Friday, December 27, 2019

ಒಲಿದು ಹೊಲೆದ ಬಂಧ!!!

ಬಲಶಾಲಿಯೇನೂ ಅಲ್ಲ.. ರವೀಶ.. ಆದರೆ ಅವನ ತೋಳಿನ ಸ್ನಾಯುಗಳು ನಿಮಿಷಕ್ಕೊಮ್ಮೆ ಊದಿ ಬಿಡುತ್ತಿದ್ದವು.. ಮತ್ತೆ ಒಂದೈದು ಕ್ಷಣಗಳು ಯಥಾಸ್ಥಿತಿಗೆ ಮರಳುತ್ತಿದ್ದವು.. ಕೋಣೆಯಲ್ಲೆಲ್ಲಾ ಕತ್ತಲೆಯೋ ಕತ್ತಲೆ ಅನುಭವ .. ಏನಾಗುತ್ತಿದೆ ಅರಿವಿಲ್ಲ.. ಕಣ್ಣಿಗೆ ಕಪ್ಪುಗಟ್ಟಿತ್ತು.. ನೋವು ಇದೆ ಅಂದರೆ ಇದೆ ಇಲ್ಲ ಅಂದರೆ ಇಲ್ಲ.. ಈ ರೀತಿಯ ಅವಸ್ಥೆ ಅವನದು..

ಪ್ರಯಾಸ ಪಟ್ಟು ಕಣ್ಣು ತೆರೆದ.. ಎದುರಿನ ಗೋಡೆ ಗಡಿಯಾರ ಒಂಭತ್ತು ನಲವತ್ತು ಅಂತ ಸಮಯ ಸಾರುತ್ತಿತ್ತು.. ಅದು ಬೆಳಿಗ್ಗೆಯೋ ಸಂಜೆಯೋ ಅರಿಯದು.. ಎಲ್ಲೆಲ್ಲೂ ನೀಲಿವರ್ಣದ ಸಮವಸ್ತ್ರಧಾರಿಗಳು.... ಒಬ್ಬಾತ ಬಳಿಬಂದ..

"ರವೀಶ ಏನಾದರೂ ಕುಡಿಯುತ್ತೀರಾ.. "

ತಲೆ ಅಲ್ಲಾಡಿಸಿದ.. ಬಾಯಿಂದ ಮಾತುಗಳು ಹೊರಬರುತ್ತಿಲ್ಲ.. ಅರೆ ಏನಾಯಿತು.. ಮರದ ಬಾಯಿಯಾಗಿದ್ದರೆ ಇಷ್ಟೊತ್ತಿಗೆ ಒಂದು ಹತ್ತು ಜೊತೆ ಒಡೆದು ಹೋಗುತ್ತಿತ್ತು ಎಂದು ಸಿಕ್ಕ ಸಿಕ್ಕವರೆಲ್ಲರ ಹತ್ತಿರ ಪ್ರೀತಿಯಿಂದ ಬಯ್ಸಿಕೊಳ್ಳುತ್ತಿದ್ದ ರವೀಶನ ಗಂಟಲಿಂದ ಮಾತುಗಳಿಲ್ಲ..

ಕೈಯಿಂದಲೇ ಸನ್ನೆ ಮಾಡಿದ.. ಏನಾಗಿದೆ ಅಂತ.. "ಏನಿಲ್ಲ ಸರ್ ಒಂದು ಪುಟ್ಟ ಅಪಘಾತ.. ಸರಿ ಹೋಗುತ್ತೀರಾ ಬಿಡಿ.. " ಮುಂದಿನ ವಿವರ ಆವ ಹೇಳಿದನೋ ಇಲ್ಲ ರವೀಶನಿಗೆ ಕೇಳಿಸಿತೋ ಅರಿಯದು..

ಆಸ್ಪತ್ರೆ ಎಂದರೆ ಅದೊಂದು ರೀತಿಯ ಬಲವಂತದ ಮಾಘ ಸ್ನಾನ ಎಂದುಕೊಂಡಿದ್ದ ರವೀಶನಿಗೆ.. ಇದೊಂದು ರೀತಿಯ ಪರೀಕ್ಷೆ ಎನ್ನಬಹುದು.. ಏನಾಗಿದೆ ಗೊತ್ತಿಲ್ಲ.. ಗೊತ್ತಿದ್ದರೂ ಹೇಳದ ಸಮವಸ್ತ್ರಧಾರಿಗಳು.. ನೀ ಜೊತೆಯಿದ್ದರೆ ನನಗೆ ಆನೆ ಬಲ ಕಣೆ ಎಂದು ಮಾತಿಗೆ ಹೇಳುತ್ತಿದ್ದ ರವೀಶನ ತೋಳುಗಳಿಗೆ ಕ್ಷಣಕ್ಕೊಮ್ಮೆ ಆನೆ ಬಲ ಬರುತ್ತಿತ್ತು..

ಅದೇನು ಅಂದ್ರಾ.. ಬಿಪಿ ಮಾನಿಟರ್ ಮಾಡೋಕೆ ತೋಳಿಗೆ ಕಟ್ಟಿದ್ದ ಉಪಕರಣದ ಬೆಲ್ಟ್.. ಕ್ಷಣಕ್ಕೊಮ್ಮೆ ಗಾಳಿ ಒತ್ತಡ ಹೇರಿ.. ತೋಳುಗಳು ಸಿಕ್ಸ್ ಪ್ಯಾಕ್ ಸೆವೆನ್ ಪ್ಯಾಕ್ ಯೈಟ್ ಪ್ಯಾಕ್ ಎನ್ನುವಂತೆ ಭಾಸವಾಗುತ್ತಿದ್ದ ಕ್ಷಣಗಳು.. ಏನೋ ಒಂದು ರೀತಿಯ ಖುಷಿ.. ನನಗೂ ಪೈಲ್ವಾನ್ ಆಗುವ ಯೋಗವಿದೆ ಅಂತ..

ಅಂದಿನ ರಾತ್ರಿ ನೋಡಲು ಯಾರೂ ಬರಲಿಲ್ಲ.. ಅಥವಾ ಬಂದಿದ್ದರೂ ಅರಿವಿರಲಿಲ್ಲ..ಮರುದಿನ ನೋಡಲು ಯಾರೋ ಬಂದರು.. ಗುರುತು ಸಿಗಲಿಲ್ಲ.. ಗಗನಯಾತ್ರಿಗಳ ಹಾಗೆ ಕೈಗೆ, ಮೊಗಕ್ಕೆ, ದೇಹಕ್ಕೆ ಎಲ್ಲೆಲ್ಲೂ ಸಮವಸ್ತ್ರ.. ಮೆಲ್ಲಗೆ ಮೊಗದ ಮೇಲಿನ ಬಟ್ಟೆ ತೆಗೆದು.. ನಾನು ಕಣೋ ರವೀಶ ಎಂದಾಗ.. ಏನಾಯಿತು ನನಗೆ ಎಂದು ಕೇಳಿದ.. "ಹೀಗಾಯಿತು.. ಹಾಗಾಯಿತು.. ತಲೆ ಕೆಡಿಸಿಕೊಳ್ಳಬೇಡ.. ಎವ್ರಿಥಿಂಗ್ ವಿಲ್ ಬಿ ಆಲ್ ರೈಟ್" ಅಂತ ಹೇಳಿ ತಲೆ ಸವರಿ ಕಣ್ಣುಗಳಲ್ಲಿ ಜಿನುಗುತ್ತಿದ್ದ ಭೋರ್ಗರೆತ ತಡೆದು ಹೊರಟೆ ಬಿಟ್ಟಿತ್ತು ಆ ವ್ಯಕ್ತಿ..

ಅಂದಿನಿಂದ.. ಅದೊಂತರ ನಿರಂತರ ಕಾಯಕವಾಗಿ ಬಿಟ್ಟಿತ್ತು.. ಬರುವವರು ಬಂದು ಕುಶಲ ಕ್ಷೇಮ ವಿಚಾರಿಸಿ.. ತೋಳುಗಳಲ್ಲಿ ಆನೆ ಬಲವಿದ್ದರೂ ಧೈರ್ಯ ಹೇಳಿ ಹೋಗುತ್ತಿದ್ದರು... ಗಂಜಿ, ಕಾಫಿ, ಮಾತ್ರೆಗಳು, ನೀರು ಬಾಯಿಗೆ ಹೋಗುತ್ತಿದ್ದರೇ.. ಇಂಜೆಕ್ಷನ್ ರೂಪದಲ್ಲಿ ಸುಧಾರಿಸಿಕೊಳ್ಳೋಕೆ ಔಷಧಿಗಳು ನರಗಳ ಮೂಲಕ  ದೇಹವನ್ನು  ಸೇರುತ್ತಿದ್ದವು.. ಕಣ್ಣಿನ ಭಾದೆ ಇದ್ದರೂ, ಅಲ್ಲಿನ ಸಮವಸ್ತ್ರಧಾರಿಗಳ ಹತ್ತಿರ ನಿಮ್ಮ ಊರು, ನಿಮ್ಮ ಕೆಲಸ, ನಿಮ್ಮ ಹೆಸರು ಅದು ಇದು ಮಾತಾಡುತ್ತಾ, ಅವರನ್ನು ನಗಿಸುತ್ತಾ.. "ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದವನಿಗೆ ಒಂದು ಚೂರು ರೆಸ್ಟ್ ಎಂದು ಹೀಗಾಗಿದೆ" ಎಂದು ಅವರಿಗೆ ಹೇಳುತ್ತಾ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದ ರವೀಶ..

ಒಂದು ಕಣ್ಣು ಮುಚ್ಚಿದ್ದರೂ.. ಇನ್ನೊಂದು ಕಣ್ಣಿನಲ್ಲಿ ಸುತ್ತಮುತ್ತಲ ಜಗತ್ತು ನೋಡುತ್ತಿದ್ದ ರವೀಶನಿಗೆ ಅಚ್ಚರಿ ಕಾದಿತ್ತು.. ಹಸಿರು ಬಣ್ಣದ ಕೋಟು ತೊಟ್ಟ ಒಬ್ಬರು ಬಂದು.. ರವೀಶ ಹೇಗಿದ್ದೀರಾ.. ನಾಲಿಗೆ ತೆಗೆಯಿರಿ.. ಕೈ ಎತ್ತಿ.. ಕೂರೋಕೆ ಆಗುತ್ತಾ.. ಎಲ್ಲಿ ಕಾಲನ್ನು ಆಡಿಸಿ.. ಒಂದು ಕಾಲನ್ನು ಮೇಲೆ ಎತ್ತಿ.. ಆ ಗುಡ್.. ಹುಷಾರಾಗುತ್ತೀರಾ ಯೋಚನೆ ಮಾಡ್ಬೇಡಿ ಎಂದು ಧೈರ್ಯ ತುಂಬಿ ಹೋಗುತ್ತಿದ್ದರು.. ಅವರ ಹೆಸರು ತಿಳಿದುಕೊಳ್ಳುವ ಬಯಕೆ.. ಆದರೆ ಕೇಳುವುದು ಹೇಗೆ.. ಮಾರನೇ ದಿನ ಹೇಗಾದರೂ ಹೆಸರು ಕಂಡು ಹಿಡಿಯಲೇ ಬೇಕು ಎಂದು ಆಕೆ ತೊಟ್ಟಿದ್ದ ಕೋಟಿನ ಅಂಚಿನಲ್ಲಿ ಕಂಡ ಹೆಸರು ಒಂದು ಕ್ಷಣ ಒಂದು ಕಣ್ಣನ್ನು ಅರಳಿಸಿತು..

"ಗೀತಾ" ಅರೆ ವಾಹ್.. ಅವನಿಗೆ ಬಲು ಇಷ್ಟವಾದ ಪ್ರೀತಿಯ ಹೆಸರು.. ಜಗದಲ್ಲಿ ಆ ಹೆಸರನ್ನು ಅವನು ಪ್ರೀತಿಸಿದಷ್ಟು ಯಾರೂ ಪ್ರೀತಿಸಲು ಸಾಧ್ಯವಿಲ್ಲವೇನೋ ಎನ್ನುವಷ್ಟು. ಮೊಗ ನೋಡಿದ.. ಸ್ವಲ್ಪ ಗೋಧಿಬಣ್ಣ.. ಮುಖ ಲಕ್ಷಣ ಅದೇ ಇತ್ತು.. ಮನಸ್ಸು ಮೆಲ್ಲಗೆ ಕಾಲೇಜಿನ ದಿನಗಳಿಗೆ ಜಾರಿತ್ತು..

"ಮೇಡಂ.. ನಿಮ್ಮ ನೋಟ್ಸ್ ಕೊಡುತ್ತೀರಾ.. "

"ಇವತ್ತು ಸ್ವಲ್ಪ ಬರೀಬೇಕು.. ನಾಳೆ ಕೊಟ್ಟರೆ ಆಗುತ್ತಾ.. ನಾಳೆ ಖಂಡಿತ ಕೊಡುವೆ"

"ಸರಿ ಮೇಡಂ"

ಸೂರ್ಯನ ಉದಯಕ್ಕೆ ಕಾದು... ಶಿಸ್ತುಗಾರ ಪುಟ್ಟಸ್ವಾಮಿಯ ಹಾಗೆ ಸಿದ್ಧವಾಗಿ ಕಾಲೇಜಿಗೆ ಬಂದ.. ಅವಳನ್ನು ಕಂಡ ಕೂಡಲೇ.. ಹಲ್ಲು ಕಿರಿದ.. ಅವಳು ನಸು ನಕ್ಕಳು.. ಕಾಲೇಜು ಮುಗಿದು ಮನೆಗೆ ಹೊರಡಲು ತಯಾರಾಗಿದ್ದಾಗ.. ಅವಳೇ ಬಂದು.. "ರವೀಶ.. ಎರಡು ದಿನ ಆದ ಮೇಲೆ ಕೊಡಿ.. " ಎಂದು ನಾ ಅವಧಿ ಕೇಳುವ ಮೊದಲೇ ತನ್ನ ಸಮಯ ಕೊಟ್ಟು ಕೈಬೀಸಿಕೊಂಡು ನಗುತ್ತಾ ರವೀಶನ ಮುಂದೆ ಸಾಗಿದ್ದಳು.. ಸುಂದರ ನೆಡಿಗೆಯ ಆ ಹುಡುಗಿ ಬಸ್ ಸ್ಟಾಪ್ ಹತ್ತಿರ.. ಒಮ್ಮೆ ತಿರುಗಿ ನೋಡಿ... ಕಿಸಕ್ ಅಂತ ಕಣ್ಣಿನಲ್ಲಿಯೇ ನಕ್ಕಾಗ.. ರವೀಶನ ಎದೆ ನಗಾರಿಯಾಗಿತ್ತು..

ಮುದ್ದಾದ ಅಕ್ಷರಗಳು.. ಪುಸ್ತಕದಲ್ಲೆಲ್ಲಾ ಹರಡಿತ್ತು... ಎಷ್ಟು ನಾಜೂಕಾಗಿ ನೋಟ್ಸ್ ಬರೆದುಕೊಂಡಿದ್ದಾಳೆ.. ಹಾಟ್ಸ್ ಆಫ್ ಗೀತಾ.. ಎಂದು.. ಹೇಳುತ್ತಾ.. ತನಗೆ ಬೇಕಾದಷ್ಟು ನೋಟ್ಸ್ ಬರೆದುಕೊಂಡು.. ಅವಳು ಎರಡು ದಿನ ಅವಧಿಕೊಟ್ಟಿದ್ದರೆ.. ಇವನು ಒಂದೇ ದಿನದಲ್ಲಿ ಮುಗಿಸಿ.. ಮಾರನೇ ದಿನವೇ ನೋಟ್ಸ್ ವಾಪಸ್ ಕೊಡಲು ಅವಳನ್ನು ನೋಡಲು ಹೋದ..

"ನಾಳೆ ಕೊಟ್ಟಿದ್ದರೆ ಚೆನ್ನಾಗಿತ್ತು.. ಇವತ್ತು ಆ ಕ್ಲಾಸ್ ಇಲ್ಲ.. ಪುಸ್ತಕ ಸುಮ್ಮನೆ ಹೊರೆ.. ನಾಳೆ ಕೊಡಬಹುದಾ ಇಫ್ ಯು ಡೋಂಟ್ ಮೈಂಡ್.. "

ಆ ಧ್ವನಿಗೆ ಯಾರೇ ಆದರೂ ಮರುಳಾಗಬೇಕಿತ್ತು.. ಅರೆ ನನ್ನ ಗೀತಾ.. ಬೆಟ್ಟದ ಮೇಲಿಂದ ಧುಮುಕು ಅಂದರೂ ಧುಮುಕುವ ರವೀಶನ ಮನಸ್ಸು.. ಅವಳು ಹೇಳಿದ್ದಕ್ಕೆ ಸರಿ ಎಂದಿತ್ತು..

ಮಾರನೇ ದಿನ.. ಹೊಸ ವರ್ಷ.. ಶುಭಾಶಯಗಳನ್ನು ಹೇಳಿ ತನ್ನ ಮನದಿಂಗಿತ ಹೇಳಬಹುದು ಎಂದು.. ಎರಡು ಮುದ್ದಾದ ಬಿಳಿ ಪಾರಿವಾಳಗಳು ಪ್ರೀತಿಸುವ ಹೃದಯವನ್ನು ಎತ್ತಿಕೊಂಡು ಹಾರುತ್ತಿರುವ ಒಂದು ಸುಂದರ ಗ್ರೀಟಿಂಗ್ ಕಾರ್ಡ್ .. ಅದರಲ್ಲಿ "ಒಲವಿನ ಗೀತಾ.. ನನಗೆ ನೀವೆಂದರೆ ಇಷ್ಟ.. ನಿಮಗೂ ಇಷ್ಟವಾದರೆ.. ಈ ಹೀರೋ ಪೆನ್ನಿನಲ್ಲಿ ಆಟೋಗ್ರಾಫ್ ಹಾಕಿ.. ಪೆನ್ನನ್ನು ನೀವು ಇಟ್ಟುಕೊಳ್ಳಿ.. ನಿಮ್ಮ ಹೀರೊ ಆಗೋಕೆ ನನಗೆ ಅವಕಾಶ ಕೊಡಿ" ಅಂತ ಪುಟ್ಟದಾದ ನೋಟ್ ಒಂದನ್ನು ಆ ಪುಸ್ತಕದಲ್ಲಿಟ್ಟು.. ಅವಳಿಗೆ ಕೊಟ್ಟ.

ಪುಸ್ತಕ ಪಡೆದವಳು.. ಯಾವುದೇ ಭಾವ ತೋರದೆ ತನ್ನ ಬ್ಯಾಗಿನಲ್ಲಿ ಇಟ್ಟುಕೊಂಡು ಥ್ಯಾಂಕ್ಸ್ ರವೀಶ ಎಂದು ಹೇಳಿ ಮಿಲಿಯನ್ ವಾಟ್ ನಗು ಕೊಟ್ಟು ಮನೆಯ ಹಾದಿ ಹಿಡಿದಳು..

ಮರುದಿನ ಅವಳ ಬರುವಿಕೆಗೆ ಕಾಯುತ್ತಿದ್ದ.. ತನಗಿಷ್ಟವಾದ ನೀಲಿ ವರ್ಣದ ಚೂಡಿದಾರ.. ತಲೆಗೆ ಚಂದದ ಮಲ್ಲಿಗೆ ಹೂವು ಅವಳ ನೀಳ ಜಡೆಯನ್ನು ಅಲಂಕರಿಸಿತ್ತು.. ನೀಳ ನಾಸಿಕ.. ಮುದ್ದಾದ ಕಣ್ಣುಗಳು.. ಇನ್ನೇನೂ ನಾವಿಬ್ಬರೂ ಕೂಡಿಬಿಡುತ್ತೇವೆ ಎನ್ನುವಂತಹ ಅವಳ ಹುಬ್ಬು.. ಕುಂಕುಮದ ಬೊಟ್ಟು.. ಎರಡೂ ಕೈಗಳಲ್ಲಿ ಯಾವಾಗಲೂ ಮಿನಿಮಮ್ ಆರು ಆರು ಬಳೆಗಳು.. ಕಾಲಲ್ಲಿ ಗೆಜ್ಜೆ.. ಅದುವರೆವಿಗೂ ಅವಳು ಅಷ್ಟು ಸುಂದರಿ ಎನಿಸಿರಲಿಲ್ಲ

ಹತ್ತಿರ ಬಂದು.. "ರವೀಶ.. ಕಾಲೇಜು ಮುಗಿದ ಮೇಲೆ ಸಿಗುತ್ತೀರಾ.. " ಅಷ್ಟೇ ಹೇಳಿ ತನ್ನ ಗೆಳತಿಯರ ಕೂಡ ಹೊರಟಿದ್ದಳು.. ಅಂದು ಕಾಲೇಜಿನಲ್ಲಿ ಏನು ಪಾಠ ಹೇಳಿದರೋ.. ಏನು ನೋಟ್ಸ್ ಕೊಟ್ಟರೋ ಒಂದೂ ಅರಿವಿಲ್ಲ.. ಕೊನೆ ಪೀರಿಯಡ್ಡಿಗೆ ಕಾಯುತ್ತಿತ್ತು ಮನಸ್ಸು..

ಘಂಟೆ ಜೋರಾಗಿ ಹೊಡೆದಾಗ.. ಅದು ಕೇಳಿಸಲಿಲ್ಲ.. ಕಾರಣ ರವೀಶನ ಹೃದಯ ಅದಕ್ಕಿಂತ ಜೋರಾಗಿ ಹೊಡೆದುಕೊಳ್ಳುತ್ತಿತ್ತು..

ಕಾಲೇಜಿನ ಕ್ಯಾಂಟೀನ್ ಹತ್ತಿರ ನಿಂತಿದ್ದಳು. ಕೈಯಲ್ಲಿ ಒಂದು ಗುಲಾಬಿ ಹೂವು..

"ರವೀಶ..ನಿಮ್ಮ ಪ್ರೀತಿಗೆ ನಾ ಚಿರಋಣಿ.. ನಿಮ್ಮನ್ನು ನಾಯಕನಾಗಿ ನನ್ನ ಬಾಳಿನಲ್ಲಿ ಮೂಡಿಸಬೇಕು ಎಂಬ ಆಸೆ ನನಗೂ ಇತ್ತು.. ನೀವು ಅದನ್ನು ಹೇಳಿ ನನ್ನ ಕೆಲಸ ಹಗುರ ಮಾಡಿದಿರಿ..ನೀವು ಕೊಟ್ಟ ಗ್ರೀಟಿಂಗ್ ಕಾರ್ಡ್ ಅದ್ಭುತವಾಗಿದೆ.. ಖಂಡಿತ ಪ್ರೀತಿಯನ್ನು ಆ ಎತ್ತರಕ್ಕೆ ಏರಿಸಬಲ್ಲವು ನಾವು.. ಆದರೆ.. "

"ಸರ್.. ಸರ್... ಮಾತ್ರೆ ತೆಗೆದುಕೊಳ್ಳಬೇಕು ಏಳಿ ಸರ್"

ನರ್ಸಮ್ಮ ಬಂದು ಎಬ್ಬಿಸಿದಾಗ ಹಳೆ ನೆನಪುಗಳು ಕೈಗೆ ಹಾಕಿದ ಗ್ಲುಕೋಸ್ ಡ್ರಿಪ್ ತರಹ ಕರಗಿಹೋಗಿತ್ತು..

ಮಾತ್ರೆ ನುಂಗಿ ನೀರು ಕುಡಿದ ಮೇಲೆ.. ಒಂದು ರೀತಿಯ ಮಂಪರು.. ಕಣ್ಣುಗಳು ಮತ್ತೆ ನೆನಪಿನಾಳಕ್ಕೆ ಜಾರಿದವು.. 

"ಆದರೆ ರವೀಶ.. ನಿಮ್ಮ ಅಚ್ಚುಮೆಚ್ಚಿನ ಗೆಳೆಯ ಇದ್ದಾನಲ್ಲ.. ಸುಧೀಂದ್ರ.. ಅವನನ್ನು ಮದುವೆಯಾಗುತ್ತಿದ್ದೇನೆ.. ಅವನು ನನ್ನ ಬಾಲ್ಯದ ಗೆಳೆಯ.. ನಮ್ಮ ಮನೆ ಅವನ ಮನೆ ಮೊದಲಿಂದಲೂ ಪರಿಚಯ.. ಹಾಗಾಗಿ ಅವನ ಜೊತೆ ನನ್ನ ಹೆಜ್ಜೆಗಳು.. ಆದರೆ ಒಂದು ಮಾತು ರವೀಶ.. ಅವನಿಲ್ಲದಿದ್ದರೆ.. ನೀವೇ ನನ್ನ ಮೊದಲ ಆಯ್ಕೆಯಾಗಿರುತ್ತಿದ್ದಿರಿ  ".. ಮಿಕ್ಕ ಮಾತುಗಳು ಕಿವಿಗೆ ಮಾತ್ರ ಬೀಳುತ್ತಿದ್ದವೇ ಹೊರತು.. ಹೃದಯಕ್ಕೆ ಅಲ್ಲ.. ಮ್ಲಾನಮುಖವಾಗಿತ್ತು.. ಆದರೂ ತೋರ್ಪಡಿಸಿಕೊಳ್ಳದೆ.. ಕೈಕುಲುಕಿ ಹೆಜ್ಜೆ ಹಾಕಿದ್ದ ತನ್ನ ಮನೆಯ ಕಡೆಗೆ ...

ನಂತರ ಕಾಲೇಜಿನಲ್ಲಿ ಮತ್ತೆ ಅವಳನ್ನು ನೋಡಲಿಲ್ಲ.. ಅವಳು ಕಂಡರೂ ಕಾಣದ ಹಾಗೆ ಓಡಾಡುತ್ತಿದ್ದ.. ಪರೀಕ್ಷೆ.. ಫಲಿತಾಂಶ.. ಅವರಿಬ್ಬರನ್ನೂ ತಮ್ಮ ತಮ್ಮ ಹಾದಿಗೆ  ಎಳೆದೊಯ್ದವು.. ಮತ್ತೆ ಭೇಟಿ ಆಗಿರಲೇ ಇಲ್ಲ..

ಈ ರೀತಿಯ ಅಚಾನಕ್ ಭೇಟಿ ಅದು ಆಸ್ಪತ್ರೆಯಲ್ಲಿ.. ಅವಳು ಡಾಕ್ಟರ್ ಆಗಿ ತಾನು ಅವಳಿಂದ ಚಿಕಿತ್ಸೆ ಪಡೆದುಕೊಳ್ಳುವವನಾಗಿ.. ದೇವಾ ಏನಪ್ಪಾ ನಿನ್ನ ಜಾಯಿಂಟ್.. ಒಂದಕ್ಕೊಂದು ಸಂಬಂಧಕ್ಕೆ ಬೆಸುಗೆ ಹೊಡೆದು ರಿವೇಟ್ ಹೊಡೆದು ಬಿಟ್ಟಿದ್ದೀಯಲ್ಲಪ್ಪ.. ಎಂದುಕೊಂಡು ಕಣ್ಣು ಮುಚ್ಚಿದ..

ಮರುದಿನ.. ಕಣ್ಣುಗಳು ಭಾರವಾಗಿದ್ದವು.. ತೆಗೆಯಲು ಕಷ್ಟವಾಗುತ್ತಿತ್ತು. ನೋವು ಭಾದಿಸುತ್ತಿತ್ತು.. ಕಿಸಿ ಕಿಸಿ ನಗೆ.. ಕಣ್ಣು ಬಿಟ್ಟಾಗ.. ಛಾವಣಿಯಲ್ಲಿ ದೀಪಗಳೇ ದೀಪಗಳು.. ಸುತ್ತಮುತ್ತಲು ಕಣ್ಣು ಬಿಟ್ಟು ನೋಡಿದ .. ಚೂರಿ ಚಾಕು, ಇಕ್ಕಳ ತರಹದ ಹಲವಾರು ಹತಾರಗಳು ಇದ್ದವು.. ಕಣ್ಣುಗಳು ಭಾರವಾಗಿ ಹಾಗೆ ಕಣ್ಣು ಮುಚ್ಚಿದವು..

"ಮಗನೆ.. ನಿನ್ನ ಹುಡುಕಿ ಹುಡುಕಿ ನನ್ನ ಕಣ್ಣುಗಳು ಬಿದ್ದು ಹೋಗಿದ್ದವು.. ಈ ರೀತಿ ಸಿಗುತ್ತೀಯ ಅಂತ ತಿಳಿದಿರಲಿಲ್ಲ ಮಗಾ.. " ಎಂದು ಮೆಲ್ಲನೆ ಹೊಟ್ಟೆಯ ಮೇಲೆ ಒಂದು ಪೆಟ್ಟು ಕೊಟ್ಟ ಮಾತುಗಳನ್ನು ಕೇಳಿ.. ಮೆಲ್ಲಗೆ ತಿರುಗಿದಾಗ ಬಾಲ್ಯದ ಗೆಳಯ ಸುಧೀಂದ್ರ.. ಫ್ರೆಂಚ್ ಗಡ್ಡ.. ಕಪ್ಪು ಫ್ರೇಮಿನ ಕನ್ನಡಕ.. ಚೆಲುವ.. ಬಿಳಿಕೋಟಿನಲ್ಲಿ ಮಿಂಚುತ್ತಿದ್ದ..

"ಏನ್ಲಾ ನೀ ಇಲ್ಲಿ" ಗುರುತು ಹಿಡಿದು ಮಾತಾಡಿಸಿದಾಗ..

ಇಬ್ಬರು ಹಳೆಯ ಗೆಳೆಯರು ಭೇಟಿಯಾದ ಸಂದರ್ಭ..

ಇತ್ತ ಗೀತಾ ಬಂದು.. "ನೋಡಿ ಸುಧಿ.. ಅವತ್ತು ತಪ್ಪಿಸಿಕೊಂಡವ ಇವತ್ತು ನಮ್ಮ ಆಸ್ಪತ್ರೆಯಲ್ಲಿ ಗಾಯಾಳುವಾಗಿ ಬಂದಿದ್ದಾನೆ..  "

"ಸುಧಿ.. ಒಂದು ಉಪಕಾರ ಕಣೋ.. ನೀ ಆಪರೇಷನ್ ಏನಾದರೂ ಮಾಡಿಕೊ.. ಆದರೆ ನನಗೆ ಅರವಳಿಕೆ ಕೊಡದ ಹಾಗೆ ಮಾಡಬಹುದೇ.. " 

"ಇಲ್ಲ ಕಣೋ.. ಹಾಗೆ ಮಾಡಲು ಸಾಧ್ಯವಿಲ್ಲ.. ಆದರೆ ನಿನಗೆ ಆಪರೇಷನ್ ಮಾಡೋದು ವಿಡಿಯೋ ಮಾಡೋಕೆ ಗೀತಾಗೆ ಹೇಳುತ್ತೀನಿ.. ನೀ ಆಮೇಲೆ ನೋಡುವೆಯಂತೆ..

"ಸರಿ.." 

ಆಪರೇಷನ್ ಮುಗಿದಿತ್ತು.. ವಾರ್ಡಿಗೆ ಶಿಫ್ಟ್ ಮಾಡಿದ್ದರು..

ಗಂಡ ಹೆಂಡತಿ ಇಬ್ಬರೂ ತಮ್ಮ ಜೀವದ ಗೆಳೆಯನನ್ನು ಮಾತಾಡಿಸಲು ಬಂದರು.. "ಏನೋ ಮಗ ಹೇಗಿದ್ದೀಯಾ.." ಸುಧೀಂದ್ರನ ಚಿರಪರಿಚಿತ ಧ್ವನಿ..

"ಹೇ ಹೇ ಹೇ.. ಆರಾಮ್ ಕಣೋ.. ಗೀತಾ ಆ ವಿಡಿಯೋ ತೋರಿಸಿ  ಪ್ಲೀಸ್.. "

ವಿಡಿಯೋ ನೋಡತೊಡಗಿದ.. ಮೂಗು.. ಕಣ್ಣಿಗೆ ಬಲವಾದ ಪೆಟ್ಟು ಬಿದ್ದದರಿಂದ.. ಪ್ಲಾಸ್ಟಿಕ್ ಸರ್ಜರಿ ಮಾಡಿ ಮೊದಲಿನ ಸ್ಥಿತಿಗೆ ತರಲು ಗಂಡ ಹೆಂಡತಿ ಹೆಣಗುತ್ತಿದ್ದದ್ದು.. ನಂತರ ಯಶಸ್ವಿಯಾದದ್ದು.. ಜೊತೆಯಲ್ಲಿ ಕೈಸನ್ನೆಯಲ್ಲಿಯೇ ತನ್ನನ್ನು ತೋರಿಸಿ.. ಹೀ ವಿಲ್ ಬಿ ಆಲ್ ರೈಟ್ ಅಂತ ಹೇಳಿದ್ದು ಎಲ್ಲವೂ ಖಂಡಿತು..

ದಶಕಗಳ ಹಿಂದೆ ಸ್ನೇಹದ  ಕೊಂಡಿ ಕಳಚಿಕೊಂಡದ್ದು ನಿಜವಾದರೂ.. ಗೀತಾ ಬರಿ ತನ್ನ ಕಣ್ಣಿಗೆ ಮತ್ತು ಮೂಗಿಗೆ ಹೊಲಿಗೆ ಮಾತ್ರವಲ್ಲದೆ.. ನಮ್ಮ ಅಪೂರ್ವ ಗೆಳೆತನಕ್ಕೂ ಹೊಲಿಗೆ ಹಾಕುತ್ತಿದ್ದಳು..ಎನಿಸಿತು ರವೀಶನಿಗೆ !!!

Friday, December 13, 2019

ಅರಿಯದ ಪ್ರಮಾದ...!

ಮಧ್ಯ ರಾತ್ರಿಯಲ್ಲಿ ಪೊಲೀಸ್ ಸ್ಟೇಷನ್ ಫೋನ್ ಟ್ರಿಣ್ ಟ್ರಿಣ್ ಹೊಡೆದುಕೊಳ್ತಾನೆ ಇತ್ತು.. ರಾತ್ರಿ ಪಾಲಿಯಲ್ಲಿದ್ದವರು ಕಾಫೀ ಜೊತೆಗೆ ಸಿಗರೇಟ್ ಬ್ರೇಕ್ ಅಂತ ಹೊರಗೆ ಹೋಗಿದ್ದರು.. ಫೋನ್ ಹೊಡೆದುಕೊಳ್ಳೋದು ಕಡಿಮೆ ಮಾಡಿರಲಿಲ್ಲ.. ಹೊರಗೆ ಚುಮುಚುಮು ಚಳಿ.. ಬೆಚ್ಚಗೆ ಕಾಫಿ ಜೊತೆಯಲ್ಲಿ ಒಂದು ಕಿಂಗ್ ದಂ ಹೊಡೆದು ಸ್ಟೇಷನ್ ಒಳಗೆ ಕಾಲಿಟ್ಟ ಕೂಡಲೇ.. ಫೋನ್ ರಣ ರಣ ಸದ್ದು ಮಾಡುತ್ತಿದ್ದದು ಗೊತ್ತಾಯಿತು.. ಮೊಬೈಲ್ ಇಲ್ಲದ ಕಾಲವದು.. ಸ್ಥಿರ ದೂರವಾಣಿಯ ಮೂಲಕವೇ ಲೋಕ ನೆಡೆಯುತ್ತಿದ್ದ ಕಾಲ..

"ಹಲೋ ಯಾರೀ ಅದು .. ಹೇಳ್ರಿ.. ಇಷ್ಟು ಹೊತ್ತಲ್ಲಿ ಏನ್ರಿ ನಿಮ್ಮ ಪಜೀತಿ ಬೆಳಿಗ್ಗೆ ಮಾಡ್ರಿ " ಆ ಕಡೆಯಿಂದ ಉತ್ತರ ಕೇಳಿಸಿಕೊಳ್ಳುವ ಗೋಜಿಗೆ ಹೋಗದೆ  ಫೋನ್ ಪಟಕ್ ಅಂತ ಇಟ್ಟರು ಕಾನ್ಸ್ಟೇಬಲ್ ಕರಿಯಣ್ಣ..

ಅವರಿಗೂ ಸಾಕಾಗಿತ್ತು.. ಬಯಲು ಸೀಮೆಯ ಪೊಲೀಸ್ ಸ್ಟೇಷನ್ ಅದೊಂದೇ.. ಸುತ್ತ ಮುತ್ತಲ ಹಳ್ಳಿಗಳಿಗೆ ಅದೊಂದೇ ಆರಕ್ಷಕ ಠಾಣೆ... ಕಳ್ಳತನ, ಗುದ್ದಾಟ,  ಅಸ್ತಿ ವಿವಾದ, ಆತ್ಮಹತ್ಯೆ.. ಕಡೆಗೆ ಬಟ್ಟೆ , ಜಾನುವಾರುಗಳು ಕಳೆದುಹೋಗಿದ್ದರೆ ಆ ದೂರು ಸಹ ಇಲ್ಲಿಯೇ.. ಹಾಗಾಗಿ ಫೋನ್ ಕರೆ ಬಂತು ಅಂದರೆ.. ಬಿಪಿ ತಾರಕಕ್ಕೆ ಏರುತ್ತಿತ್ತು..

ಮತ್ತೆ ಫೋನ್ ಟ್ರಿಣ್ ಟ್ರಿಣ್.. ತಲೆ ಕೆಟ್ಟ ಕರಿಯಣ್ಣ.. ಫೋನ್ ತೆಗೆದುಕೊಂಡು.. "ಏನ್ರಿ ನಿಮಗೆ ತಲೆ ಇಲ್ವಾ.. .. ಸರ್ ಸರ್ ನೀವಾ.. ಗೊತ್ತಾಗಲಿಲ್ಲ ಸರ್.. ಕ್ಷಮಿಸಿ ಸರ್.. ಕುರಿ ಕಳೆದುಹೋಗಿದೆ ಅಂತ.. ಈ ಒಂದು ಘಂಟೆಯಲ್ಲಿ ನೂರು ಸಾರಿ ಕರೆ ಮಾಡಿದ್ದ ಒಬ್ಬ.. ಅವನಿಗೆ ಉತ್ತರ ಕೊಟ್ಟು ಕೊಟ್ಟು ತಲೆ ಕೆಟ್ಟು ಹೋಗಿತ್ತು.. ಸರಿ ಸರ್.. ಎಷ್ಟೊತ್ತಿಗೆ ಸರ್.. ಸಾರಿ ಸರ್.. ನಾನು ಪರಮೇಶಿ ಈಗಲೇ.. ಹಾ ಸರ್.. ಇರ್ತೀವಿ ಸರ್.. ಓಕೇ ಸರ್ ಓಕೇ .. ಸ ..... " ಮಾತು ಇನ್ನೂ ಮುಗಿದಿರಲಿಲ್ಲ.. ಕರೆ ಕಟ್ಟಾಗಿತ್ತು..

"ಏನ್ಲಾ ಕರಿಯ.. ಪೋಸು ಕೊಡ್ತಾ ಇದ್ದೆ.. ಬಸ್ ಚಕ್ರ ಪುಸ್ ಆದಂಗೆ ಹವಾ ಕಳ್ಕೊಂಡೆ.. ಏನಾಯ್ತು.. ಯಾರೋ ಆ ಕಡೆ ಇದ್ದದ್ದು .. " ಎಲೆ ಅಡಿಕೆ ಮೆಲ್ಲುತ್ತಾ.. ಪರಮೇಶಿ ದೇಶಾವರಿ ನಗೆ ನಕ್ಕು ಕೇಳಿದಾಗ.. ಕರಿಯಣ್ಣನ ಬಿಪಿ ರುದ್ರತಾಂಡವ..

"ಲೇ ಸಾಹೇಬ್ರು ಕನ್ಲಾ.. ನೆಡಿ.. ಸಾಹೇಬ್ರು ಕರೀತಾವ್ರೆ.. ಆ ಚಿಕ್ಕಣ್ಣನಿಗೆ ಇಲ್ಲಿಗೆ ಬರೋಕೆ ಹೇಳು.. ಅವನು ಬರುವ ಹೊತ್ತಿಗೆ.. ರೈಫಲ್.. ಬಂದೂಕ.. ಬುಲೆಟ್ಟುಗಳು..ಎಲ್ಲವನ್ನು ಒಮ್ಮೆ ಸರಿಯಾಗಿದೆಯೇ ಎಂದು ಚೆಕ್ ಮಾಡೋಕೆ ಹೇಳು .. ಬೇಗ ಹೊರಡು.. ಹೊರಡು"

ಕರಿಯ, ಪರಮೇಶಿ ಇಬ್ಬರೂ ಸಿದ್ಧರಾಗಿ ಹೊರಡುವ ಹೊತ್ತಿಗೆ ಚಿಕ್ಕಣ್ಣ ಒಳಗೆ ಬಂದ. ಕರಿಯಣ್ಣ ಕ್ಷಿಪ್ರವಾಗಿ ಎಲ್ಲವನ್ನು ಚಿಕ್ಕಣ್ಣನಿಗೆ ಹೇಳಿ.. ಇಬ್ಬರೂ ಸೈಕಲ್ ಹತ್ತಿ ತಮ್ಮ ಸಾಹೇಬ್ರು ಇದ್ದ ಜಾಗಕ್ಕೆ ಹೊರಟರು..

ಆಗಲೇ ತುಂಬಾ ಜನ ಸೇರಿದ್ದರು.. ಚಳಿ ಚಳಿ.. ಜನಗಳು ಮಾತಾಡಿದರೆ ಅವರ ಒಳಗೆ ಇರುವ ಅಸೂಯೆ, ದ್ವೇಷ, ಪ್ರೀತಿ, ವಿಶ್ವಾಸ ಇವೆಲ್ಲಾ ಸುಟ್ಟು ಹೊಗೆಯಾಗಿ ಬಾಯಿಯಿಂದ ಹೊರಗೆ ಬರುತ್ತಿದೆಯೇನೋ ಅನ್ನಿಸುವಂತೆ.. ಮಾತಾಡಿದರೆ ಬಾಯಿಂದ ಹೊಗೆ ಬರುತ್ತಿತ್ತು..

ಅಲ್ಲೊಂದು ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್ ತೊಟ್ಟಿದ್ದ ವ್ಯಕ್ತಿ ಹೆಣವಾಗಿ ಬಿದ್ದಿತ್ತು.. ಮಹಜರ್ ಮಾಡಿಸಿ ಸಾಹೇಬ್ರು ಅಲ್ಲಿಯೇ ಇದ್ದ ಮೈಲಿಗಲ್ಲಿನ ಮೇಲೆ ಸಿಗರೇಟ್ ಎಳೆಯುತ್ತಾ ಯಾವುದೋ ಗಾಢವಾದ ಯೋಚನೆಯಲ್ಲಿ ಕೂತಿದ್ದರು..

"ಸಾರ್.. ಬಂದ್ವಿ ಸಾರ್.. ಏನು ಮಾಡೋದು ಹೇಳಿ" ಸಲ್ಯೂಟ್ ಹೊಡೆದ ಬೂಟ್ಸ್ ಸಪ್ಪಳ ಮತ್ತು ಕರಿಯಣ್ಣನ ಕೀರಲು ಧ್ವನಿಯಿಂದ ಮತ್ತೆ ಇಹಲೋಕಕ್ಕೆ ಮರಳಿದ ಸಾಹೇಬ್ರು.. "ಕರಿಯಣ್ಣ.. ಮಹಜರ್ ಆಗಿದೆ.. ಪಂಚನಾಮೆ ಮಾಡಿದ್ದಾರೆ.. ಆ ವ್ಯಕ್ತಿಯ ವಸ್ತುಗಳನ್ನೆಲ್ಲ ಪಟ್ಟಿ ಮಾಡಿ.. ಒಂದು ಕಡೆ ಇಟ್ಟಿದ್ದಾರೆ.. ಅದನ್ನು ಸ್ಟೇಷನಿಗೆ ತೆಗೆದುಕೊಂಡು ಹೋಗಿ.. ಪರಮೇಶಿನ ನನ್ನ ಜೊತೆಯಲ್ಲಿ ಬಿಟ್ಟು ನೀವು ಹೊರಡಿ.. ನಾ ಸ್ಟೇಷನಿಗೆ ಬರುವ ಹೊತ್ತಿಗೆ ಆ ವಸ್ತುಗಳನ್ನೆಲ್ಲ ಒಮ್ಮೆ ಕೂಲಂಕುಶವಾಗಿ ಗಮನಿಸಿ.. ನಿಮ್ಮ ರಿಪೋರ್ಟ್ ಕೊಡಿ.. ಹಾ ಹೊರಡಿ"

ಕರಿಯಣ್ಣನ ಪ್ರತಿಕ್ರಿಯೆಗೂ ಕಾಯದೆ.. "ರೀ ಪರಮೇಶಿ.. ನೀವು ಬನ್ನಿ ಇಲ್ಲಿ.. ನಾ ಹೇಳೋದು ಸರಿಯಾಗಿ ಕೇಳಿ.. ಹಾಗೆ ಮಾಡಿ.. "

ಕಿವಿಯಲ್ಲಿ ಏನೋ ಉಸುರಿದರು.. ಪರಮೇಶಿಯ ಮೊಗ ಪೇಲವವಾಯಿತು.. ಜೊತೆಗೆ ಚಿಂತೆಯ ಗೆರೆಗಳು ಕೂದಲು ಹಿಂದೆ ಸರಿಯುತ್ತಿದ್ದ ಅವರ ಹಣೆಯಲ್ಲಿ ಮೂಡಲು ಶುರುವಾಯಿತು..

ಪರಮೇಶಿ.. ದಿಕ್ಕು ತೋಚದೆ... ಆದರೆ ಸಾಹೇಬರ ಆದೇಶ ಪಾಲಿಸಲೇಬೇಕಾಗಿದ್ದರಿಂದ ಅವರು ಹೇಳಿದ ಕಡೆಗೆ ಹೊರಟ... ಸಾಹೇಬರು ತಮ್ಮ ಬೈಕ್ ಹತ್ತಿ ಹೊರಟರು.... ಎಲ್ಲಿಗೆ ಎಂದು ಅವರಿಗೆ ಖಚಿತ ಮಾಹಿತಿ ಇತ್ತು..

ಕರಿಯಣ್ಣ.. ಒಂದೊಂದೇ ವಸ್ತುವನ್ನು ತೆಗೆದು.. ಅದರ ಗಮನಿಸಿ ತನಗೆ ತೋಚಿದಂತೆ ರಿಪೋರ್ಟ್ ಸಿದ್ಧ ಮಾಡುತ್ತಿದ್ದ.. ಕಿಟಕಿಯಿಂದ ಇದನ್ನೆಲ್ಲಾ ಪರಮೇಶಿ ಗಮನಿಸುತ್ತಿದ್ದ.
ಕರಿಯಣ್ಣ ಸುಮಾರು ಮೂವತ್ತು ನಿಮಿಷ.. ಎಲ್ಲವನ್ನೂ ಗಮನಿಸಿ.. ಒಂದು ಹಾಳೆಯಲ್ಲಿ ತನಗನಿಸಿದ ವಿವರಗಳೆನ್ನೆಲ್ಲ ಬರೆದ.. ಒಮ್ಮೆ ನಕ್ಕ.. ವಿಚಿತ್ರ ಅನ್ನಿಸಿತು ಪರಮೇಶಿಗೆ.. ಕರಿಯಣ್ಣ ಯಾಕೆ ನಗುತ್ತಿದ್ದಾನೆ ಅಂತ ಅರ್ಥವಾಗಲಿಲ್ಲ..

ಸುಮಾರು ಸಂಜೆಯ ವೇಳೆಗೆ ಸಾಹೇಬ್ರು ಸ್ಟೇಷನೊಳಗೆ ಬಂದರು.. ಪರಮೇಶಿಯನ್ನು ಕಣ್ಣುಗಳು ಹುಡುಕಿತು.. ತನ್ನ ಟೇಬಲ್ ಬಿಟ್ಟು ಇನ್ನೊಬ್ಬರ ಟೇಬಲಿನ ಹತ್ತಿರವಿದ್ದ ಅಪರಾಧಿಗಳನ್ನು ಕೂರಿಸುವ ಬೆಂಚಿನ ಮೇಲೆ ಕೂತಿದ್ದ.. ಸಾಹೇಬರನ್ನು ಕಂಡ ತಕ್ಷಣ ಎದ್ದು ನಿಂತು ಸಲ್ಯೂಟ್ ಹೊಡೆದ.. ಸಾಹೇಬ್ರು ಕಣ್ಣಿನಲ್ಲಿಯೇ ಏನೋ ಪ್ರಶ್ನೆ ಕೇಳಿದರು.. ತಲೆ ತಗ್ಗಿಸಿ ಆಯ್ತು ಎನ್ನುವಂತೆ ಪರಮೇಶಿ ಕರಿಯಣ್ಣನ ಕಡೆ ಒಮ್ಮೆ ನೋಡಿ ಮತ್ತೆ ತಲೆ ತಗ್ಗಿಸಿದ..

ತನ್ನ ಕೆಲ್ಸದಲ್ಲಿ ಮಗ್ನನಾಗಿದ್ದ ಕರಿಯಣ್ಣ ಸಾಹೇಬ್ರು ಬಂದದ್ದು.. ಪರಮೇಶಿ ಸಲ್ಯೂಟ್ ಹೊಡೆದದ್ದು ಯಾವುದು ಕೇಳಿಸಿರಲಿಲ್ಲ.. ಹತ್ತಿರಬಂದ ಸಾಹೇಬ್ರು "ಕರಿಯಣ್ಣ ಎಲ್ಲಾ ಸಿದ್ಧವಾಯ್ತಾ.. ಏನನ್ನುತ್ತೆ ನಿಮ್ಮ ರಿಪೋರ್ಟ್.. ?"

ತಕ್ಷಣ ಬಂದ ಧ್ವನಿಗೆ ಗಲಿಬಿಲಿಯಾಗಿ ಕರಿಯಣ್ಣ ತಲೆ ಎತ್ತಿ ನೋಡಿ.. ಗಾಬರಿಯಿಂದ "ಗುಡ್ ಇವಿನಿಂಗ್ ಸಾರ್.. ಕ್ಷಮಿಸಿ ನೀವು ಬಂದದ್ದು ನನ್ನ ಗಮನಕ್ಕೆ ಬರಲಿಲ್ಲ.. ಏಏ ಪರಮೇಶಿ ನೀನಾದರೂ  ಹೇಳಬಾರದೇ.. ಚಿಕ್ಕಣ್ಣ ಎತ್ತಗೆ ಹೋದಾ.. ಹೀಗೆ ಬಡಬಡಿಸುತ್ತಿದ್ದ ಕರಿಯಣ್ಣನನ್ನು ಕಣ್ಣಲ್ಲೇ ಕೂರೋಕೆ ಹೇಳಿ.. ತಮ್ಮ ಕೋಣೆಗೆ ಹೋಗಿ ಬೆಲ್ ಬಾರಿಸಿದರು...

ಕರಿಯಣ್ಣ ಬೆವರಿನ ಮೊಗವನ್ನು ಒರೆಸಿಕೊಂಡು.. ತಲೆಗೆ ಟೋಪಿ ಹಾಕಿಕೊಂಡು ಸಾಹೇಬ್ರ ಕೋಣೆಗೆ ಹೋದ..

"ಕರಿಯಣ್ಣನವರೇ ನಿಮಗೆ ಒಂದು ಘಂಟೆ ಕಾಲ ಸಮಯ ಕೊಡ್ತೀನಿ.. ಆ ಸತ್ತ ವ್ಯಕ್ತಿ ಯಾರು.. ಅವನಿಗೂ ನಿಮಗೂ ಏನೂ ಸಂಬಂಧ.. ಈ ಕೊಲೆಯನ್ನು ಮಾಡಿದವರಾರು.. ಚಿಕ್ಕಣ್ಣ ಎಲ್ಲಿ.... ಇಷ್ಟು ಪ್ರಶ್ನೆಗೂ ಉತ್ತರ ಹೇಳಿ.. ಸರಿ ಹೋಗಿ.. "

ಹೊರಗೆ ಬಂದ ಕರಿಯಣ್ಣನ ಮೊಗ.. ಬಾಣಲಿಯಲ್ಲಿ ಸುಟ್ಟುಹೋದ ಬೋಂಡಾದ .. ಬಂದವನೇ ದಪ್ ಅಂತ ಕುರ್ಚಿಯಲ್ಲಿ ಕೂತು.. ಮೆಲ್ಲನೆ ಯೋಚಿಸತೊಡಗಿದ.. ಕಣ್ಣು ಮುಚ್ಚಿದ... ಹಾಗೆ ಎಷ್ಟು ಹೊತ್ತು ಕೂತಿದ್ದನೋ ಗೊತ್ತಿಲ್ಲ..

ಪರಮೇಶಿ ಬಂದು.. ಣೋ.. ಅಣ್ಣೋ.. ಕರಿಯಣ್ಣೋ ಸಾಹೇಬ್ರು ಕರೀತಾವ್ರೆ.. ಎಂದಾಗ ಎಚ್ಚರ..

ಕರಿಯಣ್ಣ ಏನೋ ನಿರ್ಧರಿಸಿದವನಂತೆ.. ಸೀದಾ ಒಳಗೆ ಹೋದ.. ಪರಮೇಶಿ ಅವನ ಹಿಂದೆಯೇ ಒಳಗೆ ಬಂದ.. ಕರಿಯಣ್ಣ ಸೀದಾ ಒಂದು ಸೆಲ್ ಒಳಗೆ ಹೋಗಿ.. "ಪರಮೇಶಿ ಸರ್.. ಚಿಲಕಹಾಕಿಕೊಳ್ಳಿ .. ಹಾಗೆ ಸಾಹೇಬ್ರನ್ನ ಬರೋಕೆ ಹೇಳಿ ಪ್ಲೀಸ್.. " ಏಕವಚನದಿಂದ ಬಹುವಚನಕ್ಕೆ ತಿರುಗಿತ್ತು.. ಲಾಕಪ್ಪಿನೊಳಗೆ ಅವನೇ ಹೋಗಿ ಕೂತದ್ದು.. ಸಾಹೇಬರಂನ ಕರೆಯೋಕೆ ಹೇಳಿದ್ದು.. ಪರಮೇಶಿಗೆ ಅರ್ಥವಾಗುತ್ತಿಲ್ಲ..

ಸರಿ.. ತಲೆ ಕೆಡಿಸಿಕೊಳ್ಳದೆ.. ಪರಮೇಶಿ ಸೀದಾ ಸಾಹೇಬ್ರ ಕೋಣೆಗೆ ಹೋಗಿ ಸಲ್ಯೂಟ್ ಹೊಡೆದು.. "ಸಾಹೇಬ್ರೆ.. ನೀವು ಹೇಳಿದಂತೆ ಆಗದೆ.. ಕರಿಯಣ್ಣ ಲಾಕಪ್ಪಿನೊಳಗೆ ಕೂತಿದ್ದಾನೆ.. ಸಾರಿ ಕೂತಿದ್ದಾರೆ.. ನಿಮ್ಮನ್ನು ನೋಡಬೇಕು ಅಂತಿದ್ದಾರೆ"

ಟೋಪಿ ಧರಿಸಿ.. ಸಾಹೇಬ್ರು ಸೀದಾ ಲಾಕಪ್ಪಿನ ಹತ್ತಿರ ಬಂದು "ಕರಿಯಣ್ಣನವರೇ ಹೇಳಿ.. "

"ಸರ್ ತಪ್ಪಾಯಿತು ಸರ್.. ನನ್ನ ಕ್ಷಮಿಸಿ ಬಿಡಿ ಸರ್.. ನೀವೇನು ಮುಂದೆ ಹೇಳುತ್ತೀರೋ ಹಾಗೆ ಆಗಲಿ... "

ಕಾರ್ಯದಕ್ಷತೆಗೆ ಹೆಸರಾಗಿದ್ದ ಇನ್ಸ್ಪೆಕ್ಟರ್ ರವಿಚಂದ್ರ.. ಅವರ ಮೊಗದಲ್ಲೊಂದು ಕಿರು ನಗೆ ಹಾಗೆ ಬಂದು ಹೋಯ್ತು..

"ಪರಮೇಶಿ. ಹೋಗಿ ಚಿಕ್ಕಣ್ಣನನ್ನು ಕರೆ ತನ್ನಿ.. ಹಾಗೆ ಕರಿಯಣ್ಣನವರಿಗೆ ಒಂದು ಪೇಪರ್ ಪೆನ್ನು ಕೊಡಿ.. "

ಲಾಕಪ್ಪಿನೊಳಗಿಂದ.. ಕರಿಯಣ್ಣ "ಸರ್ ಪೇಪರ್ ಪೆನ್ನು ಏನೂ ಬೇಡ.. ನಾ ಆಗಲೇ ಬರೆದಿಟ್ಟಿದ್ದೇನೆ.. ನನ್ನ ಟೇಬಲ್ಲಿನ ಮೇಲಿದೆ.. ತಗೊಳ್ಳಿ ಸರ್"

ಅಚ್ಚರಿಯಾಯಿತು..ಆದರೂ ತೋರಗೊಡದೆ.. ಅದನ್ನು ತೆಗೆದುಕೊಂಡು ಓದತೊಡಗಿದರು.. 

"ಸರ್ ಸತ್ತ ವ್ಯಕ್ತಿ.. ರವೀಂದ್ರ ಅಂತ.. ನನ್ನ ದೂರದ ಸಂಬಂಧಿ.. ನನ್ನ ಮನೆತನಕ್ಕೂ ಅವನ ಮನೆತನಕ್ಕೂ ತಲೆತಲಾಂತರದ ದ್ವೇಷ.. ಏನೋ ಒಂದು ಚೂರು ಅಸ್ತಿ, ಜಾಮೀನು ತಗಾದೆ.. ಅದು ಎರಡು ತಲೆಮಾರುಗಳಿಂದ ನೆಡೆದೆ ಇತ್ತು.. ಇದಕ್ಕೊಂದು ಮಂಗಳ ಹಾಡಬೇಕು.. ಮತ್ತೆ ಎರಡೂ ಮನೆಗಳು ಒಂದಾಗಬೇಕು ಎನ್ನುವ ಅಭಿಲಾಷೆ ಹೊತ್ತು ಅವನ ಜೊತೆ ಮಾತಾಡೋಣ ಅಂತ ಕರೆದಿದ್ದೆ.. ಅವನು ಒಳ್ಳೆಯವನೇ..  ಅವನಿಗೂ ಇದು ಇಷ್ಟವಿತ್ತು.. ನಿನ್ನೆ ರಾತ್ರಿ ಇಬ್ಬರೂ ಒಂದು ಡಾಬಾದಲ್ಲಿ ಊಟ ಮಾಡಿ..ಮಾತಾಡೋಕೆ ಶುರು ಮಾಡಿದೆವು.. ನನ್ನ ಮಾತಿಗೆ ಒಪ್ಪಿಗೆ ಸೂಚಿಸಿದ್ದ.. ಇಬ್ಬರೂ ಖುಷಿಯಾಗಿ ಅಲ್ಲಿಂದ ಹೊರಟೆವು.. ಆವ ಮನೆಗೆ ಹೋದ... ನಾ ಸ್ಟೇಷನಿಗೆ ಬಂದೆ.. ಸುಮಾರು ಒಂದು ಘಂಟೆಗೆ ರವೀಂದ್ರ ಸ್ಟೇಷನಿಗೆ ಕರೆ ಮಾಡಿದ.. ನಾ ಶಸ್ತ್ರಗಳ ಇನ್ ಚಾರ್ಜ್ ಆಗಿದ್ದ ಚಿಕ್ಕಣ್ಣನಿಗೆ ಹೇಳಿ.. ಹೊರಬಂದೆ.. "

ಲಾಕಪ್ಪಿನೊಳಗೆ ಕರಿಯಣ್ಣ ಸಾಹೇಬ್ರು ಪತ್ರ ಓದೋದನ್ನೇ ನೋಡುತ್ತಿದ್ದ..

"ಹೊರಬರುವ ಮುನ್ನ.. ಚಿಕ್ಕಣ್ಣನಿಗೆ ಹೇಳಿ.. ಠಾಣೆಯಲ್ಲಿದ್ದ ಒಂದು ರಿವಾಲ್ವರ್ ತೆಗೆದುಕೊಂಡು ಹೋಗಿದ್ದೆ.. ಈ ವಿಷಯ ನಮ್ಮಲ್ಲಿಯೇ ಇರಲಿ.. ಹೊರಗೆ ಹೇಳಬೇಡ ಎಂದು ಹೇಳಿ.. ಅವನ ಕೈಗೆ ಒಂದು ಸಾವಿರ ರೂಪಾಯಿಗಳನ್ನು ಕೊಟ್ಟು.. ಈ ರಿವಾಲ್ವರ್ ಹಾಗೆ ವಾಪಾಸ್ ಕೊಡ್ತೀನಿ ಅಂದೇ.. ಚಿಕ್ಕಣ್ಣ ಸರ್.. ಜೋಪಾನ.. ಅದರೊಳಗೆ ಹಾಕಿರುವ ಬುಲೆಟ್ ಲೆಕ್ಕದೊಳಗೆ ಸೇರಿರುತ್ತೆ.. ಹಾಗಾಗಿ ಉಪಯೋಗಿಸದೆ ಹಾಗೆ ತಂದು ಕೊಡಿ.. ಅಂದಿದ್ದಕ್ಕೆ ನಾ ಹೇಳಿದ್ದೆ.. ಚಿಕ್ಕಣ್ಣ ಇದು ಇದು ಇದು ಬರಿ ಸೇಫ್ಟಿಗೆ ಮಾತ್ರ.. ಉಪಯೋಗಿಸೋಕೆ ಅಲ್ಲ ಎಂದು ಹೇಳಿ ಹೊರಬಿದ್ದಿದ್ದೆ.. "

"ಸೀದಾ ನಿಗಧಿಯಾಗಿದ್ದ ಸ್ಥಳಕ್ಕೆ ಬಂದೇ.. ಆಗಲೇ ರವೀಂದ್ರ..  ಅಲ್ಲಿಗೆ ಬಂದಿದ್ದ.. ಜೊತೆಯಲ್ಲಿ ಅವನ ಭಂಟನನ್ನು ಕರೆ ತಂದಿದ್ದ.. ಇದು ನನಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಹೀಗಾಗುತ್ತಿರಲಿಲ್ಲ.. ಊಟದ ಸಮಯದಲ್ಲಿ ಸಂಧಾನವಾಗಿ.. ಸಮಾಧಾನವಾಗಿ ಮಾತಾಡಿ.. ಎಲ್ಲದ್ದಕ್ಕೂ ಒಪ್ಪಿ.. ಹಾಗೆ ಮಾಡೋಣ.. ಎಂದು ಹೇಳಿ ಹೋದ ರವೀಂದ್ರ ಕೆಲವೇ ಹೊತ್ತಿನಲ್ಲಿ ಮತ್ತೆ ಬಂದದ್ದು ಅಚ್ಚರಿಯಾಗಿತ್ತು.. ಇರಲಿ ಎಂದು ರವೀಂದ್ರ ಹೇಳಪ್ಪ.. ನಮ್ಮಿಬ್ಬರ ಮಾತುಕತೆಯಲ್ಲಿ ಇನ್ನೊಬ್ಬರು ಬೇಕೇ.. ಏನು ಸಮಾಚಾರ.. ಬೇರೆ ಏನಾದರೂ ಮಾತಾಡೋದು ಇದೆಯಾ ಎಂದು ಕೇಳಿದೆ... ಸ್ವಲ್ಪ ಹೊತ್ತು ಮೌನವಾಗಿದ್ದ ರವೀಂದ್ರ.. ಒಂದು ಸಿಗರೇಟ್ ಹಚ್ಚಿ.. ಕರಿಯಣ್ಣ.. ನನಗೆ ತಕ್ಷಣಕ್ಕೆ ಹತ್ತು ಲಕ್ಷ ಬೇಕಿದೆ.. ಅದನ್ನು ಕೊಟ್ಟು ಬಿಡಿ.. ನೀವು ಹೇಳಿದ ಹಾಗೆ ಕೇಳುತ್ತೇನೆ ಮತ್ತೆ ಎಲ್ಲರನ್ನೂ ಒಪ್ಪಿಸುತ್ತೇನೆ.. ನಂತರ ಅಸ್ತಿ ಸರಿಯಾಗಿ ಭಾಗ ಮಾಡಿ.. ಎಲ್ಲರಿಗೂ ಹಂಚಿದ ಮೇಲೆ ಸಂತೋಷವಾಗಿ ಇರೋಣ.. ಏನಂತೀರಾ ಎಂದಿದ್ದು ನನಗೆ ಗರ ಬಡಿದಂತೆ ಆಗಿತ್ತು... ಈ ಅಸ್ತಿ ವಿಚಾರದಲ್ಲಿ ಸ್ವಲ್ಪ ತನಗೆ ಅಂದರೆ ತನ್ನ ಮನೆಯ ಕಡೆಯವರಿಗೆ ತುಸು ಹೆಚ್ಚೇ ಬರುವಂತೆ ಸ್ಕೀಮ್ ಹಾಕಿದ್ದೆ.. ಅದರ ವಾಸನೆ ಹಿಡಿದ ರವೀಂದ್ರ... ಮತ್ತೆ ಬೆನ್ನು ಬಿದ್ದಿದ್ದ... ಹತ್ತು ಲಕ್ಷ. ಯಪ್ಪಾ ಅದನ್ನು ಹೇಗೆ.. ಈ ಯೋಚನೆಯಲ್ಲಿದ್ದಾಗಲೇ ಹೊಳೆದದ್ದು ಅವನನ್ನು ಹೆದರಿಸಿ ಓಡಿಸೋದು. ಅದಕ್ಕೆ ರಿವಾಲ್ವರ್ ತಂದಿದ್ದೆ.. "

"ಮತ್ತೆ ಮಾತಾಡೋಕೆ ಏನಿದೆ ರವೀಂದ್ರ.. ನಿನಗೆ ತಿಳಿದಿದೆ.. ಈ ಆಸ್ತಿ ವಿಚಾರ ನಮ್ಮಿಬ್ಬರ ಮನೆತನವನ್ನು ದ್ವೇಷದ ಉರಿಗೆ ಸಿಕ್ಕಿಸಿದೆ.. ನಾ ಹೇಳಿರುವ ಉಪಾಯ ನ್ಯಾಯವಾಗಿದೆ ಇದೆ.. ಹೌದು ಸ್ವಲ್ಪ ನನ್ನ ಪರವಾಗಿದೆ ಆದರೆ.. ಈ ಭಾಗ ಆದ ಮೇಲೆ.. ಅದರ ಪಾಲು ನಿನಗೂ ಕೊಡುವೆ .. ಅದನ್ನ ಆಮೇಲೆ ಹೇಳುವೆ ಅಂದು ಕೊಂಡೆ.. ಆದರೆ ನೀ ಅರ್ಜೆಂಟ್ ಮಾಡಿದೆ.. ಇರಲಿ.. ಎರಡು ಲಕ್ಷ ನಿನಗೆ ಕೊಡುವೆ.. ಆದರೆ ಅಸ್ತಿ ಭಾಗವಾದ ಮೇಲೆ ಮಾತ್ರ .. ಕಾರಣ ನಾನು ಸರ್ಕಾರಿ ನೌಕರ.. ಅಸ್ತಿ ಬಂದ ವಿಚಾರ.. ಅದರ ಪರಭಾರೆ.. ಆದಾಯ.. ಎಲ್ಲವನ್ನೂ ನಾ ಸರಕಾರಕ್ಕೆ ತಿಳಿಸಬೇಕು.. ಅಲ್ಲಿಂದ ಉತ್ತರ ಬಂದ ಮೇಲೆ..
ಆ ಜಮೀನನ್ನು ಮಾರಿ.. ನಿನಗೂ ಅದರ ಭಾಗ ಕೊಡುತ್ತೇನೆ.. ಆದರೆ ಇದು ನಮ್ಮಿಬ್ಬರ ನಡುವೆ ಮಾತ್ರ ಇರಬೇಕು.. ಆಯ್ತಾ.. ಎಂದಿದ್ದಕ್ಕೆ..

ನೋಡಿ ಕರಿಯಣ್ಣ ಈ ಹರಿಕಥೆ ಎಲ್ಲಾ ಬೇಡ.. ಎಲ್ಲಾರೂಸಹಿ ಹಾಕಿದ ಮೇಲೆ.. ನೀವೆಲ್ಲಿ ನನ್ನ ಕೈಗೆ ಸಿಗ್ತೀರಾ.. ಎರಡು ದಿನ ಸಮಯ ಕೊಡ್ತೀನಿ ಹತ್ತು ಲಕ್ಷ ಕೊಡಿ ಇಲ್ಲ ಅಂದ್ರೆ ನಿಮ್ಮ ಪ್ಲಾನ್ ಎಲ್ಲರಿಗೂ ಹೇಳಿ.. ನಿಮಗೆ ಒಂದು ದಮ್ಮಡಿ ಸಿಗದ ಹಾಗೆ ಮಾಡ್ತೀನಿ.. ನಾವೇನು ಕಿವಿಯಲ್ಲಿ ಹೂ ಇಟ್ಟುಕೊಂಡಿಲ್ಲ.. ಸ್ವಲ್ಪ ಕಟುವಾಗಿತ್ತು ಅವನ ಮಾತು.. ನನಗೆ ಗತ್ಯಂತರವಿರಲಿಲ್ಲ.. ಬಾ ನಿನ್ನ ಜೊತೆ ಸ್ವಲ್ಪ ಹೊತ್ತು ಮಾತಾಡಬೇಕು.. ನಿನ್ನ ಭಂಟನನ್ನು ಸಿಗರೇಟ್ ತರೋಕೆ ಹೇಳು.. ಹಾಗೆ ಸ್ವಲ್ಪ ಹೊತ್ತು ಬಿಟ್ಟು ಬರೋಕೆ ಹೇಳು..

ನನ್ನ ನಂಬಿದ ರವೀಂದ್ರ ಅವನ ಭಂಟನಿಗೆ ಹಾಗೆ ಹೇಳಿದ.. ನಾವಿಬ್ಬರೂ ಹಾಗೆ ಡಾಬದಿಂದ ಹೊರಗೆ ಬಂದು.. ನೇಚರ್ ಕರೆ ಮುಗಿಸಿ.. ಹಾಗೆ ಸ್ವಲ್ಪ ದೂರ ಮಾತಾಡುತ್ತಾ ಹೋದೆವು.. ನಾ ಸುತ್ತಮುತ್ತಲು ನೋಡುತ್ತಿದ್ದೆ..ಯಾರೂ ಇಲ್ಲದ ಜಾಗ ಅನಿಸಿ.. ಅಲ್ಲಿಯೇ ನಿಲ್ಲಿಸಿ.. ನೋಡು ರವೀಂದ್ರ.. ನಾ ಮೊದಲೇ ಹೇಳಿದ ಹಾಗೆ ಅಸ್ತಿ ಭಾಗ ಆಗಲಿ.. ತಕ್ಷಣ ಕೊಡುವೆ.. ಹತ್ತು ಲಕ್ಷ ಆಗೋಲ್ಲ.. ನಾ ಎರಡು ಅಂದೇ.. ಇರಲಿ ನೀನು ನಮ್ಮವನೇ.. ಹಾಗಾಗಿ ಮೂರು ಲಕ್ಷ ಕೊಡುತ್ತೇನೆ.. ಒಪ್ಪಿಸಿಬಿಡು.. ಅಂತ ಕೋರಿಕೊಂಡೇ.. ಮತ್ತೆ ಅವನು ತಕರಾರು ಮಾಡಲು ಶುರು ಮಾಡಿದ.. ನಾ ನನ್ನ ಬುದ್ಧಿಯೆಲ್ಲಾ ಖರ್ಚು ಮಾಡಿದರೂ ಅವನು ಒಪ್ಪಿಕೊಳ್ಳುವ ಹಾದಿಗೆ ಬರಲಿಲ್ಲ.. ಕಡೆಗೆ ಇನ್ನೇನು ಮಾಡುವುದು ಎಂದು ರಿವಾಲ್ವರ್ ತೆಗೆದು.. ನೋಡು ರವೀಂದ್ರ.. ನಾ ಮೊದಲೇ ಪೋಲೀಸಿನವ... ಈಗಲೇ ನಿನ್ನ ಮಲಗಿಸಿದರೂ ಯಾವುದೋ ಒಂದು ಕಾರಣಕ್ಕೆ ನೀ ರೌಡಿ ಅಂತ ರಿಪೋರ್ಟ್ ಮಾಡಿ ನಿನ್ನ ಕತೆ ಮುಗಿಸುತ್ತೇನೆ.. ಸುಮ್ಮನೆ ಹಠ ಮಾಡಬೇಡ.. ಈ ವಿಚಾರ ಇಲ್ಲಿಗೆ ಮುಗಿಸೋಣ ಇದು ನನಗೂ ಒಳ್ಳೆಯದು ನಿನಗೂ ಒಳ್ಳೆಯದು.. ದಯಮಾಡಿ ಹಠ ಮಾಡಬೇಡ.. ಅಂದೆ"

ಇದಕ್ಕೆ ಒಪ್ಪದ ರವೀಂದ್ರ .. ಓಹೋ ಹೇಗೆಲ್ಲ ಇದೆಯಾ ನಿನ್ನ ಪ್ಲಾನ್.. ಅದೇನು ಮಾಡ್ತೀಯೋ ಮಾಡು.. ನಾನೇನೂ ಬಳೆ ತೊಟ್ಟಿಲ್ಲ.. ನಾನು ಒಂದು ಕೈ ನೋಡ್ತೀನಿ ಎಂದು.. ತನ್ನ ಜೇಬಿನಲ್ಲಿದ್ದ ಚೂರಿ ತೆಗೆದ.. ಇವನು ನನ್ನ ತರಹವೇ ಸಿದ್ಧವಾಗಿ ಬಂದದ್ದು.. ಸ್ವಲ್ಪ ಯೋಚನೆಗೆ ಈಡು ಮಾಡಿತು.. ತಕ್ಷಣ.. ಬೇರೆ ದಾರಿ ಕಾಣದೆ ಅವನ ಕಡೆ  ಗುರಿ ಮಾಡಿ ರಿವಾಲ್ವರ್ ಟ್ರಿಗರ್ ಒತ್ತಿಯೇ ಬಿಟ್ಟೆ.. . ಆ ಡಂ ಎಂಬ ಶಬ್ದಕ್ಕೂ ಅದೇ ಸಮಯಕ್ಕೆ ಹೆದ್ದಾರಿಯ ರಸ್ತೆಯಲ್ಲಿ ದೊಡ್ಡ ಲಾರಿಯ ಟೈರ್ ಸಿಡಿಯುವ ಸದ್ದಿಗೂ ಸರಿಯಾಗಿ... ಯಾರಿಗೂ ನಾ ಹಾರಿಸಿದ ಗುಂಡಿನ ಸದ್ದು ಕೇಳಿಸಲಿಲ್ಲ.. ರವೀಂದ್ರ  ಹಾಗೆ ಕುಸಿದು ಬಿದ್ದ.. ನನಗೆ ಏನು ನೆಡೆಯುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಅನಾಹುತ ನೆಡೆದೆ ಹೋಗಿತ್ತು.. ರವೀಂದ್ರ ಜಾರಿ ಕುಸಿದು ಬಿದ್ದ ಜಾಗದಲ್ಲಿ ಒಂದು ಹೊಂಡವಿತ್ತು.. .. ಒದ್ದೆಯಾಗಿದ್ದ ನೆಲ.. ಹೊಂಡದೊಳಗೆ ಜಾರಿದ .. ನನಗೆ ಏನು ಮಾಡಬೇಕೆಂದು ತೋಚದೆ..ಹೊಂಡಕ್ಕೆ ಇಳಿದರೆ ಹತ್ತಲು ಕಷ್ಟವಾಗುತ್ತದೆ.. ಮತ್ತೆ ನನ್ನ ಗುರುತುಗಳು ಸಿಕ್ಕಿ ಬಿಟ್ಟರೆ ಇಲ್ಲದ ಫಜೀತಿಗೆ ಸಿಕ್ಕಿಕೊಳ್ಳುತ್ತೇನೆ ಎಂದು ಹೆದರಿ.. ಅಲ್ಲಿಂದ ಸೀದಾ ಸ್ಟೇಷನಿಗೆ ಬಂದೆ..

ಚಿಕ್ಕಣ್ಣನಿಗೆ ರಿವಾಲ್ವರ್ ಕೊಟ್ಟು ಮತ್ತೆ ಇದ್ದ ಜಾಗದಲ್ಲಿಯೇ ಇಡಲು ಹೇಳಿ.. ಇನ್ನೊಂದು ಸಾವಿರ ರೂಪಾಯಿ ಅವನ ಕೈಗೆ ತುರುಕಿ.. ನೋಡಪ್ಪ ಗಾಬರಿಯಲ್ಲಿ ಒಂದು ಬುಲೆಟ್ ಎಲ್ಲೋ ಬಿದ್ದು ಹೋಗಿದೆ.. ಡಮ್ಮಿ ಬುಲೆಟ್ ಸಿಗುತ್ತೆ ಆಲ್ವಾ.. ಅದನ್ನು ತಂದು ಇಲ್ಲಿಗೆ ಸೇರಿಸಿ ಸರಿ ಮಾಡಿಬಿಡು.. ಅಂದೇ..

ಚಿಕ್ಕಣ್ಣ ಸರ್ ಡಮ್ಮಿ ಬುಲೆಟ್ ನಾ ಎಲ್ಲಿ ತರಲಿ ಸರ್ ಎಂದ..
ಒಂದೆರಡು ದಿನಗಳ ಹಿಂದೆ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಪಡೆದು.. ತಾವು ತೆಗೆಯಲಿರುವ ದೃಶ್ಯಗಳ ಬಗ್ಗೆ ಹೇಳಿದ್ದರು.. ಅದರಲ್ಲಿ ಡಮ್ಮಿ ಬುಲೆಟ್ ಉಪಯೋಗಿಸಿ ಫೈಟ್ ದೃಶ್ಯಗಳನ್ನು ಚಿತ್ರೀಕರಿಸುವ ಬಗ್ಗೆ ಹೇಳಿದ್ದರು.. ಹಾಗಾಗಿ ಅಲ್ಲಿಗೆ ಹೋಗಿ ನನ್ನ ಹೆಸರು ಹೇಳಿ.. ಒಂದೇ ಒಂದು ಬುಲೆಟ್ ತಂದು ಇದರೊಳಗೆ ಹಾಕಿ ಸರಿ ಮಾಡಿಬಿಡು.. ಪ್ಲೀಸ್.. " ಎಂದು ಕೋರಿಕೊಂಡೆ.. ಜೊತೆಯಲ್ಲಿ ಮತ್ತಷ್ಟು ಹಣ ಕೊಡುವ ಆಮೀಷ ತೋರಿಸಿದೆ ..

ದುಡ್ಡಿನಾಸೆಗೋ.. ಅಥವಾ ಸ್ಟೇಷನಿನಲ್ಲಿ ನನ್ನ ಮಾತು ಕೊಂಚ ನೆಡೆಯುತ್ತಿತ್ತು ಅನ್ನುವ ಕಾರಣಕ್ಕೋ.. ಮತ್ತು ಸಾಹೇಬರಿಗೆ ಕೊಂಚ ಹತ್ತಿರ ಇದ್ದದರಿಂದ.. ಚಿಕ್ಕಣ್ಣ ನನ್ನ ಮಾತಿಗೆ ಒಪ್ಪಿಕೊಂಡ.. ಇಷ್ಟೇ ಸರ್.. ನೆಡೆದದ್ದು.."

ಇಂತಿ ನಿಮ್ಮ ಕಾನ್ಸ್ಟೇಬಲ್
ಕರಿಯಣ್ಣ - ೧೮೪

ದೀರ್ಘ ಪತ್ರ ಓದಿದ ಸಾಹೇಬ್ರು.. ಕೊಂಚ ನಿರಾಳವಾಗಿ.. "ಪರಮೇಶಿ ಚಿಕ್ಕಣ್ಣ ಅವರನ್ನು ಒಳಗೆ ಕರೆ ತನ್ನಿ.. ಹಾಗೆ ಕರಿಯಣ್ಣ ಅವರಿಗೆ ಕುಡಿಯಲು ನೀರು ಕೊಡಿ.. ಮತ್ತೆ ಕರಿಯಣ್ಣ ಮತ್ತು ಚಿಕ್ಕಣ್ಣ ಅವರನ್ನು ನನ್ನ ಆಫೀಸಿಗೆ ಕರೆ ತನ್ನಿ... ಜೊತೆಯಲ್ಲಿ ನೀವು ಬನ್ನಿ"

ಮೂವರಿಗೂ ಅಚ್ಚರಿ.. ಆದರೂ ತೋರ್ಪಡಿಸಿಕೊಳ್ಳದೆ..ಸುಮ್ಮನಾದರು..

ಮೂವರು ಸಾಹೇಬರ ಕೋಣೆಗೆ ಹೋದರು..

ಕರಿಯಣ್ಣನವರೇ.. ಮೊದಲು ನೀವು ಮಾಡಿದ್ದು ತಪ್ಪು ಠಾಣೆಯ ಶಸ್ತ್ರಗಳನ್ನು ಹಾಗೆ ಹೊರಗೆ ತೆಗೆದುಕೊಂಡು ಹೋಗಬಾರದು.. ಅದಕ್ಕೆ ನಿಮ್ಮನ್ನು ಒಂದು ವಾರ ಅಮಾನತ್ತಿನಲ್ಲಿಟ್ಟಿರುತ್ತೇನೆ.. ಮತ್ತೆ ಸಹೋದ್ಯೋಗಿಗೆ ಲಂಚ ಕೊಟ್ಟು ಅಪರಾಧ ಮಾಡಲು ಪ್ರಯತ್ನ ಪಟ್ಟಿರೋದು ಅದಕ್ಕೆ ನಿಮಗೆ ಜುಲ್ಮಾನೆಯೂ ಇದೆ ಜೊತೆಯಲ್ಲಿ ಒಂದು ತಿಂಗಳ ನಿಮ್ಮ ವೇತನಕ್ಕೆ  ನಿರ್ಬಂಧ ಹಾಕಿರುತ್ತೇನೆ.. ಚಿಕ್ಕಣ್ಣ ನಿಮಗೂ ಇದೆ ಶಿಕ್ಷೆ.... ಬೆಳಿಗ್ಗೆ ನಮ್ಮ ಟೈಪಿಸ್ಟ್ ಈ ಪತ್ರಗಳನ್ನು ಸಿದ್ಧ ಮಾಡಿರುತ್ತಾರೆ.. ಬೆಳಿಗ್ಗೆ ಬಂದು ಸಹಿ ಹಾಕಿ ಹೋಗಿ ಮತ್ತೆ ನನಗೆ ಹೇಳದೆ ಊರು ಬಿಟ್ಟು ಹೋಗೋದು.. ಅಸ್ತಿ ಮಾಡಿಕೊಳ್ಳುವುದು.. ಮಾಡಬಾರದು.. ಎಲ್ಲವನ್ನು ನನ್ನ ಗಮನಕ್ಕೆ ಮತ್ತು ಸರಕಾರದ ಅಂದರೆ ನಮ್ಮ ಇಲಾಖೆಯ ಗಮನಕ್ಕೆ ತರಲೆ ಬೇಕು..  ಮತ್ತೆ ಈ ರೀತಿಯ ತಪ್ಪು ಮಾಡಬೇಡಿ....ಹೋಗಿ ಬೆಳಿಗ್ಗೆ ಬನ್ನಿ.. ಅಮಾನತ್ತಿನಲ್ಲಿರುವಾಗ ಧರ್ಮಸ್ಥಳ, ಸುಬ್ರಮಣ್ಯ, ಹೊರನಾಡು, ಶೃಂಗೇರಿ ಕಡೆಗೆ ಹೋಗಿ..ಮನಸ್ಸನ್ನು ಹಗುರಮಾಡಿಕೊಳ್ಳಿ.. ನಾ ಮನೆಗೆ ಹೋಹೊರಡುತ್ತಿದ್ದೇನೆ ಬೆಳಿಗ್ಗೆ ಬನ್ನಿ . " ಎನ್ನುತ್ತಾ ಎದ್ದು ನಿಂತರು..

ಮೂವರಿಗೂ ಅಚ್ಚರಿ.. ಸಾಹೇಬರು ಏನೂ ಮಾತಾಡುತ್ತಿದ್ದಾರೆ.. ಯಾಕೆ ಏನಾಗುತ್ತಿದೆ ಒಂದು ಅರ್ಥವಾಗುತ್ತಿಲ್ಲ.. ಪರಮೇಶಿಯೇ ಸ್ವಲ್ಪ ಧೈರ್ಯ ಮಾಡಿ..

"ಸರ್ ನಿಮ್ಮ ಮಾತುಗಳು ಅರ್ಥವಾದರೂ ಏನೋ ಗೊಂದಲ ಕಾಡುತ್ತಿದೆ.. ನನ್ನನ್ನು ಶೂಟಿಂಗ್ ಜಾಗಕ್ಕೆ ಕಳಿಸಿದ್ದು..ನಂತರ ಹಾರಿದ ಬುಲೆಟ್ ಹುಡುಕಿಸಿದ್ದು..ಚಿಕ್ಕಣ್ಣನ ಮಾವನ ಮನೆಗೆ ನನ್ನ ಕಳಿಸಿದ್ದು.. ಆ ಹೆಣ.. ಕರಿಯಪ್ಪ ಮಾಡಿದ ತಪ್ಪು.. ಎಲ್ಲವೂ ಬಿಡಿ ಬಿಡಿಯಾದ ಚುಕ್ಕಿಗಳಾಗಿವೆ.. ದಯಮಾಡಿ ಅದನ್ನು ಸೇರಿಸಿ ಒಂದು ಸ್ಪಷ್ಟ ಚಿತ್ರಣ ಕೊಡಿ ಸರ್.. "

ಕರಿಯಣ್ಣ ಮತ್ತು ಚಿಕ್ಕಣ್ಣ ಕೂಡ ನಮ್ಮ ಮಾತು ಅದೇ ಎಂದು ತಲೆಯಾಡಿಸಿದರು..

ಹೊರಟು ನಿಂತ ರವಿಚಂದ್ರ ಮತ್ತೆ ತಮ್ಮ ಕುರ್ಚಿಯಲ್ಲಿ ಕೂತು "ಕರಿಯಣ್ಣ ನವರೇ.. ಮೊದಲು ನಿಮ್ಮನ್ನು ಕರಿಯಣ್ಣನವರೇ ಎಂದು ಕರೆಯುವ ಹಿಂದೆ ನಿಮ್ಮ ನಿಸ್ವಾರ್ಥ ಸೇವೆ.. ಮತ್ತು ನಿಮ್ಮ ಮೇಲಿನ ಗೌರವ ಅಡಗಿದೆ.. ಜೀವನದಲ್ಲಿ ತಪ್ಪು ಮಾಡುತ್ತಾರೆ ನೀವು ಹಾಗೆ ಅಸ್ತಿಯ ಮೇಲಿನ ಅಸೆ ನಿಮ್ಮನ್ನು ಹೀಗೆ ಮಾಡಿಸಿತು.. ಆದರೆ ನಿಮಗೆ ತಿಳಿದಿರಲಿ.. ನೀವು ರವೀಂದ್ರನ ಕೊಲೆ ಮಾಡಿಲ್ಲ.. ಅವನಿಗೆ ಹೃದಯಾಘಾತವಾಗಿ ಸತ್ತದ್ದು. ಜೊತೆಯಲ್ಲಿ ನೀವು ಮೊದಲು ಮಾತಾಡಿ ಹೋದ ಮೇಲೆ.. ಅವನು ಸ್ವಲ್ಪ ಗುಂಡು ಹಾಕಿದ್ದ.. ಆ ನಶೆಯಲ್ಲಿ ಅವನ ಭಂಟರು ಅವನಿಗೆ ಬೇಡ ಐಡಿಯಾ ಕೊಟ್ಟು ಮತ್ತೆ ನಿಮಗೆ ಕರೆ ಮಾಡಿ ಹತ್ತು ಲಕ್ಷದ ಬೇಡಿಕೆ ಇಟ್ಟದ್ದು... ಅವನ ಭಂಟರು ಹತ್ತು ಲಕ್ಷ ಸಿಗುವ ಬಗೆ ದಾರಿ ಹೇಳಿಕೊಟ್ಟು .ಜೊತೆಯಲ್ಲಿ ನಾವು ಇರ್ತೀವಿ ಅಂತ ಹುಂಬ ಧೈರ್ಯ ಕೊಟ್ಟು ಅದರಲ್ಲಿ ಒಬ್ಬ ಮಾತ್ರ ಅವನ ಜೊತೆ ನಿಮ್ಮನ್ನು ಕಾಣಲು ಮತ್ತೆ ಬಂದದ್ದು.. .ಆ ಬಂಟರ ಪ್ಲಾನ್ ಬೇರೆಯಾಗಿತ್ತು.. ಕುಡಿದಿದ್ದರಲ್ಲಿ ಸ್ವಲ್ಪ ಮತ್ತು ಬರುವ ವಿಷವನ್ನು ಸೇರಿಸಿ.. ಅವನಿಗೆ ತಲೆ ಸುತ್ತು ಬರುವ ಹಾಗೆ ಮಾಡಿ.. ನಿಮ್ಮಿಬ್ಬರ ಚಕಮಕಿಯಲ್ಲಿ ಅವನ ಪ್ರಾಣ ಹೋದರೆ.. ಅದನ್ನೇ ದೊಡ್ಡ ವಿಷಯ ಮಾಡಿ ನಿಮ್ಮಿಂದ ಸುಳಿಯಬೇಕು ಎನ್ನುವ ಯೋಚನೆ ಅವರದಾಗಿತ್ತು.. ಆದರೆ ಅಲ್ಲಿ ನೆಡೆದದ್ದು ಬೇರೆ.. ತನ್ನ ಮಿತಿ ತಿಳಿದಿದ್ದ ರವೀಂದ್ರ.. ಅವರು ಬೆರೆಸಿ ಕೊಟ್ಟಿದ್ದ ಕಡೆ ಗ್ಲಾಸ್ ಕುಡಿಯದೆ ಸುಮ್ಮನೆ ಕುಡಿದ ಹಾಗೆ ನಟಿಸಿದ್ದ.. ನೀವು ರಿವಾಲ್ವರ್ ತೆಗೆದಾಗ ಅವನ ಹೃದಯ ಕಂಪಿಸಿತ್ತು.. ತಣ್ಣನೆ ಗಾಳಿ, ಬೆವೆತ ದೇಹ.. ಹೆದರಿದ್ದ ಎದೆ.. ಕುಡಿದಿದ್ದ ಮದ್ಯ.. ಬೇಡ ಯೋಚನೆಗಳು.. ಅದರ ಜೊತೆಯಲ್ಲಿಯೇ ಟೈರ್ ಸಿಡಿದ ಸದ್ದು.. ನಿಮ್ಮ ರಿವಾಲ್ವರಿನಿಂದ ಹಾರಿದ ಗುಂಡು ಅವರ ಕಿವಿಯ ಪಕ್ಕದಲ್ಲಿ ಹಾದು ಹೋಗಿದ್ದು.. ಆ ಸದ್ದು ಅವರಿಗೆ ಹೃದಯಾಘಾತ ಮಾಡಿತು..

ಅಲ್ಲಿದ್ದ ಡಾಬಾದಲ್ಲಿದ್ದ ಪುಟ್ಟ ಹುಡುಗ.. ನೀವು ಬುಲೆಟ್ ಹಾರಿಸಿದಾಗ ಅಲ್ಲಿಯೇ ಮೂತ್ರ ವಿಸರ್ಜನೆ ಮಾಡಲು ಬಂದಿದ್ದ ಪಾತ್ರೆ ತೊಳೆಯುವ ಹುಡುಗ ನೋಡಿದ್ದ.. ಆದರೆ ಯಾರಿಗೂ ಹೇಳೋದಕ್ಕೆ ಹೆದರಿದ್ದ.. ನಾನು ನಿಧಾನವಾಗಿ ವಿಚಾರಿಸಿದಾಗ ತಿಳಿದು ಬಂತು..

ಪರಮೇಶಿಗೆ ನಾ ಹೇಳಿದ್ದು ಆ ಬುಲೆಟ್ ಹುಡುಕಿಸಿ ತೆಗೆದುಕೊಂಡು ಬಾ.. ಮತ್ತೆ ಇದು ಕರಿಯಣ್ಣನವರ ಹತ್ತಿರ ರಿವಾಲ್ವರ್ ಇಲ್ಲ ಎಂದು ಗೊತ್ತಿದ್ದ ನನಗೆ.. ಇದು ಚಿಕ್ಕಣ್ಣನ ಕೈವಾಡ ಎಂದು ಅರಿವಾಯಿತು.. ಚಿಕ್ಕಣ್ಣ ರಾತ್ರಿಯಿಂದ ಕಂಡಿಲ್ಲ ಎನ್ನುವುದು ನನಗೆ ಅರಿವಾಗಿತ್ತು.. ಅದಕ್ಕೆ ಪರಮೇಶಿಗೆ ಮೊದಲು ಬುಲೆಟ್ ಹುಡುಕಿಸಿ.. ನಂತರ ಚಿಕ್ಕಣ್ಣನನ್ನು ಹುಡುಕಿ ಕರೆ ತರುವಂತೆ ಹೇಳಿದೆ.. ಬೆಳಿಗ್ಗೆ ನಾ ಕರಿಯಣ್ಣನವರಿಗೆ ಕರೆ ಮಾಡಿ.. ಬಂದೂಕು, ಬುಲೆಟ್, ರಿವಾಲ್ವರ್ ಇವುಗಳ ಲೆಕ್ಕ ಸರಿಯಾಗಿ ಇಡಬೇಕೆಂದು ಚಿಕ್ಕಣ್ಣನಿಗೆ ಹೇಳಿ ಎಂದು ಹೇಳಿದಾಗ ನಿಮಗೆ ಅರಿವಾಗಿತ್ತು.. ಅದಕ್ಕೆ ನಾ ಕೇಳಿದ ಮೇಲೆ.. ನೀವು ಈ ತಪ್ಪೊಪ್ಪಿಗೆ ಬರೆದುಕೊಟ್ಟಿದ್ದು.. ಈಗ ಗೊತ್ತಾಯಿತೇ.. ನೀವು ಕೊಲೆ ಮಾಡಿಲ್ಲ.. ಆದರೆ ಸಂದರ್ಭ ನಿಮ್ಮನ್ನು ತಪ್ಪಿತಸ್ಥ ಎನ್ನುವ ಹಾಗೆ ಮಾಡಿದೆ.. ಪೋಸ್ಟ್ ಮಾರ್ಟಮ್ ರಿಪೋರ್ಟ್ ಕೂಡ ಹೃದಯಾಘಾತ ಎಂದು ಹೇಳಿದೆ.. ಹಾಗಾಗಿ ನಿಮ್ಮ ಮೇಲೆ ಕೊಲೆ ಆಪಾದನೆ ಬರೋಲ್ಲ..

ಚಿತ್ರ ಕೃಪೆ : ಗೂಗಲೇಶ್ವರ 

ಅವನಿಗೆ ಎರಡು ಬಾರಿ ಹೃದಯದ ಶಸ್ತ್ರ ಚಿಕಿತ್ಸೆ ಆಗಿದೆ ಎಂಬ ರಿಪೋರ್ಟ್ ಸಿಕ್ಕಿತು.. ಹಾಗಾಗಿ ನಿಮ್ಮ ಮೇಲೆ ಯಾವ ಆಪಾದನೆ ಬರೋಲ್ಲ.. ನಿರಾಳವಾಗಿರಿ..  ಆದರೆ ಅಸ್ತಿ ವಿಷಯ ಸದ್ಯಕ್ಕೆ ಕೈ ಹಾಕೋಕೆ ಹೋಗಬೇಡಿ.. ಆಮೇಲೆ ನಿಮ್ಮ ಕೊರಳ ಸುತ್ತಲೇ ಸುತ್ತುತ್ತದೆ.. ಒಂದಷ್ಟು ಆಸ್ತಿ ಹೋದರೆ ಹೋಗಲಿ ಬಿಡಿ.. ನಿಮ್ಮ ಜೀವನ ನಿಮಗೆ ಮುಖ್ಯ.. ಆಸ್ತಿಯಿದೆ..  ಸರ್ಕಾರಿ ನೌಕರಿ ಇದೆ.. ನೆಮ್ಮದಿಯಾಗಿರಿ.. ಬಂದರೆ ಅಸ್ತಿ ಬರಲಿ.. ಇಲ್ಲದೆ ಹೋದರೆ ನೀವೇ ಬರೆದುಕೊಟ್ಟು ಬಿಡಿ.. ನೀವು ದೊಡ್ಡವರಾಗುತ್ತೀರಿ.. !!! ಸರಿ ಬರ್ಲಾ..

ನಾ ಹೇಳಿದ್ದು ನೆನಪಿರಲಿ... !!!

ಚಿಕ್ಕಣ್ಣ ಸ್ಟೇಷನಲ್ಲಿದ್ದ ದೇವರ ಫೋಟೋಗೆ ಕೈ ಮುಗಿದರೆ.. ಪರಮೇಶಿ ಸಾಹೇಬರ ಬುದ್ಧಿಮತ್ತೆಗೆ ಒಂದು ಸಲ್ಯೂಟ್ ಹೊಡೆದ.. ಆದರೆ ಕರಿಯಣ್ಣ ಕಾಣುವ ದೇವರಿಗೆ ಕೈಮುಗಿಯಲೇ.. ಇಲ್ಲ ನನ್ನ ಕಣ್ಣೆದೆರು ಇಷ್ಟು ಹೊತ್ತು ಮಾತಾಡಿದ ದೇವರಿಗೆ ನಮಸ್ಕರಿಸಲೇ ಎನ್ನುವ ಗೊಂದಲದಲ್ಲಿ ಕೈಮುಗಿದು ನಿಂತೇ ಇದ್ದ.. !!!