Tuesday, January 21, 2014

ಮಂಗಳದ ಈ ಸುದಿನ ಮಧುರವಾಗಲಿ !!!!!

"ನಿಮಗೆ.. ಎಲ್ಲೋ ಮಂಗಳವಾರದ ಭೂತ ಹಿಡಿದಿದೆ"

"ಯಾಕೋ ಮಂಗನ ತರಹ ಇರೋದು ಸಾಲದ... ಮಂಗಳವಾರ ಬೇಕಾ"

"ನಿನಗೆ ಮಂಗಳವಾರ... ತಲೆ ಹರಟೆ ನೀನು.. ನಿನಗೆ ಹೇಳಿದರೆ ಕೇಳ್ತೀಯ... ?"

"ನೀವು ಹಿಂದು ನಾ ಅಂತ ಅನುಮಾನ... ಯಾಕೆ ಹೀಗೆ ನೀವು"

"ಸಾರ್ ಮಂಗಳವಾರ ಯಾರೂ ಡೆಲಿವರಿ ತಗೊಳ್ಲೋಲ್ಲ ಸಾರ್.. ನಾಳೆ ತಗೊಳ್ಳಿ... ಛೆ ಈ ಪಾರ್ಟಿ ಗೆ ಎಷ್ಟು ಹೇಳಿದರೂ ಕೇಳೋಲ್ಲ.. ರೀ ಬೇಗ ಬೈಕ್ ನಾ ಡೆಲಿವರಿ ಮಾಡಿಬಿಡ್ರಿ ಒಳ್ಳೆ ವಿಚಿತ್ರ ಪ್ರಾಣಿ.. ಈ ತರಹ ನಾನು ಎಲ್ಲೂ ನೋಡಿಲ್ಲ"

"ಲೋ ಶಿವ.. ಈ ಕಾರನ್ನು ಮಂಗಳವಾರನೇ ರಿಜಿಸ್ಟರ್ ಮಾಡಿಸು.. ಇಲ್ಲ ಅಂದ್ರೆ ಈ ಗಿರಾಕಿ ನನ್ನ ತಲೆ ತಿಂದು ಬಿಡ್ತಾನೆ(ರೆ)... "

ಏನೋ ನಿನ್ನ ಮಂಗಳವಾರದ ಗೋಳು.. ಶುದ್ಧ ತಲೆಹರಟೆ.. ಯಾರ ಮಾತು ಕೇಳೋಲ್ಲ... ಅಮ್ಮ ನೀವಾದರೂ ಸ್ವಲ್ಪ ಬುದ್ಧಿ ಹೇಳಿ..."

??????????????????????????????????????

ಅನ್ನಿಸುತ್ತಿದೆಯ... 

ಬನ್ನಿ.. ಕೈಗಡಿಯಾರ ನೋಡಿಕೊಳ್ಳಿ.. ಹಾಗೆ ಅದನ್ನು ಹಿಂದೇ ತಿರುಗಿಸಿ.. ಆ ಹಾಗೆ ಸ್ವಲ್ಪ ಹಿಂದೆ ಇನ್ನು ಸ್ವಲ್ಪ ಹಿಂದೆ... ಹಾ ಹಾಗೆ ಬರ್ತಾ ಇರಿ... 

@#@#@#$%&%*^&^&^**&^ 

"ಶ್ರೀ ಯಾಕೋ ತುಂಬಾ ನೋಯುತ್ತಾ ಇದೆ.. ಬೇಗ ಬಂದು ಬಿಡಿ"

"ಸರಿ ಹೊರಟೆ"

ಹೊಸೂರು ರಸ್ತೆಯಲ್ಲಿ ಸುಮಾರು ಒಂದೂವರೆ ತಿಂಗಳ ಹಿಂದೆ ಖರೀದಿ ಮಾಡಿದ್ದ..ವಿಕ್ಟರ್ ಬೈಕ್ ಓಡುತ್ತಿತ್ತು ಶಾಂತವಾಗಿ.. ಸೀದಾ ಸೀತಾ ಸರ್ಕಲ್ ಹತ್ತಿರ ಬಂದೆ.. 

"ಅಲ್ಲೇ ಇದ್ದಾಳೆ ನೋಡಿ ಮಾತಾಡಿಸಿ" ಎಂದರು ಹೆಣ್ಣು ಕೊಟ್ಟವರು 

"ಹೇಗಿದ್ದೀಯ"

"ಏನೋ ಶ್ರೀ ಗೊತ್ತಾಗ್ತಾ ಇಲ್ಲ.. ಡಾಕ್ಟರ್ ಹೇಳಿದರು.. ಅದಕ್ಕೆ ಬಂದೆ.. ನಿಮ್ಮ ಅಮ್ಮನಿಗೆ ಫೋನ್ ಮಾಡಿ.. ವಿಷಯ ಹೇಳಿ"

"ಸರಿ ಇಲ್ಲೇ ಕೂತಿರು ಬರುತ್ತೇನೆ" ಎಂದು ಹೇಳಿ ಫೋನ್ ಬೂತ್ ಹುಡುಕಿಕೊಂಡು ಬಂದೆ (ಮೊಬೈಲ್ ಯುಗವಲ್ಲ ಅದು)

ಮನೆಗೆ ವಿಷಯ ಮುಟ್ಟಿಸಿ ಲಗುಬಗೆಯಿಂದ ಮತ್ತೆ ಓಡಿ ಬಂದೆ.... 

ಗಾಬರಿಯಾಯಿತು.. ಆಕೆ ಇರಲಿಲ್ಲ...  ಬಿಸಿ ಹಾಲು ಕುಡಿದ ಬೆಕ್ಕಿನಂತೆ ಆ ಕಡೆ ಈ ಕಡೆ ಅಲೆದಾಡಿದೆ.. 

"ಶ್ರೀಕಾಂತ್... ಯಾಕೋ ನೋವು ಅಂದ್ಲು ಅದಕ್ಕೆ ಒಳಗೆ ಕರೆದುಕೊಂಡು ಹೋಗಿದ್ದಾರೆ.. ನಿಮ್ಮ ಮನೆಗೆ ವಿಷಯ ತಿಳಿಸಿ.. ಸ್ವಲ್ಪ ಸಿದ್ಧತೆ ಮಾಡಿಕೊಂಡು ಬರಲಿ" 

ಸಮಯ ಸಂಜೆ ಏಳು ಘಂಟೆ    

ಮತ್ತೆ ಫೋನಿನ ಬಾಯಿಗೆ ಬಾಯಿ ಕೊಟ್ಟೆ.. "ಅಮ್ಮ ಬೇಗ ಬಂದು ಬಿಡು...."

ಮತ್ತೆ ಒಳಗೋಡಿದೆ.. 

ಅಲ್ಲಿ ಮತ್ತೆ ಯಾರೂ ಕಾಣಲಿಲ್ಲ.. ಕೋಣೆಗೆ ಹೋಗಿ ನೋಡಿದೆ.. ಹಾಸಿಗೆ ಖಾಲಿ.. 

"ಓಹ್ ನೀವಾ ಕೆಳಗಡೆ ಕರೀತಾ ಇದ್ದಾರೆ ಬೇಗ ಹೋಗಿ"

ಹೃದಯದ ಬಡಿತ ಶತಕಾರಾಧನೆ ಮಾಡುತ್ತಿತ್ತು.. 

ಗಡಿಬಿಡಿಯಿಂದ ಕೆಳಗೆ ಓಡಿ ಬಂದೆ

ಹೆಣ್ಣು ಕೊಟ್ಟವರು... ದಂತ ಪಂಕ್ತಿಗಳನ್ನು ಬೀರುತ್ತಾ.. "ತಗೊಳ್ಳಿ ಬಾಯಿ ಸಿಹಿ ಮಾಡಿಕೊಳ್ಳಿ.."

ನನಗೆ ಮೇಲೆ ತಿರುಗುತ್ತಿರುವ ಪಂಕ ವೇಗವೋ ಅಥವಾ ನನ್ನ ತಲೆಯೋ ಅನುಮಾನ ಬಂತು.. ತಲೆ ಗಟ್ಟಿಯಾಗಿ ಹಿಡಿದುಕೊಂಡೆ.. ಚಾವಟಿ ಇರಲಿಲ್ಲ ಆದರೆ ತಲೆ ಸುತ್ತುತ್ತಿತ್ತು.. ಹಾಗೆ ಕುಳಿತೆ 

"ನೋಡಿ ಇಲ್ಲಿ ನೋಡಿ ಇಲ್ಲಿ... "

"ಕಣ್ಣನ್ನು ನಿಧಾನವಾಗಿ ಬಿಟ್ಟು ನೋಡಿದೆ"

ಅರೆ ಅರೆ... ಸೂಪರ್ ಸೂಪರ್... ಮನಸ್ಸು ಹಾರಾಡಿತು

ಹಾಗೆ ಮನಸ್ಸಲ್ಲೇ ಕೈಮುಗಿದೆ... ಮತ್ತೆ ಫೋನಿನ ಕಡೆ ಓಡಿದೆ 

"ಅಮ್ಮಾ.... "

"ಏನಾಯ್ತು "  

 "ಹೆಣ್ಣು ಮಗು... " ಆನಂದದಿಂದ ಕಿರುಚಿದ್ದೆ 

"ವಾಹ್ ಲಕ್ಷ್ಮಿ ಬಂದಳು ಕಣೋ... "

ಫೋನಿನಲ್ಲೇ ಅಮ್ಮಾ ಆನಂದ ಭಾಷ್ಪ.. "ಬೇಗ ಬಂದು ಬಿಡಮ್ಮ"

ಮತ್ತೆ ಮರಳಿ ಬಂದೆ 

"ಶ್ರೀ ಬೆಳಿಗ್ಗೆ ಇಂದ ಏನು ತಿಂದಿಲ್ಲ.. ಏನಾದರೂ ತಿಂದು ಬನ್ನಿ.. "

"ಇಲ್ಲಾ ಕಣೆ.. ನಾ ಅರಾಮಿದ್ದಿನಿ.. ತಲೆ ಕೆಡಿಸಿಕೊಳ್ಳಬೇಡ... ಸಿಹಿ ತಿಂದೆನಲ್ಲ ನನಗೆ ಸಾಕು"

ಒಂದು ಸುಂದರ ಚಲನ ಚಿತ್ರದ ಕಥೆಯಲ್ಲಿ ನಡೆದ ಹಾಗೆ.. ಎಲ್ಲವೂ ಸುಸೂತ್ರವಾಗಿ ನಡೆಯಿತು.. ಯಾರಿಗೂ ಆತಂಕವಿಲ್ಲ.. ಯಾರಿಗೂ ನೋವಿಲ್ಲ.. 

ಈ ಮಗುವಿಗೆ ಒಂದು ಸುಂದರ ಹೆಸರು ಬೇಕು... ಯಾರಿಗೂ ಹಿಂಸೆ ಕೊಡದೆ ಭುವಿಗೆ ಬಂದ ಈ ಕೂಸಿಗೆ ಅಷ್ಟೇ ಸುಕೋಮಲ ಹೆಸರು ಬೇಕು ಎನ್ನುವ ಹಂಬಲವಿತ್ತು ... 

ಮೊದಲಿಂದಲೂ ಒಂಥರಾ ಕ್ರಾಕ್ ತರಹನೆ ಯೋಚನೆ ಮಾಡುತ್ತಿದ್ದ ನನಗೆ ಹೊಳೆದದ್ದು ನಾ ಬಹುವಾಗಿ ಮೆಚ್ಚಿದ್ದ ರೇಡಿಯೋ ಸಿಟಿ ೯೧ (ಆವಾಗ ಬರಿ ೯೧) ಬೆಳಿಗ್ಗೆ ಹನ್ನೊಂದು ಘಂಟೆಯಿಂದ ಒಂದು ಘಂಟೆಯವರಗೆ ಕಾರ್ಯಕ್ರಮ ನಿರೂಪಕಿಯಾಗಿದ್ದ "ಶೀತಲ್ ಅಯ್ಯರ್".. ಅವರ ಧ್ವನಿಗೆ ಮರುಳಾಗಿದ್ದೆ.. ಅವರ ಧ್ವನಿಯನ್ನು ರೆಕಾರ್ಡ್ ಮಾಡಿಕೊಳ್ಳಬೇಕು ಸದಾ ಕೇಳಿಕೊಳ್ಳಬೇಕು ಅನ್ನುವಷ್ಟು ಹುಚ್ಚು... .. ಸರಿ ಹೆಸರು ಸಿಕ್ಕೆ ಬಿಟ್ಟಿತು... 




ಕೋಗಿಲೆ ಕಂಠ .... ಶೀತಲ್ ಅಯ್ಯರ್!!!

"ನಿಮಗೆ ಏನು ಇಷ್ಟವೋ ನನಗೂ ಅದೇ ಇಷ್ಟಾ ಶ್ರೀ.. " ಮನದನ್ನೆ ಉವಾಚ.. ಸರಿ ಸ್ವರ್ಗಕ್ಕೆ ಒಂದು ಎರಡು ಮೂರೇ ಗೇಣು!!!

"ಶೀತಲ್ ಶೀತಲ್ ಶೀತಲ್" ಹೆಸರು ಖಾಯಂ ಆಯಿತು.. 

ಕೆಲದಿನಗಳ ನಂತರ.. ಹೀಗೆ ಏನೋ ಯೋಚನೆ ಮಾಡುತ್ತಾ ಕುಳಿತಿದ್ದಾಗ.. 

ಹಾಗೆ ಕ್ಯಾಲೆಂಡರ್ ಕಡೆ ನೋಡಿದೆ.. 

ಬೆಚ್ಚಿ ಬಿದ್ದೆ 

೨೧ನೆ ಜನವರಿ ೨೦೦೩.. ಮಂಗಳವಾರ.. ಎದೆ ಬಡಿತ ಹೆಚ್ಚಿತು.. 

ಆಸ್ಪತ್ರೆ ಹೆಸರು "ವಿನಾಯಕ ಹಾಸ್ಪಿಟಲ್" ಎದೆ ತಾಳ ತಪ್ಪುತ್ತಿತ್ತು 

"ಸಂಕಷ್ಟ ಚತುರ್ಥಿ" ತಲೆ ಸುತ್ತ ತೊಡಗಿತು

ನನಗೆ ಇಷ್ಟವಾದ ದಿನ, ಇಷ್ಟವಾದ ದೇವರ ವ್ರತ ಆಚರಿಸುವ ದಿನ.. ನಾನು ಅಂದು ಉಪವಾಸವಿದ್ದೆ.. ಮಡದಿಗೆ ತಿನ್ನೋಕೆ ಸೇರದೆ ಅವಳು ಉಪವಾಸ.. 

ಒಂದು ರೀತಿಯಲ್ಲಿ ವ್ರತ ಮಾಡಿ ಪಡೆದ ಮಗು ಎನ್ನುವಂತೆ ಭುವಿಗೆ ಜಾರಿದ ಶೀತಲ್.. ಹೆಸರಿನ ಹಾಗೆಯೇ ಶಾಂತ ಸ್ವಭಾವ.. 

ಶಾಲೆಯಲ್ಲಿ "ನಿಮ್ಮ ಬೆಸ್ಟ್ ಫ್ರೆಂಡ್ ಹೆಸರು ಹೇಳಿ" ಎಂದು ಎಲ್ಲರನ್ನು ಕೇಳಿದಾಗ.. ಇವಳ ಸರದಿ ಬಂದಾಗ ಹೇಳಿದ್ದು 

"ಶ್ರೀಕಾಂತ್ ಕೆ ಎಂ"

"ಶೀತಲ್.. ಆ ಹೆಸರಿನವರು ಯಾರು ಇಲ್ಲವಲ್ಲ ನಿನ್ನ ಕ್ಲಾಸ್ ನಲ್ಲಿ"

"ಅವರು ನನ್ನ ಅಪ್ಪ" ಎಂದು ಹೆಮ್ಮೆಯಿಂದ ಹೇಳಿದ ಸುಪುತ್ರಿ.. 

ಐದು ವರ್ಷಗಳ ಹಿಂದೆ ನನ್ನ ಹುಟ್ಟು ಹಬ್ಬಕ್ಕೆ.. ಶುಭಾಷಯ ಪತ್ರವನ್ನು ಬರೆದಾಗ.. ಹೃದಯ ಆನಂದದಿಂದ ಮುತ್ತಿನ ಮಳೆಯನ್ನೇ ಸುರಿಸಿತ್ತು... 

ದೇವರು ಕೊಟ್ಟ ಮಗು. ದೇವರು ಕೊಟ್ಟ ಸ್ನೇಹಿತೆ.. ಅಪ್ಪ ನೀವು ಗೆಲ್ಲುತ್ತೀರ.. ಗೆಲ್ಲಲೇ ಬೇಕು ಎಂದು ನನಗೆ ಸ್ಫೂರ್ತಿ ನೀಡುವ ಶೀತಲ್ ಗೆ ಇಂದು ಜನುಮದಿನ.. ಹುಟ್ಟಿದ ನಂತರ ಮೊದಲ ಬಾರಿಗೆ ಮಂಗಳವಾರವೇ ಬಂದಿದೆ... 


ನನ್ನ ಮುದ್ದು ಸ್ನೇಹಿತೆ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು!!!