ಒಂದೂರಿನಲ್ಲಿ ಒಬ್ಬ ರಾಜ ಇದ್ದ..
ಹೋಗತ್ತಾ...
ಮತ್ತೆ ಶುರುವಾಯಿತಾ ಕಾಗೆ ಗುಬ್ಬಕ್ಕನ ಕತೆ..
ರಾಜ ಇದ್ದ ರಾಣಿ ಇದ್ದಳು ಮಕ್ಕಳು ಇದ್ದ್ರೂ.. ಶತ್ರುಗಳು ರಾಜ್ಯವನ್ನು ಮುತ್ತಿದರು...
ಟುರ್ರ್ ಬ್ಯಾ ಬ್ಯಾ.. ಲೊಕೇಶನ್ ಶಿಫ್ಟ್ ಮಾಡೋಣ..
ದಟ್ಟ ಕಾಡು.. ಕತ್ತಲೆಯೇ ಹೆದರಿಕೊಳ್ಳಬೇಕು ಅಷ್ಟು ಕಾರ್ಗತ್ತಲೆ.. ಪೂರ್ವಿ ಮತ್ತು ಸಮೀರ್ ನೆಡೆದು ಹೋಗ್ತಾ ಇದ್ದರು.. ಸೆಕೆಂಡ್ ಶೋ ಸಿನಿಮಾ ನೋಡಿಕೊಂಡು ಹೊರಟಾಗ.. ಬೈಕ್ ಪಂಚರ್ ಆಗಿತ್ತು..
ಮನೆಗೆ ಕಾಡು ದಾರಿಯಲ್ಲಿ ನೆಡೆದು ಹೋದರೆ ಒಂದು ಕಿಮೀ.. ಬೈಕಿನಲ್ಲಿ ಸುತ್ತಿಕೊಂಡು ಪೇಟೆ ರಸ್ತೆಯಲ್ಲಿ ಹೋದರೆ ಐದು ಕಿಮೀಗಳು..
ಮೌನ ಮುರಿದು ಪೂರ್ವಿ "ಯಾಕೋ ಇವತ್ತು ಬೈಕ್ ಕೆಟ್ಟಿದ್ದು ಒಳ್ಳೆಯದಾಯ್ತು ಸಮೀರ್.. ಇಂದು ಈ ರಾತ್ರಿಯಲ್ಲಿ ನೆಡೆದೆ ಹೋಗೋಣ ಕಣೋ.. . ಮೊಬೈಲ್ ಇದೆ.. ಆರಾಮಾಗಿ ಮಾತಾಡಿಕೊಂಡು ಹೋಗೋಣ ಕಣೋ"
"ನೆಡೆಯೋಕೆ ಆಗತ್ತೇನೆ ನಿಂಗೆ .. ಆಟೋಗೆ ನೂರು ಕೊಟ್ಟರೆ ಹತ್ತು ನಿಮಿಷ ಮನೆಗೆ ಬಿಸಾಕ್ತಾನೆ.. "
"ಬೇಡ ಕಣೋ ಸಮೀರಾ.. ತುಂಬಾ ದಿನ ಆಯ್ತು ನಾವು ವಾಕಿಂಗ್ ಮಾಡಿ.. ಪ್ಲೀಸ್ ಕಣೋ.. ಬೇಕಾದರೆ ನಿನಗೆ ಒಂದು ಸಿಗರೇಟ್ ಸೇದುವ ಅವಕಾಶ ಕೊಡ್ತೀನಿ.. ಒಂದೇ ಅಂದರೆ ಒಂದೇ.. ಸರೀನಾ".. ಕಣ್ಣು ಹೊಡೆದಳು ಪೂರ್ವಿ..
"ಬೇಡ ಪೂರ್ವಿ.. ಸಿಗರೇಟ್ ಬಿಡುವ ನಿರ್ಧಾರವಾಗಿದೆ.. ಇಂದು ಮಂಗಳವಾರ ಬೆಳಿಗ್ಗೆ ಇಂದ ಒಂದು ಸಿಗರೇಟ್ ಸೇದಿಲ್ಲ... ಬೆಳಿಗ್ಗೆ ಎದ್ದಾಗ ಸಿಗರೇಟ್ ಬಿಡಬೇಕು ಅನ್ನಿಸಿತು.. ಇಂದಿನಿಂದಲೇ ಬಿಟ್ಟಾಯ್ತು.. ಸರಿ .. ನೆಡೆದೆ ಹೋಗೋಣ.. ಕಾಲು ನೋವು ಬಂದರೆ ಹೇಳು.. ಆಯ್ತಾ.. "
"ಮುದ್ದು ಕಣೋ ನೀನು.. "
ಕೃಪೆ : ಗೂಗಲೇಶ್ವರ |
ಸುಯ್ ... ದಪ್ ಅಂಥಾ ಏನೋ ಬಿದ್ದ ಸದ್ದಾಯಿತು.. ಗವ್ ಗತ್ತಲೆ ಏನೂ ಕಾಣಿಸುತ್ತಿರಲಿಲ್ಲ.. ಮೊಬೈಲಿನ ಟಾರ್ಚ್ ಬೆಳಕಲ್ಲಿ ನೋಡಿದಾಗ ಇಬ್ಬರಿಗೂ ಬೆನ್ನಲ್ಲಿ ಚಳಿಮೂಡಿತು .. ಮೈಯೆಲ್ಲಾ ಸಣ್ಣಗೆ ಬೆವರಲು ಶುರುವಾಯಿತು..
ಸ್ವಲ್ಪ ಧೈರ್ಯ ಮಾಡಿಕೊಂಡು ಸದ್ದು ಬಂದ ಕಡೆ ಹೆಜ್ಜೆ ಹಾಕಿದ..
ಮರದ ಕೆಳಗೆ ಒಂದು ದೇಹ ಬಿದ್ದಿತ್ತು..
ಏನೂ ಮಾಡೋದು ತಿಳಿಯದೆ ಮೊಬೈಲ್ ಬೆಳಕಲ್ಲಿ ಇಬ್ಬರೂ ಹತ್ತಿರ ಹೋದರು.. ಮುಖಕ್ಕೆ ಬೆಳಕು ಬಿಟ್ಟಾಗ.. ಗೊತ್ತಾಯಿತು ಯಾವುದೋ ಗುರುತಿಲ್ಲದ ವ್ಯಕ್ತಿ ಎಂದು.. ಶಿಸ್ತಾಗಿ ವಸ್ತ್ರ ಧರಿಸಿದ್ದ ವ್ಯಕ್ತಿ.. ಬೆರಳುಗಳಲ್ಲಿ ಉಂಗುರಗಳು, ಕತ್ತಿನಲ್ಲಿ ಸರ.. ಕೈಯಲ್ಲಿ ಬ್ರೆಸ್ಲೇಟ್ ಇತ್ತು.. ಮೊಗದಲ್ಲಿ ನಗುವಿತ್ತು... ಅದನ್ನೆಲ್ಲ ಪೂರ್ವಿಗೆ ಹೇಳಿದ .. . ಆ ಸಾಧಾರಣ ಬೆಳಕಲ್ಲಿಯೂ ಸಮೀರಾ ಆ ವ್ಯಕ್ತಿಯನ್ನು ವಿಶ್ಲೇಷಿಸಿದ್ದು ಪೂರ್ವಿಗೆ ಆಶ್ಚರ್ಯವಾಗಿತ್ತು.. ಮೊದಲೇ ಹೆದರಿಕೆ.. ಕತ್ತಲೆ.. ಜಿಯ್ ಎನ್ನುವ ಕಾಡು.. ಜೊತೆಯಲ್ಲಿ ಈ ರೀತಿಯಲ್ಲಿ ಬಿದ್ದಿದ್ದ ಒಂದು ಅನಾಮಧೇಯ ದೇಹ..
ಏನಪ್ಪಾ ಮಾಡೋದು.. ಅರೆಘಳಿಗೆ ಯೋಚಿಸಿದ.. ಇಲ್ಲೇ ನಿಂತರೆ.. ಬೇಡದ ವಿಷಯಕ್ಕೆ ಸಿಕ್ಕಿಹಾಕಿಕೊಳ್ಳುವ ಭಯ.. ಹಾಗೆ ಹೋಗೋಣ ಅಂದರೆ.. ಮಾನವೀಯತೆ ಕೂಗಿ ಕರೆಯುತ್ತಿತ್ತು..
"ಪೂರ್ವಿ ನಿನ್ನ ಹತ್ತಿರ ಇರುವ ಬಾಟಲಿನಲ್ಲಿ ನೀರಿದೆಯಾ ನೋಡು.. "
"ಇದೆ ಕಣೋ ಈ ಚಳಿಯಲ್ಲಿ ನೀರನ್ನು ಕುಡಿಯಲೇ ಇಲ್ಲ.. ಪೂರಾ ತುಂಬಿದೆ.. "
ಬಾಟಲನ್ನ ತೆಗೆದುಕೊಂಡು ನೀರನ್ನು ಕೈಯಲ್ಲಿ ತುಂಬಿಕೊಂಡು ವ್ಯಕ್ತಿಯ ಮೊಗಕ್ಕೆ ಎರಚಿದ.. ಏನೂ ಚಲನೆಯಿರಲಿಲ್ಲ.. ಮತ್ತೊಮ್ಮೆ ಇನ್ನು ಸ್ವಲ್ಪ ನೀರನ್ನು ಮುಖಕ್ಕೆ ಎರಚಿ.. ಒಂದೆರಡು ಹನಿಯನ್ನು ಆ ವ್ಯಕ್ತಿಯ ಬಾಯಿಗೆ ಹಾಕಿದ.. ಅವನ ಎದೆಯ ಮೇಲೆ ಕಿವಿಯಿಟ್ಟು ಆನಿಸಿದ.. ಹೃದಯ ಹೋರಾಡುತ್ತಿದ್ದ ಸದ್ದು ಕೇಳಿಸುತ್ತಿತ್ತು.. ಆ ವ್ಯಕ್ತಿ ಮೆಲ್ಲಗೆ ನಾಲಿಗೆಯನ್ನು ಅತ್ತಿತ್ತ ಹೊರಳಾಡಿಸಿತು.. ದೇಹದಲ್ಲಿ ತುಸು ಚಾಲನೆ ಕಂಡು ಬಂತು..
"ಸರ್ ಸರ್.. ಏನಾಯಿತು ಯಾಕೆ ಹೀಗೆ ಬಿದ್ದಿದ್ದೀರಾ.. .. "
ಏನೋ ಮಾತಾಡಲು ಪ್ರಯತ್ನ ಮಾಡುತ್ತಿತ್ತು.. ಆದರೆ ಧ್ವನಿ ಹೊರಗೆ ಬರುತ್ತಿಲ್ಲ.. ಸಮೀರಾ ಧೈರ್ಯ ಮಾಡಿ.. ಆ ವ್ಯಕ್ತಿಯ ತಲೆಯನ್ನು ಹಿಡಿದುಕೊಂಡು ಮೆಲ್ಲನೆ ಮರಕ್ಕೆ ಒರಗಿಸಿ ಕೂರಿಸಿದ.. ಬಾಟಲ್ ಕೊಟ್ಟು "ಸ್ವಲ್ಪ ನೀರು ಕುಡೀರಿ ಸರ್" ಎಂದ..
ನೀರು ಕುಡಿದ ವ್ಯಕ್ತಿಗೆ ತುಸು ಚೈತನ್ಯ ಬಂದ ಹಾಗೆ ಕಂಡಿತು.. ಆದರೂ ಮಾತುಗಳು ಕಷ್ಟವಾಗಿದ್ದವು.. "ಪೂರ್ವಿ ನಿನ್ನ ಬ್ಯಾಗಿನಲ್ಲಿ ಇಂಟರ್ವಲ್ ಸಮಯದಲ್ಲಿ ತೆಗೆದುಕೊಂಡ ಚಾಕೊಲೇಟುಗಳು ಸ್ವಲ್ಪ ಉಳಿದಿದ್ದವು . ಸ್ವಲ್ಪ ಕೊಡು.. "
ಚೊಕೊಲೇಟ್ ಆ ವ್ಯಕ್ತಿಯ ಬಾಯಿಗೆ ಹೋಯಿತು.. ಸ್ವಲ್ಪ ಚೈತನ್ಯ ಬಂದ ಹಾಗೆ ಅನ್ನಿಸಿತು..
ಮತ್ತೊಂದು ಗುಟುಕು ನೀರು.. "ಸರ್... ನಾನು... ಸಿನಿಮಾ..... .. ಮನೆಗೆ.... .. ತಲೆ.... ಸುತ್ತು.... ಅನುಭವ.. ಹಾಗೆ ಕುಸಿದು ಬಿದ್ದೆ.. " ಅರ್ಧ ಅರ್ಧ ಮಾತುಗಳು...
ಸಮೀರಾ ಮೆಲ್ಲನೆ ಆ ವ್ಯಕ್ತಿಯ ಬೆನ್ನು ತಲೆ ಸವರುತ್ತಾ ಯೋಚಿಸತೊಡಗಿದ.. .. ಸಿನಿಮಾ ನೋಡೋಕೆ ಬಂದಿದ್ದ ವ್ಯಕ್ತಿ ಇಷ್ಟು ಬೇಗ ಹೇಗೆ ಮುಂದಕ್ಕೆ ಹೋದ ಅಂತ.. ಕಾರಣ.. ಇವರು ಬೈಕ್ ಸ್ಟಾರ್ಟ್ ಮಾಡುವಾಗ ಅರಿವಾಗಿತ್ತು ಪಂಚರ್ ಆಗಿದೆ ಎಂದು.. ನಂತರ ಪಾರ್ಕಿಂಗ್ ಪ್ರದೇಶದಲ್ಲಿದ್ದ ವ್ಯಕ್ತಿಯ ಹತ್ತಿರ ಪಂಚರ್ ಅಂಗಡಿ ಹತ್ತಿರವಿದೆಯಾ ಎನ್ನುವ ಪೆದ್ದು ಪ್ರಶ್ನೆ ಕೇಳಿದ್ದು.. "ಆವ ತಮಾಷೆ ಮಾಡ್ತೀರಾ ಸರ್ ದೆವ್ವಗಳು ಓಡಾಡುವ ಸಮಯದಲ್ಲಿ ಪಂಚರ್ ಅಂಗಡಿ ಯಾರು ತೆಗೆದಿರುತ್ತಾರೆ.. ಇಲ್ಲೇ ಬಿಟ್ಟು ಹೋಗಿ .. ಬೆಳಿಗ್ಗೆ ಬಂದು ಪಂಚರ್ ಹಾಕಿಸಿಟ್ಟುರುತ್ತೇನೆ.. ತಗೊಂಡು ಹೋಗೋರಂತೆ.. ಐನೂರು ಕೊಟ್ಟು ಹೋಗಿ.. ಚಿಲ್ಲರೆ ಬೆಳಿಗ್ಗೆ ಕೊಡುತ್ತೇನೆ.. ಹನ್ನೆರಡು ಘಂಟೆಯ ಹೊತ್ತಿಗೆ ಬನ್ನಿ ಸರಿನಾ.. ಅದಕ್ಕಿಂತ ಮುಂಚೆ ಬರಬೇಡಿ.. ನಾ ಇರೋಲ್ಲ.. ಆಮೇಲೆ ನನ್ನ ಜಾಗದಲ್ಲಿದ್ದವ ತಕರಾರು ಮಾಡುತ್ತಾನೆ.. ಸರಿ ನಾ "
ಇಷ್ಟೆಲ್ಲಾ ಮಾತು ಕತೆ ನೆಡೆದು ಹದಿನೈದು ಇಪ್ಪತ್ತು ನಿಮಿಷ ಆಗಿತ್ತು.. ಹಾಗಾಗಿ ಆ ವ್ಯಕ್ತಿ ನಮಗಿಂತ ಮುಂದೆ ಹೋಗಿದ್ದ ಅಂತ ಅರಿವಾಯಿತು..
"ಸರಿ ಸರ್.. ಈಗ ಎಲ್ಲಿಗೆ ಹೋಗಬೇಕು. ಎಲ್ಲಿ ನಿಮ್ಮ ಮನೆ.. ಅಡ್ರೆಸ್ ಹೇಳಿ ನಾ ಬಿಟ್ಟು ಬರುವೆ.. ನನ್ನ ಮನೆ ಕೂಡ ಈ ಕಾಡಿನ ಆಚೆ ಬದಿಯಲ್ಲಿದೆ.. "
ಆ ವ್ಯಕ್ತಿ.. ಮಿಸುಕಾಡಲಿಲ್ಲ.. ಮಾತುಗಳು ಅಸ್ಪಷ್ಟವಾಗುತ್ತಿದ್ದವು.. ಜೇಬನ್ನು ತಡಕಾಡುತ್ತಿತ್ತು ತನ್ನ ವಿಸಿಟಿಂಗ್ ಕಾರ್ಡ್ ಕೊಟ್ಟು..
"ಇದೆ.. .. ನನ್ನ ವಿಳಾಸ.. ನೀವೇನು.... ತೊಂದರೆ... .. ನನಗೆ ಶುಗರ್ ಸಮಸ್ಯೆ ಇದೆ.. .. ... ಸಕ್ಕರೆ... ಅಂಶ ಅಚಾನಕ್ ಕಡಿಮೆ... .. ಈ ರೀತಿ ಆಗುತ್ತದೆ.. ನನ್ನ ಜೇಬಲ್ಲಿ... ಸಾಮಾನ್ಯ... ಚಾಕೊಲೇಟ್ ಇರುತ್ತೆ.. ಇವತ್ತು ಹೊಸ ಬಟ್ಟೆ ಹಾಕಿಕೊಂಡು... ಬಂದಿದ್ದೆ... ಸಿನಿಮಾ... ನೋಡೋಕೆ.. ಹೋಗಲಿ ಬಿಡಿ.. ನಾನು ಇಲ್ಲೇ... ಸ್ವಲ್ಪ ... ಹೊತ್ತು ಸುಧಾರಿಸಿಕೊಂಡು ನಾ ಹೋಗುತ್ತೇನೆ.. ... ನೀವು... ಹೊರಡಿ... ಪರವಾಗಿಲ್ಲ, ಬೆಳಿಗ್ಗೆ... ಮನೆಗೆ... ಬನ್ನಿ... ತಿಂಡಿ ... ಸಮಯಕ್ಕೆ... ಬಂದರೆ... ಒಳ್ಳೆಯದು.. ಒಂದಷ್ಟು.... ಮಾತಾಡಬಹುದು.. ಹೌದು ನೀವು... ಈಗ ಮಾಡಿದ ಉಪಕಾರ ನಾ ಮರೆಯೋಕೆ... ಸಾಧ್ಯವೇ... ಇಲ್ಲ.. ಸಕ್ಕರೆ.. ಅಂಶ... ಒಂದು... ರೀತಿಯ... ವಿಷ... ಇದ್ದ... ಹಾಗೆ... ಕಡಿಮೆ... ಆದರೂ ಕಷ್ಟ.. ಹೆಚ್ಚಾದರೂ... ಕಷ್ಟ.. ಹೀಗೆ.... ದಾರಿಯಲ್ಲಿ... ಕುಸಿದು... ಕೂತ... ಉದಾಹರಣೆಗಳು... ತುಂಬಾ... ಇವೆ... ಅಂತ ಹೇಳ್ತಾರೆ... ಮನೆಯಲ್ಲಿ.. ನನಗೆ ಗೊತ್ತಿಲ್ಲ.. .. ಈ... ಕಾಡು... ಹಾದಿಯಲ್ಲಿ... ನೀವು ... ದೇವರು... ಸಿಕ್ಕ.. ಹಾಗೆ.. ಸಿಕ್ಕಿದ್ರಿ.. ನೀವು... ಬರಲಿಲ್ಲ... ಅಂದಿದ್ರೆ.. ನನ್ನ... ಕತೆ... ದೇವರೇ.. ಕಾಪಾಡಬೇಕಿತ್ತು.. ನೀವು... ನನ್ನ... ಪಾಲಿನ ದೇವರಾಗಿಬಿಟ್ರಿ.. ಖಂಡಿತ ... ಮನೆಗೆ... ಬನ್ನಿ.. ಮನೆಯಲ್ಲಿರುವವರಿಗೆ... ನಿಮ್ಮನ್ನು.. ಪರಿಚಯ... ಮಾಡಿಕೊಡುತ್ತೇನೆ.. "
ಮಾತಾಡದೆ ಕೂತಿದ್ದ ವ್ಯಕ್ತಿಯ ದೇಹದಲ್ಲಿ ಚೂರು ಸಕ್ಕರೆಯ ಅಂಶ ಮಾಡಿದ ಮ್ಯಾಜಿಕ್ ಆ ವ್ಯಕ್ತಿಯನ್ನು ಬಿಟ್ಟು ಬಿಟ್ಟು ಆಡುತ್ತಿದ್ದ ಮಾತುಗಳು ಆದರೆ ನಿಧಾನವಾಗಿ ಚೈತನ್ಯ ಬರುತ್ತಿದ್ದ ಕುರುಹುವನ್ನು ತೋರಿಸುತ್ತಿತ್ತು.. .. . ಬಿಟ್ಟ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ ಪೂರ್ವಿಗೆ ಇದು ಆಶ್ಚರ್ಯಕರ ವಿಷಯವಾಗಿತ್ತು .. ಸತ್ತಂತೆ ಮಲಗಿದ್ದ ವ್ಯಕ್ತಿ.. ಈ ಪರಿಯ ಚೈತನ್ಯ ತುಂಬಿಕೊಳ್ಳಲು ಕಾರಣವಾದ ಆ ಸಕ್ಕರೆಯ ಚಾಕೊಲೇಟಿಗೆ ಸಲಾಂ ಹೊಡೆಯಬೇಕು ಅನ್ನಿಸಿತು..
ನಿಧಾನವಾಗಿ ಇನ್ನಷ್ಟು ಚೈತನ್ಯ ತುಂಬಿಕೊಂಡು.. ಇನ್ನೊಂದು ಚಾಕೊಲೇಟ್ ತಿಂದು.. "ನೀವು ಹೋಗಿ ಸರ್.... ಜೊತೆಯಲ್ಲಿ ಮೇಡಂ ಬೇರೆ ಇದ್ದಾರೆ.. ಆಗಲೇ ಒಂದು ಘಂಟೆ ಆಗಿದೆ ಅನ್ನಿಸುತ್ತಿದೆ.. ನೀವು ಹೋಗಿ ನಾ ಮೆಲ್ಲನೆ ನಿಧಾನಕ್ಕೆ ಹೋಗುತ್ತೇನೆ. ಸಿನಿಮಾ ನೋಡುವ ಚಪಲ.. ನೆಡೆದೆ ಹೋಗೋಣ ಅಂತ ಇವತ್ತು ಗಾಡಿಯನ್ನು ತರಲಿಲ್ಲ.. ನೀವು ಹೋಗಿ.. ಬೆಳಿಗ್ಗೆ ಬರುವುದನ್ನು ಮಾತ್ರ ಮರೆಯಬೇಡಿ . ಮೇಡಂ ನೀವು ಬರಬೇಕು.. "
ಎಷ್ಟು ಹೇಳಿದರೂ ಕೇಳಲಿಲ್ಲ ಆ ವ್ಯಕ್ತಿ.. ಸರಿ ಇನ್ನೇನು ಮಾಡುವುದು ಅಂತ ಯೋಚಿಸಿ.. "ಸರ್ ಹೀಗೆ ಮಾಡಿ.. ಇನ್ನೊಂದೆರಡು ಚಾಕೊಲೇಟ್, ಮತ್ತು ನೀರಿನ ಬಾಟಲ್ ಕೊಡುತ್ತೇನೆ.. ಸುಧಾರಿಸಿಕೊಂಡು ಹೋಗಿ ಆಯ್ತಾ.. ಬೆಳಿಗ್ಗೆ ನಿಮ್ಮನ್ನು ಕಾಣುತ್ತೇನೆ.."
" ಸರಿ" ಅಂತ ಒಂದು ದೇಶಾವರಿ ನಗೆ ಬೀರಿ ಕೈಯಾಡಿಸಿತು ಆ ವ್ಯಕ್ತಿ..
ನೀರಿನ ಬಾಟಲ್ ಮತ್ತು ಒಂದೆರಡು ಚಾಕೊಲೇಟ್ ಕೊಟ್ಟು.. ಸಮೀರಾ ಮತ್ತು ಪೂರ್ವಿ ನೆಡೆಯುತ್ತಾ ತಮ್ಮ ಮೆನೆಗೆ ತಲುಪಿದರು.. ದಾರಿಯುದ್ದಕ್ಕೂ ಅದೇ ಮಾತು ಇಬ್ಬರಲ್ಲೂ..
ಬೆಳಿಗ್ಗೆ ತಡವಾಗಿ ಎದ್ದ ಸಮೀರಾ.. ಪೂರ್ವಿ ಇನ್ನೂ ಮಲಗಿಯೇ ಇದ್ದಳು..
ತಾನೇ ಕಾಫಿ ಮಾಡಿ ಪೂರ್ವಿಗೆ ಕೊಟ್ಟು... ಪೇಪರ್ ಓದುತ್ತಾ ಕೂತ.. ಆಗಲೇ ಹನ್ನೊಂದಾಗಿತ್ತು.. ಓಹ್ ಬೈಕ್ ತರಬೇಕು ಅಂತ ನೆನಪಿಗೆ ಬಂತು.. ಲಘುಬಗೆಯಿಂದ ಸ್ನಾನ ಮಾಡಿ.. ದೇವರಿಗೆ ಡೈವ್ ಹೊಡೆದು.. ಚಪ್ಪಲಿ ಮೆಟ್ಟಿ ಮತ್ತೆ ಅದೇ ಕಾಡಿನ ಹಾದಿ ಹಿಡಿದ..
ನಿನ್ನೆ ರಾತ್ರಿ ನೆಡೆದ ವಿಷಯಗಳೆಲ್ಲ ನೆನಪಿಗೆ ಬಂತು.. ಅದನ್ನೇ ನೆನೆಸಿಕೊಂಡು ಆ ವ್ಯಕ್ತಿ ಬಿದ್ದಿದ್ದ ಮರವನ್ನು ಹಾದು ಹೋಗುವಾಗ ಅವನಿಗೆ ಅರಿವಿಲ್ಲದೆ ಆ ಮರದ ಕಡೆಗೆ ಗಮನ ಹರಿಸಿದ.. ಆಶ್ಚರ್ಯವಾಯಿತು..
ತಾ ಕೊಟ್ಟ ಬಾಟಲ್ ಅಲ್ಲೇ ಇದೆ.. ಅರೆ ಇಸ್ಕಿ ಇದೇನು.. ಇಲ್ಲಿ ಬಿಟ್ಟು ಹೋದನಲ್ಲ ಪಾರ್ಟಿ ಎಂದು ಹತ್ತಿರ ಹೋಗಿ ನೋಡಿದ.. ಖಾಲಿಯಾಗಿದ್ದ ಎರಡು ಚಾಕೊಲೇಟ್ ಪೇಪರ್ ಅಲ್ಲಿಯೇ ಇತ್ತು.. ಬಾಟಲಿನಲ್ಲಿ ನೀರು ಖಾಲಿಯಾಗಿತ್ತು..
ಸರಿ.. ಹೇಗಿದ್ದರೂ ವಿಳಾಸ ಇದೆ ಅಲ್ಲಾ.. ಮನೆಗೆ ಹೋಗುವಾಗ ನೋಡೋಣ ಅಂತ.. ಶಿಳ್ಳೆ ಹೊಡೆಯುತ್ತಾ.. ಹಿಂದಿನ ರಾತ್ರಿ ನೋಡಿದ್ದ ಚಿತ್ರದ ಹಾಡು ಗುನುಗುತ್ತಾ.. ಥಿಯೇಟರಿಗೆ ಹೋದ..
ಗೇಟಿನ ಹತ್ತಿರವೇ ಇದ್ದ ಆ ಹುಡುಗ.. "ನಮಸ್ಕಾರ ಸರ್.. ಏನ್ ಸರ್ ಟೈಮ್ ಅಂದ್ರೆ ಟೈಮ್. ೧೨ ಅಂತ ಹೇಳಿದ್ದೆ ಸರಿಯಾಗಿ ಹನ್ನೆರಡಕ್ಕೆ ಬಂದಿದ್ದೀರಿ.. ನಿಮ್ಮಂತರವರಿಂದಲೇ ಮಳೆ ಬೆಳೆ ಆಗುತ್ತಿರುವುದು ಸರ್.. ಬೈಕ್ ಪಂಚರ್ ಹಾಕಿಸಿಟ್ಟಿದ್ದೀನಿ ಸರ್.. ಬೊಂಬಾಟ್ ಬೈಕ್ ಸರ್ ಇದು.. ಮಾರುವ ಪ್ಲಾನ್ ಇದ್ದರೆ ಹೇಳಿ ಸರ್.. ನಾನೆ ತಗೋತೀನಿ ... ಸರ್ ಪಂಚರ್ ದುಡ್ಡು ಇಷ್ಟಾಯಿತು.. " ಇನ್ನೂ ಬಡಬಡಿಸುತ್ತಲೇ ಇದ್ದ..
"ಥ್ಯಾಂಕ್ಸ್.. ಚಿಲ್ಲರೆ ನೀನೆ ಇಟ್ಕೋ.. " ಎಂದು ಹೇಳಿದವನೇ ಸಮೀರಾ.. ಬೈಕ್ ಹತ್ತಿ ಮನೆಯ ಕಡೆಗೆ ಹೊರಟ..
ಪೇಟೆ ದಾರಿಯಲ್ಲಿ ಹೋಗುವಾಗ ನೆನಪಿಗೆ ಬಂತು ಅರೆ ಇಲ್ಲೇ ಎಲ್ಲೋ ಇರಬೇಕು ಆ ವ್ಯಕ್ತಿ.. ಸರಿ ಹೇಗಿದ್ದಾರೆ ವಿಚಾರಿಸೋಣ.. ಎಂದು ಆ ಕಾರ್ಡ್ ತೆಗೆದುಕೊಂಡು ವಿಳಾಸ ಹುಡುಕ ಹತ್ತಿದ.. ಚಿಕ್ಕ ಊರಾಗಿದ್ದರಿಂದ ಅಷ್ಟೇನೂ ಕಷ್ಟ ಪಡಬೇಕಿರಲಿಲ್ಲ.. ಹದಿನೈದು ನಿಮಿಷದಲ್ಲಿ ಅಲ್ಲಿ ಇಲ್ಲಿ ವಿಚಾರಿಸಿದ ಮೇಲೆ ವಿಳಾಸ ಸಿಕ್ಕಿತು..
ದೊಡ್ಡದಾದ ಮನೆ.. ಮನೆಯ ಮುಂದೆ ಹುಲ್ಲು ಹಾಸು.. ಅತ್ತಿತ್ತ ಹೂವಿನ ಗಿಡಗಳು.. ಅಂಗಳದಲ್ಲಿ ಆಡುತ್ತಿದ್ದ ಪುಟ್ಟ ಪುಟ್ಟ ಮಕ್ಕಳು.. ಮನೆಗೆ ಬಳಿದಿದ್ದ ಬಿಳಿಯ ಬಣ್ಣ.. ಮಂಗಳೂರು ಹೆಂಚು.. ಒಂದು ರೀತಿಯ ಆಹ್ಲಾದಕರ ವಾತಾವರಣ ಅನ್ನಿಸಿತು.. ಕಿರ್ ಎಂದು ಸದ್ದು ಮಾಡುತ್ತಾ ಗೇಟ್ ತೆರೆದುಕೊಂಡಿತು..
ಒಳಗೆ ಹೆಜ್ಜೆ ಹಾಕುತ್ತಾ ಸುತ್ತ ನೋಡುತ್ತಾ ಒಳಗೆ ಹೋದ..
"ಎಸ್.. ಯಾರು ಬೇಕಿತ್ತು.. " ಒಂದು ಹೆಂಗಸಿನ ಧ್ವನಿಗೆ ತಿರುಗಿದ ಸಮೀರಾ..
"ಆ ಮೇಡಂ.. ಇದು ಇವರ ಮನೆ ವಿಳಾಸ ತಾನೇ.. ಇವರು ಇಲ್ಲೇ ಇದ್ದಾರಾ.. " ಆ ಕಾರ್ಡನ್ನು ತೋರಿಸಿದ..
"ಹೌದು ಒಳಗೆ ಇದ್ದಾರೆ.. ನೀವು ಯಾರು"
"ನಾನು ಅವರನ್ನು ನೋಡಬೇಕಿತ್ತು.. "
"ಸರಿ ಒಳಗೆ ಹೋಗಿ.. .. ಒಯೆ ಚೋಟು.. ಇವರನ್ನು ಒಳಕ್ಕೆ ಕರೆದುಕೊಂಡು ಹೋಗು"
ಚೋಟುವಿನ ಜೊತೆಯಲ್ಲಿ ಸಮೀರಾ ... ತನ್ನ ತಲೆಗೂದಲನ್ನು ಒಮ್ಮೆ ಸರಿ ಮಾಡಿಕೊಂಡು ಒಳಗೆ ಹೋದ..
ಆ ವ್ಯಕ್ತಿ ಅಲ್ಲಿಯೇ ಕೂತಿತ್ತು.. "ನಮಸ್ಕಾರ ಸರ್.. ಈಗ ಹೇಗಿದ್ದೀರಾ..ನೀವು ವಾಟರ್ ಬಾಟಲನ್ನು ಅಲ್ಲಿಯೇ ಇಟ್ಟಿದ್ದ್ರಿ. ನೋಡಿ ಹೌದು ಇದೆ ಬಾಟಲ್.. ನನ್ನ ಬೈಕ್ ಪಂಚರ್ ಆಗಿತ್ತು.. ಥೀಯೇಟರ್ ಹತ್ತಿರ ನಿಲ್ಲಿಸಿದ್ದೆ.. ಈಗ ರಿಪೇರಿ ಮಾಡಿಸಿಕೊಂಡು ನಿಮ್ಮನ್ನು ಹಾಗೆ ನೋಡಿಕೊಂಡು ಹೋಗುವ ಅಂತ ಬಂದೆ.. "
ಸಮೀರನನ್ನು ಮೇಲಿಂದ ಕೆಳಗೆ ಒಮ್ಮೆ ನೋಡಿ.. ಹಣೆಯ ಮೇಲೆ ಗೆರೆ ಮೂಡಿಸಿಕೊಂಡು ಕಣ್ಣನ್ನು ಕಿರಿದಾಗಿಸಿ..
"ನೀವು ಯಾರು.. ಏನಾಗಬೇಕಿತ್ತು.. ಏತಕ್ಕೆ ಬಂದ್ರಿ.. ನನಗೆ ಏನಾಗಿತ್ತು.. ಏನಿದು ವಾಟರ್ ಬಾಟಲ್ ಕಥೆ..ನಿಮ್ಮ ಬೈಕ್ ಪಂಚರ್ ಆದ್ರೆ ನನಗೇಕೆ ಹೇಳ್ತಾ ಇದ್ದೀರಿ.. ಇದು ಮನೆ.. ಪಂಚರ್ ಅಂಗಡಿ ಅಲ್ಲಾ.. ಚಂದಾ ಬೇಕು ಅಂದ್ರೆ ಸೀದಾ ಮನೆ ಒಳಗೆ ಬರೋದಾ... "
"ನಿನ್ನೆ ನೀವು.. ಕಾಡಲ್ಲಿ ಬಿದ್ದಿದ್ದು.. !"
ಸಮೀರಾ ಇನ್ನೂ ಮಾತು ಮುಗಿಸಿರಲಿಲ್ಲ.. ಆ ವ್ಯಕ್ತಿ "ಏನ್ರಿ ನಿಮ್ಮ ಹರಿಕತೆ ಕೇಳೋಕೆ ನಾ ಕೂತಿಲ್ಲ.. ಓಯ್ ಯಾರಿದು ಇವರನ್ನು ಒಳಗೆ ಬಿಟ್ಟಿದ್ದು.. ನೋಡಿ ಸರ್ ನೀವು ಯಾರೋ ನನಗೆಗೊತ್ತಿಲ್ಲ .. ಯಾತಕ್ಕೆ ಬಂದಿದ್ದಿದ್ದೀರೋ ಗೊತ್ತಿಲ್ಲ.. ಹೊರಡಿ ಹೊರಡಿ"
ಅಚಾನಕ್ ಇಷ್ಟೊಂದು ಮಾತಾಡಿದ್ದು ನೋಡಿ ಆಶ್ಚರ್ಯವಾಯಿತು ಸಮೀರನಿಗೆ.. ಬೇರೆ ಮಾತಾಡಲು ಅವಕಾಶವಿರಲಿಲ್ಲ.. ಎದ್ದು ನಿಂತು ಸುತ್ತಲೂ ನೋಡಿದ.. ಮೂಲೆಯಲ್ಲಿ ಕೂತಿದ್ದ ಟಿವಿಯಲ್ಲಿ ಅಮೀರ್ ಖಾನ್ ಅಭಿನಯದ ಘಜನಿ ಚಿತ್ರ ಬರುತ್ತಿತ್ತು..
ಏನೋ ನೆನಪಾಯಿತು.. ಸರಕ್ಕನೆ ಮತ್ತೆ ಆ ವ್ಯಕ್ತಿಯನ್ನು ನೋಡಿದಾ.. ಮೊಗದ ಮೇಲೆ ಏನೂ ಭಾವಗಳು ಇರಲಿಲ್ಲ.. ಟಿವಿಯನ್ನು ನೋಡಿದ.. ಅಮೀರ್ ಖಾನ್ ಘಜನಿ ಪಾತ್ರದಲ್ಲಿ ಸಮೀರನನ್ನು ನೋಡಿ ಕಿಸಕ್ ಅಂತ ನಕ್ಕ ಅನುಭವ.. ....!!!!
ಸುಂದರ ಮತ್ತು ಕುತೂಹಲದಿಂದ ಕೂಡಿರುವ ಕಥಾ ಸಂಗಮ ಶ್ರೀ
ReplyDeleteShort n Super Story Sri ��
Super Thanks Sudha
DeleteSuspense, thriller....good one
ReplyDeleteWelcome to my world.,thank you friend
Deleteಅದ್ಭುತವಾದ ಕಥೆ.. ಕತ್ತಲೆ ಅಂದ್ರೆ ಎಷ್ಟು ಸೊಗಸೊ ಅಷ್ಟೆ ಭಯಾನಕ ಕೂಡ.. ಅದರಲ್ಲೂ ಕತ್ತಲಲ್ಲಿ ಕಾಡಿನ ದಾರಿ ಪರಿಚಿತದವರಿಗೂ ದಿಕ್ಕು ತಪ್ಪುವಷ್ಟು ನಿಗೂಢ.. ಅಷ್ಟೆ ಚೆನ್ನಾಗಿ ವಿವರಿಸಿದ್ದಿರಾ..
ReplyDeleteಸಮೀರ್ ಪೂರ್ವಿ ಸಂಭಾಷಣೆ ಸಹಜವಾಗಿ ಸುಂದರವಾಗಿ ಬಂದಿದೆ..
ಕೊನೆಯಲ್ಲಿ ಮರದ ಮರೆಗೆ ಘಜನಿ ದೃಶ್ಯ ಉತ್ತರವಾಗಿದ್ದು ಸೂಪರ್..
ha ha ha ...super thanks MS...nice comment
Deleteಕಥೆಯ ಬೆಳವಣಿಗೆಯನ್ನು ತುಂಬ ಚೆನ್ನಾಗಿ ಮಾಡಿದ್ದೀರಿ. ಕೊನೆಯವರೆಗೂ, ಕಥೆ ತನ್ನ ಗುಟ್ಟನ್ನು ಬಿಟ್ಟುಕೊಡುವುದಿಲ್ಲ!
ReplyDeleteDhanyavaadgalu Gurugale . nimma comment nanage srirakshe
Delete