Friday, June 28, 2019

ಶ್ರೀ ಬೊಬ್ಬೆ ರಾಮಯ್ಯನವರ ಜೊತೆ ಒಂದು ಸುತ್ತು - ಎರಡನೇ ಆವೃತ್ತಿ 2019


 ಶ್ರೀ ಬೊಬ್ಬೆ ರಾಮಯ್ಯ: ಎನ್ರಪ್ಪ ಈ ವರ್ಷವೂ ಕುಟುಂಬ ಮಿಲನ ಮಾಡ್ತಾ ಇದ್ದೀರಾ

ಸುಬ್ರಮಣ್ಯ ಮತ್ತು ವಿಜಯ : ಹೌದು ಅಜ್ಜಯ್ಯ... ಮಕ್ಕಳಿಗೆ ಪರೀಕ್ಷೆಗಳು ನೆಡೀತಾ ಇವೆ.. ಮುಗಿದೊಡನೆ ಮಾಡ್ತೀವಿ

ಶ್ರೀ ಬೊಬ್ಬೆ ರಾಮಯ್ಯ : ಈ ಸಾರಿ ದಂಪತಿ ಸಮೇತ ಬರುವೆ.. ನಿಮ್ಮನ್ನು ಆಶೀರ್ವದಿಸಲಿಕ್ಕೆ

ಸುಬ್ರಮಣ್ಯ ಮತ್ತು ವಿಜಯ : ಆಗಲೇ ಅಜ್ಜಯ್ಯ.. ನಿಮ್ಮನ್ನು ವಾಟ್ಸಾಪ್ ಗುಂಪಿಗೆ ಸೇರಿಸಿದ್ದೀವಿ.. ಚೆಕ್ ಮಾಡ್ತಾ ಇರಿ.. ತಾರೀಕು ದಿನ ಹೇಳುತ್ತೇವೆ..

ಶ್ರೀ ಬೊಬ್ಬೆ ರಾಮಯ್ಯ : ಆಗ್ಲೇ ಮಕ್ಕಳ .. ಶುಭದಿನ ನಿಮದಾಗಿರಲಿ..

ಹೀಗೆ ೨೭ನೇ ತಾರೀಕು ಮಾರ್ಚ್ ೨೦೧೯ ರಂದು ಒಂದು ಪುಟ್ಟ ಚುಟುಕು ಸಂಭಾಷಣೆ ನಮ್ಮ ಬಾಸ್ ಜೊತೆ ನೆಡೆದಿತ್ತು..

ನಂತರ ಒಂದು ತಿಂಗಳು ಯಾವ ಸೂಚನೆಯೂ ಕಾಣದೆ ಇದ್ದದರಿಂದ.. ೦೧ನೇ ಮೇ ೨೦೧೯ ರಂದು..ಮತ್ತೆ ಬಾಸ್ ಸಂದೇಶ ಕಳಿಸಿಬೇಕು ಎನ್ನುವಷ್ಟರಲ್ಲಿ ಸುಬ್ರಮಣ್ಯ ಅವರಿಂದ ವಾಟ್ಸಾಪ್ ಸಂದೇಶ ಬಂತು..

ಸುಬ್ರಮಣ್ಯ : "ಪ್ರಸಕ್ತ ವರ್ಷದ ಕಿತ್ತಾನೆ ಬೊಬ್ಬೆ ರಾಮಯ್ಯ ಬಳಗದ ಕುಟುಂಬ ಮಿಲನ ಕಾರ್ಯಕ್ರಮವನ್ನು ಬರುವ ಜೂನ್ ೨೨ ಶನಿವಾರ ಮತ್ತು ೨೩, ಭಾನುವಾರದಂದು ಕಿತ್ತಾನೆ ಗ್ರಾಮದಲ್ಲಿ ನೆಡೆಸಲು ನಿರ್ಧರಿಸಲಾಗಿದೆ. ಬಳಗದವರೆಲ್ಲರೂ ಈ ದಿನಗಳನ್ನು ಕ್ಯಾಲೆಂಡರಿನಲ್ಲಿ ಗುರುತು ಮಾಡಿ ತಪ್ಪದೆ ಭಾಗವಹಿಸಬೇಕೆಂದು ಕೋರುತ್ತೇವೆ.. ಮಿಕ್ಕ ವಿಷಯಗಳಿಗೆ ನಿರೀಕ್ಷಿಸಿ.. "

ಶ್ರೀ ಬೊಬ್ಬೆ ರಾಮಯ್ಯ : ಸುಬ್ಬಣ್ಣ.. ನಾನು ಕಣಪ್ಪ ನಿನ್ನ ತಾತಾ.. ಬಹಳ ಸಂತೋಷ ಆಯ್ತು.. ದಿನವೂ ನಿನ್ನ ಅಜ್ಜಿ ಯಾವಾಗ ಹೋಗೋದು ಕಿತ್ತಾನೆಗೆ ಎಂಬ ಪ್ರಶ್ನೆ ಕೇಳಿ ಕೇಳಿ ಸಾಕಾಗಿ ಹೋಗಿತ್ತು.. ಖಂಡಿತ ಅಂದು ನನ್ನ ಪರಿವಾರದ ಜೊತೆಯಲ್ಲಿ ಬರುತ್ತೇನೆ.. ಎಲ್ಲರೂ ಜೊತೆಯಾಗಿರಿ.. ಬರುತ್ತೇವೆ.. ಹರಸುತ್ತೇವೆ.. ಇಂತಿ ನಿನ್ನ ತಾತಾ ಬೊಬ್ಬೆ ರಾಮಯ್ಯ..

ಈ ಸಂದೇಶ ಬಂದಾಗ ಎಲ್ಲರಿಗೂ ಖುಷಿಯೂ ಖುಷಿ .. ಅತ್ತ ದೇವಲೋಕದಲ್ಲಿಯೂ ಕಿತ್ತಾನೆಗೆ ಹೋಗೋದು ಅಂತ.. ರಾಮಯ್ಯನವರ ಕುಟುಂಬದ ಕೃಷ್ಣಪ್ಪ, ಶಂಕರಪ್ಪ, ಅನ್ನಪೂರ್ಣ, ರಾಮಣ್ಣ, ಮಂಜುನಾಥ್, ಸವಿತಾ, ಹೀಗೆ ಹಲವರು ಸಿದ್ಧವಾಗತೊಡಗಿದರು...

ಕಿತ್ತಾನೆಯಿಂದ  ೯೮೮೦೭ ೦೧೭೬೦ ಈ ನಂಬರಿಗೆ ಒಂದು ಕರೆ ಬಂತು.. "ಶ್ರೀ ರಾಮಯ್ಯನವರ ಹತ್ತಿರ ಮಾತಾಡಬೇಕು.. ದಯಮಾಡಿ ಅವರಿಗೆ ಕನೆಕ್ಟ್ ಮಾಡ್ತೀರಾ"

ಅತ್ತ ಕಡೆ ಸವಿತಾ ಕರೆ ಸ್ವೀಕರಿಸಿದ್ದಳು "ಒಹ್ ಹೌದಾ ಒಂದು ನಿಮಿಷ ಅವರನ್ನು ಕರೆಯುತ್ತೀನಿ.. ಹಾಗೆ ಲೈನಿನಲ್ಲಿ ಇರಿ.. " ಎಂದಿದ್ದೆ.. ತನ್ನ ಜೋರು ದನಿಯಲ್ಲಿ "ತಾತಾ ಕಿತ್ತಾನೆಯಿಂದ ಕರೆ ಬಂದಿದೆ.. ಬೇಗ ಬನ್ನಿ.. ಅಜ್ಜಿ, ತಾತಾ ಎಲ್ಲರೂ ರೆಡಿಯಾಗಿ ಹೋಗೋಣ.. "

ಆ ಕರೆ ಮುಗಿದಿತ್ತು.. ಅತ್ತ ಕಡೆಯಿಂದ ಹೇಳಿದ್ದಕ್ಕೆಲ್ಲ ರಾಮಯ್ಯನವರು ಒಪ್ಪಿಕೊಂಡಿದ್ದರು.. ಗರಿಗರಿ ಪಂಚೆ, ಜರತಾರಿ ಸೀರೆ.. ಲಕ್ಷಣವಾದ ಅಲಂಕಾರ ಮಾಡಿಕೊಂಡು ಎಲ್ಲರೂ ಧರೆಗಿಳಿದರು..

"ಅರೆ ವಾಹ್ ಕಿತ್ತಾನೆ ಎಷ್ಟೊಂದು ಬದಲಾಗಿದೆ.. ಕೆರೆ ಏರಿಗೆ ಟಾರು ಬಂದಿದೆ.. ನಮ್ಮ ಊರಿನ ದಾರಿ ಅಗಲಮಾಡುತ್ತಿದ್ದಾರೆ.. ಕಾಂಕ್ರೀಟ್ ರಸ್ತೆ ಬಂದಿದೆ.. ಕೆರೆ ಹಾಗೆ ಇದೆ.. ಉಡುಸಲಮ್ಮ ದೇವಸ್ಥಾನ ನಿರ್ಮಾಣ ಗೊಂಡಿದೆ.. ನಮ್ಮ ಮನೆ ನವೀಕರಣಗೊಂಡಿದೆ .. ಅಬ್ಬಾ ಎಷ್ಟೊಂದು ಬದಲಾವಣೆ.. ಇದು ನಾವಿದ್ದ ಊರೇ.. " ಎಂದು ಎಲ್ಲರೂ ಹೇಳಿದಾಗ..

"ನೋಡ್ರಪ್ಪಾ.. ಬದಲಾವಣೆ ಜಗದ ನಿಯಮ ..ಇಂದಿದ್ದು ನಾಳೆಯಿಲ್ಲ.. ನಾಳೆ ಬರೋದಕ್ಕೆ ಇಂದು ತ್ಯಾಗ.. ಹೀಗೆ ನೆಡೆಯುತ್ತಲೇ ಇರುತ್ತದೆ.. ಕಿತ್ತಾನೆ ಕೆರೆ ಏರಿ ಮೇಲೆ ಎಲ್ಲರೂ ನೆಡೆದು ಬರುತ್ತಿದ್ದರು.. ಸವಿತಾ ಅಜ್ಜನನ್ನು ಕುರಿತು "ಅಜ್ಜಾ.. ಈ ಗ್ರಾಮಕ್ಕೆ ಕಿತ್ತಾನೆ ಎಂಬ ಹೆಸರು ಯಾಕೆ ಬಂತು.. ಕಿತ್ತಾನೆ ಎಂದರೆ ಏನು.. ಸ್ವಲ್ಪ ಹೇಳಿ ಅಜ್ಜ"



"ಮಗು.. ಈ ನಮ್ಮ ಗ್ರಾಮ ಸುಮಾರು ತಲೆಮಾರುಗಳ ಹಿಂದೆ ನಮ್ಮ ಪೂರ್ವಜರಿಗೆ ವಿಜಯನಗರ ಸಂಸ್ಥಾನದಿಂದ ಸಿಕ್ಕ ಬಳುವಳಿ ಅಂತ ಹೇಳುತ್ತಾರೆ.. ನನ್ನ ಕಾಲದಲ್ಲಿ ನಾ ನೋಡಿದ್ದ ತಾಮ್ರ ಪಾತ್ರದ ಮೂಲಕ ತಿಳಿದದ್ದು.. ಮತ್ತೆ ನನ್ನ ಅಪ್ಪ.. ಅವರ ಅಪ್ಪ ಹೀಗೆ ಕಿವಿಯಿಂದ ಕಿವಿಗೆ ತಾಕಿದ್ದ ಸುದ್ದಿಯ ಪ್ರಕಾರ.. ನಮ್ಮೂರಿನ ತೋಟದಲ್ಲಿ ಶಕ್ತಿ ದೇವರು ನೆಲೆಸಿದ ತಾಣವನ್ನು ದೇವರತೋಟವೆಂದು ಕರೆಯುವ ಪ್ರತೀತಿ ಇದೆ.. ಆ ತೋಟದಲ್ಲಿ ಒಬ್ಬ ಬ್ರಾಹ್ಮಣ ತನ್ನ ಆಹಾರ ಸಾಮಗ್ರಿ ತಂದು ಅಲ್ಲಿಯೇ ಇದ್ದ ಕಲ್ಲು ಭಾವಿಯಲ್ಲಿ ಸ್ನಾನ ಮಾಡಿ ಜಪ ತಪ ಮಾಡಿಕೊಂಡು ಅಡಿಗೆ ಮಾಡಿಕೊಂಡು .. ಊಟ ಮಾಡುವುದಕ್ಕೆ ಅದೇ ತೋಟದಲ್ಲಿದ್ದ ಬಾಳೆಯ ಗಿಡದಿಂದ ಬಾಳೆಯ ಎಲೆಯನ್ನು ತೆಗೆದುಕೊಂಡಾಗ, ಆ ತೋಟದೊಡೆಯ.. ಆ ಬ್ರಾಹ್ಮಣನಿಗೆ ಸ್ನಾನ, ಅಡಿಗೆ ಮಾಡಿಕೊಳ್ಳಲು ಮಾತ್ರ ಅನುಮತಿ ಕೊಟ್ಟಿದ್ದೆ ನೀ ಯಾಕೆ ಬಾಳೆ ಎಲೆ ತೆಗೆದುಕೊಂಡೆ ಎಂದು ಕುಪಿತನಾಗಿ, ಅನ್ನದ ಪಾತ್ರೆಯನ್ನು ಕಾಲಿನಿಂದ ಒದ್ದು.. ಬ್ರಾಹ್ಮಣನಿಗೆ ಅವಮಾನ ಮಾಡುತ್ತಾರೆ.. ಆ ಒಡೆಯ ಜಂಗಮ ಮಾತಾಡುವ ಆಗಿದ್ದರಿಂದ ಊರಿನ ಜನ ಮರು ಮಾತಾಡದೆ ಮೂಕರಾಗಿ ಆ ದೃಶ್ಯಗಳನ್ನು ಅಸಹಾಯಕರಾಗಿ ನೋಡುತ್ತಿರುತ್ತಾರೆ.. ಹಸಿದ ಬ್ರಾಹ್ಮಣನನ್ನು ಕೆಣುಕುವುದು .. ಒಂಟಿ ಸಲಗವನ್ನು ಕೆಣಕುವುದು ಎರಡು ಒಂದೇ ಎಂಬ ಗಾದೆಯಿದೆ ಅಲ್ಲವೇ.. ಹಾಗೆ ಕುಪಿತನಾದ ಬ್ರಾಹ್ಮಣ.. ತನ್ನ ಶಿಖೆಯನ್ನು ಬಿಚ್ಚಿ.. ನಿನ್ನ ಪ್ರಭಾವವನ್ನು ತಗ್ಗಿಸಿ.. ನಿನ್ನ ಮಠವನ್ನು ಈ ಜಾಗದಿಂದ ಕಿತ್ತು ಹಾಕದಿದ್ದರೆ ನಾ ಬ್ರಾಹ್ಮಣನೇ ಅಲ್ಲ.. ತೊಟ್ಟ ಜನಿವಾರವನ್ನು ಹರಿದು ಹಾಕುತ್ತೇನೆ ಎಂದು ಶಪಥ ಮಾಡಿ.. ಅಲ್ಲಿಂದ ಹೊರಡುತ್ತಾನೆ..

ಅಲ್ಲಿದ್ದ ಊರಿನ ಮಂದಿ "ಅರೆ ಜಂಗಮನ ಶಕ್ತಿ ಏನೂ.. ಈ ಬಡ ಬ್ರಾಹ್ಮಣನ ಶಕ್ತಿ ಏನು.. ಈ ಮನುಷ್ಯ ಜಂಗಮನನ್ನು ಮತ್ತು ಮಠವನ್ನು ಕಿತ್ತಾನೆಯೇ... ಏನೋ ಅಪ್ಪ.. ಅನುಮಾನ.. ಎಂದು ಮಾತಾಡಿಕೊಳ್ಳುತ್ತಾರೆ..

ಬಡ ಬ್ರಾಹ್ಮಣ ಆ ಪ್ರಾಂತ್ಯದ ಅರಸನ ಬಳಿ ಹೋಗಿ ತನಗಾದ ಅವಮಾನದ ಬಗ್ಗೆ ಹೇಳಿಕೊಂಡು.. ಸಹಾಯ ಬೇಡದೆ.. ತಪ್ಪು ಒಪ್ಪಿನ ಬಗ್ಗೆ ಅರಿವು ಮೂಡಿಸುವಂತೆ ಮಾತಾಡುತ್ತಾನೆ... ಆ ಅರಸರು ಈ ಘಟನೆಯ ಪೂರ್ಣ ವಿವರ ಪಡೆದು.. ತಪ್ಪು ಸರಿಗಳನ್ನು ಪರಾಮರ್ಶಿಸಿ ಬ್ರಾಹ್ಮಣನಿಗೆ ಆದ ಅವಮಾನಕ್ಕಿಂತ.. ಇದು ಮಾನವೀಯವಾಗಿ ನೆಡೆದುಕೊಳ್ಳಬೇಕಾದ ಸಂದರ್ಭ.. ಆದರೆ ಆ ಕ್ಷಣಕ್ಕೆ ವಿವೇಚನೆ ಕಳೆದುಕೊಳ್ಳುವ ರೀತಿಯಲ್ಲಿ ಘಟನೆ ನೆಡೆದಿದ್ದರಿಂದ.. ಮತ್ತು ಆ ಊರಿನ ಮಂದಿ ಮಠದ ಕೆಲವು ಅಧಿಕಾರಿಗಳಿಂದ ಆಗುತ್ತಿದ್ದ ತಾರತಮ್ಯಗಳನ್ನು ಅರಸರ ಗಮನಕ್ಕೆ ತಂದಿದ್ದರಿಂದ... ಒಂದು ಪ್ರಶಸ್ತ ದಿನವನ್ನು ಗುರುತು ಮಾಡಿ.. ಸುಮಾರು ೨೮ ಬ್ರಾಹ್ಮಣರಿಗೆ ಈ ಗ್ರಾಮದ ಸುತ್ತಾ ಮುತ್ತಲಿನ ಪ್ರದೇಶವನ್ನು ಬಳುವಳಿಯಾಗಿ ಕೊಟ್ಟು.. ಆ ಮಠವನ್ನು ದೂರದ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಆಜ್ಞೆ ಮಾಡುತ್ತಾರೆ.. ಮತ್ತೆ ಬ್ರಾಹ್ಮಣ ಈ ನಮ್ಮ ಗ್ರಾಮಕ್ಕೆ ಬಂದು.. ದೇವರ ತೋಟದಲ್ಲಿ ಪೂಜೆ ಮಾಡಿ, ಜಪ ತಪ ಮಾಡಿ... ಕೆರೆಗೆ ನೀರು ಬರುವಂತೆ ಪ್ರಾರ್ಥನೆ ಮಾಡಿ ಮಳೆ ಬರಿಸಿ ಈ ಗ್ರಾಮದ ಅಭಿವೃದ್ಧಿಯ ಕಡೆಗೆ ಗಮನ ಹರಿಸುತ್ತಾನೆ.. ಕಾಲ ಕ್ರಮೇಣ ಲಕ್ಷ್ಮೀದೇವಿ ಪುರ ಅಥವಾ ಲಕ್ಷ್ಮೀಪುರ
ಎಂಬ ಹೆಸರಿದ್ದ ಈ ಗ್ರಾಮದ ಮಂದಿ "ಅಲ್ಲ ಕನ್ಲಾ ಈ ಐನೋರು ಏನೋ ಅಂದುಕೊಂಡಿದ್ದೆ.. ಆ ಮಠವನ್ನು ಕಿತ್ತಾನೆಯೇ ಎಂದು ಕೊಂಡಿದ್ದೆವು.. ಹೇಳಿದ ಹಾಗೆ ಮಾಡಿಯೇ ಬಿಟ್ರಲ್ಲಪ್ಪ.. ಈತ ನಿಜಕ್ಕೂ ಕಿತ್ತೆ ಬಿಟ್ಟರು.. ಅನುಮಾನವೇ ಇಲ್ಲ.. ಧೈರ್ಯವಂತ ಎಂದು ಹಾದಿ ಹೊಗಳಿದರು.. ಕಾಲ ಕ್ರಮೇಣ ಆ ಊರಿಗೆ ಬರುವವರೆಲ್ಲ ವಿಳಾಸ ಕೇಳಿಕೊಳ್ಳುವಾಗ.. ಆ ಮಠವನ್ನು ಕಿತ್ತ ಊರು ಎಂದು ಜನಜನಿತವಾಗಿ ಮಠ ಕಿತ್ತಾ ಊರು.. ಮಠ ಕಿತ್ತಾನು.. ಕಿತ್ತಾನೆಯೇ.. ಹೋಗಿ ಕಡೆಯಲ್ಲಿ ಕಿತ್ತಾನೆ ಎಂಬ ಹೆಸರು ಸುತ್ತಮುತ್ತಲ ಹಳ್ಳಿಯಲ್ಲಿ ಪ್ರಸಿದ್ಧಿಯಾಯಿತು.. ಇದು ಎಷ್ಟು ಕಾಲ್ಪನಿಕವೋ, ನಿಜವೋ ಅರಿಯದು.. ಜಾನಪದ ಗೀತೆಯಂತೆ ಎಲ್ಲೋ ಉಗಮವಾಯಿತು.. ಹೆಸರು ಮಾತ್ರ ಶಾಶ್ವತವಾಯಿತು.. ಹೀಗೆ ಆಯಿತು ನಮ್ಮ ಊರಿನ ಹೆಸರು ಕಿತ್ತಾನೆ.. !!!

ಎಲ್ಲರೂ ಜೋರಾದ ಚಪ್ಪಾಳೆ ತಟ್ಟಿದರು.. ತಾವು ಬೆಳೆದು ಬಂದ ಊರಿನ ಐತಿಹ್ಯ ಕಾಲ್ಪನಿಕವೋ, ನಿಜವೋ ಏನೇ ಆಗಿದ್ದರೂ ವಿಚಾರಕ್ಕೆ ಹತ್ತಿರವಾಗಿದ್ದರಿಂದ ಎಲ್ಲರೂ ಖುಷಿ ಪಟ್ಟರು..

ಅಷ್ಟರಲ್ಲಿ ರಾಮಣ್ಣನವರು.. "ಅಜ್ಜ ಅಲ್ಲಿ ನೋಡಿ.. ಆಗಲೇ ಶಾಮಿಯಾನ ಹಾಕಿದ್ದಾರೆ.. ಅರೆ ಅರೆ.. ನಿಮ್ಮ ಫೋಟೋ ಕೂಡ ಇದೆ.. ಅಜ್ಜಿ ನಿಮ್ಮ ಫೋಟೋ.. ಓಹೋ ಕಳೆದ ವರ್ಷದ ಕುಟುಂಬ ಮಿಲನ ಕಾರ್ಯಕ್ರಮದ ವಿವರ ನೀವು ನೀಡಿದ್ದೀರಿ.. ಅದರ ಕೆಲವು ಚಿತ್ರಗಳು ಅಲ್ಲಿವೆ.. ಸೂಪರ್ ಅಜ್ಜ.. ನೀವು ಎಷ್ಟು ಮುದ್ದಾಗಿ ಕಾಣ್ತೀರ.. " ಎನ್ನುತ್ತಾ ಇತರರನ್ನು ತಮ್ಮ ಮಾಮೂಲು ದಾಟಿಯಲ್ಲಿ ಹುರುದುಂಬಿಸಿ ಮುನ್ನೆಡೆದರು..

ಮಂಜುನಾಥ  ತನಕ ಮಾತಾಡದೆ ಸುಮ್ಮನೆ ಮಾತು ಕೇಳುತ್ತ ಬಂದಿದ್ದರು.. "ಅಜ್ಜಯ್ಯ ನಿಮ್ಮ ಆರೈಕೆಯಲ್ಲಿ ಬೆಳೆದ ವಿಶಾಲುವಿಗೆ ಕಿತ್ತಾನೆ ಎಂದರೆ ಸ್ವರ್ಗ.. ಮತ್ತೆ ಇಲ್ಲಿಗೆ ಬರುತ್ತಿರುವುದು ಖುಷಿ ಕೊಡುತ್ತಿದೆ.. ನಮ್ಮನ್ನೆಲ್ಲ ಕರೆದು ತಂದ ನಿಮಗೆ ಧನ್ಯವಾದಗಳು ಅಜ್ಜಯ್ಯ" ಎಂದು ಮತ್ತೆ ಹೆಜ್ಜೆ ಹಾಕತೊಡಗಿದರು..  ಎನ್ನುತ್ತಾ



ಅಜ್ಜಿ ತಾನು ಬೆಳೆದು ಬಂದ ಮನೆಯನ್ನು ನೋಡಿ ಕಣ್ಣು ತುಂಬಿಕೊಂಡು.. "ಆಹಾ ಎಷ್ಟು ಸುಂದರವಾಗಿ ನವೀಕರಣ ಮಾಡಿದ್ದಾರೆ.. ಸುಂದರವಾಗಿದೆ.. ಅರೆ ಶಂಕರನ ಮನೆಯೂ ಕೂಡ ಸೊಗಸಾಗಿದೆ.. ಎಲ್ಲರೂ ಚೆನ್ನಾಗಿರಲಿ.. ಅರೆ ನನ್ನ ಚಿತ್ರ ಕೂಡ ಇದೆ.. ನನ್ನ ಮರಿ ಮೊಮ್ಮಕ್ಕಳ ಕೈಚಳಕ ಚೆನ್ನಾಗಿ ಬಂದಿದೆ.. " ಎಂದು ತಮ್ಮ ಪಾಡಿಗೆ ತಮ್ಮ ಪತಿದೇವರ ಕೆಳಗೆ ಕೂತರು..

ಸವಿತಾ ಸುಮ್ಮನೆ ಆ ಚಿತ್ರಗಳನ್ನೆಲ್ಲ ನೋಡುತ್ತಾ.. "ಈ ಫೋಟೋ ಕೆಲಸವೆಲ್ಲ ನಮ್ಮ ಕಪಿ ಯಜಮಾನರದ್ದೇ ಅಲ್ವ ಶೀತಲ್  "  ಎಂದಾಗ ಶೀತಲ್ ನನ್ನ ಕಡೆ ನೋಡಿ ಕಣ್ಣು ಹೊಡೆದಳು..


"ಅರೆ ಶಾಮಣ್ಣ .. ನಾ ಹೋದಾಗ.. ನನ್ನ ಯಾತ್ರೆಯ ಹಿಂದೆಯೇ ಓಡಿ ಬಂದಿದ್ದೆಯಲ್ಲ ಮಗು.. ನಿನ್ನ ಜೀವನದಲ್ಲಿ ಸಾಧಿಸಿದ ಏಳಿಗೆ ನೋಡಿ ಖುಷಿಯಾಗುತ್ತಿದೆ ಮಗು.. ನನ್ನ ಆಶೀರ್ವಾದ ಸದಾ ನಿನ್ನ ಮೇಲಿದೆ.. ಏಳು ಬೀಳುಗಳನ್ನು ದಾಟಿ ನೀ ನಿಂತಿರುವುದು ನೋಡಿ ಖುಷಿಯಾಗುತ್ತಿದೆ ಮಗು .. ನಿನ್ನ ಮಂತ್ರೋಚ್ಚಾರಣೆ.. ಪೂಜಾ ವಿಧಾನ ಎಲ್ಲವೂ ಸೊಗಸು.. ಶುಭವಾಗಲಿ" ಎಂದು ಅನ್ನಪೂರ್ಣಮ್ಮನವರು ತಮ್ಮ ಪುತ್ರ ಶಾಮಣ್ಣನನ್ನ ಕಂಡು ಹರಸಿದರು.. ಶಂಕರಪ್ಪನವರು ಎಲೆ ಅಡಿಕೆ ಮೆಲ್ಲುತ್ತಾ.. ನನ್ನ ಮಕ್ಕಳೆಲ್ಲ ಚೆನ್ನಾಗಿದ್ದಾರೆ.. ಎಲ್ಲರೂ ಅವರವರ ಕಾಲಮೇಲೆ ನಿಂತಿದ್ದಾರೆ.. ಅದೇ ಖುಷಿ.. ನಾ ನೆಡೆದ ಹಾದಿಯಲ್ಲಿ ಎಲ್ಲರೂ ಹೆಜ್ಜೆ ಹಾಕುತ್ತಿದ್ದಾರೆ.. ನನ್ನ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು. ಎಲ್ಲರಿಗೂ ನನ್ನ ಶುಭ ಆಶೀರ್ವಾದಗಳು ಎಂದರು..

ಕೃಷ್ಣಪ್ಪನವರು ತಮ್ಮ ಇಷ್ಟವಾದ ಮನೆಯ ಮುಂದಿನ ಜಗಲಿಯ ಮೇಲೆ ಕೂತು.. ತಮ್ಮ ಬೃಹತ್ ಸಂಸಾರದ ಪರಿವಾರವನ್ನು ಕಂಡು ಖುಷಿ ಪಟ್ಟರು.. ತಮ್ಮ ಹತ್ತು ಮಂದಿ ಮಕ್ಕಳು, ಅವರ ಬೆಳೆಯುತ್ತಿರುವ ಪರಿವಾರ, ಕಾರ್ಯಕ್ರಮ ಎಂದರೆ ಎಲ್ಲರೂ ಕೈಜೋಡಿಸಿಕೊಂಡು ಮುನ್ನುಗ್ಗುತ್ತಿರುವ ರೀತಿ ಎಲ್ಲವೂ ಸುಂದರ ಅನಿಸಿತು..

ಕುಟುಂಬ ಗೀತೆಯನ್ನು ಸಿದ್ಧಪಡಿಸಿ ಅದಕ್ಕೆ ರಾಗ ಜೋಡಿಸಿ ಹಾಡಿದ ಸಂದರ್ಭದಿಂದ ಕಾರ್ಯಕ್ರಮ ಶುರುವಾಯಿತು.. ಸ್ವರ್ಗದಿಂದ ಬಂದವರೆಲ್ಲ ಪಠದಲ್ಲಿ ಕೂತು ನೋಡುತ್ತಿದ್ದರು.. ಕೆಲವು ಸಣ್ಣ ಪುಟ್ಟ ಆಟಗಳು ಶುರುವಾದವು.. ಪ್ರತಿ ಅಂಕಕ್ಕಾಗಿ ಮಕ್ಕಳು, ಮೊಮ್ಮಕ್ಕಳು, ಛೋಟುಗಳು ಗಲಾಟೆ ಮಾಡುತ್ತಿದ್ದದ್ದು ಕಂಡು ಅಜ್ಜಯ್ಯ ಶಭಾಷ್ ಮಕ್ಕಳ.. ಮನೋರಂಜನೆಗೆ ಇರುವ ಕಾರ್ಯಕ್ರಮದಲ್ಲಿಯೇ ನೀವೆಲ್ಲ ಇಷ್ಟೆಲ್ಲಾ ಗಮನವಿಟ್ಟು ಆಟವಾಡುವಾಗ.. ಇನ್ನೂ ನಿಮ್ಮ ಜೀವನದಲ್ಲಿ ಸಾಧನೆ ಮಾಡುವ ಎಷ್ಟು ಜವಾಬ್ಧಾರಿಯುತರಾಗಿರುತ್ತೀರಾ.. ಸೂಪರ್ ಮಕ್ಕಳ ನಿಮ್ಮ ಏಳಿಗೆಯನ್ನು ಕಂಡು ಖುಷಿ ಪಡುವ ಸಂತಸ ನನ್ನದು ಎಂದರು..

ಪ್ರತಿಯೊಂದು ಆಟ... ಅದರ ಅಂಕಗಳಿಗೆ ಗುದ್ದಾಡುವುದು.. ಕಬಡ್ಡಿ ಆಟ.. ಗುಪ್ತ ನಿಧಿ ಹುಡುಕಾಟ, ಸಂಜ್ಞೆ ಆಟ, ನೃತ್ಯ.. ಎಲ್ಲವೂ ಬೊಂಬಾಟ್ ಆಗಿತ್ತು.. ಊಟವೊಂತು ಭರ್ಜರಿ... ಯಾವುದಕ್ಕೂ ಕಮ್ಮಿಯಿಲ್ಲದಂತೆ ನೆಡೆದ ಕಾರ್ಯಕ್ರಮ ಸೊಗಸಾಗಿತ್ತು..

ಊರಿನಲ್ಲಿ ಬೆಳಗಿನ ಹೊತ್ತು ನೆಡಿಗೆ.. ತೋಟ ಗದ್ದೆಗಳಿಗೆ ಭೇಟಿ ಆಹ್ಲಾದಕರ ವಾತಾವರಣ.. ನೋಡೇ ಲಕ್ಷ್ಮಿ ನನ್ನ  ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು, ಸೊಸೆಯಂದಿರು ಓಡಾಡೋದು.. ವಾಹ್ ಈ ಮೊಬೈಲ್ ಎಲ್ಲಾ ಕಡೆ ದಾಳಿಯಿಟ್ಟಿದೆ.. ಫೋಟೋಗಳು, ಸೆಲ್ಫಿಗಳು... ಸೂಪರ್... ಎನ್ನುತ್ತಾ ಅಜ್ಜಯ್ಯ ಎಲ್ಲರನ್ನು ಹಿಂಬಾಲಿಸತೊಡಗಿದರು..

ಅರೆ ಅರೆ ನಮ್ಮೂರಿನಲ್ಲಿ ರಾಮಮಂದಿರಕ್ಕೆ ಗುದ್ದಲಿ ಪೂಜೆ ನೆಡೆಯುತ್ತಿದೆ.. ಮುಂದಿನ ವರ್ಷ.. ನಮ್ಮ ಕಾರ್ಯಕ್ರಮ ಇಲ್ಲಿಯೇ ನೆಡೆಯಬಹುದು ಅಲ್ವೇ ಸುಬ್ಬಣ್ಣ..





ಸುಬ್ರಮಣ್ಯ ಏನೋ ಮಾತಾಡುತ್ತಿದ್ದವರು ಅಚಾನಕ್ ತಿರುಗಿ "ಆಗಬಹುದು ಅಜ್ಜಯ್ಯ.. ನೋಡೋಣ ಅಷ್ಟೋತ್ತಿಗೆ ಸಿದ್ಧವಾಗಿದ್ದಾರೆ.. ಪ್ರಯತ್ನ ಪಡಬಹುದು.. ಆಲ್ವಾ ವಿಜಯ"

"ಹೌದು ಕಣೋ ಸುಬ್ರಮಣ್ಯ.. ಅಜ್ಜಯ್ಯ ಆಗಲಿ ಪ್ರಯತ್ನ ಪಡುವೆವು.. ಅಜ್ಜ ನನಗೆ ಒಂದು ಅನುಮಾನ.. ಉತ್ತರ ಹೇಳುವಿರಾ.. "

"ಕೇಳು ಮಗು"

"ಈ ಮೇಲಿನ ವಿವರವೆಲ್ಲ ಹೇಳುತ್ತಿದ್ದೀರಲ್ಲ.. ಅದು ಹೇಗೆ ತಿಳಿಯುತ್ತದೆ ನಿಮಗೆ.. ನಮಗೆ ತಿಳಿಸುವ ವಿಧಾನವೇನು. ಮುಂದೆಯೂ ನಮಗೆ ಅನುಮಾನ ಇದ್ದರೇ ಅದನ್ನು ಬಗೆ ಹರಿಸುವ ಬಗೆ ಹೇಗೆ.. ಮತ್ತೆ ಅದು ನಮಗೆ ತಿಳಿಯುವ ಬಗೆ ಹೇಗೆ.. "

ನೋಡು ಮಗು.. ನನ್ನ ಮನೆಯ ಮೇಲೆ ಟಾಟಾ ಸ್ಕೈ ಬಾಣಲಿ ಇದೆಯಲ್ಲ..ಅದನ್ನು ಒಮ್ಮೆ ನೋಡು...ಮತ್ತೆ ಈ  ನನ್ನ ಮಾನಸ ಪುತ್ರಿ ವಿಶಾಲೂ ಮಗ ಶ್ರೀಕಾಂತ ಯೋಗ ನಿದ್ರೆಯಲ್ಲಿದ್ದಾನಲ್ಲ ಹಾಗೆ ಸುಮ್ಮನೆ ಒಂದು ಕ್ಷಣ ಕಣ್ಣು ಮುಚ್ಚಿ ಕುಳಿತರೆ ಸಾಕು ನನ್ನಿಂದ ನಿಮಗೆ ಎಲ್ಲಾ ವಿಚಾರಗಳೂ ತಿಳಿಯುತ್ತವೆ.. "


ವಿಜಯ ಸುಬ್ರಮಣ್ಯ ಇಬ್ಬರೂ ತಲೆಯಾಡಿಸಿದರು..

ಕಿತ್ತಾನೆ ಕುಟುಂಬ ಸದಸ್ಯರ ಪರವಾಗಿ ನಮ್ಮ ಪರಿವಾರದ ಹಿರಿಯ ಜೀವಗಳಿಗೆ ನಮ್ಮ ಪುಟ್ಟ ಗೌರವ ಪೂರ್ವಕವಾಗಿ ಸನ್ಮಾನವಿದೆ..

ಮೊದಲನೆಯದಾಗಿ ಶಂಕರಪ್ಪನವರ ಎರಡನೇ ಪತ್ನಿ ಶ್ರೀಮತಿ ಪಾರ್ವತಮ್ಮನವರು.. ತಮ್ಮ ಅಕ್ಕ ಅನ್ನಪೂರ್ಣ ಅವರ ಮಕ್ಕಳು ಸೇರಿದಂತೆ ತಮ್ಮ ಮಕ್ಕಳನ್ನು ಜೊತೆ ಜೊತೆಯಾಗಿ ಬೆಳೆಸಿದರು.. ಕುಟುಂಬದ ಕಷ್ಟದ ದಿನಗಳಲ್ಲಿ ಕುಗ್ಗದೆ.. ಸಂಸಾರ ನಿಭಾಯಿಸಿದರು..

ಎರಡನೆಯದಾಗಿ ಕೃಷ್ಣಪ್ಪನವರ ಮೊದಲ ಕೂಸು ಗಿರಿಜಾ.. ಹಿರಿಯಕ್ಕನಾಗಿ ತನ್ನ ತಮ್ಮ ತಂಗಿಯರನ್ನು  ನೋಡಿಕೊಂಡು.. ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದಾರೆ..

ಮೂರನೆಯವರಾಗಿ ಅಜ್ಜಯ್ಯನ ಮಾನಸ ಪುತ್ರಿ ಎಂದೇ ಹೆಸರಾದ . ಜೀವನದ ಕಷ್ಟ ನಷ್ಟಗಳನ್ನು ತಲೆಗೆ ಹಾಕಿಕೊಳ್ಳದೆ ದಿಟ್ಟತನದಿಂದ ಮುನ್ನುಗ್ಗುತ್ತಿರುವ ವಿಶಾಲೂ..


ಎಲ್ಲರೂ ಜೋರಾದ ಚಪ್ಪಾಳೆ.. ಹಿರಿಯರಿಂದ ಆಶೀರ್ವಾದ.. ಕಾರ್ಯಕ್ರಮಕ್ಕೆ ಕಳೆಕಟ್ಟಿತು..

ಅವರ ಖುಷಿ ನಮ್ಮ ಖುಷಿ.. ಅಣ್ಣಾವ್ರ  ಭಕ್ತ ಕುಂಬಾರ ಚಿತ್ರದ ಸಂಭಾಷಣೆ ನೆನಪಿಗೆ ಬಂತು..

ಇದು ಕಿತ್ತಾನೆ ಗ್ರಾಮದಲ್ಲಿ ನೆಡೆದ ಕುಟುಂಬ ಮಿಲನದ ಎರಡನೇ ಆವೃತ್ತಿಯ ಒಂದು ಪುಟ್ಟ ಝಲಕ್.. ಎಂದು ಬೊಬ್ಬೆ ರಾಮಯ್ಯನವರು ಹೇಳಿದಾಗ.. ಎಲ್ಲರಿಗೂ ಆನಂದ ಭಾಷ್ಪ... ನಾವಿರಲಿ ಇಲ್ಲದೆ ಇರಲಿ.. ನಾ ಹಚ್ಚಿದ ಕುಟುಂಬ ಜ್ಯೋತಿ ಸದಾ ಬೆಳಗುತ್ತಿರುತ್ತದೆ ಎಂಬ ಸಾರ್ಥಕತೆಯ ಭಾವ ಹೊತ್ತು ಸ್ವರ್ಗದ ಹಾದಿಯಲ್ಲಿ ಪುಷ್ಪಕವಿಮಾನವೇರಿ ಎಲ್ಲರಿಗೂ ಕೈ ಬೀಸಿದರು..


ಟಾಟಾ ಸ್ಕೈ ಬಾಣಲಿ ಇದಕ್ಕೆಲ್ಲ ಸಾಕ್ಷಿಯಾಗಿ ಮನೆಯ ಮೇಲೆ ನಗುತ್ತಿತ್ತು ಮುಂದಿನ ವಿವರಕ್ಕಾಗಿ ನಾ ಸಿದ್ಧವಾಗಿದ್ದೇನೆ ಎಂಬ ಭಾವದಲ್ಲಿ !!!