Monday, March 27, 2017

ಕಾಣದಂತೆ ಮಾಯವಾದನೋ .... ಭಾಗ - ೨

ಕಾಣೆಯಾಗಿದ್ದು - ಭಾಗ ೧

ಕತ್ತಲಲ್ಲಿ ಬೆಳಕು ಮೂಡಿದ ಅನುಭವ.. ತಕ್ಷಣ ಇನ್ನೊಂದು  ಫೋನ್ ರಂಗನಿಗೆ "ರೀ ರಂಗ.. ಅಣ್ಣಾವ್ರ ಚಲಿಸುವ ಮೋಡಗಳು ಚಿತ್ರದಲ್ಲಿ ಕಾಣದಂತೆ ಮಾಯವಾದನೋ ಹಾಡಿನ ಸಾಹಿತ್ಯ ನನಗೆ ಬೇಕು.. ನಿಮ್ಮ ಮೊಬೈಲಿನಲ್ಲಿ ಆ ಹಾಡಿದೆ ಅಲ್ಲವೇ.. ನಿಧಾನಕ್ಕೆ ಕೇಳಿ ಕೇಳಿ ಇಡೀ ಹಾಡನ್ನು ಬರೆದುಕೊಂಡು ಬನ್ನಿ.. "

ರಂಗ ತಲೆ ಕೆರೆದುಕೊಂಡ.. ಸೀನಪ್ಪನ ಜೀಪು ಪೊಲೀಸ್ ಸ್ಟೇಷನ್ ಬಾಗಿಲಲ್ಲಿ ಕಿರ್ರ್ ಸದ್ದು ಮಾಡುತ್ತಾ ಬ್ರೇಕ್ ಹಾಕಿ ನಿಂತಿತು.. !!!

"ಏನೋ ಸೀನಪ್ಪ.. ಸಾಹೇಬ್ರಿಗೆ ಏನಾಗಿದೆ.. ? ಹುಚ್ಚು ಹಿಡಿದಿಲ್ಲ ತಾನೇ.. ? ನಾವು ಕೇಸಿನ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ ಆಂದರೆ, ಅಣ್ಣಾವ್ರ ಹಾಡನ್ನು ಬರೆದುಕೊಂಡು ಬಾ ಅಂತ ಹೇಳಿದ್ದಾರೆ..ಏನೂ ಮಾಯವೋ.. ಏನು ಮರ್ಮವೋ"

"ಹೌದೇನೋ..ರಂಗ.. ಸಾಹೇಬ್ರು ಹೇಳಿದ್ದಾರೆ ಅಂದರೆ ಏನೋ ಇರುತ್ತೆ.. ಸುಮ್ಮ ಸುಮ್ಮನೆ ಏನೋ ಹೇಳೊಲ್ಲ.. ನನಗೆ ಗಣೇಶನನ್ನು ಕರೆದುಕೊಂಡು ಬಾ ಅಂದ್ರು.. ಸರಿ ಹಾಡು ಬರೆದಾಯ್ತಾ.. ಕೊಡತ್ಲಾಗೆ.. ಗಣೇಶನನ್ನು ಕರೆದುಕೊಂಡು ಹಂಗೆ ಸಾಹೇಬ್ರ ಮನೆ ಹತ್ರ ಹೋಗ್ತೀನಿ"

"ಇರು ಸೀನಪ್ಪ.. ಇನ್ನೊಂದೆರಡು ಸಾಲುಗಳಿವೆ.. ಈ ಹಾಳಾದ್ದು ಮೊಬೈಲ್ .. ಸರಿಯಾಗಿ ಕೇಳಿಸೋಲ್ಲ.. ಇಲ್ಲೋ ಒಂದು ಸಂತೆ.. ಗಿಜಿ ಗಿಜಿ ಅಂತಾನೆ ಇರ್ತಾವೆ.. ಥತ್ ತೇರೀಕಿ.. !"

"ಸರಿ ಒಂದು ದಮ್ ಹೊಡೆದು ಬರ್ತೀನಿ.. ಟೀ ಗೀ ಏನಾದರೂ ಬೇಕಾ.. ಗಣೇಶನಿಗೆ ಹೇಳ್ಳಾ.. "

"ಸರಿ ಒಂದು ಕಿಂಗು.. ಒಂದು ಹಾಪ್ ಟೀ ಹೇಳು..  ಐದು ನಿಮಿಷ ಕೊಟ್ಟು ಬಿಡ್ತೀನಿ.. "

ನಿಧಾನವಾಗಿ ಕಾಲು ಎಳೆದುಕೊಂಡು ಸೀನಪ್ಪ ಗಣೇಶನ ಅಂಗಡಿಗೆ ಬಂದ..

"ಗಣೇಶ.. ಒಂದು ಕಾಫಿ ಒಂದು ಕಿಂಗು.. ಸ್ಟೇಷನಿನಲ್ಲಿ ರಂಗನಿಗೆ ಒಂದು ಕಿಂಗು ಮತ್ತೆ ಮಸಾಲೆ ಟೀ ಕಳಿಸು"

"ಆಯಿತು ಸಾಹೇಬ್ರೆ.. " ಗಣೇಶ ಸೀನಪ್ಪನಿಗೆ ಕಾಫಿ ಮತ್ತು ಕಿಂಗು ಕೊಟ್ಟು.. ಲೇ ಬಸ್ಯಾ ಹೋಗಿ ರಂಗಣ್ಣನಿಗೆ ಒಂದು ಟೀ ಮತ್ತೆ ಸಿಗರೇಟ್ ಕೊಟ್ಟು ಬಾರೋ"

"ಗಣೇಶಾ ಮತ್ತೆ .. ಸಾಹೇಬ್ರು ನಿನ್ನ ನೋಡ್ಬೇಕು ಅಂದ್ರೂ ಕಣೋ.. ಬಾ.. ಮನೆಯಲ್ಲಿಯೇ ಸಿಗ್ತಾರಂತೆ.. ಹೋಗೋಣ.. ಸಾಹೇಬ್ರ ಜೀಪು ಇಲ್ಲೇ ಇದೆ  .. ಅದರಲ್ಲಿಯೇ ಕರೆದುಕೊಂಡು ಬಾ ಅಂದ್ರು.. "

ರಾಜೇಶ್ ಸಾಹೇಬ್ರ ಬಗ್ಗೆ ಗೊತ್ತಿದ್ದ ಗಣೇಶ.. "ಯಾಕೆ ಸಾಹೇಬ್ರೆ.. ನನ್ನ ಕರೀತಾವ್ರೆ.. ಸರಿ ನೀವು ಕಾಫಿ ಮುಗಿಸಿ.. ಅಷ್ಟರಲ್ಲಿ ಹುಡುಗ ಬರ್ತಾನೆ.. ಅವನಿಗೆ ಹೋಟೆಲ್ ಬಿಟ್ಟು.. ನಾ ಬರ್ತೀನಿ.. "

ಗಣೇಶ ಸಲೀಸಾಗಿ ಒಪ್ಪಿದ್ದು, ಮತ್ತೆ ಭಯವಿಲ್ಲದ ಮಾತನ್ನು ಕೇಳಿ ಸೀನಪ್ಪನಿಗೆ ಆಶ್ಚರ್ವಾಯಿತು .. ರಾಜೇಶ್ ಸಾಹೇಬ್ರು ಮಾತಲ್ಲಿ ಎಷ್ಟು ನಯವೋ.. ಕೇಸನ್ನು ಬಿಡಿಸುವಾಗ ಅಷ್ಟೇ ರಾಕ್ಷಸರಾಗುತ್ತಿದ್ದರು.. ಹಗಲು ರಾತ್ರಿಯ ಪರಿವೆ ಇರುತ್ತಿರಲಿಲ್ಲ.. ಹಾಗಾಗಿ ಸಾಹೇಬ್ರ ಸ್ಟೇಷನಿಗೆ ಕೇಸು ಬಂದಿದೆ ಎಂದರೆ.. ಒಂದು ಕ್ಷಣ ಕೇಸೇ ಬೆವರುತ್ತಿತ್ತು..

ಸೀನಪ್ಪ ಯೋಚನೆಯಲ್ಲಿ ಮುಳುಗಿದ್ದ.. "ಸಾಹೇಬ್ರೆ.. ಏನು ಮತ್ತೆ ನಿದ್ದೆಯೇ. .ಏಳಿ ಹೋಗೋಣಾ.. "

ಸೀನಪ್ಪ ಸ್ಟೇಷನ್ ಬಾಗಿಲಿಂದಲೇ .. ಕೂಗುತ್ತಾ..' ರಂಗಣ್ಣ.. ರಂಗ.. ಎಲ್ಲಿ ಮರೆಯಾದೆ.. ಕೊಡಪ್ಪಾ.. "

ರಂಗ ಓಡುತ್ತಾ ಬಂದು.. ಒಂದು ಚೀಟಿ ಕೊಟ್ಟಾ.. ಅದನ್ನ ಜೇಬಿಗಿಳಿಸಿ...  ಜೀಪನ್ನು ಸ್ಟಾರ್ಟ್ ಮಾಡಿಕೊಂಡು ಸೀನಪ್ಪ ಮತ್ತು  ಗಣೇಶ .. ಸಾಹೇಬ್ರ ಮನೆಕಡೆ ಹೊರಟರು..

ಹತ್ತು ನಿಮಿಷದ ಹಾದಿ.. ಮತ್ತೆ ಕಿರ್ ಕಿರ್ ಸದ್ದು ಮಾಡುತ್ತಾ ಜೀಪು ನಿಂತಿತು..

ಹೊರಗಡೆ.. ಹುಲ್ಲಿನ ಮೇಲೆ ಕೂತಿದ್ದ ರಾಜೇಶ್.. ಸೀನಪ್ಪನನ್ನು ನೋಡಿ.. "ರೀ ಸೀನಪ್ಪ.. ಇಲ್ಲಿ ಇದ್ದೀನಿ ಬನ್ನಿ.. ಗಣೇಶ.. ಇಲ್ಲಿ ಬಾಪ್ಪಾ.. " ಆ ಧ್ವನಿಯಲ್ಲಿಯೇ ಸೀನಪ್ಪನಿಗೆ ಅರಿವಾಯಿತು.. ಸಾಹೇಬ್ರು ಕೇಸನ್ನು ಬೇಗನೆ ಬಗೆಹರಿಸಬಹುದು ಎಂದು!

ಪ್ಲಾಸ್ಕ್ ನಲ್ಲಿದ್ದ ಕಾಫಿಯನ್ನು ಬಗ್ಗಿಸಿ ಇಬ್ಬರಿಗೂ ಕೊಡುತ್ತಾ.. "ಗಣೇಶ.. ಇಲ್ಲಿ ಬಾರೋ ನನ್ನ ಹತ್ತಿರ.. ಸೀನಪ್ಪ ರಂಗ ಕೊಟ್ಟ ತಾನೇ.. "

ಗಣೇಶನಿಗೆ ಏನು ನೆಡೆಯುತ್ತಿದೆ ಎಂದು ಅರಿವಾಗಲಿಲ್ಲ.. ಸುಮ್ಮನೆ ಮಿಕ ಮಿಕ ನೋಡುತ್ತಾ ಸಾಹೇಬರ ಪಕ್ಕ ಕೂತುಕೊಂಡ..
ಸೀನಪ್ಪ ಕೊಟ್ಟ ಚೀಟಿಯನ್ನು ಹರಡಿ.. ಮೆಲ್ಲಗೆ "ಕಾಣದಂತೆ ಮಾಯವಾದನು" ಹಾಡನ್ನು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾ.. ಸೀನಪ್ಪ ನೀವು ಹೊರಡಿ.. ನಾನು ಮಧ್ಯಾನ್ಹ ಗಣೇಶನ ಜೊತೆ ಅಲ್ಲಿಗೆ ಬರ್ತೀನಿ.. ಊಟಕ್ಕೆ ಹೇಳಿಬಿಡಿ.. ನಾನು ನೀವು ರಂಗ, ಗಣೇಶ ಮತ್ತೆ.. ........  ಹಾ ಸರಿ.......  ಎಲ್ಲರೂ ಒಟ್ಟಿಗೆ ಊಟ ಮಾಡೋಣ.. ಏನಪ್ಪಾ ಗಣೇಶ ನಿನ್ನ ಹೋಟೆಲಿನಲ್ಲಿ ಆಗಬಹುದೇ ನಮ್ಮೆಲ್ಲರ ಊಟಕ್ಕೆ ಏರ್ಪಾಡು.. "

ಗಣೇಶ ಸುಮ್ಮನೆ ತಲೆ ಅಲ್ಲಾಡಿಸಿದ.... ಹೋಟೆಲಿನವ ಬಸ್ಯಾ ಅಡಿಗೆ ಸಿದ್ಧಮಾಡುತ್ತಿದ್ದ.. ಹಾಗಾಗಿ ಗಣೇಶನಿಗೆ ಚಿಂತೆ ಇರಲಿಲ್ಲ..ಆದರೆ ಸಾಹೇಬ್ರ ವರ್ತನೆ ಅರ್ಥವಾಗುತ್ತಿರಲಿಲ್ಲ.. ಮುಂದೇನೋ ಎಂದು ಕಾಯುತ್ತಲೇ.. ಸೀನಪ್ಪ ಹೋದ ದಾರಿಯನ್ನೇ ನೋಡುತ್ತಾ ಕುಳಿತ..

ಧಪ್ ಒಂದು ಕೈ ತನ್ನ ಬೆನ್ನ ಮೇಲೆ ಬಿದ್ದಾಗ ಬೆಚ್ಚಿದ ಗಣೇಶ ತಿರುಗಿ ನೋಡಿದ..

"ಏನೋ ಗಣೇಶ.. ಏನೂ ಯೋಚಿಸುತ್ತಿದ್ದೀಯ.. ಈ ಹಾಡನ್ನು ನಿಧಾನವಾಗಿ ಓದು.. " ಮಡಚಿದ್ದ ಕಾಗದವನ್ನು ಗಣೇಶನಿಗೆ ಕೊಡುತ್ತಾ ರಾಜೇಶ್ ಹೇಳಿದ..

ನಿಧಾನವಾಗಿ ಆ ಚೀಟಿಯನ್ನು ತೆರೆದ ಗಣೇಶನ ಕೈ ನಡುಗಲು ಆರಂಭಿಸಿತು.... ಹಾಡನ್ನ ಪೂರ್ತಿ ಓದಿದ ಮೇಲೆ .. ಗಣೇಶ ಮೆಲ್ಲಗೆ ಸಾಹೇಬರ ಕಡೆಗೆ ನೋಡಿದ... ಆಗ ರಾಜೇಶ "ಗಣೇಶ...  ಕೊಡು ಆ ಚೀಟಿಯನ್ನಾ.. ತಗೋ ಇದನ್ನ.. " ಸತ್ತ ಶಿವನ ಜೇಬಿನಲ್ಲಿದ್ದ ಕಾಗದವನ್ನು ತೆಗೆದು ಅದನ್ನು ಗಣೇಶನಿಗೆ ಕೊಟ್ಟ...

"ಈಗ ಇದನ್ನು ಓದು.. ಆಮೇಲೆ ಮಾತಾಡೋಣ.. ಏನಪ್ಪಾ  ಎರಡು ಕಾಫಿ ಮತ್ತೆ ಸಿಗರೇಟ್ ತೆಗೆದುಕೊಂಡು ಬಾ" ತನ್ನ ಅಡಿಗೆಯವನಿಗೆ ಹೇಳಿದ .....  ಸಾಹೇಬ್ರು ಮನೆಯಲ್ಲಿಯೇ ಇದ್ದದ್ದನ್ನು ತಿಳಿದು ಮತ್ತೆ ಬಂದಿದ್ದ.

ಕಾಫಿ ಸಿಗರೇಟ್ ಬಂತು.. ಕಾಫಿಯನ್ನು ಗಣೇಶನಿಗೆ ಬಗ್ಗಿಸಿ ಕೊಟ್ಟು.. ತಾನು ಸಿಗರೇಟ್ ಹಚ್ಚಿದ.. ಮೊಗದಲ್ಲಿ ಒಂದು ರೀತಿಯ ನೆಮ್ಮದಿ ಇತ್ತು.. ಕೇಸನ್ನು ಇನ್ನೇನು ಮುಗಿಸಬಹುದು ಎನ್ನಿಸುವ ಒಂದು ನೆಮ್ಮದಿಯ ಕಳೆ.. !

ಗಣೇಶ.. ಮೊದಲ ಕಾಗದ ಓದಿದಾಗ ಕೈ ನಡುಗಲು ಆರಂಭಿಸಿತ್ತು.. ಆದರೆ ಎರಡನೇ ಕಾಗದ ಓದುವಾಗ  ಕೊಂಚ ಧೈರ್ಯ ಬಂದಿತ್ತು..

ಕಾಫಿಯ ಒಂದು ಗುಟುಕನ್ನು ಕುಡಿದು.. "ಸಾಹೇಬ್ರೆ .. ನೆಡೆಯಿರಿ ಹೋಗೋಣ.. ಇವತ್ತು ಒಂದು ತೀರ್ಮಾನವಾಗಿಯೇ ಬಿಡಲಿ"

"ಹಾಗೆ ಅವಸರ ಮಾಡಬೇಡ ಗಣೇಶ .. ಕಾಫಿ ಕುಡಿ.. ನಾ ಸಿಗರೇಟ್ ಮುಗಿಸುವ ತನಕ.. ಆಮೇಲೆ ಇಬ್ಬರೂ ಹೋಗೋಣ.. ಸ್ಟೇಷನ್ ಹತ್ತಿರ ಸೀನಪ್ಪ ರಂಗನನ್ನು ಕರೆದುಕೊಂಡು ಹೋದರಾಯಿತು.. " ಉಫ್ ಎಂದು ಸಿಗರೇಟಿನ ಹೊಗೆಯನ್ನು ಮೇಲಕ್ಕೆ ಇನ್ನೂ ಎತ್ತರಕ್ಕೆ ಬಿಟ್ಟ..

ಜೀಪು ಸ್ಟಾರ್ಟ್ ಆಯಿತು.. ರಾಜೇಶ ಫೋನ್ ಮಾಡಿ "ರೀ ಸೀನಪ್ಪ ನೀವು ಮತ್ತೆ ರಂಗ ಸ್ಟೇಷನ್ ಹೊರಗೆ ಇರಿ.. ನಾನು ಗಣೇಶ ಬರ್ತಾ ಇದ್ದೀವಿ.. ಜೊತೆಯಲ್ಲಿಯೇ ಹೋಗೋಣ"

ಇತ್ತಾ.. ಹಿಂದಿನ ದಿನ ಸೀನಪ್ಪ ಹಾಕಿಕೊಂಡಿದ್ದ ಟೋಪಿ..  ಮಳೆಯಿಂದ ಒದ್ದೆಯಾಗಿತ್ತು.. ಆದರೂ ಕರ್ತವ್ಯದ ಮೇಲೆ ಇದ್ದಾಗ ಧರಿಸಲೇ ಬೇಕು ಎಂಬ ಸಾಹೇಬರ ನಿರ್ದೇಶನ ಅಥವಾ ಆದೇಶ ಇದ್ದರಿಂದ ಹಾಕಿಕೊಂಡೆ ಇದ್ದ.. ಆದ್ದರಿಂದ ಅದನ್ನು ತೆಗೆದು ತಲೆಯನ್ನು ಪರ ಪರ ಕೆರೆದುಕೊಂಡು.. "ಈ ಸಾಹೇಬ್ರಿಗೆ ನಿಜವಾಗಿಯೂ ಹುಚ್ಚು ಹಿಡಿದಿದೆ.. ಈ ಬಾರಿ ಮೇಡಂ ಬಂದಾಗ ಹೇಳಬೇಕು.. ಕೊಳ್ಳೇಗಾಲಕ್ಕೆ ಕರೆದುಕೊಂಡು ಹೋಗಿ ಮಂತ್ರ ಹಾಕಿಸಿ.... ಹಾಡು ಕೇಳ್ತಾರೆ.. ಗಣೇಶನ್ನ ಕರೆದುಕೊಂಡು ಬಾ ಅಂತಾರೆ.. ಜೊತೆಯಲ್ಲಿ ಹೋಗೋಣ ಅಂತಾರೆ.. ಏನಪ್ಪಾ.. ನೆಡಿಯೋ ರಂಗ.. ಹೋಗೋಣ"

ಜೀಪು ಬರುವಷ್ಟರಲ್ಲಿ ಇಬ್ಬರೂ ಟೋಪಿ ಧರಿಸಿ ಗೇಟಿನ ಹತ್ತಿರ ನಿಂತಿದ್ದರು.. ಹೊರಗೆ ಜನ ಜಂಗುಲಿ.. ಜೀಪಿನಲ್ಲಿ ಗಣೇಶ ಇದ್ದದ್ದು ನೋಡಿ.. ಸುತ್ತ ಮುತ್ತಲ ಇನ್ನಷ್ಟು ಮಂದಿ ಸೇರಿದ್ದರು.. ಚಿಕ್ಕ ಗ್ರಾಮ.. ಏನೇ ಆದರೂ ಕಿವಿಯಿಂದ ಕಿವಿಗೆ ಹರಡಿ.. ದೊಡ್ಡ ಜನ ಸಾಗರವೇ ಸೇರುತ್ತಿತ್ತು...

ರಾಜೇಶನ ಬಾಯಲ್ಲಿ ಕೆಂಡ ಕಾರುತ್ತಿದ್ದ ಸಿಗರೇಟ್.. ಅದರಿಂದ ಹೊಗೆ.. ಅನಾಯಾಸವಾಗಿ ಆ ಹಳ್ಳಿಯ ಕಾಡು ಹಾದಿಯಲ್ಲಿ ಅಂಗೈ ರೇಖೆಯಷ್ಟು ಪರಿಚಿತವಾಗಿದ್ದ ಹಾಗೆ ಜೀಪನ್ನು ಚಲಾಯಿಸುತ್ತಿದ್ದ.. ಆ ಊರಿಗೆ ದೊಡ್ಡದಾಗಿದ್ದ ಒಂದು ಬಂಗಲೆಯ ಮುಂದೆ ಜೀಪು ನಿಂತಿತು.. ಬಾರಿ ಕುಳ ಆ ಮನೆಯ ಜಾಯಮಾನ.. ಪೊಲೀಸರಿರಲಿ... ದೊಡ್ಡ ದೊಡ್ಡ ನಾಯಕರೇ, ಪೊಲೀಸ್ ಅಧಿಕಾರಿಗಳೇ ಒಳಗೆ ಹೋಗಲು ಹಿಂದೆ ಮುಂದೆ ನೋಡುತ್ತಿದ್ದರು.. ಆ ಪಾಟಿ ಪ್ರಭಾವಿ ವ್ಯಕ್ತಿ ಆ ಬಂಗಲೆಯ ಯಜಮಾನ..
ಗೂಗಲೇಶ್ವರ.. !
ಜೀಪು ಆ ಬಂಗಲೆಯ ಮುಂದೆ ನಿಂತದ್ದು ನೋಡಿ.. ಸೀನಪ್ಪ.. "ರಂಗ ಮುಗೀತು.. ನಮ್ಮ ಸಾಹೇಬರಿಗೆ ಪೂರ್ತ ತಲೆಕೆಟ್ಟು ಹೋಗಿದೆ. ಈ ವ್ಯಕ್ತಿಯನ್ನು ನೋಡುವುದೇ ಒಂದು ಅಪರಾಧ.. ಅಂತಹದರಲ್ಲಿ ಜೀಪಿನ ಜೊತೆಯಲ್ಲಿ ಒಳಗೆ ಹೋಗೋದು.. ದೇವರೇ ನಮ್ಮ ಕೆಲಸವನ್ನು ನೀನೆ ಕಾಪಾಡಬೇಕು.. " ಮೆಲ್ಲಗೆ ಪಿಸುಗುಟ್ಟಿದ ರಂಗನ ಕಿವಿಯಲ್ಲಿ.. !

ರಂಗ ಉಶ್ ಎಂದು ತುಟಿಯ ಮೇಲೆ ಬೆರಳನ್ನು ಇಟ್ಟು ಸುಮ್ಮನಿರಲು ಹೇಳಿದನು.. !

ಗೇಟಿನ ಒಳಗೆ ಜೀಪು ನುಗ್ಗಿತು..   ಬೃಹತ್ ಬಂಗಲೆ.. ಅದರ ಮುಂದೆ ಒಂದು ಉದ್ಯಾನವನ.. ಎಲ್ಲೆಡೆಯೂ ಹಸಿರು ನಲಿಯುತ್ತಿತ್ತು.. ಹಿಂದಕ್ಕೆ ಸುಂದರವಾದ ಬೆಟ್ಟಗಳ ಸಾಲು.. ಮನೆಯ ಹಿಂದೆ ದೊಡ್ಡ ಕಣಿವೆ.. ಸೂರ್ಯೋದಯ ಮತ್ತು ಸೂರ್ಯಾಸ್ತ ಸೊಗಸಾಗಿ ಕಾಣುತ್ತಿತ್ತು ಈ ಬಂಗಲೆಯ ನಡುವಿನಿಂದ.. ..

"ಓ ರಾಜೇಶಪ್ಪ ಇಲ್ಲಿದ್ದೀನಿ.. ಇಲ್ಲೇ ಬನ್ನಿ"

ಕೂಗಿದ ದನಿಗೆ ತಿರುಗಿದ ರಾಜೇಶ ನಿಧಾನವಾಗಿ ಹೆಜ್ಜೆ ಹಾಕುತ್ತಾ.. ಗಣೇಶ, ರಂಗ, ಸೀನಪ್ಪನ ಜೊತೆಯಲ್ಲಿ ಆ ಕೂಗಿದ ವ್ಯಕ್ತಿಯ ಕಡೆಗೆ ನೆಡೆದ..

ಕಣ್ಣಲ್ಲೇ ನಮಸ್ಕಾರ ಸಲ್ಲಿಸಿ.. ಅಲ್ಲಿಯೇ ಹುಲ್ಲು ಹಾಸಿನ ಮೇಲೆ ಕೂರಿಸಿ.. "ನೋಡಿ.. ಇಲ್ಲಿ ನಾ ರಾಜೇಶನಾಗಿ ಅಲ್ಲಾ..  ಒಂದು ಕೇಸಿನ ತನಿಖಾಧಿಕಾರಿಯಾಗಿ ಬಂದಿದ್ದೇನೆ.. ದಯಮಾಡಿ ಸಹಕರಿಸಬೇಕು.. ಇದು ನನ್ನ ಮನವಿ.. "

"ಆಯಿತು ರಾಜೇಶಪ್ಪ.. ನನ್ನಿಂದ ಏನು ಆಗಬೇಕು ಹೇಳಿ"

"ಒಂದು ಬೋರ್ಡ್ ಬೇಕು.. ಮತ್ತೆ ಪೆನ್ನು ಪೇಪರ್ ಬೇಕು.. ಬೋರ್ಡ್ ಮಾರ್ಕರ್ ಇದ್ದರೆ ಇನ್ನೂ ಅನುಕೂಲ.. "

ಸೀನಪ್ಪ.. ಟೋಪಿಯನ್ನು ಕೈಯಿಂದ ಒದರುತ್ತಾ ಹಾಳಾದ್ದು ಧೂಳು.. ನಿನ್ನೆ ಒದ್ದೆಯಾಗಿತ್ತು.. ಅದಕ್ಕೆ ಧೂಳು ಹೆಚ್ಚು ಅಂತ ಹೇಳುತ್ತಾ ತಲೆಗೂದಲನ್ನು ಚೆನ್ನಾಗಿ ಕೆರೆದುಕೊಂಡ.. ಅವನ ಪರಿಸ್ಥಿತಿ ನೋಡಿ. ರಂಗನಿಗೆ ತಮಾಷೆಯಾಗಿ ಕಂಡಿದ್ದರೆ.. ರಾಜೇಶ ಒಳಗೊಳಗೇ ನಗುತ್ತಿದ್ದ.. ಆ ಬಂಗಲೆಯ  ಮಾಲೀಕ.. ಯಥಾವತ್ ಸ್ಥಿತಿಯಲ್ಲಿ ಕೂತಿದ್ದ.. ಗಣೇಶ ಇದಕ್ಕೆಲ್ಲ ಮೂಕ ಸಾಕ್ಷಿಯಾಗಿ ನಿಂತಿದ್ದ... !

ಬೋರ್ಡ್ ಬಂತು...ನೆಟ್ಟಗೆ ನಿಲ್ಲಿಸಿದ ..
"ರಂಗ.. ಆ ಹಾಡನ್ನು  ಹಾಗೆ ಬರೆಯಿರಿ ಬೋರ್ಡ್ ಮೇಲೆ.. "

ರಂಗ ಮೆಲ್ಲಗೆ ಸೀನಪ್ಪನ ಕಡೆಗೆ ತಿರುಗಿ.. ಫಳ್ ಅಂತ ಕಣ್ಣಲ್ಲೇ ನಕ್ಕ.. ಸೀನಪ್ಪನ ಧೂಳು ತುಂಬಿದ ತಲೆಗೂದಲು ಇನ್ನೊಮ್ಮೆ ಬೆರಳುಗಳ ಜೊತೆ ಆಟವಾಡಿತು.. !!!

"ಕಾಣದಂತೆ ಮಾಯವಾದನು.." ರಂಗ ಬರೆಯಲು ಶುರುಮಾಡಿದ..

"ರಂಗ.. ತಗೊಳ್ಳಿ ಈ ಕಾಗದ.. ನೀವೇ ಬರೆದು ಕೊಟ್ಟಿದ್ದು.. ಆದರೆ ಈ ಹಾಡನ್ನು ನಾ ಹೇಳಿದ ಹಾಗೆ ಬರೆಯಿರಿ.. "

ಹೆಣ್ಣಿಗೆಂದು ಅಂದ ಕೊಟ್ಟನು
ನಮ್ಮ ಶಿವ
ಗಂಡಿನಲ್ಲಿ ಆಸೆ ಇಟ್ಟನು

ನೆಲ್ಲಿಕಾಯಿ ಮರದಲಿಟ್ಟನು
ನಮ್ಮ ಶಿವ
ಕುಂಬಳಕಾಯಿ ಬಳ್ಳಿಲಿಟ್ಟನು

ಆಕಾಶ ಮೇಲೆ ಇಟ್ಟನು
ನಮ್ಮ ಶಿವ
ಪಾತಾಳಾ ಕೆಳಗೆ ಬಿಟ್ಟನು

ಹೂವು ಹಣ್ಣು ಕಾಯಿ ಕೊಟ್ಟು
ಜಗಳವಾಡೋ ಬುದ್ದಿ ಕೊಟ್ಟು

ಹೆಣ್ಣು ಗಂಡು ಸೇರಿಕೊಂಡು
ಯುದ್ಧವನ್ನು ಮಾಡುವಾಗ 

ನಡುವೆ ಈ ಭೂಮಿಯನ್ನು 
ದೋಣಿ ಅಂತೇ ತೇಲಿ ಬಿಟ್ಟು

ನ್ಯಾಯ ನೀತಿಗಾಗಿ ತಲೆಯ
ಚಚ್ಚಿಕೊಳ್ಳಿರೆಂದು ಹೇಳಿ

ಕತ್ತಲಲ್ಲಿ ನ್ಯಾಯವಿಟ್ಟನು
ನಮ್ಮ ಶಿವ
ಕಣ್ಣುಗಳ ಕಟ್ಟಿ ಬಿಟ್ಟನು 

ಕೊಡುವುದನ್ನು ಕೊಟ್ಟು
ಬಿಡುವುದನ್ನು ಬಿಟ್ಟು
ಕೈಯ ಕೊಟ್ಟು ಓಡಿ ಹೋದನು"

ಕಾಣದಂತೆ ಮಾಯವಾದನು..
ನಮ್ಮ ಶಿವ ಕೈಲಾಸ ಸೇರಿಬಿಟ್ಟನು

"ಹಾ ಸರ್ ಬರೆದಾಯಿತು.". ರಂಗ ಕೂಗಿದ...  ಮರದ ಹಿಂದೆ.. ಸಿಗರೇಟ್ ಸೇದುತ್ತಾ ನಿಂತಿದ್ದ ರಾಜೇಶ.. ಅರ್ಧ ಸೇದಿದ ಸಿಗರೇಟನ್ನು ಬಿಸಾಕಿ.. ಮತ್ತೆ ಯಜಮಾನರು ಕೂತಿದ್ದ ಕಡೆಗೆ ಹೆಜ್ಜೆ ಹಾಕುತ್ತಾ ಬಂದ.. !

ಆ ಬಂಗಲೆಯ ಯಜಮಾನರಿಗೆ ಆಶ್ಚರ್ಯ ಅರ್ಥವಾಗುತ್ತಿಲ್ಲ.. ಆದರೆ ಪೋಲೀಸು.. ಏನು ಮಾಡೋದು.. ಏರಿದ್ದ ಹುಬ್ಬನ್ನು ರಾಜೇಶನಿಗೆ ತೋರಿಸಿಕೊಂಡು.. ಏನು ಎನ್ನುವಂತೆ ನೋಡಿದ..

"ಯಜಮಾನರೇ.. ನಿಮ್ಮ ಮಗಳನ್ನು ಕರೆಯಿರಿ ಒಮ್ಮೆ.. .. "

ಯಜಮಾನರ ಗಂಟಲು ಒಣಗಿತು.. "ಯಾಕೆ ರಾಜೇಶಪ್ಪ.. ನನ್ನ ಮಗಳು.. ಯಾಕೆ.. ಏನಾಯಿತು.. ಯಾವಾಗ.. ಯಾಕಪ್ಪ.. ಛೆ.. " ಅರ್ಧ ಪೂರ್ತಿಯಾಗದ ತೊದಲು ಮಾತುಗಳನ್ನು ಕೇಳಿ.. ಗಣೇಶನ ಮೊಗ ಊರಗಲವಾಯಿತು.. !

ಸೀನಪ್ಪನ ತುಟಿ ತುಸು ವಕ್ರವಾಗಿ ನಗೆಯ ಹಾಯಿ ದೋಣಿಯ ಒಂದು ಝಲಕ್ ಕಾಣಿಸಿತು.. !

ಹಾಡನ್ನು ಬೋರ್ಡ್ ಮೇಲೆ ಬರೆದಿದ್ದ ರಂಗ.. ಒಂದು ಸಾಹಸಕ್ಕೆ ತನ್ನ ಸಹಾಯ ಒದಗಿದ ಬಗ್ಗೆ ಹೆಮ್ಮೆಯ ನಗು ಕಂಡಿತು.. !

ರಾಜೇಶ.. ನೆಮ್ಮದಿಯ ನಿಟ್ಟುಸಿರು ಬಿಟ್ಟು.. "ಯಜಮಾನರೇ.. ನೀವೇ ಕರೆಯುತ್ತೀರೋ ಅಥವಾ ರಂಗನನ್ನು ಕಳುಹಿಸಲೋ.. "

"ಮಗಳೇ.. ನಿರ್ಮಲ ಬಾರಮ್ಮ ಇಲ್ಲಿ.. ಲೋ ಕರಿಯ.. ಅಮ್ಮಾವರನ್ನು ಕರೆದು ತಾರೋ.. "

ಅಳುಕುತಾ.. ಮೆಲ್ಲಗೆ.. ನಿರ್ಮಲ ನೆಡೆದುಕೊಂಡು ಬಂದಳು.. ಮೈಯೆಲ್ಲಾ ಅದುರುತ್ತಿತ್ತು.. ಕಣ್ಣಿನ ಹುಬ್ಬಿನ ಮೇಲೆ ಮೇರುಗಿರಿಯ ಮೇಲಿರುವ ಮೋಡಗಳ ಹಾಗೆ.. ದಟ್ಟ ಬೆವರಿನ ಹನಿಗಳು ಮೂಡುತ್ತಿದ್ದವು..

"ಅಪ್ಪಾ.. ಏನಪ್ಪಾ.. ?" ಅಲ್ಲಿದ್ದ ಪೋಲೀಸಿನವರನ್ನು ನೋಡಿ ಇನ್ನಷ್ಟು  ಗಾಬರಿಯಾಗಿತ್ತು ಅವಳಿಗೆ.. ಆದರೂ ಪ್ರಭಾವಿ ಅಪ್ಪ ಅಲ್ಲಿಯೇ ಇದ್ದದ್ದು ನೋಡಿ.. ಒಂದು ತುಸು ಧೈರ್ಯ ಬಂದಿತು.. ಆದರೂ..

ರಾಜೇಶ.. ತನ್ನ ತಲೆಗೂದಲ ಜೊತೆಯಲ್ಲಿ ಆಟವಾಡುತ್ತಾ..

ನೋಡಮ್ಮ.. ಈ ಚೀಟಿಯನ್ನು ನೋಡು.. ಅಣ್ಣಾವ್ರ ಚಲಿಸುವ ಮೋಡಗಳು ಚಿತ್ರದ ಕಾಣದಂತೆ ಮಾಯವಾದನು ಹಾಡಿದೆ.. ಈ ಚೀಟಿಯಲ್ಲಿ ಇನ್ನೊಂದು ಪತ್ರವಿದೆ.. ಆ ಪತ್ರದಲ್ಲಿರುವುದನ್ನ ಇಲ್ಲಿಗೆ ಹೊಂದಿಸಿ ಬರಿಯಿರಿ.. ಅದು ಅಷ್ಟೇ.. ಸಾಕು ನಾವು ಹೋಗಿಬಿಡುತ್ತೇವೆ..

ಆದರೆ ಅದು ಅಷ್ಟೊಂದು ಸುಲಭ ಇರಲಿಲ್ಲ.. ಇನ್ನೊಂದು ಪತ್ರವನ್ನು ಕೈಗೆ ತೆಗೆದುಕೊಂಡ ತಕ್ಷಣ.. ದೊಪ್ ಎಂದು ಕುಸಿದು ಬಿದ್ದಳು ನಿರ್ಮಲ.. ..

ರಾಜೇಶ ನಗುತ್ತಾ.. ಯಜಮಾನರೇ.. ನೋಟೀಸ್ ಕಳಿಸುತ್ತೇನೆ.. ಉತ್ತರಿಸಿ.. ಹಾಗೆ ಮಗಳು ಎದ್ದ ಮೇಲೆ.. ನೀವೇ ಪೊಲೀಸ್ ಸ್ಟೇಷನಿಗೆ ಕರೆದುಕೊಂಡು ಬನ್ನಿ ಮಾತಾಡೋದಿದೆ..

ದಿಕ್ಕು ಕಾಣದ ಕುರಿಯ ತರಹ.. ತಲೆ ಬಾಗಿಸಿ ಒಪ್ಪಿಗೆ ಸೂಚಿಸಿದರು...

ರಂಗ.. ಜೀಪು ಸ್ಟಾರ್ಟ್ ಮಾಡಿಕೊಂಡು ಕೂತಿದ್ದ.. ಗಣೇಶನ ಖುಷಿಯಿಂದ ಶಿಳ್ಳೆ ಹಾಕುತ್ತಿದ್ದ.. ಸೀನಪ್ಪನ ತಲೆ ಕೆರೆತ ಇನ್ನೂ ಕಡಿಮೆಯಾಗಿರಲಿಲ್ಲ...

ರಾಜೇಶ ಸೀನಪ್ಪನ ಅವಸ್ಥೆ ಕಂಡು.. "ರೀ ಸೀನಪ್ಪ.. ಸಿಗರೇಟ್ ಕೊಡಲೇನು"

ಸಾಹೇಬರ ಈ ಪ್ರಶ್ನೆಗೆ ಹಾವು ತುಳಿದವನಂತೆ.. ಹಾ ಸಾಹೇಬ್ರೆ.. ಏನೂ ಮಾತಾಡ್ತ  ಇದ್ದೀರಿ.. ಸಿಗರೇಟ್ ಬೇಡ.. ಈ ಶಿವನ ಸೀಕ್ರೆಟ್ ಹೇಳಿಬಿಡಿ..  ಸಾಕು.. "

ಅಷ್ಟೇ ತಾನೇ.. ರಂಗ.. ಸೀದಾ ಜೀಪನ್ನು ಗಣೇಶನ ಹೋಟೆಲಿನ ಕಡೆ ತಿರುಗಿಸಿ ಆಮೇಲೆ ನಮ್ಮ ಮನೆಗೆ ಹೋಗೋಣ..

ಜೀಪು ಸರ್ರ್ ಅಂತ ರಾಜೇಶನ ಮನೆಯ ಕಡೆ ತಿರುಗಿತು.. !

(ಅಂತಿಮ ಭಾಗ ಸಧ್ಯದಲ್ಲಿಯೇ!!!)

2 comments:

  1. ಅಯ್ಯೋ ಶ್ರೀಕಾಂತ, ಈ ಮಿಸ್ಟರಿಯನ್ನ ಬೇಗನೇ ಬಿಡಿಸಿ ಹೇಳಿರಪ್ಪಾ! ನಾನು ಕುತೂಹಲದಿಂದ ಒದ್ದಾಡುತ್ತಿದ್ದೇನೆ.

    ReplyDelete