Sunday, March 24, 2019

ಗಂಗೆಯೇ ಮಡಿಲು ಗಂಗೆಯೇ ಕಡಲು...!

ಒಂದು ಕುಗ್ರಾಮ..ಅಮೋಘ ಇತಿಹಾಸವಿದ್ದರೂ ಕುಗ್ರಾಮವಾಗಿತ್ತು ..  ಮಳೆ ಬೆಳೆ ಎಂದರೆ ಅದೇನು ಅಂತ ಜನಗಳಿಗೆ ಮರೆತೇ ಹೋಗಿತ್ತು..  ಜಪ ತಪಗಳು ನೆಡೆದೆ ಇತ್ತು.. ಆದರೂ ಆ ಹಳ್ಳಿಗೆ ಭರವಸೆಯ ಬೆಳಕು ಮರೀಚಿಕೆ ಆಗಿತ್ತು.. ಪ್ರತಿ ಮಳೆಗಾಲದಲ್ಲಿಯೂ ದಟ್ಟವಾದ ಮೋಡಗಳು ಆವರಿಸಿಕೊಂಡು ಜನರಿಗೆ ಮಳೆ  ಬರಬಹುದೇನೋ ಎಂಬ ಆಶಯ ಬಿತ್ತುತ್ತಿತ್ತೇ ವಿನಃ ಮಳೆಯ ಸೋಂಕಿಲ್ಲದೆ ಸೊರಗಿತ್ತು.. ಬರುಬರುತ್ತಾ ಜನರು ಮಳೆ, ಮೋಡ, ಹನಿ, ಬೆಳೆ ಈ ಪದಗಳು ಪಠ್ಯ ಪುಸ್ತಕದ ಪದಗಳಾಗಿವೆ ಎಂದು ಮಾತ್ರ ತಿಳಿಯುವ ಹಾಗಿತ್ತು..

ಹೀಗೆ ಸಾಗುತ್ತ ಹೋದ ಕಾಲದಲ್ಲಿ ... ಒಂದು ದಿನ ಒಬ್ಬರು ಸಂತ ತೀರ್ಥಯಾತ್ರೆಯ ಹಾದಿಯಲ್ಲಿ ಆ ಊರಿಗೆ ಬಂದರು.. ನೀರಿಗಾಗಿ ಬವಣೆ ಪಡುತ್ತಿದ್ದ ಹಳ್ಳಿಯನ್ನೊಮ್ಮೆ ಸುತ್ತು ಹಾಕಿ.. ಊರಿನ ಮಧ್ಯಭಾಗದಲ್ಲಿದ್ದ ಅರಳಿ ಕಟ್ಟೆಗೆ ನಮಸ್ಕರಿಸಿ ಕುಳಿತುಕೊಂಡರು.. ಜನರಿಗೆಲ್ಲ ಕೆಲಸ ಕಾರ್ಯ ಏನೂ ಇರಲಿಲ್ಲ.. ದಿನವೂ ತಮ್ಮ ಊರಿನ ಭಾಗ್ಯದ ಬಗ್ಗೆ ಶಾಪ ಹಾಕುತ್ತ ಹಿಂದಿನ ಜೀವನವನ್ನು ನೆನೆಸಿಕೊಂಡು ಇಂದಿನ ಕಾಲದ ಬಗ್ಗೆ ಕೋಪದಿಂದ ಮಾತಾಡೋದೇ ಆಗಿತ್ತು ಕೆಲಸ..

ತನ್ನ ಪಾಡಿಗೆ ತಾನು ಕೂತಿದ್ದ ಸಂತನನ್ನು ಕಂಡು ಆ ಊರಿನ ಪ್ರಮುಖರಲ್ಲಿ ಒಬ್ಬರಾಗಿದ್ದ ಜ್ಞಾನದೇವ.. "ಸ್ವಾಮೀ ನಮಸ್ಕಾರ... ತಾವು ಯಾವ ಊರಿನವರು.. ಎಲ್ಲಿಗೆ ನೆಡೆಯುತ್ತಿದೆ ನಿಮ್ಮ ಪಯಣ.. ಈ ಊರಿಗೆ ಬಂದ ವಿಶೇಷವೇನು.. ಹೀಗೆ ಉಭಯಕುಶಲೋಪರಿ ಮಾತುಗಳನ್ನ ಕೇಳಿ.. ಕಣ್ಣು ಬಿಟ್ಟ ಸಂತ .. "ಮೆಲ್ಲನೆ ನಸು ನಕ್ಕು.. ತೀರ್ಥಯಾತ್ರೆಗೆ ಹೊರಟಿದ್ದೆ .. ನಿಮ್ಮ ಊರಿನ ಮಗ್ಗುಲಲ್ಲಿ ಹೋಗುವಾಗ ನಿಮ್ಮ ಊರಿನ ಹೆಸರು ನನ್ನ ಕಾಡಿತು.. ಮಳೆಹಳ್ಳಿ ಎಂಬ ಹೆಸರು.. ಯಾಕೋ ನನ್ನ ತಡೆದು ನಿಲ್ಲಿಸಿತು. ಮಳೆಗಾಲವಾದರೂ ಭೂಮಿ ಬಿರಿದು ಬಾಯಿ ಬಿಟ್ಟಿದೆ..ಊರ ಮುಂದಿನ  ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ ಕಾಣದೆ ಜೇಡರ ಬಲೆ ಕಟ್ಟಿದ್ದು ಕಂಡೆ..  ಜಾನುವಾರುಗಳು ಸೊರಗಿ ನಿಂತಿವೆ.. ಹೊಲಗದ್ದೆಗಳು ನೀರು ಕಾಣದೆ ಬರಡಾಗಿವೆ.. ಅದಕ್ಕಾಗಿ ನನ್ನ ತೀರ್ಥಯಾತ್ರೆಯನ್ನು ಕೊಂಚ ಮುಂದೆ ಮಾಡಿ.. ಈ ಹಳ್ಳಿಯಲ್ಲಿ ಕೆಲವು ದಿನಗಳನ್ನು ಕಳೆಯೋಣ ಅಂತ ಬಂದೆ.. ತೊಂದರೆಯಾಯಿತೇ.. ?"

"ಅಯ್ಯೋ ಸ್ವಾಮೀ ತೊಂದರೆಯೇನು ಬಂತು.. ನಮ್ಮ ಊರಲ್ಲಿ ತೊಂದರೆ ಎನ್ನೋದು ಹಾಸಿಕೊಂಡು ಮಲಗಿಬಿಟ್ಟಿದೆ.. ಹೊಸ ತೊಂದರೆ ಬರಲು ಸಾಧ್ಯವೇ ಇಲ್ಲ" ಮಾತಿನಲ್ಲಿ ಉದಾಸೀನ ರಾಜ್ಯಭಾರ ಮಾಡುತ್ತಿತ್ತು..

"ನಿಮ್ಮ ಹಳ್ಳಿಯನ್ನು ಮೂರು ಸಾರಿ ಸುತ್ತಿ ಬಂದಿದ್ದೇನೆ.. ನಾ ಹೇಳೋದನ್ನ ನೀವು ಕೇಳಿದರೆ.. ನಿಮ್ಮ ಊರಿನ ಹಣೆಬರಹವನ್ನು ನಾ ಕೊಂಚ ಬದಲಿಸಬಲ್ಲೆ ಆದರೆ ನಿಮ್ಮ ಸಹಕಾರವಿಲ್ಲದೆ ನಾ ಏನೂ ಮಾಡೋಕೆ ಆಗಲ್ಲ.. ಆಗುತ್ತಾ?"

"ಸರಿ ಸ್ವಾಮಿ.. ನಾವೂ ಏನೇನೂ ನೋಡಿ ಆಯ್ತು.. ಇದನ್ನು ನೋಡುತ್ತೇವೆ.. ಕೇಳುತ್ತೇವೆ.. ಅದೇನೋ ಹೇಳ್ತಿರೋ ಹೇಳಿ.. "
ಮಾತಿನಲ್ಲಿ ಬೇಜವಾಬ್ಧಾರಿ ಅನ್ನೋದಕ್ಕಿಂತ ಬೇಸರವೇ ಹೆಚ್ಚು ಮನೆ ಮಾಡಿತ್ತು.. "ಆಶಾಕಿರಣ" ಅಂದರೇನು  ಎಂದರೆ ಅದು ಆಶಾ ಮತ್ತು ಕಿರಣ ಇಬ್ಬರ ಹೆಸರು ಎನ್ನುವ ಮಟ್ಟಕ್ಕೆ ಹೋಗಿತ್ತು..

ಆ ಸಂತರು ತಮ್ಮ ಜೋಳಿಗೆಯಿಂದ ಒಂದು ರುದ್ರಾಕ್ಷಿ ಮಾಲೆ ತಗೆದು.. ಪಕ್ಕದಲ್ಲಿಟ್ಟುಕೊಂಡರು.. ಅವರ ಕೈಯಲ್ಲಿ ಒಂದು ಕರಿದಾರ ಕಟ್ಟಿಕೊಂಡಿದ್ದರು.. ಹಾಕಿದ್ದ ಉಡುಪು ಪೂರ್ಣ ಕಪ್ಪು..

ಅಷ್ಟುಹೊತ್ತಿಗೆ ಊರ ಜನರೆಲ್ಲಾ ಸೇರಿದ್ದರು.. ಕೆಲಸವಿರಲಿಲ್ಲ.. ಹೇಗೋ ಹೆಂಗೋ ಬೆಳಗಿನ ತಿಂಡಿಯಾಗಿತ್ತು.. ಇನ್ನು ಊಟದ ಸಮಯದ ತನಕ ಮಾಡೋಕೆ ಕೆಲಸವಿದ್ದರೆ ತಾನೇ.. ಸಂತರ ಚಟುವಟಿಕೆಗಳನ್ನೇ ನೋಡುತ್ತಾ ಕೂತಿದ್ದರು..

"ನೀವು ಒಬ್ಬೊಬ್ಬರೇ ನನ್ನ ಬಳಿಗೆ ಬನ್ನಿ... ನಿಮ್ಮ ಹೆಸರು ಬರೆದು.. ನಿಮ್ಮ ಮನೆಯಿಂದ ಒಂದು ಚೊಂಬು ನೀರನ್ನು ತಂದು ಈ ಅರಳಿಕಟ್ಟೆಯ ಹಿಂಭಾಗದಲ್ಲಿರುವ ಕೆರೆಯೊಳಗೆ ಹಾಕುತ್ತಾ ಹೋಗಿ .. "

ಜನಕ್ಕೆ ಹುಚ್ಚು ಅನ್ನಿಸಿತು.. ಕುಡಿಯೋದಕ್ಕೆ ನೀರಿಲ್ಲ.. ಇನ್ನೂ ಗುಂಡಿಯೊಳಗೆ ಸುರಿಯೋಕೆ ಎಲ್ಲಿಂದ ತರೋದು.. "ಸ್ವಾಮೀ ನೀರೆಲ್ಲಿ ಇದೆ ..ನೀರೇ ಇಲ್ಲ.. ಇನ್ನೂ ಗುಂಡಿಯೊಳಗೆ ಸುರಿಯೋದು... ಎಲ್ಲಿಂದ ತರೋದು.. ಆಗದು ಆಗದು " ಎನ್ನುತ್ತಾ ಎಲ್ಲರೂ ತಲೆ ಅಲ್ಲಾಡಿಸತೊಡಗಿದಾಗ.. ಸುಮಾರು ತೊಂಬತ್ತು ವರ್ಷಕ್ಕೂ ಹೆಚ್ಚಿನ ಅಜ್ಜ.. ತನ್ನ ಜೋಳಿಗೆಯಿಂದ ಒಂದು ಪುಟ್ಟ ನೀರಿನ ಸೀಸೆ ತೋರಿಸಿ.."ಸ್ವಾಮಿಗಳೇ ನಂತಾವ ಈಟೆ ನೀರಿರೋದು.. ಹಾಕ್ಲಾ?"

"ಅಜ್ಜ ಹನಿ ಹನಿಗೂಡಿದರೆ ಹಳ್ಳ ಅಂತಾರಲ್ವ.. ಹಾಕಿ ಅಜ್ಜ"

ಅಲ್ಲಿದ್ದ ಒಬ್ಬ ಪುಟ್ಟ ಬಾಲಕ.. "ಅಜ್ಜ ನಿನಗೆ ಊರುಗೋಲಾಗಿ ನಾ ಬರುವೆ.. " ಎನ್ನುತ್ತಾ ಅಜ್ಜನನ್ನು ಮೆಲ್ಲಗೆ ಕೆರೆಯ ದಂಡೆಗೆ ಕರೆದೊಯ್ದ.. ಅಜ್ಜ ತನ್ನ ಎರಡು ಕೈಗಳನ್ನು ಆಗಸಕ್ಕೆ ಮುಗಿಯುತ್ತಾ "ದೇವರೇ.. ಈ ಸಂತ ನಮ್ಮ ಈ ಹಳ್ಳಿಗೆ ಏನೋ ಒಳ್ಳೇದು ಮಾಡೋಕೆ ಬಂದವ್ರೆ.. ಅವರ ಆಸೆ ಕೈಗೂಡಲಿ ಕಣ್ಣಪ್ಪ" ಎನ್ನುತ್ತಾ "ಹರ ಹರ ಮಹಾದೇವ" ಎಂದು ಕೂಗಿ ತನ್ನ ಬಳಿಯಿದ್ದ ಸೀಸೆಯ ನೀರನ್ನು ಕೆರೆಗೆ ಹಾಕಿದ..

ಎಲ್ಲರೂ ಒಮ್ಮೆ ನಸು ನಕ್ಕರೂ.. ಆದರೂ ಎಲ್ಲರಿಗೂ ಏನೋ ತವಕ ಏನೋ ಆಗುತ್ತೆ ಅಂತ

ಆ ಪುಟ್ಟ ಬಾಲಕ ತನ್ನ ಗೆಳೆಯರ ಗುಂಪನ್ನು ಕರೆದು ತುಸು ಕಿವಿಯಲ್ಲಿ ಏನೋ ಹೇಳಿ.. ಎಲ್ಲರೂ ಓಡಿ ಹೋಗಿ.. ಪುಟ್ಟ ಪುಟ್ಟ ಪಾತ್ರೆಗಳಲ್ಲಿ ನೀರನ್ನು ತಂದು ತಂದು ಸುರಿಯತೊಡಗಿದರು.. ಬಾಲಕರ ನಂಬಿಕೆಯ ಶ್ರಮ ನೋಡಿ.. ಮಿಕ್ಕವರು ನಾವು ಹಾಗೆ ಮಾಡೋಣ ಅಂತ ಶುರು ಮಾಡಿದರು... ಈ ಸುದ್ದಿ ಕಾಳ್ಗಿಚ್ಚಿನಂತೆ ಸುತ್ತ ಮುತ್ತಲ ಹಳ್ಳಿಗಳಿಗೆಲ್ಲಾ ಹರಡಿತು.. ಗಾಡಿಗಳನ್ನು ಕಟ್ಟಿಕೊಂಡು ಬಂದು ತಮ್ಮ ಕೈಲಾದ ಸಹಾಯ ಮಾಡತೊಡಗಿದರು.. ಹಳ್ಳಿಗಳಲ್ಲಿನ ತರುಣರು.. ಸನಕೆ, ಗುದ್ದಲಿ, ಪಿಕಾಸಿ ಹೀಗೆ ಅನೇಕ ಹತಾರಗಳನ್ನು ತೆಗೆದುಕೊಂಡು.. ಹಳ್ಳಕೊಳ್ಳವಾಗಿದ್ದ ಕೆರೆಯನ್ನು ಸಮತಟ್ಟು ಮಾಡಿದರು.. ನೀರು ನಿಧಾನವಾಗಿ ಹರಡಿಕೊಳ್ಳತೊಡಗಿತು.. ಒಳ್ಳೆಯ ಪವಾಡವೆನ್ನುವಂತೆ.. ನಿಧಾನವಾಗಿ ಮೊಣಕಾಲತನಕ ತುಂಬುವಷ್ಟು ಒಂದು ಕಡೆ ನೀರು ಜಮಾ ಆಗಿತ್ತು...

ಅಂದು ಪೂರ್ಣಚಂದ್ರ ತುಂಬಿದ ರಾತ್ರಿಯಾಗಿತ್ತು.. ಸಂತರು  ಸ್ನಾನ ಜಪತಪಾದಿಗಳನ್ನು ಮುಗಿಸಿ.. ಅರಳಿಕಟ್ಟೆಯಲ್ಲಿಯೇ ಆಗಸ ನೋಡುತ್ತಾ ಕೂತಿದ್ದರು... ಹಳ್ಳಿಯವರೆಲ್ಲ ಹೊತ್ತಾಗಿತ್ತು ಅಂತ ತಮ್ಮ ತಮ್ಮ ಮನೆಗಳಿಗೆ ತೆರಳಿ ಮಲಗಿದರು.. ಸುಮಾರು ನಡುರಾತ್ರಿ ಸಂತರು ... ತಮ್ಮ ಜೋಳಿಗೆಯಿಂದ ಒಂದು ರುದ್ರಾಕ್ಷಿ ಮಾಲೆಯನ್ನು ಕೈಗೆ ತೆಗೆದುಕೊಂಡು.. ಮಿಕ್ಕಿದ್ದನ್ನು ಕಟ್ಟೆಯಲ್ಲಿಯೇ ಬಿಟ್ಟು,  ಮೆಲ್ಲಗೆ ಎದ್ದು ನಿಧಾನವಾಗಿ ಆ ಕತ್ತಲೆಯಲ್ಲಿ ಕೆರೆಯೆಡೆಗೆ ತೆರಳಿದರು.... ಮನದಲ್ಲಿ ಶಾಂತಚಿತ್ತರಾಗಿ.. ಪೂರ್ವ ದಿಕ್ಕಿಗೆ ನಿಂತು ಮೊಣಕಾಲುದ್ದದ ನೀರಿನಲ್ಲಿ ನಿಂತು ತಮಗೆ ಗೊತ್ತಿದ್ದ ಮಂತ್ರವನ್ನು ಜಪಿಸತೊಡಗಿದರು... ತಣ್ಣನೆ ಗಾಳಿ.. ಕಾಲಕೆಳಗೆ ತಣ್ಣಗಿದ್ದ ಮಣ್ಣು.. ಸೊಳ್ಳೆಯ ಝೇಂಕಾರ.. ಸುತ್ತಮುತ್ತಲ ಹಳ್ಳಿಯ ನಾಯಿಗಳ ಬೊಗಳುವಿಕೆ.. ನರಿಗಳ ಊಳಿಡುವಿಕೆ.. ಯಾವುದು ಅವರ ಕಿವಿಗೆ ಬೀಳುತ್ತಿಲ್ಲ ಎನ್ನುವಷ್ಟು ತನ್ಮಯತೆಯಿಂದ ಜಪಿಸತೊಡಗಿದರು..

ಬೆಳಕಾಗಿತ್ತು.. ಹಳ್ಳಿಯ ಪುಟ್ಟ ಬಾಲಕರು... ಅರಳಿಕಟ್ಟೆಯ ಬಳಿಗೆ ಬಂದಾಗ ಸಂತರ ಕಮಂಡಲ, ಬ್ರಹ್ಮದಂಡ, ಜೋಳಿಗೆ ಮಾತ್ರ ಇತ್ತು... ಅಚ್ಚರಿಯಿಂದ ಅತ್ತಿತ್ತ ಹುಡುಕಾಟತೊಡಗಿದಾಗ.. ಒಬ್ಬ ಬಾಲಕ  ನೋಡ್ರೋ ನಮ್ಮ ಸಾಮಿಗಳು ಅಲ್ಲಿ ಇದ್ದಾರೆ.. ಎಂದು ಬೆರಳು ಮಾಡಿ ತೋರಿಸಿದ..

ಚಿ.  ವಿಷ್ಣು ಕಲಾಕುಂಚ 
ಊರಿನವರೆಲ್ಲ ಅಲ್ಲಿಗೆ ಬಂದು ಆ ದೃಶ್ಯವನ್ನು ಎವೆಯಿಕ್ಕದೆ ನೋಡತೊಡಗಿದರು.. ಕಪ್ಪು ವಸ್ತ್ರದ, ಶ್ವೇತ ಕೇಶರಾಶಿ, ಬಿಳಿ ಗಡ್ಡದ ಸ್ವಾಮಿಗಳು ರುದ್ರಾಕ್ಷಿಯನ್ನು ಕೈಯಲ್ಲಿ ಹಿಡಿದು ಜಪಿಸುತ್ತಿದ್ದರು.. ಯಾರಿಗೂ ಹತ್ತಿರ ಹೋಗುವ ಧೈರ್ಯ ಬರಲಿಲ್ಲ.. ಆದರೆ ಅಚ್ಚರಿ ಎನ್ನುವಂತೆ.. ಮೊಳಕಾಲುದ್ದ ಇದ್ದ ನೀರು ಅವರ ಮಂಡಿಯ ತನಕ ಬಂದಿತ್ತು.. ಸಂಜೆ ಸೂರ್ಯಾಸ್ತ ಆಗುವ ತನಕ ಅಲ್ಲಿಂದ ಕದಲಿರಲಿಲ್ಲ ಅವರು.. ಊರಿನ ಜನರೂ ತಮ್ಮ ಕೆಲಸ ಕಾರ್ಯ ಬಿಟ್ಟು.. ಊಟ ತಿಂಡಿ ಮರೆತು.. ಅಲ್ಲಿನ ದೃಶ್ಯವನ್ನೇ ನೋಡುತ್ತಾ ಕೂತಿದ್ದರು..

ಸಂಜೆ ಸೂರ್ಯಾಸ್ತ.. ಆಗಸದಲ್ಲಿ ರಂಗು ತುಂಬಿದ್ದ ಸೂರ್ಯ ಅಸ್ತಮಿಸುತ್ತಿದ್ದ.. ಸಂತರು ತಮ್ಮ ಬೊಗಸೆಯಲ್ಲಿ  ನೀರು ತುಂಬಿಕೊಂಡು ಮೂರು ಬಾರಿ ಅಸ್ತಮಿಸುತ್ತಿದ್ದ ಸೂರ್ಯನ ಕಡೆ ತಿರುಗಿ ಅರ್ಘ್ಯ ಕೊಟ್ಟರು.. ಸೂರ್ಯದೇವನಿಗೆ ನಮಿಸಿ.. ಮೆಲ್ಲನೆ ಕೆರೆಯಿಂದ ಹೊರಗೆ ಬಂದು.. ಒದ್ದೆಯಾಗಿದ್ದ ಮೈಯನ್ನು ಒರೆಸಿಕೊಂಡು, ಜೋಳಿಗೆಯಲ್ಲಿದ್ದ ಕಾವಿಬಟ್ಟೆಯನ್ನು ಧರಿಸಿ.. ವಿಭೂತಿ ಬಳಿದು ಕೊಂಡು.. ಮತ್ತೆ ಜಪಕ್ಕೆ ಕೂತರು...

ಫಲಾಹಾರಗಳು ಬಂದಿದ್ದರೂ, ಅದನ್ನು ಮುಟ್ಟಿರಲಿಲ್ಲ.. ಕತ್ತಲಾಯಿತು.. ಇನ್ನೊಂದು ದಿನ ಕಳೆಯಿತು.. ಅರಳೀಕಟ್ಟೆಯಲ್ಲಿಯೇ ಜಪಮಾಡುತ್ತಾ ಕೂತಿದ್ದ ಅವರ ಮೊಗದಲ್ಲಿ ಅದೇನೋ ಕಾಂತಿಯಿತು.. ಸಮಾಧಾನವಿತ್ತು... ಆಶಯವಿತ್ತು.. ತಾನು ಕೈಗೊಂಡ ಕಾರ್ಯ ಪೂರ್ತಿಯಾಗುತ್ತೆ ಎನ್ನುವ ವಿಶ್ವಾಸ ಅವರ ಮೊಗದಲ್ಲಿ ಎದ್ದು ಕಾಣುತಿತ್ತು..

ಮಧ್ಯರಾತ್ರಿಯಲ್ಲಿ ಸಿಡಿಲು, ಮಿಂಚು, ಗುಡುಗು ಕೂಡಿದ ಆರ್ಭಟ ಶುರುವಾಯಿತು.. ಹಳ್ಳಿಗರಿಗೆ ಕುತೂಹಲ ಏನಿದು ಶಬ್ದ ಎಂದು.. ಸೆಕೆ ಎಂದು ಹೊರಗೆ ಮಲಗಿದ್ದವರೆಷ್ಟೋ ಜನಕ್ಕೆ ಈ ಆರ್ಭಟ ಕೇಳಿ ಎದ್ದು ಕುಳಿತರು... ದಪ್ಪ ದಪ್ಪ ಹನಿಗಳ ಮಳೆ ಶುರುವಾಯಿತು.. ನೋಡು ನೋಡುತ್ತಲೇ ಎಲ್ಲರೂ ಮನೆಯಿಂದ ಹೊರಗೆ ಆ ಬೆಳದಿಂಗಳ ಬೆಳಕಲ್ಲಿಯೇ ಮಳೆಯಲ್ಲಿ ಮಿಂದು ನಲಿದರು..

ಒಂದು ವಾರ ಸತತ ಮಳೆಯಿಂದ.. ಸುತ್ತ ಮುತ್ತಲ ಎಲ್ಲಾ ಕೆರೆಕಟ್ಟೆಗಳು ಕೋಡಿ ಬಿದ್ದವು.. ಹೈನುಗಾರಿಕೆಗೆ ಬಲ ಬಂದಿತು.. ರೈತರು ಬೇಸಾಯ ಆರಂಭಿಸಿದರು.. ಎಲ್ಲರೂ ಈ ಊರಿಗೆ ಮತ್ತೆ ಈ ತರಹ ಬರಗಾಲ ಬರಬಾರದೆಂದು..ನೀರನ್ನು ಶೇಖರಿಸುವ ಕಾಯಕ್ಕೆ ಬಿದ್ದರು.. ಜೊತೆಗೆ ಸಂಜೆಯಲ್ಲಿ ಕಾಲ ಹರಣ ಮಾಡದೆ ತಮಗೆ ಗೊತ್ತಿದ್ದ ಅನೇಕ ವಿಷಯಗಳನ್ನು ಎಲ್ಲರಿಗೂ ಹೇಳಿಕೊಡತೊಡಗಿದರು.. ನೀರಿನ ಬೆಲೆಯನ್ನು ಸಾರುವ ಗೋಡೆಬರಹಗಳು ಎದ್ದು ಬಂದವು..

ಎಲ್ಲೆಡೆ ಸಂಭ್ರಮ.. ಎಲ್ಲೆಡೆ ಖುಷಿ.. ಸಂತರು ಹಳ್ಳಿಯ ಜನರಿಗೆ ಹೇಳಿದ್ದು ಇಷ್ಟೇ..

"ಅಸಾಧ್ಯ ಎಂದು ಯಾವತ್ತೂ ಹೇಳಬೇಡಿ.. ಒಂದೇ ಅಕ್ಷರ ತೆಗೆದುಬಿಡಿ.. ಆಗ ಅದು ಆಗುತ್ತೆ "ಸಾಧ್ಯ".. ಒಂದಾಗಿದ್ದಾರೆ ಎಲ್ಲವೂ ಸಾಧ್ಯ.. " ಎನ್ನುತ್ತಾ ಕೈಮುಗಿದು.. ಇನ್ನೊಂದು ಹಳ್ಳಿಗೆ ಹೋಗುತ್ತಿದ್ದೇನೆ.. ಮತ್ತೆ ಮರಳಿ ಬರುತ್ತೇನೆ ಎಂದು ಎಲ್ಲರಿಗೂ ಕೈ ಬೀಸುತ್ತಾ ಹೊರಟರು..

ಎಲ್ಲಿಗೆ ಅಂದ್ರ.. ಇನ್ನೊಂದು ಹಳ್ಳಿಗೆ.. ಇನ್ನೊಂದು ಕುಗ್ರಾಮಕ್ಕೆ.. ಇನ್ನೊಂದು ಅಭಿವೃದ್ಧಿಯ ಹಾದಿಯನ್ನು ನೋಡಲು.. !

ನಾವೂ ಅವರ ಬರುವಿಕೆಗೆ ಕಾಯಬೇಕೆ ಅಥವ ನಾವೇ ಕೆಲಸ ಶುರು ಹಚ್ಚಿಕೊಳ್ಳೋಣವೇ.. !!!!

(ನನ್ನ ಪ್ರೀತಿಯ ಸಹೋದರಿಯಾರಾದ ಸಮೀಕ್ಷಾ ವಿ ಚಿನ್ನು ಮತ್ತು ಸೌಮ್ಯ ಭಗವತ್ ಅವರ ಬರಹಗಳನ್ನು ಓದಿದಾಗ ಮನದಲ್ಲಿ ಒಂದು ರೀತಿಯ ಸ್ಫೂರ್ತಿ ತುಂಬಿಬಂದಿತ್ತು.. ಅದರಲ್ಲೂ ಶ್ರೀ ನರೇಂದ್ರ ಮೋದಿಯವರ ಗಂಗಾ ನದಿಯಲ್ಲಿನ ದೃಶ್ಯ ಮನದಲ್ಲಿ ಎಬ್ಬಿಸಿದ ತರಂಗಗಳು ಈ ಲೇಖನಕ್ಕೆ ಸ್ಫೂರ್ತಿ.. ನನ್ನ ಅಣ್ಣನ ಮಗ ವಿಷ್ಣುವಿಗೆ ಈ ಚಿತ್ರವನ್ನು ಬರೆದು ಕೊಡು ಎಂದಾಗ.. ಶಾಲೆಯ ಪರೀಕ್ಷೆಗಳು ಇದ್ದರೂ.. ಸಮಯ ಮಾಡಿಕೊಂಡು ಬಿಡಿಸಿದ ಈ ಚಿತ್ರದ ಸುತ್ತಲೂ ಈ ಲೇಖನವನ್ನು ಹೆಣೆಯಲು ಸ್ಫೂರ್ತಿ ನೀಡಿತು..  ಈ ಲೇಖನದ ಆಶಯವನ್ನು ಅರ್ಥೈಸಿಕೊಳ್ಳಲು ಓದುಗರಿಗೆ ಬಿಟ್ಟಿದ್ದೇನೆ ......ಶುಭವಾಗಲಿ)


ಕೃಪೆ : ಸೌಮ್ಯ ಭಾಗವತ್ ಫೇಸ್ಬುಕ್ ಫೋಟೋ 

18 comments:

  1. An inspiring story.... A leader is not a person who does all the work he is the one whose work will inspire others to better themselves ... Super sri

    ReplyDelete
  2. Wowwww super Sri
    ಒಂದು ಒಳ್ಳೆಯ ಸ್ಪೂರ್ತಿದಾಯಕ ಹಾಗೂ ಸುಂದರವಾದ ಬರವಣಿಗೆ ಶ್ರೀ.. ವಿಷ್ಣುವಿನ ಚೆಂದದ ಚಿತ್ರ ಬರಹದ ವಿಶೇಷತೆಯನ್ನು ಹೊಂದಿದೆ. ಶುಭವಾಗಲಿ ಹೀಗೆ ಇನ್ನೂ ಉತ್ತಮ ಬರಹಗಳು ಮೂಡಲಿ ಎಂದು ಆಶಿಸುವೆ ಶ್ರೀ

    ReplyDelete
  3. As usual awesome narration. It's true if people work together there will be better tomorrow and an able leader can do wonders

    ReplyDelete
  4. Channagide chikkapa
    Its very deep..
    The comparison is just awsm

    ReplyDelete
  5. Super write up....

    ReplyDelete
  6. ಉತ್ತಮ ಸ್ಫೂರ್ತಿ ತುಂಬಿದ ಬರಗಲಹ ಶ್ರೀಮಾನ್.
    ಬರ ಬಿದ್ದ ಮನಸುಗಳಿಗೂ ಇದು ಅನ್ವಯವಾಗುವ ಅಕ್ಷರ ಅಮೃತ ಧಾರೆ.
    ಸಾಧ್ಯವೆನ್ನುವ ಗುರಿಯನು ನಮ್ಮೊಳಗೆ ಪ್ರಚೋದಿಸಿದ ನಿಮ್ಮ ಶ್ರಮಕ್ಕೆ ನಮ್ಮ ಶರಣು.
    ಚಿರಂಜೀವಿ ವಿಷ್ಣುವಿನ ಭವಿತವ್ಯ ಬಂಗಾರಮಯವಾಗಿರಲಿ ಎಂಬುದು ನಮ್ಮ ಹಾರೈಕೆ.

    ReplyDelete
  7. ಶ್ರೀ ನಿನ್ನ ಬರವಣಿಗೆಯ ವಿಶೇಷತೆಯೆಂದರೆ ಹೀಗೆ ಎಲ್ಲೊ ಶುರುಮಾಡಿ ನಮ್ಮ ಹೃದಯದ ತಂತಿಗಳಿಗೆ ಬೆಸೆಯುವೆ.ಆ ಸಂತನೇ ಈ ಬಾರಿಯೂ ನಮ್ಮ ಕಾಪಾಡಲಿ...ಚಿ ವಿಷ್ಣುವಿನ ಚಿತ್ರ ಸುಂದರವಾಗಿದೆ. ನಿನ್ನ ಬರಹ ಹೀಗೇ ಸಾಗಲಿ..����������

    ReplyDelete