Thursday, September 8, 2016

ದೇವರ ಇರುವನ್ನು ಅನುಭವಿಸಿದ ಸುಂದರ ಕ್ಷಣ ...!


ವಿಚಿತ್ರ ಆದರೂ ಸತ್ಯ

ಈ ಬಾರಿಯ ಗಣಪನ ಹಬ್ಬಕ್ಕೆ ಗಣಪನ ಮೂರ್ತಿ ತರಲು ಅಮ್ಮನ ಮನೆಯ ಹತ್ತಿರದ ಒಂದು ಅಂಗಡಿಗೆ ಹೋಗಿದ್ದೆವು. ನಾನು, ತಮ್ಮ , ಅಣ್ಣ ಮತ್ತು ಅಣ್ಣನ ಮಗ.

ನನಗೆ ಅರಿವು ಮೂಡಿದ ದಿನದಿಂದ ಅಂದರೆ ಸುಮಾರು ೩೫ ವರ್ಷಗಳಿಂದ ನಮ್ಮ ಮನೆಯಲ್ಲಿ ಬಣ್ಣ ಬಣ್ಣದ ಗಣಪನದೇ ದರ್ಬಾರು.

ಈ ಬಾರಿ ಯಾಕೋ ಗೊತ್ತಿಲ್ಲ.. ಅಂಗಡಿಗೆ ಹೋದೊಡನೆ.. ಬರಿ ಮಣ್ಣಿನ ಮತ್ತು ತುಸುವೇ ಬಣ್ಣ ಹಚ್ಚಿದ ಗಣಪ ನನ್ನ ಕೈ ಬೀಸಿ ಕರೆದಂತೆ ಆಯಿತು.

ಅಣ್ಣನಿಗೆ ಹೇಳಿದೆ.. ಈ ಸಾರಿ ಈ ಗಣೇಶನ ತಗೊಳೋಣ..

ಅವನು ಮತ್ತು ತಮ್ಮ ಒಪ್ಪಿ.. ಗಣಪನ ಮೂರ್ತಿಯ ದರವನ್ನು ವಿಚಾರಿಸಿದರು..
ಇನ್ನೇನು ದುಡ್ಡು ಕೊಟ್ಟು ಮೂರ್ತಿಯನ್ನು ತಗೋಬೇಕು ಅಷ್ಟೇ..

ಅಷ್ಟರಲ್ಲಿ ಅಣ್ಣನ ಮಗ.. ಅಪ್ಪ ವಿಜಯನಗರಕ್ಕೆ ಹೋಗೋಣ ಅಲ್ಲಿ ಬೇರೆ ಬೇರೆ ಗಣೇಶ ಇರುತ್ತದೆ ಅಂದ..
ಅಣ್ಣ ಎರಡನೇ ಮಾತಿಲ್ಲದೆ.. ಸರಿ ನೆಡೆಯಿರಿ ಅಲ್ಲಿಗೆ ಹೋಗೋಣ ಅಂದ..

ನಾ ಗಣಪನ ಕಡೆ ನೋಡಿದೆ.. ತುಸು ಬೇಸರಿಸಿಕೊಂಡ ಹಾಗೆ ಕಾಣಿಸಿತು

ನನ್ನ ಜೀವದ ಅಂಶವೇ ತುಸು ಹೊರಗೆ ಹೋಗುತ್ತಿದೆಯೇನೋ ಎನ್ನುವ ಅನುಭವ..

ಹಾಗೆ.. ಗಣಪನ ಮೂರ್ತಿಯ ಮೈ ತಡವಿ.. ಅಣ್ಣನ ಜೊತೆ ಭಾರವಾದ ಹೆಜ್ಜೆ ಹಾಕುತ್ತ ಹೋದೆ.. ಹಾಗೆ ಒಮ್ಮೆ ತಿರುಗಿ ನೋಡಿದೆ.. ಗಣಪ ಹಾಗೆ ಬೇಸರದಲ್ಲಿಯೇ ಇದ್ದ ಹಾಗೆ ಅನ್ನಿಸಿತು..

ವಿಜಯನಗರಕ್ಕೆ ಹೋದೆವು.. ಅಲ್ಲಿ ಒಂದು ಮೂರ್ತಿಯನ್ನು ಕೊಂಡು ಮನೆಗೆ ಬಂದೆವು..

ಬೆಳಿಗ್ಗೆ ಪುರೋಹಿತರು (ಅಮ್ಮನ ಸೋದರಮಾವನ ಮಗ) ಬಂದು.. ಎಲ್ಲವೂ ಸಿದ್ಧವೇ ಎಂದು ಕೇಳಿ.. ಪೂಜೆ ಆರಂಭಿಸಲು.. ಅಣ್ಣನಿಗೆ ಆ ಮೂರ್ತಿಯನ್ನು ಮಂಟಪದಲ್ಲಿ ಇಡು ಎಂದರು..

ಅಣ್ಣ ಎದ್ದು ಹೋಗಿ (ಪ್ರತಿ ಬಾರಿಯೂ ಗಣಪನ ಮೂರ್ತಿಯನ್ನು ಅವನೇ ಮಂಟಪದಲ್ಲಿ ಕೂರಿಸೋದು)
ಗಣಪನನ್ನು ನಿಧಾನವಾಗಿ ಜರುಗಿಸಿದ.. ಟಪಕ್ ಅಂತ ಗಣಪನ ಒಂದು ಕೈಯಲ್ಲಿದ್ದ ಪಾಶಾಂಕುಶ ಹಾಗೆ ಕೆಳಗೆ ಬಿತ್ತು..

ಎಲ್ಲರಿಗೂ ಬೇಸರ.. ಕಣ್ಣಲ್ಲಿ ನೀರು..

ತಕ್ಷಣ ಪುರೋಹಿತರು.. ಸರಿ ಸರಿ.. ಶ್ರೀಕಾಂತಾ ಬೇಗನೆ ಹೋಗಿ ಹತ್ತಿರದ ಅಂಗಡಿಯಿಂದ ಒಂದು ಮೂರ್ತಿ ತಗೊಂಡು ಬಾ.. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು.. ನೀವೇನು ಬೇಕಂತಲೇ ಮುರಿದಿಲ್ಲ .. ಅಚಾನಕ್ ಆಗಿದೆ.. ಏರ್ ಕ್ರ್ಯಾಕ್ ಇರಬೇಕು.. ಬಿಟ್ಟುಕೊಂಡಿದೆ.. ತಲೆ ಬಿಸಿ ಮಾಡಿಕೋಬೇಡಿ.. ಶ್ರೀಕಾಂತಾ ನೀ ಹೋಗು ತಗೊಂಡು ಬಾ ಅಂದ..

ನಾನು ನನ್ನ ತಮ್ಮ ಇಬ್ಬರೂ.. ದ್ವಿ ಚಕ್ರ ವಾಹನದಲ್ಲಿ ಹೋದೆವು.. ನಮಗೆ ಅರಿವಿಲ್ಲದೆ ಅದೇ ಅಂಗಡಿಗೆ ಹೋಗಿ.. ನಿಂತರೆ.. ಗಣಪ.. ಮಕ್ಕಳು ತಮ್ಮ ತಂದೆ ತಾಯಿಯರನ್ನು ಕರೆಯುವ ಹಾಗೆ... ಹೂಂ ಹೂಂ ಅಂತ ಅಳುತ್ತಾ ಇರುವ ಹಾಗೆ ಅನ್ನಿಸಿತು...

ನಾ ನನ್ನ ತಮ್ಮನಿಗೆ ಹೇಳಿದೆ.. ಹೇ ಅಲ್ಲಿ ನೋಡು ಅದೇ ಗಣೇಶ ಅಂದೇ..

ಅಲ್ಲಿದ್ದದ್ದು ಐದೇ ನಿಮಿಷ..

ಮುಂದಿನ ಆರನೇ ನಿಮಿಷ.. ಅದೇ ಗಣಪ.. ನನ್ನ ಮಡಿಲಲ್ಲಿ ದ್ವಿ ಚಕ್ರ ವಾಹನದಲ್ಲಿ.. ಮನಸಲ್ಲಿ "ಓಂ ಗಂ ಗಣಪತೆಯೇ ನಮಃ"

ಗಣಪ... ಶ್ರೀಕಾಂತಾ ನಿನ್ನ ಆಸೆ ಈಡೇರಿತು.... ನಾ ನಿಮ್ಮ ಮನೆಗೆ ಬರುತ್ತಿದ್ದೇನೆ.. ನಿನ್ನ ಎಲ್ಲಾ ಆಸೆಯೂ ಈಡೇರುತ್ತದೆ... ನನ್ನ ಆಶೀರ್ವಾದ ಈ ಅನುಗ್ರಹ ಸದನದ ಮೇಲೆ ಸದಾ ಇರುತ್ತದೆ.. ನಿಮ್ಮ ಅಪ್ಪ ನನ್ನ ಮೂರ್ತಿಯನ್ನು ಹುಡುಕಿ ಹುಡುಕಿ ತರುತ್ತಿದ್ದರು... ಅವರ ಪರಂಪರೆಯನ್ನೇ ನೀವೆಲ್ಲರೂ ಮುಂದುವರೆಸುತ್ತಿದ್ದೀರಿ.. ನಿಮಗೆಲ್ಲಾ ಶುಭವೇ ಆಗುತ್ತದೆ .. ಅಂತ ಅಂದ ಹಾಗೆ ಭಾಸವಾಯಿತು..

ಅದ್ಭುತ ಅನುಭವ.. !

ಪುರೋಹಿತರು ಹೇಳಿದರು.. "ಗಣೇಶ ಹೇಳುತ್ತಿದ್ದ ಅನ್ಸುತ್ತೆ ಅಲ್ಲಾ ಲೇ.. ನಾ ಬರುತ್ತೇನೆ ಎಂದು ಹೇಳಿದ ಮೇಲೂ ನನ್ನ ಬಿಟ್ಟು ಹೋದಿರಿ.. ನಾ ಬಿಡುತ್ತೇನೆಯೇ.. ನೋಡು ನಾನೇ ಬಂದು ಬಿಟ್ಟೆ.. ನಿಮ್ಮ ಕೈಯಲ್ಲಿ ನಾನೇ ಪೂಜೆ ಮಾಡಿಸಿಕೊಳ್ಳಬೇಕು ಅಂತ ಹಠ ತೊಟ್ಟು ಬಂದಿದ್ದೇನೆ ಅನ್ನುತ್ತಿದ್ದಾನೆ ಕಣೋ"

ನಾ ಹಾಗೆ ಗಣಪನ ಮುಖ ನೋಡಿದೆ.. ಸೊಂಡಿಲಲ್ಲಿ ಮೋದಕ ತಿನ್ನುತ್ತಲೇ.. ಹಾಗೆ ಲಬಕ್ ಅಂತ ಕಣ್ಣು ಹೊಡೆದ ಅನುಭವ..
ಆಶೀರ್ವಾದ ಮಾಡಲು ಹಠ ತೊಟ್ಟು ಬಂದ ಗಣಪ!!!

ಓಂ ಗಂ ಗಣಪತಯೇ ನಮಃ!!!!

8 comments:

 1. ಇದೂ ಒಂದು ವಿಭಿನ್ನ ಅನುಭವ.
  ಅಥವಾ ಅದೇ ಗಣಪ ತಮಗಾಗಿ ಕಾದಿದ್ದನೇನೋ? ಇದ್ದೀತು..
  ಬಣ್ಣ ರಹಿತ ಗಣಪತಿ ಮೂರ್ತಿಯನ್ನು ಪ್ರೊತ್ಸಾಹಿಸಿದ ತಮಗೆ ಅಭಿನಂದನೆಗಳು.

  ReplyDelete
  Replies

  1. ನಿಜಕ್ಕೂ ಹಾಗೆ ಒಮ್ಮೆ ಮೈ ಜುಮ್ ಅನ್ನುತ್ತದೆ..
   ನೀವು ಹೇಳಿದ ಹಾಗೆ ಗಣಪನ ಯೋಜನೆ ಮತ್ತು ಯೋಚನೆ ಹಾಗೆ ಇತ್ತು ಅನ್ನಿಸುತ್ತದೆ..
   ಧನ್ಯವಾದಗಳು ಬದರಿ ಸರ್..

   Delete
 2. ಎಲ್ಲವೂ ಒಳ್ಳೆಯದಾಗಲಿ... ಗಣಪನ ಅನುಗ್ರಹ ನಿಮ್ಮ ಮೇಲಿರಲಿ...

  ReplyDelete
 3. ದೇವರು ತಾನಾಗಿಯೇ ಭಕ್ತನನ್ನು ಕರೆಯುವ ಬಗೆ ಇದು. ನಿಮಗೆ ಶುಭವಾಗಲಿ.

  ReplyDelete
  Replies
  1. ಗುರುಗಳೇ ನಿಮ್ಮ ಶುಭಾಶೀರ್ವಾದಕ್ಕೆ ಧನ್ಯವಾದಗಳು

   Delete