Saturday, November 30, 2019

"ರಾಮ"ಕ್ಕಯ್ಯ "ಶಶಿ"ದೇವರಗುಡ್ಡದಲ್ಲಿ ವೆಂಕಿಶ್ರೀ

ಮಾತಾಡೋಕೆ ಅವಕಾಶ ಕೊಡಿ ಅಕ್ಕಯ್ಯ..

ಸಾಧ್ಯಾನೇ ಇಲ್ಲ.. ನಿಮಗೆ ಮಾತಾಡೋಕೆ ಅವಕಾಶ ಕೊಟ್ರೆ ನನ್ನ ಒಪ್ಪಿಸಿಬಿಡ್ತೀರ ಅಣ್ಣಯ್ಯ.. ಅದಕ್ಕೆ ನನ್ನ ಕೋಪವನ್ನ ನಿಮ್ಮ ಮೇಲೆ ತೀರಿಸಿಕೊಳ್ಳಲೇ ಬೇಕು..

ಇದು ಪ್ರತಿ ಬಾರಿ ನಮ್ಮಿಬ್ಬರ ನಡುವೆ ನೆಡೆಯುವ ಸಾಮಾನ್ಯ ಸಂಭಾಷಣೆ.. ಜಗಳ, ಕೋಪದಿಂದಲೇ ಶುರು.. ಸರಿ ನಾ ಶಾಲೆಯಲ್ಲಿ ಓದಿದ್ದು, ಕಾಲೇಜಲ್ಲಿ ಕಲಿತಿದ್ದು.. ಜೀವನದಿಂದ ಕಲಿತಿದ್ದು ಎಲ್ಲವನ್ನು ಉಪಯೋಗಿಸಿ.. ಅಕ್ಕಯ್ಯ ದುರ್ಗಾದೇವಿಯನ್ನು ಶಾಂತ ಮಾಡಿದ ಮೇಲೆ.. ನಂತರ ಮಿಕ್ಕ ಮಾತು ಶುರು ಆಗುತ್ತದೆ..

ಮೊದಲ ಶ್ರಾವಣ ಶನಿವಾರ ಕಾಂಚಿಪುರಂ ಅತ್ತಿ ವರದರಾಜ ಸ್ವಾಮಿಯನ್ನು ನೋಡಲು ಹೋಗಿದ್ದು.. ನೀವು ಓದಿದ್ದೀರಾ .. ಹೀಗೆ ಆ ಪ್ರವಾಸದ ನೆನಪಲ್ಲಿ ನಾಲ್ಕು ವಾರಗಳು ಕಳೆದಿದ್ದವು.. ಅಚಾನಕ್.. ವೆಂಕಿ.. ಕರೆ ಮಾಡಿ.. ಮಗಾ ರಾಮನಗರಕ್ಕೆ ಹೋಗೋಣ್ವಾ.. ರಾಮದೇವರ ಗುಡ್ಡ.. ಶ್ರಾವಣ ಶನಿವಾರ..

ಎರಡನೇ ಮಾತಿಲ್ಲದೆ ಓಕೆ ಅಂದಿದ್ದೆ.. ಶಶಿ ಮತ್ತು ಅಕ್ಕಯ್ಯ ಬರ್ತೀವಿ ಅಂತ ಆಯ್ತು.. ಸರಿ.. ವೆಂಕಿ ಮನೆಗೆ ಹೋದೆ .. (ಸರಿಯಾದ ಸಮಯಕ್ಕೆ ಅಂದ್ರಾ.. ಚಾನ್ಸ್ ಇಲ್ಲ.. ನನ್ನ ಸಮಯ ಸರಿಯಾಗಿದೆಯೋ ಇಲ್ವೋ.. ಆದರೆ ಈ ನನ್ನ ಗೆಳೆಯರ ಕಾರ್ಯಕ್ರಮಕ್ಕೆ ಏನಾದರೂ ವಿಘ್ನ ಇದ್ದೆ ಇರುತ್ತೆ.. ) ಹೋದ ಕೂಡಲೇ ತೀರ್ಥ ಪ್ರಸಾದ ಮುಗಿದಿತ್ತು.. ನನಗೆ ಸಹಸ್ರನಾಮ ಅರ್ಚನೆ ಆಯ್ತು..

ಹಲ್ಲು ಬಿಟ್ಟು ಸ್ವೀಕರಿಸಿ.. ಶಶಿಯ ಕಾರು ರಾಮನಗರದ ಕಡೆಗೆ ದೌಡಾಯಿಸಿತು.. ಇನ್ನೇನು ದಾರಿಯುದ್ದಕ್ಕೂ ನಮ್ಮ ತರಲೆ ಮಾತುಗಳು ಅಕ್ಕಯ್ಯನ ಕೈಲಿ ಒದೆಗಳು.. ಶಶಿಯ ಸ್ಪಾಟ್ ಆನ್ ಮಾತುಗಳು.. ವೆಂಕಿಯ ತರಲೆ.. ಇದ್ದೆ ಇದ್ದವು..

ಮಾತಿಲ್ಲದೆ ಹೋದರೆ ಅದು ಪ್ರವಾಸವೇ.. ನನ್ನ ಭಾಗ್ಯ ನನಗೆ ಸಿಗೋರೆಲ್ಲ ಸೊಗಸಾಗಿ ಮಾತಾಡೋರೇ.. ಹಾಗಾಗಿ ನಾ ಆರಾಮು..
ಹೆಬ್ಬಾಗಿಲಿನಲ್ಲಿ ಹರಸಿದ ಹನುಮ 

ರಾಮನಗರದ ಹೆದ್ದಾರಿಯಲ್ಲಿ ದೊಡ್ಡ ಹನುಮನ ವಿಗ್ರಹ ಹೊಂದಿರುವ ಹೆಬ್ಬಾಗಿಲು ನಮಗೆ ಸ್ವಾಗತಿಸಿತು.. ವೆಂಕಿ ಸ್ಥಳೀಯ ಆಗಿದ್ದರಿಂದ.. ಅವ "ಶಶಿ ಕಾರನ್ನು ಇಲ್ಲೇ ಹಾಕು .. ಮುಂದೆ ಹೋಗೋಕೆ ಕಷ್ಟ.. ಸಿಕ್ಕಾಪಟ್ಟೆ ಕಾರುಗಳು, ವಾಹನಗಳು ಇರ್ತವೆ.. . " ಸ್ವಲ್ಪ ವಾದವಿವಾದ ಆಯ್ತು.. ಕಡೆಗೆ ಸಾಮಾನ್ಯ ವೆಂಕಿಯ ಪ್ಲಾನ್ ಯಶಸ್ವೀ ಯಾಗೋದು ಇತ್ತೀಚಿಗೆ ಪಕ್ಕ ಇತ್ತು. .. ಹಾಗಾಗಿ ಅವನ ತರ್ಕಕ್ಕೆ ತಲೆ ಬಾಗಿ.. ಆಟೋ ಹಿಡಿದೆವು.. ಮತ್ತೆ ವೆಂಕಿಯ ಪ್ಲಾನ್.. ಆಟೋ ಚಾಲಕನ ಜೊತೆ ಕಚಪಚ.. ..  ದಾರಿಯುದ್ದಕ್ಕೂ ಜನಜಾತ್ರೆ.. ಗಾಡಿಗಳು.. ಕಾರುಗಳು ದೌಡಾಯಿಸುತ್ತಿದ್ದವು..
ಹನುಮಂತ  ರಾಯ ಮಳೆರಾಯನ 
ಜೊತೆಯಲ್ಲಿ ಮಿಂದ ಕ್ಷಣ 

ರಾಮದೇವರ ಬೆಟ್ಟದ ಬಾಗಿಲಿಗೆ ಬಂದಾಗ.. ಅರಿವಾಯಿತು.. ಆಟೋದಲ್ಲಿಯೇ  ಒಳ್ಳೆದಾಯ್ತು ಅಂತ.. ವೆಂಕಿಯ ಕಡೆಗೆ ನೋಡಿದರೆ ಅವ ಹೊಗಳಿಕೆಯಿಂದ ಮರ ಹತ್ತಿಬಿಡುತ್ತಾನೆ ಎಂಬ ಭಯದಿಂದ.. ಮನದಲ್ಲಿಯೇ ಅವನಿಗೆ ಅಭಿನಂದನೆ ಸಲ್ಲಿಸಿದೆವು.

ಜನಸಾಗರ 
ಮೆಟ್ಟಿಲುಗಳ ರಾಶಿಯನ್ನು ಹತ್ತಿ ಹೋಗುವಾಗ.. ನಗು, ಮಾತು, ಕಿಚಾಯಿಸುವಿಕೆ.. ಅಕ್ಕಯ್ಯನಿಂದ ಹೊಡೆತ ಎಲ್ಲವೂ ಅವಿರತವಾಗಿ ಸಾಗುತ್ತಿತ್ತು.. ಜೊತೆಯಲ್ಲಿ ನನ್ನ ಕ್ಯಾಮೆರಾ ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡುತಿತ್ತು..

ರಾಮದೇವರ ದರ್ಶನ ಮಾಡಿ.. ವೆಂಕಿ ಕೊಟ್ಟ ದುಡ್ಡಿನಿಂದ ಭಕ್ತಿಯ ದಾರವನ್ನು ಕೈಗೆ ಕಟ್ಟಿಸಿಕೊಂಡು.. ಹೊರಗೆ ಬಂದಾಗ.. ಪ್ರಸಾದ ಕಾಯುತಿತ್ತು.. ಪ್ರಸಾದವನ್ನು ಪಡೆದು.. ಮೇಲಿನ ಬೆಟ್ಟದ ಹಾದಿಯಲ್ಲಿ ಒಂದು ಹೆಬ್ಬಂಡೆಯ ಮೇಲೆ ಕೂತು.. ಪ್ರಸಾದವನ್ನು ಗುಳುಂ ಸ್ವಾಹಾ ಮಾಡಿ.. ಮತ್ತೆ ಒಂದಷ್ಟು ಫೋಟೋಗಳು ಮೂಡಿದವು..
ಪ್ರಸಾದ ಮುಕ್ಕುವ ಸಮಯ 

ಅಣ್ಣಯ್ಯ ಇವರ  ಯಶಸ್ಸಿನ ಹಿಂದೆ ಇರೋದು  ನಾನೇ 

 ಸೂಪರ್ ಜೋಡಿ ಶಶಿ ಪ್ರತಿಭಾಕ್ಕಯ್ಯ 

ತ್ರಿಮೂರ್ತಿ ಶ್ರೀ ಶಶಿ ವೆಂಕಿ 

ತುಂಬಾ ಜನವಿದ್ದರಿಂದ.. ಪೊಲೀಸರು ಒಂಟಿ ಕಂಬಿ ಬೆಟ್ಟದ ನೆತ್ತಿಗೆ ಹತ್ತಲು ಅವಕಾಶ ನಿರ್ಬಂಧಿಸಿದ್ದರು.. ಹಾಗಾಗಿ ಅಲ್ಲಿಯೇ ಕೂತು ಇನ್ನಷ್ಟು ಮಾತುಗಳನ್ನು ಮುಗಿಸಿ.. ಬೆಟ್ಟದ ಬುಡಕ್ಕೆ ಇಳಿಯಲು ಶುರು ಮಾಡಿದೆವು..

ಆಗ ಒಂದು ಆಶ್ಚರ್ಯಕರ ಘಟನೆ ನೆಡೆಯಿತು.. ಕಾಲೇಜು ದಿನಗಳಲ್ಲಿ ರಸ್ತೆ ಬದಿಯ ತಿಂಡಿ ತಿನಿಸುಗಳನ್ನು ತಿಂದು ಅರಗಿಸಿಕೊಳ್ಳುತಿದ್ದ ದೇಹ..  ನಮಗೂ ವಯಸ್ಸಾದಂತೆ (ಕೆಲವು ಒಪ್ಪಿಕೊಳ್ಳೋಲ್ಲ.. ವಯಸ್ಸಾಗಿದೆ ಎಂದು) ಅದನ್ನು ಕಡಿಮೆ ಮಾಡಿದ್ದು ಸುಳ್ಳಲ್ಲ.. ಆದರೆ ಅಲ್ಲಿದ್ದ ಬೋಂಡಾದ ವಾಸನೆ ವೆಂಕಿಯನ್ನು ಎಳೆಯಿತು. "ಶ್ರೀಕಿ ಒಂದಷ್ಟು ಬೋಂಡಾ ತಿನ್ನೋಣ" ಅನ್ನುತ್ತಾ ಬಿಸಿ ಬಿಸಿ ಬೋಂಡಾ ಮುಕ್ಕಿದೆವು.. ಕಡಲೆ ಪುರಿ ಕೊಂಡೆವು.. ಯಾಕೋ ಬೋಂಡಾದ ರುಚಿಗೆ ನಾಲಿಗೆ ಶರಣಾಗಿತ್ತು.. ಇನ್ನೊಂದು ಮೂವತ್ತು ರೂಪಾಯಿಗಳಿಗೆ ಬೋಂಡಾ ಕೊಂಡು.. ಕೆಳಗೆ ಇಳಿದೆವು..











ನಾವು ಕೆಳಗೆ ಇಳಿದೆವು.. ತಿಂದಿದ್ದು ಹೊಟ್ಟೆಯೊಳಗೆ ಆರಾಮಾಗಿ ನುಸುಳಿತ್ತು..

ದಾರಿಯುದ್ದಕ್ಕೂ ಮಳೆ ಬಂದು ರಾಡಿಯಾಗಿದ್ದ ರಸ್ತೆಯಾಗಿದ್ದರೂ ತಲೆ ಕೆಡಿಸಿಕೊಳ್ಳದೆ ಆರಾಮಾಗಿ ಹೆಜ್ಜೆ ಹಾಕಿದೆವು.. ಅಲ್ಲೀತನಕ ಕಣ್ಣ ಮುಚ್ಚಾಲೆ ಆಡುತ್ತಿದ್ದ ಮಳೆರಾಯ.. ಹಠಾತ್ "ಹೋಗಲೇ ಇನ್ನು ತಡೆಯೋಕೇ ಆಗೋಲ್ಲ" ಎನ್ನುವ ಮಗುವಿನಂತೆ ರಚ್ಚೆ ಹಿಡಿದು ಸುರಿಯತೊಡಗಿದ.. ಆಟೋದಲ್ಲಿ ಕೂತಿದ್ದರು ಇರುಚಲು ಮಳೆಯಿಂದಾಗಿ ವೆಂಕಿ ಒಂದು ಬದಿಯಲ್ಲಿ ತೋಯ್ದು ತೊಪ್ಪೆಯಾಗಿದ್ದ..

ಅಲ್ಲಿಂದ ಸೀದಾ ವೆಂಕಿಯ ಮನೆಗೆ ಹೋಗಿ.. ಅವರ ಅಮ್ಮನ ಉಭಯಕುಶಲೋಪರಿ ವಿಚಾರಿಸಿ.. ಅವರ ಜೊತೆಯಲ್ಲಿ ಒಂದಷ್ಟು ಹರಟಿ.. ಬೆಂಗಳೂರಿನ ಕಡೆಗೆ ಹೊರಟೆವು..

ಬಿಡದಿ ದಾಟಿ ಆನಂದ್ ಆಡ್ಯಾರ್ ಭವನದಲ್ಲಿ ಊಟಕ್ಕೆ ಬಂದೆವು.. ಊಟ ಬೇಡ ಅಂತ ಒಬ್ಬರು.. ಊಟವಿರಲಿ ಅಂತ ಒಬ್ಬರು.. ಹೀಗೆ ಎರಡು ಪಕ್ಷವಾದ್ದರಿಂದ.. ಯಥಾಪ್ರಕಾರ ಊಟದಲ್ಲಿ ಎತ್ತಿದ ಕೈಯಾದ ವೆಂಕಿ ಮತ್ತು ನಾನು ಊಟ ಕೊಂಡೆವು.. ಶಶಿ ಮತ್ತು ಅಕ್ಕಯ್ಯ ತಮಗಿಷ್ಟವಾದ ತಿಂಡಿ ಬಾರಿಸಿದರು..

ನಾ ಊಟದಲ್ಲಿ ನಿಧಾನ.. " ನಿನ್ನ ಹೊಟ್ಟೆ ಸೇದೋಗ .. ಆರಾಮಾಗಿ ತಿನ್ನು.. ಒಂದು ಚೂರು ಬಿಡಬೇಡ" ಅಂತ ವೆಂಕಿಯ ಮಾತಿಗೆ ಬೆಲೆಕೊಟ್ಟು.. ಸಾವಕಾಶವಾಗಿ ತಿಂದು ಮುಗಿಸಿದೆ..

ವೆಂಕಿ  ಬಿಡೋದು ಹಲ್ಲು ಹಿಂಗೇ 

ನಾಚಿ ನೀರಾದ 

ವಯಸ್ಸಾದರೇನಂತೆ ಮನ ಯಾವತ್ತೂ ಮಂಗವೇ ಅಲ್ವೇ 

ಮತ್ತೆ ಕಾರಿಗೆ ಬಂದು ಕೂತಾಗ ಬೆಂಗಳೂರಿನ ಕಡೆಗೆ ಮನ ಎಳೆಯುತ್ತಿತ್ತು .. ಅದೇ ಗುಂಗಿನಲ್ಲಿ ವೆಂಕಿ ಮನೆಗೆ ಬಂದು.. ಒಂದಷ್ಟು ಹೊತ್ತು ಹಲ್ಲು ಬಿಟ್ಟು.. ಮನೆ ಕಡೆ ಹೊರಟೆವು..

ತಮಾಷೆ ಅಂದರೆ.. ಈ ವರ್ಷ ಶ್ರಾವಣ ಮಾಸದ ಮೊದಲ ಶನಿವಾರ ಮತ್ತು ಕಡೆಯ ಶನಿವಾರ ಜೀವದ ಗೆಳೆಯರ ಜೊತೆಯಲ್ಲಿ ಕಳೆದದ್ದು..

ಅದು ಖುಷಿ ಕೊಡುವ ಸಂಗತಿ.. ಜೊತೆಯಲ್ಲಿ ಸುಮಾರು ಮೂರು ತಿಂಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಈ ಪ್ರವಾಸ ಮಾಲಿಕೆ.. ಶಶಿ ಮತ್ತು ಅಕ್ಕಯ್ಯನವರ ವಿವಾಹ ಸಂಭ್ರಮದ ಶುಭ ಸಮಯಕ್ಕೆ ಮೂಡಿ ಬಂದಿದ್ದು ಸೋನೇ ಫೆ ಸುಹಾಗ್ ಎನ್ನುವಂತೆ ಬಂದಿದೆ..





ಅಕ್ಕಯ್ಯ ಶಶಿ ೨೧ ಸಂಭ್ರಮದ ವರ್ಷದಿಂದ ಇಪ್ಪತ್ತೆರಡನೆ ವರ್ಷಕ್ಕೆ ಕಾಲಿಟ್ಟಿರುವ ನಿಮ್ಮ ದಾಂಪತ್ಯದಲ್ಲಿ ಸೌಖ್ಯ, ನೆಮ್ಮದಿ, ಶಾಂತಿ ಎಲ್ಲವೂ ನಿಮಗಿರಲಿ.. ನೀವು ನೆಡೆಯುವ ಹಾದಿಯಲ್ಲಿ ಬರುವ ಸಂತಸ, ನಗು, ಉಲ್ಲಾಸ, ಉತ್ಸಾಹಗಳನ್ನು ನೋಡುವ ಸೌಭಾಗ್ಯ ನಮಗೆ ಸದಾ ಇರಲಿ..

ವಿವಾಹ ಸಂಭ್ರಮದ ಶುಭಾಶಯಗಳು!!!

4 comments:

  1. ಮೊದಲನೆಯದಾಗಿ, ಅಕ್ಕಯ್ಯ ಹಾಗು ಶಶಿಯವರಿಗೆ ನಾನೂ ಸಹ ಶುಭಾಶಯಗಳನ್ನು ಕೋರುತ್ತಿದ್ದೇನೆ. ಎರಡನೆಯದಾಗಿ ನಿಮ್ಮ ಆಪ್ತ ಬರಹ, ನಡುನಡುವೆ ವಿನೋದದ ವ್ಯಂಜನ ಇವು ತುಂಬಾ ಖುಶಿ ಕೊಟ್ಟವು.

    ReplyDelete
    Replies
    1. ಧನ್ಯವಾದಗಳು ಗುರುಗಳೇ. ಸೊಗಸಾದ ಪ್ರತಿಕ್ರಿಯೆ.. ಓದಿದ್ದಕ್ಕೆ ಧನ್ಯವಾದಗಳು 

      Delete
  2. ಅನುಭವಿಸಿದ ಕ್ಷಣಗಳೋ ಇಲ್ಲ ಶ್ರೀಕಿಯ ಚಿತ್ರಿಸಿದ ಕ್ಷಣಗಳೋ ಯಾವುದು ಹೆಚ್ಚು ಸುಂದರವೋ ನನಗಂತೂ ಹೇಳಲಾಗುತ್ತಿಲ್ಲ

    ReplyDelete
    Replies
    1. ಕ್ಷಣಗಳು ಸುಂದರವಾಗಿರೋದು ಸುಂದರವಾಗೋದು ಜೊತೆಗಾರರಿದ್ದಾಗ ಇಂತಹ ಕ್ಷಣಗಳು ಸಿಗುತ್ತದೆ.. ಧನ್ಯವಾದಗಳು ಶಶಿ 

      Delete