Sunday, November 15, 2015

ದಿವ್ಯ ಚೈತನ್ಯ - ತಾಂತ್ರಿಕವಾಗಿಯೇ ನಿಂತಿರುವ ಅದ್ಭುತ ಜ್ಞಾನ @ Malnad College of Engineering Hassan

ಭಕ್ತ ಕುಂಬಾರ ಚಿತ್ರದ ಒಂದು ದೃಶ್ಯ..

ಒಂದು ಮುದುಕಿ ಸಂತೆಯಲ್ಲಿರುವ ಬಾಲಕೃಷ್ಣ ಅವರ ಅಂಗಡಿಗೆ ಬರುತ್ತಾಳೆ... ಮಣ್ಣಿನ ಪಾತ್ರೆಗಳ ಬೆಲೆಯನ್ನು ವಿಚಾರಿಸಿ, ತನ್ನ ಹತ್ತಿರ ಅಷ್ಟೊಂದು ದುಡ್ಡು ಇಲ್ಲ ಎಂದು ಹೇಳಿ ಅಡಿಗೆ ಮಾಡಿಕೊಳ್ಳಲು ಕೆಲವು ಮಣ್ಣಿನ ಪಾತ್ರೆಗಳು ಬೇಕು ಎಂದಾಗ.. ಬಾಲಕೃಷ್ಣ ಆ ಮುದುಕಿಯನ್ನು ಹೀಯಾಳಿಸಿ ದಬ್ಬುತ್ತಾರೆ. ಆಗ ಅಣ್ಣಾವ್ರ ಅಂಗಡಿಯ ಮುಂದೆ ಬೀಳುವ ಆ ಮುದುಕಿಯನ್ನು ಹಿಡಿದು ನಿಲ್ಲಿಸಿ.. ಏನು ಬೇಕವ್ವ ಎಂದು ಕೇಳುತ್ತಾರೆ.

ಪರಿಸ್ಥಿತಿಯನ್ನು ತಿಳಿದ ಅಣ್ಣಾವ್ರು ಕೆಲವು ಪಾತ್ರೆಗಳನ್ನು ನೀಡಿ, ಇದರಲ್ಲಿ ಅನ್ನ ಮಾಡಿಕೋ, ಇದರಲ್ಲಿ ಸಾರು ಮಾಡಿಕೋ ಅಂತೆಲ್ಲಾ ಹೇಳಿ, ಇನ್ನೂ ಬೇಕಾ ಪಾತ್ರೆಗಳು ಎನ್ನುತ್ತಾರೆ. ಆಗ ಆ ಮುದುಕಿ, ಅಷ್ಟೆಲ್ಲಾ ಪಾತ್ರೆ ಕೊಳ್ಳಲು ನನ್ನ ಬಳಿ ಹಣವಿಲ್ಲ ಎಂದಾಗ, ಬೇಡಮ್ಮ, ಸಂತೋಷವಾಗಿ ಇದನ್ನು ತೆಗೆದುಕೊಂಡು ಹೋಗು, ಹಣ ಬೇಡ ಎನ್ನುತ್ತಾರೆ.

ಆ ಮುದುಕಿ, ಅಲ್ಲಪ್ಪಾ ಕಷ್ಟ ಪಟ್ಟು ಇಷ್ಟೆಲ್ಲಾ ಪಾತ್ರೆಗಳನ್ನು ಮಾಡಿದ್ದೀಯ, ಹಾಗೆ ಕೊಟ್ಟರೆ, ನಿನಗೆ ನಷ್ಟ ಆಗುತ್ತದೆ ಎಂದು ಹೇಳಿದ್ದಾಗ, ಅಣ್ಣಾವ್ರ ಮಾತು

"ನಾನೇನು ಮಾಡಿದೆ ಮಣ್ಣು ಕೊಟ್ಟವಳು ಭೂತಾಯಿ, ನೀರು ಕೊಟ್ಟವಳು ಗಂಗಮ್ಮ, ಬೆಂಕಿ ನೀಡಿದವನು ಅಗ್ನಿ, ನನ್ನದೇನಿದೆ ಇಲ್ಲಿ"

ಒಂದು ಭಾನುವಾರ ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿಗೆ ನನ್ನ ಚಿಕ್ಕಪ್ಪನ ಜೊತೆಯಲ್ಲಿ ಹೋದಾಗ, ನನ್ನ ಚಿಕ್ಕಪ್ಪ ಅಲ್ಲಿನ ದಿವ್ಯ ಚೈತನ್ಯ ಮಂದಿರದ ಬಗ್ಗೆ ವಿವರವನ್ನು ಕೊಟ್ಟರು.

ಅದನ್ನು ಕೇಳಿದಾಗ ಅಣ್ಣಾವ್ರ ಭಕ್ತ ಕುಂಬಾರ ಚಿತ್ರದ ದೃಶ್ಯ ಹಾಗೆ ಕಣ್ಣ ಮುಂದೆ ಬಂದಿತು.

ತನ್ನ ವಿಸ್ತಾರವನ್ನು ಅರಳಿಸುತ್ತಲೇ ಹೋಗುವ ಆಲದಮರ ಜ್ಞಾನದ ಸಂಕೇತ.. ಅಂಥಹ ಒಂದು ಮಹಾನ್ ವೃಕ್ಷ ಇಂಥಹ ಒಂದು ಸುಂದರ ಆಲೋಚನೆಗೆ ದಾರಿ ಮಾಡಿಕೊಟ್ಟದ್ದು ಮಹತ್ವದ ವಿಷಯ. ಆದರೆ ಎಲ್ಲಾ ಸ್ಪೂರ್ತಿಗಳು ಹಾಗೆ ಅಲ್ಲವೇ ನೀರಿನ ಒರತೆಯ ಹಾಗೆ ಶುರುವಾಗೋದು ಒಂದು ಸಣ್ಣ ಸಣ್ಣ ಕಿಡಿಯಿಂದ.



ಈ ಮಂದಿರದ ಬಗ್ಗೆ ನಾನು ಕೇಳಿದ ವಿವರವನ್ನು ಆದಷ್ಟು ನನ್ನ ನೆನಪಿನ ಶಕ್ತಿಯನ್ನು ಒರೆಗೆ ಹಚ್ಚಿ ಹಂಚಿಕೊಳ್ಳಲು ಪ್ರಯತ್ನ ಪಟ್ಟಿದ್ದೇನೆ.

ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಒಂದು ದೊಡ್ಡ ಆವರಣದ ಒಂದು ಭಾಗದಲ್ಲಿ ಬೃಹದಾಕರಾದ ಅರಳಿ ಮರ ಹಲವಾರು ವರ್ಷಗಳಿಂದ ನೆಲೆ ನಿಂತಿತ್ತು. ಅದನ್ನು ಅನುದಿನವೂ ನೋಡುತ್ತಿದ್ದ ಈ ಕಾಲೇಜಿನಲ್ಲಿ ಸುಮಾರು ಮೂವತ್ತು ವರ್ಷಗಳಿಗಿಂತಲೂ ಹೆಚ್ಚು ಒಡನಾಟ ಹೊಂದಿರುವ ನನ್ನ ಚಿಕ್ಕಪ್ಪನಿಗೆ ಈ ಮರದ ಪರಿವಾರದ ಸಮೀಪದಲ್ಲಿ ಮತ್ತು ಈ ಮರವನ್ನು ಕೇಂದ್ರವಾಗಿಟ್ಟುಕೊಂಡು ಏನಾದರೂ ಮಾಡಬೇಕೆಂಬ ಹಂಬಲಕ್ಕೆ ಬೆನ್ನು ತಟ್ಟಿ ಜೊತೆಯಾಗಿ ನಿಂತವರು ಕಾಲೇಜಿನ ಮುಖ್ಯಾಧಿಕಾರಿಗಳು. ಅಲ್ಲಿಂದ ಶುರುವಾಯಿತು ಜೈತ್ರಯಾತ್ರೆ.

ಈ ಪ್ರದೇಶದಲ್ಲಿ ಆಗಬೇಕಾದ ಧ್ಯಾನ ಮಂದಿರ ಮುಂತಾದ ದೈವಿಕ ಪ್ರೇರಣೆಯ ಜವಾಬ್ಧಾರಿ ಇವರ ಹೆಗಲಿಗೆ ಬಿಟ್ಟು, ತಮ್ಮ ಸಹೋದ್ಯೋಗಿಗಳ ಜೊತೆ ಜೊತೆಯಲ್ಲಿ ಇಡಿ ಕಟ್ಟಡ ನೀಲಿ ನಕಾಶೆಯನ್ನು ಹಾಗು ಹೀಗೆಯೇ ಇರಬೇಕೆಂಬ ಸಿದ್ಧತ ಪಟ್ಟಿಯನ್ನು ತಯಾರಿಮಾಡಿದರು.


ವಿಶೇಷಗಳು ಅಂದರೆ, ಈ ಜಾಗದಲ್ಲಿ ಉಪಯೋಗವಾದ ಪ್ರತಿ ವಸ್ತುವು ನೈಸರ್ಗಿಕವಾಗಿ ಬಂದ ಪ್ರಕೃತಿದತ್ತವಾದದ್ದು. ಭೂ ಮಾಲಿನ್ಯ, ಜಲಮಾಲಿನ್ಯ, ವಾತವಾರಣಕ್ಕೆ ಯಾವುದೇ ಹಾನಿಯಾಗುವಂತಹ ವಸ್ತುಗಳನ್ನು ಬಳಸದೆ ಇರುವುದು. ಕಟ್ಟಡಕ್ಕೆ ಅಡಿಪಾಯ ತೆಗೆದಾಗ ಸಿಕ್ಕ ಮಣ್ಣನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ, ಆ ಮಣ್ಣಿನಿಂದಲೇ ಇಟ್ಟಿಗೆಗಳನ್ನು ತಯಾರಿಸಿ ಕಟ್ಟಿರುವುದು ವಿಶೇಷ.


ಇಲ್ಲಿನ ಬಾಗಿಲುಗಳು, ಕಿಟಕಿಗಳು, ಕಂಬಗಳು ಹಿಂದೊಮ್ಮೆ ಅನೇಕ ಮನೆ ಮನಗಳನ್ನು ಬೆಳಗಿದ ಪುರಾತನ ಆದರೆ ಶಿಥಿಲಾ ಅವಸ್ಥೆಯಲ್ಲಿರುವ ಮನೆಗಳಿಂದ ಸಂಗ್ರಹ ಮಾಡಿದ ಕಡೆಯಿಂದ ಹುಡುಕಿ ಹುಡುಕಿ ತಂದು ಜೋಡಿಸಿದ್ದಾರೆ.

ಆ ಜಾಗದಲ್ಲಿ ಸಿಕ್ಕ ವಸ್ತುಗಳಿಂದ, ಅದೇ ಜಾಗದಲ್ಲಿ ಒಂದು ಭವ್ಯ ಮಂದಿರವನ್ನು ಧ್ಯಾನ ಮಂದಿರವನ್ನು ನಿರ್ಮಾಣ ಮಾಡಿ, ಅನೇಕ ಅನೇಕ ಸಮಾನ ಮನಸ್ಕರಿಗೆ ಒಂದು ನೆಮ್ಮದಿ ತಾಣವನ್ನು ಮಾಡಿದ್ದಾರೆ.

ಮಂದಿರದ ಸುತ್ತಲೂ ಕಣ್ಣಾಡಿಸಿದರೆ ಕಾಣುವುದು, ಅದ್ಭುತ ಬರಹಗಳ ಫಲಕಗಳು ಕಣ್ಣಿಗೆ ಮನಸ್ಸಿಗೆ ತಂಪು ನೀಡುತ್ತದೆ. ನಡೆಯುತ್ತಾ ಹೋದ ಹಾಗೆ ನೆಲ ಹಾಸಿನ ಕಲ್ಲುಗಳ ಮೇಲೆ ಸುಂದರ ಚಿತ್ರಗಳನ್ನು ಮೂಡಿಸಿದ್ದಾರೆ. ನೋಡುತ್ತಾ ಹೋದ ಹಾಗೆ  ಮನಸ್ಸಿಗೆ ಆಹ್ಲಾದ ನೀಡುವ ಸುಂದರ ವಾತಾವರಣ ಇದು.


ಒಂದು ಸುತ್ತು ಬಂದು ಬಂದು ಧ್ಯಾನ ಮಂದಿರದ ಒಳಗೆ ಕಾಲಿಟ್ಟರೆ ಒಂದು ಅದ್ಭುತ ವಿನ್ಯಾಸ ಕಣ್ಣಿಗೆ ಕಂಡಿತು.

ಯಾವುದೇ ವಿಷಯವನ್ನು ಅರಿಯಬೇಕಾದರೆ ಆಳಕ್ಕೆ ಇಳಿಯಬೇಕು ಎನ್ನುತ್ತದೆ ಮಾತು, ಅದಕ್ಕೆ ಬಲವಾದ ಅಡೆ ತಡೆ ಬಂದರೂ ಲೆಕ್ಕಿಸದೆ ದಾಟಿ ಹೋಗಿ ಆಳಕ್ಕೆ ಇಳಿಯಬೇಕು ಎನ್ನುತ್ತದೆ ಇನ್ನೊಂದು ಮಾತು. ಅದೇ ಮಾತುಗಳನ್ನು ನೆನಪಿಸುವಂತೆ, ಧ್ಯಾನ ಮಂದಿರದ ದ್ವಾರ ಗಟ್ಟಿ ಮುಟ್ಟಾಗಿದೆ, ದಪ್ಪನಾಗಿ ಕಿರ್ರೆಂದು ಸದ್ದು ಮಾಡುವ ತಲೆಮಾರುಗಳನ್ನು ಕಂಡ ಮನೆ ಬಾಗಿಲು ನಮ್ಮನ್ನು ಸ್ವಾಗತಿಸುತ್ತದೆ.

ಒಂದಷ್ಟು ಮೆಟ್ಟಿಲುಗಳು ಇಳಿದಮೇಲೆ ಮತ್ತೆ, ಇನ್ನೊಂದಷ್ಟು ಮೆಟ್ಟಿಲು ಏರಿದ ಮೇಲೆ ಸಿಗುವುದೇ ಧ್ಯಾನ ಮಂದಿರ. ಆಳಕ್ಕೆ ಇಳಿಯಬೇಕು, ಇಳಿದಮೇಲೆ ವಿಷಯಗಳ ಮೇಲೆ ಮನನ ಮಾಡುತ್ತಾ ಜ್ಞಾನದ ಮಟ್ಟಕ್ಕೆ ಮೇಲಕ್ಕೆ ಇರಬೇಕು ಎನ್ನುವ ತತ್ವ ಹೊಂದಿರುವಂತೆ ಭಾಸವಾಯಿತು ನನಗೆ.


ಈ ಧ್ಯಾನ ಮಂದಿರ ತ್ರಿಭುಜಾಕೃತಿಯಲ್ಲಿ ರಚನೆಯಾಗಿದೆ. ಇಂಥಹ ಆಕೃತಿಯಲ್ಲಿ ಧ್ಯಾನ ಮಾಡುವಾಗ ಯಾವುದೇ ರೀತಿಯ ಭಂಗ ಅಥವಾ ಧ್ಯಾನವನ್ನು ಮಾಡುವಾಗ ಮನಸ್ಸು ಧನಾತ್ಮಕ ವಸ್ತುಗಳ ಬಗ್ಗೆ ಮಾತ್ರ ಗಮನ ಮೂಡುವಂತೆ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಒಂದೈದು ನಿಮಿಷ ಕೂತು ಮನಸ್ಸನ್ನು ಕೇಂದ್ರಿಕರಿಸಿದರೆ ಸಿಗುವ ಅನುಭವ ಅನನ್ಯ.

ಹಿಂದೆ ಅರಮನೆಗಳಲ್ಲಿ ಗುಪ್ತ ಮಾರ್ಗ ಅಥವಾ ತುರ್ತು ಪರಿಸ್ಥಿತಿ ಮಾರ್ಗ ಇರುವ ಹಾಗೆ, ಈ ಧ್ಯಾನ ಮಂದಿರದಲ್ಲಿ ಅದೇ ರೀತಿಯ ಮಾರ್ಗವನ್ನು ವಿನ್ಯಾಸ ಮಾಡಿದ್ದರೆ. ಒಂದು ರೀತಿಯಲ್ಲಿ ವಿನೂತನ ಅನ್ನಿಸುತ್ತದೆ ನನಗೆ.

ಮಾಡಿಗೆ ಹೊದ್ದಿಸಿರುವ ಹೆಂಚನ್ನು, ಸುಲಭವಾಗಿ ಒಂದಕ್ಕೊಂದು ಹೊಂದಿಕೊಳ್ಳುವ ಹಾಗೆ ರಚಿಸಿ, ಹೊದಿಸುವ ಕೆಲಸವನ್ನು ಸುಲಭಮಾಡಿಕೊಂಡಿದ್ದಾರೆ. ಆಧುನಿಕ ತಂತ್ರಜ್ಞಾನಕ್ಕಿಂತಲೂ, ನಮ್ಮಲೇ ಹುಟ್ಟಿ ಬೆಳೆದ ತಂತ್ರಜ್ಞಾನವನ್ನು ವಿಶಿಷ್ಟವಾಗಿ ಉಪಯೋಗಕ್ಕೆ ಅಳವಡಿಸಿಕೊಂಡಿರುವ ವಿನೂತನ ಪ್ರಯತ್ನ ಇದು.

ಧ್ಯಾನ ಮಂದಿರದಿಂದ ಹೊರಗೆ ಬಂದೆ ಪಕ್ಕದಲ್ಲಿಯೇ ಕಾಣಸಿಗುವುದು, ಪ್ರವಚನ ಮಂದಿರ. ಇಲ್ಲಿ ಗಮನ ಸೆಳೆಯುವುದು ಹಳ್ಳಿಗಳಲ್ಲಿ ಸಿಗುವ ತೊಟ್ಟಿ ಮನೆ ವಿನ್ಯಾಸ. ಮನೆ ಹೊಕ್ಕ ಒಡನೆ ಒಂದು ಸುಂದರ ಕಂಬಗಳ ಸಾಲುಗಳು, ಅದರಲ್ಲೂ ವಿಶಿಷ್ಟ, ಜೊತೆ ಜೊತೆ ಕಂಬಗಳು ಒಂದೇ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಲಾಗಿದೆ. ಕಿಟಕಿಗಳು ಜಾಲಂದ್ರಗಳನ್ನು ಹೊಂದಿದ್ದು, ಕಿಟಕಿಯನ್ನು ತೆಗೆಯಬೇಕಾದರೆ ಪಕ್ಕಕೆ ಜರುಗಿಸುವಂಥಹ ಸುಂದರ ಜೋಡಣೆ ಇದು.

ಸುತ್ತಲೂ, ಗೋಡೆಗಳ ಮೇಲೆ, ಈ ಧ್ಯಾನ ಮಂದಿರ ಮೂಡಿದ ರೀತಿಯನ್ನು ಹಂತಹಂತವಾಗಿ ವಿವರಗಳನ್ನು ಚಿತ್ರಗಳ ಸಮೇತ ಹಂಚಿಕೊಂಡಿದ್ದಾರೆ.

ಒಂದು ಪುಟ್ಟ ಕೊಳ, ಅದರ ಮಧ್ಯೆ ಅರಳಿರುವ ಹೂವು, ಇದನ್ನು ನೋಡಿದಾಗ ಸಿಗುವ ಆನಂದ ಆಹಾ.... !


ಪ್ರವಚನ ಮಂದಿರ ದೊಡ್ಡದಾಗಿಯೇ ಇದೆ, ಇದಕ್ಕೆ ಅಳವಡಿಸಿರುವ ಧ್ವನಿವರ್ಧಕಗಳು, ಸೂರ್ಯ ರಶ್ಮಿಯನ್ನು ಸಮರ್ಪಕವಾಗಿ ಬಳಗಿಸಿಕೊಂಡು, ಹಗಲು ಹೊತ್ತಿನಲ್ಲಿ ವಿದ್ಯುತ್ ಬಳಕೆಗೆ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿನ್ಯಾಸ ಮಾಡಿರುವ ಉತ್ತಮ ಯೋಜನೆ ಇದು.

ಎದುರಲ್ಲಿಯೇ ಒಂದು ದೊಡ್ಡದಾದ ಕೊಳ, ಮೆಟ್ಟಿಲು ಮೆಟ್ಟಿಲು ಕಟ್ಟಿ, ಅದರಲ್ಲಿ ನೀರು ತುಂಬಿದಾಗ ಆ ಕೊಳವನ್ನು ನೋಡುವುದೇ ಒಂದು ಆನಂದ.

ಸಮಯದ ಅಭಾವದಿಂದ ಹೆಚ್ಚು ಸಮಯ ಕಳೆಯಲಾಗಲಿಲ್ಲ, ಆದರೆ ಕಳೆದ ಸಮಯವನ್ನು ಹಾಗೆ ಸುಮ್ಮನೆ ಕೇಳಿದಾಗ ಸಮಯ ಹೇಳಿದ ಮಾತು,

ಎಲ್ಲಿ ನನ್ನನ್ನು ಉತ್ತಮವಾಗಿ ಉಪಯೋಗಿಸುತ್ತಾರೋ,
ಎಲ್ಲಿ ಇರುವ ಸೌಕರ್ಯವನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳುತ್ತಾರೋ
ಎಲ್ಲಿ ಪ್ರಕೃತಿದತ್ತವಾದ ಸಂಪತ್ತನ್ನು ಹಾಳು ಮಾಡದೆ ಸಮರ್ಪಕವಾಗಿ ಉಪಯೋಗಿಸಿಕೊಳ್ಳುತ್ತಾರೆಯೋ
ಎಲ್ಲಿ ಭೂತಾಯಿಗೆ ನೋವಾಗದಂತೆ, ಅವಳ ಒಡಲಲ್ಲಿರುವ ಸಂಪತ್ತನ್ನು ಅಷ್ಟೇ ಪ್ರೀತಿಯಿಂದ ಉಪಯೋಗ ಮಾಡಿದ್ದಾರೆಯೋ

ಅಂಥಹ ಸುಂದರ ಪರಿಸರದಲ್ಲಿ ಸಮಯವೇ ಸಮಯವನ್ನು ಕಳೆಯಲು ಇಷ್ಟಪಡುತ್ತದೆ ಎಂದು ಹೇಳಿತು..
**********
ಚಿಕ್ಕಪ್ಪ ಇಂಥಹ ಒಂದು ಸುಂದರ ಪರಿಸರವನ್ನು ನಿಮ್ಮ ಅನುಭವ ಪಾಕದಲ್ಲಿ ಅದ್ದಿ ತೆಗೆದು, ಹಲವಾರು ಸಮಾನ ಮನಸ್ಕರ ಜೊತೆಗೂಡಿ  ಹತ್ತಾರು ಮಂದಿಗೆ ಉಪಯೋಗವಾಗುವಂಥಹ ದಿವ್ಯ ಚೈತನ್ಯಕ್ಕೆ ಚೈತನ್ಯ ತುಂಬುವ ಈ ಮಂದಿರವನ್ನು ನಿರ್ಮಿಸಿದ ಎಲ್ಲಾ ಸಹೃದಯ ಚೇತನದ ಮಾಲೀಕರಿಗೆ ನನ್ನ ಶಿರಸಾ ನಮಸ್ಕಾರಗಳು.ಹಾಗೆಯೇ ಈ ದಿವ್ಯ ಚೈತ್ಯನ್ಯ  ಬೆಳೆಯಲಿ ಬೆಳಗಲಿ ಎಂದು ಎಲ್ಲರ ಜೊತೆಯಲ್ಲಿ ನಾನು ಆ ದಿವ್ಯ ಚೈತನ್ಯಕ್ಕೆ ನಮಸ್ಕಾರಗಳನ್ನು ಸಲ್ಲಿಸುತ್ತೇನೆ.


4 comments:

  1. ಇದನ್ನು ಓದಿದ ಮೇಲೆ ನಾನೂ ಒಮ್ಮೆ ಭೇಟಿ ಕೊಡಬೇಕು ಅನಿಸಿದೆ.... ಇಂತಹ ದಿವ್ಯ ಸನ್ನಿಧಾನ ನಿರ್ಮಿಸಿದ ಚೇತನಕ್ಕೆ ವಂದನೆಗಳು

    ReplyDelete
    Replies
    1. ಧನ್ಯವಾದಗಳು ಸತೀಶ್

      ಒಂದಷ್ಟು ಸಮಯವನ್ನು ಉತ್ತಮವಾಗಿ ಕಳೆದ ಸಾರ್ಥಕತೆ ನನ್ನಲ್ಲಿ ಮನೆ ಮಾಡಿತು ಈ ತಾಣವನ್ನು ನೋಡಿದ ಮೇಲೆ.

      ಹಾಸನಕ್ಕೆ ಭೇಟಿ ಮಾಡಿದಾಗ ಈ ತಾಣಕ್ಕೆ ಹೋಗಿಬರಲೇ ಬೇಕು ಎನ್ನಿಸುವಷ್ಟು ಆಪ್ತತೆ ಈ ತಾಣ ಕೊಟ್ಟಿದೆ.

      ಈ ಪ್ರಯತ್ನದ ರೂವಾರಿ ನನ್ನ ಪ್ರೀತಿಯ ಚಿಕ್ಕಪ್ಪ ಎಂಬುದು ನನಗೆ ಸಂತಸದ ವಿಷಯ

      ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  2. ಆತ್ಮೀಯ ಶ್ರೀಕಾಂತ,

    ಎಳ್ಳಷ್ಟು ಉತ್ಪ್ರೇಕ್ಷೆ ಇಲ್ಲದ ನಿನ್ನ ಲೇಖನ ನೋಡಿ ಏನು ಹೇಳಲು ತಿಳಿಯದೆ ಒಂದೆರಡು ಕ್ಷಣ ಮೂಕವಿಸ್ಮಿತನಾದೆ. ನಿನ್ನ ವಿಶ್ವಾಸಕ್ಕೆ ನಾನು ಚಿರಋಣಿ. ಇಷ್ಟುಮಾತ್ರ ಹೇಳಬಲ್ಲೆ. ಧನ್ಯವಾದಗಳು.

    ReplyDelete
  3. ಶ್ರೀಕಾಂತರೆ,
    ನಿಮ್ಮ ಚಿಕ್ಕಪ್ಪನವರು ಮಾಡಿದ ಅದ್ಭುತ ಕಾರ್ಯದ ಬಗೆಗೆ ಓದಿ ಸಂತೋಷಾಶ್ಚರ್ಯವಾಯಿತು. ದೈವೀ ಸಂಕಲ್ಪದ ಉದಾಹರಣೆ ಎನ್ನಬಹುದೆ ಇದಕ್ಕೆ? ನಿಮ್ಮ ಲೇಖನವು ಚಿಕ್ಕದಾಗಿ, ಆದರೆ ಚೊಕ್ಕವಾಗಿ ಈ ಸಂಕಲ್ಪದ ನಿರೂಪಣೆಯನ್ನು ಮಾಡಿದೆ.

    ReplyDelete