"ಶ್ರೀಕಾಂತ ನೀನು ಕಾರು ತಗೊಂಡೆ, ಮನೆ ಕಟ್ಟುವ ಹಾಗೆ ಕೂಡ ಆಗಲಿ, ನೀನು ವಿಜಯ ಮುರುಳಿ ಎಲ್ಲರೂ ಚೆನ್ನಾಗಿರಿ.. ಆದರೆ ನೀವು ಏನೇ ಮಾಡಿದರೂ ನಮಗೆಲ್ಲ ಸಂತೋಷವೇ ಆದರೆ.... ಆ ಮಗು ಸಾಧಿಸುತ್ತಿದೆಯಲ್ಲ ಅದು ನಿಜವಾದ ಛಲ.. " ನಮ್ಮ ಪ್ರೀತಿಯ ನಗುಮೊಗದ ರಾಮಿ ಚಿಕ್ಕಪ್ಪ ಮತ್ತು ರಾಜು ಚಿಕ್ಕಮ್ಮ ಈ ಮಾತನ್ನು ಹೇಳಿದಾಗ ಕಣ್ಣಲ್ಲಿ ನೀರು ಧುಮುಕಲಿಕ್ಕೆ ಸಿದ್ಧವಾಗಿತ್ತು.. ತಡೆದುಕೊಂಡೆ...
"ನಿಜವಾಗಿಯೂ ಶ್ರೀಕಾಂತ..
ಕೃಷ್ಣವೇಣಿ ತನ್ನ ಜೀವನದಲ್ಲಿ ಏನೇನೋ ನಡೆದರೂ ಅದನ್ನು ಛಲದಿಂದ ಸ್ವೀಕರಿಸಿ ಹೆಜ್ಜೆ ಇಡುತ್ತಿರುವ ರೀತಿ ನಿಜಕ್ಕೂ ಹೆಮ್ಮೆ ತರುತ್ತದೆ.. ಆಲ್ವಾ ಮಗು" ಎಂದರು ರಾಮಿ ಚಿಕ್ಕಪ್ಪ!
ನಾನು ಏನು ಹೇಳುವ ಸ್ಥಿತಿಯಲ್ಲಿರಲಿಲ್ಲ.. ನಾನು ಹೇಳಿದ್ದು ಒಂದೇ ಮಾತು "ಚಿಕ್ಕಪ್ಪ.. ಜೀವನಲ್ಲಿ ಏನಾದರೂ ಸಾಧಿಸಬೇಕಾದರೆ ಸ್ಪೂರ್ತಿ ಬೇಕು ಎಂದು ನಾ ಎಲ್ಲೂ ಹುಡುಕುವುದೇ ಇಲ್ಲ.. ನನ್ನ ಅಕ್ಕನ ಛಲದ ಜೀವನವೇ ಸಾಕ್ಷಿ..." ಅಷ್ಟು ಹೇಳಿದೆ.. ನನಗೆ ತಡೆಯಲಾಗಲಿಲ್ಲ.. ಕಣ್ಣಲ್ಲಿ ಜಿನುಗುತ್ತಿದ್ದ ಜೋಗದ ಜಲಪಾತವನ್ನು ಹಾಗೆ ತಡೆದಿರಿಸಿಕೊಂಡೆ.. ಕಾರಣ ನಾ ಅಳುವುದಿಲ್ಲ ಎಂದು ಅಣ್ಣನಿಗೆ (ಅಪ್ಪ) ಪ್ರಮಾಣ ಮಾಡಿದ್ದೆ :-)
ಹೌದು ಇವತ್ತು ನನ್ನ ಅಕ್ಕನ ಜೀವನದಲ್ಲಿ ಒಂದು ಸುಂದರ ದಿನ. ಕ್ರಮಬದ್ಧವಾಗಿ ಶಿಸ್ತಿನ ಹಾಗೂ ಛಲದ ನೊಗವನ್ನು ಹೆಗಲಿಗೇರಿಸಿ ಜೀವನದಲ್ಲಿ ಕಾಣುವ ಏಳಿಗೆಗಳನ್ನು ಮೆಟ್ಟಿಲಾಗಿಯೂ.. ಬೀಳುಗಳನ್ನು ಆಲದ ಮರದ ಬಿಳಲುಗಳ ಹಾಗೇ ಅದನ್ನೇ ಹಿಡಿದುಕೊಂಡು ಮೇಲೆ ಏರುತ್ತಿರುವ ಹಾಗೆ ಪ್ರತಿ ಹಂತದಲ್ಲೂ ಕ್ರಮಬದ್ಧವಾಗಿ ಏರು ಹಾದಿಯಲ್ಲಿ ನಡೆಯುತ್ತಿರುವ ಅಕ್ಕ ಇಂದು ಒಂದು ಕಾರಿನ ಒಡತಿಯಾದಳು. ಅವಳ ಸಾಧನೆಗೆ ಕ್ಯಾಲೆಂಡರ್ ಕೂಡ ಶರಣಾಗಿ ಕ್ರಮಬದ್ಧವಾಗಿ ನಿಂತವು.. ೧೧/೧೨/೧೩.... ಇದಕ್ಕಿಂತ ಇನ್ನೇನೂ ಬೇಕು.. ಅಲ್ಲವೇ
 |
ಸರದಿಯಲ್ಲಿರುವ ಹೆಸರು - ಐದನೇ ಹೆಸರು!!! |
ಮನಸ್ಸು ಹಾಗೆ ಮೂವತ್ತು ವಸಂತಗಳ ಹಿಂದೆ ಓಡಿತು.. ನಾವು ತ್ಯಾಗರಾಜನಗರದಲ್ಲಿ ಇದ್ದಾಗ.. ಅಪ್ಪ ಪ್ರತಿ ವರುಷವೂ ಸಜ್ಜನರಾವ್ ವೃತ್ತದ ಬಳಿ ಇರುವ ಸತ್ಯನಾರಾಯಣ ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತಿದ್ದರು. ಸುಮಾರು ಮೂರು ಅಥವಾ ನಾಲ್ಕು ವರ್ಷ ಅಲ್ಲಿಯೇ ಪೂಜೆ ಮಾಡಿಸಿದ್ದ ನೆನಪು. ಅಮೃತ ಶಿಲೆಯಲ್ಲಿ ರಚಿಸಿರುವ ಸತ್ಯನಾರಾಯಣನ ಮೂರ್ತಿ ಸುಂದರವಾಗಿದೆ. ಆ ದೇವಸ್ಥಾನದ ಮುಂದೆ ಹೋದಾಗಲೆಲ್ಲ ಅದೇ ನೆನಪುಗಳು ಕಾಡುತ್ತಿದ್ದವು.
 |
ಸಜ್ಜನ್ ರಾವ್ ವೃತ್ತದ ಶ್ರೀ ಸತ್ಯನಾರಾಯನ ಸ್ವಾಮೀ ದೇವಾಲಯ |
 |
ಚಿತ್ರ ಕೃಪೆ - ಅಂತರ್ಜಾಲ |
ಭೌತಿಕವಾಗಿ ನಮ್ಮ ಅಪ್ಪ ಜೊತೆಯಲ್ಲಿಲ್ಲದಿದ್ದರೂ.... ಅಕ್ಕನ ಕಾರನ್ನು ಡ್ರೈವ್ ಮಾಡಿಕೊಂಡು ಆ ದೇವಸ್ಥಾನದ ಮುಂದೆ ಬಂದು ನಿಂತಾಗ ಹಾಗೆ ಮನಸ್ಸು ಹಳೆಯ ನೆನಪುಗಳನ್ನು ಮೆಲುಕು ಹಾಕಿತು.. ಅಪ್ಪ ಅಲ್ಲಿಯೇ ನಿಂತು ಮಗಳ ಏಳಿಗೆಯನ್ನು ಕಂಡು ಸಂತಸಗೊಂಡಂತೆ ಭಾಸವಾಯಿತು!
"ಅಮ್ಮ.. ಚೆನ್ನಾಗಿದ್ದೀಯ.. ಇರು ಅಕ್ಕ ನಿನಗೆ ಒಂದು ಸಂತೋಷದ ಸುದ್ಧಿ ಹೇಳುತ್ತಾಳೆ" ಎಂದು ಹೇಳಿ ಅಕ್ಕನಿಗೆ ಫೋನ್ ಕೊಟ್ಟೆ. ಎರಡು ನಿಮಿಷ ಅಮ್ಮ ಮಗಳು ಸಂಭಾಷಣೆ.. ಅಕ್ಕನ ಕಣ್ಣಲ್ಲಿ ಸಾಧನೆಯ ಮಜಲನ್ನು ಏರಿದ ಸಂತಸವಿತ್ತು ಜೊತೆಯಲ್ಲಿ ಅಮ್ಮನ ಹೃದಯ ಸಂತಸದಿಂದ ಬೀಗುತ್ತಿದ್ದ ಧ್ವನಿ ನನಗೆ ಕೇಳಿಸುತಿತ್ತು. ಅಮ್ಮ ತನ್ನನ್ನು ಎತ್ತಿ ಮುದ್ದಾಡಿ ಊರಿನ ಮಗಳಂತೆ ಬೆಳೆಸಿದ ಕಿತ್ತಾನೆ ಗ್ರಾಮಕ್ಕೆ ಹೋಗಿದ್ದ ಕಾರಣ ಧ್ವನಿಯಲ್ಲಿ ಮಾತ್ರ ಅವರ ಸಂತಸದ ಸಿಂಚನವಾಯಿತು.
 |
ಸುವರ್ಣ ಹಸ್ತಾಕ್ಷರದ ಸಮಯ!!! |
"ಛಲದೋಳ್ ಸುಯೊಧನನ್" ಎಂದ ಆದಿ ಕವಿ ಪಂಪ ಹೇಳಿದರೆ..ನನಗೆ ಸಾದೃಶ್ಯ ವಾಗಿ ಕಂಡ ಅಕ್ಕನ ಬದುಕು ನಿಜಕ್ಕೂ
"ಛಲದೋಳ್ ನನ್ನ ಅಕ್ಕ" ಎಂದು ಹೇಳುವಂತೆ ಪ್ರೇರೇಪಿಸಿತು. ನಾನು ಇಂದು ಈ ಮಟ್ಟಿಗೆ ನಿಂತಿದ್ದೇನೆ ಅಂದರೆ ಅಪ್ಪ ಅಮ್ಮನ ರಕ್ಷಾ ಕವಚದ ಜೊತೆಯಲ್ಲಿ ಅಕ್ಕನ ತ್ಯಾಗ ಮತ್ತು ಅವಳ ಮಮಕಾರದ ಪಾಲು ಬಹು ದೊಡ್ಡದು.
 |
ಹೊಸ ಚೈತನ್ಯ ರಥಕ್ಕೆ ಸಾರಥಿಯಿಂದ ಒಲವಿನ ಪೂಜೆ! |
ಅಪ್ಪ ಅಮ್ಮನ ಅನುಪಸ್ಥಿತಿಯಲ್ಲಿ ಅಪ್ಪ ಅಮ್ಮನ ಸ್ಥಾನದಲ್ಲಿ ನಿಂತು ಈ ಸಂತಸವನ್ನು ದುಪ್ಪಟ್ಟು ಮಾಡಿದ ಅಣ್ಣ ಮತ್ತು ಅತ್ತಿಗೆಗೆ ಎಷ್ಟು ಕೃತಜ್ಞತೆಗಳನ್ನು ಹೇಳಿದರೂ ಸಾಲದು. ಒಂದು ಕುಟುಂಬ ಒಟ್ಟಿಗೆ ನಿಲ್ಲಬೇಕಾದರೆ ಮನಸ್ಸು ಮನಸ್ಸು ಸೂಜಿ ಹಾಗೂ ದಾರದಂತೆ ಇರಬೇಕು ಎನ್ನುವ ತತ್ವ ನಮ್ಮ ಅಪ್ಪ ಅಮ್ಮ ಹೇಳಿಕೊಡದೇ ಅವರೇ ಜೀವನದಲ್ಲಿ ಅಳವಡಿಸಿಕೊಂಡದ್ದು ನಮ್ಮ ಕುಟುಂಬದ ಯಶಸ್ಸಿಗೆ ಕಾರಣವಿರಬಹುದು ಎನ್ನುವ ಅಭಿಪ್ರಾಯ ನನ್ನದು.
 |
ಒಲವಿನ ಪೂಜೆಗೆ ಒಲವೆ ಮಂಧಾರ.. ಒಲವೆ ಬದುಕಿಗೆ ಬಂಗಾರ!!! |
ಅಣ್ಣ ಇತ್ತೀಚಿಗೆ ತಾನೇ ಸ್ವಿಫ್ಟ್ ಕಾರ್ ಕೊಂಡಿದ್ದ.. ಅದರ ಪಕ್ಕದಲ್ಲಿಯೇ ಅಕ್ಕನ ಕಾರು.. ಇದಕ್ಕಿಂತ ಸಂತಸ ಇನ್ನೇನು ಬೇಕು.. ಇಬ್ಬರೂ ಜೀವನದ ಆರಂಭದಲ್ಲಿ ನೋವು ತಿಂದಿದ್ದರೂ ಛಲ ಬಿಡದ ತ್ರಿವಿಕ್ರಮನಂತೆ ಹೋರಾಡಿ ಯಶಸ್ಸಿನ ಮೆಟ್ಟಿಲನ್ನು ಏರುತ್ತಾ ಸಾಗಿದ್ದಾರೆ. ಇವರ ಜೀವನವೇ ನನಗೆ ಆದರ್ಶ..
 |
ಅಕ್ಕ ಹಾಗೂ ಅಣ್ಣನ ಚೈತನ್ಯ ರಥಗಳು.. ! |
 |
ಅಕ್ಕನ ಮಗ .... ಆದಿತ್ಯ ಮುಂದಿನ ವಾರಸುದಾರ!!! |
ಈ ಸುಂದರ ಸಡಗರದ ಕೆಲವು ಮಧುರ ಕ್ಷಣಗಳು ದಾಖಲು ಮಾಡಬೇಕೆನ್ನುವ ನನ್ನ ಆಸೆಗೆ ಜೊತೆಯಾಗಿ ನಿಂತದ್ದು ನನ್ನ ಮೂರನೇ ಕಣ್ಣು ಅದಕ್ಕೆ ನನ್ನ ಮನಸಾರೆ ಪ್ರಣಾಮಗಳು!!!
 |
ಸುಮಧುರ ಕ್ಷಣಗಳಿಗೆ ಸುಂದರ ಚೌಕಟ್ಟು !!! |
ಜೀವನದಲ್ಲಿ ಬರುವ ತಿಮಿಂಗಿಲಗಳ ಒಡನಾಟವನ್ನು ಖುಷಿಯಿಂದ ಬರಮಾಡಿಕೊಳ್ಳಿ ಮತ್ತು ಆನಂದದಿಂದ ಅನುಭವಿಸಿ ಈ ಸಿದ್ಧಾಂತವನ್ನು ಮತ್ತೊಮ್ಮೆ ಸಾಧರಪಡಿಸುವ ಅವಕಾಶ ನನ್ನದಾಯಿತು!!!
 |
ಲೇಖನ ಓದಿ ಶುಭ ಹಾರೈಸಿದ್ದಕ್ಕೆ ನಿಮಗೆ ಸಿಹಿಯ ಲೇಪನ!!! |
enjoy the sharks in your life!!!