Saturday, December 4, 2021

ಶಿವರಾಂ ಸ್ಪೆಷಾಲಿಟಿ.. .ಹೆಗಲು ಕೊಡುತ್ತಿದ್ದ ಭುಜಗಳನ್ನು ಹೊರುವ ಸಮಯ.. ಹೊರಟೆ ಬಿಟ್ಟರು

 
ನಾಗರಹಾವು 

"ಮೇರೇ ಸಪನೋಂಕಿ ರಾಣಿ ಕಬ್ ಆಯೆಗೀತು.. ಈಗಿನ ಕಾಲದ ಹುಡುಗರಿಗೆ ಹಿಂದಿ ಹಾಡು ಹೇಳೋದು ಹುಡುಗಿಯರನ್ನು ರೇಗಿಸೋದು.. ಯಾಕೆ ಕನ್ನಡ ಹಾಡು ಬರೋಲ್ವಾ.. ಅದೇ ಅವರ ಸ್ಪೆಷಾಲಿಟಿ.. "

"ಸಾರ್ ನಮ್ಮ ಕಾಲೇಜಿನಲ್ಲಿ ಎರಡು ತರಹ ಗೊರಿಲ್ಲಾಗಳನ್ನು ಕಂಡು ಹಿಡಿದ ಮಾರ್ಗರೇಟ್ ಅವರಿಗೆ ಅಂತಿಥಹ ಪ್ರಶಸ್ತಿ ಅಲ್ಲಾ.. ಒಳ್ಳೆಯ ಪ್ರಶಸ್ತಿಯನ್ನೇ ಕೊಡಬೇಕು"

"ತುಕಾ.. ಡೆಸ್ಕ್ ಮೇಲೆ ಬೀಳುತ್ತಿರುವ ಟಸ್ಸೆ ನಿನ್ನ ಮುಖದ ಮೇಲೆ ಬಿದ್ದಾತು ಕಣೋ.. ನಿನ್ನ ಪ್ಲೇಸ್ ಲಾಸ್ಟ್ ಬೆಂಚ್ ಕಣೋ"

ಈ ರಾಮಾಚಾರಿಗೆ ಇರೋ ಧೈರ್ಯ ನನಗೆ ಯಾಕೆ ಇಲ್ಲ.. ಅದು ನನ್ನ ಸ್ಪೆಷಾಲಿಟಿ

ಉಪಾಸನೆ                                                                                                                          ಸಂಗೀತದಲ್ಲಿರುವ ಉತ್ತರಾದಿ, ದಕ್ಷಿಣಾದಿ, ಪೂರ್ವಾದಿ, ಪಶ್ಚಿಮಾದಿ, ಪಾಶ್ಚಾತ್ಯಾದಿ ಸಂಗೀತ ಪ್ರಕಾರಗಳನ್ನು ಕಲಸಿ, ಬೆರೆಸಿ, ಪ್ರೇಕ್ಷಕರನ್ನು ನಲಿಸಿ, ಕುಣಿಸಿ, ತಣಿಸಿ,ಬೆದರಿಸಿ ಸ್ಟನ್ ಮಾಡಬೇಕೆಂಬುದೇ ಈ ಶಂಕರಾಭರಣನ ಲೈಫ್ ಆಂಬಿಶನ್

ಪಿಟೀಲಿಗೆ ಕಮಾನ್ ಹಾಕೋದು ಕಾಮನ್.. ತಂಬೂರಿಗೆ ಕಮಾನ್ ಹಾಕಿ ಕಮಾಲ್ ಮಾಡಬೇಕು 

ಎಡಕಲ್ಲು ಗುಡ್ಡದ ಮೇಲೆ                                                                                                                          ನಾ ಹೇಳಿದ ಹಾಗೆ ಕೇಳು.. ಆದರೆ ನಾ ಮಾಡಿದಂತೆ ಮಾಡಬೇಡ..                                                                ಲಿಮಿಟ್, ಗಮ್ಮತ್ತು.. ಈ ಎರಡು ಪದಗಳ ಜೊತೆಯಲ್ಲಿ ಆಟವಾಡುವ ಶೈಲಿ ಸೂಪರ್

ಶುಭಮಂಗಳ                                                                                                                                              ಸೂರ್ಯಂಗೂ ಚಂದ್ರಂಗೂ ಹಾಡಿನಲ್ಲಿ ಹೇಮಾ ಮತ್ತು ಪ್ರಭಾಕರನನ್ನು ಸೇರಿಸಲು ಪಡುವ ಪಾಡು ಇಷ್ಟವಾಗುತ್ತದೆ. 

"ಸಮುದ್ರದಲ್ಲಿ ಈ ಪಾಟಿ ನೀರೈತೆ.. ಕುಡಿಯೋಕೆ ಒಂದು ನೀರು ಸಿಗುತ್ತಾ ಹೇಳಿ"

ಕರ್ಣ                                                                                                                                                          ನಾ ಅಲ್ಲ ದೊಡ್ಡವರು.. ನೋಡಿ ಈ ಮನೆ ಇವರದ್ದು, ಹೊರಗೆ ನಿಂತಿರುವ ಕಾರು ಇವರದ್ದು, ಎಲ್ಲಾ ಇವರದ್ದು. .ಆದರೆ ಅವರು ಹಾಕಿಕೊಂಡಿರುವ ಜುಬ್ಬಾ ಮಾತ್ರ ನನ್ನದು 

ಚಲಿಸುವ ಮೋಡಗಳು                                                                                                                            ಹೇಳಿದ್ದನ್ನು ನೋಡಿದರೆ ಸಾಕು.. ಐ ಮೀನ್ ನೋಡಿದ್ದನ್ನು ಹೇಳಿದರೇ ಸಾಕು 

ಹೊಸ ಬೆಳಕು                                                                                                                                              ನೋಡಿ ರಾಜಾ ಕಿ ರಾವ್.. ನನಗೆ ನನ್ನ ಹೆಣ ಕೊಡಿ..  ನೋಡ್ರಪ್ಪಾ ಇಷ್ಟು ದಿನ ಸುಮ್ಮನಿದ್ದಿರಿ.. ಇನ್ನು ಸ್ವಲ್ಪ ದಿನ ಸುಮ್ಮನಿರಿ.. ಇವರಿಗೆ ಹಣ.. ನಿಮಗೆ ಹೆಣ ಕೊಡ್ತೀನಿ.. 

ಮಾಂಗಲ್ಯ ಭಾಗ್ಯ                                                                                                                                      ನೋಡು.. ಜೀವನದಲ್ಲಿ ಆಸೆ ಪಡಬಾರದು.. ಪಟ್ಟರೆ ಅದನ್ನು ದಕ್ಕಿಸಿಕೊಳ್ಳಬೇಕು.. you must aim it and get it

ಸರ್ವರ್ ಸೋಮಣ್ಣ 

ಏನ್ ಸರ್ ಟೆನ್ಶನ್ ನಲ್ಲಿ ಕಾಯ್ತಾ ಇದ್ದೀರಾ?                                                                                                ಇಲ್ಲಪ್ಪ ಕಾದು ಕಾದು ಟೆನ್ಶನ್ ಗೆ ಬಂದಿದ್ದೀನಿ!

ಆಪ್ತ ಮಿತ್ರ 

ನಾನು ಹೊರಗೆ ಹೋಗೋದರ ಬಗ್ಗೆ ಯೋಚಿಸುತ್ತಿಲ್ಲ... ನೀವು ಒಳಗೆ ಹೋಗೋದರ ಬಗ್ಗೆ ಯೋಚಿಸುತ್ತಿದ್ದೀನಿ 

ಹೀಗೆ ಹಾಸ್ಯ, ವೇದಾಂತ, ಉಡಾಫೆ, ಸಿಟ್ಟು, ಯಾವುದೇ ರೀತಿಯ ಮಾತುಗಳಿಗೆ ತಮ್ಮ ಛಾಪು ಕೊಟ್ಟು ಅದನ್ನು ಚಿರಸ್ಥಾಯಿಯಾಗಿ ನಿಲ್ಲಿಸುವ ತಾಕತ್ತು ಶಿವರಾಂ ಅವರಲ್ಲಿ ಅಪಾರವಾಗಿತ್ತು ಎಂಬುದು ಅವರ ಅವಿಸ್ಮರಣೀಯ ಚಿತ್ರಗಳಲ್ಲಿ ಕಾಣುತ್ತದೆ.. 

ಕನ್ನಡ ಚಿತ್ರಗಳ ಅಭಿಮಾನಿಯಾಗಿ ಸುಮಾರು ಐವತ್ತರ ದಶಕದ ಸಿನಿಮಾಗಳಿಂದ ಇತ್ತೀಚಿನ ಚಿತ್ರಗಳವರೆಗೆ ನೂರಾರು ಚಿತ್ರಗಳನ್ನು ನೋಡಿದ್ದೀನಿ.. ಶಿವರಾಂ ಅವರ ಪ್ರತಿ ಪಾತ್ರವು ವಿಭಿನ್ನ.. ಮತ್ತು ಪ್ರತಿ ಚಿತ್ರಗಳಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ವಿಭಿನ್ನವಾಗಿ ತೆರೆಯ ಮೇಲೆ ತರಲು ಪ್ರಯತ್ನ ಮಾಡುತ್ತಿದ್ದರು.. ಹಾಗಾಗಿ ಅವರ ಪ್ರತಿ ಪಾತ್ರವೂ ವಿಭಿನ್ನ ಛಾಪು ಮೂಡಿಸಿತ್ತು.. ಅವರ ಎಲ್ಲಾ ಚಿತ್ರಗಳ ಪಾತ್ರಗಳನ್ನೂ ಅಕ್ಕ ಪಕ್ಕದಲ್ಲಿ ಇಟ್ಟು ಜೋಡಿಸಿದರೆ ಪ್ರತಿ ಪಾತ್ರವೂ ಸೋಮವಾರ ಮಂಗಳವಾರ ಬುಧವಾರದ ಹಾಗೆ ಪ್ರತಿ ಪಾತ್ರವೂ ವಿಭಿನ್ನವಾಗಿ ಕಾಣುತ್ತದೆ.. 

ನೀವು ನನಗೆ ಬಯ್ತಾ ಇದ್ದೀರಾ ಅಂತ ಗೊತ್ತು.. ಶಿವರಾಂ ಅವರನ್ನು ಶರಪಂಜರ ಶಿವರಾಂ ಅಂತ ಮೊದಲು ಮೊದಲು ಗುರುತಿಸುತ್ತಿದ್ದ ಶರಪಂಜರದ ಭಟ್ಟನ ಪಾತ್ರದ ಬಗ್ಗೆ ಬರೆದಿಲ್ಲ ಅಂತ.. ಹೌದು ಹೌದು.. ನನಗೆ ಶಿವರಾಂ ಅಂತ ಮೊದಲು ಪರಿಚಯವಾಗಿದ್ದು ಇದೆ ಚಿತ್ರದಿಂದ.. 

"ಪ್ರತಿ ಪಂಗಡಕ್ಕೂ ಒಂದೊಂದು ಬಾವುಟ.. ಒಂದು ಬಾವುಟ ಕೇಳುತ್ತದೆ ಹಣ,, ಇನ್ನೊಂದು ಬಾವುಟ ಕೇಳುತ್ತದೆ ಕೆಲಸ.. ಆದರೆ ಈ ನಮ್ಮ ಬಾವುಟ ಹಿಡಿದರೆ ರುಚಿ ರುಚಿಯಾದ ಊಟವೋ ಊಟ.. "

"ಕಿಟಕಿ ಕಾಮಾಕ್ಷಮ್ಮ ಅಂತ ಹೆಸರಿಟ್ಟಿದ್ದೀನಿ.. ನೋಡಿ ನೋಡಿ ಕೊಂಕಳಲ್ಲಿ ಇಟ್ಟಿರುವ ಆ ಬಟ್ಟಲನ್ನು ಕೊಡಿ.. ಅದೇನು ಬೇಕೋ ಕೇಳಿ.. ನೋಡಿ ಮುಂಡೇದು ಸಾಲ ಕೇಳೋಕೆ ಅಂತಾನೆ ಹುಟ್ಟಿರುವ ಈ ಬಟ್ಟಲು.. "

"ನೋಡಿ ತೆಗೆದುಕೊಂಡಿರುವ ಸಾಲವನ್ನು ಕೊಡೊ ಅಭ್ಯಾಸ ಅವರಿಗೆ ಇಲ್ಲ . ನಿಮಗೆ ಕೇಳೋ ಅಭ್ಯಾಸವಿಲ್ಲ.. ನೋಡಿ.. ಅವರ ಮನೇಲಿ ಎಷ್ಟು ಜನರಿದ್ದಾರೋ ಕೇಳಿ.. ಇಲ್ಲೇ ಅಡಿಗೆ ಮಾಡಿ ಇದೆ ಹಾದಿಯಲ್ಲಿ ಸಾಗಿಸೋಣ"

ನುಣ್ಣನೆ ತಲೆ.. ಹಣೆಯ ಉದ್ದಕ್ಕೂ ನಾಮ.. ಸದಾ ಎಲೆ ಅಡಿಕೆ ಮೆಲ್ಲುವ ಬಾಯಿ.. ಸದಾ ಪಟ ಪಟ ಅಂತ ಮಾತಾಡುವ ಪಾತ್ರ.. ಶಿವರಾಂ ಸದಾ ಜೀವಂತ.. 

ಹಾಸ್ಯ ಪಾತ್ರ, ಮೆಲ್ಲನೆ ಸಮಯ ಸಾಧಿಸುವ ಬುದ್ದಿವಂತ ಪಾತ್ರ.. ಅವರ ಜೀವನದ ಉತ್ತರಾರ್ಧದಲ್ಲಿ ತೂಕದ ಪಾತ್ರ ಮಾಡುತ್ತಾ.. ಸಂದೇಶ ಕೊಡುವ ಸಂಭಾಷಣೆ ಹೇಳುವ ಶೈಲಿ ಸೊಗಸು.. 

ಅವರ ಭಾಷಾ ಸ್ಪಷ್ಟತೆ..ಚಿತ್ರರಂಗದ ಇತಿಹಾಸವನ್ನು ಜತನದಿಂದ ನೆನಪಲ್ಲಿ ಇಟ್ಟುಕೊಂಡು.. ಕೇಳಿದಾಗ ಸ್ಪಷ್ಟತೆ ಇಂದ ಹೇಳುವ ಚಂದ.. ಎಲ್ಲವೂ ಯು ಟ್ಯೂಬ್ ಗಳಲ್ಲಿ ಜೀವಂತವಾಗಿದೆ.. 

ನಟರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ, ಅನೇಕ ಚಿತ್ರಗಳಿಗೆ ದುಡಿದ ಹೆಚ್ಚುಗಾರಿಕೆ ಅವರದ್ದು.. 

ರಾಶಿ ಸಹೋದರರು ಎಂದು ಹೆಸರಾಗಿ.. ತಮ್ಮ ಸಹೋದರ ರಾಮನಾಥ್ ಜೊತೆಗೂಡಿ ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದೇ ಅಲ್ಲದೆ, ಹಿಂದಿಯಲ್ಲಿ ಕೂಡ ಅಮಿತಾಬ್ ನಾಯಕತ್ವದಲ್ಲಿ ಚಿತ್ರಮಾಡಿ ಹೆಸರಾಗಿದ್ದರು.. 

ಆರಂಭಿಕ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಜೀವ ತುಂಬಿ ಎಲ್ಲಾ ಘಟಕಗಲ್ಲಿಯೂ ಕೆಲಸ ಮಾಡಿ, ಪುಟ್ಟಣ್ಣ ಅವರಿಗೆ ಅಕ್ಷರಶಃ ಬಲಗೈ ಆಗಿದ್ದರು.. ಶರಪಂಜರ, ಗೆಜ್ಜೆಪೂಜೆ, ನಾಗರಹಾವು, ಎಡಕಲ್ಲು ಗುಡ್ಡದ ಮೇಲೆ, ಉಪಾಸನೆ, ಶುಭಮಂಗಳ ಚಿತ್ರಗಳಲ್ಲಿ ಅವರ ತೆರೆಯ ಮೇಲಿನ ಪಾತ್ರದಷ್ಟೇ ಅವರ ತೆರೆಯ ಹಿಂದಿನ ಪರಿಶ್ರಮವೂ ಅಷ್ಟೇ ವಿಶಿಷ್ಟ. 

ಅಣ್ಣಾವ್ರ ಹಲವಾರು ಚಿತ್ರಗಳಲ್ಲಿ ವಿಶಿಷ್ಟ ಅಭಿನಯ, ಸಂಭಾಷಣೆ, ಹಾಡುಗಳು ಎಲ್ಲದರಲ್ಲಿಯೂ ಮೆರೆದವರು ಶಿವರಾಂ.. 

ಅವರ ಜೀವನವನ್ನು ಪ್ರಣಯ ರಾಜ ಶ್ರೀನಾಥ್ ಅವರು ಒಂದು ಮಾತಿನಲ್ಲಿ ಒಂದು ಸಂದರ್ಶನದಲ್ಲಿ ಹೇಳಿದರು.. 

"ಕನ್ನಡ ಚಿತ್ರರಂಗದಲ್ಲಿ ಯಾರೇ ಇಹಲೋಕ ತ್ಯಜಿಸಿದರು ಒಂದು ಜೊತೆ ಭುಜ ಸದಾ ಸಿದ್ಧವಾಗಿರುತ್ತೆ.. ಅದು ಶಿವರಾಮಣ್ಣ ಅವರದ್ದು" 

ಇದು ಅಲ್ಲವೇ ಬದುಕಿನ ಸಾರ್ಥಕತೆ.. ಅನೇಕಾನೇಕ ಜೀವಗಳನ್ನು ಹೊತ್ತು ಅಂತಿಮ ಯಾತ್ರೆಗೆ ಸಹಕರಿಸಿದ ಅವರ ಭುಜಗಳು ಇಂದು ನಾಲ್ಕು ಭುಜಗಳ ಮೇಲೆ ಹೋರಾಡಲು ಸಿದ್ಧವಾಗಿದೆ.. 

ಬದುಕೇ ಹಸಿರು ಪ್ರೀತಿ ಬೆರೆತಾಗ.. .ಇದು ಅಣ್ಣಾವ್ರ ಒಂದು ಹಾಡಿನ ಸಾಲು.. ಶಿವರಾಂ ಅವರು ಇದೆ ರೀತಿ ಬದುಕಿ ಬಾಳಿದ್ದರು.. ಇಂದು ಅವರು ಬೆಳ್ಳಿ ತೆರೆಯಲ್ಲಿ ಅಜರಾಮರ.. !!!

No comments:

Post a Comment