Tuesday, October 11, 2016

ಕಾಡುವ - ೨

ಮೊದಲ ಭಾಗ ಇಲ್ಲಿದೆ
ಕಾಡುವ - ೧

ಇಬ್ಬರಿಗೂ ಬೆನ್ನಿನಲ್ಲಿ ಛಳಕ್ ಎಂದು ಚಳಿ ಮೂಡಿತು.. ಯಾಕೋ ಇಬ್ಬರೂ ತಿರುಗಿ ನೋಡಿದರು.. ಆ ಮೂರನೇ ವ್ಯಕ್ತಿ.. ಅಚಾನಕ್ ದೊಡ್ಡದಾಗಿ ಬೆಳೆದೆ ಬಿಟ್ಟಾ.. ಜೋರಾಗಿ ಗಹಗಹಿಸಿ ನಕ್ಕ..

ಇಬ್ಬರು ಮೂರ್ಛೆ ಬಿದ್ದರು.. ಫಳ್ ಫಳ್ ಮಿಂಚು ಬಂದಂತೆ ಭಾಸವಾಯಿತು.. ತುಂತುರು ಮಳೆ ನೀರು ಮುಖದ ಮೇಲೆ ಬಿದ್ದಿತು.. ತಿರುಗಿ ನೋಡದೆ.. ಓಡಲು ಶುರು ಮಾಡಿದರು.. ಅನತಿ ದೂರದಲ್ಲಿಯೇ.. ಯಾರೋ ಕರೆದ ಹಾಗೆ ಆಯಿತು..

"ಅಣ್ಣ ಅಣ್ಣಾ ಅಣ್ಣಾ ಅಣ್ಣಾ ...... !"

ಹಿಂದೆ ತಿರುಗಿ ನೋಡದೆ ಓಡುತ್ತಾ ಇದ್ದ ಇಬ್ಬರಲ್ಲಿ ಕಥೆ ಹೇಳಿ ಸರ್  ಎಂದು ಪೀಡಿಸುತ್ತಿದ್ದವ
"ಸರ್.. ಅಣ್ಣ ಅಂತ ಕರೆಯುತ್ತಿದ್ದಾರೆ, ಒಮ್ಮೆ ನೋಡೋಣವೇ.. "

"ಸರ್ ನೀವ್ ಸುಮ್ಮನಿರಿ ಸರ್.. ಮೊದಲೇ ನನಗೆ ಹೃದಯ ಬಾಯಿಗೆ ಬಂದಿದೆ.. ಬೆಳಿಗ್ಗೆ ಮನೆಯಿಂದ ಹೊರಡುವಾಗ ಬಿಪಿ ಮಾತ್ರೆ ತಗೋಳೋದೆ ಮರೆತುಬಿಟ್ಟಿದ್ದೇನೆ.. ಸ್ವಲ್ಪ ಹೆಚ್ಚು ಕಮ್ಮಿಯಾದರೂ.. ನಾನೇ ಅಣ್ಣ ಅಣ್ಣಾ ಎಂದು ಕರೆಯಲು ಶುರುಮಾಡಬೇಕಾಗುತ್ತದೆ.. ತೆಪ್ಪಗೆ ಓಡುವುದ ನೋಡಿ"

ಏದುಸಿರು ಬಿಡುತ್ತಲೇ ಮಧ್ಯೆ ಮಧ್ಯೆ ಮಾತು ಅಡ್ಡ ಅಡ್ಡ ಸೀಳಾಗುತ್ತಲೇ ಇತ್ತು.. . ಬಾಯಲ್ಲಿ ನೀರಿನ ಪಸೆ ಸಂಪೂರ್ಣ ಆರಿದ್ದರೂ.. ಇದ್ದ ಬದ್ದ ತುಸು ಧೈರ್ಯದಿಂದ ಈ ಮಾತನ್ನು ಆಡಿದ್ದರು.

ಪೇಮ್ ಫೇಮ್... ಎನ್ನುತ್ತಾ ಬಾರಿ ಹಾರ್ನ್ ಮಾಡುತ್ತಾ.. ಹಿಂದಿನಿಂದ ಒಂದು ಲಾರಿ ಬರುವ ಸದ್ದಾಯಿತು..  ಅರೆ ಇಸ್ಕಿ ಮೊದಲು ಕೈ ಮಾಡೋಣ ಅಂತ ಇಬ್ಬರೂ ಕೈ ಬೀಸುತ್ತಲೇ ಓಡುತ್ತಿದ್ದರು..

ಹಠಾತ್ ಲಾರಿ ನಿಂತಿತು..

"ಅಣ್ಣಾ ಅಣ್ಣಾ ಬನ್ನಿ ಅಣ್ಣಾ" ಆ ಧ್ವನಿ ಬಂದತ್ತ ತಿರುಗಿದರು.. . ಲಾರಿಯಲ್ಲಿ ಕೂತು ಒಂದು ವ್ಯಕ್ತಿ ಕರೆಯುತ್ತಿದೆ..
ಆ ಧ್ವನಿ ಪರಿಚಿತ ಅನಿಸಿತು ಆ ಭಯದಲ್ಲಿಯೂ..

"ಹಾಗಾದರೆ.. ನಮ್ಮನ್ನು ಅಣ್ಣ ಅಣ್ಣ ಅಂತ ಕರೆದಿದ್ದು.. ಇವರೇನೇ.. ?????" ಎದೆ ಜೋರಾಗಿ ರಾಜ್-ಕೋಟಿ ಅವರ ಡ್ರಮ್ ಬೀಟ್ಸ್ ತರಹ ನಗಾರಿಯಾಗಿತ್ತು, ಆದರೂ ಸಾವರಿಸಿಕೊಂಡು ಆ ಪ್ರಶ್ನೆ ಕೇಳಿದರು.

"ನಾ ಇಂದೇ ಕಾಡ್ನಾಗೆ ನೆಡೆದು ಬಂದಿದ್ದು.. ಲಾರಿ ಅಣ್ಣ ನನಗೆ ಡ್ರಾಪ್ ಕೊಡ್ತೀನಿ ಅಂದಾ.. ನಾ ಸುಮಾರು ೧೦೦ ಕಿಮಿ ಇಂದ ಬರ್ತಾ ಇದ್ದೀನಿ.. ನೀವು ಕತ್ಲಾಗೆ ಯಾರನ್ನ ನೋಡಿದ್ರೋ ಕಾಣೆ.. ಲಾರಿ ಅಣ್ಣ ಹೇಳ್ತಾ ಇದ್ದಾ.. ಈ ಘಟ್ಟದ ಕಾಡಿನಲ್ಲಿ ಏನೇನೂ ಇರ್ತಾವಂತೆ.. ಏನೋ ನೋಡಿರಬೇಕು ನೀವೂ "

"ಇಲ್ಲಪ್ಪ ಆ ಹಿಂದಿನ ತಿರುವಿನಲ್ಲಿ ಒಂದು ವ್ಯಕ್ತಿ ನಿನ್ನ ಧ್ವನಿಯಲ್ಲಿಯೇ ಮಾತಾಡುತ್ತಿತ್ತು.. ಅದಕ್ಕೆ ಕೇಳಿದೆ.. . ನನಗ್ಯಾಕೋ ತುಂಬಾ ಹೆದರಿಕೆ ಆಗ್ತಿದೆ.......  "

ಅವನ ಮಾತನ್ನು ತುಂಡರಿಸುತ್ತಾ ತುಸು ಕೋಪದಿಂದ
"ಸರ್.. ಮೊದಲೇ ನಾ ಗಾಬರಿ ಆಗಿ ಸಾಯ್ತಾ ಇದ್ದೀನಿ.. ನೀವು ಉಭಯ ಕುಶಲೋಪರಿ ಸಾಂಪ್ರತ ಕೇಳುತ್ತಿದ್ದೀರಾ.. ಮೊದಲು ಲಾರಿ ಹತ್ತಿ ಸರ್.. ಹೆದರಿಕೆಯಿಂದ ನನ್ನ ಬಟ್ಟೆ ಎಲ್ಲಾ ಒದ್ದೆ ಮಯವಾಗಿದೆ.. "

ಕಥೆ ಹೇಳುತ್ತಿದ್ದವ "ಸರಿ ಸರಿ.. ಎಲ್ಲೊ ಹೆದರಿಕೆಯಲ್ಲಿಯೇ ಹುಟ್ಟಿದ ಪ್ರಾಣಿ..  ಸರಿ ಹತ್ತು ಹತ್ತು.. "

ಇಬ್ಬರೂ ದೇವರಿಗೆ ಒಂದು ಸಲಾಂ ಹೇಳಿ.. ಲಾರಿ ಹತ್ತಿಯೇ ಬಿಟ್ಟರು.

ಲಾರಿಯ ಬ್ಯಾಟರಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ.. ಅವಾಗವಾಗ ಲಾರಿಯ ದೀಪ ಹತ್ತಿಕೊಳ್ಳುತ್ತಿತ್ತು, ಆರುತ್ತಿತ್ತು, ಹಾರ್ನ್ ಯಾವಾಗ ಬೇಡವೋ ಅವಾಗ ಕೆಲಸ ಮಾಡುತ್ತಿತ್ತು.. ಒಟ್ಟಿನಲ್ಲಿ ಹಾರ್ನ್ ಬಿಟ್ಟು ಮಿಕ್ಕೆಲ್ಲ ಲಾರಿ ಭಾಗಗಳು ಸದ್ದು ಮಾಡುತ್ತಿದ್ದವು..
ಚಿತ್ರ ಕೃಪೆ - ಗೂಗಲೇಶ್ವರ 

ಹೆದರಿ ಸತ್ತಿದ್ದ ಇಬ್ಬರಿಗೂ, ಚೂರು ಕಣ್ಣು ಹತ್ತಿತ್ತು... ಘಟ್ಟದ ತಿರುವುಗಳು ಜೋಲಿ ಹೊಡೆದಂತಾಗಿ ನಿದ್ದೆ ಎಳೆಯುತ್ತಿತ್ತು.. ಬೆಳಗಿನ ಜಾವ ಸುಮಾರು ೩-೪ ಘಂಟೆ ಇರಬಹುದು.. ಕತ್ತಲು ಇನ್ನೂ ದಟ್ಟವಾಗಿಯೇ ಇತ್ತು.. ಮಳೆ, ಕತ್ತಲು, ದಟ್ಟವಾದ ಕಾಡು, ಆಗಸವೇ ಕಾಣುತ್ತಿರಲಿಲ್ಲ..
ಚಿತ್ರ ಕೃಪೆ - ಗೂಗಲೇಶ್ವರ 

"ನೇನ್ ರಾ ನಾಗವಲ್ಲಿ"

ಎದೆ ಧಸಕ್ ಎಂದಿತು.. ಹಠಾತ್ ಇಬ್ಬರಿಗೂ ಎಚ್ಚರ.. ಲಾರಿಯಲ್ಲಿದ್ದ ಟಿವಿ ಯಲ್ಲಿ ಆಪ್ತಮಿತ್ರ ಚಿತ್ರದ ದೃಶ್ಯ....

ಎದೆ ಒಮ್ಮೆ ಝಲ್ ಎಂದಿತು..

"ಯಪ್ಪಾ.. ಈ ಹೊತ್ತಿನಲ್ಲಿ ಈ ಚಿತ್ರವೇ"

ಆ ವ್ಯಕ್ತಿ.. ಕಿಸ್ ಅಂತ ತನ್ನ ಹಲ್ಲನ್ನು ತೋರಿಸಿತು.. ಕರ್ರಗೆ ಇದ್ದರೂ.. ತುಸು ಬೆಳ್ಳಗಿನ ಹಲ್ಲುಗಳು  ಆ ಕಾರ್ಗತ್ತಲೆಯಲ್ಲಿಯೂ ಲಕ ಲಕ ಹೊಳೆಯುತ್ತಿತ್ತು..

ಲಾರಿ ಚಾಲಕ ಹತ್ತಿಸಿದ್ದ ಬೀಡಿಯ ದಟ್ಟ ಹೊಗೆ ಮೂಗಿಗೆ ಅಡರುತ್ತಿತ್ತು.. ಮಳೆ, ಮಣ್ಣಿನ ವಾಸನೆ, ಕೆಸರು, ನೆಂದು ನೆಂದು ಕೊಳೆಯುತ್ತಿದ್ದ ಮರಗಳ ತುಂಡು, ಕೊಳೆತ ಎಲೆಗಳು.. ಪಕ್ಕದವ ಅಗಿಯುತಿದ್ದ ಪಾನ್ ಪರಾಗ್.. ಇದಕ್ಕೆ ಜೊತೆಯಲ್ಲಿ ತಿರುಗಿ ತಿರುಗಿ ಸುತ್ತುತ್ತಿದ್ದ ಘಟ್ಟದ ರಸ್ತೆಗಳು, ಎಲ್ಲವೂ ಸೇರಿ ಹೊಟ್ಟೆಯೊಳಗೆ ಮಿಕ್ಸಿ ಆನ್ ಮಾಡಿದ್ದವು..

ಒಂದು ತುಸು ನಿದ್ದೆ ಆಗಿತ್ತು, ಹೊಟ್ಟೆಯೊಳಗೆ ಸಾಗರ ಮಂಥನವಾಗುತ್ತಿತ್ತು, ಅದನ್ನು ಹೇಗಾದರೂ ತಡೆಯಬೇಕು ಎಂದು.. ಮತ್ತೆ ಮಾತಿಗಿಳಿದ ಕಥೆ ಹೇಳುತ್ತಿದ್ದವ "ಆ ತಿರುವಿನಲ್ಲಿ ಸಿಕ್ಕಿದ ವ್ಯಕ್ತಿ ಯಾಕೆ ಅಲ್ಲಿ ನಿಂತಿದ್ದ ಎಂದು ಹೇಳಿದ.. ಆಶ್ಚರ್ಯ ಅಂದರೆ.. ಆ ವ್ಯಕ್ತಿ ಹೇಳಿದ ರೀತಿಯಲ್ಲಿಯೇ ನನಗೆ ಕಳೆದ ತಿಂಗಳು ಇದೆ ರೀತಿ ಅದೇ ಹಿಂದಿನ ತಿರುವಿನಲ್ಲಿ ಅದೇ ಘಟನೆ ನೆಡೆದಿತ್ತು.. ಏನೋ ಎಂತೋ ನನಗೆ ಗೊತ್ತಾಗ್ತಾ ಇಲ್ಲ.. ಒಂದು ಕಡೆ ಹೆದರಿಕೆ, ಇನ್ನೊಂದು ಕಡೆ ಆಶ್ಚರ್ಯ, ಕುತೂಹಲ.... ಏನಪ್ಪಾ ಲಾರಿ ಅಣ್ಣ.... ನಿನಗೇನಾದರೂ ಗೊತ್ತೇ ಇದರ ಬಗ್ಗೆ.. "

ಲಾರಿ ಚಾಲಕ ಸಾವಧಾನವಾಗಿ ಇವರಿಬ್ಬರ ಸಂಭಾಷಣೆ ಕೇಳಿಸಿಕೊಳ್ಳುತ್ತಿದ್ದ.. ಅವನ ತುಟಿ ಕಾರ್ಖಾನೆಯ ಚಿಮಣಿಯಂತೆ ಹೊಗೆಯನ್ನು ಬಿಡುತ್ತಲೇ ಇತ್ತು..

ನಿಧಾನವಾಗಿ ಇವರ ಕಡೆ ತಿರುಗಿ "ನನಗೆ ಈ ರೀತಿಯ ಕಥೆಗಳು, ಘಟನೆಗಳು ದಿನ ನಿತ್ಯವೂ ಕಾಣುತ್ತಲೇ ಇರುತ್ತದೆ ಸಾರ್" ಎಂದು ಕೆಟ್ಟದಾಗಿ ಹಲ್ಲು ಬಿಟ್ಟ.. ಫಳ್ ಮಿಂಚು..ಗುಡುಗು..  ಆ ದಟ್ಟಕಾಡಿನಲ್ಲಿ ಕಾರ್ಗತ್ತಲೆ ತುಂಬಿದ್ದರೂ, ಯಾವಾಗಲೊಮ್ಮೆ ಎದುರು ಬರುವ ವಾಹನದ ದೀಪಗಳಿಂದ ಲಾರಿಯಲ್ಲಿದ್ದ ವ್ಯಕ್ತಿಗಳ ಮುಖ ಅಸ್ಪಷ್ಟವಾಗಿ ಕಾಣುತ್ತಿತ್ತು..

ಲಾರಿ ಚಾಲಕ ನಿಧಾನವಾಗಿ ತಿರುಗಿದಾಗ.. ಅಲ್ಲಿದ್ದ ಇಬ್ಬರಿಗೂ ಮುಖದಲ್ಲಿ ಬೆವರಿನ ಜಲಪಾತ ಶುರುವಾಯಿತು.. ಕಾರಣ ಚಾಲಕನ ಒಂದು ಬದಿಯ ಮುಖವೇ ಇರಲಿಲ್ಲ.. ಬರಿ ವಸಡು, ಹಲ್ಲು ಕಾಣುತ್ತಿದ್ದವು.. ಕಣ್ಣುಗಳ ಗುಡ್ಡೆ ಮಾತ್ರ ಇದ್ದವು..

"ಅಯ್ಯೋ, ಯಪ್ಪಾ, ನಾ  ಸತ್ತೇ.. " ಇಬ್ಬರೂ ಕೂಗಲು ಶುರುಮಾಡಿದರು.. ಲಾರಿ ಓಲಾಡತೊಡಗಿತು..

ಇವರ ಭುಜದ ಮೇಲೆ ದೊಪ್ಪೆಂದು ಕೈ ಬಿದ್ದಿತು.. ಮೊದಲೇ ಹೆದರಿ ಸತ್ತಿದ್ದ ಇಬ್ಬರು, ತಿರುಗಿ ನೋಡಿದರು..

ದೊಡ್ಡದಾದ ಆಕೃತಿ ಹಲ್ಲು ಬಿಡುತ್ತಾ

"ಅಣ್ಣಾ ಅಣ್ಣಾ"

4 comments:

  1. ಅಬ್ಬಾ! ತುಂಬ ಭಯಾನಕವಾದ ವಾತಾವರಣವನ್ನು ಸೃಷ್ಟಿಸಿದ್ದೀರಿ, ಶ್ರೀಕಾಂತರೆ! ಈಗ ನಾನಾದರೂ ಹೇಳಬಹುದಾದದ್ದು ಇದಷ್ಟೇ: ‘ಅಣ್ಣಾ, ಅಣ್ಣಾ!’

    ReplyDelete
    Replies
    1. ಧನ್ಯವಾದಗಳು ಸುನಾಥ ಸರ್. ನಿಮ್ಮ ಪ್ರತಿಕ್ರಿಯೆ ಟಾನಿಕ್ ಕೊಡ್ತಿದೆ ನನಗೆ ಇನ್ನಷ್ಟು ಬರೆಯಲು

      Delete
  2. ಸಾಮಾನ್ಯವಾಗಿ ಭಯಾನಕ ಕಥೆಗಳ ಮುಂದಿನ ಕಂತಿಗೆ ಕಾಯುವುದಿಲ್ಲ.. ಆದರೆ ಇದರ ಮುಂದಿನ ಕಂತಿಗೆ ಬಹಳ ಕಾತರದಿಂದ ಕಾಯುತ್ತಿರುವೆ. ಅದ್ಭುತವಾಗಿ ಬರೆದಿದ್ದೀರಿ. ಒಂದು ಸಾಮಾನ್ಯ ವಾತಾವರಣ ವಿವರಿಸೋದಕ್ಕೆ ಮತ್ತೆ ಮತ್ತೆ ವಾಕ್ಯಗಳನ್ನು ಯೋಚಿಸಿ ಬರೆಯಬೇಕು. ಅಂತಹದರಲ್ಲಿ ಒಂದು ಭಯಾನಕ ವಾತಾವರಣವನ್ನು ಇಷ್ಟು ಕಣ್ಣಿಗೆ ಕಟ್ಟುವಂತೆ ವಿವರಿಸುವುದು ಬಹಳ ಕಷ್ಟ. ಸೂಪರ್

    ReplyDelete
    Replies
    1. ಧನ್ಯವಾದಗಳು ಸಿಬಿ ನನಗೂ ಅರಿವಿಲ್ಲ ಹೇಗೆ ಬರೆಯುತ್ತಿದ್ದೇನೆ ಅಂತ.. ಕೂತೆ ಬರೆಸಿಕೊಂಡು ಹೋಯ್ತು..
      ದೆವ್ವಗಳಲ್ಲೂ ಒಳ್ಳೆ ಒಳ್ಳೆ ದೆವ್ವ ಅಂತಾರಲ್ಲ ಹಾಗೆ.. ಯಾವುದೋ ಒಂದು ಶಕ್ತಿ ಬರೆಸುತ್ತಾ ಹೋಗಿದೆ..

      ಧನ್ಯವಾದಗಳು ಮತ್ತೊಮ್ಮೆ

      Delete