ಇದೊಂತರ ಇಬ್ಬದಿಯಾಗಿತ್ತು.. ಇದು ಪ್ರವಾಸವೋ, ಅನುಭವವೋ.. ಗೆಳೆಯರ ಜೊತೆಯಲ್ಲಿನ ತಿರುಗಾಟವೋ.. ಯಾವ ಬ್ಲಾಗಿನಲ್ಲಿ ತುಂಬಬೇಕು ಎನ್ನುವ ಗೊಂದಲ.. ಕಡೆಗೆ ಇದು ನನ್ನ ಪ್ರಪಂಚದಲ್ಲಿ ನೆಡೆದದ್ದಿರಿಂದ ಶ್ರೀ ಪ್ರಪಂಚದಲ್ಲಿಯೇ ಬರೋದು ಸರಿ ಅನ್ನಿಸಿ ಇಲ್ಲಿಗೆ ಹೆಜ್ಜೆ ಇಟ್ಟೆ..
ಈ ಕಲಿಯುಗದಲ್ಲಿ ಕಣ್ಣಿಗೆ ಕಾಣುವ ವಿಸ್ಮಯಗಳು ಒಂದಾದರೆ. .. ಕಣ್ಣಿಗೆ ಕಾಣದ ವಿಸ್ಮಯಗಳು ಅನೇಕ.. ವಾಟ್ಸಾಪಿನಲ್ಲಿ ೪೦ ವರ್ಷದ ನಂತರ ವಿಗ್ರಹದ ದರ್ಶನ ಅಂತ ವಿಡಿಯೋ ಬಂದಾಗ ಅಯ್ಯೋ ಈ ರೀತಿಯ ಅನೇಕ ಟಿ ಆರ್ ಪಿ ವಿಡಿಯೋಗಳು ಅಂತ ನೋಡದೆ ಬಿಟ್ಟಿದ್ದೆ.. ಆದರೆ ಈ ವಿಗ್ರಹದ ಬಗ್ಗೆ ಮಾತುಗಳು ಹೆಚ್ಚಾಯಿತು.. ಜೊತೆಯಲ್ಲಿ ಗುಪ್ತಗಾಮಿನಿಯ ಹಾಗೆ ದೇವರಲ್ಲಿ ನಂಬಿಕೆ ಇಟ್ಟಿರುವ ನನ್ನ ಆತ್ಮೀಯ ಗೆಳೆಯನ ಸಂದೇಶ "BOD's can we make a visit to Kanchipuram this weekend for Athi Varadar darshan.. I am planning alone.. General Darshan, no ticket" ಈ ಸಂದೇಶ ನೋಡಿದ ತಕ್ಷಣ ನಾನೇ ಮೊದಲು ಉತ್ತರಿಸಿದೆ.. ಬರ್ತೀನಿ ಅಂತ.. ಅಲ್ಲಿಂದ ಶುರುವಾಯಿತು ನಮ್ಮ ಪಯಣ.. ಎರಡೇ ದಿನ ಇದ್ದದ್ದು ಸಿದ್ಧವಾಗೋಕೆ..
ನನ್ನ ಕಾರು ಪುಣ್ಯ ಮಾಡಿತ್ತು.. ಸರಿ ಬೆಳಗಿನ ಜಾವ ಮೂರು ಮೂವತ್ತಕ್ಕೆ ವೆಂಕಿ ಮನೆಯ ಮುಂದೆ ನಿಂತಾಗ.. ದೇವರ ದರ್ಶನಕ್ಕೆ ಮುಂಚೆಯೇ ನನಗೆ ಸಹಸ್ರನಾಮ ಮತ್ತು ಮಂಗಳಾರತಿ ಆಗಿತ್ತು ಅವನಿಂದ.. ಸೌಮ್ಯ ಮತ್ತು ವೆಂಕಿ ಜೊತೆಯಾದರು.. ಅಲ್ಲಿಂದ ಹೊರಟಿತ್ತು ನಮ್ಮ ಸವಾರಿ ಶಶಿ ಮತ್ತು ಪ್ರತಿಭಾ ಜೋಡಿಯನ್ನು ಕರೆದುಕೊಂಡು ಹೊಸೂರಿನತ್ತ.. ..
ಕೃಷ್ಣಗಿರಿ ಆಸುಪಾಸಿನಲ್ಲಿ ಹೋಟೆಲಿನಲ್ಲಿ ಹೊಟ್ಟೆ ತುಂಬಾ ತಿಂದೆವು ..ತಿಂಡಿ ಸೊಗಸಾಗಿತ್ತು.. ದಾರಿಯುದ್ದಕ್ಕೂ ನಮ್ಮ ತರಲೆ ಮಾತುಗಳು..
 |
ಜೀವದ ಗೆಳೆಯರು |
 |
ಈ ಗೆಳೆತನಕ್ಕೆ ಜೀವ ತುಂಬಿದ ನನ್ನ ಪುಟ್ಟಿಯರು |
ನಲವತ್ತು ವರ್ಷಗಳ ನಂತರ ಅತ್ತಿ ವರದರಾಜ ದೇವರ ದರ್ಶನಕ್ಕೆ ಮೂವತ್ತೈದು ವರ್ಷಗಳ ಗೆಳೆಯರ ಜೊತೆಯಲ್ಲಿ ನಾ ಹೊರಟಿದ್ದೆ.. ರೇಗಿಸಿ ರೇಗಿಸಿ.. ಬಯ್ಸಿಕೊಂಡು, ಪ್ರೀತಿಯಿಂದ ಹೊಡೆಸಿಕೊಂಡು ನಮ್ಮ ಪಯಣ ಸಾಗಿತ್ತು.. ನಮ್ಮ ಗುಂಪೇ ಹಂಗೆ.. ಯಾವುದಕ್ಕೂ ಜಗ್ಗುವುದಿಲ್ಲ.. ತರಲೆ ಮಾತುಗಳಿಲ್ಲದೆ ಪಯಣ ಸಾಗೊಲ್ಲ..
 |
ಸೂಪರ್ ಹಾದಿ |
ಕಾಂಚಿಪುರಂ ನಗರಕ್ಕೆ ನಮ್ಮ ಕಾರು ಪ್ರವೇಶಿಸಿತು.. ಇನ್ನೂ ಸುಮಾರು ಹತ್ತು ಕಿಮೀಗಳಿದ್ದವು.. ಆಗಲೇ ಅಡ್ಡಪಟ್ಟಿಗಳು, ಫಲಕಗಳು ವಾಹನ ನಿಲುಗಡೆಗೆ ದಾರಿ ಅಂತ ತೋರಿಸುತ್ತಿತ್ತು.. ಪೊಲೀಸರನ್ನು ಬಯ್ದುಕೊಂಡರು.. ಅಲ್ಲಿಯೇ ವಾಹನ ನಿಲುಗಡೆಗೆ ನಿಗದಿಯಾಗಿದ್ದ ಜಾಗದಲ್ಲಿ ನಿಲ್ಲಿಸಿ.. ಅಲ್ಲಿಂದ ಬಸ್ ಹತ್ತಿದೆವು.. ಆ ಬಸ್ಸು ಒಂದು ಕಡೆ ನಿಂತು.. ಅಲ್ಲಿಂದ ಇನ್ನೊಂದು ಪುಟಾಣಿ ಬಸ್ಸಿನಲ್ಲಿ ಹೋಗಬೇಕೆಂದು ಮಾಹಿತಿ ಸಿಕ್ಕಿತು..
 |
ಫಲಕಗಳು ದಾರಿ ತೋರಿಸುವ ಸಹಾಯ ಮಾಡಿದವು |
ಸರಿ.. ಆ ಪುಟಾಣಿ ಬಸ್ಸಿನಲ್ಲಿ ಹೊರಟು ದೇವಸ್ಥಾನದ ಬಳಿ ಬಂದಾಗ.. ದೇವಾಲಯಕ್ಕೆ ದಾರಿ ಅನ್ನುವ ಫಲಕ ನೋಡುತ್ತಲೇ ಸಾಗಿದೆವು... ಎಡ ಬಲ ಭಾಗದಲ್ಲಿ ಸೀರೆಯ ಜಾಹಿರಾತುಗಳು.. ಬಣ್ಣ ಬಣ್ಣದ ಸೀರೆಗಳು.. ಸುತ್ತ ಮುತ್ತಲು ಜನಸಾಗರ.. ಕಾಲಿಗೆ ಕಾಲಿಗೆ ಸಿಕ್ಕುವಷ್ಟು ಜನ ದಟ್ಟಣೆ ..ಲಘುಬಗೆಯಿಂದ ಹೆಜ್ಜೆ ಹಾಕಿದೆವು.. ಬಿಸಿಲು ನಿಧಾನವಾಗಿ ಏರುತ್ತಿತ್ತು.. ಮೈಬೆವರು ಬೆಳಗಿನ ತಿಂಡಿ ಸಾಕಾಗಿಲ್ಲ ಅಂತ ಹೇಳುತ್ತಿತ್ತು.. ನೀರಿನ ಬಾಟಲ್ ಖಾಲಿಯಾಗುತ್ತಿತ್ತು.. ಮನದಲ್ಲಿ ನಾರಾಯಣನ ಧ್ಯಾನ ಜೊತೆಯಲ್ಲಿ ನಮ್ಮ ತರಲೆ ಮಾತುಗಳು ಸಾಗುತಿದ್ದವು..
 |
ಆಲಯ ...ದೇವಾಲಯ |
ಅಲ್ಲಿನ ಸಿದ್ಧತೆಗಳನ್ನು ನೋಡಿ ಒಂದು ಕ್ಷಣ ಅಚ್ಚರಿಗೊಂಡೆವು.. ಜನದಟ್ಟಣೆ ಹೆಚ್ಚಾಗಿತ್ತು.. ಶ್ರಾವಣ ಮಾಸದ ಮೊದಲ ಶನಿವಾರ.. ಜೊತೆಯಲ್ಲಿ ವಿಷ್ಣು ದೇವರು.. ಇದಕ್ಕಿಂತ ಇನ್ನೇನು ಸುಯೋಗ ಬೇಕು.. ಜನಸಾಗರವೇ ಇತ್ತು.. ಸುತ್ತ ಮುತ್ತಲ ಸಿದ್ಧತೆ ಚೆನ್ನಾಗಿತ್ತು.. ದೇವಸ್ಥಾನದ ಹತ್ತಿರದ ದಾರಿಯಲ್ಲಿ ಮೇಲ್ಛಾವಣಿ ಇತ್ತು.. ನೀರಿನ ಸೌಕರ್ಯ, ಅರೋಗ್ಯ ತಪಾಸಣೆ ಕೇಂದ್ರ.. ನಿಶ್ಯಕ್ತಿ ಆದವರಿಗೆ ಜೀವ ಜಲ..ಶೌಚಾಲಯ.. ದೊಡ್ಡ ಪರದೆಯಲ್ಲಿ ದೇವರ ದರ್ಶನ.. ಎಲ್ಲವೂ ಇತ್ತು.. ಊಟದ ಸೌಕರ್ಯ ಒಂದು ಇರಲಿಲ್ಲ.. ಆ ಜನಸಾಗರಕ್ಕೆ ಊಟದ ವ್ಯವಸ್ಥೆ ಕಷ್ಟಸಾಧ್ಯವೇ ಸರಿ.. ಆದರೆ ದೇವಸ್ಥಾನದ ಹತ್ತಿರ ಬಂದಾಗ ಅನೇಕ ಅಡಿಕೆ ತಟ್ಟೆಗಳಲ್ಲಿ ಆಹಾರ ಚೆಲ್ಲಿದ್ದು.. ಮುತ್ತುಗದ ಎಲೆಯ ಬಟ್ಟಲಿನಲ್ಲಿ ಪ್ರಸಾದ ಚೆಲ್ಲಿದ್ದು ಗಮನಕ್ಕೆ ಬಂತು.. ಬಹುಶಃ ಹಿಂದಿನ ದಿನಗಳಲ್ಲಿ ಕೊಟ್ಟಿರಬಹುದು.. ಶನಿವಾರ ಜನಸಂದಣಿ ಹೆಚ್ಚಿರುವ ಕಾರಣ ಇಂದು ಕೊಟ್ಟಿಲ್ಲ ಅನಿಸುತ್ತೆ ಎಂದುಕೊಂಡು ಮುನ್ನೆಡೆದೆವು..
 |
ಸರತಿಯಲ್ಲಿ ನಿಂತಾಗ |
ದೇಗುಲದ ಪ್ರಾಂಗಣಕ್ಕೆ ಪ್ರವೇಶ ಮಾಡಿದಾಗ ಮನಸ್ಸು ನಾರಾಯಣನ ಧ್ಯಾನದಲ್ಲಿ ಮುಳುಗಿತ್ತು.. ಗೋವಿಂದ ಗೋವಿಂದ ನಾಮ ಜೋರಾಗಿ ಕೇಳಿಬರುತ್ತಿತ್ತು.. ಜನರು, ಭಕ್ತರು ಭಾವೋದ್ವೇಗಕ್ಕೆ ಒಳಗಾಗಿದ್ದರು... ಮನದೊಳಗೆ ಫುಳಕ.. ಸಾಮಾನ್ಯ ಮನುಜನ ಜೀವಿತಾವಧಿಯಲ್ಲಿ ಒಮ್ಮೆ ನೋಡಬಹುದಾದ ಸಂಭ್ರಮವಿದು..
 |
ಭಕ್ತಾದಿಗಳು |
ಬೆಳಿಗ್ಗೆ ಸುಮಾರು ಹತ್ತು ಘಂಟೆಗೆ ನಿಂತದ್ದಕ್ಕೆ ದರ್ಶನ ಸಿಕ್ಕಿದ್ದು ಸಂಜೆ ನಾಲ್ಕು ಘಂಟೆಗೆ.. ಮನಸ್ಸು ಹಗುರಾಗಿತ್ತು.. ಆ ಮಹಾಮಹಿಮ ದರ್ಶನ ಕೆಲವೇ ಕ್ಷಣಗಳು ಸಿಕ್ಕಿದ್ದು ಆದರೂ ಕಣ್ಣು ತುಂಬಿಕೊಂಡಿತ್ತು.. ಜೀವ ಸಾರ್ಥಕ ಅನಿಸಿತ್ತು..
 |
ದೊಡ್ಡ ದೊಡ್ಡ ಗೋಪುರ |
 |
ಮೊದಲ ದೃಶ್ಯ - ಪರದೆಯಲ್ಲಿ |
 |
ಆರಕ್ಷಕ ಸಿಬ್ಬಂಧಿಗೆ ಒಂದು ಸಲಾಂ |
 |
ಕ್ಲೈಮಾಕ್ಸ್ .. |
 |
ಈ ಮಂಟಪದಲ್ಲಿಯೇ ವಿಗ್ರಹ ಇಟ್ಟಿದ್ದು |
 |
ಕೃಪೆ - ಗೂಗಲೇಶ್ವರ |
 |
ಕೃಪೆ ಗೂಗಲೇಶ್ವರ |
ದೇವಸ್ಥಾನದಿಂದ ಹೊರಗೆ ಬಂದಾಗ ಕಣ್ಣುಗಳು ಅರಸಿದ್ದು ಈ ದೇವಾಲಯದ ಅಥವ ಈ ಮೂರ್ತಿಯ ಬಗ್ಗೆ ಮಾಹಿತಿಯ ಪುಸ್ತಕ.. ಆದರೆ ಕಣ್ಣಿಗೆ ದೇವರ ಬಗೆ ಬಗೆಯ ಚಿತ್ರಗಳು, ಫೋಟೋಗಳು ಕಾಣುತ್ತಿದ್ದವೇ ಹೊರತು ಮಾಹಿತಿ ಭಂಡಾರ ಕಾಣಲಿಲ್ಲ..
ವಿಧಿಯಿಲ್ಲದೇ ಗೂಗಲೇಶ್ವರನ ಮೊರೆ ಹೋಗೋಣ ಅಂತ.. ತೀರ್ಮಾನಿಸಿ ಬೆಂಗಳೂರಿನ ಕಡೆಗೆ ಹೆಜ್ಜೆ ಹಾಕಿದೆವು.. ಹೊಟ್ಟೆ ತಾಳಹಾಕುತ್ತಿತ್ತು .. ಹೆಸರುವಾಸಿಯಾಗಿದ್ದ ಸರವಣ ಭವನಕ್ಕೆ ಹೋದೆವು.. ನಿರಾಶೆಯಾಯಿತು.. ಆರ್ಡರ್ ತೆಗೆದುಕೊಳ್ಳುವವನ ನಿರ್ಲಕ್ಷ್ಯ, ಧಿಮಾಕು.. ಬೇಸರ ತರಿಸಿತು.. ಜೊತೆಯಲ್ಲಿ ಕೊಟ್ಟ ತಿಂಡಿಯೊ ದೇವರಿಗೆ ಪ್ರೀತಿ.. ಬಯ್ದುಕೊಂಡೆ ಬಿಲ್ ಪಾವತಿ ಮಾಡಿ ಹೊರಗೆ ಬಂದು.. ಕಾರಿನ ಕಡೆಗೆ ಹೋಗೋಕೆ ಆಟೋ ಹಿಡಿದೆವು..
ಕಾರಿನ ಹತ್ತಿರ ಬಂದು.. ಬೆಂಗಳೂರಿನ ಕಡೆಗೆ ದೌಡಾಯಿಸಿದೆವು.. ಹೊಸೂರಿನ ಬಳಿಯಲ್ಲಿ A2Bಯಲ್ಲಿ ಹೊಟ್ಟೆ ತುಂಬಿಸಿಕೊಳ್ಳುವಷ್ಟು ತಿಂದು.. ಮನೆಯ ಕಡೆಗೆ ಹೊರಟೆವು ..
 |
ಹೊಟ್ಟೆಗೆ ಬಿದ್ದಾಗ ಬೆಳಕು ಮೂಡುತ್ತದೆ |
ಇಡೀ ದಾರಿಯಲ್ಲಿ ನನಗೆ ಕಾಡಿದ ಪ್ರಶ್ನೆ. ಈ ಕ್ಷೇತ್ರದ ಮಹತ್ವವೇನು.. ಸೀರೆಗಳಿಗೆ ಹೆಸರಾದ ಕಾಂಚಿಪುರಂ ಈ ದೇವಾಲಯ/ಈ ಸಂಭ್ರಮಕ್ಕೆ ಕಾರಣವೇನು ಎಂದು ಹುಡುಕುತ್ತ ಹೋದಾಗ.. ನೆಲವನ್ನು ಬಗೆದಾಗ ಹಲವಾರು ವಿಷಯಗಳು ಸಿಗುವಂತೆ.. ಭರಪೂರ ಮಾಹಿತಿ ದೊರೆಯಿತು.. ಆದರೂ ಇದು ಕಲಿಯುಗ. ಇಲಿ ಹೋಯ್ತು ಅಂದ್ರೆ ಹುಲಿ ಹೋಯ್ತು ಎನ್ನುವ ತವಕ.. ಆದರಿಂದ ನನಗೆ ಎಟುಕಿದ ಮಾಹಿತಿ.. ಮತ್ತು ನನಗೆ ಸರಿ ಅನಿಸಿದ ಕೆಲವು ಮಾಹಿತಿಗಳನ್ನುದಾಖಲಿಸಿದ್ದೇನೆ .. ಇದರ ಕೃಪೆ ಗೂಗಾಲೇಶ್ವರ ಮತ್ತು ಯು ಟ್ಯೂಬ್ ಅಕ್ಕ..
ಕೃತಯುಗದಲ್ಲಿ ಬ್ರಹ್ಮ ಮತ್ತು ಸರಸ್ವತಿಯ ಮಧ್ಯೆ ಭಿನ್ನಾಭಿಪ್ರಾಯ ಬಂದು.. ಸರಸ್ವತಿ ಮುನಿದು ಬ್ರಹ್ಮನನ್ನು ತೊರೆದು ಭುವಿಗೆ ಇಳಿಯುತ್ತಾಳೆ.. ಬ್ರಹ್ಮನು ತನ್ನ ಪಿತ ವಿಷ್ಣುವಿನ ಬಳಿಯಲ್ಲಿ ಇದಕ್ಕೆ ಪರಿಹಾರ ಕೇಳಿದಾಗ ಸಾವಿರ ಅಶ್ವಮೇಧಯಾಗ ಮಾಡಬೇಕು ಎಂದು ಹೇಳುತ್ತಾನೆ . ಒಂದು ಅಶ್ವಮೇಧ ಮಾಡುವುದೇ ಸಾಹಸ ಇನ್ನೂ ಸಾವಿರ ಅಂದರೆ ಕಷ್ಟ ಎಂದಾಗ.. ಈಗಿನ ಕಾಂಚಿಪುರಂ ಪ್ರದೇಶದಲ್ಲಿ ಒಂದು ಅಶ್ವಮೇಧ ಮಾಡು ಎನ್ನುತ್ತಾನೆ ವಿಷ್ಣು..
ಬ್ರಹ್ಮ ಯಾಗ ಶುರುಮಾಡಿದಾಗ ಸರಸ್ವತಿ ವೇದಾವತಿ ನದಿಯಾಗಿ ಯಜ್ಞಕ್ಕೆ ಅಡ್ಡಿ ಪಡಿಸಲು ಪ್ರಯತ್ನಿಸುತ್ತಾಳೆ.. ಆಗ ವಿಷ್ಣು ಯಜ್ಞಕುಂಡದಲ್ಲಿ ಪ್ರತ್ಯಕ್ಷನಾಗಿ ಸರಸ್ವತಿಯನ್ನು ಸಮಾಧಾನ ಪಡಿಸುತ್ತಾನೆ.. ಬ್ರಹ್ಮನು ವಿಷ್ಣುವಿಗೆ ಈ ಯಜ್ಞದ ಹವಿಸ್ಸು ನಿನಗೆ ಕೊಡುತ್ತೇನೆ.. ನೀನು ಇಲ್ಲಿಯೇ ನೆಲೆ ನಿಂತು ಭಕ್ತರಿಗೆ ಆಶೀರ್ವದಿಸು ಎಂದು ಕೇಳಿಕೊಂಡಾಗ.. ವಿಶ್ವಕರ್ಮ ಅತ್ತಿ ಮರದಲ್ಲಿ ವಿಷ್ಣುವಿನ ಮೂರ್ತಿಯನ್ನು ಕೆತ್ತಿ.. ಅದಕ್ಕೆ ಪೂಜೆ ಸಲ್ಲಿಸುವ ಕಾರ್ಯ ನೆಡೆದಾಗ ಅದು ಅತಿ(ಅತ್ತಿ) ವರದರಾಜ ದೇವರು ಎಂದು ಪ್ರಚಲಿತ ಗೊಳ್ಳುತ್ತದೆ.. ಮಹಾಮಹಿಮರು ಈ ವಿಗ್ರಹಕ್ಕೆ ಪೂಜೆ ಮಾಡಿದ್ದಾರೆ ಮತ್ತು ಸಾವಿರಾರು ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ..
ನಂತರ ಕಲಿಯುಗದ ಕಾಲದಲ್ಲಿ ಸುಮಾರು ಹದಿನಾರನೇ ಶತಮಾನದಲ್ಲಿ ಮೊಘಲರ ದಾಳಿಯಿಂದ ಸುಂದರ ವಿಗ್ರಹಗಳನ್ನು ರಕ್ಷಿಸುವ ಸಾಹಸದಲ್ಲಿ ಭರದಲ್ಲಿ ಈ ಅತ್ತಿ ವರದರಾಜ ವಿಗ್ರಹವನ್ನು ದೇವಸ್ಥಾನದ ಮೂಲ ಅರ್ಚಕರಾಗಿದ್ಧ ಅಣ್ಣ ತಮ್ಮ ಅಲ್ಲಿಯೇ ಇದ್ದ ಅನಂತ ಸರೋವರದಲ್ಲಿ ಬಚ್ಚಿಡುತ್ತಾರೆ.. ಈ ವಿಷಯ ಮೂಲದೇವರ ಅರ್ಚಕರಾಗಿದ್ದ ಅಣ್ಣ ತಮ್ಮನಿಗೆ ಮಾತ್ರ ಗೊತ್ತಿರುತ್ತದೆ..ಬೇರೆ ಯಾರಿಗೂ ಇದರ ಸುಳಿವು ಕೊಟ್ಟಿರುವುದಿಲ್ಲ .. ಕಾಲಾನಂತರ ಅಣ್ಣ ತಮ್ಮ ನಿಧನವಾದ ನಂತರ.. ಯಾರಿಗೂ ಈ ವಿಗ್ರಹದ ಎಲ್ಲಿದೆ ಎಂದು ಗೊತ್ತಾಗದೆ.. ಹುಡುಕಾಟದಲ್ಲಿ ವಿಫಲರಾಗಿರುತ್ತಾರೆ..
ಸುಮಾರು ನಲವತ್ತು ವರ್ಷಗಳ ಕಾಲ ವಿಗ್ರಹವಿಲ್ಲದೆ ದೇವಸ್ಥಾನದಲ್ಲಿ ಪೂಜೆ ನೆಡೆಯದೆ ಸಾಗಿರುತ್ತದೆ.. ಶಿಲೆಯಲ್ಲಿ ವರದರಾಜರ ಮೂರ್ತಿಯನ್ನು ಕೆತ್ತಿಸಿ ಪ್ರತಿಷ್ಠಾಪಿಸಿ ಪೂಜೆಯನ್ನು ಮತ್ತೆ ಶುರುಮಾಡುತ್ತಾರೆ.. ಒಂದು ವರ್ಷ.. ದೇವಸ್ಥಾನದ ಬಳಿಯ ಸರೋವರ/ಕಲ್ಯಾಣಿಯಲ್ಲಿ ನೀರು ಇಂಗಿ ಹೋದಾಗ ಈ ವಿಗ್ರಹ ಇರುವ ಬಗೆ ಗೊತ್ತಾಗುತ್ತದೆ.. ವಿಗ್ರಹವನ್ನು ಹೊರಗೆ ತೆಗೆದು ಪೂಜೆ ಪುನಸ್ಕಾರ ಸಲ್ಲಿಸಿ.. ಮತ್ತೆ ಈ ವಿಗ್ರಹವನ್ನು ಅದೇ ಕಲ್ಯಾಣಿಯಲ್ಲಿ ಇಡುವ ಪದ್ಧತಿ ಶುರುಮಾಡುತ್ತಾರೆ.. ತದನಂತರ.. ಈ ವಿಗ್ರಹವನ್ನು ನಲವತ್ತು ವರ್ಷಗಳಿಗೊಮ್ಮೆ ಅದೇ ಕಲ್ಯಾಣಿಯಿಂದ ಹೊರಗೆ ತೆಗೆದು.. ಒಂದು ಮಂಡಲ ಪೂಜೆ ಅಂದರೆ ೪೮ದಿನಗಳ ಕಾಲ ಪೂಜೆ ಸಲ್ಲಿಸಿ ಮತ್ತೆ ಕಲ್ಯಾಣಿಯಲ್ಲಿ ಸಿಕ್ಕ ಜಾಗದಲ್ಲಿಯೇ ವಿಗ್ರಹವನ್ನು ಇಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ..
ಕಲ್ಯಾಣಿಯಿಂದ ಹೊರಗೆ ತೆಗೆದ ಮೇಲೆ .. ಈ ಮೂರ್ತಿಯು ಮೊದಲ ೨೪ದಿನ ಶಯನ ಭಂಗಿಯಲ್ಲಿ ನಂತರ ಮುಂದಿನ ೨೪ದಿನಗಳು ನಿಂತ ಭಂಗಿಯಲ್ಲಿ ಪೂಜೆ ಪುನಸ್ಕಾರಗಳನ್ನು ಸ್ವೀಕರಿಸುತ್ತಾರೆ..
ಕಾರಣಗಳು ಏನೇ ಇರಬಹುದು.. ಅಥವಾ ಐತಿಹ್ಯ ಏನೇ ಇರಬಹುದು.. ಆದರೆ ಈ ಅತ್ತಿಯ ಮರದಲ್ಲಿ ಮಾಡಿದ ವಿಗ್ರಹ ನೋಡಲು ಸುಂದ್ರವಾಗಿದೆ ಮತ್ತು ಮನಮೋಹಕವಾಗಿದೆ.. ಸುಮಾರು ಒಂಭತ್ತು/ಹತ್ತು ಅಡಿಯ ವಿಗ್ರಹವನ್ನು ಅತ್ತಿ ಮರದಲ್ಲಿ ಕೆತ್ತನೆ ಮಾಡಲಾಗಿದೆ.. ಅತ್ತಿ ಮರವು ನೀರಿನಲ್ಲಿ ನೆಂದಷ್ಟು ಗಟ್ಟಿಯಾಗುತ್ತದೆ ಎನ್ನುತ್ತಾರೆ.. ಮತ್ತೆ ನೀರಿನಲ್ಲಿಯೇ ಇರುವ ಈ ವಿಗ್ರಹವನ್ನು ಸಂರಕ್ಷಿಸಲು ಕೆಲವು ರಾಸಾಯನಿಕವನ್ನು ಬಳಸುತ್ತಾರೆ ಎಂಬ ಮಾಹಿತಿ ನಿಜವೋ ಸುಳ್ಳೋ ಗೊತ್ತಿಲ್ಲ.. ಆದರೆ ದೇವನ ಮಹಿಮೆ ಕಂಡವರಾರು..
- ಬೆಂಗಳೂರಿನ ಬಳಿಯಿರುವ ಶಿವಗಂಗೆಯ ಲಿಂಗದ ಮೇಲೆ ತುಪ್ಪ ಸವರಿದರೆ ಬೆಣ್ಣೆ ಬರುವ ಪವಾಡ ನೋಡಿದ್ದೇವೆ..
- ಶಿವಗಂಗೆ ಬೆಟ್ಟ ಒಂದು ಬದಿಯಿಂದ ಗಣೇಶನ ಹಾಗೆ, ಸರ್ಪದ ಹಾಗೆ, ಲಿಂಗದ ಹಾಗೆ, ಬಸವಣ್ಣನ ಹಾಗೆ ಕಾಣುವುದು ವಿಶೇಷ..
- ಹಾಸನದ ಹಾಸನಾಂಬಾ ದೇವಿಯ ದರ್ಶನ ವರ್ಷಕ್ಕೊಮ್ಮೆ ಸುಮಾರು ಎಂಟರಿಂದ ಹತ್ತು ದಿನ ದರ್ಶನವಾಗುತ್ತದೆ.. ಗಾಳಿ ಸಹ ಒಳಗೆ ಹೋಗಲಾರದ ದೇವಾಲಯದ ಒಳಗೆ ಬಾಗಿಲು ಹಾಕುವ ಮುನ್ನ ಇಟ್ಟಿರುವ ನೈವೇದ್ಯ, ಹಚ್ಚಿದ ದೀಪ, ಕುಂಕುಮ, ಅರಿಶಿನ, ಹಣ್ಣು ಹಂಪಲುಗಳು, ಹೂವುಗಳು ಒಂದು ವರ್ಷದ ನಂತರವೂ ಒಣಗದೆ ಆಗ ತಾನೆ ತಂದಿಟ್ಟಂತೆ ಹೊಸದಾಗಿರುತ್ತದೆ..
- ಹಾಸನಾಂಬ ದೇವಾಲಯದ ಪಕ್ಕದಲ್ಲಿಯೇ ಇರುವ ಸಿದ್ದೇಶ್ವರನ ಮೂರ್ತಿಯೂ ಹಾಗೆ.. ಅಮ್ಮನ ಕಾಲದಲ್ಲಿ ಬಾರಿಯ ಒಂದು ಶಿಲೆಯಂತೆ ಕಾಣುತ್ತಿತ್ತು.. ಸ್ವಲ್ಪ ಸ್ವಲ್ಪ ಆಕಾರ ಕಾಣುತ್ತಿತ್ತು ಅಂತಿದ್ದರು.. ಈಗ ಶಿವ ಕಿರಾತ ರೂಪದಲ್ಲಿ ಕಾಣುತ್ತಾನೆ.. ಸೊಗಸಾದ ಶಿಲೆಯಾಗಿ ಉದ್ಭವವಾಗಿದೆ..
- ಚಿಕಮಗಳೂರಿನ ಕಳಸಾಪುರದ ಬಳಿಯ ಬೆಳವಾಡಿ ಗಣೇಶ.. ನಾ ಬಾಲ್ಯದಲ್ಲಿ ನೋಡಿದಾಗ ಬರಿಯ ಒಂದು ಬಂಡೆಯಂತೆ ಕಾಣುತ್ತಿತ್ತು.. ಇಂದು ಸುಂದರ ಗಣಪನ ಆಕೃತಿಯಲ್ಲಿ ಕಾಣುತ್ತದೆ.
- ಬನವಾಸಿಯ ಲಿಂಗ ಜೇನುತುಪ್ಪದ ವರ್ಣದಲ್ಲಿರುವುದು..
- ಹೆಸರು ನೆನಪಿಗೆ ಬರುತ್ತಿಲ್ಲ.. ಘಟ್ಟ ಪ್ರದೇಶದ ಬಳಿಯ ಒಂದು ದೇವಾಲಯದಲ್ಲಿ ಶಿಲೆಯ ಲಿಂಗ ಬೆಳಿಗ್ಗೆಯಿಂದ ಸಂಜೆಯ ತನಕ ಬೇರೆ ಬೇರೆ ಬಣ್ಣದಲ್ಲಿ ಕಾಣುವುದು..
- ಬೆಂಗಳೂರಿನ ಗವಿಗಂಗಾಧರೇಶ್ವರನ ಸನ್ನಿಧಿಯಲ್ಲಿ ಪ್ರತಿ ಸಂಕ್ರಾಂತಿ ಹಬ್ಬದಂದು ಸಂಜೆ ಅಸ್ತಮಿಸುವ ಮುನ್ನ ಸೂರ್ಯ ದೇವ ಲಿಂಗಕ್ಕೆ ನಮಿಸುವುದು..
- ಶೃಂಗೇರಿಯ ವಿದ್ಯಾಶಂಕರ ದೇವಾಲಯದಲ್ಲಿರುವ ರಾಶಿ ಆಧಾರಿತ ಕಂಬದ ಮೇಲೆ ಪ್ರತಿ ತಿಂಗಳು ಆಯಾ ರಾಶಿಯ ಕಂಬದ ಮೇಲೆ ಸೂರ್ಯನ ಕಿರಣಗಳು ನಿಗದಿತ ಸಮಯದಲ್ಲಿ ಬೆಳಗುವುದು..
- ಹೊಸದುರ್ಗದ ಬಳಿಯ ಹಾಲ್ ರಾಮೇಶ್ವರದಲ್ಲಿ ಭಕ್ತಾದಿಗಳು ತಮ್ಮ ಕೋರಿಕೆಯನ್ನು ಕೇಳಿಕೊಂಡಾಗ ಅದು ಫಲಿಸುವ ಉತ್ತರವಾಗಿ ಎಲೆ ಅಡಿಕೆ, ಹೂವು ಮುಂತಾದ ಶುಭಕರ ವಸ್ತುಗಳು ನೀರಿನಲ್ಲಿ ತೇಲಿ ಬರುವುದು..
ಹೀಗೆ ಕಂಡಷ್ಟು, ಕೇಳಿದಷ್ಟು ಅನೇಕಾನೇಕ ಸಂಗತಿಗಳು ನಮ್ಮ ಅರಿವಿನ ಎತ್ತರಕ್ಕಿಂತ ಮೇಲೆ ಇರುತ್ತದೆ.. ಮಾನವನ ಸೃಷ್ಟಿ ಕೆಲವು ಆದರೆ ಕೆಲವು ದೇವನ ಲೀಲೆ.. ಇದನ್ನು ಒಪ್ಪುವುದು ಬಿಡುವುದು ಚರ್ಚೆಗೆ ಬಿಟ್ಟ ವಿಷಯವಾದರೂ.. ಈ ವಿಸ್ಮಯಗಳು ಭಗವಂತನ ಇರುವನ್ನು ತೋರಿಸುತ್ತಲೇ ಇರುತ್ತದೆ ಅಲ್ಲವೇ.. !!!
 |
ವೆಂಕಿ - ದಿ ಡ್ರೈವಿಂಗ್ ಬಾಂಡ್ |
ಬೆಂಗಳೂರಿನಿಂದ ಸುಮಾರು ಹೊಸೂರು ದಾಟಿ ಸುಮಾರು ದೂರ ನಾ ಓಡಿಸಿದೆ.. ನಂತರ ಶಶಿ ಕಾಂಚಿಪುರಂ ನಗರಕ್ಕೆ ಬರುವ ತನಕ ಓಡಿಸಿ ನಂತರ ವೆಂಕಿಗೆ ಕೊಟ್ಟ.. ಅಲ್ಲಿಂದ ದಣಿವರಿಯದೆ ಕಾರನ್ನು ಚಲಾಯಿಸಿದ ವೆಂಕಿಗೆ ಧನ್ಯವಾದಗಳು.. ವಾಪಸ್ ಬರುವಾಗ ವೆಂಕಿಗೆ ಮಾತಿನಲ್ಲಿ ಸಾತ್ ಕೊಟ್ಟ ಅವನ ಮಡದಿ ಸೌಮ್ಯಗೆ ಥ್ಯಾಂಕ್ಸ್.. ಜಟ್ ಫಟ್ ಅಂತ ಕಾರ್ಯಕ್ರಮ ಆಯೋಜಿಸಿ ಶಶಿಯ ಮನದನ್ನೆ ಪ್ರತಿಭಾ ನನ್ನ ಮೇಲೆ ಯಾವಾಗಲೂ ಗೂಬೆ ಕೂರಿಸುತ್ತ ಇದ್ದರು.. ಇಡೀ ಕುಟುಂಬ ಹೋಗುವ ಯಾವ ಪ್ರವಾಸವನ್ನು ನಾನು ಪ್ಲಾನ್ ಮಾಡಿಲ್ಲ ಅಂತ.. ಆ ಗೂಬೆ ನನ್ನ ತಲೆಯಿಂದ ಇಳಿಯುವುದಕ್ಕೆ ಪರೋಕ್ಷವಾಗಿ ಸಹಾಯ ಮಾಡಿದ ಶಶಿಗೆ ಧನ್ಯವಾದಗಳು.. ಇಡೀ ಪ್ರವಾಸದ ಕೇಂದ್ರ ಬಿಂದು ಅಕ್ಕಯ್ಯ ಅಲಿಯಾಸ್ ಪ್ರತಿಭಾ .. ತಮ್ಮ ಮಧುರವಾದ ಮಾತುಗಳಿಂದ ರೇಗಿಸುತ್ತಲೇ.. ನಮ್ಮನ್ನು ನಿಯಂತ್ರಿಸಿದ ಕೀರ್ತಿ ಅವರಿಗೆ..... ಜೊತೆಯಲ್ಲಿ ಸೌಮ್ಯ.. ಇತ್ತ ಕಡೆ ತಮ್ಮ ಯಜಮಾನರಾದ ವೆಂಕಿಯ ಜೊತೆಯಲ್ಲಿಯೇ ಸಾಗುತ್ತಾ.. ರೇಗಿಸುತ್ತಾ.. ಸಾಗಿದ್ದು ಇಡೀ ಪ್ರವಾಸ ಹಿತಕರವಾಗುವಂತೆ ಮಾಡಿದರು..
ದೇವರ ದರ್ಶನ, ಶ್ರಾವಣ ಶನಿವಾರ, ಗೆಳೆಯರ ಜೊತೆಯಲ್ಲಿ ಹರಟೆ, ಪ್ರವಾಸ.. ಜೊತೆಯಲ್ಲಿ ನಲವತ್ತು ವರ್ಷಗಳಿಗೊಮ್ಮೆ ನೆಡೆಯುವ ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ಇವೆಲ್ಲವೂ ಆ ಸುಂದರ ಶನಿವಾರವನ್ನು ಅಷ್ಟೇ ಸೊಗಸಾಗಿ ಕಳೆದ ಪುಣ್ಯ ನನ್ನದಾಗಿತ್ತು.. !!!
No comments:
Post a Comment