Thursday, September 25, 2014

ಚಲಾವಣೆಗಾಗಿ ಬದಲಾವಣೆ V/s ಬದಲಾವಣೆಯಲ್ಲಿ ಚಲಾವಣೆ !!!

ಇಬ್ಬರೂ ಕೂತು ಹಿಂದಿ ಭಾಷೆಯ ಹಳೆಯ ಚಿತ್ರ ಗೋಲ್ ಮಾಲ್ ನೋಡುತ್ತಿದ್ದರು.. 

ಲಕ್ಕಿ ಪಾತ್ರಧಾರಿ,  ನೌಕರಿ ಕೊಡುತ್ತೇನೆ ಎಂದು ಕರೆದ ಯಜಮಾನನ ಬಳಿ ಬಂದಾಗ, ಮಾತಿಗೆ ಮಾತು ಬಂದು ಹೇಳುತ್ತಾನೆ.. ನೀವೆಲ್ಲ ಹಿರಿಯರು ಭವಿಷ್ಯ ನೋಡುವ ಬದಲು ಭೂತ ಕಾಲದಲ್ಲಿ ಇರುತ್ತೀರ ಅಷ್ಟೊತ್ತಿಗೆ ನಿಮ್ಮ ಹಿಂದೆ ಸೂರ್ಯ ಹುಟ್ಟಿ ಆಗಿರುತ್ತದೆ... ಹೆಚ್ಚು ಕಮ್ಮಿ ಇದೆ ಅರ್ಥ ಬರುವ ರೀತಿಯಲ್ಲಿ ಸಂಭಾಷಣೆ ಇದೆ.. ಒಟ್ಟಾರೆ ಅರ್ಥ.. ಜಗತ್ತಿನ ಜೊತೆಯಲ್ಲಿ ಹೆಜ್ಜೆ ಹಾಕುತ್ತಿಲ್ಲ ಎಂದು.. !

ಆ ದೃಶ್ಯವನ್ನು ನೋಡುತ್ತಾ.. "ಈಗಲಾದರೂ ಬದಲಾಗೋ... ಈ ಜಗತ್ತು ವ್ಯಾಪಾರಿ ಪ್ರಪಂಚ ಆಗಿ ಬಿಟ್ಟಿದೆ.. ಅಂತಃಕರಣ, ಪ್ರೀತಿ, ವಿಶ್ವಾಸ, ಕರುಣೆ, ಮಮಕಾರ ಬರಿ ಪುಸ್ತಕದ ಹಾಳೆಗಳಲ್ಲಿ ಭದ್ರವಾಗಿದೆ.. ನೀ ಬದಲಾಗಲೇ ಬೇಕು.. ನಿನ್ನ ಈ ಹಳೆಜಮಾನದ ಗುಣವನ್ನು ಯಾರೂ ಮೆಚ್ಚುವುದಿಲ್ಲ.. ಕೆಲವು ದಿನಗಳಷ್ಟೇ ಚೆನ್ನಾ.. ನಂತರ.. ಅಯ್ಯೋ ಬಿಡು ಇದ್ದಿದ್ದೆ ಇದು ಎನ್ನುತ್ತಾರೆ..ಇದು ವ್ಯಾಪಾರಿ ಜಗತ್ತು ಚೆನ್ನಾಗಿರುವುದನ್ನು ಮಾತ್ರ ಖರೀದಿ ಮಾಡುತ್ತಾರೆ.. " ಹೀಗೆ ಸಾಗಿತ್ತು ಬದಲಾವಣೆಯ ಕೆಲವು ನಿಯಮಗಳ ಪಾಠ!!!

ಯಾಕೋ ಮನಸ್ಸಿಗೆ ಗಲಿಬಿಲಿಗೊಂಡು..  ದೂರದರ್ಶನ ಬಂದ್ ಮಾಡಿ.. ರೇಡಿಯೋ ಹಾಕಿದರು.. "ಏನು ಮಾಡಲಿ ನಾನು ಹೇಗೆ ಹೇಳಲಿ ಕಣ್ಣುಗಳಿದ್ದು ಕುರುಡರ ಹಾಗೆ ಹಲವರು ನಡೆಯುವರು.. ಎಲ್ಲಾ ಬಲ್ಲೆನು ಎನ್ನುತ ಹೋಗಿ ಹಳ್ಳಕೆ ಬೀಳುವರು"

ಮುಸಿ ನಗುವ ಸರದಿ ಇನ್ನೊಬ್ಬನದಾಗಿತ್ತು.. ಯಾಕೋ ಮನಸ್ಸು ಮೂವತ್ತಾರು-ಮೂವತ್ತೆಂಟು ವರ್ಷಗಳ ಹಿಂದೆ ಓಡಿತು.. 


* * * * * * * * * * * * * * * * * * * * * * * * * * * * 
ವಿಶಾಲವಾದ ಕಾಂಪೌಂಡ್.. ಅನೇಕ ತೆಂಗಿನಮರಗಳ ಸಾಲುಗಳು.. ಚಪ್ಪಡಿ ಕಲ್ಲು ಬೆಂಚು.. ದೊಡ್ಡ ಚಿಕ್ಕ ಮಕ್ಕಳೆಲ್ಲ ಆಟಾಡುತ್ತಿದ್ದಾರೆ.. 

ದಬಾರ್.. ದುಡುಂ ದುಡುಂ.. ಹಾ ಹಾಂ ಹಾಂ.... ಮಗು ಜೋರಾಗಿ ಅಳುತ್ತಿದೆ.. ತಕ್ಷಣ.. ಆ ಮಗುವಿನ ಸಹೋದರಿ.. ಅಯ್ಯೋ ಬಿದ್ದೆಯ ಕಂದಾ.. ಸಮಾಧಾನ ಮಾಡಿ ಮತ್ತೆ ಕಲ್ಲು ಬೆಂಚು.. ತೆಂಗಿನ ಮರ ಮಕ್ಕಳ ಆಟ.. ಹೀಗೆ ಸಾಗಿತ್ತು.. 


ನನಗಾಗಿ ಕಾದಿದ್ದ ಬೆಂಚು (ಮೂಲ ಸ್ಥಾನದಿಂದ ಪಲ್ಲಟವಾಗಿದ್ದರೂ ನೆನಪಿಂದ ಅಲ್ಲ)

ಆ ಕಲ್ಲು ಬೆಂಚು.. ಕಲ್ಲು ಬೆಂಚಿನ ಮೇಲೆ ಮತ್ತೆ ಕೂರುವ ನೆನಪು.. ಇಲ್ಲವೇ ಕೂತಿದ್ದ ನೆನಪು ಅಚ್ಚಳಿಯದೆ ಹಾಗೆಯೇ ನಿಂತಿತ್ತು.. ಕಾರಣ ಬೇಸಿಗೆಯಲ್ಲಿ ಆ ಕಲ್ಲು ಎಷ್ಟು ಕಾಯುತ್ತಿತ್ತೋ ಅದಕ್ಕಿಂತ ಹೆಚ್ಚೇ ಬಿಸಿಯಾಗಿ ಹೊಟ್ಟೆಯು ಕಾದಿರುತ್ತಿತ್ತು!!!


ಅದೇ ಕಲ್ಲು ಬೆಂಚಿನ ಕೂತಾಗ ಮೈ ಮನ ಹಾಯ್ ಎಂದಿತು !!!

* * * * * * * * * * * * * * * * * * * * * * * * * * * * *
ಕೆಲವು ನಿವಾಸಗಳು ಅಭೂತಪೂರ್ವ ಘಟನೆಗಳಿಂದ ಮನಕ್ಕೆ ಮುದ ನೀಡಿದರೆ.. ಕೆಲವು ನಿವಾಸಗಳು ಮರೆಯಲಾರದ ಪಾಠಗಳನ್ನೂ, ಮರೆಯಬಾರದ ನೆನಪನ್ನು ಒತ್ತಿ ಬಿಟ್ಟಿರುತ್ತವೆ.. 


ಬದುಕಿಗೆ ಅರ್ಥವತ್ತಾದ ಪಾಠ ಕಳಿಸಿದ ಶಿವಮೊಗ್ಗೆಯ ಬೀದಿ!

ಅಂಥಹ ಒಂದು ನಿವಾಸ.. ಶಿವಮೊಗ್ಗೆಯ ತುಮಕೂರು ಶಾಮರಾವ್ ರಸ್ತೆಯ ಒಂದು ದೊಡ್ಡ ವಠಾರ.. ಎದುರು ಬದಿರು ನಾಲ್ಕು ನಾಲ್ಕು ಮನೆಗಳ ಕಾಂಪೌಂಡ್ ಅದು.. 


ಬದಲಾಗಿದೆ.. ಹೌದು ಆದರೆ ಅದು ತೋರಿದ್ದ ನೀತಿ ನಿಯಮ ನಿಜಾಯಿತಿ... ಹಾಗೆಯೇ ಇದೆ !!!

ಊಟ ಬಟ್ಟೆಗೆ ಅಲ್ಪ ಸ್ವಲ್ಪ ತೊಂದರೆ.. ಅದಕ್ಕಿಂತ ಹೆಚ್ಚಾಗಿ ಆ ಮೆನಯಲ್ಲಿ ನಲಿದ ಕಳೆದ ಸುಮಾರು ಒಂದೂವರೆ ಅಥವಾ ಎರಡು ವರ್ಷಗಳು ಅಬ್ಬಾ ಎನ್ನುವಂಥಹ ಪಾಠ ಕಲಿಸಿವೆ.. 


ಬಾಲ್ಯದ  ನೆನಪನ್ನು ಅರಳಿಸಿದ ರಸ್ತೆ ಮತ್ತೊಮ್ಮೆ ಕಣ್ಣ ಮುಂದೆ 

"ತುತ್ತು ಅನ್ನಾ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ತುಂಡು ಬಟ್ಟೆ ಸಾಕು" ಎನ್ನುವ ಜಿಮ್ಮಿಗಲ್ಲಿನ ಹಾಡಿನಂತೆ ಸಾಗಿತ್ತು ಜೀವನ.. 

ಆ ಕಾಂಪೌಂಡ್ ಮಾಲೀಕನ ಮಡದಿ.. ಅಯ್ಯೋ ನೆಲದ ಮೇಲೆ ಮಲಗಿ ಬಿಟ್ಟಿದೆಯಲ್ಲಾ ಪಾಪ ತಲೆನೋವು ಬಂದು ಬಿಡುತ್ತೆ ಕಣ್ರೀ ಮೊದಲು ಊಟ ಮಾಡಿಸಿ ಎಂದು  ಮನೆಯಲ್ಲಿ ಉಳಿದ ಆಹಾರ ಕೊಡುವುದು!!!

ಅಮ್ಮನ ಬರುವಿಕೆಗಾಗಿ ಮನೆಯ ರಸ್ತೆಯ ಅಂಚಿನಲ್ಲಿದ್ದ ಅರಳಿಕಟ್ಟೆಯಲ್ಲಿ ಕಾದ ಹೊಟ್ಟೆಯನ್ನು ಮುಂದಿಟ್ಟುಕೊಂಡು ತಮ್ಮನ ಜೊತೆಯಲ್ಲಿ ಕಾಯುವುದು.. ಅದೇ ಬಣ್ಣದ ಸೀರೆ ಕಂಡರೆ ಸಾಕು ಅಮ್ಮ ಬಂದರು ತಿಂಡಿ ತಂದರು ಎನ್ನುವ ಮನದಾಳದ ತಳಮಳ ಹೊರಬರಲು ತುದಿಗಾಲಲ್ಲಿ ಕೂರುತ್ತಿತ್ತು.. !

ಇಂಥಹ ವಿಷಮ ಪರಿಸ್ಥಿತಿಯಲ್ಲೂ ಬೆಂಗಳೂರಲ್ಲಿ ಸ್ಥಿರವಾಗಿ ನೆಲೆಕಾಣಲು ಕಷ್ಟ ಪಡುತ್ತಿದ್ದ ಅಪ್ಪ ತಿಂಗಳ ಮೊದಲಲ್ಲಿ ಕಳಿಸುವ ಹಣಕ್ಕೆ ಕಾಯುತ್ತಾ ... ಅದು  ಬಂದೊಡನೆ ಕಾಫಿ ಪುಡಿ, ಸಕ್ಕರೆ, ಒಂದು ಕನ್ನಡಿ, ಒಂದು ಪೌಂಡ್ ಬ್ರೆಡ್.. ಕಾಯಂ ಆಗಿ ಬರುತ್ತಿದ್ದವು.. 

ಬ್ರೆಡ್ ಸಕ್ಕರೆ ಆ ಕಾಲದಲ್ಲಿ ಒಂದು ಹೆಮ್ಮೆಯ ಸಂಕೇತವಾಗಿದ್ದರೆ.. ಕನ್ನಡಿ ಮನೆಯ ಸುತ್ತಾ ಹಾವಳಿ ಮಾಡುತ್ತಿದ್ದ ಕಪಿರಾಯಗಳ ಚೇಷ್ಟೆಗಳಿಂದ ಪ್ರತಿ ತಿಂಗಳು ಹೊಸದನ್ನು ತರಲೆಬೇಕಿತ್ತು!!!


ಅರಳಿ ಕಟ್ಟೆ  ತನ್ನ ಮೂಲ ಸ್ವರೂಪ ಕಳೆದು ಕೊಂಡಿದೆ.. ಅದರ ಕೆಳಗೆ ಕಲಿತ ಅನುಭವ..ಹಸಿರು!



* * * * * * * * * * * * * * * * * * * * * * * * * * * * *

"ಸರಿ ಈಗ ಹೇಳು ನೀ ಮುಸಿ ಮುಸಿ ನಕ್ಕಿದ್ದು ಏಕೆ.. ?"

"ನೀವು ಹೇಳಿದ್ದು ಸರಿ.. ಚಲಾವಣೆಗಾಗಿ ಬದಲಾವಣೆ.. ಹೌದು ಆದರೆ ಬದಲಾವಣೆಯಾದರೆ ಚಲಾವಣೆ ಆಗುತ್ತೆ ಎನ್ನುವ ನಂಬಿಕೆ ಏನು.. ಮತ್ತೆ ಏತಕ್ಕೆ ಬದಲಾವಣೆಯಾಗಬೇಕು ಇದು ನನ್ನ ಗೊಂದಲ"

"ಜಗತ್ತು ಒಂದು ತಿರುಗುವ ಚಕ್ರ ಇದ್ದ ಹಾಗೆ ಅದರ ಮೇಲೆ ನಿಂತರೆ ಬೀಳುವ ಸಂಭವ ಹೆಚ್ಚು.. ಅದರ ಮೇಲೆ ಅದರ ಜೊತೆಯಲ್ಲಿ ನಡೆಯುತ್ತಾ ಇಲ್ಲವೇ ಓಡುತ್ತಾ ಸಾಗಿದರೆ ಬೀಳುವ ಸಂಭವ ಹ ಹ ಹಃ ಹ ಹ... ಅಲ್ಲವೇ ಕಂದಾ!!!"

"ಹೌದು ಸರಿ.. ಆದರೆ ನಿಮಗೂ ಬದಲಾವಣೆ ಬೇಕು ಎಂದು ಅರಿತಾಗ "ನೀನು ಬೆಂಗಳೂರಿಗೆ ಹೋಗು.. ನಿನಗೂ ನಿನ್ನ ಮಕ್ಕಳಿಗೂ ಒಳ್ಳೆಯದಾಗುತ್ತೆ" ಎನ್ನುವ ಮಾತಿನ ಬೆನ್ನೇರಿ ನೀವು ಬಂದದ್ದು ಇಲ್ಲಿಗೆ.. ಆದರೆ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾದರೂ ನೀವು ನಂಬಿದ್ದ ಶ್ರದ್ಧೆ, ಭಕ್ತಿ, ಪ್ರೀತಿ ವಿಶ್ವಾಸ, ಆಚಾರ, ವಿಚಾರ, ಆಹಾರ ಪದ್ಧತಿ, ಉಡುಗೆ ತೊಡುಗೆ ಯಾವುದರಲ್ಲೂ ಬದಲಾಗಲಿಲ್ಲ.. ಅಲ್ಲವೇ ನಾವು ಕಂಡಂತೆ ನಿಮ್ಮ ವ್ಯಕ್ತಿತ್ವ ಪ್ರೀತಿ ವಿಶ್ವಾಸ.. ಒಂದು ವಿಚಾರದಲ್ಲೂ ನೀವು ಬದಲಾಗಲೇ ಇಲ್ಲ.. ಆದರೂ ನಿಮ್ಮ ಹೆಸರು ನಿಮ್ಮ ಮಾತುಗಳು ಚಲಾವಣೆಯಲ್ಲಿ ಇದೆಯಲ್ಲಾ.. ಇದಕ್ಕೆ ಏನು ಹೇಳುತ್ತೀರಿ.. ಬದಲಾದವರೂ ಕಾಲಕ್ಕೆ ಹೊಂದಿಕೊಳ್ಳುತ್ತೇನೆ ಎಂದು ನಿಮ್ಮನ್ನು ಮೂದಲಿಸಿ ಮಾತಾಡಿದವರು ಇಂದು ವಿಚಿತ್ರ ಪರಿಸ್ಥಿತಿಯಲ್ಲಿ ನಿಂತಿದ್ದಾರೆ.. ಆದರೆ ನಿಮ್ಮ ಬದಲಾಗದ ಬದಲಾವಣೆ ನಿಮ್ಮನ್ನು ಇನ್ನಷ್ಟು ಗಟ್ಟಿ ಮಾಡಿದ್ದವು ಅಲ್ಲವೇ.. ಅದೇ ಮಾರ್ಗದಲ್ಲಿ ನಾನು ಇರುವುದು ಈ ವ್ಯಾಪಾರಿ ಮನೋಭಾವ.. ಅದು ಚೆನ್ನಾಗಿಲ್ಲ ಬೇಡ ಇದು ಚೆನ್ನಾಗಿದೆ ಬೇಕು ಎನ್ನುವ ಮನೋಸ್ಥಿತಿಯಿಂದ ಹೊರಗೆ ಬಂದಿದ್ದೇನೆ.. ನಿಮ್ಮ ಹಾದಿಯಲ್ಲೇ ನಡೆಯುತ್ತಿದ್ದೇನೆ ತಪ್ಪು ಎನ್ನುತ್ತೀರಾ" ಹುಸಿ ನಗುತ್ತಾ 

"ತಪ್ಪು ಖಂಡಿತ ಇಲ್ಲ.. ಆಗಲೇ ಹೇಳಿದ ಹಾಗೆ ತಿರುಗುವ ತಟ್ಟೆಯ ಮೇಲೆ ಕೆಲವು ಕಾಲ ನಿಲ್ಲಬೇಕು. ಕೆಲವು ಕಾಲ ಓಡಲು ಬೇಕು ಕೆಲವು ಕಾಲ ಆ ತಟ್ಟೆಯಿಂದ ಇಳಿದು ಒಂದಷ್ಟು ದೂರ ಹೆಜ್ಜೆ ಹಾಕಲು ಬೇಕು.. ಅದೇ ನಿಜವಾದ ಮಾರ್ಗ.. ನೀ ನನ್ನ ಹಿಂಬಾಲಿಸುತ್ತಿರುವುದು ನಿಜಾ.. ಕೆಲವೊಮ್ಮೆ ಈ ಸಂಕುಲಗಳಿಂದ ಹೊರಗೆ ಬಾ.. ಇನ್ನಷ್ಟು ಪ್ರಜ್ವಲಿಸುತ್ತೀಯ.. "

ಕಣ್ಣು ಬಿಟ್ಟೆ.. ಬೆಳಗಿನ ಜಾವ ಆರು ಘಂಟೆಯಾಗುತ್ತಿತ್ತು.. ಗೋಡೆಯ ಮೇಲಿನ ಚಿತ್ರ ನೋಡಿ ಕೈ ಮುಗಿದೆ.. ಅದರೊಳಗಿನ ಮೂರ್ತಿ ಆಶೀರ್ವಾದ ಮಾಡಿದಂತೆ ಭಾಸವಾಯಿತು.. ಸ್ಮೃತಿ ಪಟಲದಲ್ಲಿ ದಾಖಲಾದ ಘಟನೆಗಳು ಇವರ ಜೊತೆಯಲ್ಲಿ ಬಂದು ನಿಂತು ನೀತಿ ಪಾಠವನ್ನು ಅರುಹಿ ಕೆಲ ಗೊಂದಲಗಳನ್ನು ದೂರ ಮಾಡಿತು.. !!!

ಇಂದು ಅವರ ಜನುಮದಿನ.. ತಾವು ಪಾಠ ಹೇಳದೆ ತಾವು ನಡೆದ ದಾರಿಯಲ್ಲಿ ನಮಗೆ ನಡೆಯಿರಿ ಎಂದು ಒತ್ತಡ ಹೇರದೆ ನಮಗಾಗಿ ಒಂದು ಸುಂದರ ಪಥವನ್ನು ನಿರ್ಮಿಸಿದರು ನನ್ನ ಅಪ್ಪಾ.. ತಾವು ನಂಬಿದ್ದ ಯಾವುದೇ ಸಿದ್ಧಾಂತವನ್ನು ಕೆಳಗೆ ಇರಿಸದೆ ಅದರ ಜೊತೆಯಲ್ಲಿ ಹೆಜ್ಜೆ ಹಾಕಿ ತಮ್ಮ ಬಾಳನ್ನು ಬಂಗಾರ ಮಾಡಿದ್ದೆ ಅಲ್ಲದೆ.. ನಮ್ಮ ಜೀವನದ ಕಳಶಕ್ಕು ಸುವರ್ಣ ಲೇಪನ ಮಾಡಿದ್ದು ಅವರ ಹೆಗ್ಗಳಿಕೆ.. 

ಮನಸ್ಸು ಈ ಭಾವಗಳನ್ನೆಲ್ಲ ಹೊತ್ತು ನಿಂತಿತ್ತು ಕಳೆದ ಭಾನುವಾರ ಶಿವಮೊಗ್ಗೆಯ ತುಮಕೂರು ಶಾಮರಾವ್ ರಸ್ತೆಯ ಆ ಪಾಠ ಕಳಿಸಿದ ರಸ್ತೆಗೆ ಹೋಗಿ ನಿಂತಾಗ ಅದು ಬರೋಬ್ಬರಿ ಮೂವತ್ತೈದು-ಮೂವತ್ತಾರು ವಸಂತಗಳ ನಂತರ.... !!! 


ಬದಲಾದ ಪಥ.. ಆದರೆ ಬದಲಾಗದ ಭಾವ.. !

ಅಣ್ಣಾ ಹೊಸ ಬದುಕಿನತ್ತ ಹೊರಳಲು ನಿರ್ಧಾರ ಮಾಡಿದ್ದೇನೆ.. ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ರಕ್ಷಾ ಕವಚ.. ಆಗದು ಎಂದು ಕೈ ಕಟ್ಟಿ ಕೂರದೆ.. ನಡೆ ಮುಂದೆ ನಡೆ ಮುಂದೆ ಆರಾಮಾಗಿ ಮುಂದೆ ಎನ್ನುವ ನೀತಿ ಪಾಠ ಕಲಿತಿದ್ದು ನಿಮ್ಮ ಬದುಕನ್ನು ನೋಡಿ.. 

ಹುಟ್ಟು ಹಬ್ಬದ ಶುಭಾಶಯಗಳು.. ಅಣ್ಣಾ!!! 

6 comments:

  1. ಅಪ್ಪನ ಹುಟ್ಟು ಹಬ್ಬಕ್ಕೆ ಚಂದದ ಬರಹ...
    ಶುಭಾಶಯಗಳು

    ReplyDelete
    Replies
    1. ನೆನಪುಗಳು, ಬಂಧಗಳು ಯಾವಾಗಲು ಇಷ್ಟ ಪಡುವ ವಸ್ತು ನನಗೆ.. ಓದಿದ್ದಕ್ಕೆ ಮೆಚ್ಚಿದ್ದಕ್ಕೆ ಧನ್ಯವಾದಗಳು ಪಿ ಎಸ್

      Delete
  2. ಸದಾ ಸ್ಪೂರ್ತಿ ತುಂಬುವ ಚೇತನಗಳಿಗೆ ನಮ್ಮ ಅನಂತ ನಮನ.

    ಬಾಲ್ಯದ ಆ ರಸ್ತೆ ಮತ್ತು ಮನೆಯ ವರ್ಣನೆಯು ನನಗೆ ಗೌರಿಬಿನೂರಿನ ಚಿಕ್ಕಮ್ಮನ ಮನೆ ವಾತಾವರಣ ಕಣ್ಮುಂದೆ ತಂದಿತು.

    ReplyDelete
    Replies
    1. ಧನ್ಯವಾದಗಳು ಬದರಿ ಸರ್.. ಬಾಲ್ಯದ ನೆನಪು ಹೊತ್ತು ತರುವ ಸುಖಃ ಆಹಾ ಮಾತಿಲ್ಲ

      Delete