ನನ್ನ ಮೆಚ್ಚಿನ ಚಿತ್ರಗಳಲ್ಲಿ ಅಮಿತಾಭ್ ಬಚ್ಚನ್ ಅವರ ಲಾವಾರಿಸ್ ಚಿತ್ರ ಕೂಡ ಒಂದು. ಅ ಚಿತ್ರದಲ್ಲಿ ಬಚ್ಚನ್
ಜೀನತ್ ಅಮನ್ ಗೆ ಹೇಳುವ ಸಂಭಾಷಣೆ
"ಬಡತನದ ಬಗ್ಗೆ ನಿಮಗೆ ಏನು ಗೊತ್ತು?...ಬಾಲ್ಯದಲ್ಲಿ ತಿನ್ನಲು ರೊಟ್ಟಿಯ ಬದಲು ಮೂದಲಿಕೆ, ತೆಗಳಿಕೆ, ಬಡತನವನ್ನು ಲೇವಡಿ ಮಾಡುವವರು ಸಿಕ್ಕಾಗ...ಮೇಲೇರಲು ಪ್ರಯತ್ನ ಪಟ್ಟಾಗೆಲ್ಲ ಸಮಾಜ ಅವರನ್ನು ಕಡೆಗಣಿಸಿ ನೋಡುವಾಗ ಆಗುವುದೇ ಲಾವಾರಿಸ್"
ಯಾಕೋ ಏನೋ ಈ ಸಂಭಾಷಣೆ ಈ ದಿನ ತುಂಬಾ ಕಾಡಿತ್ತು.
ಸಹನೆಗೆ ಹೆಸರಾಗಿದ್ದ ಅಪ್ಪ.. ಛಲಕ್ಕೆ ಎರಡನೇ ಹೆಸರಾಗಿದ್ದ ಅಮ್ಮ... ಇಬ್ಬರೂ ಬಡತನದ ಬೇಗೆಯಲ್ಲಿ ನರಳುತ್ತಿದ್ದಾಗ ಮೂಡಿದ ಎರಡು ಕುಸುಮಗಳು ನನ್ನ ಅಕ್ಕ ಹಾಗೂ ಅಣ್ಣ. ಬಡತನದ ಬೇಗೆಯಲ್ಲಿ ಅಪ್ಪ ಅಮ್ಮನ ಜೊತೆಯಲ್ಲಿ ನರಳಿ ಅವಮಾನದ ತಟ್ಟೆಯಲ್ಲಿ ನಿತ್ಯ ಊಟ ಮಾಡುತ್ತಾ, ತಾತ್ಸಾರದ ಲೋಟದಲ್ಲಿ ನೀರು ಕುಡಿಯುತ್ತಾ ಶಿವಮೊಗ್ಗದ ಕೋಟೆ ಆಂಜನೇಯನ ಕೃಪಾಶಿರ್ವಾದದಲ್ಲಿ ಬೆಂಗಳೂರಿಗೆ ಬಂದ ಮೇಲೆ... ಅಪ್ಪ ಹಾಕಿದ ಆಲದ ಮರದ ನೆರಳಲ್ಲಿ ಲತೆಯಾಗಿ ಹಬ್ಬುತ್ತ ಮರವನ್ನು ತಬ್ಬಿ ಹಿಡಿದು ತಮ್ಮ ಕಾಲ ಮೇಲೆ ತಾವು ನಿಂತು ಉತ್ಸಾಹ ತುಂಬಿದ ನನ್ನ ಅಕ್ಕ ಹಾಗೂ ಅಣ್ಣನ ಬಾಳಿನಲ್ಲಿ ಕಳೆದ ಹದಿನೈದು ದಿನಗಳು ಉಲ್ಲಾಸದ ಹೂ ಮಳೆಯನ್ನೇ ಸುರಿಸಿದ ಘಳಿಗೆಗಳು.
ತನ್ನ ಜೀವನ ಅಂಕು ಡೊಂಕಿನ ಹಾದಿಯಲ್ಲಿ ಸಾಗಿದರೂ... ಛಲದಲ್ಲಿ ಅಮ್ಮನಂತೆ ತನ್ನ ಕಾಲ ಮೇಲೆ ನಿಂತು ಇತರರಿಗೆ ಮಾರ್ಗದರ್ಶಿಯಾಗಿ ನಿಂತ ಅಕ್ಕ.. ಬೆಂಗಳೂರಿನಲ್ಲಿ ಅಂಗೈ ಅಗಲ ಜಾಗಕ್ಕೂ ಪರದಾಡಬೇಕಾದ ಸ್ಥಿತಿಯಲ್ಲಿ ಕಷ್ಟ ಪಟ್ಟು ಗಳಿಸಿ ಉಳಿಸಿದ ಹಣದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಖರೀದಿ ಮಾಡಿದ್ದ ಒಂದು ನಿವೇಶನದಲ್ಲಿ ಕಳೆದ ಮೇ ಹದಿಮೂರನೇ ದಿನ ಸಾಂಪ್ರದಾಯಿಕವಾಗಿ ಗುದ್ದಲಿ ಪೂಜೆ ಮಾಡಿದಾಗ ಅಮ್ಮನ ಕಣ್ಣಲ್ಲಿ ಆನಂದ ಭಾಷ್ಪಗಳು ಮೂಡಿದವು. ನಮ್ಮ ಅಪ್ಪನ ಕನಸನ್ನು ನನಸು ಮಾಡುವ ಮೊದಲ ಹೆಜ್ಜೆ ಈ ಗುದ್ದಲಿ ಪೂಜೆಯಾಗಿತ್ತು. ದೈಹಿಕವಾಗಿ ಅಪ್ಪ ಇಲ್ಲದೆಯೂ ನಮ್ಮ ಮನದಲ್ಲಿ ಕೂತು ತಲೆಯ ಮೇಲೆ ಅಭಯ ಆಶೀರ್ವಾದದ ಹಸ್ತ ಸದಾ ನೀಡುತ್ತ ಹರಸಿದ ಆ ಕ್ಷಣ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣಗಳು. ಇಡೀ ಕುಟುಂಬ ಅಂದು ಅಲ್ಲಿ ನೆರೆದಿತ್ತು. ಸಂತಸ ಭರಿತ ಕ್ಷಣಗಳ ಚಿತ್ರಗಳು ನಿಮಗಾಗಿ.
 |
ಹಸುವಿನ ಮನಸ್ಸಿನ ಅಪ್ಪ ಹಸುವಾಗಿ ಆಶೀರ್ವದಿಸಲು ಬಂದ ಕ್ಷಣ... ಪೂಜೆಯ ಆರಂಭಕ್ಕೆ ಬಂದು ಪೂಜೆ ಮುಗಿಯುವವರೆಗೂ ಇದ್ದದ್ದು ವಿಶೇಷ ! |
 |
ಹಿರಿಯರು ಮನೆ ಕಟ್ಟಲು ಹೊರಟರೇ ಪುಟಾಣಿಗಳು ಆಸರೆಗೆ ಗಿಡ ನೆಡುತ್ತಿರುವ ಕ್ಷಣ |
 |
ಅಡಿಪಾಯದ ಕಲ್ಲಿಗೆ ಪೂಜಿಸುತ್ತಿರುವ ನಮ್ಮ ಮನೆಯ ಶಕ್ತಿ ಅಕ್ಕ |
 |
ಮನೆಗೆ ಆಧಾರ ಹಿರಿಯಣ್ಣ |
 |
ಗುದ್ದಲಿ ಪೂಜೆ ಯಶಸ್ಸಿನ ಮೊದಲ ಮೆಟ್ಟಿಲು |
 |
ಭೂರಮೆಗೆ ಹಾಲು ಹಾಕಿ ಸಂತೈಸುತ್ತಿರುವ ಕ್ಷಣ |
 |
ಸುಂದರ ಕ್ಷಣಗಳಲ್ಲಿ ಜೊತೆ ನಿಂತ ಮನೆ ಮಂದಿ |
ಅಪ್ಪ ತಮ್ಮ ಜೀವನದಲ್ಲಿ ಕೂಡಿಸಿದ್ದು ಸ್ನೇಹ, ಪ್ರೀತಿ, ವಿಶ್ವಾಸ ಎಂಬ ಗಂಟನ್ನು.... ಕಳೆದದ್ದು... ತಮಗಿಷ್ಟವಾಗದ ತಮ್ಮ ಸಿದ್ಧಾಂತಕ್ಕೆ ವಿರುದ್ಧವಾದ ಕೆಲವು ಬೇಡದ ಕ್ಷಣಗಳನ್ನು... ಅಪ್ಪ ಹಾಕಿದ ಆಲದ ಮರದಲ್ಲೇ ಜೋತಾಡುತ್ತಾ ಕೂಡಿ-ಕಳೆಯುವ ಅಕೌಂಟ್ ವೃತ್ತಿಯನ್ನೇ ಸ್ವೀಕರಿಸಿ ಇಂದು ಆ ವೃತ್ತಿಯಲ್ಲಿ ಅಪಾರ ಹೆಸರು, ಕೀರ್ತಿಯನ್ನು ಗಳಿಸಿರುವ ಅಣ್ಣ ಇಂದು ತನ್ನ ಜೀವನದ ಒಂದು ಕನಸಾದ ವಾಹನವನ್ನು ಮನೆಯ ಮುಂದೆ ನಿಲ್ಲಿಸಿದಾಗ.. ಅಮ್ಮ ಒಂದು ಬಾರಿ ತಮ್ಮ ಯಜಮಾನರ ಭಾವ ಚಿತ್ರವನ್ನು ದಿಟ್ಟಿಸಿ ನೋಡಿದರು. ವಿಶಾಲು ನಾವು ಗೆದ್ದೆವು ಕಣೆ "ನಮ್ಮ ಮಕ್ಕಳು ಸೂಪರ್ ನನ್ಮಕ್ಕಳು" ಎನ್ನುವ ಭಾವ ಚಿತ್ರದಲ್ಲಿತ್ತು.
 |
ಕಷ್ಟದ ದಿನಗಳಿಂದ ಸಾಧನೆಯ ಹಾದಿಯ ಸಂತಸದಲ್ಲಿ ಅಣ್ಣ |
ಇದಕ್ಕಿಂತ ಬೇರೆ ಏನು ಬೇಕು. ಅವಿರತ ೫೧ ತುಂಬು ವೈವಾಹಿಕ ಜೀವನ ನಡೆಸಿದ ದಂಪತಿಗಳಿಗೆ ಇಂದು (ಮೇ ತಿಂಗಳ ೨೩ನೇ ದಿನ) ಅವರ ೫೩ನೆ ವಾರ್ಷಿಕ ಮಹೋತ್ಸವ. ಮಕ್ಕಳ ಏಳಿಗೆಗಿಂತ ಉತ್ತಮ ಉಡುಗೊರೆ ಬೇರೆ ಬೇಕೇ ಎಂದುಕೊಂಡ ಅಮ್ಮನಿಗೆ ಆದ ಖುಷಿಗೆ ಎಣೆಯೇ ಇಲ್ಲ!!!
 |
ಅನುಗ್ರಹ ಸದನದ ಮುಂದೆ ಅನುಗ್ರಹಿತ ವಾಹನ |
 |
ಬೆಳ್ಳಂ ಬೆಳಕಿನಲ್ಲಿ! |
 |
ಸಾಧನೆಯ ಹುಮ್ಮಸ್ಸಿನ ಹೆಮ್ಮೆಯಲ್ಲಿ ಅಣ್ಣ ಅತ್ತಿಗೆ |
 |
ಅನುಗ್ರಹಿತ ಪರಿವಾರದೊಂದಿಗೆ ಹೊಸ ಸದಸ್ಯನ ಆಗಮನ |
ನನ್ನ ತಮ್ಮನ ಕೈಯಲ್ಲಿ ಸುಂದರವಾದ ಆಧುನಿಕ ತಂತ್ರಜ್ಞಾನದ ಹೊಸ ಮೊಬೈಲು ಬಂದಿದ್ದು ಇದಕ್ಕೆಲ್ಲ ಕಳಶ ಇಟ್ಟಂತೆ ಆಯಿತು!
ಹೊಸ ಹೊಸ ದಿಕ್ಕಿನಲ್ಲಿ ಯಶಸ್ಸಿನ ಹಾದಿಯಲ್ಲಿ ಬೆಳೆಯುತ್ತಿರುವ ಕುಟುಂಬದ ರೆಂಬೆ ಕೊಂಬೆಗಳನ್ನು ನೋಡಿದ ಅಪ್ಪನ ಮನಸ್ಸು... ತನ್ನ ಕುಟುಂಬದ ಯಶಸ್ಸಿನ ದಿಕ್ಕಿಗೆ ಕಾರಣರಾದ ಎಲ್ಲರಿಗೂ ಹೇಳಿದ್ದು ಒಂದೇ ಮಾತು "ಸಕಲ ಕಾರ್ಯ ಕಾರಣಗೆ ವಂದನೆ ಅಭಿವಂದನೆ... ನನ್ನ ಅನುಗ್ರಹದ ಸದನ ಸದಸ್ಯರಿಗೆ ಶುಭಾನುಗ್ರಹ ಹೀಗೆ ಸದಾ ಇರಲಿ"