Monday, September 28, 2020

ರಫೀ ಬಾಲೂ ಜುಗಲ್ ಬಂದಿ

ರಫೀ

ರಫೀ ಸಾಬ್ 

ಮೊಹಮ್ಮದ್ ರಫೀ 

ಗುರುಗಳು ರಫೀ 

ದಿಲ್ ಜೂಮಾ 

ಲಿಖ್ ಹೇ ಜೋ ಕತ್ ತುಜೆ...!

ರಫೀ ಸಾಬ್ ಅವರಿಗೆ ಅಚಾನಕ್ ಎಚ್ಚರವಾಯ್ತು.. ಅರೆ ಇದೇನಿದು ನನ್ನ ಹೆಸರೇ ಕೇಳಿಸ್ತಾ ಇದೆ.. ನನ್ನ ಹಾಡುಗಳ ಕೆಲವು ಸಾಲುಗಳು ನಾ ಹೇಳಿದಂತೆ ಭಾಸವಾಗುತ್ತಿದೆ..ಎಂದು ಕಣ್ಣುಜ್ಜಿಕೊಂಡು .. ಎರಡು  ಕೈಗಳನ್ನು ಜೋಡಿಸಿ.. "ಯಾ ಅಲ್ಲಾ ಪರವರ್ದಿಗಾರ್".. ಎನ್ನುತ್ತಾ ಮನೆಯ ಹೊರಗೆ ಬಂದರು.. 

ಅವರ ಮನೆಯ ಮುಂದೆ.. "ಪವಡಿಸು  ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ" ಹಾಡನ್ನು ಹೇಳಿಕೊಂಡು ನಿಂತಿದ್ದರು ಎಸ್ ಪಿ ಬಿ.. 

ರಫೀ ಸಾಬ್ ಅವರಿಗೆ ಅಚ್ಚರಿ.. 

"ಅರೆ ಬಾಲೂ ಸರ್.. ಏನಾಯಿತು.. ಇಲ್ಲಿ ಯಾಕೆ ಬಂದಿರಿ.. "

"ಅರೆ ಬಾಲೂಗಾರು  ನೂವು ಎಂದುಕು ಇಕ್ಕಡ ಉನ್ನಾವು.. ಎಮಾಯಿಂದಿ.."

"ಅರೇ ಬಾಲೂ ಜಿ.. ಆಪ್ ಕೈ ಸೆ ಹೊ.. ಇದರ್ ಕ್ಯೂ ಆಯೆಹೋ ಆಪ್"

"ಅರೆ ಬಾಲೂ ನಿಂಗೋ ಎತ್ತುಕ್ಕೂ ಇಂಗೆ ವಂದಿಂಗೋ... "

"ಆಹಾ ಬಾಲೂ ಎಂಥ ಇವಿಡೇ.."

ಆಹಾ.. ಗುರುಗಳೇ.. ಎಂಥಹ ಪುಣ್ಯವಿದು.. ನಿಮ್ಮನ್ನು ನೋಡಲು ಬಂದೆ ನೀವೇ ನನ್ನನು ನೋಡಲು ಬಂದಿರಿ.. ಖುಷಿಯಾಯಿತು ರಫಿ ಸಾಬ್.. !

"ಬಾಲೂ ನಾನು ಒಂದಷ್ಟು ಹಾಡು ಹಾಡಿದ್ದೇ.. ಒಂದಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದೇ.. ನನ್ನ ಹಾಡುಗಳನ್ನು ಇಷ್ಟ ಪಟ್ಟು ಕೇಳುವ ವರ್ಗವೊಂದಿದೇ.. ಆದರೆ ಮಾನಸಿಕ ಗುರುಗಳಾಗಿ ನನ್ನ ಸ್ವೀಕರಿಸಿ, ನನ್ನ ಹಾಡುಗಳ ಬಗ್ಗೆ ಇನ್ನಷ್ಟು ಮಾಹಿತಿ ನೀಡಿ ನನ್ನ ಹಾಡುಗಳ ಅಭಿಮಾನಿಗಳ ಸಂಖ್ಯೆ ಹೆಚ್ಚಾದದ್ದು ನಿಮ್ಮಿಂದ.. ಅದಕ್ಕೆ ನಾ ಚಿರಋಣಿ.. "

"ಗುರುಗಳೇ ಎಂಥಹ ಮಾತಾಡಿದಿರಿ.. ನೀವು ಹಾಡುವ ಶೈಲಿಯನ್ನು ಕೇಳಿ ಕೇಳಿ ನಾನು ನಿಮ್ಮ ಅಭಿಮಾನಿಯಾದೆ ಮತ್ತೆ ನಿಮ್ಮ ಹಾಡುವ ರೀತಿಯನ್ನು ಕಲಿಯಲು ಪ್ರಯತ್ನ ಮಾಡಿದೆ.. ನಿಮ್ಮ ಹಾಡುಗಳನ್ನು ಕೇಳುವಾಗ ಕಣ್ಣು  ಮುಚ್ಚಿ ಕೇಳುತ್ತಾ ಇದ್ದಾಗ ಅಲ್ಲಿ ನಮಗೆ ಕಾಣುವುದು ಶಮ್ಮಿ ಕಪೂರ್, ರಾಜೇಂದ್ರ ಕುಮಾರ್, ರಾಜಕುಮಾರ್,  ದಿಲೀಪ್ ಕುಮಾರ್, ದೇವಾನಂದ್ ಯಾರೂ ಕಣ್ಣ ಮುಂದೆ ಬರೋಲ್ಲ..  ನೀವೇ ನನ್ನ ಕಣ್ಣ ಮುಂದೆ ಬರೋದು.. .. ಆ ಆ ನಾಯಕಿಯರು ನಿಮ್ಮನ್ನು ಪ್ರೀತಿ ಮಾಡಬೇಕು ತೆರೆಯ ಮೇಲೆ ಕಾಣೋ ನಾಯಕರನ್ನಲ್ಲ.. "


ಚಿತ್ರಕೃಪೆ ... ಗೂಗಲೇಶ್ವರ 

 ಎಂದಾಗ ರಫಿ ಅವರು ಜೋರಾಗಿ ನಗಲು  ಮಾಡಿದರು.. 

"ಬಾಲೂ ಇದು ನಿಮ್ಮ ಹೃದಯವಂತಿಕೆಗೆ ನಿದರ್ಶನ..  ನಾವು ಕಲಾದೇವಿಯ ಆರಾಧಕರು.. ಅಷ್ಟೇ ನಾ ಹೇಳೋಕೆ ಆಗೋದು"

"ಗುರುಗಳೇ.. ಒಂದು ಪ್ರಶ್ನೆ.. "

"ಕೇಳಿ ಬಾಲೂ ಜಿ"

"ನಿಮ್ಮ ದನಿಯಲ್ಲಿ ಏ ದೇಖ್ ಕೆ ದಿಲ್ ಜೂಮಾ..ಲೇ ಪ್ಯಾರ್ ಕಿ ಅಂಗಡಾಯಿ.. .. ತೂ ಮೇರೇ ಜಿಂದಗಿ ಹೊ... ಈ ರೀತಿಯ ಅನೇಕ ಹಾಡುಗಳಲ್ಲಿ ನೀವು ಆ ಕೆಲವು ಪದಗಳಿಗೆ ಅಕ್ಷರಗಳಿಗೆ ಭಾವ ತುಂಬಿ ಹೇಳುವುದನ್ನು ಕೇಳಿ ಕೇಳಿಯೇ ನಿಮ್ಮ ಅಭಿಮಾನಿಯಾಗಿದ್ದೀನಿ.. ಅದು ಹೇಗೆ ಸಾಧ್ಯವಾಯಿತು ಗುರುಗಳೇ.. "

"ಬಾಲೂ ಜಿ.. ಹಾಡುಗಾರಿಕೆ ಅನ್ನೋದು ದೈವತ್ವದ ಕೊಡುಗೆ.. ಸಂಗೀತ  ನಿರ್ದೇಶಕರು ಆ ಸಂಗೀತ ಸರಸ್ವತಿಯನ್ನು ಆಹಾವನೇ ಮಾಡಿಕೊಂಡು.. ಒಂದು ನಾದವನ್ನು ರಚಿಸುತ್ತಾರೆ.. ಅದಕ್ಕೆ ಜೀವ ತುಂಬೋದು ಸಾಹಿತಿಗಳು.. ತಮ್ಮ ಕಲಾಜ್ಞಾನವನ್ನು ಹಿಂಡಿ ಅಕ್ಷರಗಳಾಗಿ ಮೂಡಿಸುತ್ತಾರೆ.. ನಿರ್ದೇಶಕರು ಹಾಡಿನ ಪ್ರಸಂಗ ಮತ್ತು ಅದರ ಹಿನ್ನೆಲೆಯನ್ನು ಹೇಳುತ್ತಾರೆ.. ಸಂಗೀತ ನಿರ್ದೇಶಕರ ಮತ್ತು ಸಾಹಿತಿಗಳ ಭ್ರೂಣ ಜನನವಾಗೋದು ಈ ಹಾಡನ್ನು ರೆಕಾರ್ಡ್ ಮಾಡಿದಾಗ.. ಆ  ಸಮಯದಲ್ಲಿ ಆ ಮಗುವಿಗೆ ಜೀವ ತುಂಬಿ, ಸೂಸುತ್ರವಾಗಿ ಭುವಿಗೆ ಬರುವಂತೆ ಮಾಡೋದು ಗಾಯಕರಾದ ನಮ್ಮ ಕೆಲಸ.. ಅದನ್ನಷ್ಟೇ ನಾನು ಮಾಡುತ್ತಿದ್ದದ್ದು.. ಹಾಗೆ ಜೀವ ತುಂಬುವಾಗ ಕೆಲವು ಕಡೆ ಇನ್ನಷ್ಟು ಜೀವ ತುಂಬಬೇಕು ಅಂತ ನನಗನಿಸಿದಾಗ ನನಗೆ ಅರಿವಿಲ್ಲದೆ ಬಂದದ್ದೇ ಈ ಪದಗಳು ಅಥವ ಅಕ್ಷರಗಳು.. "


ಚಿತ್ರಕೃಪೆ ... ಗೂಗಲೇಶ್ವರ

"ವಾಹ್ ಅದ್ಭುತ ಅದ್ಭುತ ಗುರುಗಳೇ.. ನಿಮ್ಮ ಚರಣಕಮಲಗಳಿಗೆ ನನ್ನ ನಮನಗಳು.. "


ಚಿತ್ರಕೃಪೆ ... ಗೂಗಲೇಶ್ವರ


ಚಿತ್ರಕೃಪೆ ... ಗೂಗಲೇಶ್ವರ

ಬೆನ್ನು ತಟ್ಟಿ ಎಬ್ಬಿಸಿ... "ಬನ್ನಿ ಬಾಲೂ ಜಿ.. " ಸಂಗೀತ ಸಾಗರದ ನೌಕೆಯಲ್ಲಿ ಹತ್ತಿದರು.. 

*****

ಕನ್ನಡದ ಹಾಡುಗಳು ಉತ್ತುಂಗ ಶಿಖರದಲ್ಲಿದಾಗ ನಾ ಹಾಡುಗಳನ್ನು ರೇಡಿಯೋ ಮೂಲಕ ಕೇಳುತ್ತಿದ್ದೆ.. 

ಮಾಮರವೆಲ್ಲೋ ಕೋಗಿಲೆಯೆಲ್ಲೋ 

ತೇರಾನೇರಿ ಅಂಬರದಾಗೆ ನೇಸರ ನಗುತಾನೆ 

ಎಲ್ಲಿದ್ದೆ ಇಲ್ಲೀ ತನಕ ಎಲ್ಲಿಂದ ಬಂದ್ಯವ್ವ 

ನನ್ನಹೆಸರಲ್ಲೇ ಕಮಾಲ್ ನಾನೇ ಕನ್ವರ್ ಲಾಲ್ 

ಹಾವಿನ ದ್ವೇಷ ಹನ್ನೆರಡು ವರ್ಷ 

ಕೆಂಪಾದವೋ ಎಲ್ಲಾ ಕೆಂಪಾದವೋ 

ಅನುಪಮಾ ಚೆಲುವು 

ಎಲ್ಲಿರುವೆ ಮನವ  ಕಾಡುವ 

ಹೊಸಬಾಳಿಗೆ ನೀ ಜೊತೆಯಾದೆ 

ನಾನೂ ನೀನು ಒಂದಾದ ಮೇಲೆ 

ನೆರಳನು ಕಾಣದ ಲತೆಯಂತೆ 

ನಾನೇನು ನೀನೇನು ಅವನೇನು 

ಊರಿಂದ ಬಂದನು ಮಿಸ್ಟರ್ ಮಾರನು 

ಆಸೆಯ ಭಾವ ಒಲವಿನ ಜೀವ 

ಕೇಳು ಮಗುವೇ ಕತೆಯ ಆಸೆ ತಂದ ವ್ಯಥೆಯ 

ನೂರು ಕಣ್ಣು ಸಾಲದು 

ಹೀಗೆ  ಅಸಂಖ್ಯಾತ ಹಾಡುಗಳನ್ನು ಕೇಳಿ ಕೇಳಿ .. ತೆರೆಯ ಮೇಲೆ ಆ ನಾಯಕರೇ ಈ ಹಾಡುಗಳನ್ನು ಹೇಳೋದು ಅಂತ ತಿಳಿದಿದ್ದೆ.. ಎಪ್ಪತ್ತರ ದಶಕದ ಅಂತ್ಯ.. ಎಂಭತ್ತರ ದಶಕದ ಆರಂಭ ಕನ್ನಡ ಹಾಡುಗಳು ನನ್ನ ಮನಸ್ಸನ್ನು ಸೂರೆಗೊಂಡಿದ್ದವು.. 

ಸರಿ ಚಿತ್ರಗಳ ಹಾಡಿನ ಬಗ್ಗೆ ತಿಳಿದುಕೊಳ್ಳೋಣ ಅನ್ನುವ ಆಸಕ್ತಿ ಹುಟ್ಟಿ.. ಸಂಗೀತ ನಿರ್ದೇಶಕರು,  ಸಾಹಿತಿಗಳು, ನಿರ್ದೇಶಕರು, ಗಾಯಕ ಗಾಯಕಿಯರ ಬಗ್ಗೆ ತಿಳಿದುಕೊಳ್ಳುತ್ತಾ ಹೋದ ಹಾಗೆ ನನಗರಿಯದೆ ಮೋಡಿ ಮಾಡಿದ್ದು.. 

ರಾಜನ್ ನಾಗೇಂದ್ರ  ಅವರ ಸಂಗೀತ 

ಚಿ ಉದಯಶಂಕರ್ ಅವರ ಸಾಹಿತ್ಯ 

ಎಸ್ ಪಿ  ಬಾಲಸುಬ್ರಮಣ್ಯಂ ಮತ್ತು ಎಸ್ ಜಾನಕೀ.. 

ಈ ಕಾಲಘಟ್ಟದಲ್ಲಿ ತಿರುಗುಬಾಣ ಚಿತ್ರವನ್ನು ಹನುಮಂತನಗರದ ರಾಜಲಕ್ಷ್ಮಿ ಟೆಂಟ್ ನಲ್ಲಿ ನೋಡಿದಾಗ.. ತೆರೆಯ ಮೇಲೆ ಗುಂಡು ಗುಂಡಾಗಿ ಮೂಡಿ ಬಂದಿದ್ದ ದೃಶ್ಯದ ಹಾಡು "ಇದೆ ನಾಡು ಇದೆ ಭಾಷೆ ಎಂದೆಂದೂ ನನ್ನದಾಗಿರಲಿ" ಈ ಹಾಡಿನಲ್ಲಿ ತೆರೆಯ ಮೇಲೆ ಬಂದಿದ್ದು ಅಂಬರೀಷ್ ಅಲ್ಲ .. ಅವರೇ ಎಸ್ಪಿಬಿ.. 


ಚಿತ್ರಕೃಪೆ ... ಗೂಗಲೇಶ್ವರ


ಚಿತ್ರಕೃಪೆ ... ಗೂಗಲೇಶ್ವರ


ಚಿತ್ರಕೃಪೆ ... ಗೂಗಲೇಶ್ವರ

ಆಗಲೇ ಗೊತ್ತಾಗಿದ್ದು ಓಹೋ ಇವರೇ ಅಂಬರೀಷ್, ಅನಂತ್ ನಾಗ್, ವಿಷ್ಣುವರ್ಧನ್, ಶಂಕರ್ ನಾಗ್, ಶ್ರೀನಾಥ್, ಚಂದ್ರ ಶೇಖರ್, ರಾಜೇಶ್ ಮುಂತಾದ ಅನೇಕ ನಾಯಕ ನಟರಿಗೆ ಹಾಡುತ್ತಿದ್ದದ್ದು ಅಂತ.. 

ನಂತರ ಇವರ ಹಾಡುಗಳನ್ನು ಮೊದಲಿಂದಲೂ ಅನುಸರಿಸ ತೊಡಗಿದೆ .. ನಕ್ಕರೆ ಅದೇ ಸ್ವರ್ಗ ಚಿತ್ರದ "ಕನಸಿದೋ ನನಸಿದೋ" ಎಂ ರಂಗರಾವ್ ಅವರ ಸಂಗೀತದಲ್ಲಿ ಮೂಡಿ ಬಂದ ಹಾಡು ಇವರ ಮೊದಲ ಕನ್ನಡ ಹಾಡು ಅಂತ ತಿಳಿಯಿತು.. 

ಆಮೇಲೆ ಇವರ ಧ್ವನಿಯನ್ನು ಅನುಸರಿಸುತ್ತ ಹೋದರೆ.. ತೆರೆಯ ಮೇಲೆ ನಾಯಕ ನಟರು ಹಾಡಿದ್ದು ಅರಿವಾಗುತ್ತಿತ್ತು.. ಆದರೆ ರೇಡಿಯೋದಲ್ಲಿ ಕೇಳಿದಾಗ ನಾಯಕ ನಂತರ ಮೊಗವೆ ಕಣ್ಣ ಮುಂದೆ ಬರುತಿತ್ತು.. ಒಬ್ಬೊಬ್ಬ ನಾಯಕ ಮಾತಾಡುವ ಶೈಲಿಯನ್ನು ಅನುಸರಿಸಿ ಹಾಡುತ್ತಿದ್ದರು.. ತೇಲಿಸಿ ಮಾತಾಡುವ ಶಂಕರ್ ಶೈಲಿ, ಒತ್ತು ಕೊಟ್ಟು ಮಾತಾಡುವ ಅನಂತ್ ಶೈಲಿ, ಜೀವ ತುಂಬಿ ಮಾತಾಡುವ ವಿಷ್ಣು ಶೈಲಿ, ಅಬ್ಬರಿಸಿ ಮಾತಾಡುವ ಅಂಬಿ, ಮುದ್ದಾಗಿ ಆಪ್ತ ಗೆಳೆಯನಂತೆ ಮಾತಾಡುವ ಶ್ರೀನಾಥ್ ಶೈಲಿ, ಅಣ್ಣನಂತೆ ಮಾತಾಡುವ ರಾಜೇಶ್ ಹೀಗೆ ನಾಯಕರಿಗೆ ತಕ್ಕಂತೆ ಅವರ ಹಾಗೆ ಅಭಿನಯಿಸುತ್ತಾ ಹಾಡುತ್ತಿದ್ದ ಎಸ್ಪಿಬಿ ಇನ್ನಷ್ಟು ಹತ್ತಿರವಾಗಿದ್ದು "ಎದೆ ತುಂಬಿ ಹಾಡುವೆನು" ಕಾರ್ಯಕ್ರಮದ ಮೂಲಕ.. 

ಹಾಡಿನ ಹಿಂದಿನ ಕತೆಯನ್ನು, ಸ್ವಾರಸ್ಯಕರ ಪ್ರಸಂಗವನ್ನು ತಿಳಿದುಕೊಳ್ಳುವ ಹುಚ್ಚಿನ ನನ್ನ ಮನಸ್ಸು ಇವರಿಗೆ ಶರಣಾಗಿದ್ದು ಎರಡನೇ ಬಾರಿ..

ಮೊದಲ ಬಾರಿಗೆ ರಾಜನ್ ನಾಗೇಂದ್ರ ಅವರ ಅದ್ಭುತ ಸಂಗೀತದ ಹಾಡುಗಳಿಗೆ ಇವರು ದನಿಯಾಗಿದ್ದಕ್ಕೆ ಇವರಿಗೆ ಶರಣಾಗಿದ್ದೆ.. 

ಹೇಳೋಕೆ ಹೊರಟರೆ ನೂರಾರು ಹಾಡುಗಳು ಮೈಮನ ಆವರಿಸುತ್ತವೆ.. ಅಂತಹ ಅದ್ಭುತ ಗಾಯಕ ನನ್ನ ಮನದೊಳಗೆ ಇಳಿದು ಈ ಲೇಖನ ಬರೆಯೋಕೆ ಸ್ಫೂರ್ತಿಯಾಗಿದ್ದಾರೆ.. 

ಎಸ್ಪಿಬಿ ತಮ್ಮ ಹಾಡುಗಳಲ್ಲಿ, ತಮ್ಮ ವಿನಯಪೂರ್ವಕ ನೆಡೆವಳಿಕೆಯಿಂದ ನಮ್ಮ ಮನೆಯ ಒಬ್ಬ ಸದಸ್ಯರಾಗಿ ಬಿಟ್ಟಿದ್ದಾರೆ .. ಅವರಿಲ್ಲ ಅನಿಸೋದೇ ಇಲ್ಲ.. ಇಲ್ಲೇ ಎಲ್ಲೋ ತರಕಾರಿ ತರೋಕೆ ಹೋಗಿದ್ದಾರೆ ಅಂತಲೋ.. ಯಾವುದೋ ಊರಿಗೆ ಹೋಗಿದ್ದಾರೆ ಅಂತಲೋ.. ವಾಕಿಂಗ್ ಹೋಗಿದ್ದಾರೆ ಅಂತಲೋ ಅನಿಸುತ್ತದೆ.. 


ಚಿತ್ರಕೃಪೆ ... ಗೂಗಲೇಶ್ವರ


ಚಿತ್ರಕೃಪೆ ... ಗೂಗಲೇಶ್ವರ

ಗಾನ ಸಾಗರದ ಅಲೆಗಳನ್ನು ಏರುತ್ತಲೇ ತಂಗಾಳಿಯಾಗಿ ಬೀಸುತ್ತಾ ನಮ್ಮ ಮನದೊಳಗೆ ಕೂತಿರುವ ಈ ಅಗಾಧ ಪ್ರತಿಭಾ ಕಡಲಿಗೆ ನಮ್ಮ ಕಡೆಯಿಂದ ಒಂದಷ್ಟು ಅಕ್ಷರಗಳ ಅಭಿಷೇಕ ಮಾಡಬೇಕಿನಿಸಿ ಈ ಲೇಖನ ಅವರ ಚರಣಕಮಲಗಳಿಗೆ ಅರ್ಪಿಸುತ್ತಿದ್ದೇನೆ.. ~!