Sunday, March 8, 2015

ಹೀಗೊಂದು ಪರ್ಸ್" ಸಂಗ"

ಹಸ್ತಿನಾಪುರದಲ್ಲಿ ದ್ಯೂತದ  ಆಟದಲ್ಲಿ ಸೋತ ವೀರ ಕಲಿಗಳು ತಲೆ ಬಗ್ಗಿಸಿಕೊಂಡು ಕೂತಿದ್ದರು, ದುರುಳ ದುಷ್ಟ ಚತುಷ್ಟಯರು ಎಂದೇ ಹೆಸರಾಗಿದ್ದ ದುರ್ಯೋಧನ, ದುಶ್ಯಾಸನ, ಕರ್ಣ, ಶಕುನಿ ಕಿರುಚಾಡುತ್ತ ಕೇಕೆ ಹಾಕುತ್ತ ಪಾಂಡವರ ಮಕುಟದ ಮಣಿ ದ್ರೌಪದಿಯನ್ನು ಸಭೆಗೆ ಕರೆದು ತರಲು ಅಪ್ಪಣೆ ಮಾಡಿದರು.

ಈ ಘಟನೆ ನೆಡೆದು ಸುಮಾರು ಇಪ್ಪತ್ತು ವರ್ಷ ಆಯಿತು. 

ಮಿನರ್ವ ಸರ್ಕಲ್ ಬಳಿಯ ಒಂದು ಪುಟ್ಟ ಸಂಸ್ಥೆಯಲ್ಲಿ ಕೆಲಸ ಸಾಗಿತ್ತು. ನನಗೆ ಅರಿವಿಲ್ಲದೆ ನನ್ನನ್ನು ಅಣ್ಣ ಎಂದೋ, ಅಥವಾ ತಾವು ಅವರ ತಂಗಿ ಎನ್ನುವ ಭಾವ ತೋರುವ ಅನೇಕರು ನನಗೆ ಉದ್ಯೋಗ ಯಾತ್ರೆಯಲ್ಲಿ ಸಿಕ್ಕಿದ್ದಾರೆ. ಅದು ಅವ್ಯಾಹತವಾಗಿ ಮುಂದುವರೆದಿದೆ ಇಂದಿಗೂ. 

ನನ್ನ ಸಹೋದ್ಯೋಗಿಯಾಗಿ ಬಂದು ನನ್ನ ಬಾಳಿನಲ್ಲಿ ತಂಗಿಯಾದ ಜ್ಯೋತಿ ಎನ್ನುವ ಹುಡುಗಿ.. ಜೆ ಪಿ ನಗರದಲ್ಲಿ ತನ್ನ ಕೆಲವು ಗೆಳತಿಯರೊಡನೆ ವಾಸವಾಗಿದ್ದಳು. ಮನೆಗೆ ಬನ್ನಿ ಶ್ರೀ ಅಣ್ಣ ಅಂತ ಯಾವಾಗಲು ಕರೆಯುತ್ತಲೇ ಇದ್ದಳು. ನನ್ನ ತರಲೆ ಮಾತುಗಳು(?), ಹಾಸ್ಯ ಲಾಸ್ಯ (?) ಅಂದಿಗೂ ಹಿಟ್ ಎಂದಿದೆಂದಿಗೂ ಹಿಟ್ (?) ಅವಳ ಮನೆಯಲ್ಲಿ ಎಲ್ಲವೂ ರಿಪೀಟ್ ಆಗುತ್ತಿದ್ದವು. ಹಾಗಾಗಿ ಅಲ್ಲಿನ ಎಲ್ಲರೂ ಈ ಜಾಂಬುವಂತನನ್ನು ನೋಡಲು ಕಾಯುತ್ತಿದ್ದರು (:-) ). 

ಆಗ ಸರಸ್ವತಿ ಕೃಪೆ ಅಷ್ಟೋ ಇಷ್ಟೋ ಇದ್ದರೂ.. ತಾಯಿ ಲಕ್ಷ್ಮಿ ದೇವಿಯಾವಾಗಲೂ ಸ್ವಲ್ಪ ಅಂತರದಲ್ಲಿಯೇ ಇರುತ್ತಿದ್ದಳು. ಇವಾಗಲು ಹಾಗೆಯೇ ಅದು ಬೇರೆ ಕಥೆ. 

ಸರಿ ಒಂದು ಭಾನುವಾರ ಇದ್ದ ೫೦ ರೂಪಾಯಿಗಳನ್ನು (೫ ರೂನ ಐದು ನಾಣ್ಯಗಳು, ಹತ್ತು ರೂ ನ ಎರಡು ನೋಟುಗಳು, ಒಂದು ರೂಪಾಯಿಯ ಹತ್ತು ನಾಣ್ಯಗಳು) ತೆಗೆದುಕೊಂಡು ಹೊರಟೆ. ವಿಜಯನಗರದಿಂದ ಜೆ ಪಿ ನಗರಕ್ಕೆ. 

ಎರಡು ಬಸ್ ಬದಲಾಯಿಸಿಕೊಂಡು ಅಲ್ಲಿಗೆ ಸೇರಿದ ಮೇಲೆ ಉಳಿದದದ್ದು ಸುಮಾರು ೩೫ ರೂಪಾಯಿಗಳು (ಐದು ರೂಪಾಯಿಯ ಐದು ನಾಣ್ಯಗಳು ಮತ್ತು ಹತ್ತು ರುಪಾಯಿಯ ಒಂದು ನೋಟು). ವಾಪಸ್ ಹೋಗೋಕೆ ಹೆಚ್ಚು ಕಮ್ಮಿ ೧೫ ರೂಪಾಯಿಗಳು ಬೇಕಿದ್ದವು. ಅಂದರೆ ಜೇಬಿನಲ್ಲಿ ಉಳಿಯಬಹುದಾಗಿದ್ದು ಕೇವಲ ೨೦ ರೂಪಾಯಿಗಳು ಮಾತ್ರ. 

ಅವಳ ಮನೆಗೆ ಹೋದೆ.. ಎಲ್ಲರೂ ಪ್ರೀತಿ ವಿಶ್ವಾಸದಿಂದ ಮಾತಾಡಿಸಿದರು. ಮನಸ್ಸು ಹಕ್ಕಿಯ ಹಾಗೆ ಹಾರುತ್ತಿತ್ತು. ಆದರೆ ಅಲ್ಲಿನ ಕೆಲ ಗೆಳತಿಯರು ಯಾವುದೋ ಮದುವೆಗೆ ಹೊರಟಿದ್ದರು. ಹಾಗಾಗಿ ಹೆಚ್ಚು ಹೊತ್ತು ಇರಲಿಲ್ಲ. ಸರಿ ಎಂದು ಹೊರಟೆ. ನನ್ನ ಜೊತೆ ಈ ಜ್ಯೋತಿ ಕೂಡ ಅಣ್ಣ ನಾ ಸ್ವಲ್ಪ ದೂರ ಬರುತ್ತೇನೆ ಎಂದು ತನ್ನ ಗೆಳತಿ ತ್ರಿವೇಣಿಯನ್ನು ಕಟ್ಟಿಕೊಂಡು ಹೊರಬಿದ್ದಳು. 

ಸರಿ ಬಸ್ ಸ್ಟಾಪ್ ತನಕ ಮಾತ್ರ ಬರುತ್ತಾಳೆ ಎಂದುಕೊಂಡು ನನ್ನ ಮಾಮೂಲಿ ಮಾತುಗಳನ್ನು ಆಡುತ್ತಾ ಬಸ್ ಸ್ಟಾಪ್ ಗೆ ಬಂದು ನಿಂತೆವು. ಅಣ್ಣ ಅಪರೂಪಕ್ಕೆ ಮನೆಗೆ ಬಂದಿದ್ದೀರಾ ಹೋಟೆಲ್ ನಲ್ಲಿ ಏನಾದರೂ ತಿನ್ನೋಣ ಅಂದಳು. ಹೃದಯವನ್ನು ಮತ್ತು ಪರ್ಸು ಎರಡನ್ನು ಮುಟ್ಟಿಕೊಂಡೆ. ಎರಡು ಸದ್ದು ಮಾಡುತ್ತಿತ್ತು.. ಹೃದಯ ತನ್ನ ಬಡಿತವನ್ನು ಹೆಚ್ಚಿಸಿತ್ತು, ಪರ್ಸ್ ನಲ್ಲಿದ್ದ ನಾಣ್ಯಗಳು ನಾವಿಷ್ಟೇ ಜನ ಇರೋದು ಅಂತ ಹೇಳುತ್ತಿದ್ದವು. 

ನಾ ದೇಶಾವಾರಿ ನಗೆ ನಗುತ್ತ ಬೇಡ ಬೇಡ ಈಗ ತಾನೇ ತಿಂಡಿ ತಿಂದು ಹೊರಟಿದ್ದೇನೆ.. ಹೊಟ್ಟೆ ಹಸಿತಾ ಇಲ್ಲ ಎಂದೇ.. ಅವರು ಬಿಡಲಿಲ್ಲ.. ಇಲ್ಲ ಇಲ್ಲ ನೀವು ಏನಾದರೂ ತಿನ್ನಲೇ ಬೇಕು ಎಂದು ಬಲವಂತ ಮಾಡಿ.. ಜಯನಗರದ ಬಳಿಯ ರಾಘವೇಂದ್ರ ಮಠದ ಹತ್ತಿರ ಇದ್ದ ಶಾಂತಿ ಸಾಗರಕ್ಕೆ ಬಂದೆವು. ನಾ ಎಷ್ಟೇ ಬೇಡ ಎಂದರೂ ಅವರು ಬಿಡಲಿಲ್ಲ. 

ಸರಿ ಬರಿ ಎರಡರಲ್ಲಿ ಮೂರು ಕಾಫಿ ಕುಡಿಯೋಣ ಎಂದು ಹೇಳಿದೆ. ಅದಕ್ಕೆ ಮತ್ತೆ ಅವರಿಬ್ಬರೂ ಇಲ್ಲ ಇಲ್ಲ ಏನಾದರೂ ಸಿಹಿ ತಿನ್ನಲೇ ಬೇಕು ಎಂದರೂ. ನಾ ಎಷ್ಟೇ ಬೇಡ ಎಂದರೂ ಬಿಡದೆ ಮೂರು ಮಸಾಲೆ ದೋಸೆಗೆ ಆರ್ಡರ್ ಮಾಡಿಯೇ ಬಿಟ್ಟರು. ನಾನು ಮೆಲ್ಲಗೆ ಮೆನು ಕಾರ್ಡ್ ನೋಡಿದೆ.. ಮೂರು ಮಸಾಲೆ ಆಗಿನ ಕಾಲಕ್ಕೆ ಸುಮಾರು ಮೂವತ್ತೆರಡು ರೂಪಾಯಿಗಳಷ್ಟು ಇದ್ದವು. ಸರಿ ನನ್ನ ಹತ್ತಿರ ಇದ್ದ ಆ ದುಡ್ಡನ್ನೇ ಕೊಟ್ಟು ಅಲ್ಲಿಂದ ನಡೆದೆ ಹೋಗಿ ಮನೆ ಸೇರುವುದು ಎಂದು ಖಾತ್ರಿ ಮಾಡಿಕೊಂಡೆ. 

ಮಸಾಲೆ ದೋಸೆ ಆಯ್ತು.. ಸರಿ ಬಿಲ್ ಕೊಡಲು ನನ್ನ ಹತ್ತಿರ ಇರುವ ಹಣ ಸಾಕು ಎಂದು ತಿಳಿದ ಮೇಲೆ.. ಯಾಕೋ ಹೊಟ್ಟೆ ಸರಿ ಇಲ್ಲ ಕಾಫೀ ಬೇಡ.. ಹೋಗೋಣ ಎಂದೇ.. ಜಯನಗರದಿಂದ ವಿಜಯನಗರಕ್ಕೆ ಎಷ್ಟು ಹೊತ್ತು ನಡೆಯಬೇಕು ಎನ್ನುವ ಅಂದಾಜು ಮಾಡುತ್ತಿತ್ತು ಮನಸ್ಸು. 

ಶ್ರೀ ಅಣ್ಣ ನೀವು ಕಾಫೀ ಬೇಡ ಎನ್ನುವುದುಂಟೆ ಅದು ಕಾಫೀಗೆ ಅವಮಾನ.. ಇರಿ ಸ್ವಲ್ಪ ಸಿಹಿ ತಿನ್ನೋಣ ಎಂದಳು. ನಾ ಪ್ರತಿಭಟಿಸಿದೆ ಅವರನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡಿದೆ.. 

ದುಶ್ಯಾಸನ ದ್ರೌಪದಿಯನ್ನು ಅವಳ ಅಂತಃಪುರದಿಂದ ಎಳೆದು ತರಲು ಶುರು ಮಾಡುತ್ತಾನೆ.. ಮೊದಲು ತನ್ನ ಶಕ್ತಿಯನ್ನು ಉಪಯೋಗಿಸಿ ಅವನನ್ನು ತಡೆಯುತ್ತಾಳೆ, ಆಗುವುದಿಲ್ಲ ನಂತರ ನೆಲದ ಮೇಲೆಯೇ ಬಿದ್ದು ಗಟ್ಟಿಯಾಗಿ ಅಲ್ಲಿದ್ದ ಕುರ್ಚಿ, ಕಂಬಗಳನ್ನು ಹಿಡಿದುಕೊಂಡು ತನ್ನ ಪ್ರತಿಭಟನೆ ಮಾಡುತ್ತಾಳೆ. ಆಗಲೂ ದುಶ್ಯಾಸನ ಜಗ್ಗುವುದಿಲ್ಲ. ನಂತರ ತಲೆಗೂದಲನ್ನೇ ಹಿಡಿದುಕೊಂಡು ದರ ದರ ಎಳೆದುಕೊಂಡು ಸಭೆಗೆ ಬರುತ್ತಾನೆ ದುಶ್ಯಾಸನ. 

ಅಲ್ಲಿದ್ದ ದುಷ್ಟ ಚತುಷ್ಟಯಗಳು ಅವಳ ಸೀರೆಯನ್ನು ಸೆಳೆಯಬೇಕೆಂದು ತೀರ್ಮಾನಕ್ಕೆ ಬರುತ್ತಾರೆ. ಸರಿ ಸೀರೆ ಸೆಳೆಯಲು ಶುರುಮಾಡಿದಾಗ ದ್ರೌಪದಿ ಕಷ್ಟ ಪಟ್ಟು ತನ್ನ ಮಾನವನ್ನು ಕಾಪಾಡಿಕೊಳ್ಳಲು ಪ್ರಯತ್ನ ಮಾಡುತ್ತಲೇ ಇದ್ದಳು. 

ಶ್ರೀ ಜಾಮೂನು ತಿನ್ನೋಣ ಅಂದ್ರು. ನಾ ಎಷ್ಟೇ ಬೇಡವೆಂದರೂ ಬಿಡದೆ ಮತ್ತೆ ಆರ್ಡರ್ ಮಾಡಿಯೇ ಬಿಟ್ಟರು. ಏನಪ್ಪಾ ಮಾಡುವುದು.. ಇದ್ದ ಹಣ ದೋಸೆಗೆ ಸರಿ ಆಗುತ್ತೆ.. ಜಾಮೂನು ಬಿಲ್ ಏನು ಮಾಡುವುದು.. ಮೆಲ್ಲಗೆ ಪರ್ಸ್ ಮತ್ತೊಮ್ಮೆ ಮುಟ್ಟಿ ನೋಡಿಕೊಂಡೆ. ಅದು ನಗಲೇ ಇಲ್ಲ.. ನಿನ್ನ ಹಣ ಬರಹ.. ಅಷ್ಟು ಹೇಳಿದರೂ ಕೇಳಲಿಲ್ಲ ಏನಾದರೂ ಮಾಡಿಕೊ ಅಂದು ನಕ್ಕ ಹಾಗೆ ಆಯಿತು  ನಾ ಏನು ಹೇಳಿದರೂ ಕೇಳಲಿಲ್ಲ.. ಮಹಿಳಾಮಣಿಗಳು ಯಾರ ಮಾತಾದರೂ ಕೇಳೋದು ಉಂಟೆ. 

ಮೊದಲ ಸೀರೆಯನ್ನು ಎಳೆದಾಗ ಕಷ್ಟ ಪಡುತ್ತ ಸೀರೆಯನ್ನು ಗಟ್ಟಿಯಾಗಿ ಹಿಡಿಕೊಂಡು ಜಗ್ಗಾಡಿದಳು ದ್ರೌಪದಿ. ಉಹೂಂ ದುಶ್ಯಾಸನನ ಶಕ್ತಿಯ ಮುಂದೆ ದ್ರೌಪದಿಯ ಶಕ್ತಿಯೇ.. ಅವನ ಕೈ ಮೇಲಾಯಿತು. 

ನನಗೆ ಏನೂ ತಿಳಿಯಲೇ ಇಲ್ಲ.. ಹೇಗಪ್ಪ ಇಲ್ಲಿಂದ ಹೊರಗೆ ಹೋಗುವುದು.. ಮೆಲ್ಲಗೆ ಎದ್ದು ಹೊರಗೆ ಓಡಿ ಹೋಗೋಣ ಎಂದರೆ.. ಹುಡುಗಿಯರ ಜೊತೆ ಬಂದಿದ್ದೇನೆ.. ಪೂರಾ ಬಿಲ್ ಕೊಡಲು ಹಣವಿಲ್ಲ.. ಮತ್ತೆ ನಾಳೆ ಆಫೀಸ್ ನಲ್ಲಿ ಭೇಟಿಯಾಗಲೇ ಬೇಕು.. ಅವಾಗ ದುಶ್ಯಾಸನ ಬೇಡವೇ ಬೇಡ ನನ್ನ ಮಾನ ಕಳೆಯಲು. ಏನಪ್ಪಾ ಮಾಡುವುದು.. ಯೋಚನೆ ಶುರುವಾಯಿತು.. 

ಮೂರು ಕಾಫೀ.. ಅದರಲ್ಲಿ ಅಣ್ಣನಿಗೆ ಒಂದು ಸ್ಟ್ರಾಂಗ್ ಕಾಫೀ ಆರ್ಡರ್ ಮಾಡಿಯೇ ಆಯಿತು.. "ಆಕಾಶವೇ ಬೀಳಲಿ ಮೇಲೆ" ಹಾಡು ಸಪ್ಪೆಯಾಗಿತ್ತು. ಆ ಧೈರ್ಯ ನನ್ನಲ್ಲಿ ಇರಲಿಲ್ಲ. 

ದ್ರೌಪದಿಗೆ ಅರಿವಾಯಿತು.. ನನ್ನ ಪ್ರಯತ್ನ ಮುಗಿಯಿತು.. ಇನ್ನೇನಿದ್ದರೂ ದೇವರ ಕೃಪೆ ಅಷ್ಟೇ.. ಸೀರೆಯಿಂದ ಕೈಯನ್ನು ತೆಗೆದಳು.. ಮೇಲಕ್ಕೆ ಎರಡು ಕೈಯನ್ನು ಎತ್ತಿ ಮುಗಿಯುತ್ತಾ.. "ಶ್ರೀ ಕೃಷ್ಣ.. ಇದು ನಿನ್ನ ಅವಮಾನದ ಪ್ರಶ್ನೆ.. ನನ್ನ ಪ್ರಯತ್ನ ಮುಗಿಯಿತು.. ನನ್ನ ಮಾನ ಅವಮಾನ ಎಲ್ಲವೂ ನಿನಗೆ ಸೇರಿದ್ದು.. ನಿನ್ನ ಮಾನವನ್ನು ನೀನೆ ರಕ್ಷಿಸಿಕೊ ಎಂದು ಪ್ರಾರ್ಥನೆ ಮಾಡುತ್ತಾ ಕಣ್ಣು ಮುಚ್ಚಿ "ಕೃಷ ಕೃಷ್ಣ" ಜಪಿಸುತ್ತಾ ದುಶ್ಯಾಸನ ಸೀರೆ ಎಳೆಯುತ್ತಾ ಹೋದ ಹಾಗೆ ತಿರುಗುತ್ತಾ  ನಿಂತಳು. 

ಶ್ರೀ ಶ್ರೀ ಅಣ್ಣಾ ಅಣ್ಣ ಕಾಫೀ ಬಂತು.. ಏನು ಧ್ಯಾನ ಮಾಡುತ್ತಿದ್ದೀರಾ.. ನಿಮ್ಮ ಫೇವರಿಟ್ ಕಾಫೀ ಬಂತು ಕುಡಿಯಿರಿ..ಯಾಕೋ ಕಾಫಿ ರುಚಿಸಲಿಲ್ಲ.. . ಆದರೆ ಬೇರೆ ದಾರಿಯೇ ಇಲ್ಲ... ಕಷ್ಟ ಪಟ್ಟು ಸುಮ್ಮನೆ ಮಂಗನ ಹಾಗೆ ನಗುತ್ತ ನಗುತ್ತಾ ಕಾಫೀ ಹೀರಿದೆ. ಬಿಲ್ ಬಂತು..  ಮೊದಲ ಬಾರಿಗೆ ಪಲಾಯನ ಸೂತ್ರ ಇಷ್ಟವಾಗುತ್ತಿತ್ತು... ಕೈ ತೊಳೆದು ಬರುತ್ತೀನಿ ಎಂದು ವಾಶ್ ಬೇಸಿನ್ ಕಡೆಗೆ ಅಕ್ಷರಶಃ ಆಮೆಯ ವೇಗದಲ್ಲಿ ನಡೆದೆ.. ಕೈಯನ್ನು ಸುಧೀರ್ಘವಾಗಿ ತೊಳೆದು.. ಅಂದು ತಾನೇ ಹೇರ್ ಕಟ್ ಮಾಡಿಸಿಕೊಂಡು ಚಿಕ್ಕ ಚಿಕ್ಕದಾಗಿ ಇದ್ದ ಕೂದಲನ್ನು ಬಾಚುತ್ತಲೇ ಒಂದು ಐದು ನಿಮಿಷ ಕಳೆದೆ. 

ಟೇಬಲ್ ಗೆ ಬಂದೆ.. ಅಲ್ಲಿ ಬಿಲ್ ಕಾಣಲಿಲ್ಲ.. ಹೃದಯದ ಬಡಿದ ಹೆಚ್ಚಾಯಿತು.. ಅವರಿಬ್ಬರೂ ಅಣ್ಣ ಕೈ ತೊಳೆದು ಬರುತ್ತೇವೆ ಎಂದು ವಾಶ್ ಬೇಸಿನ್ ಕಡೆ ಓಡಿದರು. .ಢವ ಢವ ಎದೆ ಬಡಿತ ಹೊರಗೆ ಕೇಳಿಸುವಷ್ಟು ಜೋರಾಗಿತ್ತು. ಮನಸ್ಸು ಎಲ್ಲದ್ದಕ್ಕೂ ಸಿದ್ದವಾಗಿತ್ತು. ಸುತ್ತಲು ನೋಡಿದೆ 

ಅವರಿಬ್ಬರೂ ಬಂದರು.. ಅಣ್ಣಾ ಏನೂ ಇನ್ನು ಇಲ್ಲೇ ಕೂತಿದ್ದೀರ.. ಇನ್ನೊಮ್ಮೆ ತಿನ್ನಬೇಕೆ.. 
ಬನ್ನಿ ಹೋಗೋಣ ಎಂದರೂ. ಮನದೊಳಗೆ ಕುಶಿಯಾದರೂ.. ಗಂಡಿನ ಅಹಂ ಕೇಳಬೇಕೆ.. ಅರೆ ಬಿಲ್ ಇನ್ನು ಬಂದಿಲ್ಲ ಕೊಡಬೇಕಲ್ವೆ.. ಅದಕ್ಕೆ.. ಕಾಯ್ತಾ ಇದ್ದೀನಿ. ನಾಲಿಗೆಯಲ್ಲಿನ ದ್ರವ ಖಾಲಿಯಾಗಿತ್ತು.   

ಆಶ್ಚರ್ಯ ಆಶ್ಚರ್ಯ ದುಶ್ಯಾಸನ ಮೊದಲ ಸೀರೆ ಎಳೆಯುತ್ತ ಹೋದಂತೆ.. ಮತ್ತೊಂದು ಸೀರೆ ದ್ರೌಪದಿಯನ್ನು ಸುತ್ತಿಕೊಂಡಿತು.. ಹೀಗೆ ಸೀರೆಗಳು ಸರಮಾಲೆಯೇ ಬರಲು ಶುರು ಮಾಡಿತು.. ಒಂದು ಸೀರೆ ಮುಗಿದನಂತರ ಇನ್ನೊಂದು ಹೀಗೆ. 

ಅಣ್ಣಾ ನೀವು ನಮ್ಮ ಮನೆಗೆ ಬಂದು.. ನಿಮ್ಮ ಹತ್ತಿರ ಬಿಲ್ ಕೊಡಿಸುವುದೇ.. ಆಗಲೇ ಕೊಟ್ಟಾಯಿತು.. ಬನ್ನಿ ಬನ್ನಿ ಎಂದರೂ. 
ಪೇಲವ ನಗೆ ನಗುತ್ತ.. ಪರ್ಸ್  ನ ಒಮ್ಮೆ ಮುಟ್ಟಿ ನೋಡಿದೆ.. ಥೂ ನಾಚಿಕೆ ಇಲ್ಲದವನೇ ಎಂದು ಬಯ್ದ ಹಾಗೆ ಆಯಿತು. 

ಇಂದಿಗೂ ಹೋಟೆಲ್ ಗೆ ಹೋದರೆ.. ಈ ದೃಶ್ಯ ಕಣ್ಣಿಗೆ ಕಾಣುತ್ತದೆ... 

ಈ ಘಟನೆಯಿಂದ ತಿಳಿದದ್ದು ಅರಿತದ್ದು ಕಲಿತದ್ದು : ಪರಿಸ್ಥಿತಿ ನಮ್ಮ ಹತೋಟಿಯಲ್ಲಿ ಇರುವ ತನಕ ನಮ್ಮ ಪ್ರಯತ್ನ ಪಡಬೇಕು.. ಕೈ ಮೀರುತ್ತಿರುವಾಗಲೂ ನಮ್ಮ ಪ್ರಯತ್ನ ಬಿಡಬಾರದು.. ಇನ್ನು ನಮ್ಮ ಕೈಯಲ್ಲಿ ಏನು ಸಾಧ್ಯವಿಲ್ಲ ಎಲ್ಲ ಅವನ ಇಚ್ಚೆ ಎಂದರಿತಾಗ ಆ ಕಾಣದ ಕೈಗೆ  ಶರಣಾಗಬೇಕು.. ಸಮಸ್ಯೆ ನಿರಾಳವಾಗಿ ಬಿಡುತ್ತದೆ.. !!!

ಹೀಗೆ ಸರಿ ಸುಮಾರು ನನ್ನ ಜನುಮ ದಿನದ ಸುತ್ತಾ ಮುತ್ತ ನಡೆದ ಈ ಪ್ರಸಂಗ ಈ ವರ್ಷದ ಜನುಮದಿನದಂದು ತುಂಬಾ ನೆನಪಿಗೆ ಬಂತು. ಕಣ್ಣು ಬಿಟ್ಟು ನೋಡಿದರೆ ಫೇಸ್ ಬುಕ್ ಗೋಡೆಯೆಲ್ಲಾ ತುಂಬಿ.. ಲ್ಯಾಪ್ಟಾಪ್ ಸ್ಕ್ರೀನ್ ಇಂದ ಹೊರಗೆ ದುಮುಕುತಿತ್ತು. ಒಂದೇ ಎರಡೇ ಸುಂದರಾತಿಸುಂದರ ಲೇಖನಗಳು, ಶುಭಾಶಯಗಳು, ಚಿತ್ರಗಳು, ಸಂದೇಶಗಳು, ಇಷ್ಟಗಳು ಅಬ್ಬಾ ಜೀವನಕ್ಕೆ ಇನ್ನೇನು ಬೇಕು. ನಮ್ಮ ಮನದಲ್ಲಿ ಎಲ್ಲರು ಇದ್ದಾರೆ ಅದು ನಮಗೆ ಗೊತ್ತಿರುತ್ತೆ.. ಎಲ್ಲರ ಮನದಲ್ಲೂ ನಾವಿದ್ದೇವೆ ನಮ್ಮ TRP ಏನು ಎಂದು ಅರಿವಾಗುವುದು ಈ ರೀತಿಯ ವಿಶೇಷದಿನಗಳಲ್ಲಿ, 

ಅಕ್ಕರೆಯಿಂದ ಶುಭಾಶಯಗಳ ಪೋಷಾಕು ತೊಡಿಸಿದ ಪ್ರತಿಯೊಬ್ಬರಿಗೂ ನನ್ನ ಪ್ರಯತ್ನ ಮೀರಿ ಅಭಿವಂದನೆಗಳನ್ನು ಸಲ್ಲಿಸಿದ್ದೇನೆ. ಬ್ಲಾಗ್ ಲೋಕದ ತಾರೆಗಳು ಕೊಟ್ಟ ಉಡುಗೆಗಳು ಒಂದೋ ಎರಡೋ ಅಲ್ಲಾ ನೂರಾರು. ಅಭಿಮಾನದ ಫಲಕಗಳನ್ನು ನನ್ನ ಮೇಲೆ ಏರಿಸಿಯೇ ಬಿಟ್ಟಿದ್ದಾರೆ.

ಪ್ರಪಂಚ ತಲೆಕೆಳಗಾದರೂ ಸರಿ ರಾತ್ರಿಗೆ ಶುಭಾಷಯ ಕೋರುವ ನನ್ನ ಮಗಳು ಭಾಗ್ಯ, ಅದ್ಭುತ ಬರಹಗಳ ಒಡತಿ ನಿವೇದಿತ ಕೊಟ್ಟಿರುವ ಭಾವ ಪೂರಿತ ಮಾತುಗಳು, ಅಚ್ಚರಿಯೆನ್ನುವಂತೆ ಪರಕಾಯ ಪ್ರವೇಶ ಮಾಡಿದಂತೆ ಬರೆದಿರುವ ಬಾಲು ಸರ್, ತುಂಬು ಹೃದಯ ಆಶೀರ್ವಾದ ಮಾಡಿರುವ ಹರಿಣಿ ಮೇಡಂ, ಚಿಕ್ಕ ಘಟನೆಯನ್ನು ವಿವರಿಸಿ ಅಭಿಮಾನದಿಂದ ಮೀಯಿಸಿರುವ ಪ್ರಕಾಶಣ್ಣ, ಸೂಪರ್ ವಿಷೆಸ್ ಕೋರಿದ DFR , ಹೇಳಿದ್ದು ಕೆಲವರ ಹೆಸರು ಹೇಳದೆ ಉಳಿದ ಆದ್ರೆ ಪುಟ್ಟ ಪುಟ್ಟ ಪದಗಳನ್ನು ಪ್ರಯೋಗಿಸಿ ನನ್ನ ಬದುಕಿಗೆ ದೊಡ್ಡ ದೊಡ್ಡ ಸಂದೇಶಗಳನ್ನ ಹೇಳಿದ ಎಲ್ಲಾ ಮಿತ್ರರಿಗೂ, ಪುಟ್ಟಿಯರಿಗೂ, ಮೇಡಂ ಗಳಿಗೂ, ಸರ್ ಗಳಿಗೂ, ಗುರುಗಳಿಗೂ ಹಾಗೆಯೇ ಹೇಳದೆ ಉಳಿದಿಹ ಹೆಸರು ಸಾವಿರಾರು ಬಂಧು ವರ್ಗಕ್ಕೆ, ಮಿತ್ರ ವೃಂದಕ್ಕೆ ನನ್ನ ಶಿರಸಾ ಪ್ರಣಾಮಗಳು.

ಎಲ್ಲರಿಗೂ ಚಿರಋಣಿ!!!

ಈ ಜನುಮದಿನಕ್ಕೆ ಸಿಕ್ಕ ಅತ್ಯುತ್ತಮ ಉಡುಗೊರೆ ಅನೇಕವು .. ಮನದಲ್ಲಿ ಬಚ್ಚಿಟ್ಟುಕೊಂಡಿದ್ದೇನೆ.. ಇನ್ನು ಕೆಲವು ಫೇಸ್ ಬುಕ್ ಗೋಡೆಯಲ್ಲಿ ಭದ್ರವಾಗಿ ನಿಂತು ಬಿಟ್ಟಿದ್ದಾವೆ.

ಬಾಹ್ಯ ಪ್ರಪಂಚಕ್ಕೆ ನನ್ನ ಶ್ರೀ ಪರ್ಪಂಚಕ್ಕೆ ತೋರಿಸಬೇಕಾದ್ದು ಈ ಕೆಳಗಿನವು. ಯಾಕೆಂದರೆ ಇದು ಕೇವಲ ನನಗಾಗಿ ಕಳಿಸಿದ ಉಡುಗೊರೆಗಳು.. ನೋಡಿ ನಿಮಗಾಗಿ..

ನನ್ನ ಮೆಚ್ಚಿನ ನಟ ಶ್ರೀ ಅನಂತನಾಗ್ ಅವರಿಂದ ಶುಭಾಶಯಗಳು ..
ಕೃಪೆ - ನಿವೇದಿತ ಚಿರಂತನ್ 

ಗೆಳೆಯ ಅನಿಲ್ ಬೆಡಗೆ ಅವರಿಂದ ಪದಗಳ ಗುಚ್ಹ 

6 comments:

  1. ನಿಮ್ಮ ಪರ್ಸ್ ಪ್ರಸಂಗ ಮನ ತುಂಬಿ ಬಂತು , ಎಲ್ಲರಿಗೂ ಒಂದಲ್ಲಾ ಒಂದು ಬಾರಿ ಇಂತಹ ಘಟನೆಗಳು ಜೀವನದಲ್ಲಿ ನಡೆದಿರುತ್ತದೆ , ಆದರೆ ಕಥೆಗಳು ಬೇರೆ ರೀತಿಯಲ್ಲಿ ಇರುತ್ತವೆ ಅಷ್ಟೇ . ಬಹಳ ಸ್ವಾರಸ್ಯಕರವಾಗಿ ಮಹಾಭಾರತದ ಸನ್ನಿವೇಶವನ್ನು ಈ ಘಟನೆಗೆ ಪೂರಕವಾಗಿ ಬಳಸಿಕೊಂಡಿರುವುದು ನಿಮ್ಮ ಜ್ಞಾನದ ಹಾಗು ಅಕ್ಷರಗಳ ತಾಕತ್ತು. ಜನುಮದಿನದ ಶುಭಕೋರಿದ ಗೆಳೆಯರಿಗೆ ಅಕ್ಷರಗಳ ರೂಪದಲ್ಲಿ ವಂದನೆಗಳನ್ನು ಹೀಗೂ ಸಲ್ಲಿಸಬಹುದೆಂದು ನಿಮ್ಮ ಈ ಜಾಣ್ಮೆಯ ಲೇಖನ ತೋರಿಸಿಕೊಟ್ಟಿತು . ಜೊತೆಗೆ ಅನಿಲ್ ಬೇಡಿಗೆ ಬರೆದಿರುವ ಮುದ್ದಾದ ಅಕ್ಷರಗಳ ಬರವಣಿಗೆಯ ಶುಭಾಶಯದ ಮೋಡಿ , ಮೇರುನಟ ಅನಂತನಾಗ್ ಅವರ ಶುಭ ಹಾರೈಕೆ ನಿಮ್ಮ ಹುಟ್ಟುಹಬ್ಬಕ್ಕೆ ಹೊಸ ಮೆರುಗು ತಂದಿದೆ . ನಿಮ್ಮ ಈ ಸಂತೋಷದಲ್ಲಿ ನಾವೂ ಪಾಳುದಾರರಾಗಲು ಹೆಮ್ಮೆಯಾಗಿದೆ . ನಿಮಗೆ ಶುಭವಾಗಲಿ . ನಿಮಗೆ ಪ್ರೀತಿಯ ಅಪ್ಪುಗೆಗಳು
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
    Replies
    1. ವಾಹ್ ಬರೆದದ್ದು ಏನಾದರು ಇರಲಿ. ಅದಕ್ಕೆ ನೀವು ಬರೆದ ಪ್ರತಿಕ್ರಿಯೆ ಮಜಬೂತ್. ನಿಮ್ಮ ಹೃದಯ ವೈಶಾಲ್ಯತೆಗೆ ಸಾಕ್ಷಿ. ಅದು ನಡೆದ ಘಟನೆಯನ್ನು ತಮಾಷೆಯಿಂದಲೇ ಇಂದಿಗೂ ನೋಡುತ್ತೇನೆ. ಕಷ್ಟಗಳು ಬಂದಾಗ ಜಗ್ಗಬಾರದು ಎನ್ನುವ ನೀತಿ ಅರಿವಾದ ದಿನ ಅದು.

      ಧನ್ಯವಾದಗಳು ಬಾಲೂ ಸರ್

      Delete
  2. Hi Sri :)
    Hengappa hingella bariteera ........ thank you for sharing with us :)
    Many more and many more happy-happy returns of the day :)

    ReplyDelete
    Replies
    1. DFR ಭಗವಂತ ಕೊಟ್ಟ ಅದ್ಭುತ ಸ್ನೇಹಿತರು ನೀವೆಲ್ಲ. ಹಾಗಾಗಿ ಹೃದಯದಿಂದ ಬರೆಸುತ್ತಾನೆ ಆ ದೇವ. ಪರಿಸ್ಥಿತಿಯನ್ನು ನಿಭಾಯಿಸಲು ಕಳಿಸಿದ ಆ ಘಟನೆಯನ್ನು ಮರೆಯಲಾರೆ ಎಂದಿಗೂ. ನಿಮ್ಮ ಪ್ರತಿಕ್ರಿಯೆಗೆ ನಾ ಆಭಾರಿ. ಧನ್ಯೋಸ್ಮಿ

      Delete
  3. ಏನು ಹೇಳಲಿ . ಮನದ ಮಾತುಗಳು ಪದಗಳಾಗಿ ಹರಿದಾಗ ಎದುರಿನವರು ಮೂಕ .
    ಹೀಗೆ ಇರಿ, ಬಾಳಲ್ಲಿ ಸಂತಸವಿರಲಿ , ಒಲವಿರಲಿ

    ReplyDelete
    Replies
    1. ಸಹೋದರಿ ನಿಮ್ಮ ಹಾರೈಕೆ ಪ್ರತಿಕ್ರಿಯೆ ಕುಶಿ ತಂದಿತು.. ಧನ್ಯವಾದಗಳು ನಿಮ್ಮ ಅಭಿಮಾನಕ್ಕೆ

      Delete