Sunday, August 27, 2017

ಬರೆಯುವೆ ನಿನಗಾಗಿ..ಹೃದಯದೇ ಹಿತವಾಗಿ..... ಮುಂದುವರೆಯುತ್ತಾ

ಜೀವನದ ತಿರುವು... ಒಂದಷ್ಟು ದಿನ ಈ ಕಥೆಯನ್ನು ಮುಂದುವರೆಸಲು ಆಗಿರಲಿಲ್ಲ... ಈಗ ಮುಂದುವರೆಯುತ್ತಿದೆ
ಕಳೆದ ಭಾಗದಲ್ಲಿ  . ರಾಜೀವ ಕೆಲಸದ ಮೇಲೆ ಒಂದು ಹಳ್ಳಿಗೆ ಹೋಗಿದ್ದಾಗ.. ಗೀತಾ ಸಿಗುತ್ತಾಳೆ .. ತನ್ನ ಗೆಳತಿ ಸಿಕ್ಕ ಖುಷಿ ಒಂದು ಕಡೆ.. ಐ ಲವ್ ಯು ಎಂದು ಗೀತಾ ಹೇಳಿದಾಗ ಆಕಾಶವೇ ಕೈಗೆ ಸಿಕ್ಕಅನುಭವ .. ಇತ್ತ ಗೀತಾ ರಾಜೀವನನ್ನು  ಹುಡುಕಲು ... ಸಹಾಯ ಪಡೆದುಕೊಂಡಿದ್ದಳು... ಆ ಮಾಹಿತಿ ಸಿಕ್ಕ ಮೇಲೆ.. ರಾಜೀವ ಕೈಗೆ ಸಿಕ್ಕಿದ್ದ.. 

ಮುಂದಕ್ಕೆ... 

ಮೊಬೈಲಿನಲ್ಲಿದ್ದ ರಾಜೀವನ ಬಗ್ಗೆ ಮಾಹಿತಿಯ ವಿವರಕ್ಕೆ ಒಂದು ಮುತ್ತು ನೀಡಿದ ಗೀತಾ.. ರಾಜೀವನ ಕೆನ್ನೆಗೆ ಒಂದು ಸಿಹಿ ಮುತ್ತು ನೀಡಿ... ಬಾ ಅಲ್ಲಿ ಕುಳಿತು ಮಾತಾಡೋಣ ಅಂದಳು.. 

ರಾಜೀವನಿಗೆ ಕೆಲಸವಿತ್ತು.. ಆದರೆ..ಆ ಹಳ್ಳಿಯಲ್ಲಿ ಮೊತ್ತ ಮೊದಲ ಬಾರಿಗೆ ಕಾಲಿಟ್ಟಿದ್ದ.. ಸ್ಥಳದ ಪರಿಚಯವಿರಲಿಲ್ಲ.. ಗೀತಾಳ ಕೈ ಹಿಡಿದು.. "ನೀ ಏನು ಇಲ್ಲಿ.. ಎಲ್ಲಿದ್ದೀಯ.. ಏನು ಮಾಡುತ್ತಿದ್ದೀಯ.. ನನ್ನ ವಿವರ ಹೇಗೆ ಸಿಕ್ತು .. ?" ಪ್ರಶ್ನೆಗಳ  ಜಲಪಾತವೇ ಹರಿಸಿದ.. 

"ರಾಜೀವ ಅದೊಂದು ದೊಡ್ಡ ಕಥೆ... ಸಾವಧಾನವಾಗಿ ಹೇಳ್ತೀನಿ.."

 ರಾಜೀವನಿಗೆ ತನ್ನ ಕಚೇರಿಗೆ   ಹೋಗಬೇಕಿತ್ತು ... ಆದರೆ ಬಹು ವರ್ಷಗಳ ಮೇಲೆ ಸಿಕ್ಕಿದ್ದ ಜೀವದ ಗೆಳತಿಯನ್ನು ಬಿಡಲು ಮನಸ್ಸು ಬರಲಿಲ್ಲ.. "ಗೀತಾ.. ನಾ ಆಫೀಸ್ ಕೆಲಸದ ಮೇಲೆ ಬಂದಿದ್ದೀನಿ.. ನಿನ್ನ ಮೊಬೈಲ್ ನಂಬರ್ ಕೊಡು.. "

"ರಾಜೀವ. .. ನನಗೆ ಗೊತ್ತು.. ನಿನ್ನ ಕೆಲಸಗಳು.. ನಾನು ಅದೇ ಸೆಮಿನಾರಿಗೆ ಬಂದಿದ್ದೀನಿ... ನಾನು ನೀನು ಒಂದೇ ಹೋಟೆಲಿನಲ್ಲಿ ಇರೋದು.. ಯೋಚಿಸಬೇಡ.. ನಾ ನಿನ್ನ ಬೇತಾಳದ ನೆರಳಿನಂತೆ ಹಿಂಬಾಲಿಸುತ್ತೀನಿ.. ಮೊಬೈಲ್ ನಂಬರ್ ಬೇಕು ಅಂದರೆ ಕೊಡುವೆ.. ಆದರೆ ಅದರ  ಅಗತ್ಯವಿಲ್ಲ ಅಲ್ಲವೇ" ಎಂದು ಕಣ್ಣು ಮಿಟುಕಿಸಿದಳು.. 

ರಾಜೀವನ ಹೃದಯದ ಬಡಿತ ೭೨ ದಾಟಿ ಎಷ್ಟು ನಿಮಿಷಗಳಾಗಿತ್ತು.. 

ಇಬ್ಬರೂ ಕಾಯುತ್ತಿದ್ದ ಟ್ಯಾಕ್ಸಿ ಬಂತು.. ಹೋಟೆಲಿಗೆ ಬಂದರು.. .. ದಣಿದಿದ್ದ ಇಬ್ಬರೂ ತಮ್ಮ ತಮ್ಮ ಕೋಣೆಗೆ ಸೇರಿಕೊಂಡರು.. ಇಬ್ಬರಿಗೂ.. ಅನೇಕ ವರ್ಷಗಳಾದ ಮೇಲೆ ಸಿಕ್ಕಿದ್ದ ಗೆಳೆತನ.. ಆ ಸಿಹಿ ನೆನಪು.. ದಣಿವು.. ಕೆಲಸದ ಒತ್ತಡ.. ಹೀಗೆ ಎಲ್ಲವೂ ಸೇರಿಕೊಂಡು ನಿದ್ದೆ ಬರದೇ ಸ್ವಲ್ಪ ಹೊತ್ತು ಹೊರಳಾಡಿ ನಂತರ ನಿದ್ದೆ ಭೂತದಂತೆ ಆವರಿಸಿತ್ತು!

ಬೆಳಿಗ್ಗೆ ಎದ್ದಾಗ ಒಬ್ಬರ ಮುಖ ಒಬ್ಬರು ನೋಡುವ ತವಕ ಹೆಚ್ಚಾಗಿತ್ತು... ಸೆಮಿನಾರಿಗೆ ಎಲ್ಲರಿಗಿಂತ ಮೊದಲೇ ಬಂದು.. ತಿಂಡಿ ತಿಂದು.. ಕಾಫೀ ಕುಡಿಯುತ್ತಾ ಮಾತಾಡುತ್ತಾ ಕುಳಿತರು.. 

ಎರಡು ದಿನದ ಸೆಮಿನಾರು.. ಐದು ದಿನಕ್ಕೆ ವಿಸ್ತರಿಸಿದ್ದು... ಸಮಯಸಿಕ್ಕಾಗ ಕಣ್ಣುಗಳ ಮಿಲನ.. ತುಸು ತುಸು ಮಾತು..... ಐದು ದಿನಗಳು ಭಾರವಾಗಿ ಕಳೆಯಿತು.. ಸಂಜೆ ಹೊತ್ತು ತನ್ನ ಆಫೀಸ್ ಸಹೋದ್ಯೋಗಿಗಳ ಜೊತೆ ತಿರುಗಾಟ, ಊಟ.. ಇದ್ದದರಿಂದ.. ಇಬ್ಬರಿಗೂ ಖಾಸಗಿ ಸಮಯ ಸಿಕ್ಕಿರಲೇ ಇಲ್ಲ.. 

ಐದು ದಿನಗಳು ಉಸ್ಸಪ್ಪ ಅಂತ ಮುಗಿಯಿತು.. ಅಂದಿನ ರಾತ್ರಿ ಸೆಮಿನಾರಿಗೆ ಬಂದವರು ತಮ್ಮ ತಮ್ಮ ಊರಿಗೆ ಹೊರಟರು.. ಇವರಿಬ್ಬರೂ.. ಎರಡು ದಿನ ಇದ್ದು ಹೋಗುವ ಮನಸ್ಸು ಮಾಡಿದ್ದರು.. ಹಾಗಾಗಿ ತಮ್ಮ ಆಫೀಸಿಗೆ ಸುದ್ದಿ ತಿಳಿಸಿ.. 

ಅಂದಿನ ರಾತ್ರಿ ಇಬ್ಬರೂ ನಿದ್ದೆ ಮಾಡಲು ಆಗಿರಲಿಲ್ಲ.. ಬೆಳಿಗ್ಗೆ ಆಗುವುದನ್ನೇ ಕಾಯುತ್ತಿದ್ದರು.. 

ದಿನಕರ.. ಅಂದು ತುಸು ಬೇಗನೆ ಹೊರಬಂದಿದ್ದ.. ಅಥವಾ..  ಇವರಿಬ್ಬರಿಗೂ ಸಮಯ ಬೇಗ ಓಡಲೆಂದು ಮುಂಜಾನೆ ಬೇಗ ಆಯಿತೋ.. ಒಟ್ಟಿನಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ತಿಂಡಿ ತಿನ್ನಲು ಟೇಬಲಿಗೆ ಬಂದು ಕುಳಿತರು.. 

ರಾಜೀವನಿಗೆ ಕುತೂಹಲ ತಡೆಯಲಾಗಿರಲಿಲ್ಲ.. ಅವನ ಅನೇಕ ಪ್ರಶ್ನೆಗಳಿಗೆ ಉತ್ತರಬೇಕಿತ್ತು.. ಇತ್ತ ಗೀತಾ ಕೂಡ ಅನ್ಯಮನಸ್ಕಳಾಗಿಯೇ ಇದ್ದಳು.. ಎಷ್ಟು ಹೊತ್ತಿಗೆ ರಾಜೀವನ ಜೊತೆ ಕೂರುತ್ತೇನೆ.. ಮಾತಾಡುತ್ತೇನೆ ಎಂದು.. 

ಆ ಶುಭಘಳಿಗೆ ಬಂದೆ ಬಿಟ್ಟಿತು.. 

ಬೆಳಗಿನ ಚುಮುಚುಮು ಚಳಿ, ಹೋಟೆಲಿನ ಕಿಟಕಿಗಳಿಂದ ತಣ್ಣಗೆ ತೂರಿಬರುತ್ತಿದ್ದ ಗಾಳಿ, ಬಣ್ಣ ಬಣ್ಣದ ದೀಪಗಳು.. ತನಗಿಷ್ಟವಾದ ಕಡು ನೀಲಿ ಬಣ್ಣದ ಚೂಡಿದಾರ್ ಧರಿಸಿದ್ದ ಗೀತಾ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದಳು.. .. ಒಂದು ನಗೆಯನ್ನು ಬೀರಿ.. ರಾಜೀವನಿಗೆ ಹಸ್ತಲಾಘವ ಕೊಟ್ಟು.. ಅವನ ರೇಷ್ಮೆಯಂತೆ ತಲೆಗೂದಲಿನಲ್ಲಿ ಒಮ್ಮೆ ಕೈಯಾಡಿಸಿ ತನ್ನ ಸೀಟಿನಲ್ಲಿ ಕೂತಳು.. 

ರಾಜೀವ ಆ ಸರಳ ಅನುಮಪ ಸುಂದರಿಯನ್ನೇ ನೋಡುತ್ತಾ.. ಮೈ ಮರೆತಿದ್ದ ..  ಮತ್ತೆ ಅವನನ್ನು ಭುವಿಗೆ ಗೀತಾಳೆ ಕರೆತರಬೇಕಾಯಿತು.. 

"ಗೀತಾ.. ನನ್ನ ಕುತೂಹಲದ ಆಣೆಕಟ್ಟು ಒಡೆದು ಹೋಗಿದೆ.. ದಯಮಾಡಿ ಇದರಿಂದ ಮುಕ್ತಿಕೊಡು"

"ರಾಜೀವ.. .. ಸರಳವಾಗಿ ಹೇಳುತ್ತೇನೆ.. ಆಮೇಲೆ.. ನಾವಿಬ್ಬರೂ ಜೊತೆಯಲ್ಲಿ ಜೀವನ ಪೂರ್ತಿ ಹೆಜ್ಜೆ ಹಾಕಲೇಬೇಕಲ್ಲವೇ.. ನಿಧಾನವಾಗಿ ಅರಿವಾಗುತ್ತಾ ಹೋಗುತ್ತದೆ.. ಮೊದಲು ಅಪ್ಪ ಅಮ್ಮನಿಗೆ ಕರೆಮಾಡಿ ತಿಳಿಸಿಬಿಡೋಣ.. ನಮ್ಮ ಜೀವನದ ಪಯಣಕ್ಕೆ ಈ ಪುಟ್ಟ ಹಳ್ಳಿಯಲ್ಲಿ ಶಂಕುಸ್ಥಾಪನೆ ಆಗಿ ಹೋಗಲಿ.. ತಿಂಡಿ ತಿಂದ ಮೇಲೆ.. ಇಲ್ಲಿಯೇ ಹತ್ತಿರದಲ್ಲಿ ಗಣಪನ ಗುಡಿ ಇದೆ.. ಅಲ್ಲಿ ನಮಿಸಿ .. ಮನೆಗೆ ಕರೆ ಮಾಡಿ ಹೇಳೋಣ.. ಏನಂತೀಯಾ"

"ಯಾವಾಗಲೂ ನಿಂದೆ ಮಾತು.. ಸರಿ ಆಗಲಿ.. ಆದರೆ ಅದಕ್ಕೂ ಮುಂ.... "

"ಸರಿ ಸರಿ ಗೊತ್ತಾಯಿತು.. ನೀ ಹಸ್ತಾಕ್ಷರ ಕೇಳಿದ ಮರುದಿನದಿಂದ.. ನಿನ್ನ ಮೇಲೆ ನನಗೆ ಪ್ರೀತಿ ಹುಟ್ಟಲು ಶುರುಆಗಿತ್ತು ಅನ್ನಿಸುತ್ತೆ.. ನೀ ಮರುದಿನ ಕಾಲೇಜಿಗೆ ಬರಲಿಲ್ಲ.. ಆ ನಂತರ ನಿನ್ನ ದಾರಿ ನನ್ನ ದಾರಿ ಬದಲಾಯಿತು.. ಪದವಿ ಪಡೆಯಲು ನೀ ಅದೇ ಕಾಲೇಜಿನಲ್ಲಿ ಮುಂದುವರೆದೆ.. ನಾ ಬೇರೆ ಕಾಲೇಜಿಗೆ ಹೋದೆ.. ಆದರೆ ನಿನ್ನ ನೆನಪು ಭದ್ರವಾಗಿ ನನ್ನ ಹೃದಯಲ್ಲಿ ಕೂತು.. ಆ ನೆನಪು ಪ್ರೀತಿಗೆ ಬದಲಾಗುತ್ತಾಹೋಯಿತು .. "

ರಾಜೀವನ ಮೈಯೆಲ್ಲಾ ಕಿವಿಯಾಗಿತ್ತು

"ಕಾಲೇಜು ಮುಗಿಸಿದೆ .. ಹೊಟ್ಟೆ ಪಾಡಿಗೆ.. ಮನೆಯ ಜವಾಬ್ಧಾರಿ ಹೊತ್ತಿದ್ದ ನನಗೆ ಕೆಲಸದ ಅವಶ್ಯಕತೆ ಇತ್ತು.. ಆದರೆ ಈ ಹೈ ಟೆಕ್ ಯುಗದಲ್ಲಿ ಇಂಗ್ಲಿಷ್, ಕಂಪ್ಯೂಟರ್ ಬೇಕು.. ಒಂದು ಚಿಕ್ಕ ಕಂಪನಿಯಲ್ಲಿ ಕೆಲಸ ಮಾಡುತ್ತಾ.. ಸಂಜೆ ಹೊತ್ತು ಇಂಗ್ಲಿಷ್ ಮಾತಾಡಲು ಕಲಿಸುವ ಕ್ಲಾಸ್, ಕಂಪ್ಯೂಟರ್ ಕ್ಲಾಸ್ ಸೇರಿಕೊಂಡೆ.. ಅಲ್ಲಿದ್ದ ಕೆಲವು ಗೆಳೆಯರ ಸಹಾಯದಿಂದ.. ಈ ಫೇಸ್ಬುಕ್, ವಾಟ್ಸಪ್ಪ್ ಪರಿಚಯವಾಯಿತು.. ಚಿಕ್ಕ ಪುಟ್ಟಕವಿತೆಗಳು , ಶುಭನುಡಿಗಳಿಂದ ಆರಂಭವಾದ ನನ್ನ ಸಾಮಾಜಿಕ ಜಾಲತಾಣಕ್ಕೆ ಹಲವಾರು ಸ್ನೇಹಿತರು ಸಿಕ್ಕರು.. ಮನೆಯಲ್ಲಿನ ಪುಟ್ಟ ತಮ್ಮ ತಂಗಿಯರಿಗೆ ವಿದ್ಯಾಭ್ಯಾಸ ಮುಗಿಸಿ.. ತಮ್ಮನಿಗೆ ಒಂದು ಒಳ್ಳೆಯ ಕಂಪನಿಯಲ್ಲಿ ಕೆಲಸ ಆಯಿತು.. ಅವನು ತನ್ನ ಸಹೋದ್ಯೋಗಿಯನ್ನು ಇಷ್ಟ ಪಟ್ಟು ಮದುವೆಯಾದ.. ತಂಗಿಗೆ ಒಳ್ಳೆ ಹುಡುಗನನ್ನು ನೋಡಿ ಮದುವೆ ಮಾಡಿದೆ.. ಅಪ್ಪ ಅಮ್ಮನಿಗೆ ನನ್ನದೇ ಚಿಂತೆಯಾಗಿತ್ತು.. ನಾ ಹೇಳುತ್ತಲೇ ಬಂದಿದ್ದೆ... ನನ್ನ ಮದುವೆಗೆ ಯೋಚನೆ ಮಾಡಬೇಡಿ.. ಆದರೆ ಮೂವತ್ತೈದು ದಾಟಿದ್ದ ವಯಸ್ಸು.. ಅಪ್ಪ ಅಮ್ಮನ ಚಿಂತೆಯನ್ನು ಇನ್ನಷ್ಟು ಹೆಚ್ಚು ಮಾಡಿತ್ತು.. "

ಅಲ್ಲಿಯ ತನಕ ಗೀತಾಳನ್ನು ಕಣ್ಣು ಮಿಟುಕಿಸದೆ ನೋಡುತ್ತಿದ್ದ ರಾಜೀವನ ಕಣ್ಣುಗಳಲ್ಲಿ ಹನಿ ಮೋಡಗಳು ಕಾಣುತ್ತಿದ್ದವು.. ಗೀತಾ ಇದನ್ನು ಕಂಡು.. ರಾಜೀವನ ಕೈಯನ್ನು ಒಮ್ಮೆ ಅದುಮಿ ..ಬಾಗಿ ಕೈಗಳಿಗೆ ಒಂದು ಸಿಹಿ ಮುತ್ತು ನೀಡಿದಳು.. 

"ಒಂದು ದೊಡ್ಡ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಸಿಕ್ಕಿತು.. ಅಲ್ಲಿಂದ ನನ್ನ ಜೀವನದ ಹಾದಿಯೇ ಬೇರೆಯಾಯಿತು.. ಸದಾ ಕೆಲಸ.. ಊರು ಊರು ತಿರೋಗೋದು.. ನನ್ನ ಸಂಪರ್ಕ ವಲಯ ಇನ್ನಷ್ಟು ವಿಸ್ತರಿಸಿತು.. ಅನೇಕ ಗೆಳೆಯರು ಗೆಳತಿಯರು ಸಿಕ್ಕರೂ.. ನಿನ್ನ ನೆನಪು ಮಾತ್ರ ನನ್ನಲ್ಲೇ ಉಳಿದಿತ್ತು.. ಹೀಗೆ ಒಂದು ದಿನ ಕಚೇರಿಗೆ ರಜೆ ಇತ್ತು.. ಲ್ಯಾಪ್ಟಾಪ್ ನಲ್ಲಿ ಫೇಸ್ಬುಕ್ ಖಾತೆ  ನೋಡುತ್ತಿದ್ದೆ .. ನಿನ್ನ ಹೆಸರು ಹಾಕಿದೆ.. ಒಂದು ರಾಶಿ ಖಾತೆಗಳು ಬಂದವು.. ಒಂದೊಂದಾಗಿ ನೋಡಿದೆ.. ಯಾವುದುನೀನಲ್ಲ .. ಆಗ ನಿನ್ನ ಬಗ್ಗೆ ತಿಳಿಯುವ ಹುಚ್ಚು ಅತಿಯಾಯಿತು... ಕಾಲೇಜಿನ ಗುಂಪು.. ಸಾಹಿತ್ಯ, ಸಂಗೀತ.. ಆ ಗುಂಪು ಈ ಗುಂಪು ಎಲ್ಲವನ್ನು ತಡಕಾಡಿದೆ.. ಒಂದು ಆರು ತಿಂಗಳಾಗಿತ್ತು.. ಯಾವುದೇ ಸುಳಿವು ಸಿಗಲಿಲ್ಲ.. "

ರಾಜೀವನ ಎದೆ ಬಡಿತ ಹೆಚ್ಚಾಗುತ್ತಲೇ ಇತ್ತು.. ಒಂದು ಮಾತು ಆಡಿರಲಿಲ್ಲ .. ಗೀತಾ ಹೇಳುತ್ತಿದ್ದನ್ನೇ ಕೇಳುತ್ತಿದ್ದ

"ಮುಂದೆ.. ಗೂಗಲ್, ಲಿಂಕ್ಡ್ ಇನ್ ಎಲ್ಲವೂ ನನ್ನ ಹುಡುಕುವ ಕಾರ್ಯಕ್ಕೆ ನೆರವಾದವು.. ಆಗ ಒಂದು ದಿನ.. ಲಿಂಕ್ಡ್ ಇನ್ ನಲ್ಲಿ ನಿನ್ನ ಹೆಸರು ಸಿಕ್ಕಿತು.. ಜೊತೆಯಲ್ಲಿ ಕಾಮನ್ ಫ್ರೆಂಡ್ ಒಬ್ಬರು ಇದ್ದರು.. ಸರಿ ಅವರಿಗೆ ಲಗ್ಗೆ ಹಾಕಿದೆ.. ಅವರಿಗೂ ನಿನ್ನ ಬಗ್ಗೆ ಪೂರ್ಣ ವಿವರ ತಿಳಿದಿರಲಿಲ್ಲ.. ಆದರೆ ನೀ ಓದಿದ್ದ ಕಾಲೇಜು.. ನಿನ್ನ ಆಸಕ್ತಿ ವಿಷಯಗಳ ಬಗ್ಗೆ ತುಸು ಹೇಳಿದರು.. ನಿನ್ನ ಕಾರ್ಯಕ್ಷೇತ್ರದ ಬಗ್ಗೆ.. ನೀ ಕೆಲಸ ಮಾಡುವ ಕಂಪನಿಯನ್ನು ಇತ್ತೀಚಿಗಷ್ಟೇ ಬಿಟ್ಟು.. ಬೇರೆ ಕಂಪನಿ ಸೇರಿದ್ದೀಯೆಂದು.. ಆದರೆ ಅದರ ವಿವರ ಗೊತ್ತಿಲ್ಲ ಎಂದು ಹೇಳಿದರು.. ಮುಳುಗುತ್ತಿದ್ದವನಿಗೆ ಹುಲ್ಲು ಕಡ್ಡಿ ಆಸರೆ ಎನ್ನುವ ಹಾಗೆ.. ಮತ್ತೆ ನನ್ನ ಹುಡುಕಾಟಕ್ಕೆ ಇನ್ನಷ್ಟು ಚೈತನ್ಯ ಸಿಕ್ಕಿತು.. "

ರಾಜೀವನಿಗೆ ತಡೆಯಲಾಗದೆ .. ಗೀತಾಳ ಕೈಯನ್ನು ಭದ್ರವಾಗಿ ಹಿಡಿದ..  ಇದರ ಮಧ್ಯೆದಲ್ಲಿ ಹೋಟೆಲಿನವ.. ತಮ್ಮ ಟೇಬಲಿನತ್ತ ಬರುವುದನ್ನು ನೋಡಿ.. ಕಣ್ಣಲ್ಲೇ ಸನ್ನೆಮಾಡಿದ .. ಆಮೇಲೆ ಬಾ ಎಂದು.. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಗೀತಾ ಒಂದು ಮೋಹಕನಗೆಯನ್ನು ಕೊಟ್ಟಳು.. 

"ಮುಂದೆ ಹೇಳು ಗೀತಾ"

ಖಾಸಗಿ ಕಂಪನಿಯವರು ವ್ಯಕ್ತಿಗಳ ಬಗ್ಗೆ ವಿವರ ಸಂಗ್ರಹಿಸುತ್ತಾರೆ ಎಂದು ಹೇಳಿದ್ದೆ.. ನಮ್ಮ Human Resource ಸಹೋದ್ಯೋಗಿಯನ್ನು ವಿಚಾರಿಸಿದೆ.. ಅವಳು ನನಗೆ ಬಹಳ ಸಹಾಯ ಮಾಡಿದಳು.. ಮೊದಲು ನಿರಾಕರಿಸಿದ್ದಳು ಕೂಡ .. ನನ್ನ ಮನೆಯ ಬಗ್ಗೆ ತಿಳಿದಿದ್ದ ಅವಳಿಗೆ.. ಇದೊಂದು ಅವಕಾಶ ನಿನಗೆ ಕಣೆ ಗೀತಾ ಎಂದಿದ್ದಳು.. ಆಮೇಲೆ ಶುರುವಾಯಿತು.. ನಿನ್ನ ಬಗ್ಗೆ ಬೇಟೆ.. ಮೊದಲು ನನಗೆ ಬೇಕಾಗಿದ್ದು.. ನಿನಗೆ ಮದುವೆ ಆಗಿದೆಯೇ ಇಲ್ಲವೇ ಎಂಬುದು.. ನಾ ಆ ಖಾಸಗಿ ಕಂಪೆನಿಯವರಿಗೆ ಹೇಳಿದ್ದೆ.. ಮೊದಲು ಈ ವಿಷಯ ತಿಳಿದು ನನಗೆ ಹೇಳಿ.. ಆಮೇಲೆ ಮುಂದುವರಿಸೋದೋ ...ಬೇಡವೋ ಎಂದು ಹೇಳುತ್ತೇನೆ ಎಂದು... "

ರಾಜೀವ ನಸು ನಗುತ್ತಾ ಹೇಳಿದ.. "ನೀನು ಸುಂದರಿ ಮಾತ್ರವಲ್ಲ.. ಬುದ್ದಿವಂತೆ ಕೂಡ.. ನನಗೆ ಮದುವೆ ಆಗಿದ್ದಿದ್ದರೆ ಏನು ಮಾಡುತ್ತಿದ್ದೆ. ನನ್ನ ಮರೆತು ಬಿಡುತ್ತಿದ್ದೆಯ.. ?"

ಜೋರಾಗಿ ನಕ್ಕಳು ಗೀತಾ .. ಅದು ಬೆಳಗಿನ ಹೊತ್ತು.. ಆ ಪುಟ್ಟ ಹಳ್ಳಿಯಲ್ಲಿ ಇನ್ನೂ ಹೋಟೆಲಿಗೆ ಮಂದಿ ಬಂದಿರಲಿಲ್ಲ.. ಆದರೆ ಹೋಟೆಲಿನವರು ಇವಳ ಗಟ್ಟಿ ನಗುವಿಗೆ ಒಮ್ಮೆ ಎಲ್ಲರೂ ಇವರತ್ತ ನೋಡಿದರು.. "ಸಾರಿ" ಎಂದು ಕೈಯೆತ್ತಿ ಕ್ಷಮಿಸಿ ಎಂದು ಕೇಳಿಕೊಂಡು.. 

"ಮುದ್ದು.. ನಿನಗೆ ಮದುವೆ ಆಗಿದ್ದಿದ್ದರೆ.. ನಿನ್ನ ಸ್ನೇಹಿತೆಯಾಗಿ ಇರುತ್ತಿದ್ದೆ.. ಅಷ್ಟೇ"

"ಒಳ್ಳೆ ಹುಡುಗಿ ನೀನು... ಮುಂದೆ"

"ನಿನಗೆ ಮದುವೆ ಆಗಿಲ್ಲ ಎಂದು ತಿಳಿಯಿತು .. ಅದರ ಕಾರಣವೂ ತಿಳಿಯಿತು.. ನನ್ನದೇ ಕಥೆ ನಿನ್ನ ಮನೆಯಲ್ಲಿಯೂ.. ನಾವಿಬ್ಬರು ಬೆಂಕಿಯಲ್ಲಿ ಅರಳಿದ ಹೂವಿನ ನಾಯಕಿ ಸುಹಾಸಿನಿ ತರಹ.. ಮನೆಯ ಜವಾಬ್ಧಾರಿಯನ್ನು ಹೊತ್ತು ನಿಂತಿದ್ದೆವು.. ನಿನ್ನ ಮನೆಯ ವಿಚಾರವೆಲ್ಲ ತಿಳಿದ ಮೇಲೆ ನನಗೆ ನಿನ್ನ ಮೇಲೆ ಇನ್ನಷ್ಟು ಪ್ರೀತಿ ಹೆಚ್ಚಾಯಿತು .. ಇಷ್ಟೆಲ್ಲಾ ಜವಾಬ್ಧಾರಿಯನ್ನು ಹೆಗಲಿಗೇರಿಸಿಕೊಂಡು ನಾವು ಲವ್ವು ಪವ್ವು ಅಂತ ಇನ್ನೊಬ್ಬರ ಹಿಂದೆ ಬಿದ್ದಿರುವುದಿಲ್ಲ.. ಸೊ .. ನಾವಿಬ್ಬರು ಜನುಮದ ಜೋಡಿಯಾಗಬಹುದು ಎಂದು ನಿರ್ಧರಿಸಿ.. ನಿನ್ನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲ್ಲು ಹೇಳಿದೆ.. "

"ಉಫ್.". ರಾಜೀವ ದೊಡ್ಡದಾಗಿ ನಿಟ್ಟುಸಿರು ಬಿಟ್ಟಾ

"ನಿಮ್ಮ ಮನೆಯ ಪರಿಸ್ಥಿತಿ.. ಮೂವರು ತಂಗಿಯರ ಮದುವೆ.. ಅಪ್ಪ ಅಮ್ಮನ ಆರೋಗ್ಯ.. ಮನೆಯ ಮೇಲಿದ್ದ ಸಾಲಭಾದೆ.. ನಿನ್ನ ಒಬ್ಬನೇ ದುಡಿಮೆಯಿಂದ ಮನೆ ಸಾಗಬೇಕಿತ್ತು.. ಸಾಲದ ಶೂಲೆಯಿಂದ ಹೊರಗೆ ಬರಬೇಕಿತ್ತು. .. ನಿನ್ನ ಉಡುಗೆ ತೊಡುಗೆ.. ಅಭ್ಯಾಸಗಳು.. ಎಲ್ಲವೂ ನನಗೆ ಗೊತ್ತಾಯಿತು.. ಆದರೆ ನಿನ್ನ ಬಗ್ಗೆ ನನಗೆ ತುಂಬಾ ತುಂಬಾ ಇಷ್ಟವಾಗಿದ್ದು.. ನಿನ್ನ ಮನೋಸ್ಥೈರ್ಯ.. ಮನೆಯಲ್ಲಿನ ಪರಿಸ್ಥಿತಿ ಹಾಗಿದ್ದರೂ ಕೂಡ ನಿನ್ನ ಖರ್ಚು ವೆಚ್ಚಗಳು ಮಿತಿಯಲ್ಲಿದ್ದವು.. ಯಾವಾಗೋ ಒಮ್ಮೆ ಸಿಗರೇಟ್ ಅದು ಚಳಿಗಾಲ ಮತ್ತು ಮಳೆಗಾಲದಲ್ಲಿ ಮಾತ್ರ.. ನಿನ್ನ ಆಹಾರ ಪದ್ಧತಿ ಎಲ್ಲವೂ ನನಗೆ ಇಷ್ಟವಾಯಿತು.. ಅನೇಕ ಬಾರಿ ನಿನಗೆ ಗೊತ್ತಿಲ್ಲದೇ.. ನಿನ್ನ ಅನುಸರಿಸಿ.. ನಿನ್ನ ಚಟುವಟಿಕೆಗಳನ್ನು ಗಮನಿಸಿದ್ದೆ.. ನಮ್ಮಿಬ್ಬರದೂ ಒಂದೇ ಕಾರ್ಯ ಕ್ಷೇತ್ರವಾಗಿದ್ದರಿಂದ ಹಲವಾರು ಸೆಮಿನಾರುಗಳಲ್ಲಿ ನಿನ್ನ ನೋಡಿದ್ದೇ.. ನೀ ಜನರ ಜೊತೆ ಬೆರೆಯುವ ರೀತಿ.. ಅಹಂ ಇಲ್ಲದೆ ಎಲ್ಲರೊಡನೆ ಮಾತಾಡುವ ಬಗೆ.. ನಿನ್ನ ಕೈಕೆಳಗೆ ಕೆಲಸ ಮಾಡುವ ಕಿರಿಯ ಸಹೋದ್ಯೋಗಿಗಳ ಜೊತೆಯಲ್ಲಿ ನಿನ್ನ ಚಲನವಲನ ನನಗೆ ನೀನೆ ಹೇಳಿ ಮಾಡಿಸಿದ ಜೋಡಿ ಅನ್ನಿಸಿತು.. "

"ಬಲು ಗಟ್ಟಿಗಿತ್ತಿ ಕಣೆ ನೀನು.. ಶಭಾಷ್ ಮೇರೇ ಶೇರ್.. ಗೀತಾ ಒಂದು ಆಸೆ ಕಣೆ.. ನಿನ್ನನ್ನು ಗಟ್ಟಿಯಾಗಿ ತಬ್ಬಿ ಕೊಳ್ಳಬೇಕೆಂದು ಅನ್ನಿಸುತ್ತಿದೆ.. "

"ಅಯ್ಯೋ ಹುಡುಗ.. ನಾ ನಿನ್ನವಳು.. ನೀ ನನ್ನವನು.. " ಎಂದು ಹೇಳಿದ್ದೆ ತಡ.. ತನ್ನ ಕುರ್ಚಿಯಿಂದ ಎದ್ದು ರಾಜೀವನ ಬಳಿ ಬಂದು.. ಗಟ್ಟಿಯಾಗಿ ತಬ್ಬಿ ಕೆನ್ನೆಗೊಂದು ಮುತ್ತು ಕೊಟ್ಟಳು... 

"ನಿನಗಾಗಿ ಕಾದಿದ್ದ ನಾ ಅಹಲ್ಯೆಯೋ .. ಅಥವಾ ನನಗಾಗಿ ಕಾದಿದ್ದ ನೀನು ಶಬರಿಯೋ .. .. ಗೀತಾ ಇದಕ್ಕೆ ಏನು ಹೇಳುತ್ತೀಯಾ"

"ಮುದ್ದು ಮರಿ ರಾಜೀವ.. 
ಸೂರ್ಯನ ಕಾಂತಿಗೆ ಅರಳುವ ಕಮಲ ನಾನು 
ಆ ಸೂರ್ಯ ನೀನು
ನಿನ್ನ ಕಾಂತಿಗೆ ಹಂಬಲಿಸುತ್ತಾ ಕಾದಿದ್ದು ಇಷ್ಟು ವರುಷ 
ನಾ ಅಹಲ್ಯೆಯಂತೆ ನಿಂತಿದ್ದೆ 
ನಾ ಶಬರಿಯ ಹಾಗೆ ಕಾದಿದ್ದೆ
ನೀ ಶ್ರೀರಾಮನಂತೆ ನನ್ನ ಬಾಳಿನ್ನು ಬೆಳಗಿಸಿದೆ 
ಅಹಲ್ಯೆ ಶಬರಿ ಜೀವನದಿಂದ ಮುಕ್ತಿ ಪಡೆದರು 
ನಿನ್ನ ಪ್ರೀತಿಯಿಂದ ನನ್ನ ಬದುಕು ಹಸಿರಾಗಿದೆ ಕಣೋ ಹುಡುಗ . "

ರಾಜೀವನಿಗೆ ಇನ್ನೂ ತಡೆಯಲಾಗಲಿಲ್ಲ .. ಗಟ್ಟಿಯಾಗಿ ತಬ್ಬಿಕೊಂಡು ಹೇಳಿದ.. "ಹುಡುಗಿ.. ನನ್ನ ಮನೆಯ ಪರಿಸ್ಥಿತಿ ನನ್ನ ಮದುವೆಗೆ ಅನುಕೂಲವಾಗಿರಲಿಲ್ಲ.. ಬರುವ ಹುಡುಗಿ ಹೇಗೋ ಏನೋ ಎನ್ನುವ ಆತಂಕವಿತ್ತು.. ಜೊತೆಯಲ್ಲಿ ನನ್ನ ಅಪ್ಪ ಅಮ್ಮನನ್ನು ಮಗಳಾಗಿ ನೋಡಿಕೊಳ್ಳುವ ಸೊಸೆ ಬೇಕಿತ್ತು... ಅದನ್ನು ನಿನ್ನ ಕಣ್ಣಲ್ಲಿ ಕಂಡೆ.. ಆ ದೇವರಿಗೆ ಒಂದು ದೊಡ್ಡ ಸಲಾಂ.. " ಎಂದು ಹೇಳುತ್ತಾ ತನ್ನ  ಗೀತಳನ್ನು ಇನ್ನಷ್ಟು ಗಟ್ಟಿಯಾಗಿ ತಬ್ಬಿಕೊಂಡ.. 

"ಗೀತಾ.. ಮುಂದಿನ ಕೆಲಸ ತಿಂಡಿ.. ದೇವರ ದರ್ಶನ.. ನಮ್ಮಿಬ್ಬರ ಅಪ್ಪ ಅಮ್ಮನಿಗೆ ಈ ಶುಭ ವಾರ್ತೆ ತಿಳಿಸೋದು.. ಏನಂತೀಯಾ "

ರಾಜೀವ.. ಇನ್ನು ಮುಂದಿನ ಕೆಲಸ ಎರಡೇ.. ತಿಂಡಿ ಮತ್ತು ದೇವರ ದರ್ಶನ.. ನಮ್ಮಿಬ್ಬರ ಅಪ್ಪ ಅಮ್ಮ ಆಗಲೇ ಒಪ್ಪಿಯಾಯಿತು.. ಅವರ ಒಪ್ಪಿಗೆ ಸಂದೇಶ ವಾಟ್ಸಾಪ್ ನಲ್ಲಿ ಬಂದಿದೆ.. 

ನೀ ಬರಿ ಸುಂದರಿಯಲ್ಲ.. ಕಿಲಾಡಿ ಕಣೆ.. 

ರಾಜೀವನ ಮೊಬೈಲ್ ರಿಂಗ್ ಟೋನ್ "ಹೊಸಬಾಳಿಗೆ ನೀ ಜೊತೆಯಾದೆ.. ಹೊಸ ಆನಂದ ನೀ ಇಂದು ತಂದೆ.." ಕೂಗುತ್ತಿತ್ತು.. 

ಗೀತಾ ಅದನ್ನು ನೋಡಿದವಳೇ ಹೇಳಿದಳು "ನಾ ನಿನ್ನ ಬಿಡಲಾರೆ"

4 comments:

 1. ನಿಮ್ಮ ಕತೆಯು ನನ್ನನ್ನು ರೋಮ್ಯಾಂಟಿಕ್ ಮೂಡಿನಲ್ಲಿ ತೇಲಿಸಿತು. (ಅಥವಾ ಮುಳುಗಿಸಿತು ಎನ್ನಲೆ?) ಧನ್ಯವಾದಗಳು.

  ReplyDelete
  Replies
  1. ಹ ಹ ಹ.. ಸೂಪರ್ ಪ್ರತಿಕ್ರಿಯೆ ಗುರುಗಳೇ.. ಶರಣು ನಿಮಗೆ

   Delete
 2. ಸೆಮಿನಾರ್ ತಂದುಕೊಟ್ಟ ಅದೃಷ್ಟದ ಸೊಗಸು!!
  ಕೆಲವರ ಬದುಕಲ್ಲಿ ಕೌಟುಂಬಿಕ ಸಮಸ್ಯೆಗಳು, ಮಾಡಲೇಬೇಕಾದ ಜವಾಬ್ದಾರಿಗಳು ಹೆಗಲುಕೂಟ್ಟವರ ಖಾಸಗಿ ಸುಖವನ್ನು ಕಸಿದುಕೊಂಡು ಬಿಡುತ್ತವೆ..ಆದರೆ ಕುಟುಂಬದಲ್ಲಿ, ಸಮಾಜದಲ್ಲಿ ಅವರ ಸ್ಥಾನಮಾನ ಎತ್ತರದ್ದು..
  ಈ ವಿಷಯದಲ್ಲಿ ಇವರಿಬ್ಬರೂ ಸ‌ಮಪಾಲುದಾರರಾಗಿದ್ದೇ ಕಥೆಯ ಸುಖಾಂತ್ಯಕ್ಕೆ ದಾರಿಯಾಯಿತು.. ಆದದ್ದೆಲ್ಲಾ ಒಳಿತೇ ಎಂಬಂತೆ..
  ಪ್ರೀತಿಯಲ್ಲಿ ನಿರೀಕ್ಷೆಗಳು ನನಸಾದ ಕನಸಿಗಿಂತಲೂ ಸೊಗಸು..
  ಒಲಿದ ಹೃದಯಗಳಿಗೆ ಅದೃಷ್ಟ ಜೊತೆಗೂಡಿದಾಗ ಬದಕು ಸ್ವರ್ಗವೇ..
  ಬರೆದ ಶೈಲಿ ಇಷ್ಟವಾಯ್ತು..

  ReplyDelete
  Replies
  1. ಹೌದು ನಿಜ ಕಣೋ.. .. . ಜವಾಬ್ಧಾರಿ ಜೊತೆಯಾಗಿದ್ದಾಗ ಕನಸುಗಳು ಕೆಲವೊಮ್ಮೆ ಹಿಂದಕ್ಕೆ ಸರಿದರೂ.. ಅದು ಜೊತೆಯಾಗಿರುತ್ತದೆ.. ಸುಂದರ ಪ್ರತಿಕ್ರಿಯೆ ಎಂ ಎಸ್

   Delete