Saturday, December 16, 2017

ಸ್ವಾರ್ಥಕತೆಯೇ...or ಸಾರ್ಥಕತೆಯೋ - ಉತ್ತರ ಸಿಕ್ಕಿತೇ?

ಸ್ವಾಗತಕಾರಿಣಿ ಇವರನ್ನು ಸ್ವಾಗತಿಸಿ ಇವರ ವಿವರಗಳನ್ನು ಬರೆದುಕೊಂಡು.. ಬ್ಯಾಡ್ಜ್ ಕೊಟ್ಟು.. ಒಂದು ಫಾರಂ ಕೊಟ್ಟು ಸಹಿ ಹಾಕಿಸಿಕೊಂಡರು...

ವೀಣಾಳ ಕಣ್ಣುಗಳು ಒದ್ದೆಯಾಗ ತೊಡಗಿದ್ದವು.. ರಾಕೇಶ ವೀಣಾಳ ಭುಜವನ್ನು ಒಮ್ಮೆ ಗಟ್ಟಿಯಾಗಿ ಒತ್ತಿ ಅವಳ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಒಳಗೆ ನೆಡೆದ...

ಮೊದಲ ಭಾಗ
ಎರಡನೇ ಭಾಗ
​ಮೂರನೇ ಭಾಗ

"ಸಮಾಧಾನ ಮಾಡಿಕೊ ಚಿನ್ನಿ.. ಯಾವುದು ಶಾಶ್ವತವಲ್ಲ.. ಇಂದು ಅವರು ನಾಳೆ ನಾವು.. ಅಷ್ಟೇ.. " ಸ್ಮಶಾನ ವೈರಾಗ್ಯದ ಮಾತುಗಳು ವೀಣಾಳ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ.. ಸುಮ್ಮನೆ ಕಣ್ಣೊರೆಸಿಕೊಂಡು ನಿಗದಿಯಾದ ಸ್ಥಳದಲ್ಲಿ ರಾಕೇಶನ ಜೊತೆಯಲ್ಲಿ ಕೂತಳು..

ಒಂದಷ್ಟು ಭಾಷಣ.. ಸ್ವಾಗತ ಮಾಲಿಕೆ.. ಹಾಡು.. ಎಲ್ಲವೂ ಆದವೂ..

ವೀಣಾ ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುತ್ತಿದ್ದಳು.. ಇತ್ತ ರಾಕೇಶ ಮೊಬೈಲಿನಲ್ಲಿ ಆಫೀಸ್ ಈ-ಮೇಲ್ಗಳನ್ನೂ ಚೆಕ್ ಮಾಡುತ್ತಿದ್ದ.. ಇವಳ ಪಕ್ಕದಲ್ಲಿ ಕೂತಿದ್ದ ದಂಪತಿಗಳು ಒಂದೇ ಕರವಸ್ತ್ರದಿಂದ ಒಮ್ಮೆ ಹೆಂಡತಿ.. ಒಮ್ಮೆ ಗಂಡ ಕಣ್ಣೊರೆಸಿಕೊಳ್ಳುತ್ತಿದ್ದರು.. ವೀಣಾಳಿಗೆ ಅರ್ಥವಾಗಲಿಲ್ಲ.. ಮೇಲೆ ನೋಡಿದಳು.. ಗರ ಗರ ಅಂತ ಫ್ಯಾನ್ ತಿರುಗುತ್ತಿತ್ತು.. ಚಳಿಗೆ ಫ್ಯಾನ್  ಯಾಕೆ ಹಾಕಿದ್ದಾರೋ ಗೊತ್ತಾಗಲಿಲ್ಲ.. ಜೊತೆಗೆ ಪಕ್ಕದ ಕಟ್ಟದಲ್ಲಿ ನೆಡೆಯುತ್ತಿದ್ದ ಕಾಮಗಾರಿ ಧೂಳನ್ನು ಎಬ್ಬಿಸುತ್ತಿತ್ತು.. ಬಹುಶಃ ಅದು ತೊಂದರೆಯಾಗಿರಬಹುದು ಎನ್ನುವ ಯೋಚನೇ ಬಂದು ಸುಮ್ಮನಾದಳು.. ಆದರೂ ಆ ದಂಪತಿಗಳ ಕಣ್ಣು ಒರೆಸಿಕೊಳ್ಳುವ ಕಾರ್ಯ ನೆಡೆಯುತ್ತಲೇ ಇತ್ತು..

ಕೈಯಲ್ಲಿದ್ದ ಆ ಕವರನ್ನು ತೆಗೆದು ಓದಿದಳು.. ಆಗಲೇ ನೂರಾ ಒಂದು ಬಾರಿ ಓದಿದ್ದ ಪಾತ್ರವನ್ನು ಮತ್ತೆ ಓದಲು ಶುರುಮಾಡಿದಳು.. ಅದರ ಒಕ್ಕಣೆ ಇಷ್ಟಿತ್ತು.. ದೇಹದ ಅಂಗವನ್ನು ದಾನ ಮಾಡಿ ೭ ಜೀವಿಗಳಿಗೆ ಜೀವ ಕೊಟ್ಟು ಬದುಕಿಸಿದ ಗೀತಾಳನ್ನು ಸ್ಮರಿಸುತ್ತಾ.. ಅವಳ ಕುಟುಂಬಕ್ಕೆ ಒಂದು ಗೌರವ ಸೂಚಕ ಕಾಣಿಕೆಯನ್ನು ಕೊಡುವ ಬಗ್ಗೆ ಕಾರ್ಯಕ್ರಮವದು..

ಗೀತಾಳ ಅಂಗಗಳಾದ ಕಣ್ಣುಗಳು (Cornea - 2 Nos), ಹೃದಯದ ಕವಾಟಗಳು (Heart Valves - 2 Nos), ಮೂತ್ರಪಿಂಡ (Kidney - 2 Nos) , ಯಕೃತ್ತು (Liver - 1 No) ಈ ಅಂಗಗಳನ್ನ ಏಳು ಸೂಕ್ತ ವ್ಯಕ್ತಿಗಳಿಗೆ ಅಳವಡಿಸಿ ಅವರಿಗೆ ಹೊಸ ಬದುಕನ್ನು ಕೊಟ್ಟಿರುವ ಕಾರ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ.. ಕಳೆದು ಹೋದ ಆಸ್ತಿ ಮರಳಿ ತರುವುದಕ್ಕೆ ಸಾಧ್ಯವಾಗದೆ ಇದ್ದರೂ.. ಗೀತಾ ಏಳು ಜನರಲ್ಲಿ ಬದುಕಿದ್ದಾಳೆ ಎನ್ನುವ ಸಂತಸ ನಿಮದಾಗಲಿ.. ಶುಭವಾಗಲಿ.. ದಯಮಾಡಿ ಆ ಕಾರ್ಯಕ್ರಮಕ್ಕೆ ಬಂದು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬೇಕು ಎಂದು ಕೇಳಿಕೊಳ್ಳುವ ಒಂದು ಪುಟ್ಟ ಪತ್ರ ಅದಾಗಿತ್ತು...

ಕಾರ್ಯಕ್ರಮ ಅಚ್ಚುಕಟ್ಟಾಗಿ ನೆಡೆಯುತ್ತಿತ್ತು.. ಅಂಗಗಳನ್ನು ದಾನ ನೀಡಿದವರ ಕುಟುಂಬದ ಸದಸ್ಯರನ್ನು ವೇದಿಕೆಗೆ ಆಹ್ವಾನಿಸಿ ಒಂದು ಕಾಣಿಕೆ, ಒಂದು ಹಾರ ಮತ್ತು ಒಂದು ಶಾಲನ್ನು ಹೊದ್ದಿಸುವ ಕಾರ್ಯ ನೆಡೆಯುತ್ತಿತ್ತು.. ಆ ದಾನಿಗಳ ಹೆಸರು ಹೇಳುತ್ತಾ ಅವರ ಕಿರುಪರಿಚಯ ಮಾಡುತ್ತಿದ್ದರು..

ಸುಮಾರು ಕುಟುಂಬದ ಸದಸ್ಯರು ಬಂದು ಕಾಣಿಕೆಗಳನ್ನು ಪಡೆದುಕೊಳ್ಳುತ್ತಿದ್ದರು.., ಕೆಲವರು ತೀರಾ ಆರಾಮಾಗಿದ್ದಾರೆ, ಕೆಲವರು ತೀರಾ ಭಾವುಕರಾಗಿದ್ದರು.. ವೇದಿಕೆಯ ಮೇಲೆ ಬರಲು ಒಪ್ಪದ ಕೆಲವರು ಇದ್ದರು.. ಆದರೂ ಬಲವಂತ ಮಾಡಿ ಅವರನ್ನು ಕರೆಸಿ ಸನ್ಮಾನ ನೆಡೆಸುತ್ತಿದ್ದರು..

ವೀಣಾ ತನ್ನದೇ ಯೋಚನೆಯಲ್ಲಿ ಕಳೆದುಹೋಗಿದ್ದಳು..

"ಮೇಡಂ ಸ್ವಲ್ಪ ಜಾಗ ಬಿಡ್ತೀರಾ .. " ಈ ಮಾತಿಗೆ ಮತ್ತೆ ಧರೆಗೆ ಬಂದ ವೀಣಾ... ಜಾಗ ಬಿಟ್ಟಳು.. ತನ್ನ ಪಕ್ಕದಲ್ಲಿ ಕೂತಿದ್ದ ದಂಪತಿಗಳ ಬಗ್ಗೆ ಹೇಳುತ್ತಿದ್ದರು..

ಈ ದಂಪತಿಗಳ ಮಗನ ಅಂಗಗಳನ್ನು ದಾನ ಮಾಡಿದ್ದಾರೆ.. ಮಾಮೂಲಿನಂತೆ ಕರತಾಡನ ಇತ್ತು.. ನಿರೂಪಕಿ ಮುಂದುವರೆದು.. ನಿಮಗೆ ಗೊತ್ತೇ ಇವರ ಮಗನ ವಯಸ್ಸು.. ಎರಡು ವರ್ಷಗಳು..

ಈ ಮಾತಿಗೆ ಇಡೀ ಸಭಾಭವನದಲ್ಲಿ ಸೂಜಿ ಬಿದ್ದರೂ ಜೋರಾಗಿ ಕೇಳುವಷ್ಟು ನಿಶ್ಯಬ್ಧ.. ಎಲ್ಲರ ಹೃದಯದ ಬಡಿತ ಒಮ್ಮೆಲೇ ನಿಂತು ಮತ್ತೆ ಜೋರಾಗಿ ಹೊಡೆದುಕೊಳ್ಳುತ್ತಿದೆ ಎನ್ನುವಂತೆ.. ಕಿವಿ ಕಿತ್ತೋಗುವ ಹಾಗೆ ಚಪ್ಪಾಳೆಗಳ ಸುರಿಮಳೆ.. ಮತ್ತೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು..

ಆ ಮಗುವಿಗೆ ಕೇವಲ ಎರಡು ವರ್ಷಗಳಾಗಿದ್ದಾಗ ಯಾವುದೋ ಕಾಯಿಲೆ ಬಂದು ಕೊಟ್ಟ ಔಷಧಿಗೆ ಗುಣಮುಖವಾಗದೆ ಇಹಲೋಕ ತ್ಯಜಿಸಿತು.. ಆದರೆ ಆ ಮಗುವಿನ ಅಂಗಗಳನ್ನು ದಾನ ಮಾಡಿ ಇವರು ತಮ್ಮ ಸಾರ್ಥಕತೆಯನ್ನು ಮೆರೆದಿದ್ದಾರೆ.. ಇವರಿಗೆ ಒಂದು ಜೋರಾದ ಚಪ್ಪಾಳೆ ಬರಲಿ ಎಂದು ನಿರೂಪಕಿ ಹೇಳಿದಾಗ ಮತ್ತೆ ಎಲ್ಲರೂ ಎದ್ದು ನಿಂತು ಒಂದು ನಿಮಿಷಗಳ ಕಾಲ ಕರತಾಡನ ಮಾಡಿದರು..

ದಂಪತಿಗಳ ಕಣ್ಣಲ್ಲಿ ಜೋಗದ ಧಾರೆ..

ವೀಣಾ ಮಾತಿಲ್ಲದೆ ಕೂತಿದ್ದಳು.. ರಾಕೇಶ "ಚಿನ್ನಿ .. ಸಮಾಧಾನ ಮಾಡಿಕೊ.. ಪ್ಲೀಸ್.."  ಎಂದ..

"ಗೀತಾಳ ಕುಟುಂಬ ದಯವಿಟ್ಟು ವೇದಿಕೆಗೆ ಬರಬೇಕು"
"ಗೀತಾ.. .. ಗೀತಾ"

ರಾಕೇಶನಿಗೆ ಗಾಬರಿ.. ವೀಣಾಳ ಮುಖ ನೋಡಿದ ಕಣ್ಣುಗಳು ಅತ್ತು ಅತ್ತು ಊದಿಕೊಂಡಿತ್ತು.. ಕಣ್ಣೊರೆಸಿಕೊಂಡು ಚಿನ್ನಿ ಬಾ ಹೋಗೋಣ ಅಂದ.

ಇಬ್ಬರೂ ಬಲು ಭಾರವಾದ ಮನಸ್ಸಿನಿಂದ ವೇದಿಕೆಗೆ ಹೆಜ್ಜೆ ಹಾಕಿ ಸನ್ಮಾನವನ್ನು ಸ್ವೀಕರಿಸಿದರು..

ವೀಣಾಳಿಗೆ ಅಣ್ಣಾವ್ರ ಕವಿರತ್ನ ಕಾಳಿದಾಸ ಚಿತ್ರದ ದೃಶ್ಯ ನೆನಪಿಗೆ ಬಂತು.. ಕಾಳಿದಾಸನಿಗೆ "ಅಭಿಜ್ಞಾನ ಶಾಕುಂತಲ" ನಾಟಕ ರಚಿಸಿದ್ದಕ್ಕಾಗಿ ಭೋಜರಾಜ ಕನಕಾಭಿಷೇಕ ಮಾಡಿಸಿದಾಗ.. ಕಾಳಿದಾಸ "ತಾಯೆ ಎಲ್ಲವೂ ನಿನ್ನ ಚರಣಗಳಿಗೆ ಅರ್ಪಿತಾ" ಎಂದಾಗ ಕಾಳಿದಾಸನಿಗೆ ಅಭಿಷೇಕ ಮಾಡಿದ ಸುವರ್ಣ ನಾಣ್ಯಗಳು, ಪುಷ್ಪಗಳು ತಾಯಿ ಕಾಳಿಯ ಚರಣಗಳಿಗೆ ಅರ್ಪಿತವಾಗುತ್ತದೆ..

ವೀಣಾಳೂ ಕೂಡಾ ಶಾಲು, ಹಾರ, ಕಾಣಿಕೆಗಳನ್ನು ನೀಡಿದಾಗ "ಗೀತಾ ಇದು ನಿನ್ನ ಸ್ವತ್ತು.. ನಾ  ನಿನ್ನ  ಪರವಾಗಿ ಸ್ವೀಕರಿಸುತ್ತಿದ್ದೇನೆ ಅಷ್ಟೇ.. "  ಎಂದು ಮನದಲ್ಲಿಯೇ ಮಾತಾಡುತ್ತಿದ್ದಳು.. ರಾಕೇಶ ಅವಳ ಕೈಯಲ್ಲಿದ್ದ ಕಾಣಿಕೆಗಳನ್ನು ತೆಗೆದುಕೊಂಡು ಅವಳಿಗೆ ತನ್ನ ಕರವಸ್ತ್ರ ನೀಡಿದ..

ಅಂಗಗಳನ್ನು ದಾನಪಡೆದುಕೊಂಡವರಿಗೆ ಅವರ ಅಭಿಪ್ರಾಯಗಳನ್ನು ತಿಳಿಸುವ ನಿಟ್ಟಿನಲ್ಲಿ ಕೆಲವರು ತಮ್ಮ ಧನ್ಯವಾದಗಳನ್ನು ಅರ್ಪಿಸುತ್ತಾ ನೀವೇ ನಮಗೆ ಜೀವ ಕೊಟ್ಟವರು.. ನಿಮ್ಮ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದ್ದರೂ ಕೂಡ ಅದನ್ನು ಪಕ್ಕಕ್ಕಿಟ್ಟು ಅವರ ಅಂಗಗಳನ್ನು ದಾನ ಮಾಡಿ ನನ್ನಂತಹ ಅನೇಕರಿಗೆ ಪುನರ್ಜೀವನ ಕೊಟ್ಟ ದೊಡ್ಡ ಮನಸ್ಸು ನಿಮದು.. ನಾ ದೇವರನ್ನು ನೋಡಿಲ್ಲ ಅಂದುಕೊಂಡಿದ್ದೆ..  ಆದರೆ ನಿಮ್ಮಗಳ ರೂಪದಲ್ಲಿ ದೇವರಿದ್ದಾನೆ ಎಂದು ಹೇಳಿದಾಗ ಎಲ್ಲರ ಕಣ್ಣಲ್ಲಿ ಆನಂದಭಾಷ್ಪ..

ಅಂಗಗಳನ್ನು ದಾನ ಮಾಡಿದ ಕುಟುಂಬದ ಕೆಲವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು ಎಂದಾಗ.. ಸುಮಾರು ಮಂದಿ ಮಾತಾಡಿದರು, ಕೆಲವರು ಅಲ್ಲಿ ಬಂದು ನಿಂತು ಕಣ್ಣೀರು ಹಾಕಿದರೆ, ಇನ್ನೂ ಕೆಲವರು ಭಾವುಕರಾಗಿ ಅಂಗಗಳನ್ನು ದಾನಮಾಡುವ ವ್ಯವಸ್ಥೆಯಲ್ಲಿ ಇದ್ದ ಕೆಲವು ಕುಂದುಕೊರತೆಗಳ ಬಗ್ಗೆ ಮಾತಾಡಿದರು.. ಮೃತರ ದೇಹವನ್ನು ಒಂದು ದಿನವಾದರೂ ಕೊಡದೆ .. ಸತಾಯಿಸುವ ಆಸ್ಪತ್ರೆ ಸಿಬ್ಬಂದಿ, ಕೆಲವು ನಿಯಮಗಳು ಇದನ್ನು ತುಸು ಸಡಿಲಮಾಡಿ ಈ ಕಾರ್ಯಗಳನ್ನು ಬೇಗ ಮುಗಿಸಿ ದೇಹವನ್ನು ಕುಟುಂಬಕ್ಕೆ ಬೇಗ ಕೊಡುವಂತಹ ಕೆಲಸವಾಗಬೇಕು ಎಂದು ಹೇಳಿದರು..

ರಾಕೇಶ ಎದ್ದು ನಿಂತು ನಿರೂಪಕಿಗೆ.. ಮೇಡಂ ನಿಮಗೆ ಅಭ್ಯಂತರವಿಲ್ಲದಿದ್ದರೆ ನಾವು ಮಾತಾಡಬಹುದೇ ಎಂದ.. ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದಿತ್ತು.. ಆದರೂ ಬೇಸರ ಮಾಡಿಕೊಳ್ಳದೆ.. ಆಗಲಿ ಸರ್.. ಬನ್ನಿ.. ನಿಮಗೆ ಸಮಯವಿದೆ ಮಾತಾಡಬಹುದು..ಈ ವೇದಿಕೆಯಲ್ಲಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ ಎಂದರು..

"ವೀಣಾ ಹೋಗು ನಿನ್ನ ಮನಸ್ಸನ್ನು ಹಗುರ ಮಾಡಿಕೊ.. ನಿನ್ನ ಶ್ರಮ ವ್ಯರ್ಥವಾಗಬಾರದು.. ಪ್ಲೀಸ್.. ಎದ್ದೇಳು. " ರಾಕೇಶನ ಮಾತಿಗೆ ಇಲ್ಲ ಎನ್ನಲಾಗದೆ ಕಣ್ಣೆರೊಸಿಕೊಂಡು.. ವೇದಿಕೆಯತ್ತ ಹೆಜ್ಜೆ ಹಾಕಿದಳು.. ರಾಕೇಶ ವೀಣಾಳ ಕೈಹಿಡಿಕೊಂಡು ಹೊರಟ.. ಪರವಾಗಿಲ್ಲ ನಾನೇ ಹೋಗುತ್ತೇನೆ ಎಂದು ಸನ್ನೆ ಮಾಡಿ.. ಸೀದಾ ವೇದಿಕೆ ಹತ್ತಿ ನಿಂತಳು..

ಬಂದಿದ್ದ ಜನರಿಗೆಲ್ಲ.. ಎದ್ದು ಹೋಗುವ ಮನಸ್ಸು.. ಆಗಲೇ ಸುಮಾರು ನಾಲ್ಕು ಘಂಟೆಗಳಿಂದ ಕೂತಿದ್ದ ಅವರಿಗೆ ಎದ್ದು ಹೋದರೆ ಸಾಕು ಅನ್ನಿಸಿತ್ತು.. ಕಾರಣ ಭಾವುಕತೆ ಹೆಚ್ಚಾಗಿತ್ತು..

"ಎಲ್ಲರಿಗೂ ನಮಸ್ಕಾರ.. ದಯಮಾಡಿ ಕ್ಷಮಿಸಿ..ಈ ಹೊತ್ತಿನಲ್ಲಿ ನಿಮ್ಮಗಳ ಮುಂದೆ ಬಂದು ನಿಂತಿದ್ದೇನೆ.. ಮನದಾಳದ ಕೆಲವು ಮಾತುಗಳನ್ನು ನಿಮ್ಮ ಮುಂದೆ ಹೇಳುವ ಆಶಯ ನನ್ನದು" ಎಂದು ರಾಕೇಶನ ಕಡೆಗೆ ನೋಡಿದಳು.. ಹೆಬ್ಬೆರಳನ್ನು ಎತ್ತಿ "ಹೆಡ್ಸ್ " ಅಂದ...

"ಎಲ್ಲರಿಗೂ ಮತ್ತೊಮ್ಮೆ ನಮಸ್ಕಾರ.. ಜಾಸ್ತಿ ಹೊತ್ತು ತೆಗೆದುಕೊಳ್ಳುವುದಿಲ್ಲ.. ಚುಟುಕಾಗಿ ಹೇಳಿ ಮುಗಿಸುತ್ತೇನೆ.. ನನ್ನ ಗೀತಾಳ ಅನುಬಂಧ ತುಂಬಾ ಹಳೆಯದು.. ಅದರ ಬಗ್ಗೆ ಒಂದು ಕಿರುಲೇಖನ ಬರೆದು ನಿಮ್ಮ ಬಳಿ ಹಂಚಿಕೊಳ್ಳುತ್ತೇನೆ... ಈಗ ವಿಷಯಕ್ಕೆ ಬರ್ತೀನಿ.. ಗೀತಾಳ ಪುಟ್ಟ ಪ್ರಪಂಚದಲ್ಲಿ  ನನಗೂ ಒಂದು ಜಾಗವಿತ್ತು.. ಅವಳ ಕೊನೆಯ ಆಸೆ ತಾನು ಈ ಜಗತ್ತಿನಲ್ಲಿ ಯಾವಾಗಲೂ ಜೀವಿಸಬೇಕೆಂಬುದು.. ನನ್ನ ಕೋರಿಕೆ ಇಷ್ಟೇ.. ಗೀತಾಳ ಅಂಗಗಳನ್ನು ಪಡೆದುಕೊಂಡವರು.. ಅನೇಕ ಜೀವಿಗಳಿಗೆ ಪುನರ್ಜೀವ ಕೊಡುವಂತಹ ಅಂಗಗಳನ್ನು ಮತ್ತೆ ಮರಳಿ ದಾನ ಮಾಡುವ ಬಗ್ಗೆ ಯೋಚನೆ ಮಾಡಿ.. ಈ ಸರಣಿ ಹೀಗೆ ಮುಂದುವರೆಯಲಿ.. ಎಲ್ಲರಿಗೂ ಶುಭವಾಗಲಿ.. ನಮಸ್ಕಾರ.. " ಕಣ್ಣಲ್ಲಿ ಕಾಂತಿ ತುಂಬಿತ್ತು..

ವೇದಿಕೆ ಹತ್ತುವಾಗ ಇದ್ದ ದುಃಖ.. ವೇದಿಕೆ ಇಳಿಯುವಾಗ ಇರಲಿಲ್ಲ.. ಮನಸ್ಸು ಇನ್ನೂ ಹಗುರಾಗಿತ್ತು.. ರಾಕೇಶನಿಗೆ ಆಶ್ಚರ್ಯ ತುಂಬಾ ಹೊತ್ತು ಮಾತಾಡುತ್ತಾಳೆ ಅಂದುಕೊಂಡಿದ್ದ ಅವನಿಗೆ ಏನೂ ಮಾತಾಡಲು ಆಗದೆ ಸುಮ್ಮನೆ ಕೂತಿದ್ದ..

ಇವಳ ಮಾತಿನಿಂದ.. ಸಭಾ ಕಲಾಪಗಳು ಮುಗಿಯಿತು ಎನ್ನುವ ಹಂತಕ್ಕೆ ಬಂದಿತ್ತು.. ನಿರೂಪಕಿ ಬಂದವರಿಗೆಲ್ಲ ಧನ್ಯವಾದಗಳನ್ನು ಹೇಳುತ್ತಾ.. ಎಲ್ಲರಿಗೂ ಊಟದ ವ್ಯವಸ್ಥೆ ಇದೆ.. ದಯಮಾಡಿ ಊಟ ಮಾಡಿಕೊಂಡು ಹೋಗಬೇಕು.. ಎಲ್ಲರಿಗೂ ಶುಭವಾಗಲಿ.. ನಮಸ್ಕಾರ"

ಕಾರ್ಯಕ್ರಮ ಮುಗಿದಿತ್ತು.. ವೀಣಾಳ ಮನಸ್ಸು ಹೂವಿನಷ್ಟು ಹಗುರವಾಗಿತ್ತು ಅನ್ನುವ ಭಾವ ರಾಕೇಶನಿಗೆ ಅರಿವಾಯಿತು.. ಊಟದ ಸಮಯದಲ್ಲಿ ಎಲ್ಲರ ಹತ್ತಿರ ಮಾತಾಡುತ್ತಿದ್ದಳು.. ಒಂದು ತುತ್ತು ತುಸು ಹೆಚ್ಚೇ ತಿಂದಳು.. ರಾಕೇಶ ಮೌನವಾಗಿ ಎಲ್ಲವನ್ನೂ ಗಮನಿಸುತ್ತಿದ್ದ..


"ರಾಕೇಶ ಹೋಗುವಾಗ ಅವರನ್ನು ಭೇಟಿ ಮಾಡಿಕೊಂಡು ಹೋಗೋಣ.. ಬರುತ್ತೇನೆ ಎಂದು ಒಪ್ಪಿಕೊಂಡಿದ್ದಾರೆ.. ಒಂದು ಭೇಟಿ, ಲಘು ಉಪಹಾರ.. ಕಾಫಿ.. ಒಂದು ಫೋಟೋ ಅಷ್ಟೇ ಸಾಕು ಈ ಜೀವಕ್ಕೆ ..ಓಕೇ ನಾ"

"ಡನ್ ಚಿನ್ನಿ" ಅಂದ ರಾಕೇಶ

ನಿಗದಿಯಾದ ಸ್ಥಳಕ್ಕೆ ಹೋಗಿ ಕಾಯುತ್ತಿದ್ದರು.. ವೀಣಾ ಅಲ್ಲೇ ಇದ್ದ ಒಂದು ಬೆಂಚಿನಲ್ಲಿ ಕೂತಳು.. ರಾಕೇಶ ನಾ ಒಂದು ರೌಂಡ್ ಹಾಕಿ ಬರುತ್ತೀನಿ ಎಂದು ಹೋದ..

ನೆನಪಿನ ಜಾರುಬಂಡಿಯಲ್ಲಿ ಕಾಲ ವೀಣಾಳನ್ನು ಜಾರಿಸಿಕೊಂಡು ಹೋಯಿತು...  .. ಆ ಕಚೇರಿಯಲ್ಲಿ ಮಾಹಿತಿ ಪಾತ್ರ ಸಿಕ್ಕ ಮೇಲೆ.. ಅವರೆಲ್ಲರಿಗೂ ಕರೆ ಮಾಡಿ.. ತನ್ನ ಆಶಯವನ್ನು ಪುಟ್ಟಾದಾಗಿ ಹೇಳಿದ್ದಳು.. ಇದು ಬರಿ ಸೌಹಾರ್ದ ಭೇಟಿ ಮಾತ್ರ.. ಎಂದು ಒತ್ತಿ ಒತ್ತಿ ಹೇಳಿದ್ದಳು.. ಎಲ್ಲರೂ ದೊಡ್ಡ ಮನಸ್ಸು ಮಾಡಿ ಬರುತ್ತೇವೆ ಎಂದು ಒಪ್ಪಿಕೊಂಡಿದ್ದು ಸಂತಸ ಕೊಟ್ಟಿತ್ತು..

ಗೀತಾಳ ಒಡಲು ತುಂಬಿದ್ದು.. ಮನೆಯಲ್ಲಿನ ಸಂತಸದ ಕಡಲು ಎಲ್ಲವೂ ಆ ಕ್ಷಣಕ್ಕೆ ಸಿನಿಮಾ ಮೂಡಿಬಂದ ಹಾಗೆ ತನ್ನ ಮನಃಪಟಲದಲ್ಲಿ ಹಾದು ಹೋಯಿತು.. ದಿನೇ ದಿನೇ ಗೀತಾಳನ್ನು ನೋಡುವುದೇ ಕುಶಿಯಾಯಾಗಿತ್ತು.. ಆ ತಾಯಿಯಾಗುವ ಸೌಂದರ್ಯ, ಖುಷಿ ಅವಳನ್ನು ಇನ್ನೊಮ್ಮೆ ನೋಡುವಷ್ಟು ಸುಂದರಿಯನ್ನಾಗಿ ಮಾಡಿತ್ತು.. ವೀಣಾಳಷ್ಟು ಸೌಂದರ್ಯವತಿಯಾಗದಿದ್ದರೂ ಅವಳ ಕಣ್ಣುಗಳಲ್ಲಿರುವ ಕಾಂತಿ ಇಷ್ಟವಾಗುತ್ತಿತ್ತು..

ಮುದ್ದಾದ ಹೆಣ್ಣು ಮಗುವಿಗೆ ಜನುಮ ನೀಡಿದ ಗೀತಾ.. ತನ್ನ ಕುಟುಂಬಕ್ಕೆ ಸಂತಸ ಎನ್ನುವ ತರಂಗಗಳನ್ನೇ ಎಬ್ಬಿಸಿದ್ದಳು.. ರೇವಂತನ ಕುಟುಂಬ, ಗೀತಾಳ ಕುಟುಂಬ ಎಲ್ಲರೂ ಸಂತಸದ ಕಡಲಲ್ಲಿ ತೇಲುತ್ತಿದ್ದರು.. ರಾಕೇಶನಿಗೆ ಮತ್ತು ವೀಣಾಳಿಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆ ಎಂದು ಪದೇ ಪದೇ ಹೇಳುತ್ತಲೇ ಇದ್ದರು..

"ಚಿನ್ನಿ ಬರ್ತಾರೆ ತಾನೇ.. ನಾವು ಸುಮ್ಮನೆ ಇಲ್ಲಿ ಕಾಯುತ್ತಾ ಕೂರುವುದು ವ್ಯರ್ಥವಾಗಬಾರದು.. " ಅಚಾನಕ್ ರಾಕೇಶನ ಧ್ವನಿಗೆ ಬೆಚ್ಚಿ.. "ಹೌದು ಬರುತ್ತಾರೆ.. " ಎಂದಷ್ಟೇ ಹೇಳಿ ಸುಮ್ಮನೆ ಕೂತಳು.. ರಾಕೇಶ ಮತ್ತೆ ಅವಳನ್ನು ಮಾತಾಡಿಸುವ ಗೋಜಿಗೆ ಹೋಗದೆ.. ಅವಳ ಪಕ್ಕದಲ್ಲಿ ಸುಮ್ಮನೆ ಕೂತಿದ್ದ..

ವೀಣಾಳ ದೇಹ ಅಲ್ಲಿದ್ದರೂ ಮನಸ್ಸು ಸುಯ್ ಅಂತ ಹಿಂದಕ್ಕೆ ಓಡುತ್ತಿತ್ತು..

ಮುದ್ದಾದ ಗೀತಾಳ ಕುಟುಂಬ ಮತ್ತು ರಾಕೇಶನ ಕುಟುಂಬ ತಮ್ಮ ಹರಕೆ ಸಲ್ಲಿಸಲು ಕುಲದೇವರನ್ನು ನೋಡಲು ಹೋಗುವ ದಿನ ಬಂದಿತ್ತು.. ವೀಣಾ ಗೀತಾಳನ್ನು ಕರೆದು.. ಹೋಗಿ ಬರುತ್ತೇನೆ ಕಣೆ.. ಮತ್ತೆ ಸಿಗೋಣ ಎಂದು ಒಂದು ಅಪ್ಪುಗೆ ಕೊಟ್ಟು.. ಕೈ ಬೀಸಿ ಹೋಗಿದ್ದಳು.. ಅವಳ ಕಡೆ ನೋಟ ಇನ್ನೂ ಮನಸ್ಸಲ್ಲಿ ಹಾಗೆಯೇ ಉಳಿದುಕೊಂಡಿತ್ತು.. ಮೂರು ದಿನ ಯಾತ್ರೆ ಎಂದಿದ್ದಳು..

ಗೀತಾಳಿಗೆ ಯಾವಾಗಲೂ ಬಸ್ಸಿನಲ್ಲಾಗಲಿ.. ಕಾರಿನಲ್ಲಾಗಲಿ ಕಿಟಕಿಯ ಪಕ್ಕದ ಸೀಟೇ ಬೇಕು.. ತಾನು ತನ್ನ ಮಗುವನ್ನು ಕಿಟಕಿಯ ಪಕ್ಕ ಕೂರಿಸಿಕೊಂಡು ಮಗುವಿನ ಕೈಯನ್ನು ಹಿಡಿದು ಟಾಟಾ ಮಾಡಿದ್ದು ಮನಸ್ಸಿಗೆ ಇನ್ನೂ ಹಸಿರಾಗಿತ್ತು..

ಬೆಳಿಗ್ಗೆ ಎಂದಿನಂತೆ ಮನೆ ಬಾಗಿಲಿಗೆ ನೀರು ಹಾಕಿ ರಂಗೋಲಿ ಹಾಕುವಾಗ ಅವಳ ಮೊಬೈಲ್ ಕಿರ್ ಕಿರ್ ಅಂತ ಸದ್ದು ಮಾಡಿತ್ತು.. ಯಾರಪ್ಪ ಇಷ್ಟು ಹೊತ್ತಿಗೆ ಫೋನ್ ಅಂತ.."ಹಲೋ" ಅಂದಳು

ಎರಡು ನಿಮಿಷ.. ಹಾಗೆ ನಿಂತಿದ್ದಳು.. ಬಕೇಟಿಗೆ ನೀರು ಬಿಟ್ಟಿದ್ದು ತುಂಬಿ ಹರಿಯುತ್ತಲೇ ಇತ್ತು.. ಬೆಳಗಿನ ವಾಕಿಂಗ್ ಹೋಗಿದ್ದ ರಾಕೇಶ ಆಗ ತಾನೇ ಗೇಟು ತೆರೆದು ಒಳಗೆ ಬರುತ್ತಿದ್ದ.. ಇವಳು ಮೊಬೈಲ್ ಹಿಡಿದು ಹಾಗೆ ನಿಂತಿದ್ದು ನೋಡಿ.. "ಚಿನ್ನಿ ಚಿನ್ನಿ.. ಏನಾಯಿತು.. ಒಯೆ.. ಅರಾಮಿದ್ದಿಯ ತಾನೇ" ಎಂದು ಅವಳ ಭುಜ ಅಲುಗಾಡಿಸಿದಾಗ ದಪ್ ಅಂತ ಕುಸಿದು ಬಿದ್ದಳು..

"ಅಮ್ಮ ಅಮ್ಮ ವೀಣಾ ಬಿದ್ದಳು ನೋಡು.. ಅಮ್ಮ ಬೇಗ ಬಾ ಅಮ್ಮ" ರಾಕೇಶನ ಕೂಗು ಕೇಳಿ ಮನೆಯಲ್ಲಿದ್ದವರೆಲ್ಲ ಓಡಿ ಬಂದರು.. ವೀಣಾಳ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು.. ಬಾಯಲ್ಲಿ ಮಾತಿಲ್ಲ.. ಬಕೇಟಿನಲ್ಲಿದ್ದ ನೀರನ್ನು ಮುಖಕ್ಕೆ ಚುಮುಕಿಸಿದ..

"ಏನಾಯಿತು ಚಿನ್ನಿ ಯಾಕೆ ಏನಾಯಿತು"

"ರಾಕೇಶಾ .. ಗೀತಾ ಗೀತ.. ಗೀತಾ ..... #@#@#@#@@@#@"

ಏನು ಹೇಳಿದಳೋ ರಾಕೇಶನಿಗೆ ಅರ್ಥವಾಗಲಿಲ್ಲ.. ಅಷ್ಟರಲ್ಲಿ ರಾಕೇಶನ ತಮ್ಮ ನೀರು ತಂದ.. ರಾಕೇಶ ಅವಳನ್ನು ತನ್ನ ತೊಡೆಯ ಮೇಲೆಮಲಗಿಸಿಕೊಂಡು .. ಮೆಲ್ಲನೆ ಒಂದೆರಡು ಗುಟುಕು ನೀರು ಕುಡಿಸಿದ ,. ಸ್ವಲ್ಪ ಹೊತ್ತು ಸುಮ್ಮನಿದ್ದ ಮೇಲೆ ವೀಣಾ ಸುಧಾರಿಸಿಕೊಂಡು ಎದ್ದು ಕೂತಳು..

"ರಾಕೇಶ.. ಗೀತಾ ಯಾತ್ರೆ ಮುಗಿಸಿಕೊಂಡು ಬರುವಾಗ ಅವಳು ಬರುತ್ತಿದ್ದ ಬಸ್ಸು ಅಪಘಾತವಾಗಿ ಎಲ್ಲರನ್ನು ಆಸ್ಪತ್ರೆಗೆ ಸೇರಿಸಿದ್ದಾರಂತೆ.. ಅಲ್ಲಿನ ಒಬ್ಬರು ಕರೆ ಮಾಡಿದರು.. ಬಾ ಪ್ಲೀಸ್ ಹೋಗೋಣ. ."

"ಇರು ಇರು ಚಿನ್ನಿ.. ಮೊಬೈಲ್ ಕೊಡು.. ನಾ ಫೋನ್ ಮಾಡಿ ವಿವರ ತಿಳ್ಕೋತೀನಿ... ಆಮೇಲೆ ಹೋಗೋಣ.. "

ರಾಕೇಶ ವೀಣಾಳ ಫೋನಿಗೆ ಬಂದ ನಂಬರಿಗೆ ಕರೆ ಮಾಡಿದ.. ಪೂರ್ತಿ ವಿವರ ತಿಳಿದುಕೊಂಡ.. ಸಮಾಧಾನಸ್ಥ ರಾಕೇಶ ಎಂದಿಗೂ ಉದ್ವೇಗಗಕ್ಕೆ ಒಳಗಾಗುತ್ತಿರಲಿಲ್ಲ..

"ಚಿನ್ನಿ ಬೇಗ ಸ್ನಾನ ಮಾಡು.. ಇಲ್ಲಿಂದ ೭೦ಕಿಮೀಗಳ ದೂರ.... ಬೇಗನೆ ಹೋಗೋಣ.. "

ಅರ್ಧ ಘಂಟೆಯಲ್ಲಿ ರಾಕೇಶ, ವೀಣಾ.. ಅಪಘಾತವಾದ ಸ್ಥಳಕ್ಕೆ ಹೊರಟಿದ್ದರು.. ಮನೆಯವರಿಗೆಲ್ಲ.. ಅಲ್ಲಿಗೆ ಹೋಗಿ ಫೋನ್ ಮಾಡ್ತೀವಿ ಗಾಬರಿ ಮಾಡಿಕೊಳ್ಳಬೇಡಿ.. ನಾ ಹೇಳುವ ತನಕ ಯಾರೂ ಎಲ್ಲಿಗೂ ಹೋಗಬೇಡಿ ಅಂತ ಹೇಳಿದ..

ಅಪಘಾತವಾದ ಸ್ಥಳಕ್ಕೆ ಹತ್ತಿರ  ಹೋಗುವ  ಮುನ್ನ ಮತ್ತೆ ವೀಣಾಳ ಮೊಬೈಲಿಗೆ ಕರೆ ಬಂದ ನಂಬರಿನ ಜೊತೆ ಮಾತಾಡತೊಡಗಿದ.. ಅವರು ಹೇಳಿದ ಹಾಗೆ.. ಹತ್ತಿರವಿದ್ದ ಆಸ್ಪತ್ರೆಗೆ ಹೋದ..

ವೀಣಾಳಿಗೆ ಅಳು ತಡೆಯೋಕೇ ಆಗುತ್ತಿರಲಿಲ್ಲ.. ನಿಧಾನವಾಗಿ ಆಸ್ಪತ್ರೆಯ ಒಳಗೆ ಹೋದಾಗ.. .ಅಲ್ಲಿದ್ದ ಕರೆ ಮಾಡಿದವನ ಹತ್ತಿರ ಮಾತಾಡಿದಾಗ ಅರಿವಾಗಿದ್ದು .. ಗೀತಾ ಕುಟುಂಬ ಬರುತ್ತಿದ್ದ ಬಸ್ಸಿಗೆ ಪಕ್ಕದಲ್ಲಿ ಬಂದ ಲಾರಿಯೊಂದು ಬ್ರೇಕ್ ವಿಫಲವಾಗಿ ಡಿಕ್ಕಿ ಹೊಡೆದು.. ಇಡೀ ಬಸ್ಸು ಮತ್ತು ಲಾರಿಗೆ ಬೆಂಕಿ ತಗುಲಿತು.. ಡಿಕ್ಕಿ ಹೊಡೆದ ಪರಿಣಾಮ.. ಹಿಂದಿನ ಸೀಟಿನಲ್ಲಿ ಕಿಟಕಿಯ ಹತ್ತಿರ ಕೂತಿದ್ದ ಗೀತಾ ಮತ್ತು ಅವಳ ಮಗು.. ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟಿದ್ದರು.. .  ಅವರೊಂದಿಗೆ ಇನ್ನೂ ಐದಾರು ಜನ ಬಸ್ಸಿನಿಂದ ಹೊರಗೆ ಬಿದ್ದಿದ್ದರು.. ಆದರೆ ಮಿಕ್ಕವರು ಬಸ್ಸು ಬೆಂಕಿ ಹೊತ್ತಿಕೊಂಡಿದ್ದರಿಂದ ಹೊರಗೆ ಬರಲಾಗದೆ.. ಒಳಗೆ ಇರಲಾಗದೆ.. ಬೆಂಕಿ ಮತ್ತು ಹೊಗೆಯ ಪರಿಣಾಮ ನಿರ್ಜೀವವಾಗಿದ್ದರು..

ಗೀತಾ ಮತ್ತು ಮಗು ರಸ್ತೆಯಲ್ಲಿ ಬಿದ್ದಿದ್ದರಿಂದ.. ಅವಳ ಕೈಚೀಲದಲ್ಲಿದ್ದ ಮೊಬೈಲಿಂದ ಕೊನೆ ಕರೆ ಮಾಡಿದ್ದ ನಂಬರಿಗೆ ಕರೆ ಮಾಡಿದ್ದರು.. ದೇವರ ಆಟ ಹೇಗಿದೆ ನೋಡಿ.. ಹಿಂದಿನ ರಾತ್ರಿ ಹೊರಡುವಾಗ ವೀಣಾಳಿಗೆ ಕರೆ ಮಾಡಿ ದೇವರ ದರ್ಶನ ಚೆನ್ನಾಗಿ ಆಯಿತು.. ಅಂತ ಹೇಳಿ ಪ್ರವಾಸದ ಒಂದು ಪುಟ್ಟ ಪರಿಚಯ ಮಾಡಿಕೊಟ್ಟಿದ್ದಳು.. ಅದೇ ಅವಳ ಕಡೆಯ ಕರೆಯಾಗಿತ್ತು..

ಡಾಕ್ಟರನ್ನು ಭೇಟಿ ಮಾಡಿದಾಗ "ನೋಡಿ.. ಗೀತಾ ಬದುಕುವ ಸಾಧ್ಯತೆ ತುಂಬಾ ತುಂಬಾ ಕಡಿಮೆ.. ಅವರ ಮಗುವನ್ನು ಭದ್ರವಾಗಿ ರಗ್ಗಿನಲ್ಲಿ ಸುಟ್ಟಿಕೊಂಡಿದ್ದರಿಂದ.. ಬೆಂಕಿಯ ಉಷ್ಣತೆ ಮತ್ತು ಬಿದ್ದ ಗಾಯಗಳು ಕಡಿಮೆ ಆಗಿವೆ.. ಮಗುವಿಗೆ ಏನೂ ತೊಂದರೆ ಇಲ್ಲ.. ಆದರೆ ಗೀತಾ ಬದುಕುವ ಸಾಧ್ಯತೆ ಕಮ್ಮಿ.. ಯಾವ ಚಿಕಿತ್ಸೆಗೂ ಅವರು ಪ್ರತಿಕ್ರಿಯೆ ನೀಡುತ್ತಿಲ್ಲ.. ಬಹುಶಃ ಬಸ್ಸಿನಿಂದ ಹೊರಗೆ ಬೀಳುವಾಗ ತಲೆ ರಸ್ತೆಗೆ ಬಡಿದು... ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವ ಸಾಧ್ಯತೆ ಇದೆ.. ರಿಪೋರ್ಟ್ ಬರುವ ತನಕ ಏನೂ ಹೇಳೋಕೆ ಆಗೋಲ್ಲ.. ೪೮ ಘಂಟೆಗಳು ಬೇಕು.. ಆಮೇಲೆ ಹೇಳುತ್ತೇವೆ.. ಮಗುವನ್ನು child ICU ನಲ್ಲಿ ಇಟ್ಟಿದ್ದೇವೆ. .. ಮಗುಉಳಿಯುತ್ತದೆ .. ಮಿಕ್ಕಿದ್ದು " ಎಂದು ಹೇಳಿ ಕೈಬೆರಳನ್ನು ಮೇಲಕ್ಕೆ ತೋರಿಸಿದರು..

ವೀಣಾಳಿಗೆ ತಡೆಯಲಾಗದೆ ಜೋರಾಗಿ ಕಿರುಚಿ ದಪ್ ಅಂತ ಬಿದ್ದಳು.. ಅಲ್ಲಿದ್ದ ನರ್ಸ್ ಓಡಿ ಬಂದು..ಅವಳನ್ನು ಪರೀಕ್ಷೆ ಮಾಡಿ.ರಾಕೆಶನಿಗೆ "ನೋಡಿ.. ತುಂಬಾ ವೀಕ್ ಆಗಿದ್ದಾರೆ ಅನ್ನಿಸುತ್ತೆ ಈ ಆಘಾತಕ್ಕೆ.. ಗ್ಲುಕೋಸ್ ಹಾಕಿದರೆ ಸರಿ ಹೋಗುತ್ತಾರೆ.. "

"ಸರಿ ಹಾಗೆ ಮಾಡಿ" ರಾಕೇಶ ಹೇಳಿ ಕೌಂಟರ್ ಕಡೆಗೆ ಹೋದ.. ವಿವರಗಳನ್ನು ತುಂಬಲು..

ನಂತರ ವೀಣಾಳಿಗೆ "ಅಪಘಾತದ ಸ್ಥಳಕ್ಕೆ ಹೋಗಿ ಬರುತ್ತೇನೆ ಏನಾಗಿದೆ ಎಂದು ನೋಡಿ ಬರುತ್ತೇನೆ.. ಇಲ್ಲೇ ಇರು.. ನಾ ಕರೆ ಮಾಡುತ್ತೇನೆ ಗಾಬರಿಯಾಗಬೇಡ.. " ನಂತರ ಈ ಕಡೆ ತಿರುಗಿ.. "ಸಿಸ್ಟೆರ್ ನಾ ಅಪಘಾತವಾದ ಸ್ಥಳಕ್ಕೆ ಹೋಗಿ ಬರುತ್ತೇನೆ.. ಏನೇ ವಿಷಯ ಇದ್ದರೂ ನನ್ನ ನಂಬರಿಗೆ ಕರೆ ಮಾಡಿ.. " ಎಂದು ಅವರ ಉತ್ತರಕ್ಕೂ ಕಾಯದೆ.. ಹೊರ ಹೋದ..

ಅಪಘಾತವಾದ ಸ್ಥಳದಲ್ಲಿ ಜನಸಾಗರವೇ ತುಂಬಿತ್ತು.. ದೇಹಗಳ ಗುರುತಿಸುವಿಕೆಯ ಕಾರ್ಯ ನೆಡೆಯುತ್ತಿತ್ತು.. ಫೈರ್ ಎಂಜಿನ್ ಬೆಂಕಿಯನ್ನು ಆರಿಸಿತ್ತು.. ಕ್ರೇನ್ ಬಂದು ಬಸ್ಸು ಮತ್ತು ಲಾರಿಯನ್ನು ಬೇರ್ಪಡಿಸಿ.. ದಾರಿಯನ್ನು ವಾಹನಗಳಿಗೆ ತೆರವು ಮಾಡಿಕೊಟ್ಟಿತ್ತು..

ಅಲ್ಲಿದ್ದ ಪೊಲೀಸರ ಹತ್ತಿರ ಹೋಗಿ ತನ್ನ ಪರಿಚಯ ಮಾಡಿಕೊಂಡು.. ಗೀತಾಳ ಕುಟುಂಬದ ಸದಸ್ಯರ ವಿವರಗಳನ್ನು ಹೇಳಿದ.. ಬಸ್ಸು ಲಾರಿ ಸುಟ್ಟ ವಾಸನೆ.. ದೇಹಗಳಿಗೆ ಬೆಂಕಿ ಹತ್ತಿ ಅರೆ ಬರೆ ಸುಟ್ಟ ವಾಸನೆ.. ರಾಕೇಶನಿಗೆ ತಡೆಯಲಾಗದೆ ಕರವಸ್ತ್ರದಿಂದ ಮೂಗನ್ನು ಮುಚ್ಚಿಕೊಂಡು.. ಅಲ್ಲಿದ ದೇಹಗಳನ್ನ ನೋಡತೊಡಗಿದ..

"ನೋಡ್ರಿ..  ಯಾವ ದೇಹವನ್ನು ಗುರುತಿಸಲು ಆಗದು.. ಮೊಗವೆಲ್ಲ ಸುಟ್ಟಿದೆ.. ಹಾಕಿಕೊಂಡ ಬಟ್ಟೆ ಸುಟ್ಟಿದೆ.. ಕಷ್ಟಸಾಧ್ಯ.. ಅಂದ ಹಾಗೆ ಅವರ ಹೆಸರುಗಳನ್ನ ಹೇಳಿ ..."

ರಾಕೇಶ ಎಲ್ಲರ ಹೆಸರನ್ನು ಹೇಳಿದ.. "ಹೌದು ಎಲ್ಲರೂ ಈ ಬಸ್ಸಿನಲ್ಲಿ ಪಯಣಿಸಿದ್ದರು... ಆಸ್ಪತ್ರೆಗೆ ಸೇರಿಸಿದವರ ಹೆಸರು ಇಲ್ಲಿದೆ.. "..

"ಹೌದು ಸರ್ ಗೀತಾ ಮತ್ತು ಮಗುವನ್ನು ನೋಡಿಬಂದಿದ್ದೇನೆ.. ಮಿಕ್ಕವರು ಬದುಕಿರುವ ಸಾಧ್ಯತೆ ಇದೆಯೇ"

ರೀ.. ಏನ್ರಿ ನಿಮ್ಮ ಹೆಸರು.. ಆ ರಾಕೇಶ್ ಅಲ್ಲವಾ.. ರೀ ರಾಕೇಶ ಕಣ್ಣಾರೆ ನೋಡುತ್ತಿದ್ದೀರಿ.. ಈ ರೀತಿ ಅಪಘಾತವಾಗಿ ಸುಟ್ಟ ಬಸ್ಸಿನಲ್ಲಿ ಬದುಕಿಬಂದರೆ ಅದು ಪವಾಡವೇ ಅಲ್ಲವೇ.. ಐದಾರು ಮಂದಿ ಬಸ್ಸಿನಿಂದ ಹೊರಗೆ ಬಿದ್ದರು ಹಾಗಾಗಿ ಬದುಕುವ ಸಾಧ್ಯತೆಗಳು ಇವೆ.. ಬಸ್ಸಿನಲ್ಲಿದ್ದವರು, ಬಸ್ಸಿನಲ್ಲಿದ್ದದ್ದು ಎಲ್ಲವೂ ಭಸ್ಮವಾಗಿವೆ.. ಇಂತವರು ಅಂದುಕೊಂಡು ಅಂತ್ಯ  ಕ್ರಿಯೆ ಮಾಡಬೇಕು ಅಷ್ಟೇ.. "

ರಾಕೇಶ ಮರುಮಾತಾಡದೆ.. ವಿವರಗಳನ್ನು ಕೊಟ್ಟು.. "ದೇಹಗಳು ಅಂತ್ಯಕ್ರಿಯೆಗೆ ಯಾವಾಗ ಸಿಗಬಹುದು ಹೇಳಿ ಸರ್.. ನಾ ಬರುತ್ತೇನೆ.. ಆಸ್ಪತ್ರೆಗೆ ಹೋಗಬೇಕು.. " ಕಣ್ಣೀರು ಒರೆಸಿಕೊಂಡು ಆ ಪೋಲೀಸಿನವರ ವಿವರ ಪಡೆದು ಆಸ್ಪತ್ರೆಗೆ ಬಂದ..

ಅಷ್ಟೊತ್ತಿಗೆ.. ವೀಣಾ ಸ್ವಲ್ಪ ಸುಧಾರಿಸಿಕೊಂಡಿದ್ದಳು.. ರಾಕೇಶ ತಲೆಯಾಡಿಸಿದ.. ವೀಣಾಳಿಗೆಅರ್ಥವಾಯಿತು .. ಕಣ್ಣಂಚಲ್ಲಿ ನೀರು.. ಬೇಡ ಎಂದು ಸನ್ನೆ ಮಾಡಿದ ರಾಕೇಶ..

"ಮೇಡಂ ನೀವೇ ಅಲ್ಲವೇ ವೀಣಾ ಅಂದರೆ.. " ಆ ಧ್ವನಿಗೆ ಮತ್ತೆ ವಾಪಾಸ್ ಬಂದಳು ವೀಣಾ.. ತನ್ನ ಎದುರಿಗೆ ಏಳು ಮಂದಿ ನಿಂತಿದ್ದರು..

ಒಬ್ಬ ಪುಟ್ಟ ಹುಡುಗ ವಯಸ್ಸು ಹತ್ತು ಹನ್ನೆರಡು ಇರಬಹುದು.. . ಇನ್ನೊಬ್ಬ ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿರಬಹುದು ಎನಿಸುವ ಇಪ್ಪತ್ತೈದು ಅನಿಸುವ ಹುಡುಗ, ನಲವತ್ತು ತಲುಪಿದ ಇನ್ನೊಬ್ಬರು, ಇಬ್ಬರು ನಲವತ್ತು ಆಸುಪಾಸಿನ ಮಹಿಳೆಯರು, ಇಪ್ಪತ್ತರ ಅಂಚಿನ ಇಬ್ಬರು ಹುಡುಗಿಯರು... ತನ್ನ ಎದುರಿಗೆ ಇದ್ದರು..

ಎಲ್ಲರಿಗೂ ಕೈ ಕುಲುಕಿ.. ರಾಕೇಶನಿಗೆ ಪರಿಚಯ ಮಾಡಿಕೊಟ್ಟಳು..ಎಲ್ಲರನ್ನು ಉದ್ದೇಶಿಸಿ ಹೇಳಿದಳು..

"ನೀವು ಬಂದದ್ದು ತುಂಬಾ ಖುಷಿಯಾಯಿತು.. ನಿಮ್ಮ ವಿವರಗಳು ನನ್ನ ಬಳಿ ಇವೆ.. ಇಂದಿನಿಂದ ನೀವು ನನ್ನ ಕುಟುಂಬ ಸದಸ್ಯರಲ್ಲಿ ಒಬ್ಬರು.. ಕಾರಣ ನಿಮಗೆ ಕರೆ ಮಾಡಿದಾಗ ಹೇಳಿದ್ದೆ. ನನ್ನ ಗೆಳತಿಯನ್ನು ನಿಮ್ಮಲ್ಲಿ ನೋಡುತ್ತಿದ್ದೇನೆ.. ನನಗೆ ನಿಮ್ಮಿಂದ ಏನೂ ಸಹಾಯ ಬೇಡ.. ಆದರೆ ನಿಮ್ಮನ್ನು ನೋಡಬೇಕೆಂದಾಗ ನಿಮ್ಮ ಮನೆಗೆ ಬರಬಹುದೇ.. "

"ಮೇಡಂ.. ನಿಮ್ಮಿಂದಾಗಿ ನಾವು ಇಂದು ಈ ಲೋಕವನ್ನು ನೋಡುತ್ತಿದ್ದೇವೆ.. ಬದುಕಿದ್ದೇವೆ.. ನೀವೇ ನಮ್ಮ ಪಾಲಿಗೆ ದೇವರು.. ಖಂಡಿತ.. ನೀವು ಬರೋದು ಬೇಡ.. ನೀವು ಸಿಗೋಣ  ಅಂತ  ಹೇಳಿ ನೀವು ಇರುವ ಜಾಗಕ್ಕೆ ನಾವು ಬರುತ್ತೇವೆ..ನಿಮ್ಮ ಋಣ ನಮ್ಮ ಮೇಲಿದೆ.. " ಆ ಹುಡುಗ ಹೇಳಿದ್ದು ವೀಣಾಳ ಕಣ್ಣಲ್ಲಿ ನೀರು ತಂದಿತು.. ಎಲ್ಲರನ್ನು ಒಮ್ಮೆ ಅಪ್ಪಿಕೊಂಡು.. ತನ್ನ ಕೈ ಚೀಲದಲ್ಲಿದ್ದ ಚೊಕೊಲೇಟ್ ಕೊಟ್ಟು.. "ಇಂದಿನಿಂದ ಜೊತೆಯಲ್ಲಿರೋಣ.. ಜೊತೆಯಲ್ಲಿ ಸಾಗೋಣ.. ಪ್ರತಿ ತಿಂಗಳು ಇದೆ ದಿನ ಇಲ್ಲೇ ಭೇಟಿಯಾಗೋಣ.. "

ಎಲ್ಲರೂ ಹೋಟೆಲಿಗೆ ಹೋಗಿ.. ಸಂಜೆಯ ಲಘು ಉಪಹಾರ ಮಾಡಿಕೊಂಡು.. ಕೈ ಬೀಸಿ ಬೀಳ್ಕೊಟ್ಟರು..

ವೀಣಾ ರಾಕೇಶನ ಮೊಗ ನೋಡಿದಳು.. ಸೂಪರ್ ಚಿನ್ನಿ ಅಂದ.. ಗಟ್ಟಿಯಾಗಿ ತಬ್ಬಿ ಒಂದು ಹೂಮುತ್ತನ್ನು ಅವಳ ಹಣೆಯ ಮೇಲೆ ಒತ್ತಿದ.. ವೀಣಾ ಹಾಗೆ ಅವನ ಎದೆಗೆ ಒರಗಿದಳು..

ಮನೆ ಕಡೆಗೆ ಹೊರಟಾಗ .. ಮತ್ತೆ ನೆನಪಿನಾಳಕ್ಕೆ ಜಾರಿದಳು..

"ರಾಕೇಶ್ ಸ್ವಲ್ಪ ಬನ್ನಿ.. ನಿಮ್ಮ ಹತ್ತಿರ ಮಾತಾಡಬೇಕು.. "

ರಾಕೇಶ ನರ್ಸ್ ಜೊತೆ ಹೊರಬಂದ.. "ಈ ವಿಷಯ ಹೇಗೆ ಹೇಳಬೇಕು ನನಗೆ ಗೊತ್ತಾಗುತ್ತಿಲ್ಲ.. ಈ ಸಮಯದಲ್ಲಿ ಹೇಗೆ ಹೇಳುವುದು.. " ಪೀಠಿಕೆ ಹಾಕಿದರು.. ರಾಕೇಶ.. "ಇರಲಿ ಸಿಸ್ಟರ್ ಹೇಳಿ ಪರವಾಗಿಲ್ಲ.. "

"ನೀವು ತಂದೆಯಾಗುತ್ತಿದ್ದೀರಾ.. "

ರಾಕೇಶನಿಗೆ .. ಸಂಭ್ರಮ ಪಡಬೇಕೋ.. ಅಥವಾ ... 'ಥ್ಯಾಂಕ್ ಯು ಸಿಸ್ಟರ್.. ಭಗವಂತನ ಲೀಲೆ ಹೇಗಿದೆಯೋ ಯಾರಿಗೆ ಗೊತ್ತು.. ಆಗಿದ್ದು ಆಗಲಿ"

ಮನೆಗೆ ಕರೆ ಮಾಡಿ.. ಅಪಘಾತ, ಗೀತಾ ಮತ್ತು ಮಗುವಿನ ವಿಷಯ.. ವೀಣಾಳ ವಿಷಯ ಎಲ್ಲಾ ಹೇಳಿದ.. ಮನೆಯಲ್ಲಿ ಸಂತಸ, ಸೂತಕ ಎರಡೂ ಉಂಟಾಯಿತು ..

ಎರಡು  ದಿನ ಕಳೆಯಿತು.. ವೀಣಾಳನ್ನು ಅಂದಿನ ರಾತ್ರಿಯೇ ಆಸ್ಪತ್ರೆಯಿಂದ ಕರೆದುಕೊಂಡು ಹೋಗಿದ್ದ.. ಡಾಕ್ಟರ್ ಹೇಳಿದಂತೆ ಹುಷಾರಾಗಿರಬೇಕು.. ಉದ್ವೇಗ ಪಡಬಾರದು ಎಂದು ಒತ್ತಿ ಒತ್ತಿ ಹೇಳಿದ್ದ ವೀಣಾಳಿಗೆ..

ಆಫೀಸಿನಲ್ಲಿದ್ದ ರಾಕೆಶನಿಗೆ ಆಸ್ಪತ್ರೆಯಿಂದ ಕರೆ ಬಂತು.. ಒಂದು ಘಂಟೆಯಲ್ಲಿ ವೀಣಾಳ ಜೊತೆ ಆಸ್ಪತ್ರೆಯಲ್ಲಿದ್ದ..
"ಡಾಕ್ಟರ್.. "

" ಬನ್ನಿ ರಾಕೇಶ್ .. ಪೀಠಿಕೆ ಬೇಡ ಸೀದಾ ವಿಷಯಕ್ಕೆ ಬರುತ್ತೇನೆ.. ಗೀತಾ ಬದುಕುವ ಸಾಧ್ಯತೆ ಇಲ್ಲ.. ಆದರೆ ಅವರನ್ನು ನೀವು ಬದುಕಿಸಬಹುದು.. "

ರಾಕೇಶನ ಹುಬ್ಬು ಮೇಲೆ ಏರಿತು.. ವೀಣಾಳಿಗೂ ಡಾಕ್ಟರ್ ಏನೂ ಹೇಳುತ್ತಿದ್ದಾರೆ ಎಂಬ ಗೊಂದಲ..

"ನೋಡಿ ಗೀತಾ ಉಳಿಯೋಲ್ಲ.. ಅವರ  ಮೆದುಳು ನಿಷ್ಕ್ರಿಯವಾಗಿದೆ.. ಆದರೆ ಅವರ ಅಂಗಗಳನ್ನು  ದಾನ ಮಾಡಬಹುದು.. ಒಂದು ಐದಾರು ಮಂದಿಗೆ ಜೀವನ ಕೊಡಬಹುದು.. ಮತ್ತು ಅವರಲ್ಲಿ ನೀವು ನಿಮ್ಮ ಗೀತಾರನ್ನು ನೋಡಬಹುದು"

ರಾಕೇಶ ಏನೋ ಹೇಳಲು ಹೋದಾಗ ವೀಣಾ ಹೇಳಿದಳು "ಸರಿ ಡಾಕ್ಟರ್ ಹಾಗೆ ಮಾಡಿ.. ಅವಳು ನಮ್ಮ ಜೊತೆಯಲ್ಲಿದ್ದಾಳೆ ಅನ್ನುವ ಭಾವವೇ ಸಾಕು.. ಈ ಜಗತ್ತಿನಲ್ಲಿ ಇದ್ದಾಳೆ ಎನ್ನುವ ಸಂತಸ ನಾಮದಾಗಿರುತ್ತದೆ.. ಅದೇನು formality ಇದೆಯೋ ಅದನ್ನು ಪೂರ್ತಿ ಮಾಡಿ.. ನಾವಿಬ್ಬರು ಒಪ್ಪಿದ್ದೇವೆ" ರಾಕೇಶನ ಕಡೆ ತಿರುಗಿದಳು.. "well said ಚಿನ್ನಿ" ಅಂದ..

"ಸರಿ.. ಡಾಕ್ಯುಮೆಂಟ್ಸ್ ಏನೂ ಬೇಕೋ ಅದೆಲ್ಲ ಮಾಡುತ್ತೇವೆ.. ನಾಳೆ ಬೆಳಿಗ್ಗೆ ನಿಮಗೆ ಗೀತಾರನ್ನ ಕೊಡುತ್ತೇವೆ.. ಮಗು ಈಗ ಆರಾಮಾಗಿದೆ.. ಅದನ್ನು ನೀವೇ ಸಾಕುತ್ತೀರಾ ಎನ್ನುವ ರಾಕೇಶ್ ಅವರ ನಿರ್ಧಾರ ನನಗೆ ಇಷ್ಟವಾಯಿತು.. ನಿಮ್ಮಂತವರು ಬಲು ಅಪರೂಪ.. ದೇವರು  ಒಳ್ಳೆಯದನ್ನು ಮಾಡುತ್ತಾನೆ.. "

ಡಾಕ್ಟರಿಗೆ ಹಸ್ತ ಲಾಘವ ಮಾಡಿ.. ಹೊರಬಂದರು..

"ರಾಕೇಶ.. ಗೀತಾಳ ಮಗು ರೇವಂತನ ಪ್ರತಿರೂಪವಾಗಿದೆ.. ನೀವು ರೇವಂತನನ್ನು ಆ ಮಗುವಲ್ಲಿ ನೋಡುತ್ತೀರಾ.. ಗೀತಾ ನನ್ನ ಹೊಟ್ಟೆಯೊಳಗೆ ಹುಟ್ಟುತ್ತಿದ್ದಾಳೆ.. ನಾ ಅವಳನ್ನು ಆ ಮಗುವಲ್ಲಿ ನೋಡುತ್ತೇನೆ.. ಜೊತೆಯಲ್ಲಿ ಈ ಏಳು ಮಂದಿ ನಮ್ಮ ಜೊತೆ ಇದ್ದಾರೆ.. ಇದೇನೋ ಸ್ವಾರ್ಥಕತೆಯೋ.. ಅಥವಾ ಸಾರ್ಥಕತೆಯೋ.. "

".. ಗೀತಾ ತಾನು ಇತರರಿಗೆ ಬೆಳಕು ನೀಡಿ ಸಾರ್ಥಕತೆ ಮೆರೆದಳು.. ನಾವು ಗೀತಾ ಮತ್ತು ರೇವಂತನ ಸ್ನೇಹಕ್ಕೆ ಬೆಲೆ ಕೊಟ್ಟು ನಮ್ಮ ಸಾರ್ಥಕತೆ ಮರೆದೆವು.. ಗೀತಾಳ ಬದುಕಿಗೆ ಇದು ಸಾರ್ಥಕತೆ.. .. ನಮ್ಮಿಬ್ಬರಿಗೆ ಸ್ವಾರ್ಥಕತೆ"

ಮನೆಯ ಹತ್ತಿರ ಕಾರು ನಿಂತಾಗ.. ವೀಣಾಳ ಮನಸ್ಸು ಹಗುರಾಗಿತ್ತು..

ಮನದಲ್ಲಿದ್ದ ಸಾರ್ಥಕತೆ ಮತ್ತು ಸ್ವಾರ್ಥಕತೆ ಗೊಂದಲ ಮಂಜಿನ ಹನಿ ಸೂರ್ಯನ ಕಿರಣವ ಕಂಡು ಕರಗುವಂತೆ ಕರಗಿ ಹೋಗಿತ್ತು..

11 comments:

  1. ಅತ್ಯುತ್ತಮ, ಭಾವಪೂರ್ಣ ಕಥೆ. ಕೊನೆಯ ಭಾಗವು ಎಲ್ಲವನ್ನೂ clear ಮಾಡಿತು. ಕಣ್ಣುಗಳು ಹನಿಗೂಡಿದವು. ‘ಸ್ವಾರ್ಥಕತೆಯೋ ಅಥವಾ ಸಾರ್ಥಕತೆಯೋ..’ ಎನ್ನುವ ಶೀರ್ಷಿಕೆ ಸಾರ್ಥಕವಾಗಿದೆ. ಅಭಿನಂದನೆಗಳು.

    ReplyDelete
    Replies
    1. ಧನ್ಯವಾದಗಳು ಗುರುಗಳೇ.. ಬರೆದ ಸಾರ್ಥಕತೆ ಎಂದರೆ ನಿಮ್ಮ ಪ್ರತಿಕ್ರಿಯೆ ... ನಿಮ್ಮನ್ನ ಗೋಳಾಡಿಸಿದೆ.. ಕ್ಷಮೆ ಇರಲಿ.. ಕತೆ ಹಾಗೆ ಬರೆಸಿತು.. ನಾ ಬರೆದ..

      ನಿಮ್ಮ ಅಭಿಮಾನದ ಓದಿಗೆ ಮತ್ತು ಬೆನ್ನು ತಟ್ಟುವಿಕೆಗೆ ಶರಣಾದೆ

      Delete
  2. Hats off Sri ಮೂರು ಸಲ ಕಥೆಯನ್ನು ಓದಿದೆ ಕೊನೆಯ ಭಾಗ ಓದುವಾಗ ಮನಸ್ಸಿಗೆ ತುಂಬ ನೋವಾಯಿತು ಸವಿತ ನೆನಪಾದಳು ಅವಳೇ ಕಣ್ಣ ಮುಂದೆ ನಿಂತಂತೆ ಆಯಿತು may b this last part fully dedicated to great lady Savitha ಇನ್ನು ತುಂಬಾ ಹೇಳಬೇಕು ಅಂತ ಆದರೆ ಮನಸ್ಸು ತುಂಬ ಭಾರವಾಗಿದೆ ಪದಗಳು ಹೊರಡುತ್ತಿಲ್ಲ ಸಾರಿ ಶ್ರೀ ನಿಧಾನವಾಗಿ replied ��������

    ReplyDelete
    Replies
    1. ಧನ್ಯವಾದಗಳು ಪಿಬಿಎಸ್.. ನಿನ್ನ ಪ್ರತಿಕ್ರಿಯೆ ಓದಿ ಮನ ತುಂಬಿಬಂತು.. ಮನಸ್ಸಲ್ಲಿ ಇದ್ದ ಪದಗಳು ಕತೆಯಾಗಿ ಹರಿದಿದೆ..

      Delete
  3. sri mathe bartilla thumba chennagidhe
    Sri s named as veena in ths story hats off sri

    ReplyDelete
    Replies
    1. Sharadhe ninna maatugalu mooka maadi bittavu.. dhanyavaadgalu

      Delete
  4. ಕಳೆದ ಮೂರು ಭಾಗಗಳಲ್ಲಿ ಕುತೂಹಲವನ್ನು ಲಕೋಟೆಯ ಒಳಗಿಟ್ಟು ಓದುಗರನ್ನು ಸತಾಯಿಸಿ ಕಥೆಗೊಂದು ಚಂದದ ಅಂತ್ಯವಿಟ್ಟು ಮರಳಿ ಜೀವಕೊಡುವಂತ ಅಂಗದಾನದ ಸಾರ್ಥಕ ಸಂದೇಶವನ್ನ ಕಥೆಯ ಮೂಲಕ ತಲುಪಿಸಿದ್ದೀರಿ..
    ಗೀತಾಳ ಬದುಕನ್ನು ಸಾರ್ಥಕತೆಯ ನಂದಾದೀಪವಾಗಿಸಿ
    ಆತ್ಮೀಯತೆಯ ಸ್ನೇಹದಡಿಯಲ್ಲಿ ವೀಣಾ ರಾಕೇಶ್ ಮಾದರಿಯಾಗಿ ಮಿನುಗುತ್ತಿದ್ದಾರೆ..
    ಸಾವು ಶಾಶ್ವತವಾಗಿ ಅವರ ಇರುವಿಕೆಗೊಂದು,ಅಸ್ಥಿತ್ವಕ್ಕೂಂದು ಖಾಲಿತನ ಕೊಡುವ ವಿಷಾದ... ಆ ಖಾಲಿತನವನ್ನು ಸಾರ್ಥಕವಾಗಿ ತುಂಬಿಕೊಳ್ಳುವ ಸಂದೇಶ ಅರ್ಥಪೂರ್ಣ..

    ReplyDelete
    Replies
    1. ಎಂ ಎಸ್ ಏನು ಹೇಳಲ್ಲಿ ನಿನ್ನ ಪ್ರತಿಕ್ರಿಯೆ ಮನಕ್ಕೆ ತಾಕಿತು..

      ಈ ಕತೆಯನ್ನು ಬರೆಯಲು ಹೊರಟಾಗ. ಮನಸ್ಸು ಭಾರವಾಗಿತ್ತು.. ಪ್ರತಿ ಭಾಗವನ್ನು ಬರೆದಾಗ ಮನಸ್ಸು ಹಗುರವಾಗುತ್ತಾ ಹೋಯಿತು. ಕಡೆಯ ಭಾಗ ಬರೆಯುವಾಗ ನಾನು ನಾನಾಗಿರಲಿಲ್ಲ..
      ಮನದಲ್ಲಿ ಕೂತು ಬರೆಸಿದ ಆ ಕಾಣದ ಶಕ್ತಿಗೆ ಒಂದು ನಮನ

      Delete
  5. tumba arthapoorna kathe Sri...koneyawaregu kotoohalavagi vodi mugiside...

    ReplyDelete