ಕಗ್ಗ ರಸಧಾರೆಯ ಮೊದಲ ಸಂಪುಟ!!!
ಕಗ್ಗ ರಸಧಾರೆಯ ಎರಡನೇ ಸಂಪುಟ!!!
ತಲೆ ಕೆರೆದುಕೊಂಡದ್ದೆ ಲಾಭ.. ಏನೇ ತಲೆ ಕೆಳಗೂ ಮಾಡಿದರು ಹೊಳೆಯುತ್ತಿಲ್ಲ. ಅಜ್ಜ ಆಶೀರ್ವಾದ ಮಾಡಲು ಮೂರು ಬಾರಿ ಭುವಿಗೆ ಬಂದಿದ್ದರೂ ಈ ಬಾರಿ ಯಾಕೋ ನನ್ನ ಮೇಲೆ ಮುನಿಸಿಕೊಂಡ ಹಾಗೆ ಕಾಣುತ್ತಿತ್ತು.. ಲೇಖನ ಶುರು ಮಾಡಲು ಆಗುತ್ತಲೇ ಇರಲಿಲ್ಲ.
"ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ ಜ್ಞಾನ ಭಿಕ್ಷೆಯ ನೀಡಿ ದಯೆ ತೋರಿ ಗುರುವೇ.. " ಒಮ್ಮೆ ಹಾಡಿದೆ.. ಎರಡನೇ ಬಾರಿ ಹಾಡಿದೆ.. ಹಾಡಿದ, ನೆನೆಸಿಕೊಂಡ ದಾಖಲೆ ಅವೇ ಮುರಿಯಿತೆ ಹೊರತು ಅಜ್ಜನ ಆಶೀರ್ವಾದದ ಹಸ್ತ ಕಾಣಲೇ ಇಲ್ಲ..
ಸರಿ.. ಅಜ್ಜ ಬರಲಿಲ್ಲ.. ನಾನೆ ಹೋಗಿ ಬರೋಣ ಎಂದು.. ಹಾಗೆ ಕಣ್ಣು ಮುಚ್ಚಿ.. "ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ.. ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ..ಓಂ ನಮೋ ಕಗ್ಗ ಮಂಕುತಿಮ್ಮಾಯ ನಮಃ........
ಬ್ರಹ್ಮ ದಂಡದಿಂದ ಯಾರೂ ತಲೆಗೆ ಮೊಟಕಿದ ಹಾಗೆ ಆಯಿತು.. ಕಣ್ಣು ತೆರೆದೇ.. ಪಟಾಪಟಿ ಚಡ್ಡಿ ಹಾಕಿಕೊಂಡ, ಕಡು ನೀಲಿ ಬಣ್ಣದ ಷರಾಯಿ ತೊಟ್ಟ, ತಲೆಗೆ ಸೊಂಪಾಗಿ ಎಣ್ಣೆ ಹಚ್ಚಿಕೊಂಡು, ನೀಟಾಗಿ ಕ್ರಾಪ್ ತೆಗೆದು ಬಾಚಿದ ತಲೆಗೂದಲಿನ ಸುಮಾರು ಏಳೆಂಟು ತರಗತಿಯ ಒಬ್ಬ ಸುಂದರ ಹುಡುಗ ನಿಂತಿದ್ದ.
ನಾ ಹೇಳ್ತೀನಿ ನೀ ಬರಿ ಎಂದ ಆ ಹುಡುಗ..
ಸರಿ ಶುರುವಾಯ್ತು.. ಕಗ್ಗದ ಪುರಾಣ.. !
"ಶ್ರೀ ನಮ್ಮ ಗುರುಗಳು ಡಿವಿಜಿ ಅಜ್ಜ ನನ್ನ ಸಂಜಾತ. ಅವರು ನನಗೆ ಹೆಸರು ತಂದು ಕೊಟ್ಟರು. ಇಂದು ನಾ ಏನಾದರೂ ಆಗಿದ್ದರೆ ಅದು ಅಜ್ಜನ ಕೊಡುಗೆ. ಅದಕ್ಕೆ ಅಜ್ಜನ ಅಪ್ಪಣೆ ಪಡೆದು ನಾನೇಬಂದೆ ..
ಅಜ್ಜನನ್ನು ಇಷ್ಟಪಡುವರು ನನಗೂ ಇಷ್ಟ.. ಅಜ್ಜ ಇಷ್ಟಪಡುವರು ನನಗೂ ಇಷ್ಟ.. ಹಾಗಾಗಿ ರವಿ ತಿರುಮಲೈ ಅವರ ಸಾಹಸ ಮೂರು ವರ್ಷಗಳ ಹಿಂದೆ ಶುರುವಾದಾಗ ಒಮ್ಮೆ ನಾನೇ ಅನುಮಾನಿಸಿದ್ದೆ. ಅಜ್ಜ ಇದು ಆಗುತ್ತದೆಯಾ, ಈ ಕೆಲಸ ಸಾಧ್ಯವೇ, ಜನ ಇದನ್ನು ಇಷ್ಟಪಡುತ್ತಾರೆಯೆ ಹೀಗೆ ಅನೇಕ ಅನುಮಾನಗಳನ್ನು ವ್ಯಕ್ತ ಪಡಿಸಿದ್ದೆ. ಅದರಲ್ಲೂ ಮಾಲ್ ಸಂಸ್ಕೃತಿ, ಪಾಶ್ಚಾತ್ಯ ರೀತಿಯ ಜೀವನವನ್ನು ಅಪ್ಪಿಕೊಂಡಿರುವ ಯುವ ಜನತೆ ಇದಕ್ಕೆ ಸ್ಪಂಧಿಸುತ್ತದೆಯೇ, ಇದನ್ನೆಲ್ಲಾ ಓದಿ ಜೀವನದಲ್ಲಿ ಅಳವಡಿಕೊಳ್ಳುತ್ತಾರೆಯೇ ಎಂದು ಆತಂಕ ವ್ಯಕ್ತ ಪಡಿಸಿದ್ದೆ. ಅದಕ್ಕೆ ಅಜ್ಜ ಹೇಳಿದ ಮಾತು ನೋಡುಹೇಗಿದೆ ..
ಮಂಕುತಿಮ್ಮ, ನಿನಗೆ ನಾಮಧೇಯ ಕೊಟ್ಟಾಗ ನಾನು ಕೂಡ ಅರಿತಿದ್ದೆ, ನೀ ಹನುಮಂತನ ತರಹ, ನಿನ್ನ ಶಕ್ತಿ ನಿನಗೆಅರಿವಿಲ್ಲ, ಹುಮ್ಮಸ್ಸನ್ನು ತುಂಬಿದಾಗ ಮಾತ್ರ ಸಾಮರ್ಥ್ಯದ ಅರಿವಾಗುತ್ತದೆ. ಅದಕ್ಕೆ ನಾ ಹೇಳಿದ್ದು ನಿನ್ನ ನಾಮವನ್ನು ಉಚ್ಚರಿಸಿದಾಗ ಮಾನವ ಜಗತ್ತಿಗೆ ತಮ್ಮ ಮಂಕಿನ ಅರಿವಾಗುತ್ತದೆ.. ಅದಕ್ಕೆ ಪ್ರತಿ ಕಗ್ಗದ ಕೊನೆಯಲ್ಲಿ ನಿನ್ನ ಹೆಸರನ್ನು ಹಾಕಿರುವುದು. ಪ್ರತಿ ಕಗ್ಗವನ್ನು ಓದಿ ನಿನ್ನ ಹೆಸರನ್ನು ಹೇಳಿದಾಗ, ಮಾನವನಿಗೆ ಅರೆ ಹೌದು ಅಲ್ವೇ, ಇದು ನನಗೆ ಬರೆದದ್ದು, ಇದನ್ನು ನಾ ಅರಿಯಬೇಕು ಎಂದು ತಿಳಿಯುತ್ತಾ ಸಾಗುತ್ತದೆ. ಸುಲಭವಾಗಿ ಬರೆದರೆ, ಕೆಲವೊಮ್ಮೆ ಓದುಗರು ಓದಿ ಮರೆತುಬಿಡುತ್ತಾರೆ, ಮಧ್ಯೆ ಮಧ್ಯೆ ಉಪ್ಪಿನ್ಯಕಾಯಿಯ ಹಾಗೆ ಕ್ಲಿಷ್ಟ ಆದರೆ ರುಚಿಯಾದ ಪದಗಳ ಅರ್ಥಗಳನ್ನು ತುಂಬಿದಾಗ ಮಂದಿಗೆ ಓದಲು ಉತ್ಸಾಹ ಬರುತ್ತದೆ ಎನ್ನುವುದು ನನ್ನ ತರ್ಕ.
ಅದಕ್ಕೆ ಸುಲಭವಾಗಿ ಬರೆಯದೆ, ಹಳೆಗನ್ನಡ, ಹೊಸಗನ್ನಡ, ಚಿಕ್ಕ ಚಿಕ್ಕ ಸಂಸ್ಕೃತ ಪದಗಳ ಸರಮಾಲೆಯನ್ನೆ ಹಾಕಿದ್ದೇನೆ. ಈ ಸೂತ್ರವನ್ನು ಬಿಡಿಸಲು, ಯಾರಾದರೂ ಪ್ರಯತ್ನ ಪಟ್ಟೆ ಪಡುತ್ತಾರೆ ಎಂದು ಅರಿವಿತ್ತು. ನನ್ನ ಮೆಚ್ಚಿನ ರವಿ ಈ ಕಾರ್ಯವನ್ನು ಕೈಗೆತ್ತಿಕೊಂಡಾಗ ಅವನು ನನ್ನ ಪಟದ ಮುಂದೆ ನಿಂತು ಮನದಲ್ಲಿ ಆಡಿದ ಮಾತುಗಳು ಇವು.
"ಅಜ್ಜ ನಿಮ್ಮ ಈ ಕಗ್ಗಗಳನ್ನು ಓದಿ, ಪದ ವಿಸ್ತಾರಗೊಳಿಸಿ, ನನಗೆ ಅರಿವಾದ ಅರ್ಥವನ್ನು ಬರೆದು, ನಂತರ ನಾ ನನ್ನ ಜೀವನದಲ್ಲಿ ಓದಿದ, ಕಂಡ, ಅರಿವಿಗೆ ಒಳಪಟ್ಟ ವಿಷಯಗಳನ್ನು ನಿಮ್ಮ ಆಶೀರ್ವಾದದ ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಕಲಕಿ, ರುಬ್ಬಿ, ಒಂದು ಎರಕ ಸಿದ್ಧ ಮಾಡಿ, ರಸಧಾರೆಯಾಗಿ ಮಾಡಬೇಕು ಎನ್ನುವ ಹಂಬಲ ಹೊತ್ತಿದ್ದೇನೆ.. ನನಗೆ ಅರಿವಾದ ವಿಷಯಗಳನ್ನು, ನನ್ನ ಅನುಭವಕ್ಕೆ ನಿಲುಕಿದ ವಸ್ತು ವಿಷಯಗಳನ್ನು, ನಾನು ಜೀವನದಲ್ಲಿ ಅಳವಡಿಸಿಕೊಂಡ ಕೆಲವು ತತ್ವಗಳನ್ನು ಸಮರಸವಾಗಿ, ಸಮಾನವಾಗಿ ಹಂಚಿಕೊಳ್ಳಬೇಕು. ಮತ್ತು ನನ್ನ ಅಪ್ತವರ್ಗದಲ್ಲಿ ಕೆಲವರಾದರೂಇದನ್ನು ಅಳವಡಿಸಿಕೊಂಡರೆ ನನ್ನ ಜನ್ಮ ಸಾರ್ಥಕ ಅನ್ನುವ ಹಂಬಲ ನನ್ನದು. ಇದರ ಆಶಯ ತೃಣ ಮಾತ್ರ ಈಡೇರಿದರೂ ನನಗೆ ನಿಮ್ಮ ಆಶೀರ್ವಾದದ ವಜ್ರ ಕವಚ ಸಿಕ್ಕ ಹಾಗೆ ಅಜ್ಜಾ"
"ಅಜ್ಜ ರವಿ ಅವರ ಮಾತುಗಳು ಎಷ್ಟು ಮುಗ್ಧತೆ ಇಂದ ಕೂಡಿದೆ. ನಿಜಕ್ಕೂ ನೀ ಕೊಟ್ಟ ನಾಮಧೇಯ, ರವಿ ಅವರು ಹೇಳುವ ರೀತಿ ನನಗೆ ನನ್ನ ಬಗೆಯೇ ಹೆಮ್ಮೆ ಮೂಡುವಂತೆ ಆಗಿದೆ. ನನ್ನ ಕೋರಿಕೆ ಇಷ್ಟೇ ಅಜ್ಜ, ದಯಮಾಡಿ ನಿಮ್ಮ ಆಶೀರ್ವಾದದ ಖಜಾನೆ ಕೀಲಿಯನ್ನು ರವಿ ಅವರಿಗೆ ಕೊಟ್ಟು ಬಿಡಿ. ಇಂಥಹ ಒಂದು ಅದ್ಭುತ ಕಾರ್ಯವನ್ನು ಅವರು ಮೂರು ವಸಂತಗಳಿಂದ ಮಾಡುತ್ತಿದ್ದಾರೆ. ಈಗ ಮೂರನೇ ಭಾಗಹೊರಬಂದಿದೆ. ಇನ್ನೇನು ಕೆಲವೇ ಮಾಸಗಳಲ್ಲಿ ನಾಲ್ಕನೇ ಆವೃತ್ತಿ ಕೂಡ ಬಂದು ಬಿಡುತ್ತದೆ. ಈ ರೀತಿಯಲ್ಲಿ ಕಗ್ಗಗಳಿಗೆ ಸುಂದರ ವಿಸ್ತೃತ ಅರ್ಥವನ್ನು ತಿಳಿಗನ್ನಡದಲ್ಲಿ ನೀಡಿ ಕರುನಾಡಿನ ಮಾತೆ ತಾಯಿ ಭುವನೇಶ್ವರಿಯ ಚರಣ ಕಮಲಗಳಿಗೆ ಅರ್ಪಿಸುವ ಈ ನಾಲ್ಕು ಹೊತ್ತಿಗೆಗಳು ಅದ್ಭುತ ಅನುಭವ ಕೊಡುವುದಂತೂ ನಿಜ"
ಹೌದು ಮಂಕುತಿಮ್ಮ, ನಿನ್ನ ಮಾತು ಅಕ್ಷರಶಃ ನಿಜ. ನನ್ನ ಆಶೀರ್ವಾದ ಖಂಡಿತ ರವಿಯ ಮೇಲೆ ಭುವಿಯ ಮೇಲೆ ದಿನಕರನ ಕಿರಣಗಳು ಬೀರುವ ಹಾಗೆ ಸದಾ ಇರುತ್ತದೆ. ಈಗ ನೀ ಭುವಿಗೆ ಹೋಗಿ, ಆ ಒಂದು ಪ್ರತಿಯನ್ನು ತೆಗೆದುಕೊಂಡು ಬಾ. ಅದನ್ನ ನಾ ಓದಬೇಕು.
ಮಂಕುತಿಮ್ಮ ಅವಕ್ಕಾದ "ಅರೆ ಅಜ್ಜ ನೀವೇ ಬರೆದ ಮುಕ್ತಕಗಳನ್ನು, ಸುಂದರವಾಗಿ ವಿವರಿಸಿದ್ದಾರೆ. ಅದನ್ನು ನೀವು ಓದಲು ಕಾತರವೇ... ಯಾಕೆ ಅಜ್ಜ?"
ಆಗ ಅಜ್ಜ, ತನ್ನ ಊರುಗೋಲಿಂದ ಮಂಕುತಿಮ್ಮನ ತಲೆಗೆ ಒಂದು ಪೆಟ್ಟು ಕೊಟ್ಟು, ಮಂಕ, ತಾಯಿಗೆ ಅರಿವಿರುತ್ತದೆ, ತನ್ನ ಕಂದ ತಾ ಹೇಳಿಕೊಟ್ಟ ಅಕ್ಷರವನ್ನು ತಿದ್ದಿ ಅಮ್ಮ ಎಂದು ಹೇಳುತ್ತಿರುತ್ತದೆ. ಆದರೆ ಮಗು ಅಕ್ಕರೆಯಿಂದ ಅಮ್ಮ ನೋಡು ನಿನ್ನ ಹೆಸರನ್ನು ಬರೆದಿದ್ದೇನೆ ಎಂದು ತೋರಿಸಿದಾಗ ಅಮ್ಮನಿಗೆ ಆಗುವ ಸಂತಸಕ್ಕೆ ಮಿತಿಯಿರುವುದಿಲ್ಲ ಅಲ್ಲವೇ. ತಾನೇ ಜನುಮ ನೀಡಿದ ಕಂದ ತನ್ನ ಹೆಸರನ್ನು ಮುದ್ದಾಗಿ ಹೇಳುವಾಗ ತಾಯಿಗೆ ಸಿಗುವ ಆನಂದ... .. ಬಿಡು ಬಿಡು ನನ್ನ ಮಂಜಾದ ಕಣ್ಣಿನಿಂದ ಆನಂದ ಭಾಷ್ಪ ಧಾರೆಯಾಗಿ ಹರಿಯುತ್ತಿದೆ"
ಮಂಕುತಿಮ್ಮನ ಕಣ್ಣುಗಳು ಒದ್ದೆಯಾದವು. ನಿಧಾನವಾಗಿ ತನ್ನ ಜೋಳಿಗೆಯಿಂದ ಅಜ್ಜಾ ಇಲ್ಲಿ ನೋಡಿ ಎಂದು ಒಂದು ಹೊತ್ತಿಗೆಯನ್ನು ತೆಗೆದು ಕೊಟ್ಟಾಗ ಅಜ್ಜಾ ಮಂಕುತಿಮ್ಮನನ್ನು ಬಾಚಿ ಅಪ್ಪಿಕೊಂಡು.. ಕಂದಾ ನೀ ಅಜರಾಮರ.. ಹಾಗೆ ರವಿ ಬರೆದ ಈ ವಿಸ್ತಾರಗಳು ಅಜರಾಮರ. ಇದು ರವಿಗೆ ನನ್ನ ಆಶೀರ್ವಾದ ಎಂದು ಕಗ್ಗ ರಸಧಾರೆ ಸಂಪುಟದ ಮೂರನೇ ಭಾಗವನ್ನು ಹೊತ್ತು ತಾವು ದಿನವೂ ಕೂರುವ ಕುರ್ಚಿಯ ಕಡೆ ಕಾಲು ಹಾಕುತ್ತಾರೆ.
ನೋಡೋ ಶ್ರೀ ಇದು ನನ್ನ ವಿವರಣೆ ಹೇಗಿದೆ.. ನಾ ಕಾರ್ಯಕ್ರಮದ ಬಗ್ಗೆ ಏನೂ ಹೇಳುವುದಿಲ್ಲ.. ಆಗಲೇ ಅನೇಕರು ಈ ಕಾರ್ಯಕ್ರಮದ ಚಿತ್ರಗಳನ್ನು ಹಾಕಿದ್ದಾರೆ. ಶ್ರೀ ವೆಂಕಟೇಶ ಮೂರ್ತಿಗಳು ತಮ್ಮ ಅಧ್ಯಕ್ಷತೆಯಲ್ಲಿ, ಅಜ್ಜನ ವಂಶದ ಕುಡಿಯ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಿದ ಈ ಪುಸ್ತಕ ಲೋಕವಿಖ್ಯಾತಿ ಹೊಂದುವುದುಖಚಿತ .. ಸರಿ ಕಣೋ ನಾ ಹೊರಡುತ್ತೇನೆ. ತುಂಬಾ ತಡವಾದರೆ ಅಜ್ಜನ ಊರುಗೋಲು ನನ್ನ ಮಾತಾಡಿಸುತ್ತದೆ...
**************
ಯಾಕೋ ಕಣ್ಣುಗಳು ಭಾರವಾಗಿದ್ದವು.. ಮಳೆಯಲ್ಲಿ ನೆಂದ ಹತ್ತಿಯ ಮೂಟೆಯ ತರಹ ಭಾರವಾಗಿತ್ತು.. ಅರೆ ಅರೆ ಇದೇನು ಕನಸೋ, ನನಸೋ ಎಂಬ ಗಾಬರಿಯಲ್ಲಿ ನಿಂತಿದ್ದಾಗ ಜೋರಾದ ಕರತಾಡನ ಕೇಳಿಬಂತು. ಕಗ್ಗ ರಸಧಾರೆಯ ಮೂರನೇ ಭಾಗ ಬಿಡುಗಡೆಗೊಂಡಿತು ಎಂದು ಎಲ್ಲರೂ ಚಪ್ಪಾಳೆ ತಟ್ಟಿದರು. ಅರೆ ನಾ ಇಷ್ಟು ಹೊತ್ತು ಕಂಡಿತ್ತು ಕನಸೋ ನನಸೋ ಅರಿವಾಗಲಿಲ್ಲ. ಆದರೆ ಅಜ್ಜನ, ಮಂಕುತಿಮ್ಮನ ಮಾತುಗಳು ಕೇಳಿ ಬೆಳದಿಂಗಳ ಮಳೆಯಲ್ಲಿ ಮಿಂದ ಅನುಭವ ಆಗಿದ್ದು ಮಾತ್ರ.. ಸುಳ್ಳಲ್ಲ.
ಗುರುಗಳು ರವಿ ತಿರುಮಲೈ ಅವರ ಅದ್ಭುತ ಪರಿಶ್ರಮ ಕಗ್ಗಗಳ ಸಂಪೂರ್ಣ ಹೊತ್ತಿಗೆಯ ಮೂರನೇ ಭಾಗಕ್ಕೆ ಬಂದು ಬಿಡುಗಡೆ. ಅವರು ಪಡೆದ ಅನುಭವ ಎಲ್ಲರಿಗೂ ಆಗಲಿ ಎನ್ನುವ ಅವರ ಆಶಯಕ್ಕೆ ನಾವೆಲ್ಲರೂ ನೆರೆದದ್ದು ಮೊದಲ ಮೆಟ್ಟಿಲು ಏರಿದಂತೆ ಆಗಿದೆ.
ಗುರುಗಳೇ ಈ ಶುಭ ಸಂದರ್ಭದಲ್ಲಿ ನಿಮ್ಮ ಆಶೀರ್ವಾದ ಬೇಡುತ್ತಾ ಈ ಲೇಖನ ಮಾಲಿಕೆಯನ್ನು ಅಜ್ಜನಿಗೆ ಮತ್ತು ನಿಮಗೆ ಸಮರ್ಪಿಸುತ್ತಿದ್ದೇನೆ. ಮತ್ತು ನಾಲ್ಕನೇ ಭಾಗಕ್ಕೆ ಕಾಯುತ್ತಿದ್ದೇನೆ.