Friday, December 31, 2021

ಅಕ್ಕ ಜನುಮದಿನದ ಶುಭಾಶಯಗಳು... !

ಮಂಕುತಿಮ್ಮ ಸಿನಿಮಾ... ದ್ವಾರಕೀಶ್ ನಾಯಕನಾಗಲು ನಿರ್ಮಿಸಿದ ಚಿತ್ರವಿದು.. 
ಅಕ್ಕ ನನ್ನನ್ನು ಶಿವಮೊಗ್ಗದ ಚಿತ್ರಮಂದಿರಕ್ಕೆ ಆಕೆಯ ಗೆಳತಿಯರ ಜೊತೆ ಕರೆದೊಯ್ದಳು.. ನಾನು ಪಕ್ಕ ಮಂಕುತಿಮ್ಮನಾಗಿದ್ದ ಪ್ರಸಂಗವದು.. ಚಿತ್ರಮಂದಿರದೊಳಗೆ ಚಿತ್ರದ ತುಣುಕುಗಳ ಸ್ಥಿರ ಚಿತ್ರಗಳನ್ನು ನೋಡುತ್ತಾ ನಿಂತಿದ್ದೆ.. ಯಾವುದೋ ಮಾಯದಲ್ಲಿ ತಪ್ಪಿಸಿಕೊಂಡಿದ್ದೆ.. ಇವರೆಲ್ಲಾ ಚಿತ್ರಮಂದಿರದೊಳಗೆ ಹೋದರು .. ನಾನು ಎಲ್ಲಿಗೆ ಹೋಗಬೇಕೆಂದು ಗೊತ್ತಾಗದೆ.. ಟಾಕೀಸಿನ ಹೊರಗೆ ಬಂದೆ.. ಇನ್ನೂ ಚಿಕ್ಕ ವಯಸ್ಸಾದ್ದರಿಂದ ಟಿಕೀಟಿನ ಜಂಜಾಟ ಇರಲಿಲ್ಲ.. ಗೇಟ್ ಕೀಪರ್ ಏನು ಎಂದಾ.. ಹೊರಗೆ ಹೋಗಬೇಕು ಅಂದೇ.. ಬಾಗಿಲು ತೆಗೆದು ಕಳಿಸಿದ.. 

ನಾ ಸೀದಾ ಮನೆಗೆ ಬಂದೆ., ಅಮ್ಮ ಬಿಸಿ ಬಿಸಿ ಕೋಡುಬಳೆ ಮಾಡ್ತಾ ಇದ್ದರು.. ಸರಿಯಾಗಿ ಮುಕ್ಕಿದೆ.. ಸಿನೆಮಾಗೆ ಹೋಗ್ತೀನಿ ಅಂದ್ಯಲ್ಲೋ ಅಂದ್ರು ಅಮ್ಮ.. ಹೋಗಿದ್ದೆ ಅಕ್ಕ ಕಾಣಲಿಲ್ಲ ಮನೆಗೆ ಬಂದೆ .. ಅಂದೇ.. 

ಮನೆಗೆ ಬಂದ ಮೇಲೆ ನನಗೆ ಅಕ್ಕ ಸರಿಯಾಗಿ ಪೂಜೆ ಮಾಡಿದಳು... 

****** 

ನಾ ನಿನ್ನ ಬಿಡಲಾರೆ ಚಿತ್ರ.. ಆ ಕಾಲದಲ್ಲಿ ಸುಮಧುರ ಹಾಡಿಗಷ್ಟೇ ಅಲ್ಲದೆ.. ದೆವ್ವ ಭೂತ ದೇವರು ಇವುಗಳ ಮೇಲೆ ಆಧಾರಿತ ಚಿತ್ರ ಪ್ರೇಕ್ಷಕರ ಮನವನ್ನು ಸೆಳೆದಿತ್ತು.. ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದ ಚಿತ್ರವಿದು.. ಅನಂತ್ ನಾಗ್ ಮೈ ಮೇಲೆ ದೆವ್ವ ಬರುವ ದೃಶ್ಯ ಬಂದಾಗಲೆಲ್ಲ.. ಅಕ್ಕ ನನ್ನನ್ನು ಮತ್ತು ನನ್ನ ತಮ್ಮ ಮುರುಳಿಯನ್ನು ಸೀಟಿನ ಕೆಳಗೆ ಮುಖ ಮಾಡಿ ಅಂತ ಹೇಳುತ್ತಿದ್ದಳು.. ಇಡೀ ಚಿತ್ರದಲ್ಲಿ ದೆವ್ವದ ದೃಶ್ಯ ಬಂದಾಗಲೆಲ್ಲ ಇದೆ ಕಾಯಕ ಮುಂದುವರೆಯುತ್ತಿತ್ತು .. 

****** 

ಆಗ ನಾ ಇನ್ನೂ ಚಿಕ್ಕ ಮಗು.. ಅಕ್ಕನಿಗೆ ಆಡುವ ವಯಸ್ಸು... ನನ್ನ ಅಮ್ಮ ನನ್ನನ್ನು ಅಕ್ಕನಿಗೆ ಕೊಟ್ಟು ನೋಡಿಕೋ ಎಂದು ಹೇಳಿ ತಮ್ಮ ಕಾಯಕ ಮಾಡುತ್ತಿದ್ದರು.. ಆಡುವ ವಯಸ್ಸು ಅಕ್ಕನಿಗೆ.. ಅವಳ ಗೆಳತಿಯರ ಜೊತೆ ಕುಂಟೆ ಬಿಲ್ಲೆ, ಕೊಕ್ಕೋ ಆಟದಲ್ಲಿ ನನ್ನನ್ನು ಮರೆಯುತ್ತಿದ್ದಳು.. ಕಲ್ಲು ಬೆಂಚಿನ ಮೇಲೆ ಕೂರಿಸಿ ಆಟವಾಡುತ್ತಿದ್ದಳು.. ನಾನು ಅಲ್ಲಿಂದ ದಬ್ ಅಂತ ಕೆಳಗೆ ಬಿದ್ದು ಬಡ್ಕೋತಾ ಇದ್ದಾಗ ಅಕ್ಕ ಪಕ್ಕದ ಮನೆಯವರು ರೀ ವಿಶಾಲಮ್ಮ ನಿಮ್ಮ ಮಗ ಅಳ್ತಾ ಇದ್ದಾನೆ ನೋಡಿ ಅಂದಾಗ ಅಮ್ಮ ಬಂದು ಅಕ್ಕನಿಗೆ ಪೂಜೆ ಮಾಡುತ್ತಿದ್ದರು.. 

******
ಬಡತನಕ್ಕೆ ಹಸಿವು ಜಾಸ್ತಿ ಅನ್ನುತ್ತಾರೆ.. ಮಗು ಅಂತ ನನಗೆ ಒಂದು ಇಡ್ಲಿ ತರಿಸಿ ತಿನ್ನಿಸಲು ಅಕ್ಕನಿಗೆ ಕೊಟ್ಟರೆ.. ಅಕ್ಕ ನನಗೆ ಒಂದೆರಡು ತುತ್ತು ತಿನ್ನಿಸಿ ಒಂದು ಚೂರು ತನ್ನ ಬಾಯಿಗೆ ಹಾಕಿಕೊಂಡರೆ ಮುಗಿಯಿತು.. ನನ್ನ ಬಾಯಿ ಬೊಂಬಾಯಿ ಆಗುತಿತ್ತು.. ತಗೋ ಅಕ್ಕನಿಗೆ ಪೂಜೆ... 

******
ಬೆಂಗಳೂರಿಗೆ ಬಂದ ಮೇಲೆ.. ಹಬ್ಬ ಹರಿದಿನಗಳು ಅಂದರೆ.. ಕೆಲಸಕ್ಕೆ ಸೇರಿದ್ದ ಅಕ್ಕ ನನಗೆ ಮತ್ತು ನನ್ನ ತಮ್ಮ ಮುರುಳಿಗೆ ಬಟ್ಟೆ ತರುವುದು ಖಾಯಂ ಆಗಿತ್ತು.. ನಾನು ಮುರಳಿ ಇಬ್ಬರೂ ವಠಾರದ ಮನೆಯ ಬಾಗಿಲಲ್ಲೇ ಕಾಯುತ್ತಾ... "ಮುರುಳಿ ಅಕ್ಕ ಈಗ ಬರುತ್ತಾಳೆ.. ಇನ್ನೇನೂ ಬರುತ್ತಾಳೆ" ಅಂತ ಸಮಾಧಾನ ಮಾಡಿಕೊಳ್ಳುತ್ತಿದ್ದೆವು.. ಅಕ್ಕ ದೂರದಿಂದ ಬರುವುದು ಕಂಡೊಡನೆ ಇಬ್ಬರೂ ರೇಸಿಗೆ ಬಿದ್ದಂತೆ ಅಕ್ಕನ ಬಳಿ ಓಡುತ್ತಾ ಹೋಗಿ.. ಅವಳ ಕೈಲಿದ್ದ ಕವರ್ ತೆಗೆದುಕೊಂಡರೆ ರಾಜ್ಯ ಗೆದ್ದಂತೆ.. 

ಒಮ್ಮೆ ಒಂದು ಹಬ್ಬದಲ್ಲಿ ಹಣಕಾಸಿನ ಕೊರತೆಯೋ ಅಥವ ಆಗಲಿಲ್ಲವೋ... ಹೊಸ ಬಟ್ಟೆ ಬರಲಿಲ್ಲ.. ಆಗಲೇ ಸಂಜೆ ಎಂಟು ಘಂಟೆ ದಾಟಿತ್ತು... ಅಕ್ಕ ಬರುವುದನ್ನೇ ನಾನು ಮುರುಳಿ ಕಾಯುತ್ತಿದ್ದೆವು.. ಕಂಡ ಕೂಡಲೇ ಓಡಿದ್ದೆ ಕೆಲಸ.. ಆದರೆ ನಿರಾಸೆ.. ಅಕ್ಕನ ಕೈ ಬರಿದಾಗಿತ್ತು.. 

ಮನಸ್ಸು, ಮುಖ ಎರಡೂ ಬಾಡಿತ್ತು.. ಇಬ್ಬರೂ ಅಕ್ಕನ ಕೈ ಹಿಡಿದುಕೊಂಡು ಮನೆಗೆ ಬಂದೆವು.. ಬಾಡಿದ ಮುಖ ಕಂಡು ಅಮ್ಮನಿಗೆ ಅರ್ಥವಾಯಿತು.. ಅಕ್ಕ ಅಮ್ಮನ ಕಣ್ಣುಗಳು ಏನೋ ಮಾತಾಡಿದವು.. ಅಕ್ಕ ನಮ್ಮಿಬ್ಬರ ತಲೆಯನ್ನು ನೇವರಿಸಿ.. ಬೆಳಿಗ್ಗೆ ತಂದು ಕೊಡ್ತೀನಿ ಆಯ್ತಾ.. ಎಂದಳು.. 

ನಮ್ಮಿಬ್ಬರದು ಒಂದೇ ಹಠ ಹಬ್ಬಕ್ಕೆ ಬಟ್ಟೆ ಬೇಕು ಅಂತ.. ಪರಿಸ್ಥಿತಿ ಅರ್ಥ ಮಾಡಿಕೊಳ್ಳುವಂತಹ ವಯಸ್ಸಲ್ಲ.. ಏನಾಗಿತ್ತೋ ಇಬ್ಬರೂ ಅವತ್ತು ಹಠ ಮಾಡಿದೆವು.. ನನಗೆ ಮುರುಳಿಗೆ ಅಮ್ಮನಿಂದ ಕವತಾಗಳು ಬಿದ್ದವು.. ಅಳುತ್ತಲೇ ಇಬ್ಬರೂ ಮಲಗಿದೆವು.. 

ಬೆಳಿಗ್ಗೆ ಅಕ್ಕ ಬಟ್ಟೆ ತಂದು ಕೊಟ್ಟ ಮೇಲೆಯೇ ಮುದುಡಿದ ತಾವರೆ ಅರಳಿದ್ದು.. 

******
ಅಮ್ಮ ಶ್ರೀಕಾಂತ ಕಾಲೇಜಿಗೆ ಹೋಗುತ್ತಾನೆ ಪಾಪ ಒಳ್ಳೆಯ ಬಟ್ಟೆಗಳೇ ಇಲ್ಲ.. ಮುಂದಿನ ತಿಂಗಳು ಸಂಬಳ ಬಂದ ಮೇಲೆ ಬಟ್ಟೆ ತೆಗೆದು ಕೊಡುತ್ತೇನೆ.. ಹೇಳಿದಂತೆಯೇ.. ಮುಂದಿನ ತಿಂಗಳು ಎರಡು ಜೊತೆ ಪ್ಯಾಂಟ್ ಶರ್ಟ್ ಬಟ್ಟೆ ಬಂತು.. ಟೇಲರ್ ಹತ್ತಿರ ಹೊಲಿಸಿಕೊಂಡು ಬಂದ ಮೇಲೆ ಹಾಕಿಕೊಂಡು ನಲಿಯುವ ಮೊದಲು ಅಪ್ಪ ಅಮ್ಮನಿಗೆ ಮತ್ತು ಅಕ್ಕನಿಗೆ ನಮಸ್ಕರಿಸಿದ್ದು ಇನ್ನೂ ಹಸಿರು.. 

******
ಕಾಲೇಜು ಮುಗಿಯಿತು.. ಏನು ಮಾಡ್ತೀಯ.. ಶ್ರೀಕಾಂತ?
ಗೊತ್ತಿಲ್ಲ ಅಕ್ಕ.. 
ಸರಿ ನಮ್ಮ ಆಫೀಸಿನಲ್ಲಿ ಬಾ ಕೆಲಸ ಕೊಡಿಸ್ತೀನಿ.. 
ಹೇಳಿದಂತೆಯೇ ನನ್ನ ಮೊದಲ ಕೆಲಸ ಶುರು ಆಗಿದ್ದು ಅಕ್ಕನ ಆಫೀಸ್ನಲ್ಲಿಯೇ..... 

ಆಗ ಕಂಪ್ಯೂಟರ್ ಯುಗ ಆಗ ತಾನೇ ಕಣ್ಣು ಬಿಡುತ್ತಿತ್ತು.. ಕಂಪ್ಯೂಟರ್ ಕಲಿ ಒಳ್ಳೆ ಕೆಲಸ ಸಿಗುತ್ತೆ ಅಂತ ಹೇಳಿ.. ಆ ಕಾಲದಲ್ಲಿ ಸುಮಾರು ಹದಿನೈದು ಸಾವಿರ ರೂಪಾಯಿಗಳನ್ನು ಸಿದ್ಧ ಮಾಡಿ ಕಂಪ್ಯೂಟರ್ ಕ್ಲಾಸಿಗೆ ಸೇರಿಸಿದಳು.. ಅಲ್ಲಿನ ನನ್ನ ಬದುಕು ವಿಭಿನ್ನ ಹಾದಿ ತುಳಿಯಿತು. ಇಂದು ನಾ ಏನಾದರೂ ಆಗಿದ್ದೇನೆ ಎಂದರೆ ಅದಕ್ಕೆ ಅಡಿಗಲ್ಲು ಹಾಕಿದವಳು ಅಕ್ಕ.. 

******
ಮನೆ ಕ್ಲೀನ್ ಮಾಡುವ ಹುಚ್ಚು ಯಾವಾಗಲೂ ಇತ್ತು, ಇದೆ, ಇರುತ್ತೆ.. ಹಲವಾರು ಬಾರಿ ಎಲ್ಲಾ ರಂಪ ಹಾಕಿಕೊಂಡು ಒಂದೊಂದೇ ಜೋಡಿಸುತ್ತಾ.. ಕೆಲವೊಮ್ಮೆ ಸುಸ್ತಾಗಿ ಆ ಕಸದ ಮಧ್ಯೆ ಮಲಗಿ ಬಿಡುತ್ತಿದ್ದೆ.. ಸರಿಯಾದ ಸಮಯದಲ್ಲಿ ಅಕ್ಕ ಬರುತ್ತಿದ್ದಳು.. ಮುಂದೆ ಹೇಳಬೇಕೇ..  ಶಂಖ ವಾದ್ಯ... 

ಮನೇಲಿ ಇರ್ತೀಯ ಮನೆ ಕ್ಲೀನ್ ಮಾಡೋಕೆ ಆಗೋಲ್ವಾ.. ಸುಮ್ಮನೆ ಮನೇಲಿ ನಿದ್ದ ಮಾಡ್ತೀಯ ಅನ್ನೋಳು.. ಸಿಟ್ಟು ಬರೋದು.. ಆದರೆ ಕೆಲಸವಿಲ್ಲದೇ ವಿದ್ಯಾಭ್ಯಾಸ ಮುಗಿಸಿ ಮನೇಲಿ ಇರುತ್ತಿದ್ದ ನನಗೆ ಬೇರೆ ಮಾತುಗಳು ಹೇಳೋಕೆ ಸಾಧ್ಯವಾಗುತ್ತಿರಲಿಲ್ಲ.. 

ಸರಿ ಅಕ್ಕನ ಮಾತುಗಳು ಮತ್ತೆ ಬರಬಾರದು ಅಂತ.. ಮನೆಯನ್ನು ಸ್ವಚ್ಛ ಮಾಡಿ.. ಅಕ್ಕ ಬರುವ ಹೊತ್ತಿಗೆ ಮನೆ ಲಕ ಲಕ ಹೊಳೆಯುತ್ತ ಇರೋದು.. ನನ್ನ ಹಣೆ ಬರಹ ಅವತ್ತು ಅಕ್ಕ ತಡವಾಗಿ ಬರುತ್ತಿದ್ದಳು.. ಅಷ್ಟೊತ್ತಿಗೆ ಅಮ್ಮ ಬಂದು ಮನೆಯ ಸ್ವಚ್ಛತಾ ಕೆಲಸ ಅಡುಗೆ ಮನೆಯಿಂದ ಶುರು ಮಾಡುತ್ತಿದ್ದರು.. ಅಕ್ಕ ನೋಡೇ ಮನೆ ಎಷ್ಟು ಕ್ಲೀನ್ ಆಗಿದೆ ಎಂದಾಗ.. ನೀನಲಿ ಮಾಡಿದ್ದೀಯಾ.. ಕಸದ ಮಧ್ಯೆ ನಿದ್ದೆ ಹೊಡೆದಿರ್ತೀಯ... ಇದು ಅಮ್ಮನ ಕೆಲಸ. ಅಮ್ಮನೇ ಮಾಡಿರೋದು... ನೀ ನಿದ್ದೆ ಹೊಡೆದಿದ್ದೀಯ ಅಷ್ಟೇ.. ಎಂದಾಗ ಅಮ್ಮನ ಕಡೆ ನೋಡುತಿದ್ದೆ.. ಅಮ್ಮ ನಗುತಿದ್ದರು.. ಸರಿ ಮತ್ತೆ ಅಕ್ಕನಿಂದ ವಿಷ್ಣು ಸಹಸ್ರನಾಮ.. 

*******
ಒಂದು ಮನೆಯಲ್ಲಿ ಈ ರೀತಿಯ ಅಕ್ಕ ಇದ್ದಾಗ ಮನೆ ಕೆಲಸಗಳು ಆರಾಮ್ ಅನಿಸುತ್ತದೆ.. ಆ ಕಾಲದಲ್ಲಿ ಕೋಪ ಬರುತ್ತಿತ್ತು.. ಬಟ್ಟೆ ತರದೇ ಹೋದರೆ ಅಕ್ಕನ ಮೇಲೆ ಮುನಿಸು ಬರುತ್ತಿತ್ತು.. ಆದರೆ ಇಂದು ಅದೆಲ್ಲದರ ಹಿಂದಿನ ನೋವು, ಕಷ್ಟಗಳು, ಅವಳ ಸಾಹಸಗಳು ನೆನಪಿಗೆ ಬರುತ್ತವೆ.. ಹೌದು ಇವತ್ತು ನೂರಾರು ರೂಪಾಯಿಗಳನ್ನು ಸಂಪಾದನೆ ಮಾಡುವ ಯೋಗ್ಯತೆ ಇದೆ, ಯೋಗವೂ ಇದೆ.. ಆದರೆ ಅದಕ್ಕೆಲ್ಲ ಅಡಿಪಾಯ ಹಾಕಿದ್ದು ನನ್ನ ಪ್ರೀತಿಯ ಅಕ್ಕ.. 

ಸ್ಫೂರ್ತಿ ಬೇಕು.. ಹೋರಾಟದ ಜೀವನಕ್ಕೆ ಇಂಧನ ಬೇಕು ಎಂದಾಗ.. ದೇವರಲ್ಲಿ, ಅಪ್ಪ ಅಮ್ಮನಲ್ಲಿ ಪ್ರಾರ್ಥನೆ ಖಂಡಿತ ಮಾಡುತ್ತೇನೆ.. ಆಗೆಲ್ಲ ಫೋಟೋದಲ್ಲಿರುವ ದೇವರು  ಶ್ರೀ ನಿನ್ನ ಅಕ್ಕ ಒಬ್ಬಳು ಸಾಕು ಕಣೋ.. ಅವಳನ್ನು ನೋಡು ಸಾಕು ಎಂದು ಹೇಳುತ್ತಾರೆ.. 

ನಿಜ ಸ್ಫೂರ್ತಿ ಬೇಕು ಎಂದಾಗ.. ನಾ ಪುಸ್ತಕ, ಸಿನಿಮಾ, ಭಾಷಣ ಇದ್ಯಾವುದು ನನ್ನ ಗಮನಕ್ಕೆ ಬರದೇ ಅಕ್ಕನ ಹೋರಾಟದ ಸಾರ್ಥಕ ಜೀವನ ನೆನಪಿಗೆ ಬರುತ್ತದೆ.. ತಕ್ಷಣ ಒಂದು ರೀತಿಯ ಚೈತನ್ಯ ಮನದ ಮೂಲೆಯಲ್ಲಿ ಬೆಳೆಯುತ್ತಾ ಹೋಗುತ್ತದೆ.. 

ಇಂತಹ ಪ್ರೀತಿಯ ಮಮತಾ ಮಯಿ ಅಕ್ಕನಿಗೆ ಇಂದು ಜನುಮದಿನ.. ಕೊಡಲು ನನ್ನ ಹತ್ತಿರ ಏನಿದೆ.. ಆದರೆ ಅವಳು ನೀಡಿದ ಅದ್ಭುತ ಬದುಕಿನ ಸಾರ್ಥಕ ಕ್ಷಣಗಳನ್ನು,  ಘಟನೆಗಳನ್ನು ಹೆಕ್ಕಿ ತೆಗೆದು.. ಲೇಖನ ಮಾಲೆ ಮಾಡಿದ್ದೇನೆ.. 

ಅಕ್ಕ ಜನುಮದಿನದ ಶುಭಾಶಯಗಳು... !

 

1 comment: