Thursday, February 26, 2026

ಅಪರಿಮಿತವಾದ ಮಂದ"ಸ್ಮಿತ"ದ ಉತ್ಸಾಹ

ವಿಷಯ ಗೊತ್ತಾಯಿತು ...ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಂಡು ಮನೆ ಬಿಡುವಾಗ ನಾ ನಂಬಿದ ಇಷ್ಟದೈವಗಳಿಗೆ ನಮಸ್ಕಾರ ಸಲ್ಲಿಸಿ.. ಇವಳು ಅನುಸರಿಸುತ್ತಿರುವ ಅಜ್ಜನ ಚಿತ್ರಕ್ಕೆ ನಮಿಸಿ 

"ಅಜ್ಜ ನಮಗೆಲ್ಲ ನಿನ್ನ ಲೋಕವನ್ನು ಅವರ ಕುಟುಂಬಕ್ಕೆ ಪರಿಚಯಿಸಿದ ಆ ಶಕ್ತಿ ಇಂದು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದೆ.. ನಿನ್ನ ಶಕ್ತಿಯ ಬಗ್ಗೆ ಅಪಾರ ನಂಬಿಕೆ ಇರುವ ಅವರ ಕುಟುಂಬ ಹಗಲಿರುಳು ತಮ್ಮ ಪರಿಶ್ರಮದ ಜೊತೆ, ವೈದ್ಯಕೀಯ ನೆರವಿನ ಜೊತೆಗೆ .. ನಿನ್ನ ಧ್ಯಾನದಲ್ಲಿ ಯೋಗ ಮಾಡುತ್ತಿದ್ದಾರೆ. ಆ ನಿನ್ನ  ಮಗಳ ಆರೋಗ್ಯ ಸುಧಾರಿಸುವುದು ನಿನ್ನ ಕೈಯಲ್ಲಿ ಇದೆ.. ನಿನಗೆ ಇಂದು ಬಹಳ ಖುಷಿಯಾಗ್ತಿದೆ ಅನ್ನಿಸುತ್ತಿದೆ ಅಲ್ವೇ..  ಅವರ ಬದುಕಿನ ಪ್ರತಿಕ್ಷಣದಲ್ಲೂ ನಿನ್ನ ಹೆಸರನ್ನೇ, ನಿನ್ನ ಧ್ಯಾನದಲ್ಲಿಯೇ ಕಳೆದ ಅವರ ಬದುಕಿನ ಅಂತಿಮ ಘಟ್ಟದಲ್ಲಿ ನಿನ್ನ ಆ ಶಕ್ತಿಯ ಒಂದು ಕಿರಣಕ್ಕೆ ಕಾಯುತ್ತಿದೆ.. ನಿನ್ನ ಶಕ್ತಿಯಲ್ಲಿ ಅಪಾರ ನಂಬಿಕೆ ಇರುವ ಅವರ ಕುಟುಂಬ ನೀನು ಆಕೆಯನ್ನು ಉಳಿಸಬೇಕು.. ಇಲ್ಲವೇ ನೋವಿನಿಂದ ಮುಕ್ತರನ್ನಾಗಿಸಿ ನಿನ್ನ ಲೋಕಕ್ಕೆ ಕರೆದೊಯ್ಯಬೇಕು.. "

ಅಮಿತಾಭ್ ದೀವಾರ್ ಸಿನಿಮಾದಲ್ಲಿ ಶಂಕರನ ಮುಂದೆ ನಿಂತು ಹೇಳಿದಂತೆ ನಾನೂ ಹೇಳಿಬಿಟ್ಟೆ.. 

ಅಜ್ಜನ ಫೋಟೋ ನೋಡುತ್ತಿದ್ದೆ.. ಅಜ್ಜ ನಸು ನಕ್ಕ ಹಾಗೆ ಭಾಸವಾಯಿತು.. 

"ಯಾಕೆ ಅಜ್ಜ ಈ ನಗು" ಅಂದೇ 

"ನೀ ಹೊರಟಿದ್ದೀಯ ಅಲ್ವೇ.. ಆಮೇಲೆ ನಿನಗೆ ಗೊತ್ತಾಗುತ್ತದೆ.. ಪ್ರಯಾಣಿಕ ಶುಭಕರವಾಗಿರಲಿ" ಇಷ್ಟು ಹೇಳಿ ಫೋಟೋದೊಳಗೆ ಅಜ್ಜ ಹೋಗಿ ಬಿಟ್ಟರು.. 

ಹತ್ತುಘಂಟೆಗಳ ಪಯಣ.. ಬಳಲಿಕೆ ಇದ್ದರೂ ಛಲ ಆ ಬಳಲಿಕೆಯನ್ನು ಮೆಟ್ಟಿ ನಿಂತಿತ್ತು.. 

ವಿವಶವಾಯಿತು ಪ್ರಾಣ – ಹಾ!!
ವಿವಶವಾಯಿತು ಪ್ರಾಣ  ಹಾ
ಪರವಶವು ನಿನ್ನೀ ಚೇತನ
ವಿವಶವಾಯಿತು ಪ್ರಾಣ - ಹಾ!!
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ 

ಶ್ರೀ ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಳಿ ಕವನ ಕಾರಿನಲ್ಲಿ ಬರುತ್ತಿತ್ತು.. 

ಹೌದು ಜೀವನೋತ್ಸಾಹ ಎಂದರೆ ನಾ ಅನೇಕ ಕಡೆ ನೋಡಿದ್ದೇ, ಕೇಳಿದ್ದೆ, ಓದಿದ್ದೆ.. ಆದರೆ ಅದನ್ನೆಲ್ಲ ಮೆಟ್ಟಿ ನಿಂತವರು ನನ್ನ ಮಾತೃ ಸ್ವರೂಪಿ ಅತ್ತೆಯವರು.. ಹೆಣ್ಣು ಕೊಟ್ಟೆಯೋ ಕಣ್ಣು ಕೊಟ್ಟೆಯೋ ಅನ್ನುವ ಗಾದೆಯಂತೆ, ತಿರುವಿನಲ್ಲಿದ್ದ ಬದುಕಿಗೆ ದಾರಿದೀಪವಾದವಳನ್ನು ಹೆತ್ತ ಮಾತೆ.. 

ನಾವು ಬೆಳಗಾವಿಗೆ ಬರುತ್ತಿದ್ದೇವೆ ಎಂದರೆ ಅವರು ತರುಣಿಯಾಗಿಬಿಡುತ್ತಿದ್ದರು.. ಅವರಿಗೆ ನನ್ನ ಪ್ರವಾಸದ ಹುಚ್ಚು ತಿಳಿದಿತ್ತು.. ಎಲ್ಲರಿಗಿಂತ ಮೊದಲೇ ಸಿದ್ಧವಾಗಿಬಿಡುತ್ತಿದ್ದರು.. 

ಎಲ್ಲೇ ಹೋಗಲಿ, ಎಲ್ಲೇ ನಿಲ್ಲಲಿ, ಎಲ್ಲೇ ಊಟ ತಿಂಡಿಗೆ ನಿಲ್ಲಲಿ ಅವರು ಸದಾ ಮುಂದು.. ಕಾರಣ ಜೀವನವನ್ನು ತುಂಬು ಹೃದಯದಿಂದ ಅನುಭವಿಸುತ್ತಿದ್ದರು.. ಅಸಾಧ್ಯ ಮಾತು, ಅಸಾಧ್ಯವಾದ ಸುತ್ತಮುತ್ತಲ್ಲ ಮಂದಿಯ ಬಗ್ಗೆ ಅರಿವು.. ಒಂದು ಕ್ಷಣ ಪರಿಚಯವಾದರೆ ಮುಗಿಯಿತು.. ಇವರ ಪೂರ್ವಾಪರ ಅವರ ಪೂರ್ವಾಪರ ಎಲ್ಲವೂ ಹತ್ತು ನಿಮಿಷದ ಸಿನಿಮಾದಲ್ಲಿ ಮೂಡಿಬಂದಷ್ಟು ಕರಾರುವಾಕ್ ಆಗಿರುತ್ತಿತ್ತು.. 

ಸುಮ್ಮನೆ ಹಾಗೆ ಹೀಗೆ ಬಂದದ್ದು ನೋಡೇ ಇಲ್ಲ.. ಯಾವಾಗಲೂ ಶಿಸ್ತಾಗಿ ಅಲಂಕಾರ ಮಾಡಿಕೊಳ್ಳುತ್ತಿದ್ದರು.. "ಏನ್ ಆಯೀ ಹುಡುಗಿ ಆಗಿಬಿಟ್ಟಿದ್ದೀಯ" ಅಂತ ಇವಳು ರೇಗಿಸೋಳು.. 

ಆ ಕಡೆ ಈ ಕಡೆ ಕಬ್ಬಿಣದ ಗೋಡೆಗಳು.. ಕೆಳಗೆ ಕಬ್ಬಿಣದ ಹಾಸಿಗೆ.. ಅದರ ಮೇಲೊಂದಷ್ಟು ಸೌದೆಗಳು.. ಅದರ ಮೇಲೆ ತವರು ಮನೆಯ ಅಂತಿಮ ಉಡುಗೊರೆಯಾಗಿದ್ದ ಏಳೆಂಟು ಸೀರೆಗಳು, ಕಾಲುಂಗುರು, ಸಾಂಕೇತಿಕ ತಾಳಿ, ಹೂವು, ಕಾಲುಂಗುರು ಮುತ್ತೈದೆಯಾಗಿ ಪರಲೋಕಕ್ಕೆ ಕಳಿಸಿಕೊಡುವ ಸಿದ್ಧತೆ ಪೂರ್ಣಗೊಂಡಿತ್ತು.. 

ಅವರ ಒಳಗಿನ ಜೀವನೋತ್ಸಾಹದ ಅಗ್ನಿ.. ಹೊರಗಿನ ಅಗ್ನಿಗಿಂತ ಜೋರಾಗಿಯೇ ಇತ್ತು.. 
ಆದರೆ ಆ ಜೀವನೋತ್ಸಾಹದ ಅಗ್ನಿಗಿಂತ ಇನ್ನೂ ಹೆಚ್ಚಾಗಿದ್ದದ್ದು ಶರೀರದ ತಾಪಮಾನ.. ಅದು ನೂರರ ಗಡಿ ದಾಟಿ.. ನೂರಾ ಆರು ತನಕ ಬಂದಿತ್ತು.. 

ಆ ಶಾಖ ಅವರ ಜೀವನೋತ್ಸಾಹದ ಅಗ್ನಿಯನ್ನು ಕಡಿಮೆ ಮಾಡತೊಡಗಿತು.. ಅವರ ಶರೀರಕ್ಕೆ ಲಗತ್ತಿಸಿದ್ದ ಉಪಕರಣಗಳು ಏರು ಪೇರಿನ  ರೇಖೆಯನ್ನು ತೋರಿಸುತ್ತಿದ್ದವು.. ಅಲ್ಲಿ ಸುತ್ತಲಿದ್ದ ಮಂದಿಗೆ ಏನೋ ಒಂದು ಆಶಾಕಿರಣ.. ಮತ್ತೆ ಮೊದಲಿನ ಹಾಗೆ ಆಗುತ್ತಾರೆ ಅಂತ..

ಸೀಮಾ ನಾ ಮಲಗಿರುವ ಆಸ್ಪತ್ರೆಯ ಹಾಸಿಗೆ ಮೇಲಕ್ಕೆ ಏರುತ್ತಿದ್ದೆ ಕೆಳಕ್ಕೆ ಇಳಿಯುತ್ತಿದೆ.. ಜೋಕಾಲಿಯಲ್ಲಿ ತೂಗಾಡಿಸಿದ ಅನುಭವವಾಗುತ್ತಿದೆ.. ಅಂತ ಒಂದೆರಡು ದಿನಗಳ ಹಿಂದೆ ಸೀಮಾಳಿಗೆ ಹೇಳಿದ್ದರಂತೆ.. 

ಒಂದು ಕಡೆ ಬದುಕಬೇಕು ಎಂಬ ಆಶಯ.. ಇನ್ನೊಂದು ಕಡೆ ಕಾಲನ ಕರೆ.. ತಾವು ನಂಬಿದ ಅಜ್ಜ/ಬಾಬಾ/ ಶಿವಬಾಬಾ ತನ್ನನ್ನು ಪರಂಧಾಮಕ್ಕೆ ಕರೆದೊಯ್ಯಲು ಬಂದಿದ್ದಾನೆ ಅನ್ನುವ ಅನುಭವ.. 

ಇವೆಲ್ಲ ಒಂದರ ಮೇಲೆ ಒಂದು ಪೈಪೋಟಿ ನೆಡೆಸಿದಂತೆ ಕಂಡರೂ ಕಡೆಗೆ ಗೆದ್ದದ್ದು ಕಾಲನ ಕರೆ.. 

ಸುಮಾರು ಹತ್ತು ಘಂಟೆಗಳ ಪಯಣ ಮುಗಿಸಿ ಬಂದು ಮನೆ ಬಾಗಿಲಿಗೆ ಬಂದಾಗ ಕಾಣದಿದ್ದದ್ದು ಎಂದಿನಂತೆ "ಶ್ರೀಕಾಂತ್ ಬನ್ನಿ ಬನ್ನಿ.. ಎಷ್ಟು ಹೊತ್ತಿಗೆ ಹೊರಟಿರಿ.. ಸೀಮಾ ಊಟ ಬಡಿಸು.. ಕಾಫೀ ಕುಡಿತೀರಿ, ನೀರು ಕೊಡಲಿ.. ಶೀತಲ್ ಚೆನ್ನಾಗಿದ್ದೀಯಾ.. ನೀ ಬಂದದ್ದು ಬಾಳ ಚಲೋ ಆಯ್ತು" ಹೀಗೆ ಹತ್ತಾರು ರೀತಿಯಲ್ಲಿ ಕಾಳಜಿಯಿಂದ ವಿಚಾರಿಸಿಕೊಳ್ಳುತ್ತಿದ್ದ ಧ್ವನಿ ಕೇಳಿಬರಲಿಲ್ಲ.. ಆದರೆ ಅವರ ದಿವ್ಯ ಉಪಸ್ಥಿತಿಯ ಅನುಭವ ನನಗೆ ಸಿಕ್ಕಿತು.. 

ಯಾವಾಗಲೂ ಅವರಿಗೆ ಕುತೂಹಲ ಹೆಚ್ಚಿತ್ತು.. ಒಂದು ದಿನ ನಮ್ಮ ಮನೆಗೆ ಬಂದಾಗ.. ರಾತ್ರಿ ಪ್ರೇಮದ ಕಾಣಿಕೆ ಚಿತ್ರ ನೋಡುತ್ತಿದ್ದೆವು.. ಬೇರೆ ರೂಮಿನಲ್ಲಿ ಮಲಗಿದ್ದ ಇವರು.. ಮೆಲ್ಲನೆ ಬಾಗಿಲ ಸಂಧಿಯಿಂದ ನೋಡುತ್ತಿದ್ದನ್ನು ನೋಡಿ "ಯಾಕೆ ಆಯೀ ಅಲ್ಲಿ ಇದ್ದೀಯ .. ಬಾ ಇಲ್ಲಿಯೇ ಬಾ" ಅಂದಾಗ "ಈ ಚಿತ್ರ ಚೆನ್ನಾಗಿತ್ತು ಅದಕ್ಕೆ ನೋಡೋಕೆ ಬಂದೆ" .. ಎಂದಿದ್ದರು.. 

ಪ್ರವಾಸಕ್ಕೆ ಹೋದಾಗ ಅದು ಜಲಪಾತವಾಗಿರಲಿ, ದೇವಾಲಯವಿರಲಿ, ಉದ್ಯಾನವಿರಲಿ, ಹೋಟೆಲ್ ಇರಲಿ.. ಮನೆಯ ಸಮಾರಂಭವಿರಲಿ ಇವರ ಉತ್ಸಾಹ ನೂರು ಪಟ್ಟು ಜಾಸ್ತಿಯಾಗಿತ್ತು.. 

ಅವರ ಅಂತಿಮ ಘಟ್ಟದ ಕೆಲವು ವರ್ಷಗಳು ಅವರ ಜೊತೆಯಲ್ಲಿ ಕಳೆಯುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯವೇ ಹೌದು.. ಅಪಾರ ಮಾತುಗಳು ಕೆಲವೊಮ್ಮೆ ಓಹ್ ಆಹ್ ಅನ್ನಿಸುತ್ತಿದ್ದರೂ ಅವರ ನಿರರ್ಗಳ ಮಾತುಗಳು.. ಕಲ್ಮಶವಿಲ್ಲದ ಮನಸ್ಸು, ಕಪಟವಿಲ್ಲದ ನೆಡೆನುಡಿಗಳು.. ಅವರ ಕಡೆಯ ಹಂತದಲ್ಲಿ ಸೂಜಿ, ಮಾತ್ರೆಗಳು, ಟಾನಿಕ್ಕುಗಳು ಕೊಡುತ್ತಿದ್ದ ನೋವುಗಳು ಅವರ ಶುಭ್ರಮನಸ್ಸು ಗಟ್ಟಿಯಾಗಿ ನಿಂತು ಆ ನೋವುಗಳನ್ನು ಮೆಟ್ಟಿ ನಿಂತಿತ್ತು.. 

ಹಾಗಾಗಿ ಅವರ ಅಂತಿಮ ದರ್ಶನ ಮಾಡಿದ ಅನೇಕ ಬಂಧು ಮಿತ್ರರು, ಆಸ್ಪತ್ರೆಯ ಸಿಬ್ಬಂಧಿಗಳು ದೇವಿ ಕಲೆಯಿದೆ ಮುಖದಲ್ಲಿ ಅನ್ನುತ್ತಿದ್ದರು.. 

ಅವರನ್ನು ಅಂತಿಮ ಹಂತದಲ್ಲಿ ನೋಡಲಾಗಲಿಲ್ಲವೆಂಬ ನೋವಿದ್ದರೂ, ಅರೆ ಅವರೊಡನೆ ಸುತ್ತಾಡಿದ ಮಧುರನೆನಪುಗಳಲ್ಲಿ ಹಸಿರಾಗಿದ್ದರೆ ಅನಿಸುವ ಆ ಭಾವ ಸದಾ ನಿಂತಿರುತ್ತದೆ. 

ಭೌತಿಕವಾಗಿ ಇಲ್ಲದ ಅವರ ಅಸ್ತಿತ್ವವನ್ನು ಸಂಸ್ಕಾರದ ರೀತಿ ರಿವಾಜುಗಳಿಗಾಗಿ ಉರಿದು ಹೋದ ನಶ್ವರ ದೇಹ ಉಳಿಸಿದ ಕುರುಹುಗಳಲ್ಲಿ ಹುಡುಕುವ ಅವರನ್ನು ಹುಡುಕುವ ಕೆಳದಲ್ಲಿ ನಾನು ಭಾಗಿಯಾಗಿದ್ದು.. ಅವರ ಆ ಎಲುಬು, ಭಸ್ಮಗಳ ಸ್ಪರ್ಶ, ಆ ಶಕ್ತಿಯನ್ನು ಅಂತಿಮ ಸಂಸ್ಕಾರದ ಅಗ್ನಿ ಸ್ಪರ್ಶ ಮಾಡಿದ ಜಾಗದಲ್ಲಿ ನಮಸ್ಕರಿಸಿದಾಗ ಆ ಕಡೆಯಿಂದ ಆ ಸ್ಮಶಾನದ ಸಿಬ್ಬಂಧಿ ಆ ಭಸ್ಮವನ್ನು ಒಂದು ಕಡೆ ಮಾಡುತ್ತಿದ್ದ ಆ ಭಸ್ಮ ನನ್ನ ತಲೆಗೆ ಹಾರಿತು.. ಅಮ್ಮ ನನ್ನನ್ನು ಸ್ಪರ್ಶ ಮಾಡಿದ್ದಾರೆ ಅಂತ ಅನುಭವ ಸಿಕ್ಕಿತು.. ಹಾಗೆ ಆ ಚಿತಾಭಸ್ಮದಲ್ಲಿ ಸಂಸ್ಕಾರಕ್ಕೆ ಎಲುಬಿನ ಅವಶೇಷಗಳನ್ನು ಹುಡುಕುತ್ತಿದ್ದಾಗ ಸಿಕ್ಕಿದ್ದು ಅವರ ಅಗ್ನಿಯಲ್ಲಿ ಬೆಂದ ಕಾಲುಂಗುರ.. 

ಹೋಗಿ ಬನ್ನಿ ಅಮ್ಮ.. ಬದುಕಿನ ಸಾರ್ಥಕತೆಯನ್ನು ಕಂಡು ಜೀವನೋತ್ಸಾಹದ ಪಾಠವನ್ನು ನಮಗೆಲ್ಲ ಕಲಿಸಿದ ನೀವು.. ಆ ಮಹಾಮಹಿಮನಿಗೂ ಉತ್ಸಾಹ ತುಂಬ ಬೇಕಾದ ಅವಶ್ಯಕತೆ ಇದೆ ಅನಿಸುತ್ತದೆ.

ಈ ಬದುಕಿನಲ್ಲಿ ಕಂಡ ಕನಸ್ಸುಗಳು.. ಮಾಡಬೇಕಾದ ಸಾಧನೆಗಳು, ಸೇವೆಗಳು ಎಲ್ಲವೂ ನಿಮ್ಮ ಬಾಳಿನಲ್ಲಿ ಸಿಕ್ಕಿದೆ.. ಅದನ್ನು ನಿಮ್ಮದೇ ಶೈಲಿಯಲ್ಲಿ ವಜ್ರಸಮಾನ ಮಾಡಿದ್ದೀರಾ.. ನಿಮಗೆ ಅರಿವಿಲ್ಲದೆ ನಿಮ್ಮ ಪೀಳಿಗೆ ಮತ್ತು ಮುಂದಿನ ಪೀಳಿಗೆಯನ್ನು ಈ ಅದ್ಭುತ ಲೋಕಕ್ಕೆ ಪರಿಚಯಿಸಿ ಅವರೂ ಕೂಡ ಸಾರ್ಥಕತೆ ಪಡೆಯುವಂತೆ ಮಾಡಿದ್ದೀರಾ.. ಇದಕ್ಕಿಂತ ಇನ್ನೇನೂ ಸಾರ್ಥಕತೆ .. 

ಒಂದು ದೀಪ ಹಚ್ಚಿದರೆ ಸಾಕು ಅದು ಅನೇಕಾನೇಕ ದೀಪಗಳನ್ನು ಹಚ್ಚಲು ಸಹಾಯ ಮಾಡುತ್ತದೆ.. ಅಂಧಕಾರವನ್ನು ಮರೆ ಮಾಡುತ್ತದೆ.. 

ಇದೆ ಅಲ್ಲವೇ ನೀವು ಕೂಡ ಮಾಡಿದ್ದು.. 

************
ಅಜ್ಜ ನಾನು ಹೊರಡುವಾಗ ನೀನು ನಕ್ಕಿದ್ದು ಏಕೆ ಅಂತ ಗೊತ್ತಾಯಿತು.. ಹೌದು ಅವರು ಹೋದರು ಅನ್ನುವ ಶಾಕ್ ಗಿಂತ ಅವರಿಲ್ಲ ಎನ್ನುವ ಶಾಕ್ ದೊಡದು ಎನ್ನುವ ಆ ಕ್ಷಣದ ಮಾತು ನಿಜವಾಯಿತು.. 

ನಿನ್ನ ತಾಳಕ್ಕೆ ಕುಣಿಯಾದವರಾರು ಇದ್ದಾರೆ ಅಜ್ಜ!


*****






2 comments:

  1. Beautiful honoured her in your most special way of writing. Words have so much power I get it today. Thank you

    ReplyDelete
    Replies
    1. Thank you so much for the comment ..truely honory her life is!

      Delete