Tuesday, October 6, 2015

ದೇವರನ್ನು ಹತ್ತಿರದಿಂದ ಕಂಡ ಕ್ಷಣ.....!

ಅಣ್ಣಾವ್ರ ಚಲಿಸುವ ಮೋಡಗಳು ಚಿತ್ರದಲ್ಲಿ ಅಂಬಿಕ ನೂರೆಂಟು ಪಾಡು ಪಟ್ಟು ಅದರಿಂದ ಬಿಡುಗಡೆಗೊಂಡು ಮನೆಗೆ ಹೋಗುವಾಗ ಅಣ್ಣಾವ್ರು ಹೇಳುತ್ತಾರೆ, "ಜೀವನದಲ್ಲಿ ಕಷ್ಟಗಳು ಚಲಿಸುವ ಮೋಡಗಳ ಹಾಗೆ ಬರುತ್ತವೆ ಹೋಗುತ್ತವೆ.. ".

ಇನ್ನೊಂದು ಚಿತ್ರ ... ಈ ಕಂಬದಲ್ಲಿರುವನೆ, ಈ ಕಂಬದಲ್ಲಿರುವನೆ ಎಂದು ಅಣ್ಣಾವ್ರು ಭಕ್ತ ಪ್ರಹ್ಲಾದದಲ್ಲಿ ಕೇಳಿದಾಗ ಸಿಗುವ ಉತ್ತರ "ಎಲ್ಲೆಲ್ಲಿಯೂ ಇರುವನು". 

ಹೌದು ಇಂದು ನಾ ಆ ಕರುಣಾಮಯಿಯನ್ನು ಹತ್ತಿರದಿಂದ ಬಲು ಹತ್ತಿರದಿಂದ ಕಂಡು ಆಲಂಗಿಸಿಕೊಂಡ ಭಾವ ಸಿಕ್ಕಿತು,  ನಾ ಬರೆಯೋಣ ಅಂದ್ರೆ, ಇಲ್ಲ ನಾನೆ ಹೇಳ್ತೀನಿ ಅಂತ ನನ್ನ ಕಾರು ಹಠ ಮಾಡ್ತಿದೆ. ಹಾಗಾಗಿ ಮೊದಲಬಾರಿಗೆ ನಾ ಹೇಳೋದು ಬಿಟ್ಟು ನನ್ನ ಕಾರು ಹೇಳುವ ಕಥೆ ಕೇಳಿ. 

ಇಬ್ಬರಿಗೂ ಆ ಕಾಣದ ಶಕ್ತಿಯನ್ನು ಅಗೋಚರವಾದ ಕಣ್ಣುಗಳಿಂದ ನೋಡಿದ ಸಾರ್ಥಕ ಭಾವ. ಆ ಭಾವವೂ ಕೆಲವು ಕಡೆ ಗಂಭೀರತೆ ಇಂದ ಕೂಡಿದ್ದರೆ, ಇನ್ನು ಕೆಲವು ಕಡೆ ತರಲೆಗಳಿಂದ ಕೂಡಿದೆ. 

ಮೋಡಗಳಲ್ಲಿ, ಮೋಡಗಳ ಮಧ್ಯದಲ್ಲಿ, ಗಿರಿಶೃಂಗಗಳಲ್ಲಿ, ದೇವಾಲಯಗಳಲ್ಲಿ, ಪರ್ವತದ ತಪ್ಪಲಿನಲ್ಲಿ ಕಾಣುವ ಆ ಶಕ್ತಿ, ಇಂದು ನಮ್ಮಿಬ್ಬರನ್ನು ಹಾಗೂ ಜೊತೆಯಲ್ಲಿ ಇದ್ದ ಕೆಲವು ಗಾಡಿಗಳನ್ನು ಆಲಂಗಿಸಿಕೊಂಡು ರಕ್ಷಣೆ ನೀಡಿದ ಪರಿಗೆ ಆ ದೇವನಿಗೆ ಒಂದು ದೊಡ್ಡ ನಮಸ್ಕಾರ ಮತ್ತು ಧನ್ಯವಾದಗಳು. 

ಆ ಕಾಣದ ದೈವಕ್ಕೆ ಈ ಲೇಖನ ಅರ್ಪಿತ. 

ಇನ್ನು ಮುಂದೆ ಯಾರಾದರೂ ದೇವರನ್ನು ನೋಡಿದ್ದೀಯ ಎಂದರೆ.. ನನ್ನ ಉತ್ತರ ಇಲ್ಲ... ನೋಡಿಲ್ಲ ಆದರೆ ಆ ದೇವನ ಪ್ರೀತಿಯ ಅಪ್ಪುಗೆಯ ಸುಖವನ್ನು ಅನುಭವಿಸಿದ್ದೇನೆ ಎಂದು ಎದೆ ತಟ್ಟಿಕೊಂಡು ಹೇಳುತ್ತೇನೆ.. !!!

ಶಿರಬಾಗಿ ನಮಿಪೆ!!!!

************
ನಮಸ್ಕಾರ ಗೆಳೆಯರೇ.. ನನ್ನನ್ನು ಎರಡನೇ ಮಗಳು ಎಂದು ಕರೆದ ನನ್ನ ಮಾಲೀಕನ ಮೇಲೆ ನನಗೆ ಅಸಾಧಾರಣ ಪ್ರೀತಿ, ವಿಶ್ವಾಸ. ನನ್ನನ್ನು ಅವನು (ಕ್ಷಮೆ ಇರಲಿ,  ನಮ್ಮಿಬ್ಬರ ಮಧ್ಯೆ ಗೆಳೆಯರ ಭಾವ ಇರೋದರಿಂದ ಏಕವಚನ ಉಪಯೋಗಿಸುವೆ) ಪ್ರೀತಿಯಿಂದ ಸವರಿದಾಗ, ಮುದ್ದಾಡಿದಾಗ, ಎಲ್ಲಿ ನನಗೆ ನೋವಾಗುತ್ತೋ ಎನ್ನುವ ಆತಂಕ ವ್ಯಕ್ತ ಪಡಿಸುವಾಗ, ನನಗೆ ಅವನ ಮೇಲೆ ಇನ್ನಷ್ಟು ಅಭಿಮಾನ ಹೆಚ್ಚಾಗುತ್ತದೆ. 

ಇದುವರೆಗೂ ಅವನು ನನ್ನನ್ನು ಕರೆದೊಯ್ಯದ ಸ್ಥಳವಿಲ್ಲ, ಪ್ರತಿ ಸ್ಥಳದಲ್ಲೂ ನನ್ನ ಜೊತೆಗೊಂದು ಚಿತ್ರ, ಅದಕ್ಕೊಂದು ಉಪಶೀರ್ಷಿಕೆ, ಮತ್ತೆ ಎಲ್ಲರೆದುರಿಗೆ ನನ್ನ ಹೊಗಳುವುದು ಇದು ಆವ ಮಾಡುವ ಪ್ರೀತಿಯ ಕಾಯಕ. ಮನೆಯೊಳಗೆ ನಿಲ್ಲಿಸಲು ಜಾಗವಿಲ್ಲದ್ದರಿಂದ ನನಗೆ ಮನೆಯ ಹೊರಗೆ ಜಾಗ, ಆದರೆ ಅವನ ಮನದಲ್ಲಿ ಮತ್ತು ಅವನ ಮನೆಯವರ ಮನದಲ್ಲಿ ಸದಾ ವಿರಾಜಿತ ನಾನು. 

ಸರಿ ಇದಿಷ್ಟು ಟಿಪ್ಪಣಿ ಆಯಿತು. ಮುಖ್ಯ ವಿಷಯ ಅಂದರೆ.. ಇವತ್ತು ಕಚೇರಿಗೆ ಕೆಲವು ಸಾಮಗ್ರಿಗಳನ್ನು ಒಯ್ಯಬೇಕಾದ್ದರಿಂದ, ನನ್ನನ್ನು ಕರೆದ. ನಾ ಯಾವಾಗಲೂ ಸಿದ್ಧವಾಗಿಯೇ ಇರುತ್ತೇನೆ. ಮನೆಯ ಬಳಿಯ ಬಂಕಿನಲ್ಲಿ ನನ್ನ ಹೊಟ್ಟೆಗೆ ಲಘು ಉಪಹಾರ ಹಾಕಿಸಿದ, ಸಂತೃಪ್ತಿಯಿಂದ ಒಮ್ಮೆ ಡರ್ ಅಂತ ತೇಗಿದೆ, ನಿಧಾನವಾಗಿ ತಲೆ ಸವರಿದ. ನಾ ಪೀಂ ಪೀಂ ಎಂದೇ. ಅವ ಹಲ್ಲು ಬಿಟ್ಟ, ಆರಾಮಾಗಿ ಅವನ ಆಫೀಸ್ ಕಡೆ ಇಬ್ಬರೂ ಹೊರಟೆವು. ಅವನ ಇಷ್ಟವಾದ ಅಣ್ಣಾವ್ರ ಹಾಡುಗಳನ್ನು ನಾ ಬಿತ್ತರಿಸುತ್ತಿದ್ದೆ, ಅವನ ಮುಖದಲ್ಲಿ ಅದೇನು ಖುಷಿ ಅಣ್ಣಾವ್ರ ಹಾಡು ಮತ್ತು ಹಳೆ ಹಾಡುಗಳು ಬಂದಾಗ. ಬಿಡಿ ಅದರ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದು. 

ಆರಾಮಾಗಿ ಇಬ್ಬರೂ ಸಾಗುತ್ತಿದ್ದೆವು, ಇನ್ನೇನು ಹತ್ತು ನಿಮಿಷ, ಕಚೇರಿಗೆ ತಲುಪಿಯೇ ಬಿಡುತ್ತಿದ್ದೆವು, ಇವತ್ತು ಯಾಕೋ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಅತಿಯಾಗಿತ್ತು , ಇವನು ಎಂದಿಗೂ ಅತಿ ವೇಗ, ಅಥವಾ ಪೇಂ ಪೇಂ ಅಂತ ಶಬ್ದ ಮಾಡುವ ಜಾಯಮಾನದವನಲ್ಲ, ಹತ್ತು ನಿಮಿಷ ಅಲ್ಲದೆ ಹೋದರೆ ಹದಿನೈದು ನಿಮಿಷ ಆಗಲಿ ಎನ್ನುವವನು. 

ಅಣ್ಣಾವ್ರ ಶಂಕರ್ ಗುರು ಚಿತ್ರದ "ಏನೇನೂ ಆಸೆ" ಹಾಡು ತನ್ನ ಪೆನ್ ಡ್ರೈವ್ ಇಂದ ಬರುತ್ತಿತ್ತು. ಅವನ ಇಷ್ಟವಾದ ಹಾಡು ಅದು. ಅದರಲ್ಲಿನ ಕೆಲವು ವಾದ್ಯದ ತುಣುಕುಗಳು ಬಲು ಇಷ್ಟ ಅವನಿಗೂ ಮತ್ತು ನನಗೂ. 

ಅಚಾನಕ್ ನನ್ನ ಮುಂದೆ ಹೋಗುತ್ತಿದ್ದ ಒಂದು ದೊಡ್ಡ ಗಾಡಿ ಕಿರ್ ಅಂತ ಶಬ್ದ ಮಾಡಿ ನಿಲ್ಲುವ ಸೂಚನೆ ಕೊಟ್ಟಿತು. ಸುಮಾರು ಹತ್ತು ಅಡಿ ದೂರ ಇತ್ತು ಮುಂದಿನ ಗಾಡಿ, ಶ್ರೀ ಸರಿಯಾದ ಸಮಯಕ್ಕೆ ಬ್ರೇಕ್ ಒತ್ತಿದ, ಸುಮಾರು ಏಳೆಂಟು ಕಿಮಿ ವೇಗದಲ್ಲಿ ನಾನು ಸಾಗುತ್ತಿದ್ದೆ, ಅಚಾನಕ್ ಹಿಂದಿನಿಂದ ಒಂದು ದೊಡ್ಡ ಸಪ್ಪಳವಾಯಿತು, ಅರೆ ಇದೇನಪ್ಪ ಎಂದು ನನಗೆ ಅರಿವಾಗುವಷ್ಟರಲ್ಲಿ ಹುಂಡೈ ಐ ೧೦ ಕಾರು ನನ್ನ ಬೆನ್ನಿಗೆ ಬಡಿದೆ ಬಿಟ್ಟಿತ್ತು, ಜೊತೆಯಲ್ಲಿ ಅದರ ವೇಗದಿಂದ ನನ್ನ ಮುಖ ಸುಮಾರು ಹತ್ತು ಅಡಿ ದೂರವಿದ್ದ ಇನ್ನೊಂದು ದೊಡ್ಡ ಗಾಡಿಗೆ ಬಡಿದು, ನನ್ನ ಮುಖ ಜಜ್ಜಿ ಹೋಯ್ತು. ನನಗೆ ನೋವಾಗಿದೆ ಎಂದು ನನಗೆ ಅರಿವಾಗುತ್ತಲೇ ಇಲ್ಲ, ಯಾಕೆಂದರೆ ಅಣ್ಣಾವ್ರ ಶಂಕರ್ ಗುರು ಹಾಡು ಬರುತ್ತಿತ್ತು. 

ಶ್ರೀ ಸುಮಾರು ಹತ್ತು ಸೆಕೆಂಡ್ ಹಾಡನ್ನೇ ಕೇಳುತ್ತಾ ಕೂತಿದ್ದ, ಅವನಿಗೂ ಏನಾಯಿತು ಎಂದು ಅರಿವಾಗಲಿಲ್ಲ, ನನಗೆ ನೋವಾಗಿತ್ತು, ಆದರೆ ಹಾಡು ನನ್ನ ನೋವನ್ನು ಮರೆಸಿತ್ತು. ಶ್ರೀ ಬಾಗಿಲು ತೆರೆಯ ಹೋದ, ತೆಗೆಯಲಾಗುತ್ತಿಲ್ಲ, ಅವಾಗ ಅರಿವಾಯಿತು ಅರೆ ಏನೋ ತೊಂದರೆ ಆಗಿದೆ. ನಿಧಾನವಾಗಿ ಹೊರಗಿಳಿದ ಶ್ರೀ, ಆ ಕಡೆ ನೋಡಿದರೆ, ಅರೆ ಅರೆ ಇದೇನಿದು ಸಾಲಾಗಿ ನನ್ನ ಬಂಧು ಬಾಂಧವರು ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿದ್ದಾರೆ. 

 ಕೊಂಚ ಹೊತ್ತಿನ ನಂತರ ಅರಿವಾಗಿದ್ದು, ನಮ್ಮ ಮುಂದೆ ಒಂದೆರಡು ವಾಹನಗಳ ಮುಂದೆ, ಒಂದು ನಾಯಿ ಅಡ್ಡ ಹೋಗಿತ್ತಂತೆ, ಅದನ್ನು ತಪ್ಪಿಸಲು, ಮುಂದಿದ್ದ ಚಾಲಕ ವಾಹನವನ್ನು ಅತ್ತಿತ್ತಾ ಎಳೆದಾಡಿದ್ದಾನೆ, ಆ ವಾಹನ ದಟ್ಟಣೆಯಲ್ಲಿ ಹಿಂದಿದ್ದ ವಾಹನ ಚಾಲಕರಿಗೆ ಗಲಿಬಿಲಿಯಾಗಿ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ಚಲಿಸಿದ್ದಾರೆ. ನನ್ನ ಮುಂದಿದ್ದ ಗಾಡಿ ಮುಂದೆ ಆಗುವ ತೊಂದರೆಯನ್ನು ಅರಿತು, ನಿಧಾನ ಮಾಡಿದ್ದಾನೆ, ಅದನ್ನು ಕಂಡ ನಾನು ನಿಧಾನಿಸಿದೆ, ಹಾಗೆಯೇ ನನ್ನ ಹಿಂದಿದ್ದ ಚಾಲಕನು ನಿಧಾನಿಸಿದ, ಆದರೆ ಅದರ ಹಿಂದೆ ಇದ್ದ ಲಾರಿ ಚಾಲಕ ಅದು ಯಾವ ಗುಂಗಿನಲ್ಲಿದ್ದನೋ, ಡಿಕ್ಕಿ ಹೊಡೆದೇ ಬಿಟ್ಟಿದ್ದ, ಅದರ ರಭಸಕ್ಕೆ ನನ್ನ ಹಿಂದಿದ್ದ ಗಾಡಿ ನನಗೆ ಬಡಿಯಿತು, ನಾನು ಮುಂದೆ ನಿಂತ ಗಾಡಿಗೆ ಗುದ್ದಿದೆ. 

ಸರಿ, ಎಲ್ಲಾ ಕಡೆ ನಡೆಯುವಂತೆ, ಜನರು ತಮ್ಮ ತಮ್ಮ ಮೊಬೈಲ್ ಗಳಿಂದ ಫೋಟೋ ತೆಗೆದದ್ದು ಆಯಿತು, ಅಷ್ಟರಲ್ಲಿ ಅರಕ್ಷಕ ಠಾಣೆಯಿಂದ ಸಿಬ್ಬಂಧಿ ಬಂದು ಮಹಜರ್ ಮಾಡಿ, ತಮ್ಮ ಠಾಣೆಗೆ ಬನ್ನಿ ಅಲ್ಲಿ ಪ್ರಥಮ ತನಿಖಾ ವರದಿಯನ್ನು ಪಡೆದುಕೊಂಡು ಹೋಗಿ ಎಂದರು. 

ಶ್ರೀ ತನ್ನ ಆಫೀಸ್ ಚಾಲಕನಿಗೆ ಕೇಳಿದ, ಅವರು ಹೇಳಿದ್ದು, ಸರ್ ಹೋಗಬಹುದು ನಿಧಾನವಾಗಿ ಹೋಗಿ ಎಂದರು. ಸರಿ ಶ್ರೀ ನಿಧಾನವಾಗಿ ಹೊರಟ ಠಾಣೆಗೆ.  ಅಲ್ಲಿ ಅವನಿಗೆ ಅನಿಸಿದ್ದು ಅವನ ಮಾತಲ್ಲೇ ಕೇಳಿ. 

"ಲೋ ಗುರು, ಸಾರಿ ಕಣೋ, ಹೀಗಾಯಿತು, ಏನು ಮಾಡೋದು. ಇದು ಯಾರ ತಪ್ಪು ಅಲ್ಲ ಆದರೆ ಎಲ್ಲರೂ ಅನುಭವಿಸುವಂತೆ ಆಯಿತು"

"ನೋಡು ಶ್ರೀ, ನೀ ಯಾವಾಗಲೂ ಭಗವಂತನನ್ನು ನಂಬಿದ್ದೀಯ, ನೀ ನಂಬಿದ ದೈವ ನಿನ್ನ ರಕ್ಷಿಸದೇ ಬಿಡುವುದಿಲ್ಲ,  ನೋಡು ಲಾರಿ ಬದಲು ಇನ್ನೂ ದೊಡ್ಡ ಗಾಡಿ ಇದ್ದಿದ್ದರೆ, ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುತ್ತಿತ್ತು ಆಲ್ವಾ." 

"ಅದು ಸರಿ ನನಗೆ ಇನ್ನೂ ನಂಬಲಿಕ್ಕೆ ಆಗದ ವಿಷಯ ಅಂದರೆ"

೧) ನಾ ಮುಂದೆ ಇದ್ದ ಗಾಡಿಗೆ ಡಿಕ್ಕಿ ಹೊಡೆದಾಗಾ ನೀ ಗಾಬರಿಗೊಳ್ಳಲಿಲ್ಲ 
೨) ಅಣ್ಣಾವ್ರ ಹಾಡನ್ನು ಕೆಲ ಕ್ಷಣಗಳು ಕೇಳುತ್ತಾ ಕುಳಿತೆ 
೩) ನಾ ನಿನ್ನಿಂದ ಹೊರ ಬಂದ ಮೇಲೇ ಕೆಲವು ಚಿತ್ರಗಳನ್ನು ತೆಗೆದೇ, ಆದರೆ ನಿನ್ನ ಮೊಗದಲ್ಲಿ ಆತಂಕವಿರಲಿಲ್ಲ 
೪) ನನ್ನ ಜೊತೆ ಬಂದ ಎಷ್ಟೋ ಪ್ರವಾಸಗಳ ರೀತಿಯಲ್ಲಿ ನಾನು ರಸ್ತೆಯಲ್ಲಿ ಓಡಾಡುತ್ತಾ ಇದ್ದೆ , ನೀ ಸುಮ್ಮನೆ ಒಂದು ಕಡೆ ನಿಂತಿದ್ದೆ 
೫) ನಿನ್ನೆಲ್ಲಾ ಶಕ್ತಿ ಉಪಯೋಗಿಸಿ ನಿಯಂತ್ರಿಸಿಕೊಂಡಿದ್ದೆ ನಿನ್ನ ದೇಹಕ್ಕೆ ಕೊಂಚ ಗಾಯವಾದರೂ, ನನ್ನ ರಕ್ಷಿಸಿದ್ದೆ, ಆ ವಿಷಯದ ಬಗ್ಗೆ ನಿನಗೆ ನನ್ನ ಮೇಲೆ ತುಂಬಾ ಅಭಿಮಾನ ವ್ಯಕ್ತ ಪಡಿಸುತ್ತಿದ್ದ ನಿನ್ನ ಕಣ್ಣೋಟದ ಅಂಚಿನಲ್ಲಿ ಒಂದೆರಡು ಕಂಬನಿಯನ್ನು ನಾ ಕಂಡಿದ್ದೆ.

ಹೌದು ಶ್ರೀ.. ನೀ ಹೇಳಿಕೊಟ್ಟ ಪಾಠ ಅದು.. ಆದರೂ ನಿನ್ನ ತಾಳ್ಮೆ ಮತ್ತು ಮಂಜಿನ ಹನಿಯಂಥ ಶೀತಲತೆ ಇಷ್ಟವಾಯಿತು. 
೧) ನೀ ಇಡಿ ಪ್ರಕರಣವನ್ನು ನಿಭಾಯಿಸಿದ ರೀತಿ ನನಗೆ ಬಲು ಇಷ್ಟವಾಯಿತು 
೨) ನಿನ್ನ ಕಚೇರಿಯ ವಾಹನ ಚಾಲಕ ಹೇಳಿದ ಮಾತು ನನಗೆ ಕಿವಿಯಲ್ಲಿ ಗುಯ್ ಗುಟ್ಟುತ್ತಾ ಇದೆ "ಸರ್ ನಿಮ್ಮ ಸ್ನೇಹಿತನ ಹೊಟ್ಟೆಯಲ್ಲಿ ಇಂಧನ, ಮತ್ತು ತೈಲ ಕಡಿಮೆ ಇದೆ. ಅದು ಖಾಲಿಯಾದರೆ ಪಾಪ ನಿಂತಲ್ಲಿಯೇ ನಿಂತು ಬಿಡುತ್ತಾನೆ ಮತ್ತು ಅವನ ಹೃದಯ ನಿಂತು ಹೋಗುತ್ತದೆ, ಎಲ್ಲಿ ತನಕ ಆವ ಹೂಂ ಎನ್ನುತ್ತಾನೋ ಅಲ್ಲಿಯ ತನಕ ಹೋಗಿ, ಯಾವಾಗ ಅವನು ಆಗೋಲ್ಲ ಎಂದು ನಿಟ್ಟುಸಿರು ಬಿಡುತ್ತಾನೋ ಅವಾಗ ಅಲ್ಲಿಯೇ ನಿಂತು ಬಿಡಿ" 
೩) ನೀ ಆವರು ಹೇಳಿದ ಪ್ರತಿ ಪದವನ್ನು ಅಕ್ಷರಶಃ ಪಾಲಿಸಿದೆ. ಪ್ರತಿ ಕ್ಷಣದಲ್ಲೂ ನೀ ನನ್ನ ಮೊಗವನ್ನು ನೋಡುತ್ತಲೇ ಇದ್ದೆ, ನನಗೆ ಎಲ್ಲಾದರೂ ಸುಸ್ತು ಆಗುತ್ತಿದೆಯೇ ಎಂದು. ನೀ ನನ್ನ ರಕ್ಷಿಸಿದೆ ಎನ್ನುವ ಹೆಮ್ಮೆ ನಿನಗಾದರೆ, ನಿನ್ನನ್ನು ನಾ ಕಾಪಾಡಿದೆ ಎನ್ನುವ ಕೃತಜ್ಞತೆ ನನಗೆ. 
೪) ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೂ ನೀ ತೋರಿಸಿದ ಪ್ರೇಮ, ಪ್ರೀತಿ ನನಗೆ ಬಲು ಇಷ್ಟವಾಯಿತು. ಎಷ್ಟು ಅಭಿಮಾನ ನನ್ನ ಮೇಲೆ ನಿನಗೆ, ನನ್ನನ್ನು ಕರೆದೊಯ್ಯಲು ಮಾಡುತ್ತಿದ್ದ ಪ್ರತಿ ಸಿದ್ಧತೆಯನ್ನು ಎಷ್ಟು ನಿಗಾವಹಿಸಿ ನೋಡುತ್ತಿದ್ದೆ ಮತ್ತು ಚಿತ್ರ ತೆಗೆಯುತ್ತಿದ್ದೆ. ನಿನ್ನ ಮನೆಯಲ್ಲಿ ಮನದಲ್ಲಿ ನನಗೆ ಜಾಗ ಕೊಟ್ಟ ನಿನ್ನ ಮತ್ತು ನಿನ್ನ ಕುಟುಂಬದ ಪ್ರೀತಿಗೆ ನಾ ಶರಣು ಶ್ರೀ. 

ನಾ ನಿನ್ನ ಬಿಟ್ಟಿರೋಲ್ಲ ನೀ ನನ್ನ ಬಿಟ್ಟಿರೋಲ್ಲ. ಶ್ರೀ ಒಂದು ಮಾತು, ನಾ ಬರುವ ತನಕ ನಿನಗೆ ಜೊತೆಯಾಗಿದ್ದು TVS ಬೈಕ್, ನಾ ಬಂದ ಮೇಲೂ ನಿನಗೆ ಅವನ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ, ಆಗೋಲ್ಲಾ.  ನಮ್ಮನ್ನು "ವಸ್ತು" ಎಂದು ಜನರು ಕರೆಯುವ ನಮ್ಮನ್ನು, ನೀ ಎಷ್ಟು ಪ್ರೀತಿಸುತ್ತೀಯ ಎಂದು ಅರಿವಾಗುತ್ತದೆ. 

ಮತ್ತೆ ನನ್ನ ಮೈ ಮೇಲಾದ ಗಾಯವನ್ನೆಲ್ಲ ವಾಸಿ ಮಾಡಿಕೊಂಡು ಶೀಘ್ರವೇ ಗುಣಮುಖನಾಗಿ ಬರುತ್ತೇನೆ. ನಮ್ಮಿಬ್ಬರ ಇಷ್ಟದೈವ ಬೆಳವಾಡಿಯ ಗಣಪನಿಗೆ ಒಂದು ನಮಸ್ಕಾರ ಹೊಡೆದು ಬರೋಣ. ನಿನ್ನನ್ನು ಅಲ್ಲಿಗೆ ಕರೆದೊಯ್ಯಲು ನಾ ಕಾತುರತೆಯಿಂದ ಕಾಯುತ್ತಿದ್ದೇನೆ. 

ಗೆಳೆಯರೇ ಇದು ಇಂದು ನಡೆದ ಒಂದು ಘಟನೆ, ಪ್ರತಿ ಕ್ಷಣವನ್ನು ಸಂಭ್ರಮಿಸು ಎಂದು ಶ್ರೀಯವರ ಅಪ್ಪ ಹೇಳಿದ್ದು ಎಂದು ಇವ ಯಾವಾಗಲೂ ಹೇಳುತ್ತಿರುತ್ತಾನೆ.

ನಿಮಗೆ ಏನೆನ್ನಿಸಿತು, ಬಾಲಿಶ ಅನ್ನಿಸಿತೆ, ಹುಚ್ಚು ಅನ್ನಿಸಿತೆ.. ಇರಲಿ ಇರಲಿ ನನಗೆ ಬೇಸರವಿಲ್ಲ. ಕಾರಣ ಇವನಂತ ಒಡೆಯ ನನಗೆ ಸಿಗೋಲ್ಲ.. ನನ್ನಂಥ ತುಂಟ ಮಗು ಇವನಿಗೆ ಸಿಗೋಲ್ಲ.. ನಾವಿಬ್ಬರು ಹೇಳೋದು ಒಂದೇ.. ಏನು ಗೊತ್ತೇ ಅದೇ ಅಣ್ಣಾವ್ರ ಹಾಡು "ಎಂದೆಂದೂ ನಿನ್ನನು ಮರೆತು ಬದುಕಿರಲಾರೆ.. ಇನ್ನೆಂದು ನಿನ್ನನು ಅಗಲಿ ನಾ ಇರಲಾರೆ. ಒಂದು ಕ್ಷಣ ನೊಂದರು ನೀ ನಾ ತಾಳಲಾರೆ.. ಒಂದು ಕ್ಷಣ ವಿರಹವನು ನಾ ಸಹಿಸಲಾರೆ.. "

ಈ ಮಾತುಗಳನ್ನು ಕೇಳಿದ ಶ್ರೀ ಒಂದು ಕ್ಷಣ ಮೌನಿಯಾದ ಅವನ ಮಾತು " ಲೋ ಗುರು.. ನಿನ್ನ ಈ ಮಾತಿಗೆ, ನೀ ತೋರುವ ಅಭಿಮಾನಕ್ಕೆ ನಾ ಚಿರಋಣಿ. ಎಷ್ಟು ತಾಳ್ಮೆ ಮತ್ತು ಸಹಾಯ ಗುಣ ನಿನಗೆ, ಎಷ್ಟೋ ಬಾರಿ ನಿನಗೆ ಸರಿಯಾದ ಆರೈಕೆ ಮಾಡಲಾಗಲಿಕ್ಕೆ ಆಗದಿದ್ದರೂ ನೀ ಯಾವತ್ತೂ ಆಗೋಲ್ಲ ಎಂದಿಲ್ಲ.. ನಿನ್ನ ಈ ಸಹನಶೀಲತೆ ಮತ್ತು ಸೇವಾ ಮನೋಭಾವಕ್ಕೆ ನಿನ್ನ ಬೆನ್ನು ತಟ್ಟುವೆ ಶಭಾಶ್ ಕಣೋ ಶಭಾಶ್!!!

ಈ ಮಾತು ಕೇಳಿದ ನಾ ನನ್ನ ವೈಪರ್ ಆ ಕಡೆ ಈ ಕಡೆ ಆಡಿಸಿ ನನ್ನ ಹರ್ಷವನ್ನು ವ್ಯಕ್ತ ಪಡಿಸಿದೆ.. 

ಗೆಳೆಯರೇ ಇಂದು ನಡೆದ ಇಡಿ ಪರ್ಸಂಗವನ್ನು ಶ್ರೀ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದದ್ದು ಹೀಗೆ..