Thursday, November 7, 2019

ಮಿಂಚಿನ ಪ್ರೀತಿ ...!

ಬಣ್ಣ ಬಣ್ಣದ ಕನಸುಗಳು.. ತಾನು ಎಲ್ಲರಂತೆ ಇರಬೇಕು.. ಓಡಾಡಬೇಕು ಎನ್ನುವ ಹಂಬಲ.. ತಾನು ಸುಂದರನಲ್ಲದಿದ್ದರೂ, ಸುಂದರಿಯೇ ತನಗೆ ಸಿಗುತ್ತಾಳೆ ಎನ್ನುವ  ನಂಬಿಕೆ.. ಪ್ರತಿದಿನ ಕನ್ನಡಿಯಲ್ಲಿ ತನ್ನನ್ನೇ ನೋಡಿಕೊಂಡಾಗ ಅನಿಸುತ್ತಿದ್ದ ಮಾತುಗಳು..
ಇಪ್ಪತೆಂಟು ವರ್ಷ. ಮದುವೆ ಆಗುವ ವಯಸ್ಸು ಅಂತಲೂ ಅಲ್ಲ.. ಲೈಫಲ್ಲಿ ಸೆಟಲ್ ಆಗಿರಬೇಕು ಎನ್ನುವ ತುರ್ತು ಪರಿಸ್ಥಿತಿಯೂ ಅಲ್ಲದ ನಟ್ಟ ನಡುವಿನ ಕಾಲಘಟ್ಟ..
ವಿಶ್ವಾಸ್ ಮನದಲ್ಲಿ ದಿನಂಪ್ರತಿ ಹಾದು ಹೋಗುತ್ತಿದ್ದ ಮಾತುಗಳಿಗೆ ಅಷ್ಟೊಂದು ತೂಕ ಕೊಡುತ್ತಿಲ್ಲದ ಕಾರಣ.. ಆ ಭಾವಗಳು ಬರುತ್ತಿದ್ದವು, ಒಂದಷ್ಟು ಗಲಿಬಿಲಿ ಮಾಡಿ.. ಹೋಗುತ್ತಿದ್ದವು..

ತನ್ನ ಆಫೀಸಿನ ಕ್ಯಾಬ್ ಬೆಳಿಗ್ಗೆ ೫..೩೦ಕ್ಕೆ ಬರುತ್ತಿದ್ದರಿಂದ.. ಬೆಳಿಗ್ಗೆ ತುಸು ಬೇಗನೆ ತನ್ನೆಲ್ಲ ಕೆಲಸ ಮುಗಿಸಿ ತರಾತುರಿಯಲ್ಲಿ ಹೊರಡುತ್ತಿದ್ದ... ತನ್ನ ಸ್ಟಾಪಿನ ಬಳಿ ನಿತ್ಯವೂ ಒಂದು ಹುಡುಗಿ ತನ್ನನ್ನೇ ಗಮನಿಸುತ್ತಿದ್ದನ್ನು ಕಂಡು ಕಾಣದಂತೆ ಇವನು ಗಮನಿಸ ತೊಡಗಿದ.. ವಿಶ್ವಾಸ್ ಇವತ್ತು ಹಾಕಿದ್ದ ಬಟ್ಟೆಯ ಬಣ್ಣವನ್ನು ಅವಳು ಮಾರನೇ ದಿನ ಮ್ಯಾಚ್ ಮಾಡುತ್ತಿದ್ದಳು.. ಮೊದಲಿಗೆ ಇದು ಕಾಕತಾಳೀಯ ಅನಿಸಿದರೂ.. ಬರು ಬರುತ್ತಾ ಇದು ನಿಜವಾಗಿಯೂ ನೆಡೆಯತೊಡಗಿತು...
ಒಂದಷ್ಟು ದಿನ.. ತನ್ನ ಅಪ್ಪ ಅಮ್ಮನನ್ನು ನೋಡಲು ಚಿಕ್ಕಮಗಳೂರಿಗೆ ಹೊರಟಿದ್ದ.. ಅವನಿಗೆ ಗೊತ್ತಿತ್ತು ಇನ್ನು ಒಂದು ವಾರ ಅವಳನ್ನು ನೋಡಲು ಆಗದು ಎಂದು.. ಅದಕ್ಕೆ ಅವಳನ್ನು ಸದಾ ಮನತುಂಬುವಷ್ಟು ನೋಡೇ ಬಿಡುವ ಎಂದು.. ಮೊಬೈಲ್ ತೆಗೆದು ಏನೋ ಪರೀಕ್ಷಿಸುವಂತೆ ನಟಿಸುತ್ತಾ.. ಅವಳು ನಿಂತಿದ್ದ ತಾಣವನ್ನು ಸೆರೆಹಿಡಿದೆ ಬಿಟ್ಟಾ.. ಹೊಚ್ಚ ಹೊಸದಾದ ಮೊಬೈಲ್.. ೨೪ಎಂಪಿ ಕ್ಯಾಮೆರಾ.. ಒಳ್ಳೆಯ ಜೂಮ್ ಇದ್ದ ಕ್ಯಾಮೆರಾ... ಮೊದಲೇ ಸುಂದರಿಯಾಗಿದ್ದ ಅವಳನ್ನು ಯಥಾವತ್ತಾಗಿ ಚಿತ್ರಿಸಿತ್ತು..

ಊರಿಗೆ ಹೋಗುವ ಬಸ್ಸಿನಲ್ಲಿ, ಅವಳ ಚಿತ್ರವನ್ನು ಒಂದಷ್ಟು ಕ್ರಾಪ್ ಮಾಡಿ.. ಫ್ರೇಮಿನಲ್ಲಿದ್ದ ಬೇಡದ ಭಾಗವನ್ನು ತೆಗೆದು ಅವಳು ಸ್ಪಷ್ಟವಾಗಿ ಕಾಣುವಂತೆ ಮಾಡಿಕೊಂಡ.. ಅವಳ ಸೌಂದರ್ಯವನ್ನು ವರ್ಣಿಸಬೇಕು ಎನ್ನುವ ಕಾತುರತೆ ಇದ್ದರೂ.. ಮನಸ್ಸಿಗೆ ಬಂತು.. ಅವಳ ಜೊತೆ ಮಾತಾಡಿ, ಅವಳನ್ನು ಒಪ್ಪಿಸಿದ ಮೇಲೆ.. ಅವಳ ಎದುರಿಗೆ ಅವಳ ಸೌಂದರ್ಯವನ್ನು ಬಣ್ಣಿಸೋಣ ಎಂದು ಮನದಲ್ಲಿಯೇ ಅಂದುಕೊಂಡು.ಅವಳ ಚಿತ್ರ ನೋಡುತ್ತಲೇ ಊರು ಸೇರಿದ್ದ..

ಬೆಟ್ಟ ಗುಡ್ಡಗಳು, ಹಳ್ಳಿಯ ತಿಳಿಯಾದ ಕಲ್ಮಶ ರಹಿತ ವಾತಾವರಣ.. ತಿಳಿ ನೀರು, ಸಿಹಿ ಗಾಳಿ, ಪ್ರಿಯ ತನ್ನ ಪ್ರಿಯತಮೆಯ ಕೆನ್ನೆಗೆ ಮುತ್ತಿಡುವಂತೆ ಕಾಣುತ್ತಿದ್ದ ಮೋಡಗಳು ಗಿರಿಯನ್ನು ಚುಂಬಿಸುವ ದೃಶ್ಯಗಳು.. ಕೆಲಸದ ಜಂಜಾಟವನ್ನು ಮರೆಯುವಂತೆ ಮಾಡಿತ್ತು.. ಹಾಗೆಯೇ ಮೊಬೈಲಿನಲ್ಲಿದ್ದ ದೇವತೆಯೂ ಕೂಡ :-)

ಒಂದು ವಾರ ಕಳೆದದ್ದು ಗೊತ್ತಾಗಲೇ ಇಲ್ಲದಷ್ಟು ಮನಸ್ಸು ಹಗುರಾಗಿತ್ತು.. ಮಾರನೇ ದಿನ ರಾತ್ರಿ ಊರಿಗೆ ಹೊರಡಬೇಕು.. ಸಿದ್ಧತೆ ಮಾಡಿಕೊಳ್ಳುತಿದ್ದ.. ಅವನ ಅಮ್ಮ ಬಟ್ಟೆಬರೆಗಳನ್ನು ಒಪ್ಪವಾಗಿ ಒಗೆದು ಇಸ್ತ್ರಿ ಮಾಡಿ.. ಅವನ ಬ್ಯಾಗಿಗೆ ಇಡುತ್ತಿದ್ದಳು.. ರಾಗಿ ಮುದ್ದೆ, ಸೊಪ್ಪಿನ ಸಾರು, ಕೆಂಪು ಅಕ್ಕಿಯ ಅನ್ನ, ನೆಂಚಿಕೊಳ್ಳೋಕೆ ಈರುಳ್ಳಿ, ಉಪ್ಪಿನಕಾಯಿ. ಹಪ್ಪಳ, ಸಂಡಿಗೆ, ಬಾಳ್ಕ ಮೆಣಸಿನ ಕಾಯಿ.. ಎಲ್ಲವೂ ಅನುದಿನವೂ ಅವನ ಹೊಟ್ಟೆಯ ಸೇರಿ.. ಬದುಕು ಹೀಗೆ ಇದ್ದರೇ ಚೆನ್ನ ಅನ್ನಿಸುವಷ್ಟು ಸೊಗಸು ಕಾಣುತ್ತಿತ್ತು...

ಬೆಳಿಗ್ಗೆ ಎದ್ದು "ಅಮ್ಮ ರತ್ನಗಿರಿ ಬೋರೆಯ ತನಕ ಹೋಗಿ ಬರುತ್ತೇನೆ.. ಬಂದ ಮೇಲೆ ಕಾಫಿ ಕುಡಿಯುತ್ತೇನೆ.. ರಾತ್ರಿ ಬಸ್ಸಿಗೆ ಹೋಗೋದು"  ದಿನ ನಿತ್ಯದ ಮಾತಿನ ಧಾಟಿಯಲ್ಲಿಯೇ ಹೇಳಿ ಹೊರಟ.. ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್, "ಆಪ್ನ ಟೈಮ್ ಆಯೇಗಾ.. ನಹಿ.. ಜರೂರ್ ಆಯೆಗೆ" ಅಂತ ಪದಗಳಿದ್ದ ಬಿಳಿ ಬಣ್ಣದ ಟೀ ಶರ್ಟ್, ಕಾಲಿಗೆ ಹವಾಯ್ ಚಪ್ಪಲಿ ಮೆಟ್ಟಿಕೊಂಡು.. ಮನೆಯಿಂದ ಸುಮಾರು ಹತ್ತು ಕಿಮಿ ದೂರವಿದ್ದ ರತ್ನಗಿರಿ ಬೋರೆಗೆ ತನ್ನ ಇಷ್ಟವಾದ ರಾಯಲ್ ಎಂಫಿಎಲ್ಡ್ ಬುಲೆಟ್ ತೆಗೆದುಕೊಂಡು ಹೊರಟ..

ಬೆಟ್ಟದ ತುದಿಯಲ್ಲಿ ಕೂತು.. ಬಾನಿನ ರಂಗನ್ನು ನೋಡುತ್ತಾ ಕುಳಿತಿದ್ದ.. ಮೈಮರೆತಿದ್ದ.. ಹಕ್ಕಿಗಳ ಕಲರವ.. ತಣ್ಣನೆ ಗಾಳಿ.. ಅವನ ಜೋಂಪು ಕೂದಲು ಹಾರಾಡುತ್ತಲೇ ಇತ್ತು.. ಚಳಿ ಎನಿಸಿದರೂ, ಬಿಡು ಪರವಾಗಿಲ್ಲ ಎನ್ನುವ ಹಾಗೆ ಹಿತಕರವಾಗಿತ್ತು.. ಆದ್ದರಿಂದ ಸುಮ್ಮನೆ ಅಗಸ ನೋಡುತ್ತಾ ಹಾಗೆ ಕಲ್ಲು ಬೆಂಚಿನ ಮೇಲೆ ಮಲಗಿದ..

ಸುಮಾರು ಹೊತ್ತು ಕಣ್ಣಾಲಿಗಳು ಹಾಗೆ ಮುಚ್ಚಿಕೊಂಡಿದ್ದವು.. ಕಣ್ಣಿನ ಪರದೆಯ ಮೇಲೆ... ಬಿಳಿ ಬಣ್ಣದ ಟೀ ಶರ್ಟ್ ತೊಟ್ಟು.. ಕಪ್ಪನೆಯ ಪ್ಯಾಂಟ್ ತೊಟ್ಟು, ನೀಳಗೂದಲನ್ನು ಗಾಳಿಗೆ ಹರಿಯ ಬಿಟ್ಟು.. ಗಾಳಿಯಿಂದ ಪದೇ ಪದೇ ಮುಖದ ಮೇಲೆ ಕೂದಲುಗಳು ಹರಡಿಕೊಳ್ಳುತ್ತಿದ್ದರೂ ನವಿರಾಗಿ ಕಿವಿಯ ಹಿಂದಕ್ಕೆ ಸಿಕ್ಕಿಸಿಕೊಳ್ಳುತ್ತಲೇ ಇದ್ದ ಹುಡುಗಿ.. ಟೀ ಶರ್ಟ್ ಮೇಲೆ.. "ಅಬೆ.. ಹಮಾರಾ ಟೈಮ್ ಆಗಯಾ ಹೈ" ಎನ್ನುವ ಪದಗಳ ಗುಚ್ಛ.. ಇದೆ ಗುಂಗಿನಲ್ಲಿ ಮಲಗಿದ್ದ.. ಅಕ್ಷರಶಃ ನಿದ್ದೆಯೇ ಮಾಡಿ ಬಿಟ್ಟಿದ್ದ..!

"ರೀ ಮಿಸ್ಟರ್.. ನಿದ್ದೆ ಮಾಡೋಕೆ ಬೇರೆ ಜಾಗವಿಲ್ಲವೇನ್ರಿ.. ಓಡಾಡೋ ತಾಣವಿದು.. ಸುಸ್ತಾಗಿದ್ದರೇ ಮನೆಗೆ ಹೋಗಿ ಮಲಗಿಕೊಳ್ಳಿ.. " ಕೋಲಿನ ತುದಿ ತನ್ನ ಮೈಸೋಕಿದಾಗ ಎಚ್ಚರವಾಯ್ತು..
ಕಣ್ಣು ಬಿಟ್ಟು ನೋಡಿದಾಗ.. ಆ ಗಿರಿ ಉದ್ಯಾನವನದ ಮಾಲಿ ... ಎಬ್ಬಿಸುತ್ತಿದ್ದ.. "ಒಹ್ ಗಿರಿಯಪ್ಪ.. ಈ ಗಾಳಿಗೆ ನಿದ್ದೆಯೇ ಬಂದಿತ್ತು.. "..

"ಒಹೋ ವಿಶ್ವಾಸಪ್ಪ ನೀವಾ.. ಮುಖದ ಮೇಲೆ ಕರ್ಚಿಫ್ ಹಾಕಿಕೊಂಡ್ರಿ ಗೊತ್ತಾಗಲೇ ಇಲ್ಲ.. ಊಒ ಸರಿ ವಿಶ್ರಾಂತಿ ತಗಳ್ಳಿ.."ಎಂದು ಮುಂದೆ ಹೋದ ಗಿರಿಯಪ್ಪ!
ಎಚ್ಚರವಾದ ಮೇಲೆ.. ಮತ್ತೆ ನಿದ್ದೆ ಬರುತ್ತದೆಯೇ.. ಸರಿ ಎದ್ದು ನಿಂತ.. ಜೋರಾಗಿ ಮೈಮುರಿದು.. ಕತ್ತಿನ ನೆಟಿಗೆಯನ್ನು ಮುರಿದು.. ಕೈಕಾಲುಗಳನ್ನು ಜೋರಾಗಿ ಜಾಡಿಸಿ.. ಮೆಲ್ಲನೆ ತನ್ನ ಬೈಕ್ ಕಡೆಗೆ ಹೊರಟ..

ತೆಳ್ಳಗಾಗಬೇಕೇ, ದಪ್ಪಗಾಗಬೇಕೆ.. ಅಜೀರ್ಣವೇ.. ಎಂಬಿಎ ಮಾಡಬೇಕೆ.. ಹೀಗೆ ಹತ್ತಾರು ಜಾಹಿರಾತುಗಳ ಫ್ಲೈಯರ್ ಬೈಕುಗಳಿಗೆ ಸಿಕ್ಕಿಸುವುದು ಮಾಮೂಲು.. ಒಂದು ಪೋಸ್ಟಿಟ್.. ಪೆಟ್ರೋಲ್ ಟ್ಯಾಂಕಿಗೆ ಅಂಟಿಕೊಂಡಿತ್ತು.. ತುದಿಯಲ್ಲಿ ಮಾತ್ರ ಗಮ್ ಇದ್ದದ್ದರಿಂದ.. ಮಿಕ್ಕ ಭಾಗ ಗಾಳಿಗೆ ಹಾರುತ್ತಿತ್ತು.. ಲೇ ನನ್ನ ನೋಡು ಎಂದು ಕೂಗಿ ಕೂಗಿ ಹೇಳುವಂತೆ ಭಾಸವಾಗುತಿತ್ತು..
ಅದರಲ್ಲಿ ಬರೆದ ಸಾಲುಗಳು "ವಿಶ್ವಾಸ್.. ಹಮಾರಾ ಟೈಮ್ ಆಗಾಯ ಹೈ.... ಯಕೀನ್ ನಹಿ ಆತಾ?.. ಟೌನ್ ಕ್ಯಾಂಟೀನ್ ಮೇ ಆಜಾವ್..  ಟೇಬಲ್ ೮.. ಪೇ "

ಏನಪ್ಪಾ ಇದು ವಿಚಿತ್ರ.. ಎಂದುಕೊಂಡು.. ದಿನವೂ ಅಲ್ಲಿಗೆ ಹೋಗಿ ಬರುತ್ತಿದ್ದ.. ಬೆಣ್ಣೆ ಮಸಾಲೆ ದೋಸೆ ಬಹಳ ಪ್ರಸಿದ್ಧಿ... ಅದು ತಿಂದುಕೊಂಡೆ ಮನೆಗೆ ಹೋಗುತ್ತಿದ್ದದ್ದು.. ಹಾಗಾಗಿ ಯಥಾ ಪ್ರಕಾರ ಅಲ್ಲಿಗೆ ಹೊರಟ.. ಮತ್ತೆ ಟೇಬಲ್ ೮ ರಲ್ಲಿಯೇ ದಿನವೂ ಕೂರುತ್ತಿದ್ದದ್ದು..

ನೀಳಗೂದಲಿನ ಬಿಳಿ ಬಣ್ಣದ  ಟೀ ಶರ್ಟ್ ತೊಟ್ಟಿದ್ದ ಲಲನಾಮಣಿ ಕೂತಿದ್ದಳು.. ಅಯ್ಯೋ ಇವತ್ತು ನನ್ನ ಟೇಬಲ್ ನನಗಿಲ್ಲವೇ ಎಂದು.. ಅದರ ಪಕ್ಕದ ಟೇಬಲಿನಲ್ಲಿ ಕೂತು..ಮಾಣಿಗೆ ಮಾಮೂಲಿ ಎನ್ನುವಂತೆ ಸನ್ನೆ ಮಾಡಿ.. ಮೊಬೈಲ್ ತೆಗೆದು ವಾಟ್ಸಾಪ್ ಸಂದೇಶಗಳಿಗೆ ಉತ್ತರ ಕೊಡುತ್ತ ಇದ್ದಾಗ ಟನ್ ಅಂತ ಒಂದು ಸಂದೇಶ "ಅಲ್ರಿ ನಾ ಕೂತಿರುವ ಟೇಬಲಿಗೆ ಬಂದರೆ. ಮಸಾಲೆ ದೋಸೆ ಜೊತೆಯಲ್ಲಿ ನಿಮ್ಮನ್ನು ತಿಂದು ಬಿಡ್ತೀನಾ..?.. ಜೊತೆಯಲ್ಲಿ ನಾಲಿಗೆ ಹೊರಚಾಚಿದ ಎಮೋಜಿ..
ಪಕ್ಕನೆ ತಿರುಗಿ ನೋಡಿದ.. ಅರೆ ನನ್ನ ಕನಸಿನ ಕನ್ಯೆ ಇವಳೇ.. ಕಣ್ಣುಜ್ಜಿಕೊಂಡ.. "ಕನಸೇನು ಇಲ್ಲಾರಿ.. ಇಲ್ಲಿಗೆ ಬನ್ನಿ.. ಆಗಲೇ ನಿಮ್ಮ ಪ್ರೀತಿಯ ಮಾಣಿಗೆ ನಿಮ್ಮ ಆರ್ಡರ್ ಸೇರಿಸಿ ನನ್ನದು ಹೇಳಿದ್ದೀನಿ.. ಬನ್ನಿ ಬನ್ನಿ"  ಆ ಹುಡುಗಿ ಇವನನ್ನು ಪೂರ್ತಿಅರ್ಥ ಮಾಡಿಕೊಂಡಿದ್ದಳು.. ಹುಡುಗನ ಮನೆ, ಮನೆತನ, ಅವನ ಹವ್ಯಾಸಗಳು ಎಲ್ಲವನ್ನು ಅರ್ಥೈಸ್ಕೊಂಡು ಅವನನ್ನು ತನ್ನ ಬಾಳಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಳು.. ತುಸು ಹೆಚ್ಚೇ ಧೈರ್ಯವಿದ್ದ ಹುಡುಗಿ. ಅನಾಥೆಯಾಗಿ ಪಿಜಿಯಲ್ಲಿದ್ದ ಹುಡುಗಿ.. ತನ್ನವರು ಅಂತ ಯಾರೂ ಇರಲಿಲ್ಲ.. ತನ್ನ ಬದುಕನ್ನು ಕಟ್ಟಿಕೊಂಡಿದ್ದಳು.. ಇವನು ತನ್ನ ಊರಿಗೆ ಬಸ್ ಬುಕ್ ಮಾಡಿದ್ದು ತನ್ನ ಪಿಜಿಯ ಕೆಳಗಿದ್ದ ಆಫೀಸಿನಲ್ಲಿ.. ಹಾಗಾಗಿ ವಿಚಾರ ತಿಳಿದಿತ್ತು.. ತಾನೂ ವಾರದ ಕಡೆಯಲ್ಲಿ ಚಿಕಮಗಳೂರಿಗೆ ಕಾಲಿಟ್ಟಿದ್ದಳು..

ಬೋಲ್ಡ್ ಆಗಿ ಮಾತಾಡಿದ ಆ ಹುಡುಗಿಯ ಧೈರ್ಯಕ್ಕೆ ಮೆಚ್ಚದೆ ಇರಲಾಗಲಿಲ್ಲ.. .. ಅವಳ ಟೇಬಲ್ಲಿಗೆ ಬಂದು ಕೂತಾಗ.. ಕಂಡಿದ್ದು.. ಅವಳ ಟೀ ಶರ್ಟ್ ಮೇಲಿನ ಬರಹ.. "ಅಬೆ.. ಹಮಾರಾ ಟೈಮ್ ಆಗಯಾ ಹೈ" 

ಆ ಬರಹ ಓದಿ.. ನಗು ಬಂತು.. ಅವಳು ತನ್ನ ಮುಂಗುರುಳನ್ನು ಕಿವಿಯ ಹಿಂದಕ್ಕೆ ಸಿಕ್ಕಿಸಿಕೊಂಡು ಕಣ್ಣು ಮಿಟುಕಿಸಿ ತಾನು ನಕ್ಕಳು.. !!!

ಕ್ಯಾಂಟೀನ್ ಗೋಡೆಯ ಮೇಲೆ ತೂಗು ಹಾಕಿದ್ದ ಫೋಟೋದಲ್ಲಿ "ನನ್ನನ್ನು ನೋಡು ಯೋಗ ಬರುತೈತೆ" ಯೋಗರಾಣಿಗಳು ಸಾಲು ನೋಡಿದ.. ಹುಡುಗಿಯ ಮುಖ ನೋಡಿದ.. ಮತ್ತೊಮ್ಮೆ ಕಣ್ಣು ಮಿಟುಕಿಸಿ.. ಓಕೇ ಎಂದು ಹೆಬ್ಬೆರಳನ್ನು ಎತ್ತಿ ತೋರಿಸಿದಳು.. !

4 comments:

  1. ನಮಗೂ ಇದು ಸುಯೋಗ-ಇಂತಹ ಸುಂದರವಾದ ಕಥೆಯನ್ನು ಓದುತ್ತಿರುವುದು.

    ReplyDelete
    Replies
    1. ಧನ್ಯವಾದಗಳು ಗುರುಗಳೇ.. ನಿಮ್ಮ ಪ್ರೀತಿಗೆ ನಮಸ್ಕಾರಗಳು 

      Delete
  2. Sundara prema lahari Anna.. preethi haage aagbidbeku aagiddannu dhakkisikollabeku adaralli vimarshe paraamarshe irabaaradu.. nannavane yennuva ah ondu nambikeye saakalva dairya mikkelladannu saraagavaagi nibhaayisi bidutthe.. kandashte vegavaagu kaigetukuvanthe bareyuva ah nimma baravanigeya ruvaarige naanu sharanu👏👏👏👏🙏🙏🙏👍👍👍👌👌

    ReplyDelete
    Replies
    1. Super comment kano...superbly you analysed the story... thank you

      Delete