Sunday, July 8, 2018

ಮುಂಬೈ ದರ್ಶನ - ೨೦೧೫

ಶಾಲೆಯಲ್ಲಿ ರಾಸಾಯನಿಕ ಶಾಸ್ತ್ರದಲ್ಲಿ ಓದಿದ್ದು.. ಕೆಲವು ದ್ರವಗಳಿಗೆ ರುಚಿ, ಬಣ್ಣ, ವಾಸನೆ ಇರೋಲ್ಲ ಅಂತ..
ಅದೇ ಗುಂಗಿನಲ್ಲಿದ್ದ ನನಗೆ ಒಂದು ಪ್ರಶ್ನೆ ಹೊಳೆಯಿತು...

ನೆನಪುಗಳಿಗೆ ರುಚಿ, ಬಣ್ಣ, ವಾಸನೆ ಇರುತ್ತದೆಯೇ ಅಥವಾ ಇಲ್ಲವೇ..
ಅಶರೀರವಾಣಿ ಉಲಿಯಿತು..
ನೆನಪುಗಳಿಗೆ ರುಚಿ, ಬಣ್ಣ, ವಾಸನೆ ಇರುತ್ತದೆ.. ಆದರೆ ಅದು ಅರಿವಾಗೋದು ಅದರ ಪರಿಣಾಮದ ಮೇಲೆ..

**************************

ಆಫೀಸಿನಲ್ಲಿ ಸುಮ್ಮನೆ ಏನೂ ಮಾತಾಡುತ್ತಾ ಕೂತಿದ್ದಾಗ.. ಅರಿವಿಲ್ಲದೆ ಬಂದ ಪ್ಲಾನ್ ಮುಂಬೈ ದರ್ಶನ.. ನನ್ನ ಆಸೆ ಕಾರಿನಲ್ಲಿ ಹೋಗೋದು.. ಪುಣೆ ಮುಂಬೈ ಹೆದ್ದಾರಿಯಲ್ಲಿ ಕಾರು ಚಲಾಯಿಸಬೇಕೆಂಬ ಆಸೆ.. ಆದರೆ ಮಡದಿ ಮತ್ತು ಮಗಳಿಗೆ ವಿಮಾನಯಾನದ ಅನುಭವ ಕೊಡಿಸುವ ಯೋಗ ಸಿಕ್ಕಿತು.

ಬೆಳಿಗ್ಗೆ ಹಿತವಾದ ವಾತಾವರಣದಲ್ಲಿ ನನ್ನ ಪ್ರೀತಿಯ ರಿಟ್ಜ್ ಕಾರು ಹತ್ತಿ ಹೊರಟಾಗ ಎರಡು ದಿನಗಳ ಸುಂದರ ಅನುಭವ ಅಲ್ಲಿ ಕಾಯುತ್ತಿದೆ ಎನ್ನುವ ಒಂದು ಸುಳಿವು ಸಿಕ್ಕಿರಲಿಲ್ಲ..

ಮೊದಲ ಬಾರಿಗೆ ವಿಮಾನಯಾನ ಮಡದಿ ಮತ್ತು ಮಗಳು ಖುಷಿಯಾಗಿದ್ದರು.. ಒಂದೆರಡು ತಿಂಗಳ ಹಿಂದೆ ದೆಹಲಿಗೆ ನಾ ವಿಮಾನದಲ್ಲಿ ಹೋಗಿದ್ದರಿಂದ ನನ್ನ ಅನುಭವ ಅವರಿಗೆ ಹೇಳುತ್ತಾ ಅವರ ಖುಷಿಯನ್ನು ಹೆಚ್ಚಿಸಿದ್ದೆ..

ವಿಮಾನದ ತಿಂಡಿ ತಿನಿಸುಗಳು.. ಮೋಡದ ಮೇಲೆ ತೇಲುತ್ತಾ ಹೋಗುವ ಸಂತಸ.. ಸೊಗಸಾಗಿತ್ತು ಇಬ್ಬರಿಗೂ.. ಮುಂಬೈಯಲ್ಲಿ ಇಳಿದಾಗ ನನ್ನ ದೋಸ್ತ್ ಅಶೋಕ್ ಶೆಟ್ಟಿ ಕಾರನ್ನು ಕಳಿಸಿದ್ದರು... ಮುಂಬೈ ದರ್ಶನ ನನಗೆ ಇದು ಎರಡನೇ ಬಾರಿ. ಹಿಂದಿನ ಅನುಭವ ಹೇಳುತ್ತಾ.. ಅಂದಿನ ದಿನಕ್ಕೂ ಇಂದಿನ ದಿನಕ್ಕೂ ಬದಲಾದ ಬಗೆಯನ್ನು ಯೋಚಿಸುತ್ತಾ ಸಾಗಿದೆ..

ಕಾರಿನ ಚಾಲಕರು ಅಶೋಕ್ ಶೆಟ್ಟಿಯವರಿಗೆ ಸ್ನೇಹಿತರಾಗಿದ್ದರಿಂದ ಅವರು ಮುಂಬೈ ಕತೆಯನ್ನು ಹೇಳುತ್ತಿದ್ದರು.. ಸಿನಿಮಾ ನಟರು.. ಉದ್ಯೋಗ.. ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಮುಂಬೈ ಬದಲಾದ ರೀತಿ.. ಸುಪ್ರಸಿದ್ಧ ಡಬ್ಬಾವಾಲಗಳು, ಲೋಕಲ್ ಟ್ರೈನುಗಳು.. ಹೀಗೆ ಸಾಗಿತ್ತು..
ಮುಂಬೈ ದರ್ಶನ ಮಾಡಿಸಿದ ಅಶೋಕ್ ಮತ್ತು ಅವರ ಗೆಳೆಯರು 

ನಿಗದಿ ಪಡಿಸಿದ್ದ ಹೋಟೆಲಿನ ಕೋಣೆಯಲ್ಲಿ ವಿಶ್ರಾಂತಿ ಪಡೆದು ಮುಂಬೈ ಪ್ರವಾಸಕ್ಕೆ ಹೊರಟೆವು..
ರಾಜ್ ಕಪೂರ್ ಅವರ ಅನೇಕ ಕನಸಿನ ತಾಣ 

ರಾಜ್ ಕಪೂರ್ ಅನೇಕ ಸಾಹಸಗಳಿಗೆ ಸಾಕ್ಷಿ ಈ ಸ್ಟುಡಿಯೋ 

ಸ್ನೇಹಲೋಕದ ಮುಕುಟ ಅಶೋಕ್ ಶೆಟ್ಟಿ 

ಶಿವಾಜಿ ಮಹಾರಾಜ್ 

ಅದ್ಭುತ ಚಿತ್ರಗಳನ್ನು ಸಿನಿ ಜಗತ್ತಿಗೆ ನೀಡಿದ ರಾಜಕಪೂರ್ ಅವರ ಸ್ಟುಡಿಯೋ, ಮಹಾಭಾರತವನ್ನು ದೂರದರ್ಶನಕ್ಕೆ ತಂಡ ಬಿ. ಆರ್. ಚೋಪ್ರಾ ಅವರ ಮನೆ.. ಬಿಗ್ ಬಿ, ರಾಜೇಶ್ ಖನ್ನಾ. ತೇಜಾಬ್ ಚಿತ್ರದಲ್ಲಿ ಪ್ರಮುಖವಾಗಿ ಕಾಣಿಸಿದ್ದ ಮನೆ... ಸಮುದ್ರ ತೀರಾ.. ಎಲ್ಲವೂ ಕಣ್ಣಿಗೆ ಕಟ್ಟುವಂತೆ ಕಂಡಿದ್ದರ ಕಾರಣ ಮೋಡತುಂಬಿದ ಆಗಸ, ತುಂತುರು ಮಳೆ.. ಹಿತವಾದ ತಿಂಡಿ ತಿನಿಸುಗಳು, ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನ, ಮಹಾಲಕ್ಷ್ಮಿ ದೇವಸ್ಥಾನ.. ಎಲ್ಲವೂ ಮನದೊಳಗೆ ಮತ್ತು ಕ್ಯಾಮರದೊಳಗೆ ಇಳಿಯಿತು.

ಮುಂಬೈಯಲ್ಲಿ ನನಗೆ ತುಂಬಾ ಇಷ್ಟವಾಗೋದು ಗೇಟ್ ವೆ ಆಫ್ ಇಂಡಿಯ.. ಉತ್ತಮ ವಿನ್ಯಾಸ.. ಕಡಲಿನ ಹಿನ್ನೋಟ.. ಬೀಸುವ ಗಾಳಿ.. .ಆ ಕಟ್ಟೆಯ ಮೇಲೆ ಕುಳಿತು ಆಗಸವನ್ನು ಮತ್ತು ಕಡಲನ್ನು ಕಾಣುವುದೇ ಒಂದು ಸೊಗಸು.

ಅಂದು ಸ್ವಾತಂತ್ರ ದಿನಾಚರಣೆ ಆಗಿತ್ತು.. ಹೋಟೆಲಿನವರು ಭಾರತದ ಬಾವುಟವನ್ನು ಹಾರಿಸಿ. ಸಿಹಿ ಹಂಚಿ ಆಚರಿಸಿದರು..

ಮಾರನೇ ದಿನ ಬೆಳಿಗ್ಗೆ ಅಶೋಕ್ ಅವರು ಒಂದು ಪಾರ್ಕಿಗೆ ಕರೆದುಕೊಂಡು ಹೋದರು..
ಸಂಗೀತ ವಾದ್ಯಗಳ ಮರುಸೃಷ್ಟಿ 

ಸಂಗೀತ ವಾದ್ಯಗಳ ಮರುಸೃಷ್ಟಿ 
 ಅದ್ಭುತವಾದ ಉದ್ಯಾನವನ ಇನ್ನೂ ಪೂರ್ಣವಾಗಿಲ್ಲವಾದರೂ ಅದರ ವಿನ್ಯಾಸ ಮತ್ತು ಸಂಗೀತದ ವಾದ್ಯಗಳನ್ನು ಮತ್ತು ಅದರ ಬಗ್ಗೆ ಮಾಹಿತಿಗಳು ಸೂಪರ್.. ಮಂಜಿನ ಹನಿ.. ಮಳೆಯಿಂದ ಮೈತೊಳೆದುಕೊಂಡು ಸಿದ್ಧವಾಗಿದ್ದ ಗಿಡಮರಗಳು.. ಮಡದಿ ಮಗಳು ಖುಷಿ ಪಟ್ಟರು.. ಅವರ ಖುಷಿ ನನಗೆ ಖುಷಿ..





ಮುಂಬೈಯಲ್ಲಿ ಕಾರು ಓಡಿಸಬೇಕು ಎನ್ನುವ ಅಸೆಯನ್ನು ನನಗರಿವಿಲ್ಲದಂತೆ ಅಶೋಕ್ ನೆರವೇರಿಸಿದರು.. ಅವರು ಹೊಸದಾಗಿ ಕೊಂಡಿದ್ದ ಕಾರನ್ನು ನನಗೆ ಕೊಟ್ಟು ಮುಂದಿನ ತಾಣಕ್ಕೆ ನಾನೇ ಡ್ರೈವಿಂಗ್ ಮಾಡುವಂತೆ ಮಾಡಿದರು.. ಮುಂಬೈ ಹೊರಭಾಗ.. ಟ್ರಾಫಿಕ್ ದಟ್ಟಣೆ ಅಷ್ಟೊಂದು ಇರಲಿಲ್ಲ..

ಅಲ್ಲಿಂದ ಹೊರಟಿದ್ದು ಇನ್ನೊಂದು ಸುಂದರ ತಾಣಕ್ಕೆ.. ಮುಂಬೈ ಪ್ರದೇಶದ ಹೊರಭಾಗದಲ್ಲಿರುವ ಒಂದು ಜಲಪಾತ.. ಜಲಪಾತದ ಬುಡದ ತನಕ ಹೋಗುವ ಸೌಕರ್ಯವಿದ್ದರೂ ಸುರಕ್ಷತೆಯ ನಿಯಮದಿಂದ ದೂರದಿಂದಲೇ ಅದರ ಸೌಂದರ್ಯವನ್ನು ಕ್ಯಾಮೆರಾದೊಳಗೆ ಇಳಿಸಿದೆ..

ಹೋಟೆಲ್ ಕೋಣೆ ಖಾಲಿ ಮಾಡಿ.. ಅಶೋಕ್ ಶೆಟ್ಟಿಯವರ ಮನೆಗೆ ಬಂದಾಗ ಬಿಸಿ ಬಿಸಿಯಾದ ರುಚಿ ರುಚಿಯಾದ ಊಟ ತಯಾರಾಗಿತ್ತು.. ಮಾತುಗಳು.. ಅಶೋಕ್ ಅವರ ಕುಟುಂಬದ ಜೊತೆ ಕಳೆದ ಕ್ಷಣಗಳು.. ಆ ಮಕ್ಕಳ ತುಂಟಾಟ ಹಾಸ್ಯ ಎಲ್ಲವೂ ಈ ಮುಂಬೈ ದರ್ಶನಕ್ಕೆ ಚೌಕಟ್ಟು ಒದಗಿಸಿತ್ತು.  ಮಳೆ ಜೋರಾಗಿಯೇ ಶುರುವಾಗಿತ್ತು.. ನಿಗದಿ ಪಡಿಸಿದ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ಬಂದು ನಿಂತಾಗ  ಮನಸ್ಸು ಹಕ್ಕಿಯಾಗಿತ್ತು..

ಸುಂದರ ಕುಟುಂಬದ ಜೊತೆಯಲ್ಲಿ 
ಕಂಡಿದ್ದು ಹಲವಾರು ಕನಸುಗಳು.. ಮೂಡಿಸಿದ್ದು ಹತ್ತಾರು ಯೋಜನೆಗಳು.. ಅದರಲ್ಲೊಂದು ವಿಮಾನಯಾನ...

ಈ ತೃಪ್ತಿ ಅನುಭವಿಸಿ ಮೆಲ್ಲನೆ ಜಗತ್ತಿನಿಂದ ಹೊರನೆಡೆದ ಸವಿತ ಭೌತಿಕವಾಗಿ ಆಗಲಿ ಇಂದಿಗೆ ಒಂದು ವರ್ಷ.. ನೆನಪು ಮಾಸದು.. ನೆನಪು ಅಳಿಯದು.. ನೆನಪು ಸದಾ ಸದಾ ಅನವರತ ಹೃದಯದಲ್ಲಿ.. ಅವಳ ನೆನಪಲ್ಲಿ ಈ ಮುಂಬೈ ದರ್ಶನ

ಜಗದ ಸಹವಾಸ ಸಾಕು ಶ್ರೀ ... ನಾ ಹೊರಟೆ 

2 comments:

  1. ವರುಷದ ಹಿಂದಿನ ನಿಮ್ಮ ಪೋಸ್ಟ್ ನೆನಪಿದೆ. ವ್ಯಥೆ ಮರುಕಳಿಸುತ್ತದೆ. ಆದರೆ ಕಾಲದ ಜತೆಗೆ ನಾವು ಸಾಗಲೇಬೇಕು, ನೆನಪುಗಳನ್ನು ಹಿಡಿದಿಟ್ಟುಕೊಂಡು.

    ReplyDelete