Monday, February 13, 2017

ಕಾಣದಂತೆ ಮಾಯವಾದನೋ .... ಭಾಗ - ೧

ಹಚ್ಚಿದ್ದ ಕಿಂಗ್ ಇನ್ನೂ ಮುಗಿದಿರಲಿಲ್ಲ.. ಆಗಲೇ ಆಶ್ ಟ್ರೇ ತುಂಬಾ ಕಿಂಗ್ ತುಂಡುಗಳು ತುಂಬಿತ್ತು. ಕೂತಿದ್ದ ಆಫೀಸಿನ ಕೊಠಡಿ ದಟ್ಟವಾದ ಧೂಮದಿಂದ ತುಂಬಿತ್ತು.. ಗಡಿಯಾರ ಬೆಳಗಿನ ಜಾವ  ಮೂರು ಎಂದು ಸಾರಿ ಸಾರಿ ಹೇಳುತ್ತಿತ್ತು. ಕುಡಿದು ಕಸದ ಬುಟ್ಟಿಯಲ್ಲಿ ಹಾಕಿದ್ದ ಟೀ, ಕಾಫಿ ಕಪ್ಪುಗಳು ನಿದ್ದೆಯನ್ನು ದೂರ ದೂರ ತಳ್ಳಿದ್ದು ನಾವೇ ಎಂದು ಸಾಕ್ಷ್ಯ ತೋರಿಸುತ್ತಿತ್ತು.

ಕೆದರಿದ ತಲೆಕೂದಲು, ಕೆಂಪಾದ ಕಣ್ಣುಗಳು.. ಅಸ್ತವ್ಯಸ್ಥವಾಗಿದ್ದ ಸಮವಸ್ತ್ರ.. ಟೇಬಲ್ ಮೇಲೆ ಹರಡಿದ್ದ ಫೈಲಿನ ಕಾಗದಗಳು, ಫೋಟೋಗಳು.. ಬೇರೆ ಏನನ್ನೋ ಹೇಳೋಕೆ ಕಾಯುತ್ತಿದ್ದವು. ಹೊರಗೆ ಜಿಟಿ ಜಿಟಿ ಮಳೆ... ತಾ ಹಿಡಿದಿದ್ದ ಕೇಸಿನ ತನಿಖೆ ಹೇಗೆ ಮುಂದುವರೆಸೋದು ಅನ್ನೋದು ಗೋಜಲಾಗಿತ್ತು.

"ಸಾರ್. .. ಇನ್ನೊಂದು ಕಾಫಿ ತರಲೆ.. "

ಯೋಚನಾ ಲಹರಿಯಲ್ಲಿದ್ದ  ರಾಜೇಶನನ್ನ ಮತ್ತೆ ಧರೆಗೆ ತಂದಿತು ಆ ಧ್ವನಿ..

"ಬೇಡ್ರಿ ಸೀನಪ್ಪ.. ಆಗಲೇ ಎಷ್ಟೊಂದು ಕಾಫಿ ಆಗಿದೆ..  ಬೆಳಿಗ್ಗೆ ಆಗಲಿ ಮನೆಗೆ ಹೋಗಿ ಸ್ನಾನ ಮಾಡಿ ಫ್ರೆಶ್ ಆಗಿ ಬರ್ತೀನಿ.. "

"ಸರಿ ಸಾಹೇಬ್ರೆ ಹಾಗೆ ಮಾಡಿ.. ಹಾಳಾದ್ದು ಸುಮ್ನೆ ನಮ್ಮ ತಲೆ ತಿನ್ನೋಕೆ ಹೀಗೆಲ್ಲಾ ಮಾಡ್ತಾರೆ.. " ಗೊಣಗಾಡುತ್ತಾ ಸೀನಪ್ಪ ತಮ್ಮ ಕುರ್ಚಿಯಲ್ಲಿ ಸೇರಿಕೊಂಡರು..

ಮಳೆ ತರುತ್ತಿದ್ದ ಗಾಳಿ, ಗಾಳಿ ತರುತ್ತಿದ್ದ ಮಳೆ.. ಮೈಯನ್ನು ನಡುಗಿಸುತ್ತಿತ್ತು.. ಥರ್ಮಾಸ್ ಫ್ಲಾಸ್ಕ್ ಗಳಲ್ಲಿ  ಕಾಫೀ, ಟೀ ತಳ ಕಂಡಿತ್ತು.. ಸ್ಟೇಷನ್ ಎದುರು ಇದ್ದ ಟೀ ಅಂಗಡಿಯವ ಕೊಟ್ಟಿದ್ದ ಮಿರ್ಚಿ ಮೆಣಸಿನಕಾಯಿ, ಮಿರ್ಚಿ ಬೋಂಡಾ ಆಗಲೇ ಹೊಟ್ಟೆಯೊಳಗೆ ಅಸ್ತಂಗತವಾಗಿದ್ದವು.. ಮಳೆಯಿಂದಾಗಿ ಅವನಿಗೂ ತಲೆ ಕೆಟ್ಟು ಮಧ್ಯರಾತ್ರೀ ಸುಮಾರು ಎರಡಕ್ಕೆ ಬಾಗಿಲು ಎಳೆದುಹೋಗಿದ್ದ.

ಅದು ಕಾಡಿನಂಚಿನಲ್ಲಿರುವ ಸ್ಟೇಷನ್.. ಜೊತೆಯಲ್ಲಿ ಎರಡು ರಾಜ್ಯಗಳ ಗಡಿಯಲ್ಲಿದ್ದದ್ದು..ತಪಾಸಣೆ, ಆರಕ್ಷಕ ಸಿಬ್ಬಂದಿ .. ಇದೆಲ್ಲದರ ಜೊತೆಯಲ್ಲಿ ಬಸ್ ಮತ್ತು ರೈಲ್ವೆ ನಿಲ್ದಾಣಗಳು ಆ ಸುತ್ತಮುತ್ತಲ ಪ್ರದೇಶವನ್ನು ಗಿಜಿ ಗಿಜಿ ಎನ್ನುವಂತೆ ಮಾಡಿತ್ತು.

ಪ್ರಯಾಣಿಕರು, ಊರಿಂದ ಊರಿಗೆ ಓಡಾಡುವವರು, ಕಾಡಿನ ಮೂಲಕ ಹೋಗುವವರು ಎಲ್ಲಾರೂ ಒಂದು ಬಾರಿ ಅಲ್ಲಿ ವಿಶ್ರಮಿಸಿ ಹೋಗುತ್ತಿದ್ದ ತಾಣವಾದದ್ದರಿಂದ ಬೋಂಡದ ಅಂಗಡಿಗೆ ಒಳ್ಳೆಯ ವ್ಯಾಪಾರವಾಗುತ್ತಿತು.. ಆದರೆ ಯಾಕೋ ಆ ಘಟನೆ ನೆಡೆದ ಒಂದು ವಾರದಿಂದ ಯಾರೂ ಅಲ್ಲಿ ಹೆಚ್ಚು ನಿಲ್ಲುತ್ತಿರಲಿಲ್ಲ. ಆದರೆ ವ್ಯಾಪಾರಿಗಳು ಓಡಾಡಲೇ ಬೇಕಿದ್ದ ಅನಿರ್ವಾರ್ಯತೆ ಇದ್ದದ್ದರಿಂದಲೋ ಏನೋ.. ಇಪ್ಪತ್ತನಾಲ್ಕು ಘಂಟೆ ತೆರೆದೇ ಇರುತ್ತಿದ್ದ ಆ ಬೋಂಡದ ಅಂಗಡಿಗೆ ಗಿರಾಕಿಗಳು ಮೊದಲಿನಷ್ಟು ಇಲ್ಲದೆ ಇದ್ದರೂ, ತಡರಾತ್ರಿ ತನಕ ಹಾಗೂ ಹೀಗೂ ತನ್ನ ಸರಕನ್ನು ಮಾರುತ್ತಿದ್ದ ಆ ಅಂಗಡಿ ಮಾಲೀಕ ಗಣೇಶ.

ಒಂದು ರೀತಿಯಲ್ಲಿ ಗವ್ವ್ ಎನ್ನುವ ಕತ್ತಲೆ, ಈ ಮಳೆಯ ಕಾಟ.. ಚಳಿ.. ರಾಜೇಶನಿಗೆ ಬೆಳಿಗ್ಗೆ ಆದರೆ ಸಾಕು ಎನ್ನಿಸುತ್ತಿತ್ತು..

"ರೀ ಸೀನಪ್ಪ.. ಹಾಗೆ ಮಲಗಿರ್ತೀನಿ ಕಣ್ರೀ.. ಫೋನ್ ಏನಾದರೂ ಬಂದರೆ ನೀವೇ ಅಟೆಂಡ್ ಮಾಡಿ.. "

"ಸರಿ ಸಾಹೇಬ್ರೆ.. ನೀವು ತುಂಬಾ ಸುಸ್ತಾಗಿದ್ದೀರಾ.. ನಡೀರಿ ಸಾಹೇಬ್ರೆ ನಾನೇ ಮನೆಗೆ ಬಿಟ್ಟುಬರುತ್ತೇನೆ"

"ಬೇಡ ಸೀನಪ್ಪ.. ನೀವು ನನ್ನ ಜೊತೆ ತಿರುಗಿ ತಿರುಗಿ ಸುಸ್ತಾಗಿದ್ದೀರಾ.. ಸ್ವಲ್ಪ ಹೊತ್ತು ಇನ್ನೇನೂ ಬೆಳಗಾಗುತ್ತೆ.. ನಾ ಮನೆಗೆ ಹೋಗಿ ಸ್ವಲ್ಪ ಹೊತ್ತು ನಿದ್ದೆ ಮಾಡಿ ಬರುತ್ತೇನೆ.. ಬೆಳಿಗ್ಗೆ ರಂಗ ಬಂದ ಮೇಲೆ ನೀವು ಮನೆಗೆ ಹೋಗಿ ಆಮೇಲೆ ಬನ್ನಿ"

"ಸರಿ ಸಾಹೇಬ್ರೆ.. ಮಾತಾಡಿ ಆಯಾಸವು ಹೆಚ್ಚಾಗುತ್ತದೆ.. ನೀವು ಹಾಗೆ ನಿದ್ದೆ ಮಾಡಿ ನಾ ನೋಡಿಕೊಳ್ಳುತ್ತೇನೆ"

"ಥ್ಯಾಂಕ್ಸ್ ಕಣ್ರೀ.. ಸೀನ...... " ಇನ್ನೂ ವಾಕ್ಯವನ್ನು ಪೂರ್ತಿ ಮಾಡಿರಲಿಲ್ಲ.. ಆಗಲೇ ಕಣ್ಣು ಭಾರವಾಗಿತ್ತು.. ಹಾಗೆ ಕುರ್ಚಿಗೆ ಒರಗಿಕೊಂಡು ಕಣ್ಣು ಮುಚ್ಚಿದ್ದ..

"ಪಾಪ ಸಾಹೇಬ್ರು.. ಹಗಲು ರಾತ್ರಿ ಅನ್ನದೆ ಡ್ಯೂಟಿ ಮಾಡ್ತಾರೆ.. ಪಾಪ ಚೆನ್ನಾಗಿ ನಿದ್ದೆ ಮಾಡಲಿ" ಎಂದು ಹೇಳಿಕೊಳ್ಳುತ್ತಾ.. ಸ್ಟೇಷನ್ ಕಿಟಕಿ ಬಾಗಿಲು ಎಲ್ಲಾ ಮುಚ್ಚಿ.. ಹೊರಗಿನ ಒಂದೇ ದೀಪ ಬಿಟ್ಟು ಮಿಕ್ಕ ದೀಪಗಳನ್ನು ಆಫ್ ಮಾಡಿದ..

ಸೀನಪ್ಪನ ಮನಸ್ಸು ಒಮ್ಮೆ ಹಿಂದಕ್ಕೆ ಜಾರಿತು.. ಕಾಡಿನ ಅಂಚಿನಲ್ಲಿದ್ದ ಪೊಲೀಸ್ ಸ್ಟೇಷನ್ ಹತ್ತಿರದ ಒಂದು ಮರದ ಹತ್ತಿರ ಬೆಳಿಗ್ಗೆಯಿಂದ ಒಬ್ಬ ವ್ಯಕ್ತಿ ಕೂತಿದ್ದಾನೆ ಎಂದು ಫಾರೆಸ್ಟ್ ಚೆಕ್ ಪೋಸ್ಟ್ ನವರು ಹೇಳಿದ್ದರು. ಕಾಡಲ್ಲವೇ ಸುಮ್ಮನೆ ವಿಶ್ರಾಂತಿಗೆಂದು ಕೂರುವವರು ಇರುತ್ತಾರೆ ಎಂದು ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ.. ಜೊತೆಯಲ್ಲಿ ಗಿಜಿ ಗಿಜಿ ಜನಜಂಗುಳಿ, ಕಡತಗಳು ಆ ವ್ಯಕ್ತಿಯ ಮೇಲೆ ಗಮನ ಹರಿಸಲು ಆಗಿರಲಿಲ್ಲ.. ಆದರೆ ಸಂಜೆಯಾದರೂ ಆ ವ್ಯಕ್ತಿ ಏಳದೆ ಇದ್ದದ್ದು ನೋಡಿ.. ಯಾಕೋ ಅನುಮಾನ ಬಂದು.. ಜನ ಸೇರಿದರು.. ಆಗ ಗೊತ್ತಾಗಿದ್ದು.. ಆ ವ್ಯಕ್ತಿಯ ಹೃದಯ ಬಡಿತ ನಿಂತು ಹೋಗಿತ್ತು.. ಎಂದು..

ಶವ ತಪಾಸಣೆ ಎಂದು..ವ್ಯಕ್ತಿಯ ಜೇಬನ್ನೆಲ್ಲ ಹುಡುಕಿದಾಗ.. ಸಿಕ್ಕ ಒಂದು ಪತ್ರವನ್ನು ನೋಡಿ ರಾಜೇಶ ಅಕ್ಷರಶಃ ಒಮ್ಮೆ ಬೆವತಿದ್ದ..

"ಏನ್ರಿ ಸೀನಪ್ಪ ಇದು? ಹೀಗೆಲ್ಲಾ.... ?"

"ಸೀನಪ್ಪ .. ಸೀನಪ್ಪ.. ನೀನು ಸರಿ ಇದ್ದೀಯ.. ನೀನು ನಿದ್ದೆ ಮಾಡಿದ್ದೀಯಾ.. " ರಂಗ ಬಂದು ಅಲುಗಾಡಿಸಿದಾಗ.. ಎಚ್ಚರ.. ಸೀನಪ್ಪನಿಗೆ.. ಯೋಚನೆ ಮಾಡುತ್ತಾ ಅದು ಯಾವಾಗ ನಿದ್ದೆಗೆ ಜಾರಿದ್ದನೋ ಅರಿವಿಲ್ಲ..

"ಸರಿ ಸರಿ ಸೀನಪ್ಪ.. ನೀ ಹೊರಡು.. ಹಾಗೆ ಸಾಹೇಬ್ರ ಜೀಪನ್ನು ನೀನೆ ಡ್ರೈವ್ ಮಾಡಿಕೊಂಡು ಹೋಗು.. "

"ಆಅಹ್!.. ಸಾಹೇಬ್ರ ಜೀಪಾ?.. ಅವರೆಲ್ಲಿ ಹೋದ್ರು..? "

"ನೀ ಮಲಗಿದ್ದನ್ನು ನೋಡಿ ನಿನಗೆ ಒಂದು ಹೊದ್ದಿಕೆ ಹೊದ್ದಿಸಿ.. ಗಣೇಶನ ಅಂಗಡಿಯಲ್ಲಿ ಟೀ ಕುಡಿದು.. ರಂಗ ನಾ ಹೀಗೆ ನೆಡೆದು ಹೋಗುತ್ತೇನೆ.. ಸೀನಪ್ಪನಿಗೆ ಜೀಪು ತಗೊಂಡು ಹೋಗೋಕೆ ಹೇಳು.. ಬರುವಾಗ ನನ್ನ ಮನೆಯ ಹತ್ತಿರ ಬರಲಿ.. ನಾ ಜೊತೆಯಲ್ಲಿ ಬರುತ್ತೇನೆ ಎಂದು ಹೇಳಿ ಹೋಗಿದ್ದಾರೆ"

"ಅಯ್ಯೋ ಎಂಥಹ ಕೆಲಸ ಆಯಿತು.. ಪಾಪ ಸಾಹೇಬ್ರು.. .. ಸರಿ ನಾ ಹೋಗಿ ಬರುತ್ತೇನೆ.. "

ಮನೆಗೆ ಹೊರಟ ಸೀನಪ್ಪನ ತಲೆ ಮೊಸರು ಗಡಿಗೆಯಾಗಿತ್ತು..

ಇತ್ತ ರಾಜೇಶ ಕಿಂಗ್ ಹಚ್ಚಿಸಿಕೊಂಡು ಆರಾಮಾಗಿ ಆ ಬೆಳಗಿನ ಮಂಜಿನ ಹನಿಯಲ್ಲಿ ಕಾಡಿನ ಕಾಲುದಾರಿಯಲ್ಲಿ ಅಂಚಿನಲ್ಲಿದ್ದ ತನ್ನ ಮನೆಗೆ ನೆಡೆಯುತ್ತಾ ಸಾಗಿದ..

ಬೆಳಿಗ್ಗೆ ದಿನಪತ್ರಿಕೆ ಹಂಚುವವ, ಹಾಲು ಮಾರುವವ ಸಲಾಮು ಹೊಡೆಯುತ್ತಾ ಸಾಗುತಿದ್ದರು.. ಮನೆ ತಲುಪಿ.. ಸುಸ್ತಾಗಿದ್ದ .. ಮನೆಯ ಹಾಲಿನಲ್ಲಿದ್ದ ದೀವಾನ್ ಮೇಲೆ ಹಾಗೆ ವಿರಮಿಸಿದ.. ಕಣ್ಣುಗಳು ಎಳೆದುಕೊಂಡು ನಿದ್ರಾದೇವಿಯನ್ನು ಆಲಂಗಿಸಿಕೊಂಡಿತ್ತು..

ಗಡಿಯಾರ ಹನ್ನೊಂದು ಘಂಟೆ ಎಂದು ಹೊಡೆದಾಗಲೇ ರಾಜೇಶನಿಗೆ ಎಚ್ಚರ..   ಟ್ರಾನ್ಸ್ಫರ್ ಕೆಲಸವಾದ್ದರಿಂದ ಮಡದಿ ಮತ್ತು ಮಗ ಊರಿನಲ್ಲಿಯೇ ಇದ್ದರು.. ಇವನು ಮಾತ್ರ ವಾರಕ್ಕೊಮ್ಮೆ ಹೋಗಿ ಬರುತ್ತಿದ್ದ.. ಆದರೆ ಈ ಕೇಸು ಹಿಡಿದಾಗಿಂದ.. ಮನೆಗೆ ಹೋಗಿರಲೇ ಇಲ್ಲ..

ಕೆಲಸದವ ಮಾಡಿಟ್ಟಿದ್ದ ಕಾಫಿ ಬಗ್ಗಿಸಿಕೊಂಡು, ಪೇಪರ್ ಓದುತ್ತಾ.. ಟಿವಿ ಆನ್ ಮಾಡಿದ..

"ಏನೋ ಕಪ್ಪಗಿದ್ದಾಳೆ ಅಂದಿದ್ದೆ.. ಒಳ್ಳೆ ಆಪಲ್ ಇದ್ದಾಗೆ ಇದ್ದಾಳಲ್ಲೋ.. "
ಅಯ್ಯೋ ಫೂಲ್ ನೀ ಯಾರನ್ನೂ ನೋಡಿದೆಯೋ" ಹೀಗೆ ತನ್ನ ನೆಚ್ಚಿನ ಅಣ್ಣಾವ್ರ ಚಿತ್ರ "ಚಲಿಸುವ ಮೋಡಗಳು" ಚಿತ್ರ ಉದಯ ಮೂವೀಸ್ ನಲ್ಲಿ ಬರುತ್ತಿತ್ತು.. ಹಾಗೆ ಮೈ ಮರೆತು ನೋಡುತ್ತಿದ್ದ..

ಸ್ವಲ್ಪ ಹೊತ್ತಾದ ಮೇಲೆ "ಕಾಣದಂತೆ ಮಾಯವಾದನೋ ನಮ್ಮ ಶಿವ ಕೈಲಾಸ ಸೇರಿಕೊಂಡನೋ.. ಕೊಡುವುದನ್ನು ಕೊಟ್ಟು.. ಬಿಡುವುದನ್ನು ಬಿಟ್ಟು ಕೈಯ ಕೊಟ್ಟು ಓಡಿ ಹೋದನೋ" ಲೋಹಿತ್ ಹಾಡಿ ಅಣ್ಣಾವ್ರು-ಅಂಬಿಕಾ ಕುಣಿದಿದ್ದ ಹಾಡು ಬರುತ್ತಿತ್ತು..

ಅರೆ.. ಆ ಸತ್ತ ವ್ಯಕ್ತಿಯ ಹೆಸರು ಶಿವ.. ಅವನು ಕೂಡ ಕೈಲಾಸವಾಸಿಯಾಗಿದ್ದಾನೆ....

"ಕತ್ತಲ್ಲಲ್ಲಿ ನ್ಯಾಯವಿಟ್ಟನೋ ನಮ್ಮ ಶಿವ"

ಹುರ್ರೆ.. ಹುರ್ರೇ..

ತಕ್ಷಣ ತನ್ನ ಮೊಬೈಲ್ ತೆಗೆದುಕೊಂಡು ಸೀನಪ್ಪನಿಗೆ "ರೀ ಸೀನಪ್ಪ.. ನೀವು ಸೀದಾ ಸ್ಟೇಷನ್ನಿಗೆ ಹೋಗಿ.. ಎದುರು ಬೋಂಡಾ ಅಂಗಡಿಯ ಗಣಪನನ್ನು ಕರೆದುಕೊಂಡು ನಮ್ಮ ಮನೆಗೆ ಬನ್ನಿ"

ಕತ್ತಲಲ್ಲಿ ಬೆಳಕು ಮೂಡಿದ ಅನುಭವ.. ತಕ್ಷಣ ಇನ್ನೊಂದು  ಫೋನ್ ರಂಗನಿಗೆ "ರೀ ರಂಗ.. ಅಣ್ಣಾವ್ರ ಚಲಿಸುವ ಮೋಡಗಳು ಚಿತ್ರದಲ್ಲಿ ಕಾಣದಂತೆ ಮಾಯವಾದನೋ ಹಾಡಿನ ಸಾಹಿತ್ಯ ನನಗೆ ಬೇಕು.. ನಿಮ್ಮ ಮೊಬೈಲ್ ನಲ್ಲಿ ಆ ಹಾಡಿದೆ ಅಲ್ಲವೇ.. ನಿಧಾನಕ್ಕೆ ಕೇಳಿ ಕೇಳಿ ಇಡೀ ಹಾಡನ್ನು ಬರೆದುಕೊಂಡು ಬನ್ನಿ.. "

ರಂಗ ತಲೆ ಕೆರೆದುಕೊಂಡ.. ಸೀನಪ್ಪನ ಜೀಪು ಪೊಲೀಸ್ ಸ್ಟೇಷನ್ ಬಾಗಿಲಲ್ಲಿ ಕಿರ್ರ್ ಸದ್ದು ಮಾಡುತ್ತಾ ಬ್ರೇಕ್ ಹಾಕಿ ನಿಂತಿತು.. !!! 

14 comments:

  1. Super ede next part bega barli����

    ReplyDelete
    Replies
    1. Magale Thank you for the comment..let see what boss decides

      Delete
  2. Sadya sahebrige kone line jnapaka barlilla..ade, Kaiyya kottu odihodanu .... anta ����
    mundina bhaga bega barli bhava ��

    ReplyDelete
  3. Kaanadanthe maayavaada shiva namma thaleyolage bandu kootiddane...

    Mundenaagutto emba nireekse kaataradondige...

    ReplyDelete
    Replies
    1. Attige dhanyavaadagalu.. naanu kaayuttiruve boss enu baresuttaare antha :-)

      Delete
  4. Story chennagide good start next part bega barli

    ReplyDelete
  5. ಏನೋ ಮಾಯವಾಗುತ್ತಿರುವ ಅನುಭವ!

    ReplyDelete
    Replies
    1. ಗುರುಗಳೇ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ :-)

      Delete
  6. ಆಹಾ ಎಂತ ಜಾಗಕ್ಕೆ ತಂದು ನಿಲ್ಲಿಸಿದ್ದೀರಿ. ಕುತೂಹಲ ಜಾಸ್ತಿಯಾಗ್ತಾ ಇದೆ. ಬೇಗ ಇನ್ನೊಂದು ಭಾಗ ಬರಲಿ :)

    ReplyDelete
    Replies
    1. ಧನ್ಯವಾದಗಳು ಸಿಬಿ.. ಓದುಗರು ಖುಷಿ ಅಂದ್ರೆ ನಾವು ಖುಷಿ

      Delete