ದೂರದರ್ಶನದ ಕಾಲ.. ಉಪಾಸನೆ ಚಿತ್ರ ನೋಡಿದಾಗ ಎರಡು ವಿಷಯದ ಬಗ್ಗೆ ಆಸಕ್ತಿ ಬಂತು.
1) ಕನ್ಯಾಕುಮಾರಿ ನೋಡಬೇಕು.. ಭಾರತ ಭೂಶಿರ ಮಂದಿರ ಸುಂದರಿ ಹಾಡನ್ನು ಅಲ್ಲಿ ಕೇಳಬೇಕು..
ಆ ಆಸೆಯನ್ನು 2005 ಇಸವಿಯಲ್ಲಿ ಈಡೇರಿಸಿಕೊಂಡೆ
2) ಈ ಚಿತ್ರದ ನಿರ್ದೇಶಕನ ಬಗ್ಗೆ ತಿಳಿದುಕೊಳ್ಳಬೇಕು.. ಅವರ ಚಿತ್ರಗಳನ್ನೆಲ್ಲಾ ನೋಡಬೇಕು..
ಅದನ್ನು ಈಡೇರಿಸಿಕೊಂಡೆ..
 |
ಅದ್ಭುತ ನಿರ್ದೇಶಕ |
ಆಗ ನನಗೆ ಸುಮಾರು ಹತ್ತು-ಹನ್ನೊಂದು ವರ್ಷ ಇರಬಹುದು.. ಆಗ ಶುರುವಾದ ಪುಟ್ಟಣ್ಣ ಅವರ ಚಿತ್ರಗಳ ಆಕರ್ಷಣೆ ತುತ್ತ ತುದಿಗೆ ತಲುಪಿದ್ದು "ಒಲವೇ ಜೀವನ ಸಾಕ್ಷಾತ್ಕಾರ" ಹಾಡಿನ ಚಿತ್ರೀಕರಣ ಮತ್ತು ಕ್ಯಾಮೆರಾದ ಓಡಾಟ..
 |
ಚಿತ್ರಗಳ ಸಾಲುಗಳು |
ಹೌದು ಅವರ ಚಿತ್ರಗಳನ್ನೆಲ್ಲ ನೋಡಬೇಕು ಅದರ ಬಗ್ಗೆ ಬರೆಯಬೇಕು ಎನ್ನುವ ತುಡಿತ ಹೆಚ್ಚಾಗಿ, ಎರಡು ವರ್ಷಗಳ ಕಾಲ ಅವರ ಕನ್ನಡ ಭಾಷೆಯಲ್ಲಿ ನಿರ್ದೇಶನ ಮಾಡಿದ 24 ಚಿತ್ರಗಳನ್ನ ನೋಡಿ ಅವುಗಳು ನನ್ನ ಮನಸ್ಸಿಗೆ ತಟ್ಟಿದ ಕೆಲವು ಮಾತುಗಳನ್ನು ದಾಖಲಿಸಬೇಕೆಂಬ ಹಂಬಲ ಈಡೇರಿತು
.
 |
ನಿರ್ದೇಶಕ ಅನ್ನೋ ಪದಕ್ಕೆ ಇನ್ನೊಂದೇ ಹೆಸರೇ ಪುಟ್ಟಣ್ಣ |
ಅದರ ಜೊತೆಯಲ್ಲಿಯೇ ಇನ್ನೊಂದು ಹುಚ್ಚು ಹತ್ತಿತ್ತು.. ಅವರು ಹುಟ್ಟಿ ಬೆಳೆದ ಊರನ್ನು ನೋಡಬೇಕು ಎನ್ನುವುದು.. ಅದು ಕೂಡ ಮೈಸೂರಿನ ನನ್ನ ಬ್ಲಾಗ್ ಲೋಕದ ಮಾರ್ಗದರ್ಶಿ, ಇತಿಹಾಸದ ಬಗ್ಗೆ ಅಪಾರ ಆಸಕ್ತಿ ಇರುವ, ಅಪರೂಪದ ಛಾಯಾಚಿತ್ರಕಾರ, ಬ್ಲಾಗ್ ಬರಹಗಾರ ಬಾಲೂ ಸರ್ ಅವರ ಸಹಾಯದಿಂದ ಈಡೇರಿತು..
ಪುಟ್ಟಣ್ಣನವರು ಹುಟ್ಟಿದ ಊರು, ಹುಟ್ಟಿದ ತಾಣ, ಬೆಳೆದ ಮನೆ, ಓಡಾಡಿದ ಜಾಗ ಅವರ ಗೆಳೆಯ ದಿವಂಗತ ಶ್ರೀ ಮೋಹನ್ ಕಂಪ್ಲಾಪುರ್ ಅವರ ಭೇಟಿ, ಅವರ ಬಾಯಲ್ಲಿ ತನ್ನ ಗೆಳೆಯ ಪುಟ್ಟಣ್ಣ ಅವರ ಬಗ್ಗೆ ಅಭಿಮಾನ ಪೂರಿತ ಮಾತುಗಳು.. ಆ ಊರಿನ ಜನತೆ ಪುಟ್ಟಣ್ಣ ಅವರ ಬಗ್ಗೆ ತೋರಿದ ಅಭಿಮಾನ ಎಲ್ಲವನ್ನು ಕಣ್ಣಾರೆ ನೋಡುವ ಕಿವಿಯಾರೆ ಕೇಳುವ ಭಾಗ್ಯ ನನಗೆ ದೊರಕಿತ್ತು. ಅದಕ್ಕೆ ಬಾಲೂ ಸರ್ ಅವರಿಗೆ ಧನ್ಯವಾದಗಳು..
 |
ಪುಟ್ಟಣ್ಣನವರ ಮನೆ |
 |
ಪುಟ್ಟಣ್ಣನವರು ಓಡಾಡಿದ ಜಗುಲಿಯಲ್ಲಿ ಕುಳಿತ ಅದ್ಭುತ ಕ್ಷಣ |
\
 |
ಪುಟ್ಟಣ್ಣನವರ ಗೆಳೆಯನ ಮನೆಯಲ್ಲಿ |
 |
ನನ್ನ ಕಾರು ಪುಣ್ಯ ಮಾಡಿತ್ತೋ. ನಾ ಪುಣ್ಯ ಮಾಡಿದ್ದೇನೋ ಗೊತ್ತಿಲ್ಲ.. ಬಿಡುವಿಲ್ಲದೆ ನನಗೆ ಸಾತ್ ಕೊಟ್ಟ ನನ್ನ ಗೆಳೆಯ |
 |
ಪುಟ್ಟಣ್ಣನವರು ಓಡಾಡಿದ ಹಳ್ಳಿಯ ರಸ್ತೆ |
 |
ನಮ್ಮ ಪುಟ್ಟಣ್ಣ ಸರ್ ಅವರು ಎಂದು ಹೆಮ್ಮೆಯಿಂದ ಹೇಳಿದ ಊರಿನವರು |
ಇಷ್ಟಕ್ಕೆ ನನ್ನ ಮನಸ್ಸು ಸಮಾಧಾನವಾಗಿರಲಿಲ್ಲ.. ಇನ್ನೊಂದು ಅದ್ಭುತ ಅನುಭವ ಕಾಯುತಿತ್ತು..
ಪುಟ್ಟಣ್ಣ ಕಣಗಾಲ್ ಅವರ ತಮ್ಮ ಶ್ರೀ ನರಸಿಂಹ ಶಾಸ್ತ್ರೀ ಅವರ ಭೇಟಿ.. ಮುಸ್ಸಂಜೆಯಲ್ಲಿ ಅವರನ್ನು ಹುಡುಕಿಕೊಂಡು ರಾಮನಾಥಪುರಕ್ಕೆ ಹೋದಾಗ, ಅವರು ನಮ್ಮನ್ನು ಕಂಡು ಆತ್ಮೀಯವಾಗಿ ಮಾತಾಡಿದ್ದೆ ಅಲ್ಲದೆ.. ಪುಟ್ಟಣ್ಣ ಅವರ ಕನ್ನಡದಲ್ಲಿ ತೆರೆಕಂಡ ಮೊದಲ ಚಿತ್ರ ಬೆಳ್ಳಿಮೋಡ ಚಿತ್ರ ಚಿತ್ರೀಕರಣಕ್ಕೆ ಮುಂಚಿನಿಂದ ತೆರೆಗೆ ಬರುವವರೆಗೂ ನೆಡೆದ ಅನೇಕ ಘಟನೆಗಳನ್ನು ನಿರರ್ಗಳವಾಗಿ ಹೇಳಿದ್ದು ಇನ್ನೂ ಕಣ್ಣ ಮುಂದೆ ನೆಡೆದ ಹಾಗೆ ಇದೆ..
 |
ಪುಟ್ಟಣ್ಣ ಅವರ ತಮ್ಮ ನರಸಿಂಹ ಶಾಸ್ತ್ರಿಗಳ ಜೊತೆ |
ಪುಟ್ಟಣ್ಣನವರ ಮನೆಯ ಜಗುಲಿಯಲ್ಲಿ ಕೂತು ತೆಗೆಸಿಕೊಂಡ ಚಿತ್ರ, ಅವರ ತಮ್ಮನೊಡನೆ ಕೂತು ಅವರ ಮಾತುಗಳನ್ನು ಕೇಳುತ್ತಾ ಕಳೆದ ಹೊತ್ತು ಎಲ್ಲವೂ ನೆನಪಾದ ಇಂದು ಅವರು ಭೌತಿಕವಾಗಿ ನಮ್ಮನ್ನು ಬಿಟ್ಟು ಹೋಗಿ ಮೂವತ್ತೈದು ವರ್ಷಗಳಾಗಿವೆ.
 |
ಮೂವರು ಅದ್ಭುತ ಜೀವಿಗಳು |
 |
ಅಪರೂಪದ ಕ್ಷಣ |
ಅವರ ಅಸಂಖ್ಯಾತ ಅಭಿಮಾನಿಗಳಲ್ಲಿ ಒಬ್ಬರಿಂದ ಅವರಿಗೆ ಒಂದು ಅಕ್ಷರಗಳ ನಮನ ..
ಅವರ ಪುಣ್ಯದಿನದಂದು ಅವರ 24 ಚಿತ್ರಗಳ ಬಗ್ಗೆ ಬರೆದ ಬ್ಲಾಗ್ ಬರಹಗಳನ್ನು ಸುಮ್ಮನೆ ಪ್ರಿಂಟ್ ತೆಗೆದು ಸ್ಪೈರಲ್ ಬೈಂಡ್ ಮಾಡಿಸಿದೆ.. ಮನಸ್ಸಿಗೆ ಏನೋ ಒಂದು ಖುಷಿ..
 |
ಕಾಗದದಲ್ಲಿ ಅಚ್ಚಳಿಯದೆ ಉಳಿಸುವ ಒಂದು ಪ್ರಯತ್ನ |
ಪುಟ್ಟಣ್ಣ ನಿರ್ದೇಶಕ.. ಚಿತ್ರಗಳು .. ಹಾಡುಗಳು, ಸಂಭಾಷಣೆ ಎಲ್ಲವೂ ಒಂದು ವಿಶ್ವವಿದ್ಯಾಲಯ.. ಆ ವಿದ್ಯಾಲಯದಲ್ಲಿ ಒಮ್ಮೆ ಹೋಗಿ ಓಡಾಡಿದ ಅನುಭವ ಎಲ್ಲರಿಗೂ ಆಗಲಿ..