Tuesday, February 28, 2017

ಹಳ್ಳಿಯಾತನ ಅಮರವಾಣಿ...

ಬದುಕು ತೋರುವ  ಮಾರ್ಗ...  ಅಚಾನಕ್ ಕೊಡುವ ತಿರುವುಗಳು .. ಮನುಜನನ್ನು ಅಂತರ್ಮುಖಿಯನ್ನಾಗಿ ಮಾಡುವುದು ಸಹಜ.

ಪರಿಸ್ಥಿತಿಗೆ ಹೇಗೆ ಉತ್ತರಿಸುವುದು, ಹೇಗೆ ನಿಭಾಯಿಸುವುದು....  ಒಂದು ಚಿದಂಬರ ರಹಸ್ಯವಾಗೇ ಉಳಿದುಬಿಡುತ್ತದೆ..

ಸುಮಾರು ಮೂರುವರೆ ಘಂಟೆಯಾಗಿತ್ತು..ಬೆಳಗಿನ ಜಾವ..

ಶ್ರೀ ಶ್ರೀ.. ಯಾರೋ ಕರೆದ ಹಾಗೆ..

ದ ರಾ ಬೇಂದ್ರೆಯವರ ಯುಗ ಯುಗಾದಿ ಕಳೆದರೂ.. ಹಾಡಿನಲ್ಲಿ ಬರುವಂತೆ.. "ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ" ತರಹ ಗಾಢವಾದ ನಿದ್ದೆ ಮಾಡುವ ಆಸಾಮಿ ನಾ.. ನಮ್ಮ ಮನೆಯಲ್ಲಿ ಹೇಳುವಂತೆ ಮೈಮೇಲೆ ಆನೆ ಹೋದರೂ ಎಚ್ಚರವಾಗದಂತಹ ವರವನ್ನು ಆ ಭಗವಂತ ನೀಡಿದ್ದಾನೆ..

ನಾ ಪೂರ್ತಿ ಗಾಢವಾದ ನಿದ್ದೆಯಲ್ಲಿದ್ದೆ.. ಶ್ರೀ ಶ್ರೀ ಮತ್ತೊಮ್ಮೆ ಕರೆದ ಹಾಗೆ.. ಕಣ್ಣು ಬಿಟ್ಟೆ ಗವ್ ಗತ್ತಲೆ.. ಏನೂ ಕಾಣುತ್ತಿರಲಿಲ್ಲ..

"ಶ್ರೀ ಶ್ರೀ.. "
ಐದಾರು ಬಾರಿ ಮೈಯನ್ನು ಅಲುಗಾಡಿಸಿದಾಗ ಎಚ್ಚರವಾಯಿತು ಮತ್ತೆ  ಗೊತ್ತಾಯಿತು.. ನನ್ನ ಮಡದಿ..

"ಏನಪ್ಪಾ"

"ಶ್ರೀ ... ಅಪ್ಪ ಕನಸಲ್ಲಿ ಬಂದಿದ್ರು.. ನೋಡು ಸವಿ ನಿನ್ನ ಬಾಳಿನಲ್ಲಿ ಶ್ರೀಕಾಂತ ಬಂದದ್ದು ಫೆಬ್ರುವರಿ ೨೪ .. ನಾ ಇವಳನ್ನು ಬಿಟ್ಟು ಪರಲೋಕಕ್ಕೆ ಹೋಗಿದ್ದು ಜುಲೈ ೨೪.. ನನ್ನ ಬಾಳಸಂಗಾತಿ ನನ್ನ ಕೂಡಿಕೊಳ್ಳಲು ಹೊರಟಿದ್ದು ಫೆಬ್ರುವರಿ ೨೪..
ಈ ಇಪ್ಪತ್ತನಾಲ್ಕು ದಿನಾಂಕ ನಮ್ಮ ಬಾಳಿನಲ್ಲಿ ವಿಶೇಷವಾಗಿದೆ.. ಹೀಗೆ ಹೇಳಿದರು ಶ್ರೀ.. "

ನಾ ನನ್ನ ಮಡದಿಯ ತಲೆ ಸವರಿ "ನೋಡು ಟಿ.. ಜೀವನದಲ್ಲಿ ಹೀಗೆ ಆಗುವುದು ಸಹಜ.. ಕಳೆದುಕೊಂಡ ನೋವಿನ ಅರಿವು ನನಗಿದೆ.. ನಾವು ಸುಖವಾಗಿ ನೆಮ್ಮದಿಯಿಂದ ಇದ್ದದರಲ್ಲಿ ತೃಪ್ತಿ ಪಡುತ್ತಾ ನಲಿವಿನಿಂದ ಬಾಳ್ವೆ ಮಾಡಿದರೆ ಅದೇ ನಾವು ಅಗಲಿದ ಜೀವಕ್ಕೆ ತೋರುವ ಗೌರವ.. "

ಕಣ್ಣಲ್ಲಿ ನೀರಿತ್ತು.. "ಹೌದು ಶ್ರೀ.. ನಿಮ್ಮ ಮಾತು ಸರಿ" ಎಂದಳು..

ಇವಳು ಭಾವುಕಳಾಗುವುದು ತುಂಬಾ ವಿರಳ.. ನಾ ಆಗೊಮ್ಮೆ ಈಗೊಮ್ಮೆ ಈ ಹದಿನೈದು ವರ್ಷಗಳಲ್ಲಿ ಕಂಡಿದ್ದೇನೆ... ಇವಳ ಈ ಮಾತು ಮತ್ತು ಕನಸಿನಲ್ಲಿ ಮೂಡಿಬಂದ ಮಾತುಕತೆ ನನ್ನನ್ನು ಹಿಂದಿನ ದಿನಕ್ಕೆ ಕರೆದೊಯ್ದಿತು.

ಬೆಳಿಗ್ಗೆ ಎದ್ದು ನನ್ನ ನಿತ್ಯ ಕರ್ಮಗಳನ್ನು ಮುಗಿಸಿ ಆಫೀಸಿಗೆ ಹೊರಟಾಗ ಸುಮಾರು ಏಳು ಘಂಟೆ.. ಅಂದು ಜಗತ್ತೇ ಮೃತ್ಯುಂಜಯ ಭಕ್ತರ ಭಕ್ತ ಪರಶಿವನ ದಿನ ಅಂದರೆ ಮಹಾಶಿವರಾತ್ರಿ... ಎಲ್ಲೆಡೆಯೂ ಸಂಭ್ರಮ. ಫೇಸ್ಬುಕ್ ವಾಟ್ಸಾಪ್              ಇ -ಮೇಲ್ ಎಲ್ಲಾ ಕಡೆಯೂ ಶಿವಮಯ...  ಸರ್ವಂ ಶಿವಮಯಂ.. !

ಆ ಕಡೆಯಿಂದ ಕರೆಬಂತು.. "ಶ್ರೀಕಾಂತ್ ಬೇಗ ಬನ್ನಿ .. ಅಮ್ಮನನ್ನು (ನನ್ನ ಅತ್ತೆಯನ್ನು) ತುರ್ತು ನಿಗಾ ಘಟಕಕ್ಕೆ ಕರೆದುಕೊಂಡು ಹೋಗಿದ್ದಾರೆ.. ರಕ್ತದ ಒತ್ತಡ ಬಹಳ ಕಡಿಮೆಯಾಗಿದ್ದ ಕಾರಣ, ಹೀಮೋಗ್ಲೋಬಿನ್ ನಿರಂತರವಾಗಿ ಕಡಿಮೆಯಾಗುತ್ತಿರುವ ಕಾರಣ.. ವೈದ್ಯರು ಉಳಿಯುವುದು ಕಷ್ಟ ಎಂದಿದ್ದಾರೆ.. " ಮಡದಿಯನ್ನು ನೋಡಿದೆ. ಕಣ್ಣಲ್ಲಿ ಪ್ರವಾಹ ಉಕ್ಕುತ್ತಿತ್ತು.. ಹಾಗೆ ಸಮಾಧಾನ ಮಾಡಿ.. ಕಾರಿನಲ್ಲಿ ಕೂತೆವು..

ಆಸ್ಪತ್ರೆಗೆ ಬರುವತನಕ ಇವಳಿಗೆ ನೆಮ್ಮದಿಯಿಲ್ಲ... ದಡ ದಡನೆ ಮೂರನೇ ಮಹಡಿಗೆ ಬಂದೆವು.. ಅಲ್ಲಿ ನನ್ನ ಮಡದಿಯ ಅಣ್ಣ.. ಅಮ್ಮ ಉಳಿಯುವುದು ಕಷ್ಟ ಅಂತ ಹೇಳಿ ಬಿಕ್ಕಳಿಸಲು ಶುರುಮಾಡಿದರು.. ಇವಳು ಹೃದಯ ಒಡೆಯುವಂತೆ ಅಳಲು ಶುರುಮಾಡಿದಳು.. ಇಬ್ಬರನ್ನು ಸಮಾಧಾನ ಪಡಿಸಿ.. ನಾ ನನ್ನ ಮನೆಗೆ ವಿಷಯ ಮುಟ್ಟಿಸಲು ಕೆಳಗೆ ಬಂದೆ.. ಅನಂತರ ಸುಮಾರು ಹತ್ತು ನಿಮಿಷದಲ್ಲಿ ಎಲ್ಲವೂ ಮುಗಿದಿತ್ತು..

ನಂತರದ ಕಾರ್ಯಕ್ರಮದ ಬಗ್ಗೆ ರೂಪುರೇಷೆಗಳು ಸಿದ್ಧವಾಗಿತ್ತು..

ಹಿರಿಯ ಸಂಬಂಧಿಗಳ ಅಭಿಪ್ರಾಯದಂತೆ.. ಅರಸೀಕೆರೆಯ ಬಳಿಯ ಕಲ್ಯಾಡಿ ಗ್ರಾಮಕ್ಕೆ ಹೋದೆವು.. ಅಂತ್ಯ ಸಂಸ್ಕಾರದ ಪದ್ಧತಿಗಳು ಆರಂಭವಾದವು..

ನನ್ನ ಕಣ್ಣುಗಳು ಮಂಜಾಗಿರಲಿಲ್ಲ.. ಆದರೆ ಹೃದಯದಲ್ಲಿ ಉಕ್ಕುತ್ತಿದ್ದ ನೀರವತೆಯ ಪ್ರವಾಹದ ಆಣೆಕಟ್ಟು ಯಾವಾಗ ಬೇಕಾದರೂ ಒಡೆದು ಹೋಗಲು ಸಿದ್ಧವಾಗಿತ್ತು.. ತದೇಕ ಚಿತ್ತದಿಂದ ಆ ಅಂತಿಮ ನಮನದ  ಸಂಸ್ಕಾರವನ್ನು ನೋಡುತ್ತಾ ಕೂತಿದ್ದೆ.

ಕೆಲವು ಘಂಟೆಗಳ ಹಿಂದೆ ನಮ್ಮ ಜೊತೆಯಲ್ಲಿ ಮಾತಾಡಿದ್ದ ಜೀವ.. ಇಂದು ನಾ ಮಾತಾಡಲಾರೆ ಎಂದು ಬಾಯಿಗೆ ಬಟ್ಟೆ ಬಿಗಿದುಕೊಂಡು ಮಲಗಿದ್ದರು.. ಕಣ್ಣುಗಳು ಶಾಶ್ವತವಾಗಿ ಮುಚ್ಚಿಕೊಂಡಿದ್ದವು.. ಜೀವದ ವಾಯು ತೆಗೆದುಕೊಂಡು ಉಸಿರಾಡುವ ಶ್ವಾಸಕೋಶ ಬರ ಪ್ರದೇಶದಲ್ಲಿ ಮುಚ್ಚಿದ ಅಂಗಡಿಯಂತೆ ಇತ್ತು.. ಸುಮಾರು ಒಂದು ವರ್ಷದಿಂದ ಮಾತ್ರೆಗಳು ಟಾನಿಕ್, ವೈದ್ಯಕೀಯ ಚಿಕಿತ್ಸೆಗಳಿಂದ ಬಳಲಿ ಕೃಷವಾಗಿದ್ದ ದೇಹದಲ್ಲಿ ಸತ್ವದ ಅಂಶವೇ ಇರಲಿಲ್ಲ.. ಆರೋಗ್ಯ ಭಾಗ್ಯ.. ಅದಿಲ್ಲದೆ ಹೋದರೆ ಏನೇ ಇದ್ದರೂ ನಿಷ್ಪ್ರಯೋಜಕ ಅನ್ನಿಸುವ ಉದಾಹರಣೆ ಕಣ್ಣ ಮುಂದಿತ್ತು..

ನನ್ನ ಗಮನ ಸುತ್ತಮುತ್ತಲ ಮಾತುಗಳು, ಅದರ ಹಿಂದಿನ ತಕರಾರುಗಳು, ಬೇಕಾಗಿದ್ದ, ಬೇಡವಾಗಿದ್ದ ಯಾವ ಮಾತುಗಳ ಕಡೆಯೂ ಲಕ್ಷ್ಯವಿರಲಿಲ್ಲ..ಒಂದು ರೀತಿಯ ವೇದಾಂತ ಜೀವಿಯ ಉತ್ತುಂಗದ ತುದಿಯಲ್ಲಿ ನಿಂತ ಅನುಭವ.. ಮನುಜನ ಜನ್ಮ ಇಷ್ಟೆಯೇ.. ಹುಟ್ಟುವುದು ಒಂದು ಕಡೆ.. ಬೆಳೆಯುವುದು ಒಂದು ಕಡೆ.. "ಕಡೆ" ಒಂದು ಕಡೆ.. ಅಯ್ಯೋ ಇಷ್ಟರ ನಡುವೆ ಲೆಕ್ಕವಿಲ್ಲದಷ್ಟು ಸುಂದರ ಕ್ಷಣಗಳನ್ನು ಅನುಭವಿಸಿದ ಹಿರಿಯ ಜೀವದ ಜೀವ,  ಒಂದು ಕ್ಷಣದಲ್ಲಿ ಪರಮಾತ್ಮನ ಪಾದದಡಿಗೆ ತೆರಳಿದ್ದು.. ಏಕೆ ಹೀಗೆ.. ಹೀಗಾದರೆ ಹೇಗೆ.. ಈ ರೀತಿಯ  ನೂರಾರು ಪ್ರಶ್ನೆಗಳು ಕಲ್ಲು ಒಗೆದ ಜೇನುಗೂಡಿನಿಂದ ಹಾರಿಬರುವ ಜೇನು ನೊಣಗಳಂತೆ ನನ್ನನ್ನು ಕಾಡಲು ಶುರು ಮಾಡಿದವು..

ಗೋವಿಂದ ಗೋವಿಂದ ಎನ್ನುತ್ತಾ ಎಲ್ಲರೂ ಆ ಹಿರಿಯಜೀವದ ಕಳೇಬರವನ್ನು ಹೆಗಲು ಕೊಟ್ಟು ನೆಡೆಯಲು ಶುರುಮಾಡಿದೆವು.. ಎಲ್ಲರಿಗೂ ಹೆಗಲು ಕೊಡಲು ಅವಕಾಶ ಮಾಡಿಕೊಡಿ.. ಇದು ಎಲ್ಲರ ಮಾತಾಗಿತ್ತು... ಒಂದು ೩೦೦ ಮೀಟರ್ ನೆಡೆದು ಹೊರಟೆವು.. ಕಣ್ಣಲ್ಲಿ ನೀರು... ಮನದಲ್ಲಿ ಪ್ರವಾಹ.. ಮೌನದಿಂದಾಚೆಗಿನ ಲೋಕದಲ್ಲಿ ಎಲ್ಲರೂ ವಿಹರಿಸುತ್ತಿದ್ದರು.. ಯಾರಿಗೂ ಮಾತಾಡಲು ಅವಕಾಶವಿರದ ಪರಿಸ್ಥಿತಿ ಅದು... ಮೌನವೇ ಒಳ್ಳೆಯ ಆಭರಣ ಎನ್ನಿಸಿದ ಹೊತ್ತು.

ಅಲ್ಲಿದ್ದ ಕಟ್ಟಿಗೆಯ ರಾಶಿಯನ್ನು ನೋಡಿದೆ... ಬಣ್ಣ ಕಳೆದುಕೊಂಡು ಅದು ತನ್ನ ಅಂತಿಮ ಪಯಣಕ್ಕೆ ಸಿದ್ಧವಾಗಿದೆ ಅನ್ನಿಸಿತು. ತೆಂಗಿನ ಕಾಯಿ ಸಿಪ್ಪೆ.. ತನ್ನ ಒಡಲಲ್ಲಿದ್ದ ಅಮೃತಧಾರೆಯನ್ನು ಧಾರೆಯೆರೆದು, ತನ್ನ ಪುಣ್ಯದ ಫಲ ಆಗಲೇ ಯಾವುದೇ ಅಡಿಗೆಯಲ್ಲಿ ಲೀನವಾಗಿದ್ದು.. ಈಗ ಬರಿ ತನ್ನ ದೇಹದ ಸಿಪ್ಪೆ ಮಾತ್ರ ನಿಮ್ಮ ಅನುಕೂಲಕ್ಕೆ ನಿಂತಿದ್ದೇನೆ ಎನ್ನುವಂತೆ ತೋರಿತು.. ತಾನು ಹಸಿರಾಗಿದ್ದಾಗ ಸುತ್ತ ಮುತ್ತಲ ಪ್ರದೇಶಕ್ಕೆ ನೆರಳು ನೀಡುತ್ತಿದ್ದೆ.. ಆದರೆ ನನ್ನ ಬಣ್ಣ ಹೋದ ಮೇಲೆ.. ಅಗ್ನಿದೇವನಿಗೆ ರಂಗು ತರಲು ನಾ ಆಹುತಿಯಾಗುತ್ತೇನೆ ಎಂದಿತ್ತು ತೆಂಗಿನ ಗರಿ...... !

ಇಷ್ಟೆಲ್ಲಾ ನೆಡಯುತ್ತಾ ಇದ್ದರೂ ನನಗೆ ಸಂಬಂಧವಿಲ್ಲ ಎನ್ನುವಂತೆ ಹಿರಿಯ ಜೀವ ಮಲಗಿತ್ತು.. ಸಂಸ್ಕಾರದ ಅಂತಿಮ ಹಂತ ತಲುಪಿತ್ತು.. ಕಡೆಯ ಬಾರಿ ಮುಖ ದರ್ಶನ ಮಾಡಿದರು.. ನಂತರ ಆ ದೇಹದ ಮೇಲೆ ಭವ ಬಂಧನದ ಯಾವುದೇ ಬಂಧವಿರಬಾರದು ಎಂದು.. ಕಟ್ಟಿದ್ದ ಹಗ್ಗ, ಬೆಸೆದಿದ್ದ ಅಂತಿಮ ಯಾತ್ರೆಯ ಚಟ್ಟ ಎಲ್ಲವನ್ನು ತನ್ನ ಮೊದಲಿನ ಸ್ಥಿತಿಯಿಂದ ಭಿನ್ನತೆ ಕಾಣುವಂತೆ ಮಾಡಲಾಯಿತು.. ಅಲ್ಲಿದ್ದ ಪುರೋಹಿತರು... ಆ ದೇಹ ತೊಟ್ಟಿದ್ದ ಬಟ್ಟೆಯನ್ನು ಸ್ವಲ್ಪವೇ ಹರಿಯಿರಿ ಎಂದಾಗ... ಪೂರ್ತಿ ಹರಿಯಬೇಕೆ.. ಅಥವಾ ತುಸುವೇ ಹರಿಯಬೇಕೆ ಎನ್ನುವ ಜಿಜ್ಞಾಸೆ ಹುಟ್ಟಿತು.. ಆಗ ಅಲ್ಲಿದ್ದ ಹಿರಿಯರು ಮತ್ತು ಪುರೋಹಿತರು. .. ಬೇಡ ಬೇಡ ಸ್ವಲ್ಪವೇ ಶಾಸ್ತ್ರಕ್ಕೆ ಹರಿಯಿರಿ ಸಾಕು "ಬೆತ್ತಲೆ ಮಾಡಬಾರದು" ಎಂದರು..

ನನ್ನ ಯೋಚನಾ ಲಹರಿ ಮತ್ತೆ ಕಡಲಿನ ಅಲೆಗಳಂತೆ ಅಪ್ಪಳಿಸಲು ಶುರುಮಾಡಿದವು.. ಭಕ್ತ ಕುಂಬಾರ ಚಿತ್ರದಲ್ಲಿ ಅಣ್ಣಾವ್ರು ಹಾಡು "ಬರುವಾಗ ಬೆತ್ತಲೆ.. ಹೋಗುವಾಗ ಬೆತ್ತಲೆ.. ಬಂದು ಹೋಗುವ ನಡುವೆ ಕತ್ತಲೆ"   ಕಾಡುತ್ತಿತ್ತು.. ಮೌನವಾಗಿ ಅಂತರಂಗದಲ್ಲಿಯೇ ಹನಿಹನಿಯಾಗಿ ಕಣ್ಣೀರು ಇಂಗತೊಡಗಿತ್ತು..

ದೇಹದಲ್ಲಿ ಜಿಡ್ಡಿನ ಅಂಶ ಇಲ್ಲ ಅಂತ ಒಬ್ಬರು ಹೇಳಿದರು.. ಅದಕ್ಕೆ ಸಮವಾಗಿ.. ನನ್ನ ದೇಹವೂ ಒಣಗಿದ ವಾಟೆಗರಿಯಂತಾಗಿದೆ ಎಂದು ಕಟ್ಟಿಗೆ ಹಲ್ಲು ತೋರಿಸಿತು..  ಬ್ರಹ್ಮ ಸೃಷ್ಟಿಸಿದ ಕಟ್ಟಿಗೆ.. ಬ್ರಹ್ಮ ಸೃಷ್ಟಿಸಿದ ಈ ದೇಹವೆಂಬ ಕಟ್ಟಿಗೆ .. ಪೈಪೋಟಿ ಬಿದ್ದಂತೆ ಅಗ್ನಿದೇವನನ್ನು ಆಲಂಗಿಸಿಕೊಂಡು ಅಗ್ನಿಯ ಜಳಕ ಮಾಡಲು ಶುರುಮಾಡಿದವು... ಹಾಕಿದ್ದು ಕೆಲವೇ ಗ್ರಾಂ ತುಪ್ಪಾ.. ಕಾರಣ ತುಪ್ಪವೇ ಬೇಕಿರಲಿಲ್ಲ.. ಸಂಸಾರ ಸಾಗರದಲ್ಲಿ ಮುಳುಗೆದ್ದಿದ್ದ ಕಾಯ, ಸೂರ್ಯನ ತಾಪಕ್ಕೆ ಒಳಗಿನ ಜಲವನ್ನು ಸಂಪೂರ್ಣ ಆವಿಯಾಗಿಸಿಕೊಂಡಿದ್ದ ಕಟ್ಟಿಗೆ.. ಹೆಚ್ಚು ಹೊತ್ತು ಕಾಯಿಸದೆ ಅಗ್ನಿದೇವ ತನ್ನ ಕೆನ್ನಾಲಿಗೆಯನ್ನು ಎಲ್ಲಾ ದಿಕ್ಕುಗಳಲ್ಲಿಯೂ ಹಬ್ಬಿಸಿಕೊಂಡು ಭಕ್ಷಿಸಲು ಶುರುಮಾಡಿದ್ದ..

ಚಿತ್ರ ಕೃಪೆ - ಅಂತರ್ಜಾಲ 

ಸುಮಾರು ೪೫ ನಿಮಿಷಕ್ಕೂ ಹೆಚ್ಚು ನಾ ಅಲ್ಲಿಯೇ ಕುಳಿತ ಶಿವನ ಧ್ಯಾನ ಮಾಡಿದೆ..

ಸ್ಮಶಾನವಾಸಿ ಪರಮಶಿವ.. ಅವನ ಧ್ಯಾನ ರುಧ್ರಭೂಮಿಯಲ್ಲಿ.. ದಿನ ಶಿವರಾತ್ರಿಯ ಸುಮೂಹೂರ್ತ.. ಎಲ್ಲವೂ ಕನಸಲ್ಲಿ ನೆಡೆಯಿತ್ತಿದೆಯೇನೋ ಎನ್ನುವಂಥ ಭಾಸವಾಗುತ್ತಿತ್ತು..

ಇನ್ನೇನೂ ಹೊರಗೆ ಹೊರಡಬೇಕು . ಆ ಊರಿನ ಒಬ್ಬ ಹಿರಿಯ ವ್ಯಕ್ತಿ.. "ಬೆತ್ತಲೆ ಮಾಡದೆ ಸಂಸ್ಕಾರ ಮಾಡಬಾರದು.. "

ಆ ಕಡೆಯಿಂದ ಬಂದ ಉತ್ತರ.. "ಬೆತ್ತಲೆ ದಹನ ಮಾಡಬಾರದು..."

ಹಳ್ಳಿಯಾವ ನೋಡಿದರೆ ಅಕ್ಷರಸ್ಥ ಅನ್ನಿಸುವ ಹಾಗಿರಲಿಲ್ಲ ಆತ  "ಹೆಣಕ್ಕೇನೂ ಗೊತ್ತು ಬೆತ್ತಲೆ"

ನಾ ಸರ್ರನೆ ತಿರುಗಿ ನೋಡಿದೆ.. ನಿರ್ಮಲ ಮುಖ ಆತನದು.. ಆದರೆ ಆತ ಹೇಳಿದ ಆ ಮೂರು ಪದಗಳು.. ಅಬ್ಬಾ

ಆ ಮನುಷ್ಯ ಹೇಳಿದ್ದು ಮೂರೇ ಮೂರು ಪದಗಳು.. ಅರ್ಥ ಇಡೀ ಸಂಸಾರದ ಸಾರವೇ ಈ ಮೂರು ಪದಗಳಲ್ಲಿ ಮೂಡಿಬಂದದ್ದು.. ಮೊದಲೇ ಮೊಸರು ಗಡಿಗೆಯಾಗಿದ್ದ ನನ್ನ ತಲೆ ಇನ್ನಷ್ಟು ಕದಡಿ ಹೋಗಲು ಶುರುಮಾಡಿತು..

ಬೆಂಗಳೂರಿಗೆ ಬಂದ ಮೇಲೂ ನನಗೆ ಆ ಸಾಲುಗಳೇ ಕಾಡತೊಡಗಿತು..!!!

4 comments:

 1. ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ..... ಇಡಿ ಜೀವ ಸಾರವನ್ನೇ ಇದೊಂದು ವಾಕ್ಯದಲ್ಲಿ ಹೇಳ್ಬಿಡ್ತಾರೆ. ಮೊನ್ನೆ ಎಲ್ಲೋ ಓದಿದೆ ನಮಗೆ ಆತ್ಮ ಇರುವುದಿಲ್ಲ, ನಾವು ಅಂದರೆ ಆತ್ಮ. ನಮಗೆ ದೇಹವಿರುತ್ತೆ ಅಂತ. ಹಾಗೆ ಆತ್ಮ ತನ್ನ ದಾರಿ ಹಿಡಿದು ಹೋಗಾದ ಮೇಲೆ, ಅಂಗಿಯಂತಹ ಈ ದೇಹಕ್ಕೆ ಎಲ್ಲಿಯ ನಾಚಿಕೆ, ಸಿಟ್ಟು, ಬೇಸರ.
  ಅಮ್ಮನನ್ನ ಕಳೆದುಕೊಳ್ಳುವ ಯೋಚನೆ ಬಂದರೆ ಕಣ್ತುಂಬುವಾಗ ಆ ಸ್ಥಾನದಲ್ಲಿ ನಿಂತಿರುವ ಸವಿತಾರವರಿಗೆ ಒಂದು ಸಾಂತ್ವಾನದ ಅಪ್ಪುಗೆ .....

  ReplyDelete
 2. Mana kalakuwa ghatane .. ��.. Hrudaya sparshisuwa Baraha .. Baarada lokakke teralida Atteyawara jeewakke jeew midiyuwanta barahada Tarpana ..��.. Awara atmakke shanti sigali shri anna..��

  ReplyDelete
 3. ಹಳ್ಳಿಯವನಿಗೆ ಗೊತ್ತಿರುವ ತಿಳಿವಳಿಕೆ, ಅಕ್ಷರಸ್ಥರಿಗೆ ಇಲ್ಲವಲ್ಲ! ನಿಮ್ಮ ನಿರೂಪಣೆ ಚೆನ್ನಾಗಿದೆ.

  ReplyDelete
 4. Ninu ivattu istyake silent agidya antha yochne madtha idde, uttara sikthu. Your ultimate article anlo, athva nin manasinna novu anlo gottagtha illa.

  Novina aa prarhiyondu padanu, jeevanada artha heltha ide,.. Thanks for sharing

  Jeevana doddadu haage yesto arthagalu mucchi hogide, ondonde artha agtha hogrha, jeevana beautiful ansatte, ee novu kooda!

  ReplyDelete