತನಾಡತೊಡಗಿದರು.. ನಗು.. ಕಿರುಚಾಟ.. ಹಾಡಿಗೆ ನೃತ್ಯ ಎಲ್ಲವೂ ಸೊಗಸಾಗಿತ್ತು.. 

ಟಿ ಟಿ ಶರವೇಗದಿಂದ.. ಮಾಯಾನಗರಿಯಿಂದ ಹೊರಬಂದು.. ಕಾಡಿನ ಹಾದಿಯಲ್ಲಿ ಸಾಗುತಿತ್ತು.. ಸುತ್ತಲೂ ಕತ್ತಲು.. ಅಮಾವಾಸ್ಯೆ ರಾತ್ರಿ.. ಪಯಣ ಸಾಗುತಿತ್ತು.. ತಿರುಗಿ ನೋಡಿದ.. ಕುಣಿದು ಕುಪ್ಪಳಿಸಿದವರೆಲ್ಲಾ ಮೆಲ್ಲನೆ ತಮ್ಮ ತಮ್ಮ ಸೀಟು ಹಿಡಿದು.. ನಿದ್ರೆಗೆ ಜಾರಿದ್ದರು.. 

ಬೋರ್ ಆಗುತ್ತೆ ಅಂತ.. ಸಂಗಮೇಶ ಡ್ರೈವರ್ ಜೊತೆ ಮಾತಿಗೆ ಕೂತ.. ಅದು ಇದು ಎಂದು ಮಾತಾಡುತ್ತಾ.. ದಾರಿ ಸಾಗುತಿತ್ತು.. 

ಕಾಡಿನ ಮಧ್ಯೆ ಬಂದಿದ್ದರು.. ಇನ್ನೊಂದು ಒಂದು ಘಂಟೆ ದಾರಿ .. ಕಾಡಿನಿಂದ ಹೊರಬಂದು.. ಚಾರಣದ ದಿಕ್ಕಿಗೆ ಎರಡು ಘಂಟೆ ಕಾಲ ಪಯಣಿಸಿದರೆ ಚಾರಣದ ಆರಂಭದ ತಾಣ ಸಿಗುತ್ತಿತ್ತು.. ಅಲ್ಲಿಯೇ ಎಲ್ಲರೂ ನಿತ್ಯ ಕರ್ಮ ಮುಗಿಸಿ.. ಚಾರಣಕ್ಕೆ ಹೊರಡುವುದು.. ಇದು ಪ್ಲಾನ್ ಆಗಿತ್ತು.. 

ಮಾನವ ಒಂದು ಬಗೆದರೆ ದೈವ ಒಂದು ಬಗೆಯುತ್ತೆ ಅಲ್ಲವೇ.. 

ಚರ್ ಚರ್ ಅಂತ ಶಬ್ದ ಮಾಡುತ್ತಾ ಟಿ ಟಿ ಓಲಾಡಲು ಶುರು ಮಾಡಿತು.. 

"ಏನಾಯಿತು ಡ್ರೈವರಣ್ಣ... " 

"ಟೈಯರ್ ಪಂಚರ್ ಅನ್ನಿಸುತ್ತೆ ನೋಡ್ತೀನಿ ಇರಿ" ಎಂದು ಹೇಳುತ್ತಾ.. ಗಾಡಿಯನ್ನು ಒಂದು ಬದಿಗೆ ನಿಲ್ಲಿಸಿ.. ಕೆಳಗಿಳಿದ.. 

ಅವನನ್ನು ಸಂಗಮೇಶ ಅನುಸರಿಸಿದ.. ಉಳಿದವರು ಗಾಢವಾದ ನಿದ್ರೆಯಲ್ಲಿದ್ದರು.. 

"ಒಹೋ ಥತ್ ತೇರಿ ಕೆ.. ಪಂಚರ್ ಆಗೈತೆ.. ಅರೆ ಇಸ್ಕಿ ಎಲ್ದು ವೀಲು ಢಮಾರ್ ಸಾರು.. " 

"ಸರಿ ಏನ್ ಮಾಡೋದು"

"ಇರಿ ಸರ್.. ಯಾವುದಾದರೂ ಲಾರಿ ಬಸ್ಸು ಬಂದ್ರೆ.. ಅದರ ಜೊತೆ ಮುಂದಿನ ಸ್ಟಾಪಿಗೆ ಹೋಗಿ ಪಂಚರ್ ಹಾಕಿಸಬೇಕು"

"ಸರಿ ಸರಿ.  ಹಾಗಾದರೆ ಮೊದಲು ಟೈಯರ್ ಬಿಚ್ಚಿ.. ನಾನೂ ಸಹಾಯ ಮಾಡ್ತೀನಿ"

ಒಂದು ಹತ್ತು ನಿಮಿಷ ಗಾಡಿಯಲ್ಲಿದ್ದವರನ್ನು ಇಳಿಸಿ.. ಎರಡೂ ವೀಲುಗಳನ್ನು ಬಿಚ್ಚಿ.. ರಸ್ತೆ ಬದಿಗೆ ಕೂತು ಕಾಯತೊಡಗಿದರು.. 

ಕಾಡಿನ ಮಧ್ಯೆ ಆಗಿದ್ದರಿಂದ.. ಚೆಕ್ ಪೋಸ್ಟ್ ದಾಟಿ ಬರುವ ವಾಹನಗಳು ಮಾತ್ರ ಬರಲು ಅವಕಾಶವಿತ್ತು.. ಸಮಯ ಮೀರಿ ಬಂದ ವಾಹನಗಳು ಹೊರಗೆ ಕಾಯಬೇಕಿತ್ತು.. ಇವರ ಗಾಡಿಯೇ ಕೊನೆಯ ಕೆಲವು ಗಾಡಿಗಳಲ್ಲಿ ಒಂದಾಗಿತ್ತು.. ಹಾಗಾಗಿ ವಾಹನಗಳು ಸಿಗುವ ಸಾಧ್ಯತೆ ಕಮ್ಮಿ ಇತ್ತು.. ಆದರೆ ಬೇರೆ ದಾರಿ ಇರಲಿಲ್ಲ.. ಕಾಯುವುದೊಂದೇ ಕೆಲಸವಾಗಿತ್ತು.. 

ಸುಮಾರು ಒಂದು ಘಂಟೆ ಕಾದಮೇಲೆ ಅರಿವಾಗಿದ್ದು.. ಗಾಡಿ ಬರೋಲ್ಲ.. ಅದರ ಬದಲಿಗೆ ಒಂದು ಟೈರನ್ನು ತಳ್ಳಿಕೊಂಡು ಕಾಡಿನಂಚಿಗೆ ತೆಗೆದುಕೊಂಡು ಹೋಗಿ ಪಂಚರ್ ಹಾಕಿಸಿಕೊಂಡು.. ಮತ್ತೆ ಬಂದು ಸ್ಟೆಪ್ನಿ ವೀಲ್ ಬದಲಿಸಿಕೊಂಡು.. ರಿಪೇರಿ ಮಾಡಿದ ವೀಲ್ ಹಾಕಿಕೊಂಡು ಹೋಗುವುದು ಅಂತ ನಿರ್ಧಾರವಾಯಿತು.. 

ಚಿತ್ರ ಕೃಪೆ : ಅಂತರ್ಜಾಲ 

ಗಾಡಿಯಲ್ಲಿದ್ದವರು ತಾವು ಚಾರಣಕ್ಕೆ ತಂದಿದ್ದ ಟೆಂಟನ್ನೇ ಕಾಡಿನ ದಾರಿಯ ಬದಿಯಲ್ಲಿ ಹಾಕಿಕೊಂಡು ಮಲಗುವುದು ಅಂತ ನಿರ್ಧಾರ ಮಾಡಿದರು.. 

ಡ್ರೈವರ್ ಒಂದು ಟೈರನ್ನು ತಳ್ಳಿಕೊಂಡು ಹೋಗಿ ಬರುತ್ತೀನಿ ಅಂತ ಹೊರಟ.. ಸಂಗಮೇಶ ತಾನೂ ಬರುತ್ತೇನೆ ಅಂತ ಡ್ರೈವರ್ ಹಿಂದೆ ಹೊರಟ.. 

ಡ್ರೈವರ್ ವೇಗಕ್ಕೆ ಸಂಗಮೇಶನ ವೇಗ ತಾಕುತ್ತಿರಲಿಲ್ಲ.. ಹಾಗಾಗಿ ಒಂದತ್ತು ನಿಮಿಷದಲ್ಲಿಯೇ ಕಣ್ಣಿಗೆ ಕಾಣದಷ್ಟು ಕತ್ತಲಲ್ಲಿ ಡ್ರೈವರ್ ಸಾಹೇಬ್ರು ಮರೆಯಾದರೆ.. ಸಂಗಮೇಶ ತಿಣುಕಾಡುತ್ತಾ ಮೊಬೈಲ್ ದೀಪದ ಸಹಾಯದಲ್ಲಿ ನೆಡೆಯುತ್ತಾ ಸಾಗಿದ. ಹಿಂದಕ್ಕೆ ಹೋಗಲು ಕಷ್ಟ.. ಮುಂದಕ್ಕೆ ಹೋಗಲು ದಾರಿ ತಿಳಿದಿಲ್ಲ.. ಥೋ ಬರಬಾರದಿತ್ತು.. ಅಂತ ತನಗೆ ತಾನೇ ಬಯ್ದುಕೊಂಡು ಹೆಜ್ಜೆ ಹಾಕುತ್ತ ಹೋದ.. 

ಗಿಡದ ಮರೆಯಿಂದ ಆ ಕತ್ತಲಿನಲ್ಲಿ "ಲೋ ಯಾರ್ಲಾ ಅದು ಒಬ್ಬನೇ ಒಂಟಿರೋದು" ಸದ್ದು ಬಂದ ದನಿಗೆ ಆ ಕತ್ತಲಿನಲ್ಲಿ ಮೊಬೈಲ್ ಹಿಡಿದ.. ಮೊಬೈಲ್ ಚಾರ್ಜ್ ಕಡಿಮೆ ಆಗಿದ್ದರಿಂದ.. ಮೆಲ್ಲನೆ ಅದು ಸೋತು.. ಮೊಬೈಲ್ ಆಫ್ ಆಯಿತು.. ಸುತ್ತಲೂ ಗವ್ ಗತ್ತಲೆ.. ಕೊಂಚ ಬೆವರಿದ.. ಆದರೆ ಮನಸ್ಸು ಗಟ್ಟಿಯಾಗಿತ್ತು.. "ನಾನು ಕನ್ಲಾ ಸಂಗಮೇಶ ಹುಬ್ಳಿಯಾವ" 

"ಎಲ್ಲಿಗೆ ಒಂಟಿದಿ.. "

ಪುಟ್ಟದಾಗಿ ತನ್ನ ಚಾರಣದ ಕತೆ ಹೇಳಿದ

"ಸರಿ ನಾನು ಒಬ್ನೇ ಇವ್ನಿ.. ಜೊತೆಗೆ ಬತ್ತೀನಿ" ಅಂತ ಅಂದಾಗ "ಸರಿ ಕನ್ಲಾ" ಅಂದ 

ಸುಯ್ ಅಂತ ಒಂದು ಆಕೃತಿ ಕಣ್ಣ ಮುಂದೆ ಬಂತು.. ಬೆಳ್ಳನೆ ವಸ್ತ್ರ.. ನೀಳವಾದ ತಲೆಗೂದಲು.. ಆ ಕತ್ತಲಿನಲ್ಲಿಯೂ ಯಾಕೋ ಇದು ವಿಚಿತ್ರ  ಕಂಡ ಅನುಭವ ಸಂಗಮೇಶನಿಗೆ.. 

"ಯಾರ್ಲಾ ನೀನು.. "

ಅದರ ಪರಿಚಯ ಹೇಳಿತು.. ಸಂಗಮೇಶನಿಗೆ ತನ್ನ ತಲೆಯೊಳಗೆ ಬೇರೆಯವರ ಬಗ್ಗೆ ಯೋಚಿಸೋಕೆ ಆಗದಷ್ಟು ತನ್ನ ಬವಣೆಗಳೇ ತುಂಬಿದ್ದರಿಂದ.. ಅದರ ಪರಿಚಯ ಇವನ ತಲೆಯೊಳಗೆ ಹೋಗಲಿಲ್ಲ.. 

"ಬಾರೋ ಜೊತೆಯಾಗೇ ಹೋಗುಮ" ಅಂತ ಹೇಳಿ ಅದರ ಹೆಗಲ ಮೇಲೆ ಕೈ ಹಾಕಿ ನೆಡೆದ. ಮೊಬೈಲ್ ಆಫ್ ಆಗಿತ್ತು.. ಕತ್ತಲು .. ತನ್ನ ಜೊತೆ ಬರುತ್ತಿರುವುದು ಯಾರೋ ಏನೋ ಅರಿವಿಲ್ಲ.. ತನ್ನ ಯೋಚನೆಗಳಿಗೆ ಹುಲ್ಲು ಹಾಕುತ್ತಾ.. ಅದು ತನ್ನನ್ನು ಆವರಿಸಿಕೊಳ್ಳಲು ಬಿಡುತ್ತಾ.. ಪಕ್ಕದಲ್ಲಿ ಅದು ಏನು ಹೇಳುತ್ತಿತ್ತೋ ಅದನ್ನು ಕೇಳುವ ಯಾವುದೇ ಆಸಕ್ತಿ ತೋರದೆ ಹೆಜ್ಜೆ ಹಾಕ ತೊಡಗಿದ.. 

ಎದುರಿಗೆ ಒಂದು ಲಾರಿ ಹಾದು ಹೋಯಿತು ..ಆ ಬೆಳಕಿನಲ್ಲಿ ಯಾಕೋ ಪಕ್ಕಕ್ಕೆ ನೋಡಿದಾಗ ಒಮ್ಮೆ ಮೈ ಬೆವರಿತು .. ಬೆಳ್ಳಗಿನ ವಸ್ತ್ರದ ಆ ಆಕೃತಿಗೆ ಕಾಲುಗಳೇ ಇರಲಿಲ್ಲ.. ದಂತ ವಕ್ರವಾಗಿತ್ತು.. ತೇಲಿದಂಗೆ ಬರುತಿತ್ತು.. ಇವನು ಕೈ ಇಟ್ಟಿದ್ದ ಹೆಗಲು ಮಾತ್ರ ಗಟ್ಟಿಯಾಗಿ ಇದ್ದಂತೆ ಭಾಸವಾಗುತಿತ್ತು.. 

"ಯಾರ್ಲಾ ನೀನು " ಧೈರ್ಯ ಮಾಡಿ ಕೇಳಿಯೇ ಬಿಟ್ಟಾ.. 

"ಅಲ್ಲ ಲೇ ನಾ ಆಗ್ಲೇ ಯೋಳಲಿಲ್ವ.. ನಾನು ದೈಯ್ಯಾ ಅಂತ. "

"ಹಾ ದೈಯ್ಯಾವೇ.. ಸರಿ ಬೇಗ ಬೇಗ ಹೆಜ್ಜೆ ಹಾಕು" ಎನ್ನುತ್ತಾ ಮತ್ತೆ ಹೆದರದೆ ಅದರ ಹೆಗಲ ಮೇಲೆ ಕೈ ಇಟ್ಟು .. ಒಮ್ಮೆ ಅದುಮಿ ಬಿರ ಬಿರನೇ ಹೆಜ್ಜೆ ಹಾಕತೊಡಗಿದ... 

"ನಿನಗೆ ಹೆದರಿಕೆ ಆಗಲಿಲ್ವೆ.. ಹೆದರಿಕೆ ಆಗೋಲ್ವೇ"

"ಹೋಗಲೇ ಹೆದರಿಕೆ ಆಗೋಕೆ ನಾನೇನು ಸತ್ತು ಹೋಗಿದ್ದೀನಾ.. ನೀನು ಸತ್ತ ಮೇಲೆ ಭೂತವಾಗಿದ್ದೀಯ.. ನನ್ನನ್ನು  ಬದುಕಿದ್ದಾಗಲೇ ಭೂತಗಳು ಗೋಳು ಹುಯ್ಕೋತ ಇವೆ.. "

"ಸರಿ ಸರಿ ಎದೆಗಾರ ನೀನು.. ಈ ದಾರಿಯಲ್ಲಿ ಅಮಾವಾಸ್ಯೆ ರಾತ್ರಿಯಲ್ಲಿ ಎಷ್ಟೋ ಜನರನ್ನು ಮಾತಾಡಿಸಿದ್ದೀನಿ. ಹೆದರಿ ಜ್ವರ ಬಂದು ಎದ್ದು ಬಿದ್ದು ಹೋದೋರೆ ಹೆಚ್ಚು. ನೀನೊಬ್ಬನೇ ಗಟ್ಟಿಗ.. ಶಭಾಷ್ ಕನ್ಲಾ.. "

"ನೋಡ್ಲಾ ದೈಯ್ಯಾ.. ಧೈರ್ಯ ಇದ್ದಾಗ ದಯ್ಯ ದಮ್ಮಯ್ಯ ಅನ್ನುತ್ತೆ ಅಂತ ನಮ್ಮ ಗುರುಗಳು ಹೇಳಿದ್ದರು.. ಅದನ್ನೇ ಅನುಸರಿಸುತ್ತಿದ್ದೇನೆ.. "

ಹೀಗೆ ಸಂಗಮೇಶ ಅದರ ಹೆಗಲ ಮೇಲೆ ಕೈ ಹಾಕಿಕೊಂಡು ಮಾತನಾಡುತ್ತಾ ಹೆಜ್ಜೆಗಳು ಸಾಗಿತು.. 

ಕಾಡಿನ ಹಾದಿ ಮುಗಿಯುತ್ತ ಬಂದಂತೆ ಅನಿಸಿತು.. ಗಿಜಿ ಗಿಜಿ ಶಬ್ದ.. ಹೊಗೆಯ ವಾಸನೆ... ಎಲ್ಲವೂ ಅನುಭವಕ್ಕೆ ಬಂತು.. 

ಚೆಕ್ ಪೋಸ್ಟ್ ದಾಟಿ ಹೊರಬಂದ.. 

"ಅಲ್ಲಲೇ ದೈಯ್ಯಾ.. ಪಟ್ನ ಬಂತು.. ಈಗ ನೀ ಎಲ್ಲಿಗೆ ಹೋಗ್ತೀಯ.. "

"ನಾನು ಇಲ್ಲೇ Near by ಸ್ಮಶಾನಕ್ಕೆ ಹೋಗಿ ಮಲಗ್ತೀನಿ.. ನೀನು ನಿನ್ನ ಕತೆ ಏನು.. ಮೊಬೈಲ್ ಆಫ್ ಆಗೈತೆ.. ಏನ್ ಮಾಡ್ತೀಯ..?"

"ನಮ್ಮ ಡ್ರೈವರಣ್ಣ ಇಲ್ಲೇ ಎಲ್ಲೋ ಇರ್ತಾನೆ.. ಹುಡುಕ್ತೀನಿ.. ಪಂಚರ್ ಶಾಪ್ ಇಲ್ಲೇ ಎಲ್ಲೋ ಇರ್ತಾವೆ ... ಕ ಕ ಕಾಕಾ ಕ ಕ ಕ"

ಸಂಗಮೇಶ ನಡುಗಲು ಶುರು ಮಾಡಿದ.. 

"ಯಾಕ್ಲಾ ಏನಾಯ್ತು.. "

"ಅಲ್ಲಿ ನೋಡ್ಲಾ ಬಸ್ಸು"

"ಅಯ್ಯೋ ಮಂಗ್ಯಾ.. ನಾನು ದೆವ್ವ  ನನ್ನ ನೋಡಿ ನಿನಗೆ ಭಯ ಆಗಲಿಲ್ಲ.. ಬದಲಿಗೆ ನನ್ನ ಹೆಗಲ ಮೇಲೆ ಕೈ ಹಾಕಿಕೊಂಡು ನಾನೇನೋ ನಿನ್ನ ಗೆಳೆಯ ಅನ್ನೋ ಹಾಗೆ ಧೈರ್ಯವಾಗಿ ಮಾತಾಡ್ತಾ ಬಂದೀ.. ಇದೇನ್ಲಾ ಬಸ್ಸನ್ನು ನೋಡಿ ಹೆದರ್ತಾ ಇದ್ದೀಯ.. "

"ಲೋ ಅದು ಬಸ್ಸು .. ಅದು ಬಸ್ಸು.. ಮದುರೈ ಅಂತ ಬರೆದೈತೆ.. ಈ ಮದುರೈ ಸಾವಾಸ ಸಾಕಾಗೈತೆ.. ಅದ್ಕೆ ಭಯ ಆಗತೈತೆ.. ನನ್ನ ಗೆಳತೀ ಬಗ್ಗೆ ಹೇಳಿದೆ ಅಲ್ವ.. ಮದುರೈ ಅಂದ್ರೆ ಸಾಕು ಮದುವೆ ಬಿಟ್ಟು ಓಡಿ  ಬಿಡ್ತಾಳೆ ಆಕೆ.. ಅದ್ಕೆ ಭಯ.. "

"ಲೇ ಮಂಗ್ಯಾ.. ಆ ಬಸ್ಸನ್ನು ನೋಡು.. ಅದು ಓಡಾಡಿದ ಯಾವುದೇ ಸುಳಿವು ಇಲ್ಲ.. ನಾನು ಆರು ತಿಂಗಳಿಂದ ನೋಡ್ತಾ ಇವ್ನಿ.. ಆ ಬಸ್ಸು ಇಲ್ಲಿಂದ ಹೋಗೆ ಇಲ್ಲ.. ಕೆಟ್ಟು ನಿಂತೈತೆ"

"ನನ್ನ ಹುಡುಗಿ ಬಗ್ಗೆ ನಿನಗೆ ತಿಳಿದಿಲ್ಲ.. ಸಾರ್ ಅಂಗ್ ಮಾಡ್ ಬ್ಯಾಡ್ರಿ ಸರ್.. ಸಾರ್ ಅಂಗನ್ ಬೇಡಿ ಸರ್.. ಅಂತ ಹೇಳಿ ಆ ಕೆಟ್ಟು ಹೋದ ಬಸ್ಸನ್ನು ರಿಪೇರಿ ಮಾಡಿಸಿಕೊಂಡು ಮದುರೈಗೆ ಹೋಗ್ತಾಳೆ ಅಂತ ಗಟ್ಟಿಗಿತ್ತಿ ಅವಳು.. "

"ನಿನ್ನ ಹಣೆಬರಹ.. ಬೆಳಗಾಗ್ತಾ ಐತೆ ನಾ ಒಂಟೀನಿ .. ಪಕ್ಕದ ಕ್ರಾಸಿನಾಗೆ ಸ್ಮಶಾನ ಐತೆ.. ಬೈ ಕನ್ಲಾ"

ನಡುಗುತ್ತಲೇ ಬಸ್ಸಿನ ಕಡೆ ನೋಡುತ್ತಾ ಬೋರ್ಡ್ ನೋಡುತ್ತಾ ಹಣೆಯಲ್ಲಿನ ಬೆವರು ಒರೆಸಿಕೊಂಡ.. 

ಮುಂದೆ.... !