Wednesday, January 22, 2020

ನರಕದ ಪಾಠ!!!

ಚಿತ್ರಗುಪ್ತ.. ಸೋತಿದ್ದ.. ಲೆಕ್ಕ ಪರಿಶೋಧಕ ಅಧಿಕಾರಿಗಳು ನರಕದಲ್ಲಿ ಚಿತ್ರಗುಪ್ತನನ್ನು ಚೆನ್ನಾಗಿ ರುಬ್ಬಿದ್ದರು.. ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕವಾದ ಉತ್ತರ ನಿರೀಕ್ಷಿಸುತ್ತಿದ್ದ ಅಧಿಕಾರಿಗಳು ಯಮರಾಜನ ಬಳಿ ಅಪ್ಪಣೆ ಪಡೆದು.. ಚಿತ್ರಗುಪ್ತನನ್ನು ನರಕದಲ್ಲೆಲ್ಲ ಓಡಾಡಿಸಿ ಪ್ರತಿಯೊಂದಕ್ಕೂ ಉತ್ತರ ಕೇಳಿ ಕೇಳಿ ಬರೆದುಕೊಳ್ಳುತ್ತಿದ್ದರು..

ಪಾಪಿಗಳ ಒಳಹರಿವು ಹೆಚ್ಚಾಗಿದ್ದರಿಂದ ಮತ್ತು ಶಿಕ್ಷಾವಧಿ ದೀರ್ಘವಾಗಿದ್ದರಿಂದ ನರಕದೊಳಗೆ ಬಂದವರು ಹೊರಹೋಗುವುದು ತಡವಾಗುತ್ತಿತ್ತು ..ಆದರೆ ಒಳ ಹರಿವು ಹೆಚ್ಚಾಗಿದ್ದರಿಂದ ಜನಸಂಖ್ಖ್ಯೆ ಹೆಚ್ಚಾಗಿ.. ನರಕದ ಬೀದಿ ಬೀದಿಗಳಲ್ಲಿ ಜನದಟ್ಟಣೆ ಹೆಚ್ಚಾಗಿ.. ಯಮರಾಜನ ಕೋಣಕ್ಕೆ ಓಡಾಡಲು ಜಾಗವಿರದೆ.. ಅದರ ತೂಕ ಹೆಚ್ಚಾಗಿತ್ತು.. ಯಮರಾಜನನ್ನು ಅನತಿ ದೂರ ಹೊತ್ತೊಯ್ಯುವ ಹೊತ್ತಿಗೆ ಏದುಸಿರು ಬಿಡುತ್ತಾ ನೀರಿಗೆ ಹಂಬಲಿಸುತ್ತಿತ್ತು.. ಇದನ್ನು ಕಂಡಿದ್ದ ಯಮರಾಜ.. ಕೋಣಕ್ಕೆ ಸ್ವಲ್ಪ ಬಿಡುವುಕೊಟ್ಟು ಪ್ರತಿದಿನ ನರಕ ಲೋಕದಲ್ಲಿ ತಾವೇ ಓಡಾಡಲು ಶುರು ಮಾಡಿದ್ದರು.. ಆಗ ಕಂಡಿದ್ದು ಜನದಟ್ಟಣೆ. ಎಲ್ಲೆಲ್ಲೂ ಜನ.. ಎಲ್ಲೆಲ್ಲೂಆರ್ತನಾದ .. ಚೀರಾಟ.. ಕೂಗಾಟ... ಆಗ ಅನಿಸಿದ್ದು.. ಅರೆ ನರಕದ ಲೆಕ್ಕದ ಪುಸ್ತಕ ಪರೀಕ್ಷೆ ಮಾಡಿ ಸಂವತ್ಸರಗಳೇ ಆಗಿದೆ.. ಸರಿ ಈ ನೆಪದಲ್ಲಿ ಅಧಿಕಾರಿಗಳು ಪರೀಶೀಲನೆ ಮಾಡಿ.. ಈ ಜನದಟ್ಟಣೆಯ ಬಗ್ಗೆ ನಿಖರವಾದ ಕಾರಣ.. ಅದನ್ನು ಸರಿ ಪಡಿಸುವ ಮಾರ್ಗ ತಿಳಿಸಬಹುದು ಎಂದು ಅಂದುಕೊಂಡು.. ಬ್ರಹ್ಮನಿಗೆ ಅರ್ಜಿ ಹಾಕಿದಾಗ.. ಅದು ಲೆಕ್ಕ ಪತ್ರದ ಅಧಿಕಾರಿ ಕುಬೇರನ ಬಳಿ ಹೋಗಿ.. ಕಡೆಗೆ ಶಿವನ ಅನುಮತಿ ಪಡೆದು.. ಅಧಿಕಾರಿಗಳನ್ನು ಭೂಮಿಯಿಂದ ಬರಲು ಹೇಳಿದ್ದರು..

ಚಿತ್ರಗುಪ್ತನನ್ನು ಕರೆದು.. "ನೋಡ್ರಿ.. ನಮ್ಮ ಲೋಕದ ಪರಿಶೋಧನೆ ಆಗಬೇಕು.. ಇಬ್ಬರು ಅಧಿಕಾರಿಗಳು ಬರುತ್ತಾರೆ.. ನಮ್ಮ ಲೆಕ್ಕದ ಪುಸ್ತಕ.. ನಮ್ಮ ಉಗ್ರಾಣ.. ನಮ್ಮ ನರಕಲೋಕ ಹೀಗೆ ಎಲ್ಲವನ್ನೂ ತೋರಿಸಿ.. ಅವರು ಕೇಳಿದ ಪ್ರಶ್ನೆಗಳಿಗೆ ಸಮಪರ್ಕವಾದ ಉತ್ತರ ಕೊಡಿ.. ಇದನ್ನು ನೋಡಿ ಅವರು ತಿಳಿಸುವ ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳೋಣ.. ಶತಮಾನಗಳಿಂದ ನಮ್ಮ ರೀತಿ ರಿವಾಜು ಬದಲಾಗೇ ಇಲ್ಲ.. ಅದನ್ನು ನಾವು ಬದಲಿಸಿಕೊಳ್ಳೋಣ.. ಅದೇನೋ ಐ ಎಸ್ ಓ ಅಂತೆಲ್ಲ ಹೇಳುತ್ತಾರಲ್ಲ.. ಅದನ್ನು ಮಾಡಿಸಿಕೊಳ್ಳೋಣ.. ಸರಿ ನಾ.   "

"ಆಗಲಿ ಯಮರಾಜರೇ . ಮಾಡೋಣ." ಅದರ ಆಳ ಅಗಲದ ಅರಿವಿಲ್ಲದೆ ಒಪ್ಪಿಕೊಂಡಿದ್ದ ಚಿತ್ರಗುಪ್ತರು ಈಗ ಬೆವರು ಸುರಿಸುತ್ತಿದ್ದರು..

ಎರಡು ದಿನದ ಪರಿಶೋಧನೆ ಮುಗಿಸಿ.. ಸಭೆ ಸೇರಿಸಿ.. ಯಮರಾಜರ ಮುಂದೆ ವಿವರ ಸಲ್ಲಿಸುತ್ತೇವೆ ಎಂದು ಹೇಳಿ ಕಳಿಸಿದ್ದರು..

ಚಿತ್ರಗುಪ್ತರು ಬೆವರು ಒರೆಸಿಕೊಳ್ಳುತ್ತಾ.. "ಯಮರಾಜರೇ.. ಅಧಿಕಾರಿಗಳ ಲೆಕ್ಕ ಪರಿಶೋಧನೆ ಮುಗಿದಿದೆಯಂತೆ.. ಅವರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟೆ.. ಆದರೆ ಉಗ್ರಾಣದ ಬಗೆಗಿನ ಕೆಲವು  ಪ್ರಶ್ನೆಗಳಿಗೆ ನಾ ಉತ್ತರ ಹೇಳಲಾಗಿಲ್ಲ.. ಅದನ್ನು ನಿಮ್ಮ ಮುಂದೆಯೇ ಸಭೆಯಲ್ಲಿ ಬಗೆಹರಿಸಬಹುದು ಎಂದು ಹೇಳಿದೆ"

"ಶಭಾಷ್ ಚಿತ್ರಗುಪ್ತರೇ.. ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ.. ನಿಮಗೆ ಮುಂದಿನ ಸಾಲಿನ ವೇತನ ಮೌಲ್ಯಮಾಪನದಲ್ಲಿ ಒಳ್ಳೆಯ ಅಂಕಗಳನ್ನು ಕೊಡುತ್ತೇನೆ.. ಶುಭವಾಗಲಿ.. ಆಗಲಿ ಅವರಿಗೆ ಬರಲು ಹೇಳಿ"

ಚಿತ್ರಗುಪ್ತರ ಎರಡು ಚಪ್ಪಾಳೆಗೆ.. ಆ ಅಧಿಕಾರಿಗಳು.. ಸಭೆಗೆ ಬಂದು.. ತಮಗೆ ನಿಗದಿಯಾಗಿದ್ದ ಆಸನದಲ್ಲಿ ಕೂತು... ತಮ್ಮ ವಿವರಗಳನ್ನೆಲ್ಲ ಓದತೊಡಗಿದರು.. ..

ಯಮರಾಜರು.. "ಅಧಿಕಾರಿಗಳೇ.. ನಿಮ್ಮ ಬಗ್ಗೆ ನಮ್ಮ ಚಿತ್ರಗುಪ್ತರು ಎಲ್ಲ ಹೇಳಿದ್ದಾರೆ.. ಇಲ್ಲಿ ಏನು ಸರಿಯಿದೆ ಎನ್ನುವುದು ಬೇಡ..ನಿಮ್ಮ ಕಾರ್ಯ ವೈಖರಿಯ ಬಗ್ಗೆ ನಮಗೆ ನಂಬಿಕೆಯಿದೆ .. ನಮಗೆ ಬೇಕಿರುವುದು ಯಾವ ವಿಚಾರವಾಗಿ ನಾವು ಮುತುವರ್ಜಿವಹಿಸಬೇಕು.. ಯಾವ ಯಾವ ರೀತಿ- ರಿವಾಜುಗಳನ್ನು ಉತ್ತಮ ಪಡಿಸಬಹುದು ಅದನ್ನು ಹೇಳಿ.. ಮಿಕ್ಕ ವಿವರಗಳನ್ನು ನೀವು ನಮಗೆ ಒಪ್ಪಿಸಿ.. ಅದನ್ನು ನಾ ಪರಿಶೀಲಿಸುತ್ತೇವೆ.. ನಿಮಗೂ ಹೊತ್ತಾಗುತ್ತದೆ ಅಲ್ಲವೇ.. "

ಯಮರಾಜರ ಈ ಮಾತು ಚಿತ್ರಗುಪ್ತನ ಕಾಲುಗಳಲ್ಲಿ ನಡುಕ ಹುಟ್ಟಿಸಿತು.. ಜೊತೆಯಲ್ಲಿ ಅಧಿಕಾರಿಗಳ ಮೊಗದಲ್ಲಿ ಸಮಾಧಾನ ತಂದಿತು..

"ರಾಜರೇ.. ನಿಮ್ಮ ನರಕಲೋಕ ಉತ್ತಮ ಸ್ಥಿತಿಯಲ್ಲಿ ಇರುವಂತೆ ನಿಮ್ಮ ಸಿಬ್ಬಂಧಿ ನೋಡಿಕೊಂಡಿದ್ದಾರೆ.. ಚಿತ್ರಗುಪ್ತರ ಕಾರ್ಯ ವೈಖರಿ,  ಅವರ ಜ್ಞಾನ, ಅವರ ಆಡಳಿತ ಎಲ್ಲವೂ ಸೊಗಸಾಗಿದೆ.. ಎರಡು ಮಾತಿಲ್ಲ.. ಎಲ್ಲೂ ಯಾವ ತಪ್ಪು ಕಾಣಿಸುತ್ತಿಲ್ಲ.. ದಟ್ಟಣೆ ಜಾಸ್ತಿಯಿದೆ.. ಅದು ಇರಲಿ ಬಿಡಿ.. ತಪ್ಪಿತಸ್ಥರ ವಿಚಾರಣೆ.. ಶಿಕ್ಷೆ.. ಅದರ ಅವಧಿ ಇವುಗಳು ಅದಕ್ಕೆ ಕಾರಣ.. ನಮಗೆ ಅರ್ಥವಾಗುತ್ತೆ.. ಆದರೆ ನಮಗೆ ಬೇಕಿರುವ ವಿವರ.. ಚಿತ್ರಗುಪ್ತರು ನನ್ನ ಬಳಿ ಇಲ್ಲ ಅಂದಿದ್ದಕ್ಕೆ ನಿಮ್ಮ ಮುಂದೆ ಈ ಚರ್ಚೆ.. "

"ಆಗಲಿ ಹೇಳಿ"

"ಉಗ್ರಾಣದಲ್ಲಿ ಎಣ್ಣೆಯ ಬಳಕೆ ಹೆಚ್ಚಾಗುತ್ತಿದೆ.. ಎಲ್ಲಿ ನೋಡಿದರೂ .. ಎಣ್ಣೆಯ ನೆಲ.. ಬರಿ ಎಣ್ಣೆಯ ಕಮಟು ವಾಸನೆ.. ಐದು ವರ್ಷಗಳ ಕರಪತ್ರಗಳಿಗೆ ಹೋಲಿಕೆ ಮಾಡಿ ನೋಡಿದರೆ.. ಇತ್ತೀಚಿನ ವರ್ಷಗಳಲ್ಲಿ ಎಣ್ಣೆಯ ಬಳಕೆ ಸಿಕ್ಕಾಪಟ್ಟೆ ಹೆಚ್ಚಾಗಿದೆ.. ಜೊತೆಯಲ್ಲಿ ಎಣ್ಣೆಯ ದಾಸ್ತಾನು ಕೂಡ ಅತಿ ಹೆಚ್ಚಾಗಿದೆ.. ಕತ್ತಿ, ಭರ್ಜಿ, ಶೂಲ, ಕತ್ತರಿ, ಗರಗಸ ಇನ್ನೂ ಅನೇಕ ಶಸ್ತ್ರಗಳು ತುಕ್ಕು ಹಿಡಿದಿವೆ.. ಅದರ ಉಪಯೋಗ ಕ್ಷೀಣಿಸಿದೆ.. ಇದಕ್ಕೆ ಉತ್ತರ ಕೇಳಿದರೆ.. ಇವರು ಕೊಡಲಿಲ್ಲ.. " ಎನ್ನುತ್ತಾ ಚಿತ್ರಗುಪ್ತರ ಕಡೆ ಅನುಮಾನದ ದೃಷ್ಟಿ ಬೀರಿದರು..

"ಅಧಿಕಾರಿಗಳೇ" ಎನ್ನುತ್ತಾ ಚಿತ್ರಗುಪ್ತರ ಕಡೆಗೆ ದೃಷ್ಟಿ ಬೀರಿ.. ಕೈಯಿಂದ ಸಮಾಧಾನವಾಗಿರುವಂತೆ ಚಿತ್ರಗುಪ್ತರಿಗೆ ತಿಳಿಸಿ.. "ನೋಡಿ.. ಭೂಲೋಕದಿಂದ ಬರುವ ನರಮಾನವರ ದಟ್ಟಣೆ ಹೆಚ್ಚಾಗುತ್ತಿದೆ.. ಅದು ಅಪಘಾತಗಳಿಂದ, ದ್ವೇಷ ಅಸೂಯೆಗಳಿಂದ, ಅಸ್ತಿ ವಿವಾದ, ಕಳ್ಳತನಗಳಿಂದ, ದುಷ್ಕೃತ್ಯಗಳಿಂದ, ಯುದ್ಧಗಳಿಂದ, ಭಯೋತ್ಪಾದನೆಗಳಿಂದ, ಅನಾರೋಗ್ಯಗಳಿಂದ .. ಹೀಗೆ ನೂರಾರು ಕಾರಣಗಳಿಂದ ಒಳ ಹರಿವು ಹೆಚ್ಚಾಗಿದೆ.. ಆದರೆ ಇಲ್ಲಿ ಮುಖ್ಯವಾಗಿರೋದು ಎಣ್ಣೆಯ ಬಳಕೆ ಮತ್ತು ಅದರ ದಾಸ್ತಾನು. ಇದಕ್ಕೆ ಮೊದಲ ಕಾರಣವೇನೆಂದರೆ.. ಇತ್ತೀಚಿನ ಸಿನೆಮಾಗಳು.. "
ಅಧಿಕಾರಿಗಳಿಗೆ ತಲೆ ಗಿರ್ ಅಂತು "ರಾಜರೇ.. ಎಣ್ಣೆ ಓಕೆ ಸಿನಿಮಾ ಯಾಕೆ" 

"ಹೇಳುತ್ತೀನಿ ಇರಿ.. ನೋಡಿ ಉಗ್ರಾಣದಲ್ಲಿ ಶಸ್ತ್ರಗಳ ಉಪಯೋಗ ಕಡಿಮೆ ಎಂದಿರಿ.. ಹೌದು..ಮೊದಲು ಕತ್ತಿ ,ಗುರಾಣಿಗಳು, ಚಾಕು, ಭರ್ಜಿಗಳು ಈಟಿಗಳು ಪೌರಾಣಿಕ ಸಿನೆಮಾಗಳಲ್ಲಿ ಮತ್ತು ಐತಿಹಾಸಿಕ ಸಿನೆಮಾಗಳಲ್ಲಿ ಉಪಯೋಗವಾಗುತ್ತಿದ್ದವು.. ಜನರು ಕುತೂಹಲದಿಂದ ನೋಡುತ್ತಿದ್ದರು.. ಇಲ್ಲಿಗೆ ಬಂದಾಗಲೂ ಅವರ ಅಪರಾಧಕ್ಕೆ ತಕ್ಕ ಶಿಕ್ಷೆ ಕೊಡುವಾಗ.. ಶಸ್ತ್ರಗಳ ಉಪಯೋಗವಾಗುತ್ತಿತ್ತು.. ಆದರೆ ಇತ್ತೀಚಿಗೆ ಬರಿ ಲಾಂಗ್, ಕತ್ತಿ, ಚಾಕು, ಇವೆಲ್ಲಾ ಸಿನೆಮಾಗಳಲ್ಲಿ ಯತೇಚ್ಛವಾಗಿ
ಉಪಯೋಗವಾಗುತ್ತಿದೆ.. ಜನಕ್ಕೆ ಅವುಗಳನ್ನು ನೋಡಿ ನೋಡಿ ಬೇಸತ್ತಿದ್ದಾರೆ.. ಸಿನಿಮಾ ಸಾಕು ಅಂತ ಬೀದಿಯಲ್ಲಿ ಓಡಾಡುತ್ತಿದ್ದಾರೆ ಅಲ್ಲೂ ಈ ಪುಡಿ ರೌಡಿಗಳು ಇದನ್ನೇ ಉಪಯೋಗಿಸುತ್ತಾರೆ..ಮಾಧ್ಯಮಗಳಲ್ಲಿಯೂ ಇದರದ್ದೇ ಮಾತುಕತೆ.. ಜನರು ಮನೆಯಲ್ಲಿ ತರಕಾರಿ ಕತ್ತರಿಸಲು ಕೂಡ ಬೇಸರ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ.. ಇನ್ನೂ ಉಳಿದ ಶಿಕ್ಷೆ ಅಂದರೆ ಕಾದ ಎಣ್ಣೆಯಲ್ಲಿ ಮುಳುಗೇಳಿಸುವುದು.. ಜನರಿಗೆ ಈ ಬೋಂಡಾ, ಬಜ್ಜಿ, ಗೋಬಿ, ಅದು ಇದು ಅಂತ ಕರಿದ ಪದಾರ್ಥಗಳ ಮೇಲೆ ವಿಪರೀತ ವ್ಯಾಮೋಹ.. ಅದೆಷ್ಟೇ ಹೊಟ್ಟೆ ತುಂಬಿದ್ದರೂ .. ಬೋಂಡಾ ಬಜ್ಜಿ ಅಂದರೆ ಬಾಯಲ್ಲಿ ನೀರು.. ಹಾಗಾಗಿ.. ಈ ಬಾಣಲೆಗಳನ್ನು ನೋಡಿದ ತಕ್ಷಣ ಅವರೇ ಭಟರ ಕೈಗಳನ್ನು ಬಲವಂತವಾಗಿ ಬಿಡಿಸಿಕೊಂಡು ಎಣ್ಣೆ ಬಾಣಲೆಯೊಳಗೆ ಧುಮುಕಿ ಮತ್ತೆ ಸಾಲಿಗೆ ಬಂದು ನಿಲ್ಲುತ್ತವೆ.. ಹಾಗಾಗಿ ಬಾಣಲಿಯಲ್ಲಿ ಬಿದ್ದವರೇ ಮತ್ತೆ ಮತ್ತೆ ಬಂದು ಬೀಳುತ್ತಿರುವುದರಿಂದ ಎಣ್ಣೆ ಎಲ್ಲಾ ಕಡೆ ಚೆಲ್ಲುತ್ತಿದೆ.. ಜೊತೆಯಲ್ಲಿ ಎಣ್ಣೆಯು ಅಧಿಕವಾಗಿ ಉಪಯೋಗವಾಗುತ್ತಿರುವುದರಿಂದ   ಅದರ ದಾಸ್ತಾನು ತುಸು ಹೆಚ್ಚಾಗಿಯೇ ಇದೆ . ಒಂದು ಸಾರಿ ಬಾಣಲಿಯಲ್ಲಿ ಬಿದ್ದವರು ಸಮಾಧಾನವಾಗದೆ ಮತ್ತೆ ಮತ್ತೆ ಬಾಣಲಿಯಲ್ಲಿ ಮಜ್ಜನ ಎಂಬ ರೀತಿಯಲ್ಲಿ ಬೀಳುತ್ತಲೇ ಇರುತ್ತಾರೆ ಮತ್ತೆ ಅಲ್ಲಿಂದ ಮೇಲೆತ್ತಲು ಪ್ರಯತ್ನ ಪಟ್ಟರು ಮತ್ತೆ ಮತ್ತೆ ಜಾರಿಕೊಂಡು ಅಲ್ಲಿಗೆ ಹೋಗಿ ಬೀಳುತ್ತಾರೆ.. ಹಾಗಾಗಿ ಜನರ ದಟ್ಟಣೆ ಹೆಚ್ಚಾಗಲು ಕಾರಣ. "

ಅಧಿಕಾರಿಗಳ ಬಾಯಿ ಕಟ್ಟಿಹೋಗಿತ್ತು.. ತರ್ಕಬದ್ಧವಾದ ಉತ್ತರ ಸಿಕ್ಕಿದ್ದರಿಂದ ಅವರಿಗೆ ಬದಲಾವಣೆಗೆ ದಾರಿ ಕೊಡಲು ಆಗುತ್ತಿರಲಿಲ್ಲ.. ಹೇಗೆ ಯೋಚಿಸಿದರೂ ಯಮರಾಜರ ಮತ್ತು ಚಿತ್ರಗುಪ್ತರ ಆಡಳಿತ ವೈಖರಿಯಲ್ಲಿ ಲೋಪವಿರಲಿಲ್ಲ... ಇದಕ್ಕೆ ಏನು ಹೇಳುವುದು ಎಂದು ಯೋಚಿಸುತ್ತಿರುವಾಗ..
"ಅಧಿಕಾರಿಗಳೇ.. ಇದಕ್ಕೆ ನೀವೇ ಏನಾದರೂ ಪರಿಹಾರ ಸೂಚಿಸಿ"

ತಲೆ ಕೆರೆದುಕೊಂಡ ಅಧಿಕಾರಿಗಳು.. "ಯಮರಾಜ ಪ್ರಭುಗಳೇ.. ನಮಗೆ ಹೊಳೆಯುತ್ತಿಲ್ಲ.. ನೀವೇ ಇದಕ್ಕೆ ಒಂದು ಪರಿಹಾರ ಹೇಳಿ.. ನಾವು ಭೂಲೋಕದಲ್ಲಿ ಚರ್ಚಿಸಿ ಇದಕ್ಕೆ ಒಂದು ಮಾರ್ಗ ಕಂಡು ಹಿಡಿಯುತ್ತೇವೆ.. "

ಈ ವಿಚಾರಗಳಲ್ಲಿ ಚಿತ್ರಗುಪ್ತನ ತಲೆ ಮೊಲದಂತೆ ಚುರುಕು.. ಯಮರಾಜರ ಹತ್ತಿರ ಹೋಗಿ.. ಕಿವಿಯಲ್ಲಿ ಏನೋ ಉಸುರಿದರು .. ಯಮರಾಜರ ಮೊಗ ದೀಪ ಹೊತ್ತಿಸಿದ ಗುಡಿಯಂತೆ ಆಯ್ತು.. "ಭಲಾ ಚಿತ್ರಗುಪ್ತರೇ.. ಭಲಾ.. ನೀವು ನಮ್ಮ ಜೊತೆಯಲ್ಲಿ ಇರುವುದೇ ನಮ್ಮ ಭಾಗ್ಯ.. ಆಯ್ತು. ಅಧಿಕಾರಿಗಳೇ.. ಇಲ್ಲಿ ಕೇಳಿ.. " ಎಂದು ಗಂಟಲು ಸರಿ ಮಾಡಿಕೊಂಡು ಕಣ್ಣುಗಳಲ್ಲಿಯೇ ಚಿತ್ರಗುಪ್ತರನ್ನು ಅಭಿನಂದಿಸಿ..

"ನೀವು ಭೂಲೋಕಕ್ಕೆ ಹೋದಮೇಲೆ.. ಸಿನಿಮಾ ನಿರ್ದೇಶಕರ ಮಂಡಳಿಗೆ ಹೋಗಿ.. ಚಿತ್ರಗಳನ್ನು ತೆಗೆಯುವ ಮೊದಲು ಕತೆ ಕಾದಂಬರಿಗಳನ್ನು ಓದಿ ಚರ್ಚಿಸಿ, ಉತ್ತಮ ಚಿತ್ರಕತೆ, ಉತ್ತಮ ನಟರ ಕೈಯಲ್ಲಿ ಪಾತ್ರ ಮಾಡಿಸಿ, ಇಂಪಾದ ಸಂಗೀತ, ಉತ್ತಮ ಸಾಹಿತ್ಯ, ಸಂಭಾಷಣೆ ಇದೆಲ್ಲ ಇರುವಂತೆ ನೋಡಿಕೊಳ್ಳಿ, ಹೊಡೆದಾಟ ಅಗತ್ಯ ಇದ್ದರೆ ಮಾತ್ರ ಇರಲಿ, ಸಿನಿಮಾದಲ್ಲಿ ಹೊಡೆದಾಟವಿರಲಿ ತಪ್ಪಿಲ್ಲ.. ಆದರೆ ಹೊಡೆದಾಟದ ಮಧ್ಯೆ ಸಿನಿಮಾ ಇರದಂತೆ ನೋಡಿಕೊಳ್ಳಿ. ನಟರಿಗೆ ಉತ್ತಮ ನಟನಾ ತರಬೇತಿ  ಕೊಡಿಸುವಂತೆ ಹೇಳಿ,, ಹೊಡೆದಾಟದಲ್ಲಿ ಚಾಕು, ಭರ್ಜಿ, ಕತ್ತಿ ಇದೆಲ್ಲ ಬಿಟ್ಟು.. ದೇಹಕ್ಕೆ ಕಸರತ್ತು ನೀಡುವ ಹೊಡೆದಾಟಗಳನ್ನು ಆಯೋಜಿಸಲು ಹೇಳಿ.. ಇದು ಒಂದು ಮಾರ್ಗ."
"ಎರಡನೆಯದು.. ಗೋಬಿ, ಬೋಂಡಾ, ಬಜ್ಜಿ ಇವೆಲ್ಲಾ ನಾಲಿಗೆಗೆ ರುಚಿ ನೀಡುತ್ತವೆ.. ಆದರೆ ಅದರಿಂದ ಹೃದಯದ ಕಾಯಿಲೆ, ರಕ್ತದೊತ್ತಡ ಹೀಗೆ ನೂರೆಂಟು ರೋಗಗಳು ಅಟಕಾಯಿಸಿಕೊಳ್ಳುತ್ತವೆ.. ಚಳಿಗಾಲದಲ್ಲಿ, ಮಳೆಗಾಲದಲ್ಲಿ ಕರಿದ ಪದಾರ್ಥಗಳನ್ನು ತಿನ್ನಬೇಕು ಅದು ಒಳ್ಳೆಯದು ಆದರೆ ವರ್ಷವೆಲ್ಲಾ ಅದನ್ನೇ ತಿನ್ನದಂತೆ ಆರೋಗ್ಯ ವಿಕಾಸ ಯೋಜನನೆಗಳನ್ನು ಚೆನ್ನಾಗಿ ವಿವರಿಸಿ.."
"ಇವೆರಡನ್ನು ನೀವು ಚೆನ್ನಾಗಿ ಪಾಲಿಸುವಂತೆ ನೋಡಿಕೊಂಡರೆ.. ನಮ್ಮ ನರಕ ಲೋಕ ಮೊದಲಿನಂತೆ ಆಗುತ್ತದೆ.. ಏನಂತೀರಾ"

ಸುಲಿದ ಬಾಳೆಹಣ್ಣಿನಂತೆ ಪರಿಹಾರ ಕೊಟ್ಟ ಯಮಧರ್ಮರಾಜರಿಗೆ ಮತ್ತು ಇದರ ರೂವಾರಿ ಚಿತ್ರಗುಪ್ತರಿಗೆ ಧನ್ಯವಾದಗಳು ಎಂದು ತಮ್ಮ ವಿವರದ ಕಡತಗಳನ್ನು ಯಮರಾಜರಿಗೆ ಒಪ್ಪಿಸಿ ಭೂಲೋಕದೆಡೆಗೆ ಪಯಣಬೆಳೆಸಿದರು..

ತಲೆಯಲ್ಲಿನ ಯೋಚನೆಗಳು ಯೋಜನೆಗಳಾಗಿ ಕಾರ್ಯರೂಪಕ್ಕೆ ಬರುವ ಹಾದಿಯಲ್ಲಿ ಹೆಜ್ಜೆ ಹಾಕತೊಡಗಿದರು.. !!!!

Wednesday, January 15, 2020

ಆಶಾ ಪಾಶ ಭಾಗ ೨?

ಮುಂದೆ.. ... !!!

ಕಣ್ಣು ಬಿಟ್ಟಾಗ.. ತಲೆ ಜೋಮು ಹಿಡಿದಿತ್ತು.. ಬಲವಾದ ಪೆಟ್ಟು ರಕ್ತಧಾರೆಯಾಗಿತ್ತು ಅನಿಸುತ್ತದೆ... ಸುತ್ತಲೂ ಬಿಳಿ ಬಿಳಿ ಪರದೆ.. ದೊಡ್ಡ ಗಡಿಯಾರ.. ಹಾಸಿಗೆ.. ಹೊದಿಕೆ ಎಲ್ಲವೂ ಬಿಳಿ.. ಪಕ್ಕದಲ್ಲಿದ್ದ ಉಪಕರಣ ಎಂಥದೋ ಸದ್ದು ಮಾಡುತ್ತಾ, ವಿಧ ವಿಧವಾದ ಗೆರೆಗಳನ್ನು ಅಂಕೆಗಳನ್ನು ತೋರಿಸುತ್ತಿತ್ತು.. ಕೈಗೆ ಸೂಜಿ ಚುಚ್ಚಿ ಅದಕ್ಕೆ ಟ್ಯೂಬ್ ಜೋಡಿಸಿ.. ನೇತು ಹಾಕಿದ್ದ ಬಾಟಲಿಯಿಂದ ದ್ರವ ದೇಹದೊಳಗೆ ಹೋಗುತ್ತಿತ್ತು.. ಕಾಲು ಅಲುಗಾಡಿಸೋಕೆ ಆಗುತ್ತಿಲ್ಲ..

ಸುಮಾರು ಹೊತ್ತಾದ ಮೇಲೆ, ಯಾರೋ ಹತ್ತಿರ ಬಂದು ತಲೆ ಸವರಿದ ಅನುಭವ.. ಮೆಲ್ಲನೆ ಕಣ್ಣುಗಳನ್ನು ಅತ್ತ ಹಾಯಿಸಿದ ಸಂದೀಪ್.. ಕಣ್ಣುಗಳು ಅಲ್ಲಿಗೆ ತಲುಪುತ್ತಿಲ್ಲ.. ಕೈಗಳು ತಣ್ಣಗಿನ ಅನುಭವ ನೀಡುತ್ತಿದೆ.. ಹಿತವಾದ ಸ್ಪರ್ಶ.. ಒಂದು ಕೈಯನ್ನು ಹೊದಿಕೆಯೊಳಗಿಂದ ಎತ್ತಿ ಆ ಕೈಗಳನ್ನು ಮುಟ್ಟಿದಾಗ ಅನುಭವ.. ಅದು ಲಾವಣ್ಯ..

ಮೆಲ್ಲಗೆ ಅವಳ ಕೈಯನ್ನು ಎಳೆದುಕೊಂಡು.. ತನ್ನ ಕಣ್ಣಾಲಿಗಳ ನೇರಕ್ಕೆ ತನ್ನ ಬಲಭಾಗಕ್ಕೆ ಅವಳನ್ನು ನಿಲ್ಲಿಸಿಕೊಂಡ ಸಂದೀಪ್.. ಲಾವಣ್ಯಳ ಮುಖ ಬಾಡಿತ್ತು.. ಏನೋ ಕಳವಳ.. ಹೇಳಬೇಕೆಂದು ಚಡಪಡಿಸುತ್ತಿರುವ ತುಟಿಗಳ ಚಲನೆ.. ಆದರೆ ಹೇಳಲಾಗುತ್ತಿಲ್ಲ..

ಮೆಲ್ಲಗೆ ಹಾಸಿಗೆಯ ಮೇಲೆ ಕೂತುಕೋ ಅಂತ ಕಣ್ಣ ಸನ್ನೆಯಲ್ಲಿ ಹೇಳಿ.. ಅವಳು ಕೂತ ಮೇಲೆ ಅವಳ ಬೆರಳುಗಳಲ್ಲಿ ತನ್ನ ಬೆರಳುಗಳನ್ನು ಸವರುತ್ತಾ.. "ಏನಾಯಿತು" ಎನ್ನುವ ಪ್ರಶ್ನೆಯನ್ನು ಕಣ್ಣಲ್ಲೇ ಕೇಳಿದ..

ಅವಳು ಇನ್ನೇನು ಏನೋ ಹೇಳಬೇಕು.. ಅಷ್ಟರಲ್ಲಿ ಖಾಕಿ ಸಮವಸ್ತ್ರ ಧರಿಸಿದ ಇಬ್ಬರು ವ್ಯಕ್ತಿಗಳು ಹಾಸಿಗೆಯ ಎಡಭಾಗಕ್ಕೆ ಬಂದು ನಿಂತರು..

"ಮಿ.. ಸಂದೀಪ್, ಹೇಗಿದ್ದೀರಾ, ಡಾಕ್ಟರ್ ಹತ್ತಿರ ಒಪ್ಪಿಗೆ ಪಡೆದು ಬಂದಿದ್ದೇವೆ. ಇವತ್ತು ಸಂಜೆಗೆ ನೀವು ಮನೆಗೆ ಹೋಗಬಹುದು.. ಪೆಟ್ಟೇನೂ ಬಲವಾಗಿ ಬಿದ್ದಿತ್ತು.. ಆದರೆ ತೀವ್ರವಾದ ಪರಿಣಾಮ ಏನೂ ಮಾಡಿಲ್ಲ.. ರಕ್ತ ಹೋಗಿತ್ತು.. ನೀವು ನಿಸ್ತೇಜವಾಗಿ ಮಲಗಿದ್ದೀರಿ.. ಲಾವಣ್ಯ ಮೇಡಂ ನಮಗೆ ಸಮಯಕ್ಕೆ ಸರಿಯಾಗಿ ಹೇಳದೆ ಹೋಗಿದ್ದರೇ 
ನಿಮ್ಮ ಪರಿಸ್ಥಿತಿ ಗಂಭೀರವಾಗಿರುತ್ತಿತ್ತು.. " ಬಲಭಾಗಕ್ಕೆ ಬರಲು ಸಂದೀಪ್ ಹೇಳಿದಾಗ.. ಅವರಿಬ್ಬರೂ ಇತ್ತ ಕಡೆ ಬಂದರು.. ಧನ್ಯವಾದಗಳನ್ನು ಕಣ್ಣಲ್ಲಿಯೇ ಹೇಳಿದ..

ಸಂದೀಪ್ ಲಾವಣ್ಯಳ ಕಡೆ ನೋಡಿ.. ಕಣ್ಣಲ್ಲೇ ಕೃತಜ್ಞತೆ ಸಲ್ಲಿಸಿದ..

ಅವಳು ಕೈಬೆರಳುಗಳನ್ನು ಒಮ್ಮೆ ಒತ್ತಿದಳು..

"ಸಂದೀಪ್. ಅಲ್ಲಿ ಏನು ನೆಡೆಯಿತು ಎನ್ನುವ ನಿಮ್ಮ ಪ್ರಶ್ನಾರ್ಥಕ ಮುಖಕ್ಕೆ ಉತ್ತರ ಲಾವಣ್ಯ ಮೇಡಂ ಕೊಡುತ್ತಾರೆ.. " ಎಂದು ಲಾವಣ್ಯಳ ಮುಖ ನೋಡಿದರು ಇನ್ಸೆಪಕ್ಟರ್!

"ಸಂದೀಪ್.. ನೀವು ಆ ಮನೆ ಕಡೆಗೆ ಹೋಗುತ್ತೇನೆ ಎಂದಾಗ ನನಗೇನೋ ಮನದಲ್ಲಿಯೇ ಗಲಿಬಿಲಿ ಶುರುವಾಗಿತ್ತು.. ಅದಕ್ಕೆ ನಿಮ್ಮ ಹಿಂದೆಯೇ ನಾನು ನನ್ನ ಸ್ಕೂಟಿಯಲ್ಲಿ ಬಂದೆ. ನೀವು ನಿಮ್ಮ ಆಫೀಸ್ ವಿಚಾರ, ಇಮೇಲ್, ಕರೆ ಅದು ಇದು ಅಂತ ಮುಳುಗಿಹೋಗಿದ್ದಿರಿ, ಹಾಗಾಗಿ ನಿಮ್ಮ ಪಕ್ಕದಲ್ಲಿಯೇ ನಾ ಬರುತ್ತಿದ್ದದು ನಿಮಗೆ ಅರಿವಾಗಿರಲಿಲ್ಲ.. ಇರಲಿ.. ನೀವು ಆ ಕಟ್ಟಡದೊಳಗೆ ಹೋದಿರಿ .. .ಸ್ವಲ್ಪ ಹೊತ್ತಿನ ನಂತರ ಸೆಕ್ಯೂರಿಟಿ ಮನೆಯೊಳಗೇ ಬಂದ .ಸೆಕ್ಯೂರಿಟಿ ಕೇಳಿದ್ದಕ್ಕೆ  ಉತ್ತರಿಸಿ ಒಳಗೆ ಹೋದಿರಿ.. ಸೆಕ್ಯೂರಿಟಿ ತನ್ನ ಕುರ್ಚಿಗೆ ಮರಳಿ ಬಂದು..ಕೈಯನ್ನು ಮೆಲ್ಲಗೆ ಆಡಿಸಿ ಯಾರಿಗೋ ಏನೋ ಸಂದೇಶ ರವಾನಿಸಿದ.. ಆಗ ಅರ್ಥವಾಯಿತು.. ನಿಮಗೇನೋ ತೊಂದರೆ ಇರಬಹುದು ಎಂದು.. "

"ಅಚಾನಕ್.. ಮನೆಯೊಳಗೇ ಯಾರೋ ಹೋದಂತೆ ಭಾಸವಾಯಿತು. ಸೆಕ್ಯೂರಿಟಿ, ಮೆಲ್ಲಗೆ ಅಲ್ಲಿಂದ ಜಾಗ ಖಾಲಿ ಮಾಡಿ.. ಒಳ ಹೊಕ್ಕ.. ನನಗೇನೋ ಗಾಬರಿಯಾಯಿತು.... ಅಪ್ಪನಿಗೆ ಕರೆ ಮಾಡಿ.. ನಾನೂ ಆ ಮನೆಯೊಳಗೇ ಹೊಕ್ಕೆ.. ದಿನವೂ ಓಡಾಡುತ್ತಿದ್ದರಿಂದ ಮೂಲೆ ಮೂಲೆಯೂ ಪರಿಚಯವಿತ್ತು.. ಮೆಲ್ಲಗೆ ನೀವು ಹೋದ ಹಾದಿಯಲ್ಲಿಯೇ ಬಂದೆ.. ಸೆಕ್ಯೂರಿಟಿ.. ಮತ್ತೆ ಮುಖಕ್ಕೆ ಮಂಕಿ ಟೋಪಿ ಹಾಕಿಕೊಂಡಿದವನೊಬ್ಬ ಕೈಯಲ್ಲಿ ಒಂದು ಕಬ್ಬಿಣದ ಸಲಾಕೆ ಹಿಡಿದು.. ನಿಮ್ಮನ್ನೇ ಹಿಂಬಾಲಿಸುತ್ತಿದ್ದ.. ಆ ಮೆಟ್ಟಿಲಿಳಿದು ನೀವು ಹೋದಾಗ.. ಅವರು ನಿಮ್ಮನ್ನುಹಿಂಬಾಲಿಸಿದರು .. ನಾ ಕೂಗುವ ಹಾಗಿರಲಿಲ್ಲ.. ಕೂಗಿದರೆ.. ತಕ್ಷಣ ಅಪಾಯ ಮಾಡುವ ಸಾಧ್ಯತೆ ಇತ್ತು.. ನಿಮ್ಮ ತಲೆಗೆ ಬಲವಾದ ಪೆಟ್ಟು ಕೊಟ್ಟರು.. ಆ ಆಗಂತುಕನು  ಕೊಟ್ಟ ಪೆಟ್ಟು ನಿಮಗೆ ಬೀಳಲಿಲ್ಲ.. ಆದರೆ ಸೆಕ್ಯೂರಿಟಿ ಕೊಟ್ಟ ಏಟು ಬಲವಾಗಿಯೇ ಬಿತ್ತು... ನಾ ಚೀರದೆ.. ಮೆಲ್ಲಗೆ ಹೊರಗೆ ಬಂದು.. ಆ ಪೆಟ್ಟಿಗೆಯ ಮುಚ್ಚಳ ಮುಚ್ಚಿ.. ಅಲ್ಲಿಯೇ ಇದ್ದ ಒಂದು ಕೋಲನ್ನು ಚಿಲಕಕ್ಕೆ ಸಿಕ್ಕಿಸಿ.. ಅಪ್ಪನಿಗೆ ಕರೆಮಾಡಿ ಎಲ್ಲಾ ತಿಳಿಸಿ. ಪೊಲೀಸು ಹಾಗೂ ಆಂಬುಲೆನ್ಸ್ ಕಳಿಸುವಂತೆ ಹೇಳಿದೆ.. "

"ಸಂದೀಪ್.. ಆ ಸೆಕ್ಯೂರಿಟಿ ನಮ್ಮ ಕುಟುಂಬಕ್ಕೆ ಚಿರಪರಿಚಿತ.. ಅದ್ಯಾಕೆ ಹಾಗೆ ಮಾಡಿದನೋ ಗೊತ್ತಿಲ.. ಸರ್..ನೀವೇ ನಿಜವನ್ನು ಹೊರಗೆ ತರಬೇಕು.. "

ಇನ್ಸ್ಪೆಕ್ಟರ್ ಸ್ವಲ್ಪ ಹೊತ್ತು ಸುಮ್ಮನಿದ್ದು.. "ಮೇಡಂ .. ನೀವೇನು ಯೋಚಿಸಬೇಡಿ.. ಆಗಲೇ ಘಟನೆ ನೆಡೆದು ನಾಲ್ಕು ದಿನವಾಗಿದೆ, ನಮ್ಮ ಕೆಲಸ ಆಗಲೇ ಶುರುಮಾಡಿದ್ದೇವೆ"

"ಹಾ ನಾಲ್ಕು ದಿನವೇ" ಸಂದೀಪ್ ಕಣ್ಣಲಿಯೇ ಪ್ರಶ್ನೆ ಕೇಳಿದ..

"ಹೌದು ಸಂದೀಪ್.. ನಾಲ್ಕು ದಿನದಿಂದ ನಿಮಗೆ ಪ್ರಜ್ಞೆ ಇರಲಿಲ್ಲ.. ನಿಮ್ಮ ಪರಿಸ್ಥಿತಿ ಸುಧಾರಿಸಿದೆ.. ನೀವು ಮೊದಲಿನಂತೆ ಆಗುತ್ತೀರಿ.. ಒಂದು ತಿಂಗಳು ಬೆಡ್ ರೆಸ್ಟ್ ತೆಗೆದುಕೊಳ್ಳಬೇಕು.. ಲಾವಣ್ಯ.. ಮೇಡಂ.. ಇದರ ಹಿಂದೆ ಇರುವ ವ್ಯಕ್ತಿಯನ್ನು ನಮ್ಮ ಕಸ್ಟಡಿಗೆ ತೆಗೆದುಕೊಂಡ್ಡಿದ್ದಾಯ್ತು.. ಈಗ ಅವರನ್ನು ನಮ್ಮ ಠಾಣೆಯಲ್ಲಿ ಇಟ್ಟು ಇಲ್ಲಿಗೆ ಬಂದೆವು.. "

"ಅಚ್ಚರಿಯ ಮೇಲೆ ಅಚ್ಚರಿ.. ಇಷ್ಟು ಬೇಗ ಸುಳಿವು ಸಿಕ್ಕಿತೇ ಸರ್.. ನಿಜವಾಗಿಯೂ ಸಂತೋಷ.. "

"ಹೌದು ಮೇಡಂ ನಮಗೂ ಇಷ್ಟುಬೇಗ ಈ ಕೇಸ್ ದಡ ಮುಟ್ಟುತ್ತದೆ ಎನ್ನುವ ಅರಿವಿರಲಿಲ್ಲ.. ಸೆಕ್ಯುರಿಟಿಗೆ ಮತ್ತು ಇನ್ನೊಬ್ಬನಿಗೆ ಸಿಕ್ಕಾಪಟ್ಟ ಬಿಸಿ ಮುಟ್ಟಿಸಿ, ನಮ್ಮ ಭಾಷೆಯಲ್ಲಿ ಕೇಳಿದ ಮೇಲೆ ಮೂರು ದಿನವಾದ ಮೇಲೆ ಬಾಯಿ ಬಿಟ್ಟರು.. ಪಾಪ್ ಮುಂಡೇವು ಮೊದಲೇ ಹೇಳಿದ್ದಾರೆ ಮೂರು ದಿನ ಅವರಿಗೆ ಸಿಕ್ಕ ಶಿಕ್ಷೆ ತಪ್ಪುತ್ತಿತ್ತು... "

"ಇನ್ನೂ ಕುತೂಹಲ ಬೇಡ ಎಂದು "ಸರಿ ಸರಿ.. ಇರಿ.. ಹೇಳುತ್ತೇನೆ.. ಆ ಸೆಕ್ಯೂರಿಟಿ ಜೊತೆಗಿದ್ದವ ಅವನ ಬಂಟ.. ಆದರೆ ಇವರಿಬ್ಬರಿಗೂ ಬಾಸ್ ಯಾರು ಗೊತ್ತೇ.. "

ಲಾವಣ್ಯ ಮತ್ತು ಸಂದೀಪ್ ಅವರ ಹಣೆಗಳಲ್ಲಿ ಗೆರೆ ಮೂಡಿದವು..

"ನಿಮ್ಮ ಅಪ್ಪ ಮೇಡಂ.. ಕಾರಣವಿಷ್ಟೇ.. ಯಾವುದೋ ವ್ಯವಹಾರದಲ್ಲಿ ಕುತ್ತಿಗೆ ತನಕ ಹಣದ ಮುಗ್ಗಟ್ಟು ಬಂದು ಬಿಟ್ಟಿತ್ತು.. ಹೇಗಾದರೂ ಅದನ್ನು ಅಡ್ಜಸ್ಟ್ ಮಾಡುವ ತವಕ..ಯಾರಿಗೂ ಗೊತ್ತಾಗದ ಹಾಗೆ ಒಂದು ಕಳ್ಳ ವ್ಯವಹಾರ ಮಾಡುತ್ತಿದ್ದರು.. ಅದು ವಿಪರೀತಕ್ಕೆ ಹೋಗಿ ಅಪಾರ ದುಡ್ಡು ಬೇಕಾಗಿತ್ತು.. ಅದರಿಂದ ತಪ್ಪಿಸಿಕೊಳ್ಳಲು ನಾನಾ ಮಾರ್ಗ ಹುಡುಕುತ್ತಿದ್ದಾಗ.. ಅರಿವಿಗೆ ಬಂದದ್ದು ಸಂದೀಪನ ಅಪ್ಪ ತಮ್ಮ ಮನೆಯ ಯಾವುದೋ ಕೋಣೆಯೊಳಗೆ ಸಿಗಬಹುದು / ಇರಬಹುದು ಎನ್ನುವ ನಿಧಿಯ ನಕ್ಷೆ.. ಅದನ್ನು ಹೇಗಾದರೂ ಹುಡುಕಿಸಿದರೆ ತನ್ನ ಕಷ್ಟಗಳು ಮರೆಯಾಗಬಹುದು ಎಂದು .. ಆತನೇ ಲಾವಣ್ಯ ಮೇಡಂ ಅವರಿಗೆ ನಿಮ್ಮ ಬಗ್ಗೆ ಪ್ರೀತಿ ನಂಬಿಕೆಯೆಲ್ಲಾ ಹುಟ್ಟಿಸಿ, ಆ ಮನೆಯನ್ನು ವಾಸವಾಗಿದ್ದ ಮನೆಯ ತರಹ ಕಾಣಿಸಲು ನಿತ್ಯವೂ ದೀಪ ಹಚ್ಚಿ ಬರೋದನ್ನು ಲಾವಣ್ಯ ಮೇಡಂ ಅವರಿಗೆ ಹೇಳಿ ಮಾಡಿಸುತ್ತಿದ್ದರು.. ಮೇಡಂ ಹೋದ ಮೇಲೆ ಮನೆಯನ್ನೆಲ್ಲ ಶೋಧಿಸುವ ಕೆಲಸ ಮಾಡುತ್ತಿದ್ದರು.. ಆದರೆ ಯಶಸ್ಸು ಸಿಕ್ಕಿರಲಿಲ್ಲ.. ಮೇಡಂ ಪಾಪ ನಿಮಗೇನೂ ಇದರ ಬಗ್ಗೆ ಗೊತ್ತಿಲ್ಲ.. ಸಂದೀಪ್ ಅವರ ಅಪ್ಪನ ಜೊತೆಯಲ್ಲಿ ಫೋನಿನಲ್ಲಿ ಮಾತಾಡುವುದು ಕದ್ದು ಕೇಳಿದ್ದ ಅವರು ಇದಕ್ಕೆ ಒಂದು ವ್ಯೂಹ ರಚಿಸಿದ್ದರು.. ಮನೆಯೊಳಗೇ ಬಂದು ನೀವು ಆ ನಕ್ಷೆಯನ್ನು ಹುಡುಕಿದ ಮೇಲೆ ಅದನ್ನು ತಾನು ತೆಗೆದುಕೊಂಡು ತಮ್ಮ ಕಷ್ಟಗಳಿಂದ ಪಾರಾಗುವ ಪ್ಲಾನ್ ಅವರದ್ದು.. ಎಲ್ಲವೂ ಅವರಂದು ಕೊಂಡಂತೆ ಆಯಿತು.. ಆದರೆ ಪೆಟ್ಟು ಬೀಳುವ ಮುನ್ನ ಸಂದೀಪ್ . ತನ್ನ ಅಪ್ಪನಿಗೆ  "ಸಿಕ್ಕಿತು"  ಎಂದು ವಾಟ್ಸಾಪ್ ಸಂದೇಶ ಕಳಿಸಿದ್ದು.. ಅವರು ಅದನ್ನು ಲಾವಣ್ಯ ಅವರ ಅಪ್ಪನಿಗೆ ರವಾನಿಸಿದ್ದು.. ನಂತರ ಲಾವಣ್ಯ ಅವರ ಅಪ್ಪ ಸೆಕ್ಯುರಿಟಿಗೆ ಕರೆ ಮಾಡಿ ... ಮುಂದೆ... ನಿಮಗೆ ಹೀಗೆ ಆಗಿದ್ದು..ಇರಿ ಇರಿ.. ಹೇಳ್ತೀನಿ.. ಅವರ ಅಪ್ಪ ಸೆಕ್ಯೂರಿಟಿ ಮತ್ತೆ ಅವನ ಬಂಟನ ಜೊತೆಯಲ್ಲಿ ಈ ವ್ಯೂಹ ರಚಿಸಿದ ಮೇಲೆ.. ನಿಮಗೆ ತಲೆಗೆ ಪೆಟ್ಟು ಬಿತ್ತು.. ತಕ್ಷಣ ಸೆಕ್ಯೂರಿಟಿ ಗಾಬರಿಯಲ್ಲಿ ಮೇಡಂ ಅವರ ಅಪ್ಪನಿಗೆ ಕರೆ ಮಾಡಿ.. ಸರ್ ಏಟು ಜೋರಾಗಿಯೇ ಬಿದ್ದಂಗಿದೆ.. ಬೇಗ ಬನ್ನಿ ಸರ್.. ಆಮೇಲೆ ಏನಾದರೂ ಹೆಚ್ಚು ಕಮ್ಮಿಯಾದರೆ ನಮ್ಮ ತಲೆಗೆ ಬರುತ್ತದೆ..  ಎಂದು ಹೇಳಿದ.. ನಂತರ ಯಾರೋ ನೆಡೆದು ಬರುತ್ತಿರುವ ಸದ್ದು.. ಗೆಜ್ಜೆಯ ಸದ್ದು.. ಅದು ನೀವೇ ಅಂತ ಗೊತ್ತಾದ ಮೇಲೆ.. ಇನ್ನೂ ಗಾಬರಿ ಹೆಚ್ಚಾಗಿ..  ಜಾರಿ ಬಿದ್ದ .. ಸಂದೀಪನನ್ನ ಮೆಲ್ಲಗೆ ಎಳೆದು ಇತ್ತ ಕಡೆ ಕೂರಿಸಿ.. ಅವನು ಮತ್ತು ಅವನ ಬಂಟ.. ಅಲ್ಲಿಯೇ ಮರೆಯಾಗಿ ಕೂತರು.. ಅಷ್ಟು ಪುಟ್ಟ ಸಮಯದಲ್ಲಿಯೇ.. ಸೆಕ್ಯೂರಿಟಿ ತನ್ನ ತಲೆ ಉಪಯೋಗಿಸಿ... ಆ ನಕ್ಷೆಯನ್ನು ಕಸಿದುಕೊಂಡು ತನ್ನ ಜೇಬಿನಲ್ಲಿ ಇಟ್ಟುಕೊಂಡು.. . ಛಾವಣಿಯಿಂದ ನೇತಾಡುತ್ತಿದ್ದ ಕಬ್ಬಿಣದ ಸರಳು ಸಂದೀಪನ ಮೇಲೆ ಬಿದ್ದಿದೆ ಎಂದು ನಂಬಿಕೆ ಬರುವಂತೆ ಮಾಡಿ ತಾನು  ಕೂತಿದ್ದ.. ನೀವು ಚಿಲಕಕ್ಕೆ ಕಡ್ಡಿ ತೂರಿಸಿ.. ಅವರಿಬ್ಬರೂ ಹೊರಗೆ ಬರದಂತೆ ನೋಡಿಕೊಂಡಿರಿ.. ನೀವು  ಸಂದೀಪ್ ಅವರನ್ನು ಆಸ್ಪತ್ರೆಗೆ ಸೇರಿಸಿದಿರಿ.. ನಿಮ್ಮ ಅಪ್ಪ ಪೋಲಿಸಿಗೆ  ಕರೆ ಮಾಡಿ.. ಕಂಪ್ಲೇಂಟ್ ಕೊಟ್ಟು FIR ದಾಖಲಿಸಿದರು.. ಇವುಗಳ ನಡುವೆ..  ಸೆಕ್ಯುರಿಟಿಗೆ ಕರೆ ಮಾಡಿ ಏನಾಯಿತು ಎಂದು ವಿವರವಾಗಿ ಕೇಳಿದರು ..ಎಲ್ಲವೂ ತಾನು ಅಂದುಕೊಂಡಂತೆಯೇ ಆಗಿದೆ ಎಂದು ಅರಿವಾದ ಮೇಲೆ.. ನಿರಾಳವಾಗಿ ಸಹಜ ಸ್ಥಿತಿಯಲ್ಲಿ ಎಲ್ಲರೊಡನೆ ಸಹಜವಾಗಿ ವರ್ತಿಸಲು ಶುರುಮಾಡಿದರು.. ನಮ್ಮ ಟ್ರೀಟ್ಮೆಂಟ್ ಕೊಟ್ಟ ಮೇಲೆ  ಸೆಕ್ಯೂರಿಟಿ ಎಲ್ಲವನ್ನು ಬಾಯಿ ಬಿಟ್ಟಾ.. ಈಗ ನಿಮ್ಮ ತಂದೆ, ಸೆಕ್ಯೂರಿಟಿ ಮತ್ತು ಆ ಬಂಟ ನಮ್ಮ ಠಾಣೆಯಲ್ಲಿ ಬೆಂಚನ್ನು ಕಾಯುತ್ತಿದ್ದಾರೆ.. 

"ಸಂದೀಪ್.. ಏನೂ ಯೋಚನೆ ಬೇಡ.. ಲಾವಣ್ಯ ಮೇಡಂ ಅವರ ಅಪ್ಪನ ಬಗ್ಗೆ ಪೂರ್ತಿ ವಿಚಾರಿಸಿ.. ಯಾಕೆ ಹಾಗೆ ಮಾಡಿದರು, ಎಲ್ಲಿ ಏನಾಯಿತು ಎಲ್ಲವನ್ನು ಹೊರಗೆ ತರುತ್ತೇವೆ.. ನೀವು ಏನೂ ಯೋಚಿಸಬೇಡಿ ಮೇಡಂ.. ನಿಮ್ಮ ಅಪ್ಪ ಒಳ್ಳೆಯವರು.. ಯಾವುದೋ ಜಾಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.. ಅದನ್ನು ನಾವು ಕಂಡು ಹಿಡಿಯುತ್ತೇವೆ.. ನೀವು ಆರಾಮಗಿರಿ.. ಅದರ ಸುಳಿವು ನಮಗೆ ಆಗಲೇ ಸಿಕ್ಕಿದೆ.. ಇನ್ನೊಂದು ವಾರ ನಂತರ ಎಲ್ಲವೂ ತಿಳಿಯಾಗುತ್ತದೆ.. "

ಸಂದೀಪನಿಗೆ ಬೆಸ್ಟ್ ವಿಷಸ್ ಹೇಳಿ.. ಲಾವಣ್ಯಳಿಗೆ ಹೋಗಿ ಬರುತ್ತೇನೆ ಮತ್ತೆ ಈ ಕೇಸಿನ ಪೂರ್ಣ ವಿವರ ಕೊಡುತ್ತೇನೆ ಎಂದು ಹೇಳಿ.. ತಮ್ಮ ಸಿಬ್ಬಂದಿಯೊಂದಿಗೆ ಹೊರಟರು..

ಇತ್ತ ಸಂದೀಪ ಲಾವಣ್ಯಳ ಕೈ ಹಿಡಿದು.. ಅವಳ ಮೊಗದಲ್ಲಿ ಕಾಣುತ್ತಿದ್ದ ಅಪರಾಧಿ ಮನೋಭಾವ ಸರಿಯಿಲ್ಲ ಅಂತ ಕಣ್ಣಲ್ಲೇ ಹೇಳಿ.. ಒಸರುತ್ತಿದ್ದ ಕಣ್ಣೀರನ್ನು ಒರೆಸಿ.. ಅವಳ ಕೈಗೆ ಹೂ ಮುತ್ತನ್ನು ನೀಡಿದನು..

ಮುಂಬರುವ ಆತಂಕದ ಕ್ಷಣಗಳ ಬಗ್ಗೆ ಯೋಚಿಸುತ್ತಾ.. ಸಂದೀಪನ ಬೆರಳುಗಳಿಗೆ ತನ್ನ ಕೆನ್ನೆಯ ಸ್ಪರ್ಶ ನೀಡಿ.. ಒಂದು ಹೂಮುತ್ತನ್ನು ಕೊಟ್ಟಳು.. !!!

ಸಂದೀಪನಿಗೆ ತಂಡ ಮಾತ್ರೆಗಳ ಕವರಿನಲ್ಲಿ ಒಂದು ಫ್ಲೈಯರಿನಲ್ಲಿ ಕಂಡ ಬರಹ
"ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಿ.. ಅಡ್ಡ ದಾರಿ ಹಿಡಿಯಬೇಡಿ"  ಅದನ್ನು ಕಂಡು ಭಾರವಾದ ಮನಸ್ಸಿನಿಂದ ಸಂದೀಪ್ ಮತ್ತು ಲಾವಣ್ಯ ಹಾಗೆ ತುಟಿಯರಳಿಸಿ ಪೇಲವ ನಗೆ ನಕ್ಕರು  !!!


Friday, January 3, 2020

ಆಶಾ ಪಾಶ ಭಾಗ ೧

ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಟ್ಯಾಕ್ಸಿ ಕಡೆಗೆ ಬಂದಾಗ.. ಸಂದೀಪ್ ಸ್ವಾಗತ ಎನ್ನುವ ಕನ್ನಡದ ಫಲಕ ಕಂಡಾಗ ಮನಸ್ಸಿಗೆ ಕುಶಿಯಾಯ್ತು ಏಳನೇ ತರಗತಿಯಾದ ಮೇಲೆ ವಿದೇಶಕ್ಕೆ ಹೋದವನು.. ಬರೋಬ್ಬರಿ ೨೦ ವರ್ಷ ಆದ ಮೇಲೆ ತನ್ನ ತಾಯಿನಾಡಿಗೆ ಕಾಲಿಡುತ್ತಿರುವುದು ಸಂತಸದ ಹೊನಲು ಹರಿಸಿತ್ತು..

ಅಪ್ಪ ಅಮ್ಮ ವಿದೇಶದಲ್ಲಿದ್ದರೂ ಭಾರತೀಯ ಸಂಸ್ಕೃತಿಯನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರಿಂದ.. ತನ್ನ  ತಾಯಿ ನಾಡಿನ ಸೆಳೆತ ಬಲವಾಗಿಯೇ ಇತ್ತು.. ಆ ಗುಂಗಿನಲ್ಲಿ  ಮುಂದಡಿ ಇಟ್ಟಿದ್ದ.. ಒಂದು ಕೈ ತನ್ನ ಭುಜದ ಮೇಲೆ ಬಿತ್ತು.. ಯಾರಪ್ಪ ಇದು.. ಎಂದು ತಿರುಗಿನೋಡಿದಾಗ..

ಆ ಗಾಳಿಗೆ ಕೆದರಿದ ಕೂದಲು ಮುಖದ ಮೇಲೆಲ್ಲಾ ಹರಡಿತ್ತು.. ಮುಖವನ್ನು ಮರೆ ಮಾಡಿತ್ತು.. ಕಡು ನೀಲಿ ಬಣ್ಣದ ಜೀನ್ಸ್.. ಬಿಳಿಯ ಟೀ ಶರ್ಟ್.. ಅದಕ್ಕೆ ಒಪ್ಪುವ ಹೀಲ್ಸ್.. ನನ್ನದೇ ಎತ್ತರದ ಹುಡುಗಿ.. ಆ ಗಾಳಿಗೆ ತನ್ನ ತಲೆಗೂದಲನ್ನು ಸರಿಮಾಡಿಕೊಳ್ಳುವ ಪ್ರಯತ್ನದಲ್ಲಿ ಸೋಲುತ್ತಿದ್ದಳು.. ಸಂದೀಪ್ ಸುಮ್ಮನೆ ನೋಡುತ್ತಿದ್ದ. ಇದೆಲ್ಲ ಸುಮಾರು ಏಳೆಂಟು ಸೆಕೆಂಡುಗಳಲ್ಲಿ ನೆಡೆದಿದ್ದವು..

"ಎಸ್"

"ಆರ್ ಯು ಮಿ. ಸಂದೀಪ್"

"ಎಸ್"

"ಆಮ್ ಲಾವಣ್ಯ" ಎನ್ನುತ್ತಾ ಹಸ್ತ ಚಾಚಿದಳು..

ಒಹ್ ಹೆಸರಿಗೆ ಇವಳು ಬಂದಳ.. ಅಥವಾ ಹೆಸರಿಟ್ಟ ಮೇಲೆ ಇವಳು ಹೀಗಾದಳಾ

ಹಸ್ತ ಚಾಚಿ.. "ಹಲೋ"

"ವೆಲ್ಕಂ ಟು ಬೆಂಗಳೂರು.. ಸ್ವಾಗತ ನಿಮ್ಮ ನಾಡಿಗೆ"

ಕೋಗಿಲೆ ಸ್ವರ.. ಆಹಾ.. ಆ ಗಜಿಬಿಜಿಯಲ್ಲೂ ಅವಳ ಧ್ವನಿ ಗುರುತಿಸಿದ..

ಕೂದಲನ್ನು ಎತ್ತಿ ಪೋನಿ ಕಟ್ಟಿದಳು.. ಅವಳ ಮೊಗಾರವಿಂದ ಸೊಗಸಾಗಿ ಕಂಡಿತು..

"ಅರೆ ಲಾವಣ್ಯ.. ನೀನು.. ಸೂಪರ್ ಕಣೆ..  ಯಾರಪ್ಪ ಈ ದೇವಕನ್ಯೆ ಮುಖದರ್ಶನವಿಲ್ಲವಲ್ಲ ಅಂದುಕೊಂಡಿದ್ದೆ.. "

"ಸಂದೀಪ್ ಇನ್ನೂ ನೀನು ನಿನ್ನ ತಮಾಷೆ ಬಿಟ್ಟಿಲ್ಲ.. ಗಾಳಿಗೆ ಕೂದಲು ಹಾರಾಡುತ್ತಿದೆ ಏನು ಮಾಡಲಿ.. ನಿನ್ನ ನೋಡುವಷ್ಟರಲ್ಲಿ ಕಟ್ಟಿಕೊಂಡಿದ್ದ ತಲೆಗೂದಲು ಹೀಗಾಗಿ ಮಾರಿಯಮ್ಮ ಆಗಿದ್ದೆ.. "

"ಇರಲಿ ಇರಲಿ.. ಸುಮ್ಮನೆ ರೇಗಿಸಿದೆ.. ಕ್ಯಾಬ್ ಅಲ್ಲಿದೆ .. ಹೋಗೋಣ"

"ಅದನ್ನು ನಾನೇ ಸಿದ್ಧ ಮಾಡಿಸಿದ್ದು ಮೈ ಡಿಯರ್.. " ಡ್ರೈವರಿಗೆ  ಕೈ ತೋರಿಸಿ ಅಲ್ಲಿಗೆ ಬರುವಂತೆ ಹೇಳಿದಳು..

ಲಗೇಜನ್ನು ಇಬ್ಬರೂ ಒಂದೊಂದು ಹಿಡಿದು ತಳ್ಳಿಕೊಂಡು ಕ್ಯಾಬಿನ ಹತ್ತಿರ ಹೋದರು..
ಮೊದಲೇ ನಿಗದಿಯಾದಂತೆ.. ಬೆಂಗಳೂರಿನ ಪ್ರಮುಖ ಬಡಾವಣೆಯಲ್ಲಿನ ಒಂದು ಮನೆಗೆ ಬಂದರು.. ಸಾಮಾನ್ಯ ಮನೆ.. ಮಧ್ಯಮ ತರಗತಿಯ ಮನೆ.. ಸಂದೀಪ್ ಕೂಡ ವಿದೇಶದಲ್ಲಿದ್ದರೂ ಬಿಂಕ ಬಿಗುಮಾನ ಏನೂ ಇರಲಿಲ್ಲ.. ಸಾಮಾನ್ಯವಾಗಿಯೇ ಇದ್ದ..

ಲಾವಣ್ಯ ಅವರ ತಂದೆ ತಾಯಿ ಬಾಗಿಲಿಗೆ ಬಂದು ಮಾತಾಡಿಸಿ ಒಳಗೆ ಕರೆದೊಯ್ದರು.. ಒಬ್ಬಳೇ ಮಗಳು.. ಸಂದೀಪ್ ಮತ್ತು ಲಾವಣ್ಯ ಅವರ ಕುಟುಂಬ ಆಪ್ತರು .. ಅಕ್ಕ ಪಕ್ಕದ ಮನೆಯವಾಗಿದ್ದರು.. ಆ ಸಲುಗೆ ಸಂದೀಪ್ ಮತ್ತು ಲಾವಣ್ಯ ಮದ್ಯೆ ಇತ್ತು.. ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.. ಆನ್ಲೈನ್ ಪ್ರೀತಿ ಅಂತಾರಲ್ಲ.. ಹಾಗೆ  ಸ್ಕೈಪ್, ವಾಟ್ಸಾಪ್, ಹೀಗೆ ಹತ್ತಾರು ಮಾಧ್ಯಮಗಳ ಮೂಲಕ ಮಾತಾಡುತ್ತಲೇ ಇದ್ದರು.. ಒಮ್ಮೆ ಲಾವಣ್ಯ ವಿದೇಶದಲ್ಲಿನ ಸಂದೀಪ್ ಅವರ ಮನೆಗೂ ಹೋಗಿಬಂದಿದ್ದಳು.. ಹಾಗಾಗಿ ಯಾವುದೇ ತಕರಾರಿಲ್ಲದೆ ಮದುವೆಗೆ ಸಿದ್ಧವಾಗಿದ್ದರು.. ಅದಕ್ಕಾಗಿ ಈ ಭೇಟಿ.. ಜೊತೆಯಲ್ಲಿ ಒಂದು ಮುಖ್ಯ ಕೆಲಸವೂ ಇತ್ತು

ಮಾತು ಕತೆ ಸ್ನಾನ, ಊಟ  ಎಲ್ಲಾ ಮುಗಿಸಿ.. ಸಿದ್ಧ ಪಡಿಸಿದ್ದ ಕೋಣೆಯಲ್ಲಿ ಬಂದು ಮಲಗಿದ.. ದೇಹಕ್ಕೆ ಆಯಾಸವಾಗಿತ್ತು.. ದೀರ್ಘ ಪಯಣ..

ಬೆಳಿಗ್ಗೆ ಎದ್ದಾಗ ಹೊತ್ತಾಗಿತ್ತು.. ಮನೆಯಲ್ಲಿ ಎಲ್ಲರೂ ತಿಂಡಿಗೆ ಸಿದ್ಧವಾಗಿದ್ದರು..

ಸಾರಿ ಅಂತ ಹೇಳಿ.. ಲಗುಬಗೆಯಿಂದ ಸಿದ್ಧವಾಗಿ ತಿಂಡಿ ತಿಂದು.. ಲೋಕಾಭಿರಾಮವಾಗಿ ಮಾತಾಡುತ್ತಾ.. "ಅಂಕಲ್, ನನಗೆ ಆಫೀಸಿನ ಕೆಲಸ ಇದೆ... ಹಾಗೆ ಇಲ್ಲಿಗೆ ಬಂದಿರುವ ಕೆಲಸ ನಿಮಗೆ ಗೊತ್ತಲ್ಲ.. ಅದನ್ನು ಮುಗಿಸಿಕೊಂಡು ಸಂಜೆ ಹೊತ್ತಿಗೆ ಬರುತ್ತೇನೆ.. ಆಮೇಲೆ ಶಾಪಿಂಗ್ ಹೋಗೋಣ... ಲಾವಣ್ಯ ಅಷ್ಟು ಹೊತ್ತಿಗೆ ನೀನು ನಿನ್ನ ಕೆಲಸ ಮುಗಿಸಿಕೊಂಡಿರು.. ಸಂಜೆಯ ಹೊತ್ತಿಗೆ ನೀ ಫ್ರೀ ಆಗಿರು .. "

"ಸರಿ ಸಂದೀಪ.. ನನ್ನ ಕಾರು ತೆಗೆದುಕೊಂಡು ಹೋಗು.. ಡ್ರೈವರ್ ಇದ್ದಾನೆ.. ನಿನಗೆ ದಾರಿ ಹುಡುಕೋಕೆ ಕಷ್ಟವಾಗೋಲ್ಲ.. "

"ಸರಿ ಅಂಕಲ್.. ಬೈ ಲಾವಣ್ಯ.. "

ಅಲ್ಲಿಂದ ಹೊರಟ..ಮೊಬೈಲಿನಲ್ಲಿ ಜೆಪಿಎಸ್ ಹಾಕಿಕೊಂಡು ಡ್ರೈವರಿಗೆ ಸೂಚನೆ ಕೊಡುತ್ತ ತನ್ನ ಆಫೀಸಿಗೆ ಬಂದ.. ಎರಡು ಘಂಟೆಗಳ ಮೀಟಿಂಗ್. ಅದನ್ನು ಮುಗಿಸಿ ಮತ್ತೆ ಕಾರಿನಲ್ಲಿ ಕೂತು ಹಾಗೆ ಕಣ್ಣು ಮುಚ್ಚಿದ..

"ಸರ್. ನಿಮ್ಮ ಜಾಗ ಬಂತು.. "

ಕಣ್ಣು ಬಿಟ್ಟಾಗ.. ಆ... ಆ .. ಆ ಅಹ್ ಎನಿಸಿತು.. ಲಾವಣ್ಯ ಕಳಿಸಿದ ಚಿತ್ರಗಳು... ಆ ಪ್ರದೇಶವನ್ನು ಪರಿಚಯ ಮಾಡಿಕೊಳ್ಳಲ್ಲು ಹೆಚ್ಚಿನ ಸಮಯ ಬೇಕಾಗಿರಲಿಲ್ಲ.. ಕಾರಿನಿಂದ ಇಳಿದು.. ಆ ಮನೆಯ ಕಡೆಗೆ ಹೆಜ್ಜೆ ಹಾಕಿದ.. ಸೆಕ್ಯೂರಿಟಿ ಕಾಣಲಿಲ್ಲ.. ಆದರೆ ಬೀಗದ ಕೈ ಇದ್ದದ್ದರಿಂದ ತೋಡಿನರೇ ಇರಲಿಲ್ಲ ..

ಗೇಟಿನ ಬೀಗ ತೆಗೆದ, ಕಿರ್ ಎಂದು ಸದ್ದು ಮಾಡುತ್ತಾ ಗೇಟು ತೆರೆದುಕೊಂಡಿತು. ಒಂದು ಕಾಲದಲ್ಲಿ ಭವ್ಯವಾದ ಮನೆತನವನ್ನು ತನ್ನೊಡಲಲ್ಲಿ ಇಟ್ಟುಕೊಂಡು ಅರಳಿದ್ದ ಸದನ.. ಇಂದು ಅವಶೇಷವಾಗಿ ನಿಂತಿತ್ತು.. ಅಕ್ಕಪಕ್ಕದಲ್ಲಿ ಆಲದ ಮರಗಳು ತನ್ನ ಬಿಳಲುಗಳನ್ನು ಎಂದೋ ಬೇರು ಬಿಟ್ಟಿದ್ದೇನೆ ಎನ್ನುವಂತೆ ಗಟ್ಟಿಯಾಗಿ ನಿಂತಿತ್ತು.. ಮಾವಿನ ಮರ, ಹೂವಿನ ಗಿಡಗಳು, ನೆರಳಿನ ಮರಗಳು.. ಸುತ್ತಲೂ ಆವರಿಸಿಕೊಂಡಿದ್ದವು.. ಮನೆಯ ಮುಂದೆ ಒಂದು ಪುಟ್ಟ ಪೋರ್ಟಿಕೊ.. ಕಮಾನಿನ ಚಾವಣಿ.. ಒಳಗೆ ಕಪ್ಪು ಬಣ್ಣದ ಕಡಪ ಕಲ್ಲಿನ ಹಾಸು.. ಶೂ ಕಳಚಿ.. ಬಾಗಿಲಿನ ಬೀಗ ತೆಗೆದು.. ಒಳಗೆ ಕಾಲಿಟ್ಟ.. ಏನೋ ಒಂದು ರೀತಿಯ ಸಂತೋಷ.. ತನ್ನ ವಂಶದ ಹಿರಿಯರ ಏಳಿಗೆಯನ್ನು ಕಂಡ ಮನೆಯಿದು. ಒಳಗೆಲ್ಲಾ ಓಡಾಡಿಬಂದ..

"ಸರ್ ಕಾಫಿ ತರಲೆ.." ಆ ದನಿಗೆ ಬೆಚ್ಚಿ ತಿರುಗಿದ.. ಸೆಕ್ಯೂರಿಟಿ ನಿಂತಿದ್ದರು..
ಆಗಲೇ ಮತ್ತೆ ಭುವಿಗೆ ಜಾರಿದ್ದು. "ಏನಪ್ಪಾ ಎಲ್ಲಿಹೋಗಿದ್ರಿ ."
"ಸರ್ .. ಕಾಫಿ ಸಿಗರೇಟಿಗೆ ಹೋಗಿದ್ದೆ"
"ಸರಿ ಸರಿ.. ಕಾಫೀ ಬೇಡ.. ಪರವಾಗಿಲ್ಲ.. ನಾ ಅರಾಮಿದ್ದೀನಿ.. ನನಗೇನು ಬೇಡ.."

ಮುಂದಿನ  ಪ್ರಶ್ನೆಗಳಿಗೆ ಅವಕಾಶ ಕೊಡದೆ.. ಎಲ್ಲವನ್ನೂ ಹೇಳಿ ಮುಗಿಸಿದ.. ಸೆಕ್ಯುರಿಟಿಗೆ ಅರ್ಥವಾಯಿತು.. ತನ್ನ ಉಪಸ್ಥಿತಿ ಬೇಡ ಎಂದು.. ಹೊರಗೆ ಬಂದು ತನ್ನ ಕುರ್ಚಿಯಲ್ಲಿ ಆಸೀನರಾದರು..

ಸಂದೀಪ್ ಮನೆಯೊಳಗೆಲ್ಲ ಓಡಾಡಿ.. ಒಂದು ಚಿತ್ರವನ್ನು ತೆಗೆದುಕೊಂಡು... ಅದನ್ನೇ ನೋಡುತ್ತಾ ಹೋದ.. ತನಗೆ ಸಿಕ್ಕ ಮಾಹಿತಿ ಸರಿಯಾಗಿಯೇ ಇತ್ತು.. ಆ ಚಿತ್ರವನ್ನೇ ಗಮನಿಸುತ್ತಾ ಹೋದ.. ಕೊಟ್ಟ ಸುಳಿವು.. ಕೊಟ್ಟ ಮಾಹಿತಿ.. ಲಾವಣ್ಯ ಕಳಿಸಿದ ಚಿತ್ರಗಳು ಎಲ್ಲವೂ ಒಂದಕ್ಕೊಂದು ಹೊಂದಾಣಿಕೆಯಾಗಿ ತನ್ನ ಸುಳಿವನ್ನು ತಾನೇ ಆ ಚಿತ್ರ ನೀಡಿತು..

ಆ ಮನೆಯನ್ನು ಲಾವಣ್ಯಳೇ ಖುದ್ದಾಗಿ ದಿನವೂ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಳು.. ಪ್ರತಿದಿನವೂ ಕೆಲಸಗಾರನನ್ನು ಕರೆತಂದು.. ಕಸ ಗುಡಿಸಿ, ಒರೆಸಿ, ರಂಗೋಲಿ ಹಾಕಿ, ದೇವರ ಮನೆಯಲ್ಲಿ ದೀಪ ಹಚ್ಚಿ ಬರುತ್ತಿದ್ದಳು.. ಬೆಳಿಗ್ಗೆ ಮತ್ತು ಸಂಜೆ ದೇವರ ದೀಪ ಹಚ್ಚಿ ಬರುವ ಕೆಲಸ ಅವಳದ್ದೇ.. ಹಾಗಾಗಿ ವರ್ಷಗಳಿಂದ ವಾಸವಾಗಿರದೆ ಇದ್ದರೂ..ಮನೆಯೊಳಗೆ ಸ್ವಚ್ಛವಾಗಿಯೇ ಇತ್ತು..

ಆ ಫೋಟೋವನ್ನು ಗೋಡೆಯಿಂದ ತೆಗೆದು.. ಮತ್ತೆ ಗಮನಿಸಿ.. ಅದು ಕೊಟ್ಟ ಸುಳಿವಿನ ಮೂಲ ಹುಡುಕುತ್ತಾ ಹೋದ.. ಮನೆಯ ಮಾಳಿಗೆ ಹತ್ತಿ.. ಅಲ್ಲಿನ ಕೋಣೆಯಲ್ಲಿ ಕೂತು. ಆ ಸುಳಿವಿನ ಆಧಾರದ ಮೇಲೆ.ಒಂದು ದೊಡ್ಡ ಪೆಟ್ಟಿಗೆಯ ಮುಚ್ಚಳ ತೆಗೆದ .. ಅಚ್ಚರಿ ಕಾದಿತ್ತು .. ಆ ಪೆಟ್ಟಿಗೆ ಮುಚ್ಚಳ ತೆಗೆದರೆ ಅದರೊಳಗೆ ಮೆಟ್ಟಿಲುಗಳು ಕಂಡಿತು.. ಪೆಟ್ಟಿಗೆ ಹತ್ತಿ.. ಆ ಮೆಟ್ಟಿಲುಗಳನ್ನು ಇಳಿಯುತ್ತಾ ಹೋದ.. ಜೊತೆಯಲ್ಲಿದ್ದ ಮೊಬೈಲ್ ಟಾರ್ಚ್ ಸಹಾಯ ಮಾಡಿತು.. ಈ ವಿಚಾರ ತಮ್ಮಿಬ್ಬರ ಕುಟುಂಬಕ್ಕೆ ಮಾತ್ರ ಗೊತ್ತಿದ್ದರಿಂದ.. ಮನೆಯನ್ನು ಪಾಳು ಬಿಟ್ಟರೆ ರಿಯಲ್ ಎಸ್ಟೇಟ್ ತಂಡ ಕಿರಿ ಕಿರಿ ಮಾಡುತ್ತೆ ಅಂತ ಗೊತ್ತಿದ್ದರಿಂದ.. ಅದಕ್ಕೊಂದು ಸೆಕ್ಯೂರಿಟಿ.. ಜೊತೆಯಲ್ಲಿ ದೀಪದ ವ್ಯವಸ್ಥೆ. ಸಿಸಿ ಟಿವಿ.. ಮತ್ತೆ ಲಾವಣ್ಯ ಕುಟುಂಬ ವಾರಕ್ಕೊಮ್ಮೆ ಇಲ್ಲಿಗೆ ಬಂದು.. ಸಂಜೆ ತನಕ ಇದ್ದು ಹೋಗುವುದು ಅಭ್ಯಾಸವಾಗಿತ್ತು.. ಹಾಗಾಗಿ ವಾಸ ಮಾಡುತ್ತಿರುವ ಎಲ್ಲಾ ಸೂಚನೆಗಳು ಇರುವ ಹಾಗೆ ನೋಡಿಕೊಂಡಿದ್ದರು..

ಮೆಟ್ಟಿಲುಗಳನ್ನು ಇಳಿದು ಬಂದ ಮೇಲೆ.. ಅಲ್ಲೊಂದು ಪುಟ್ಟಾ ಕೋಣೆ. ಅದಕ್ಕೊಂದು ಬೀಗ.. ತನ್ನ ಬ್ಯಾಗಿನಲ್ಲಿದ್ದ ಕೀ ಗೊಂಚಲನ್ನು ತೆಗೆದು.. ಅದರ ನಂಬರ್ ನೋಡಿ, ಬೀಗ ತೆಗೆದು .. ಒಳಗೆ ಅಡಿ ಇಟ್ಟ.. . . ತಲೆಗೆ ಬಲವಾದ ಪೆಟ್ಟು ಬಿದ್ದಂತೆ ಆಯ್ತು.. ಹಾಗೆ ಕುಸಿದು ಬಿದ್ದ.. ಕಣ್ಣು ಮುಚ್ಚುವ ಮುನ್ನ .. ಅಸ್ಪಷ್ಟವಾದ ಮಾತು "ನೀನಾ.. ನೀನು ಹೀಗೆ..... ನಾ ಏನು .....  "


ಮುಂದೆ.. ... ಬರುತ್ತೆ.. !!!