ನನ್ನ ಸ್ಥಿತಿ ಕಾಳಿ ಮಾತೆ ಹಾಲಿನ ಬಟ್ಟಲು ಹಾಗೂ ಮೊಸರಿನ ಬಟ್ಟಲಿನ್ನು ನೀಡಿದಾಗ ತೆನಾಲಿ ರಾಮಕೃಷ್ಣನ ಮನಸ್ಥಿತಿಯಂತಾಗಿತ್ತು..
ಜ್ಞಾನ ಎಂಬ ಹಾಲು.. ಧನ ಎಂಬ ಮೊಸರು.. ಯಾವುದು ಬೇಕು ಯಾವುದು ಬೇಡ..
ಸರಿ ಎರಡನ್ನೂ ಬೆರೆಸಿ ಕುಡಿದ ರಾಮಕೃಷ್ಣ ಅದನ್ನು ಕಾಳಿ ಮಾತೆಗೆ ವಿವರಿಸಿದ ಸುಂದರ ಸಮಾಧಾನದಲ್ಲಿ ನಾ ಹೊರ ನಡೆದೆ ಸಭಾಂಗಣದಿಂದ..
ಅರೆ ಶ್ರೀ ಏನು ಹೇಳುತಿದ್ದೀರಾ ಸರಿಯಾಗಿ ಹೇಳಬಾರದೆ... ಎಂದಾಗ..ಅಚಾನಕ್ ಡಾಕ್ಟರ್ ಡಿ ಟಿ ಕೃಷ್ಣಮೂರ್ತಿ (Dr. DTK) ಹೇಳಿದ ಮಾತು ನೆನಪಿಗೆ ಬಂತು..
"ಶ್ರೀಕಾಂತ್ ಮಂಜುನಾಥ್ ಈ ಕಾರ್ಯಕ್ರಮದ ಬಗ್ಗೆ ಒಂದು ಲೇಖನ ಬೇಕು ನಿಮ್ಮಿಂದ"
"ಗುರುಗಳೇ ನಿಮ್ಮ ಆಜ್ಞೆ ಶಿರಸಾವಹಿಸಿ ಪಾಲಿಸುತ್ತೇನೆ" ಎಂದಿದ್ದೆ.. ತಗೊಳ್ಳಿ ನಿಮ್ಮ ಮುಂದೆ..
*******************
ಉಷಾ ಉಮೇಶ್ ಮೇಡಂ ಈ ಕಾರ್ಯಕ್ರಮದ ಬಗ್ಗೆ ಹೇಳಿದಾಗ ಒಮ್ಮೆ ಹಿಂಜರಿದಿದ್ದೆ.. ಹೋಗಲೋ ಬೇಡವೋ ಅಂತ.. ಆದರೆ ಗಡಿಯಾರ ರಾತ್ರಿ ಎಂಟು ಐವತ್ತು ಎಂದು ಹಲ್ಲು ಕಿರಿದಾಗ.. ಅಯ್ಯೋ ಎಂಥಹ ತಪ್ಪು ಮಾಡಿಬಿಡುತ್ತಿದ್ದೆ.. ಒಂದು ಸುಂದರ ಸಂಗೀತದ ರಸಾನುಭವ ಕಳೆದುಕೊಳ್ಳುತ್ತಿದ್ದೆ..
ಭಗೀರಥ ಗಂಗೆಯನ್ನು ಧರೆಗೆ ಹರಿಸಲು ಸ್ವರ್ಗಾದಿದೇವತೆಗಳನ್ನು ಬೇಡಿ ಕೊಂಡಾಗ.. ಗಂಗೆ ಹರಿಯಲು ಶುರುಮಾಡಿದಳು.. ಆಗ ಕಸಿವಿಸಿಗೊಂಡ ಭಗೀರಥ... ಯಾಕೆಂದರೆ ರಭಸದಿಂದ ಗಂಗೆ ಹರಿಯಲು ಶುರುಮಾಡಿದಳು.. ಅಂತಹ ಗಂಗೆಯನ್ನು ಮತ್ತೆ ಜಟೆಯಲ್ಲಿ ಕಟ್ಟಿದ ಶಿವ .. ನಿಧಾನವಾಗಿ ಹರಿಯ ಬಿಟ್ಟಾ..
ಹಾಗೆಯೇ ಭಾನುವಾರ ೨೩ನೆ ತಾರೀಕು ಫೆಬ್ರುವರಿ ಸಂಜೆ ಸುಮಾರು ಐದು ಮೂವತ್ತು ಹೊತ್ತಿನತನಕ ರಭಸವಾಗಿ ಹರಿಯುತ್ತಿದ್ದ ಸಂಗೀತ ಗಂಗೆ ಮತ್ತೆ ದಶಕಗಳ ಹಿಂದೆ ಓಡಲು ಶುರುಮಾಡಿದಳು ಅದು ಹೇಗೆ.. ವಯ್ಯಾರದಿಂದ, ಸುಮಧುರ ಸಂಗೀತದ ಜೊತೆಯಲ್ಲಿ ಹರಿಯಲು ಶುರು ಮಾಡಿದಳು..
ಪ್ರತಿ ಹಾಡಿನ ಪದವನ್ನು ಅನುಭವಿಸಿ ಹೃದಯದೊಳಗೆ ಇಳಿಸಿಕೊಂಡು ಅದರ ಭಾವವನ್ನು ಹಾಡುತಿದ್ದ ರೀತಿ ಅದ್ಭುತ.. ಹಾಡಿನ ಚಿಕ್ಕ ಚಿಕ್ಕ ವಿಷಯಗಳನ್ನು ಹೆಕ್ಕಿ ಹೆಕ್ಕಿ ಉಣಬಡಿಸುತ್ತಿದ್ದ ನಿರೂಪಕರು.. ಒಂದೇ ಎರಡೇ.. ನನ್ನ ಮನಸ್ಸಿನಲ್ಲಿ ಹರಿದ ಭಾವಗಂಗೆಯನ್ನು ಪದಗಳ ಮೂಲಕ ತಲುಪಿಸುವ ಒಂದು ಪುಟ್ಟ ಪ್ರಯತ್ನ ಮಾಡುತ್ತಿದ್ದೇನೆ..
- ಇಡಿ ಕಾರ್ಯಕ್ರಮ ಚೊಕ್ಕವಾಗಿ.. ಸಕ್ಕರೆ ಅಚ್ಚಿನ ಬೊಂಬೆಯ ಹಾಗೆ ಸಾಲಾಗಿ ಸುಂದರವಾಗಿ ಎರಕ ಮಾಡಲಾಗಿತ್ತು
- ಪ್ರತಿ ಹಾಡಿನಲ್ಲೂ ಮನಸ್ಸು, ಉಸಿರು ಇಟ್ಟು ಹಾಡುತ್ತಿದ್ದ ಪರಿ
- ಲತಾ ಮೇಡಂ ಅವರ ಧ್ವನಿ ಜೇನಿನಲ್ಲಿ ಅದ್ದಿದ ಗೋಡಂಬಿಯ ಹಾಗೆ ರುಚಿಸುತ್ತಾ ಸಾಗಿತ್ತು.. ಈ ಹಾಡನ್ನು ಎಷ್ಟು ಚೆನ್ನಾಗಿ ಹಾಡುತ್ತಾರೆ ಅಲ್ಲವೇ ಎಂದುಕೊಂಡು ಈ ಹಾಡು ಸೂಪರ್ ಅಂತ ಚಪ್ಪಾಳೆ ಹೊಡೆಯುತ್ತಾ ಇದ್ದರೇ ಕರಗಲು ಹೇಳುತ್ತಿದ್ದವು ಇರು ಶ್ರೀ ಇರು ಶ್ರೀ ... ಮುಂದಿನ ಹಾಡು ಕೇಳು.. ಆಮೇಲೆ ನಿರ್ಧರಿಸು ಅಂತ.. ಪ್ರತಿಯೊಂದು ಹಾಡು ಅವರ ಧ್ವನಿಯಲ್ಲಿ ಸಿಂಗರಿಸಿಕೊಳ್ಳುತ್ತಿದ್ದವು. ಧ್ವನಿಯಲ್ಲಿನ ಏರಿಳಿತ ಅದಕ್ಕೆ ತುಂಬುವ ಉಸಿರಿನ ಭಾವ.. ಆಹಾ ವಿವರಿಸಲು ಪದಗಳಿಲ್ಲ. ಗಾನ ಶಾರದೆ ಎನ್ನುವ ಹೆಸರನ್ನು ಲತಾ ಮೇಡಂಗೆ ಕೊಡಬೇಕು ಎಂದು ಡಾಕ್ಟರ್ ಡಿ ಟಿ ಕೃಷ್ಣಮೂರ್ತಿ ಹೇಳಿದಾಗ ಅಹುದು ಅಹುದು ಎಂದಿತು ಮನ.
- ಅಂಜಲಿ ಮೇಡಂ ಅವರು ಭಜನ್ ಗಳನ್ನೂ ಹಾಡುತ್ತಿದ್ದರೆ ಭಕ್ತಿಯಿಂದ ಕೈ ಮುಗಿಯಬೇಕು ಎನ್ನದು ನಿರ್ಧರಿಸುತಿತ್ತು.. ಯುಗಳ ಗೀತೆ ಹೇಳುತ್ತಿದ್ದರೆ ಹಾಗೆಯೇ ಆಗಸದಲ್ಲಿ ತೇಲಿ ಹೋಗುವ ಅನುಭವ.. ಜೇನಿನ ಮಳೆಯೋ ಹಾಲಿನ ಮಳೆಯೋ ಅನ್ನುವ ಅಣ್ಣಾವ್ರ ಹಾಡಿನಂತೆ ಪ್ರತಿ ಪದವೂ ಭಾವವೂ ಜೇನಿನಲ್ಲಿ ಹಾಲಿನಲ್ಲಿ ಮಿಂದು ಹೊರಗೆ ಬರುತಿದ್ದವು. ಕಣ್ಣು ಮುಚ್ಚಿ ಹಾಡನ್ನು ಕೇಳುತ್ತಾ ಕೂತರೆ ಕಣ್ಣ ಮುಂದೆ ಗಾನ ಸರಸ್ವತಿ ನಾಟ್ಯವಾಡಿದ ಅನುಭವ. ಗಾನ ಸರಸ್ವತಿ ನಮ್ಮಂ ಮುಂದೆಯೇ ನಿಂತು ಹಾಡುತಿದ್ದಾರೆ ಎನ್ನುವ ಅನುಭವ ತಂದು ಕೊಟ್ಟ ಅಂಜಲಿ ಮೇಡಂ ಅವರಿಗೆ ಧನ್ಯವಾದಗಳು.
- "ದಿಲ್ ಹೂಂ ಹೂಂ ಕರೆ" ಸಂಗೀತದ ಅ ಆ ಇ ಈ ಗೊತ್ತಿಲ್ಲದ ನಾನು ಅವರ ಕರಗಳನ್ನು ಮುಟ್ಟಿ ಸರ್ ನಿಜವಾಗಿಯೂ ರೋಮಾಂಚನದ ಅನುಭವವಾಯಿತು ಎಂದಾಗ ನನಗೆ ಅರಿವಿಲ್ಲದೆ ಎದೆ ಬಡಿತ ಹೆಚ್ಚಾಗಿತ್ತು. ಆ ಆಳವಾದ ಧ್ವನಿ ಪದಗಳ ಅವಶ್ಯಕತೆಗೆ ತಕ್ಕಂತೆ ಭಾವ ಜೀವ ತುಂಬುತ್ತಿದ್ದ ಪರಿ ಆಹಾ.. ಅವರು ಹಾಡಿದ ಪರಿ ಹಾಡು ಮನಸ್ಸಿನ ಕಡಲಲ್ಲಿ ತಂಗಾಳಿ ಹೊತ್ತು ತರುತ್ತಿದ್ದ ಆಹ್ಲಾದಕರ ಅನುಭವ ನೀಡುತ್ತಿತ್ತು.. ಭಾನುವಾರದ ಸಂಜೆ ಈ ಮಟ್ಟಕ್ಕೆ ಉಲ್ಲಾಸದ ಹೂಮಳೆ ಸುರಿಸಿದ್ದು ಅರ್ಶದ್ ಸರ್ ಅವರ ಗಾಯನದ ತಾಕತ್. ಹಾಟ್ಸ್ ಆಫ್ ಸರ್ಜಿ
- ಸಂಗೀತ ಕೇಳುವಾಗ ಮನಸ್ಸು ಎತ್ತರಕ್ಕೆ ಎತ್ತರಕ್ಕೆಏರುತ್ತಿದ್ದರೆ.. ಕಾಲುಗಳು ಅರಿವಿಲ್ಲದೆ ತಾಳ ಹಾಕಲು ಭುವಿಯನ್ನು ಗಾಳಿಯನ್ನು ಒತ್ತುತ್ತಾ ಇರುತ್ತದೆ.. ಇವರ ಧ್ವನಿಯಲ್ಲಿ.. ಇವರ ಹಾಡುಗಾರಿಕೆಯಲ್ಲಿ ಶ್ರೋತೃಗಳು ತಲ್ಲೀನರಾಗುತ್ತಿದ್ದರೆ ಅವರ ಮನಸ್ಸು ಇದು ಹಕ್ಕಿಯಲ್ಲ ಆದರೆ ಹಾರ್ತೈತ್ತಲ್ಲ ಎನ್ನುತ್ತಾ ಸಂಗೀತ ಸಾಗರದ ನೌಕೆಯಲ್ಲಿ ತೇಲುತ್ತಿದ್ದವು. ರಾಜಶೇಖರ್ ಸರ್ ಸಂಗೀತದ ಅಲಾಪಗಳನ್ನು (ಕ್ಷಮಿಸಿ ನನಗೆ ಅದರ ಸರಿಯಾದ ರೂಪ ಗೊತ್ತಿಲ್ಲಾ), ಅದರ ಏರಿಳಿತಗಳನ್ನು, ಆಳದ ಧ್ವನಿಯಲ್ಲಿನ ಭಾವಗಳನ್ನು ಉಲಿಯುತಿದ್ದ ಬಗೆ ಇಂದು ಶಿವರಾತ್ರಿಯಾಗಿದ್ದರೆ ಎಷ್ಟು ಸೊಗಸಾಗಿ ಇರುತ್ತಿದ್ದವು ಎನ್ನಿಸುತ್ತಿತ್ತು.. ಮನ್ನಾಡೆಯವರ ಹಾಡಿನ ಜೊತೆಯಲ್ಲಿ ಅವರ ಧ್ವನಿಯನ್ನು ಧರೆಗಿಳಿಸಿದ ಅವರ ಧ್ವನಿಯ ತಾಕತ್ತಿಗೆ ನನ್ನ ನಮನಗಳು. ನಿಜಕ್ಕೂ ಮನ್ನಾಡೆಯವರೂ ಕೂಡ ತಲೆ ತೂಗುತ್ತಿದ್ದರು ಅನ್ನಿಸಿತು.
- ಮಹಾಂತೇಶ್ ಸರ್ ಹಾಡುಗಳನ್ನು ಹೇಳಿದ್ದು ಅಷ್ಟೇ ಅಲ್ಲಾ ಹಾಡಿನ ಹಿಂದಿನ ಚಿಕ್ಕ ಚೊಕ್ಕ ಘಟನೆಗಳನ್ನು ಹಂಚಿಕೊಂಡದ್ದು ಸೊಗಸು ಎನಿಸಿತು. ಅವರ ಸಿರಿ ಕಂಠದಲ್ಲಿ ಅರಳಿದ ಗೀತೆಗಳು ಜಲಪಾತದ ಸೊಬಗನ್ನು ಒಮ್ಮೆ ಬೀರಿದರೆ ಇನ್ನೊಮ್ಮೆ ಹರಿಯುವ ಝರಿಯ ವಯ್ಯಾರವನ್ನು ಕಣ್ಣ ಮುಂದೆ ತಂದಿತು. ಅವರ ಧ್ವನಿಯಲ್ಲಿ ಬಾನಿಗೊಂದು ಎಲ್ಲೇ ಎಲ್ಲಿದೆ ಹಾಡನ್ನು ಕೇಳಬೇಕು ಎನ್ನುವ ನನ್ನ ಮತ್ತು ಡಾಕ್ಟರ್ ಕೃಷ್ಣಮೂರ್ತಿಯವರ ಆಸೆ ಖಂಡಿತ ಇಡೇರಿಸುತ್ತಾರೆ ಎನ್ನುವ ನಂಬಿಕೆ ನಮ್ಮದು. ಸುಂದರವಾದ ಹಾಡುಗಾರಿಕೆ ಜೊತೆಯಲ್ಲಿ ಅಷ್ಟೇನವಿರಾಗಿ ಅದನ್ನು ಪ್ರಸ್ತುತ ಪಡಿಸಿದ ಜಾಣ್ಮೆ ನಿಜಕ್ಕೂ ಗಮನೀಯ.
- "ಶಿಲೆಗಳು ಸಂಗೀತವ ಹಾಡಿವೆ" ಹಾಡನ್ನು ಈಗ ತಾನೇ ಹಾಡಿ ಬಂದೆ.. ಈಗ ನೋಡಿದರೆ ಇಲ್ಲಿನ ಶಿಲೆಗಳು ಆಗಲೇ ಗಂಧರ್ವ ಗಾಯನದಿಂದ ಮೂರ್ತಿಗಳಾಗಿವೆ ಎಂದು ಗಾಯಕರಿಗೆ ಅನ್ನಿಸಿತು. "ಮೇರೆ ನೈನಾ ಸಾವನ್" ಹಾಡು ಶಿಲೆಗಳಿಗೂ ಜೀವ ತುಂಬುವ ಹಾಡು.. ಅದನ್ನು ಅಷ್ಟೇ ಸುಮಧುರವಾಗಿ... ಎಲ್ಲಾ ಗಾನಗಂಗೆಯಲ್ಲಿ ಮುಳುಗಿ ತೇಲುತ್ತಿದ್ದಾ ಶ್ರೋತೃಗಳಿಗೆ ಅಮೃತವರ್ಷಿಣಿಯ ಸಿಂಚನ ಮಾಡಿದರು. (ಕ್ಷಮೆ ಇರಲಿ ಈ ಸುಮಧುರ ಗಾಯಕರ ಹೆಸರು ನೆನಪಿಗೆ ಬರ್ತಾ ಇಲ್ಲ). ಜೀವಂತಿಕೆ ತುಂಬಿದ್ದ ಹಾಡುಗಾರಿಕೆಗೆ ನಮಗರಿವಿಲ್ಲದೆ ಕರತಾಡನ ಅಪಾರ ಸದ್ದು ಮಾಡಿದವು.
- ಇಡಿ ಕಾರ್ಯಕ್ರಮಕ್ಕೆ ಚೌಕಟ್ಟು ಒದಗಿಸಿದ್ದು ನಿರೂಪಣೆ.. ಪ್ರತಿ ರಾಗದ ಬಗ್ಗೆ ಚುಟುಕು ಮಾಹಿತಿ.. ಜೊತೆಯಲ್ಲಿ ತಬಲಾ ವಾದನ.. ಮತ್ತೆ ನಿರೂಪಣೆ.. ಒಂದು ಮನ ತುಂಬುವ ಕಾರ್ಯಕ್ರಮಕ್ಕೆ ಇಂಥಹ ನಿರೂಪಕ ನಿಜಕ್ಕೂ ಅನರ್ಘ್ಯ ರತ್ನವಿದ್ದಂತೆ. ಅವರ ಮಾತಿನ ಧ್ವನಿ ಇಷ್ಟವಾದರೆ.. ಅವರ ಬೆರಳುಗಳು ತಬಲಾದ ಮೇಲೆ ಮಾಡುತ್ತಿದ್ದಾ ಜಾದೂ ಅಷ್ಟೇ ಮನ ತುಂಬುತ್ತಿತ್ತು.
ಇಡಿ ಕಾರ್ಯಕ್ರಮವನ್ನು ಒಂದು ಸುಂದರ ಪುಷ್ಪದ ಮಾಲಿಕೆಯನ್ನಾಗಿ ಪರಿವರ್ತಿಸಿದ್ದು ಅಂಜಲಿ ಮೇಡಂ ಹಾಗೂ ಲತಾ ಮೇಡಂ ಅವರ ತಂಡದ ಶ್ಲಾಘನೀಯ ಶ್ರಮ ಎನ್ನುವುದನ್ನು ಅರಿತಾಗ ವಾಹ್ ಇಂತಹಃ ಕಾರ್ಯಕ್ರಮಗಳು ಸದಾ ನೆಡೆಯುತ್ತಲಿರಲಿ.. ಮನ ಮುಟ್ಟುವ ಹಾಡುಗಳು ಮನಸ್ಸಿನ ಕದವನ್ನು ಸದಾ ತಟ್ಟುತ್ತಲಿರಲಿ ಎನ್ನುವ ಹಾರೈಕೆ ಮತ್ತು ಅಭಿಲಾಷೆಯೊಂದಿಗೆ ಸಭಾಂಗಣದಿಂದ ಹೊರಗೆ ಬಂದಾಗ.. ಜ್ಞಾನದ ಹಾಲು .. ಧನದ ಮೊಸರು ಎರಡನ್ನು ಕಾಳಿಮಾತೆಯನ್ನು ಒಪ್ಪಿಸಿ ಕುಡಿದು ಸಂತುಷ್ಟನಾದ ತೆನಾಲಿ ರಾಮಕೃಷ್ಣನ ಮನಸ್ಥಿತಿ ನನ್ನದಾಗಿತ್ತು..
ಈ ಕಾರ್ಯಕ್ರಮವನ್ನು ಆಯೋಜಿಸಿದ ಲತಾಮೇಡಂ ಹಾಗೂ ಅಂಜಲಿ ಮೇಡಂ ಮತ್ತು ಅವರ ತಂಡಕ್ಕೆ ಅಭಿನಂದನೆಗಳು. ಜೊತೆಯಲ್ಲಿ ಈ ಕಾರ್ಯಕ್ರಮದ ಬಗ್ಗೆ ತಿಳಿಸಿ ಬರಬೇಕು ಎಂದು ಒತ್ತಾಯ ಮಾಡಿದ ಉಷಾ ಉಮೇಶ್ ಮೇಡಂ ಅವರಿಗೆ ಧನ್ಯವಾದಗಳು.
ಇಡಿ ಕಾರ್ಯಕ್ರಮಕ್ಕೆ ಜೊತೆ ನೀಡಿ ನಕ್ಕು ನಲಿವಂತೆ ಮಾಡಿದ ಚಿರ ಯುವಕರಾದ ಡಾಕ್ಟರ್ ಕೃಷ್ಣಮೂರ್ತಿ ಸರ್ ಅವರಿಗೆ ನನ್ನ ಮನಸಾರೆ ವಂದನೆಗಳು.
ಅಪಾರ ದಿನಗಳ ನಂತರ ಸಿಕ್ಕ ಸಂತೋಷಕುಮಾರ್, ಗಣೇಶ್, ಗುರುನಾಥ್ ಬೋರಗಿ, ಪರೇಶ್, ಮತ್ತು ಸ್ನೇಹಿತರಿಗೆ ಧನ್ಯವಾದಗಳು...