Tuesday, September 20, 2016

ರಂಗ ಸಾಹಿತ್ಯದ ಹವಾ .. ನಮ್ಮ ಗೋಪಾಲ ವಾಜಪೇಯಿ ಗುರುಗಳು

ಇಂದು ನನ್ನ ರಂಗಭೂಮಿಯ ಅನುಭವಗಳ ಮಾಲಿಕೆ ಪುಸ್ತಕವಾಗಿದೆ.. ಈ ಸಮಯದಲ್ಲಿ ನನ್ನ ಕೆಲವು ಆತ್ಮೀಯರಿಗೆ ಅಭಿನಂದನೆ ಸಲ್ಲಿಸುವ ಜೊತೆಯಲ್ಲಿ ಈ ಪುಸ್ತಕದ ಒಂದು ಪ್ರತಿಯನ್ನು ಪ್ರೀತಿಪೂರ್ವಕವಾಗಿ ಕೊಡಬೇಕೆಂದು ಬಯಸಿದ್ದೇನೆ..

ಅವರ ಹತ್ತಿರದ ಮಿತ್ರರ ಹೆಸರು ಹೇಳಿ ಕರೆದು ಆತ್ಮೀಯವಾಗಿ ಪುಸ್ತಕದ ಒಂದು ಪ್ರತಿಯನ್ನು ಕೊಟ್ಟರು..
.. ನಂತರ ಮೈಸೂರಿನ ಬಾಲೂ ಅವರು..
ಬೆಂಗಳೂರಿನ ರಾಘವ ಶರ್ಮ ಅಂದರು..
ನಾ ಫೋಟೋ ಕ್ಲಿಕ್ಕಿಸುತ್ತಲೇ ಇದ್ದೆ..
ನನ್ನ ಆತ್ಮೀಯ ಮಿತ್ರರಾದ "ಶ್ರೀಕಾಂತ್ ಮಂಜುನಾಥ್"  ಅವರಿಗೆ ಪುಸ್ತಕದ ಪ್ರತಿ.. ಅಂದಾಗ.. ಮೈ ಹಾಗೆ ಬೆವರಿತು.. ನಾ ನಂಬಲಿಲ್ಲ..

ನನಗೂ ಅವರಿಗೂ ಅಜಗಜಾಂತರ ವ್ಯತ್ಯಾಸ.. ನಾ ನಂಬಲಿಲ್ಲ.. ಸುಮ್ಮನೆ ಫೋಟೋ ಕ್ಲಿಕ್ಕಿಸುತ್ತಲೇ ಇದ್ದೆ..

ಮತ್ತೊಮ್ಮೆ ಶ್ರೀಕಾಂತ್ ಮಂಜುನಾಥ್ ಬನ್ನಿ ಅಂದರು..

ನನ್ನ ಮಗಳು ಅಪ್ಪಾ ನಿಮ್ಮನ್ನೇ ಅಂದಳು.. ನನಗೆ ಒಂದು ಕಡೆ ನಾಚಿಕೆ, ಇನ್ನೊಂದು ಕಡೆ ಸ್ಟೇಜ್ ಫಿಯರ್.. ನನ್ನ ಜನುಮದಲ್ಲಿಯೇ ತುಂಬಿದ ಅಂಗಣದಲ್ಲಿ ವೇದಿಕೆ ಹೋದವನಲ್ಲ/ಕರೆಸಿಕೊಳ್ಳುವಂಥಹ ಸಾಧನೆ ಮಾಡಿದವನಲ್ಲ..

ನಡುಗುವ ಕೈಯಿಂದಲೇ ಆ ಪುಸ್ತಕದ ಪ್ರತಿಯನ್ನು ಸ್ವೀಕರಿಸಿ ಅದೇ ವೇಗದಲ್ಲಿ ಕೆಳಗೆ ಜಿಗಿದು ಓಡಿ ಬಂದೆ.. ಎದೆ ಬಡಿತ ಬಹುಶಃ ನನ್ನ ಕಿವಿಗೆ ಕೇಳಿಸುವಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು..
ಈ ಘಟನೆ ಹೇಳುವ ಕಾರಣ ಎಂದರೆ.. ಗುರುಗಳಾದ ಗೋಪಾಲ ವಾಜಪೇಯಿಯವರು ಹಿರಿಯರು ಕಿರಿಯರು ಎನ್ನದೇ ಎಲ್ಲರನ್ನು ಪ್ರೀತಿಯಿಂದ ಮಾತಾಡಿಸುತ್ತಿದ್ದ ರೀತಿಗೆ ಇದು ಒಂದು ಉದಾಹರಣೆ.

ನನ್ನ ಮತ್ತು ಅವರ ಒಡನಾಟ ಕಳೆದ ಎರಡು ವರ್ಷಗಳಿಂದ ಇತ್ತು.. ಶ್ರೀಕಾಂತ್  ಅಂತ ಅಭಿಮಾನಪೂರಿತ ಕಣ್ಣುಗಳಿಂದ ಅವರ ಮಿತ್ರ ವೃಂದದಲ್ಲಿ ನನ್ನನ್ನು ಗುರುತಿಸಿಕೊಂಡದ್ದು ನನಗೆ ಸಿಕ್ಕ ಒಂದು ದೊಡ್ಡ ಗೌರವ..

ಅವರ ಮಗನ ಮದುವೆಯ ಸಂದರ್ಭದಲ್ಲಿ ಬಿಡದೆ ನನಗೆ ಕರೆ ಮಾಡಿ.. ಫೇಸ್ಬುಕ್ ನಲ್ಲಿ ಸಂದೇಶ ಕಳಿಸಿ ಪದೇ ಪದೇ ನೆನಪಿಸುತ್ತಾ ಇದ್ದರು... ಆ ಸಮಾರಂಭಕ್ಕೆ ಹೊರಟಿದ್ದ ನಾನು ಮತ್ತು ನನ್ನ ಕುಟುಂಬ.. ನನ್ನ ಕಾರು ಅವರ ಮನೆಗೆ ತುಸು ಹತ್ತಿರದಲ್ಲಿಯೇ ಬಸವಳಿದು ನಿಂತಾಗ ಅದನ್ನು ಸರಿ ಮಾಡುವ ಭರದಲ್ಲಿ ಮೊಬೈಲ್ ಬಿದ್ದು ಒಡೆದು ಹೋಗಿ.. ಅವರ ಮನೆಗೆ ಹೋಗಲಾಗಲೇ ಇಲ್ಲ..

ಬಹಳ ಬೇಸರ ಮಾಡಿಕೊಂಡು ಕ್ಷಮೆ ಕೇಳಿದಾಗ.. ಇನ್ನೊಮ್ಮೆ ಬರುವಿರಂತೆ ಅಂದರು.. ಎರಡನೇ ಬಾರಿಯೂ ಆ ಅವಕಾಶ ನನಗೆ ಆಗದೆ ಹೋಯಿತು.

ಇವರ ಮೂರು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದೆ.. ಅವರ ಅನೇಕ ಹಿರಿಯ ಮಿತ್ರರ ಸಂಗದಲ್ಲಿ ಇದ್ದರೂ ಕೂಡ.. ನಮ್ಮ ಕುಟುಂಬವನ್ನು ಕಂಡೊಡನೇ ಪ್ರೀತಿಯಿಂದ ಮಾತಾಡಿಸುವ ಅವರ ಪ್ರೀತಿಗೆ ನಾ ಸೋತಿದ್ದೆ..

ಗುರುಗಳೇ.. ನಿಮ್ಮ ಹೆಸರು ನಿಮ್ಮ ನೆನಪು.. ನಿಮ್ಮ ಜೊತೆಯಲ್ಲಿ ಕಳೆದ ಮಧುರ ಕ್ಷಣಗಳು ಅಮೋಘ ಮತ್ತು ಅಜರಾಮರ.
ನಿಮ್ಮನಂಥಹ ಸರಸ್ವತಿ ಪುತ್ರರ ಜೊತೆಯಲ್ಲಿ ನಾವು ಹೆಜ್ಜೆ ಹಾಕಿದ್ದು, ಒಡನಾಡಿದ್ದು ನಮ್ಮ ಪೂರ್ವ ಜನ್ಮದ ಪುಣ್ಯ ಎನ್ನಬೇಕು.

ಇವರ ಪರಿಚಯವಾದ ಮೇಲೆಯೇ ನಾಗಮಂಡಲ ಚಿತ್ರಕ್ಕೆ ಅದ್ಭುತ ಹಾಡುಗಳನ್ನು ಬರೆದದ್ದು ಇವರೇ ಎಂದು ಗೊತ್ತಾಗಿದ್ದು. ಇಂತಹ ಸಜ್ಜನ, ಕಲಾವಿದ, ಸಾಹಿತಿ ಇವೆಲ್ಲಕ್ಕೂ ಮಿಗಿಲಾಗಿದ್ದು ಇವರ ಸ್ನೇಹ ಪರ ಮನಸ್ಸು. ಯುವಕರು ನಾಚಿಸುವಂತಹ ಕ್ರಿಯಾಶೀಲತೆ ಹೊಂದಿದ್ದ ನಮ್ಮ ಗುರುಗಳು ಇಂದು ನಮ್ಮೆಲ್ಲರ ಮನದಲ್ಲಿ ಪಟವಾಗಿದ್ದಾರೆ.
ರಂಗದ ಒಳಗೆ ಹೊರಗೆ ಹೇಗಿದೆ ಎಂದು ದೇವನಿಗೆ ಹೇಳಲು ಹೊರಟೆ ಬಿಟ್ಟರು ನಮ್ಮ ಗುರುಗಳು 

ಗುರುಗಳೇ ಬಹುಶಃ ಆ ದೇವರಿಗೂ ಆತನ "ಅಂತ"ರಂಗದ ಹೊರಗೂ ಒಳಗೂ ನೆಡೆಯುವ ತುಮುಲಗಳ ಅನಾವರಣ ಮಾಡಿಕೊಳ್ಳಬೇಕಿತ್ತು ಎನ್ನಿಸುತ್ತದೆ.. ನಮ್ಮೆಲ್ಲರಿಂದ ನಿಮ್ಮನ್ನು ಕಸಿದುಕೊಂಡುಬಿಟ್ಟಿದ್ದಾನೆ..

ಗುರುಗಳೇ ನಿಮ್ಮ ಆಶೀರ್ವಾದ ನಿಮ್ಮ ಈ ಸ್ನೇಹದ ಕಡಲಿನಲ್ಲಿ ಸದಾ ತಂಗಾಳಿ ಬೀಸುವಂತೆ ಬೀಸುತ್ತಲೇ ಇರಲಿ....

ಹೋಗಿ ಬನ್ನಿ ಗುರುಗಳೇ.. ನೀವು ನಮ್ಮ ಹೃದಯ ಕಮಲದಲ್ಲಿ ಸದಾ ಅರಳಿ ನಿಂತು ಕಂಪು ಸೂಸುವ ಪುಷ್ಪವಾಗಿಯೇ ಸದಾ ಇರುತ್ತೀರಾ..

ಗುರುಗಳೇ ನಿಮ್ಮ ದಿವ್ಯ ಚೈತನ್ಯವುಳ್ಳ ಚೇತನಕ್ಕೆ ಶಿರಬಾಗಿ ನಮನಗಳು..

:-(


2 comments:

 1. ಸರಳರಲ್ಲಿ ಸರಳ, ವಿರಳ ಕವಿಯ ಅಕಾಲಿಕ ಕಣ್ಮರೆ ನಮಗೆ ದಿಕ್ಕೇ ತೋಚದ ಸ್ಥಿತಿ ತಂದೊಡ್ಡಿದೆ.

  ಅವರ ಅನುಭವದ ಹರಿವು ಹಲ ಮಜಲುಗಳ ರಸದೌತಣ. ಹಲ ತಲೆಮಾರುಗಳ ಸಂಗಮ, ಹಿರಿತನ ಮತ್ತು ಸ್ಪೂರ್ತಿ.

  ಅವರ ಅಗಲುವಿಕೆಯನ್ನು ಉತ್ತಮ ನೆನೆಸುವಿಕೆಯ ಮೂಲಕ ನಮನ ಸಲ್ಲಿಸಿದ ನಿಮ್ಮ ಈ ಬ್ಲಾಗ್ ಬರಹ ಔಚಿತ್ಯಪೂರ್ಣವಾಗಿದೆ.

  ಭಗವಂತ ಅವರ ಆತ್ಮಕ್ಕೆ ಶಾಂತಿ ದೊರಕಿಸಲಿ.

  ReplyDelete
 2. ಅವರ ಆತ್ಮೀಯತೆಯಲ್ಲಿ ನಾನೂ ಮಿಂದು ಧನ್ಯತೆಯನ್ನು ಅನುಭವಿಸಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಇರಲಿ.

  ReplyDelete