Tuesday, January 26, 2021

ಪಂಚಮುಖಿಯ ಸಗ್ಗದಲ್ಲಿ ಗಣರಾಜ್ಯ ... !

ಚಂದವಳ್ಳಿ ತೋಟ ಕನ್ನಡದ ಅದ್ಭುತ ಚಿತ್ರದ ಅಂತಿಮ ದೃಶ್ಯದಲ್ಲಿ ಆ  ಊರಿನ ಪ್ರಮುಖರೊಬ್ಬರು ಹೇಳುವ ಮಾತು.. 

"ಅಣ್ಣ ತಮ್ಮಂದಿರು ಒಂದಾಗಿದ್ದರೇ ಮನೆ ಒಂದಾಗಿರುತ್ತದೆ.. 
ಮನೆ ಮನೆ ಒಂದಾಗಿದ್ದರೇ ಊರು ಒಂದಾಗಿರುತ್ತದೆ.. 
ಊರು ಊರು ಒಂದಾಗಿದ್ದರೆ ನಾಡು ಒಂದಾಗಿರುತ್ತದೆ.. 
ನಾಡು ಒಂದಾಗಿದ್ದರೆ ಯಾವ ಶಕ್ತಿನೂ ನಮ್ಮನ್ನು ಗೆಲ್ಲೋಕಾಗೋಲ್ಲ!!!!

ಅಂತಹ ಒಂದು ಅನುಭವ ಇಂದು ನನಗಾಯಿತು.. 

ವಠಾರದ ಜೀವನಕ್ಕೂ ಅಪಾರ್ಟ್ಮೆಂಟ್ ಜೀವನಕ್ಕೂ..  ಅಂತಹ ವ್ಯತ್ಯಾಸವಿಲ್ಲ.. ವಠಾರದ ಜೀವನ ಬಾಲ್ಯದಲ್ಲಿ ಕಂಡಿದ್ದೆ.. ಅಪಾರ್ಟ್ಮೆಂಟ್ ಜೀವನ ಅನುಭವಕ್ಕೆ ಈಗ ಬರುತ್ತಿದೆ.. 

ಪಂಚಮುಖಿ ಪ್ಯಾರಡೈಸ್ ಎನ್ನುವ ಈ ಪ್ಯಾರಡೈಸ್ ಗೆ ಬಂದು ಒಂದಾರು ತಿಂಗಳಾಯಿತು.. ಸ್ವತಂತ್ರ ದಿನಾಚರಣೆ ಸಂಭ್ರಮಕ್ಕೆ ಮೂಕ ಪ್ರೇಕ್ಷಕನಾಗಿದ್ದೆ.. ಗಣತಂತ್ರದ ದಿನಕ್ಕೆ ಅಳಿಲು ಸೇವೆ ಮಾಡುವ ಅವಕಾಶ ಸಿಕ್ಕಿತು. 

ಜೇನುಗಳೆಲ್ಲ ಅಲೆಯುತ್ತಾ ಹಾರಿ ಕಾಡೆಲ್ಲಾ ಕಾಡೆಲ್ಲಾ 
ಹನಿ ಹನಿ ಜೇನು ಸೇರಿಸಿದರೇನು.. ಬೇಕು ಎಂದಾಗ ತನ್ನದೆನ್ನುವ 

ಅಂತ ಅಣ್ಣಾವ್ರ ಹಾಡಿನಂತೆ.. ಪುಟ್ಟ ಪುಟ್ಟ ಹನಿಗಳು ಸೇರಿ ಈ ಸಂಭ್ರಮ ಅರಳಿತು .. 

ಒಬ್ಬೊಬ್ಬರೇ ಬಂದು ಸಮಾರಂಭಕ್ಕೆ ಸೇರಲು ಬರತೊಡಗಿದರು.. ನಮ್ಮ ದೇಶದ ಭವಿಷ್ಯ ಮಕ್ಕಳು ಓಡೋಡಿ ಬಂದರು 



ಶ್ರೀ ಸಮೀರ್ ಅವರ ಆರಂಭದ ಪುಟ್ಟ ಮಾತುಗಳು ಕಾರ್ಯಕ್ರಮಕ್ಕೆ  ಚಾಲನೆ ನೀಡಿತು.. 



ನಂತರ ಶ್ರೀ ಪದಕಿ ಅವರ ಅಮೃತ ಹಸ್ತದಲ್ಲಿ ನಮ್ಮ ದೇಶದ ಹೆಮ್ಮೆಯ ಸಂಕೇತ ತ್ರಿವರ್ಣ ಧ್ವಜರೋಹಣ ಮಾಡಿದರು.. 





ಎಲ್ಲರ ದೇಶಭಕ್ತಿ ಜಾಗೃತವಾಗುವಂತೆ ಒಂದೇ ದನಿಯಲ್ಲಿ ರಾಷ್ಟ್ರಗೀತೆ ಹಾಡಿದೆವು.. ಅದ್ಭುತ ಕ್ಷಣವಿದು.. 


ಕೊರೊನ ಎನ್ನುವ ಮಾಯಾಜಾಲದ ಜೀವಿಯನ್ನು ಎದುರಿಸುತ್ತ ಅದಕ್ಕೆ ಔಷಧಿ  ಕಂಡು ಹಿಡಿದ ನಮ್ಮ ಹೆಮ್ಮೆಯ ದೇಶದಲ್ಲಿ, ಆ ಚುಚ್ಚು ಮದ್ದನ್ನು ತೆಗೆದುಕೊಳ್ಳೋದ.. ಭಯವಾ.. ಧೈರ್ಯವಾ ಎನ್ನುವ ಗೊಂದಲಕ್ಕೆ ಶ್ರೀ ಪದಕಿಯವರ ಅನುಭವಾಮೃತ ಉಪಯುಕ್ತವಾಗಿತ್ತು.. 

ಅವರು ಹೇಳಿದ ಮಾತು "ಯುದ್ಧ ಅಂತ ಬಂದಾಗ ಮೊದಲು ಎದುರಿಸಿ ನಿಲ್ಲಬೇಕು ನಂತರ ಮಿಕ್ಕಿದ್ದು.. ಒಳ್ಳೆಯದೋ ಕೆಟ್ಟದಾಗುತ್ತೋ ಆಮೇಲೆ ಯೋಚನೆ ಮೊದಲು ಮುನ್ನುಗ್ಗಬೇಕು.. ಹಾಗಾಗಿ ಯೋಚನೆ ಮಾಡದೆ ಕೊರೊನಕ್ಕೆ ಚುಚ್ಚುಮದ್ದನ್ನು ತೆಗೆದುಕೊಳ್ಳಿ.. ನಾನೇ ಮೊದಲು ಮುಂದೆ ಬಂದು ಮದ್ದು ತೆಗೆದುಕೊಂಡೆ.. ಹೆಮ್ಮೆಯ ಕ್ಷಣವದು"  ಈ ರೀತಿಯ ಪ್ರೋತ್ಸಾಹದಾಯಕ ಮಾತುಗಳಿಗೆ ಅವರಿಗೆ ಧನ್ಯವಾದಗಳು.. !

ಶ್ರೀಮತಿ ಕಾವ್ಯ ದಂಪತಿಗಳು ದೇಶಭಕ್ತಿಯ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.. 


ಪುಟ್ಟ ಪುಟ್ಟ ಮಕ್ಕಳು ಎಲ್ಲರಿಗೂ ಚಾಕೊಲೇಟ್ ಕೊಟ್ಟು ಸಂಭ್ರಮಕ್ಕೆ ಒಂದು ಉಪಾಂತ್ಯ ಕೊಟ್ಟರು.. ಮುಂದೆ ಒಂದಷ್ಟು ಫೋಟೋಗಳು.. ಕಾರ್ಯಕ್ರಮ ಅಂತಿಮ ಹಂತಕ್ಕೆ ಬಂತು... !



ಇದಕ್ಕೂ ಮುಂಚೆ ಬಾವುಟವನ್ನು ಆರೋಹಣ ಮಾಡುವ ಅಭ್ಯಾಸ ಇರದ ನಮಗೆ.. ವರದಾನವಾದದ್ದು ಯು ಟ್ಯೂಬ್.. ಒಂದಷ್ಟು ವಿಡಿಯೋಗಳು.. ಒಂದಷ್ಟು ಪ್ರಯೋಗಗಳು.. ಕಡೆಯಲ್ಲಿ ಹಿರಿಯರೊಬ್ಬರ ಮಾರ್ಗದರ್ಶನದಿಂದ ಬಾವುಟದ ಆರೋಹಣಕ್ಕೆ ವೇದಿಕೆ ಸಿದ್ಧವಾಯಿತು.. !





ಒಂದು ಹೆಮ್ಮೆಯ ದಿನ  ಶುರುವಾಗಿದ್ದು ಹೀಗೆ.. !  ಆ ಕ್ಷಣದ ಕೆಲವು ಸುಂದರ  ಚಿತ್ರಗಳು ನಿಮಗಾಗಿ!














Thursday, January 21, 2021

ಗೆಳತೀ ಜನುಮದಿನದ ಶುಭಾಶಯಗಳು ನಿನಗೆ

ಅಪ್ಪ... 

ಹಾ... 

ಅಪ್ಪಅಅಅಅ 

ಹಾ ಪಾಪಾ 

ನನ್ನದೊಂದು ಪ್ರಶ್ನೆ.. 

ಒಂದೇನು ಹತ್ತು ಕೇಳು ಸಾವಿರ ಕೇಳು ಪಾಪಾ 

ಸರಿ.. ಮೊದಲನೆಯದು 

೧) ನೀವು ಎಮೋಷನಲ್ ಮನುಷ್ಯ ನಾನು ಪಕ್ಕ ಪ್ರಾಕ್ಟಿಕಲ್ ಹುಡುಗಿ.. ಅದು ಹೇಗೆ ಇಬ್ಬರದೂ ಒಂದೇ ರೀತಿಯ ಮನಸ್ಸು?

೨) ಮುಂಚೆ ಯಾರದಾದರೂ ಜನುಮದಿನ ಅಂದರೆ ಸರಿಯಾಗಿ ಮಧ್ಯರಾತ್ರಿ ಒಂದು ಬ್ಲಾಗ್ ಬರೆದು ಹಾಕ್ತಿದ್ರಿ... ಆ ಅಭ್ಯಾಸ ಯಾಕೆ ಬಿಟ್ರಿ.. ಜನ ಓದ್ತಾರೋ ಇಲ್ಲವೋ.. ನೀವು ಬದಲಾಗಬೇಡಿ ಅಪ್ಪ... !

೩) ಜೀವನದಲ್ಲಿ ಕೊಟ್ಟ ತಿರುವನ್ನು ಪಾಠ ಅಂತ ತಿಳಿದು ಮುಂದೆ ಹೆಜ್ಜೆ ಇಟ್ಟಿರಿ.. ನನಗೂ ಆ ಪಾಠ ಹೇಳದೆ ಕಲಿಸಿ ಕೊಟ್ರಿ.. ನನಗಾಗಿ ಏನಾದರೂ ಒಂದು ಸಂದೇಶ ಕೊಡಿ ಅಪ್ಪ.. ನನಗೆ ನೀವು ಗುರು!

ಇಷ್ಟೇ ಅಪ್ಪ. ಈ ಮೂರು ಪ್ರಶ್ನೆಗೆ ಉತ್ತರ ಕೊಡಿ.. 

ಪಾಪಾ ಮೊದಲಿಗೆ ತಾರುಣ್ಯದ ಹಂತಕ್ಕೆ ಕಾಲಿಡುತ್ತಿರುವ ನಿನಗೆ ಜನುಮದಿನದ ಶುಭಾಶಯಗಳು... ಟೀನೇಜ್ ಅನ್ನುವ ಈ ಹಂತವನ್ನು ಇನ್ನೊಂದು ವರ್ಷ  ಅಷ್ಟೇ ಆಮೇಲೆ ಜೀವನದ ಹೈ ಸ್ಪೀಡಿಗೆ ಬಂದು ಬಿಡ್ತೀಯ.. ಅದಕ್ಕೆ ನಿನಗೆ ಶುಭಾಶಯಗಳ ಜೊತೆಯಲ್ಲಿ ಒಂದು ಮಾತು ಕೂಡ.. ನೀನು ನನಗೆ ಮಗಳಿಗಿಂತ ಸ್ನೇಹಿತೆಯಾಗಿಯೇ ಹೆಚ್ಚಾಗಿ ನೋಡಿದ್ದು.. ಹಾಗಾಗಿ ಆ ಸಲುಗೆಯಿಂದ ಹೇಳುತ್ತೇನೆ.. 

ಜೀವನದಲ್ಲಿ ಎಮೋಷನಲ್ ಆಗಿ ಇರಬೇಕು ಪಾಪಾ.. ಅದು ಗಿಡಕ್ಕೆ ಹಾಕುವ ನೀರು ಗೊಬ್ಬರ ಇದ್ದಂತೆ.. ಎಮೋಷನಲ್ ವ್ಯಕ್ತಿಗಳು ಘಾಸಿಗೊಳಗಾಗಬಹುದು ಆದರೆ ಅದನ್ನು ತಡೆದು ಹಿಮ್ಮೆಟ್ಟಿಸುವ ಸಾಮರ್ಥ್ಯ ಇರುತ್ತದೆ.. ಪ್ರಾಕ್ಟಿಕಲ್ ಆಗಿ ಈ ವ್ಯಾಪಾರಿ ಪ್ರಪಂಚದಲ್ಲಿ ಇರಬೇಕು ನಿಜ.. ಆದರೆ ಎಲ್ಲವನ್ನು ತಕ್ಕಡಿಯಲ್ಲಿ ತೂಗು ಹಾಕುವೆ ಎಂದು ಹೆಜ್ಜೆ ಹಾಕಬಾರದು.. 

ಹಲವಾರು ಬಾರಿ.. ನಾ ಕಮಿಟ್ ಆಗಿಲ್ಲ.. ಕಮಿಟ್ ಆಗೋಲ್ಲ.. ನನಗೆ ಇವರು ಬೇಡ ಅವರು ಬೇಡ ಅನ್ನೋಕ್ಕಿಂತ.. ಎಲ್ಲರೂ ಬೇಕು ಎಲ್ಲರೊಳಗೆ ನಾನು ಅಂತ ಹೆಜ್ಜೆ ಹಾಕಬೇಕು. ಹೌದು ಕೆಲವೊಮ್ಮೆ ಕೆಲವು ವ್ಯಕ್ತಿಗಳು ಬೇಡ ಅನ್ನಿಸುತ್ತೆ.. ಆದರೆ ಅವರನ್ನು ದೂರ ಇಡುವ ಬದಲು.. ಮನದೊಳಗೆ ಜಾಗ ಕೊಟ್ಟು ಆ ವ್ಯಕ್ತಿಗೆ ಬೆಲೆ ಕೊಡು.. ಆಗ ಚಿಪ್ಪಿನೊಳಗೆ ಮುತ್ತು ಸೇರಿ ಭದ್ರವಾದಂತೆ ಮನಸ್ಸು ಭದ್ರವಾಗುತ್ತದೆ.. 

ಯೌವ್ವನಕ್ಕೆ ಕಾಲಿಡುತ್ತಿರುವ ನಿನಗೆ ಇದೆ ನಾ ಗುರುವಾಗಿ ಹೇಳುವ ಮಾತು.. !

ಇನ್ನೂ ಎರಡನೇ ಪ್ರಶ್ನೆ.. ಇದೆ ಪ್ರಶ್ನೆಯನ್ನು ನಾ ನಿನಗೆ ಕೇಳುತ್ತೇನೆ.. ಈ ದಿಢೀರ್ ಯಶಸ್ಸು, ದಿಢೀರ್ ಗುರುತಿಸುವಿಕೆಯಿಂದ ಖುಷಿ ಸಿಕ್ಕರೂ ಅದು ನೀರಿನ ಗುಳ್ಳೆಯಂತೆ. ವಾಟ್ಸಾಪ್, ಇನ್ಸ್ಟಾಗ್ರಾಮ್, ಆ ಗ್ರಾಂ, ಈ ಗ್ರಾಂ ಒಳ್ಳೆಯದೇ. ಆದರೆ ಮನದ ಯೋಚನೆಗಳಿಗೆ ರೆಕ್ಕೆ ಕಟ್ಟಿ ಹಾರಿ ಬಿಡುವ ಬ್ಲಾಗ್ ಸದಾ ದೇವಾಲಯದಲ್ಲಿ ಬೆಳಗುವ ನಂದಾ ದೀಪದಂತೆ.. ನಿನ್ನ ಬ್ಲಾಗ್ ಬರಹಗಳನ್ನು ಮುಂದುವರೆಸು.. 

ಹಾ ಹೌದು.. ಕೆಲ ಕಾಲ ಮಧ್ಯರಾತ್ರಿ ಪೋಸ್ಟ್ ಮಾಡುತ್ತಿದ್ದ ಆ ಬ್ಲಾಗ್ ಬರಹಗಳನ್ನು ನಿಲ್ಲಿಸಿದ್ದೆ.. ನಿನ್ನ ಜನುಮದಿನದಿಂದಲೇ ಶುರು ಮಾಡುತ್ತೇನೆ.. ಮತ್ತೆ ಶುರುವಾಗುತ್ತೆ ನನ್ನ ಮಿಡ್ ನೈಟ್ ಜನುಮದಿನದ ಬ್ಲಾಗ್ ಬರಹಗಳು.... !

ಮೂರನೆಯ ಪ್ರಶ್ನೆಗೆ ಉತ್ತರ ನಿನ್ನ ಪ್ರಶ್ನೆಯಲ್ಲಿಯೇ ಇದೆ.. ಜೀವನದ ತಿರುವುಗಳು ಭಗವಂತ ಕೊಟ್ಟ ಪಾಠದ ಅಧ್ಯಾಯಗಳು... ಜೀವನವನ್ನು ನಿಂತ ನೀರಾಗಿಸದೆ... ಹೆಜ್ಜೆ ಹಾಕುತ್ತಾ.. ಕಲ್ಲು ಬಂಡೆಗಳನ್ನು ಸೀಳಿಕೊಂಡು, ಜಲಧಾರೆಯಾಗಿ ಧುಮುಕಿ ಯಶಸ್ಸು ಎಂಬ ಸಾಗರದತ್ತ ಹರಿಯುತ್ತಾ ಸಾರ್ಥಕತೆಯ  "ಸೀಮಾ" ರೇಖೆಯನ್ನು ದಾಟಿ "ಸವಿತಾ"ರ್ಥಕತೆಯನ್ನು ಪಡೆಯಬೇಕು.. !

ಅಪ್ಪ ಸೂಪರ್ ಅಪ್ಪ... ಕಡೆಯ ಸಾಲು ಸೂಪರ್.. ಹಾಗೆ ನಿಮ್ಮ ಮೂರು ಪ್ರಶ್ನೆಗಳ ಉತ್ತರವೂ ಸೂಪರ್.. ಖಂಡಿತ ನಿಮ್ಮ ಜೊತೆಯಲ್ಲಿ ನಿಮ್ಮ ಮನದ ಜೊತೆಯಲ್ಲಿಯೇ ಹೆಜ್ಜೆ ಹಾಕುವೆ... ಬ್ಲಾಗ್ ಶುರು ಮಾಡುವೆ.. ಮನದ ಮಾತುಗಳನ್ನು ಬರಹದಲ್ಲಿ ಕಾಣಿಸುವ ಪ್ರಯತ್ನ ಮಾಡುವೆ.. ಹಾಗೆ ನಿಮ್ಮ ನೂರು ಮೆಟ್ಟಿಲುಗಳನ್ನು ಇಡುವ ಬ್ಲಾಗ್ ತರಹ ನನ್ನ ನೂರು ಆಶಯಗಳನ್ನು ಸಾಧನೆಗಳ ಕಡೆ ಹೆಜ್ಜೆ ಇಡುವ ಪಟ್ಟಿಯನ್ನು ಬರೆಯುವೆ.. ಇದು ನಾ ನಿಮಗೆ ಕೊಡುತ್ತಿರುವ ಭರವಸೆ.. !

ಗುಡ್ ಪಾಪಾ... ಜನುಮದಿನ ಸುಂದರವಾಗಿಇರಲಿ .. ಸುಂದರವಾಗಿಯೇ ಸದಾ ನಳ ನಳಿಸಲಿ.. !