"ಗುರು ಇವತ್ತು ಒಂದು ಸಿನಿಮಾಕ್ಕೆ ಹೋಗೋಣ?"
"ಯಾವ ಸಿನಿಮಾ?"..
"ಕತ್ರಿಗುಪ್ಪೆಯ ಕಾಮಾಕ್ಯ ಚಿತ್ರಮಂದಿರದಲ್ಲಿ "ಈವಿಲ್ ಡೆಡ್ ಭಾಗ ಮೂರು" ಇದೆ
"ಸರಿ ಹಂಗಾದ್ರೆ ಒಂದು ಆಲೋಚನೆ..ಈಗ ಸಮಯ ಸಂಜೆ ಆರುವರೆ.. ಎರಡನೇ ಆಟಕ್ಕೆ (ಸೆಕೆಂಡ್ ಶೋ) ಹೋಗಿ ಸಿನೆಮಾ ಮುಗಿದ ಮೇಲೆ ಯಾವುದಾದರೂ ದಾಬಕ್ಕೆ ಹೋಗಿ ಊಟ ಮಾಡಿ ನಂತರ ಮನೆಗೆ ಹೋಗುವ ಏನಂತೀರ"
"ಸೂಪರ್ ಐಡಿಯಾ ಗುರು!.. ಇರು ನಮ್ಮ ಹುಡುಗರಿಗೆ ಫೋನ್ ಮಾಡ್ತೀನಿ ಎಲ್ಲರೂ ಹೋಗುವ!
ಇದು ೧೯೯೯ ಏಪ್ರಿಲ್ ತಿಂಗಳಲ್ಲಿ ನಾನು ಕೆಲಸ ಮಾಡುತ್ತಿದ್ದ ಪೀಣ್ಯ ಬಳಿಯ ಒಂದು ಆಫೀಸ್ ನಲ್ಲಿ ನಡೆದ ಒಂದು ಸಂಭಾಷಣೆ!
ಎಲ್ಲರ ಹತ್ತಿರ ಗಾಡಿ ಇತ್ತು ನಾನು, ಸತೀಶ, ಶ್ರೀಕಂಠ ಮೂರ್ತಿ, ಆಡಿಟರ್ ಮೂರ್ತಿ, ಚಂದ್ರು .. ಸುಮಾರು ಏಳು ಘಂಟೆಗೆ ಅಲ್ಲಿಂದ ಹೊರಟೆವು
ಆಗ ವಾಹನ ದಟ್ಟನೆ ಇಷ್ಟೊಂದು ಇರಲಿಲ್ಲಾವಾದ್ದರಿಂದ ಸುಲಭವಾಗಿ ಸುಮಾರು ಏಳು ಮುಕ್ಕಾಲು ಅಷ್ಟರ ಹೊತ್ತಿಗೆ ಕಾಮಾಕ್ಯ ಮುಂದೆ ತಲುಪಿದೆವು. ಶೋ ರಾತ್ರಿ ೯.೧೫ಗೆ ಇತ್ತು. ಸರಿ ಅಲ್ಲೇ ಕುಳಿತು ಪಾನಿ ಪುರಿ ಮಸಾಲೆ ಪುರಿ ಅಂತ ತಿಂದು ಸಮಯ
ಕಳೆದೆವು.
ಚಿತ್ರಕೃಪೆ - ಅಂತರ್ಜಾಲ |
ಚಿತ್ರಕೃಪೆ - ಅಂತರ್ಜಾಲ |
ಈಗ ಬೆಳೆದು ದೊಡ್ದವರಾಗಿದ್ದೆವು ಭಾಗ ಒಂದು -ಎರಡು ಎರಡನ್ನು ನೋಡಿರದ ನಾನು.. ಸ್ವಲ್ಪ ಧೈರ್ಯ ಪ್ರದರ್ಶನ ಮಾಡುವ ಎಂದು ಮೂರನೇ ಭಾಗ ಸೆಕೆಂಡ್ ಶೋ ನೋಡಿಯೇ ಬಿಡೋಣ ಎಂದು ನಿರ್ಧರಿಸಿ ಗೆಳೆಯರನ್ನೆಲ್ಲ ಕೂಡಿಕೊಂಡು ಕಾಮಾಕ್ಯ ಚಿತ್ರಮಂದಿರದಲ್ಲಿ ಉಸಿರು ಬಿಗಿ ಹಿಡಿದು ಕೂತಿದ್ದೆವು. ತೊಂಭತ್ತರ ದಶಕದಲ್ಲಿ ಕಾಮಾಕ್ಯ ಚಿತ್ರಮಂದಿರ ಅಮೋಘ ಸೌಂಡ್ ಸಿಸ್ಟಮ್ ನಿಂದ ಹೆಸರು ಮಾಡಿದ್ದ ಚಿತ್ರಮಂದಿರ.
ಇಂಗ್ಲಿಷ್ ಸಿನಿಮಾಗಳ ಅವಧಿ ಒಂದು ಘಂಟೆ ಆಸು ಪಾಸಿನಲ್ಲೇ ಮುಗಿಯುವ ಚಿತ್ರಗಳಾದ್ದರಿಂದ ನಮ್ಮ ದಾಬ ಕಾರ್ಯಕ್ರಮಕ್ಕೆ ಏನು ಅಡಚಣೆ ಇರಲಿಲ್ಲ.
ಸಿನೆಮಾ ಶುರುವಾಯಿತು. ಭಯಾನಕ ದೃಶ್ಯಗಳು , ಎದೆ ಜಿಲ್ ಎನಿಸುವ ಸೌಂಡ್, ಕ್ಯಾಮೆರ ಕೆಲಸ ಎಲ್ಲವು ಎದೆ ನಡುಕವನ್ನು ಹೆಚ್ಚಿಸಿದ್ದವು. ಒಂದು ಕ್ಷಣಕ್ಕೆ ಮಾಡಿದ ನಿರ್ಧಾರ ತಪ್ಪು ಎನ್ನಿಸಿದ್ದರೂ ಆ ಹರಯದ ಮರ್ಕಟ ಮನಸ್ಸು ತಕ್ಷಣಕ್ಕೆ ಸೋಲನ್ನು ಒಪ್ಪಿಕೊಳ್ಳುವ ಮನಸ್ಸು ಮಾಡಿರಲಿಲ್ಲ. ಸರಿ ನೋಡಿಯೇ ಬಿಡೋಣ ಅಂತ ಪೂರ ಚಿತ್ರ ನೋಡಿ ಹೊರಬಂದೆವು. ಎಲ್ಲರ ಮುಖವೂ ಕರೆಂಟ್ ಹೊಡಿಸಿಕೊಂಡ ಕಾಗೆಯ ಹಾಗೆ ಆಗಿತ್ತು. (ಕೆಲವರ್ಷಗಳ ನಂತರ ಈವಿಲ್ ಡೆಡ್ ಭಾಗ ಒಂದು ಮತ್ತು ಎರಡು ನೋಡಿದ ಮೇಲೆ ಮೂರನೇ ಭಾಗ ಒಂದು ತಮಾಷೆ ಚಿತ್ರದಂತೆ ಕಂಡಿತ್ತು)
ಚಿತ್ರಕೃಪೆ - ಅಂತರ್ಜಾಲ |
ಕಡೆಗೆ ಒಕ್ಕುರುಲಿನಿಂದ ನೆಡೆಯಿರೋ ದಾಬಕ್ಕೆ ಹೋಗೋಣ.. ಹೊಟ್ಟೆ ಹಸಿತ ಇದೆ ಅಂತ ನಿರ್ಧಾರ ಮಾಡಿ.. ಧೈರ್ಯದ ಮುಖವಾಡ ಹೊತ್ತು ಬನ್ನೇರುಘಟ್ಟದ ರಸ್ತೆಯಲ್ಲಿದ್ದ ದಾಬ ಕಡೆ ಹೊರಟೆವು.
ಸುಮ್ಮನೆ ಮೇಲುನೋಟಕ್ಕೆ ತಮಾಷೆ ಮಾತಾಡುತ್ತಿದ್ದರೂ ಎಲ್ಲರಿಗೂ ಹೇಗಪ್ಪ ಮನೆ ಸೇರುವುದು ಎನ್ನುವ ಭಯ ಕಾಡುತ್ತಲೇ ಇತ್ತು. ದೆವ್ವದ ಸಿನಿಮಾ ನೋಡಿ, ಮಧ್ಯ ರಾತ್ರಿಯಲ್ಲಿ ಹೇಗೆ ಹೋಗುವುದು, ದಾರಿಯಲ್ಲಿ ಏನೂ ಸಿಗುತ್ತೋ ಏನೋ ಎನ್ನುವ ಭೀತಿ ಕಾಡುತ್ತಲೇ ಇತ್ತು.
ಹೊಟ್ಟೆಬಾಕರಾದ ನಾವೆಲ್ಲಾ ಏನೂ ಜಾಸ್ತಿ ತಿನ್ನದೇ ಆದಷ್ಟು ಬೇಗ ಮನೆಗೆ ಹೋಗಿ ಬಿದ್ದರೆ ಸಾಕು ಎನ್ನುವ ಹಾಗೆ ಇತ್ತು. ಆದ್ರೆ ಸೋಗಿನ ಮುಖವಾದ ಧರಿಸಿದ್ದ ಕಾರಣ ಹಾಗೆ ಮಾಡುವಂತಿರಲಿಲ್ಲ :-)
ಆಡಿಟರ್ ಮೂರ್ತಿ ಮನೆ ಬನ್ನೇರುಘಟ್ಟದ ರಸ್ತೆಯಲ್ಲಿ ಇತ್ತು ಅವನನ್ನು ಮನೆ ಹತ್ತಿರ ಬಿಟ್ಟು ಮಿಕ್ಕವರು ಹೊರಟೆವು.
ನಾನು ಸತೀಶನಿಗೆ ಹೇಳಿದೆ "ಗುರು ಇವತ್ತು ನೀನು ನಮ್ಮ ಮನೆಗೆ (ವಿಜಯನಗರ) ಬಂದು ಬಿಡು.. ಬೆಳಿಗ್ಗೆ ಹೋಗುವಂತೆ" (ಯಾಕೆ ಹೀಗೆ ಹೇಳಿದೆ.... ಅದಕ್ಕೆ ಕಾರಣ ಬೇಕಿಲ್ಲ ಅಲ್ಲವೇ ಹ ಹ ಹ!)
ಸತೀಶ್ "ಲೋ ಕಾಂತ... ಏನು ಯೋಚನೆ ಬೇಡ ನಿನ್ನ ಮನೆಯ ತನಕ ಬಂದು ನಾನು ನಮ್ಮ ಮನೆಗೆ ಹೋಗುತ್ತೇನೆ" ಎಂದ (ಅವನ ಮನೆ ಮಾಗಡಿ ರಸ್ತೆಯ ತಾವರೆಕೆರೆ). ನನಗೆ ತುಸು ಧೈರ್ಯ ಬಂತು ಕಾರಣ ಅವನ ಮನೆಗೆ ಹೋಗಬೇಕಾದರೆ ನಮ್ಮ ಮನೆಯ ರಸ್ತೆಯಲ್ಲೇ ಹೋಗಬೇಕಿತ್ತು.
ಶ್ರೀಕಂಠ ಮೂರ್ತಿ ಮನೆ ಶ್ರೀನಿವಾಸನಗರದಲ್ಲಿತ್ತು. ಅವನನ್ನು ಬೀಳ್ಕೊಟ್ಟು ನಾನು, ಚಂದ್ರ, ಸತೀಶ ಹೊರಟೆವು. ಪುಕ್ಕಲ ಚಂದ್ರ.. ಗುರು ನಾನು ಇವತ್ತು ಶ್ರೀಕಂಠ ಮೂರ್ತಿ ಮನೆಯಲ್ಲಿ ಇರುತ್ತೇನೆ ನೀವು ಹೋಗಿ ಅಂತ ಹೇಳಿ ನಾವು ಮಾತಾಡುವ ಮುಂಚೆನೇ ಗಾಡಿ ತಿರುಗಿಸಿಕೊಂಡು ಹೊರಟು ಬಿಟ್ಟ.
ನಾನು ಸತೀಶ ಇಬ್ಬರೂ ಅವನನ್ನು ಮನಸಾರೆ "ಕಳ್ಳ.. ಪುಕ್ಕಲ, ಹೇಡಿ" ಅಂತೆಲ್ಲ ಬಯ್ದುಕೊಂಡು ಹೊರಟೆವು. ನನಗೆ ಭಯದ ಹೊಗೆ ಕಾಡುತ್ತಿತ್ತು. ಈ ಸತೀಶ ಕೈ ಕೊಟ್ಟರೆ ಏನು ಮಾಡೋದು ಅಂತ.
ಸತೀಶ "ಕಾಂತ ಏನೂ ಯೋಚನೆ ಮಾಡಬೇಡ.. ನಾನು ಬರ್ತೇನೆ ನಿನ್ನ ಜೊತೆ" ಅಂತ ಹೇಳಿದ.
ಸರಿ ಶ್ರೀನಿವಾಸ ನಗರದಿಂದ ವಿಜಯನಗರಕ್ಕೆ ಹನುಮಂತನಗರದ ಐವತ್ತು ಅಡಿರಸ್ತೆಯಲ್ಲಿ ಹೋಗುತ್ತಿದ್ದೆವು.
"ಕಾಂತ.. ಯಾಕೋ ನಮ್ಮ ಹುಡುಗರು ನೆನಪಾಗುತ್ತಿದ್ದಾರೆ. ನಿರ್ಮಲ ಸ್ಟೋರ್ಸ್ ಹತ್ತಿರ ಇರುವ ಕಗ್ಗಿಸ್ ಬೇಕರಿಯ ಹತ್ತಿರ ರೂಂನಲ್ಲಿ ಇದ್ದಾರೆ. ನಾನು ಅಲ್ಲಿಗೆ ಹೋಗುತ್ತೇನೆ. ನೀನು ಇಲ್ಲೇ ಇದ್ದು ಬಿಡು ಬೆಳಿಗ್ಗೆ ಹೋಗುವಂತೆ" ಅಂತ ಸತೀಶ ಅಂದ.
ನನಗೆ ನಡುರಾತ್ರಿ ಕೋಪ ಬಂದರೂ ಏನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ "ಲೋ.... ಹೋಗೋ ನೀನಿಲ್ಲದೆ ಹೋದರೆ.... ನಾನು ಮನೆಗೆ ಹೋಗೋಕೆ ಆಗೋಲ್ವಾ. ಒಬ್ಬನೇ ಹೋಗುತ್ತೇನೆ ಬಿಡು.. ಅಂತ ಗಾಡಿ ಸ್ಟಾರ್ಟ್ ಮಾಡಿದೆ. (ಗಾಡಿ ಗಡ ಗಡ ಎನುತ್ತಿತ್ತು.. ನನ್ನ ಬಾಡಿ ಕೂಡ ಮುಂದಿನ ಸೀನ್ ಬಗ್ಗೆ ನೆನೆದು ನಡುಗುತ್ತಿತ್ತು)
ಸಮಯ ನಡುರಾತ್ರಿ ಸುಮಾರು ಒಂದೂವರೆ ಘಂಟೆಯಾಗಿತ್ತು. ಗೆಳೆಯರೆಲ್ಲರೂ ನಾನಾ ಕಾರಣಗಳಿಂದ ಅವರವರ ಸುರಕ್ಷಿತ ಜಾಗಗಳನ್ನು ಸೇರಿಯಾಗಿತ್ತು (ಮಾರನೆ ದಿನ ಅವರನ್ನೆಲ್ಲಾ ಸರಿಯಾಗಿ ವಿಚಾರಿಸಿಕೊಂಡೆ ಅದು ಬೇರೆ ಕಥೆ).
ನಾನೊಬ್ಬನೇ ನಡುರಾತ್ರಿಯಲ್ಲಿ!
ನಿರ್ಮಲ ಸ್ಟೋರ್ಸ್ ನಿಂದ ನಿಧಾನವಾಗಿ ಗಾಡಿ ಓಡಿಸುತ್ತಾ ಗಾಯತ್ರಿ ಜಪ ಮಾಡುತ್ತಾ ಹೊರಟೆ. (ನನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿ ಮಧ್ಯೆ ರಾತ್ರಿಯಲ್ಲಿ ಒಬ್ಬನೇ ಹೊರಗಿದ್ದದ್ದು ಅದೇ ಮೊದಲು). ಗಾಳಿ ತುಸು ಮೆಲ್ಲನೆ ಬೀಸುತ್ತಿತ್ತು. ನಿರ್ಮಲ ವಾತಾವರಣ. ಸೂಜಿ ಬಿದ್ದರೂ ಸದ್ದು ಕೇಳಿಸಬಹುದೇನೋ ಅನ್ನುವಷ್ಟು ನಿಶ್ಯಬ್ಧ ವಾತಾವರಣ. ಮೈಯಲ್ಲಿ ತುಸು ನಡುಕ. ನನ್ನ ಬಣ್ಣಕ್ಕಿಂತಲೂ ಕಪ್ಪಾಗಿತ್ತು ಆ ರಾತ್ರಿ!
ಸಿನಿಮಾದಲ್ಲಿ ನೋಡಿದ ಭೂತಗಳು ಕಣ್ಣ ಮುಂದೆ ಅಕ್ಕ ಪಕ್ಕದಲ್ಲಿ ಸುಳಿದಾಡುತ್ತಿರುವ ಹಾಗೆ ಅನ್ನಿಸುತಿತ್ತು. ಗಾಯತ್ರಿ ಮಂತ್ರ ತಾರಕಕ್ಕೆ ಏರುತಿತ್ತು. ಮಧ್ಯೆ ಮಧ್ಯೆ ಭಯದ ಕಾರಣ ಮರೆತು ಹೋಗುತ್ತಿತ್ತು. ಮತ್ತೆ ನೆನಪಿಸಿಕೊಂಡು ಜಪ ಶುರುವಾಗುತ್ತಿತ್ತು. (ಉಪನಯನವಾದಾಗ ಗುರುಗಳು ಹೇಳಿಕೊಟ್ಟಿದ್ದರು.. ಬೇಸರವಾದಾಗ, ಭಯವಾದಾಗ, ಏನೂ ಮಾಡಲು ತೋಚದಾದಾಗ ಗಾಯತ್ರಿ ಮಂತ್ರ ನೆನಪಿಸಿಕೋ ಅಂತ)
ಮಂತ್ರವನ್ನು ಅದೆಷ್ಟು ಬಾರಿ ಹೇಳಿಕೊಂಡೇನೋ ಅರಿವಿಲ್ಲ.. ಅನತಿ ದೂರದಲ್ಲಿ ಒಂದು ಲಾರಿ ಸಾಗುತಿತ್ತು. ಸರಿ ಅದರ ಹಿಂದೆಯೇ ಹೋಗೋಣ ಅಂತ ಹೋಗುತ್ತಿದ್ದೆ.
ನನ್ನ ಹಣೆಬರಹ.. ಆ ಲಾರಿ ಸ್ವಲ್ಪ ದೂರ ಸಾಗಿ ಒಂದು ಕಟ್ಟುತ್ತಿದ್ದ ಕಟ್ಟಡದ ಬಳಿ ನಿಂತು ಬಿಟ್ಟಿತು.
ಗೆಳೆಯರನ್ನೆಲ್ಲ ಬಯ್ದುಕೊಂಡು, ಪ್ರಾಯಶಃ ನನ್ನ ನಿರ್ಧಾರ ತಪ್ಪಾಯಿತು. ಮೊದಲು ಸಿನೆಮಾಕ್ಕೆ ಹೋಗಬಾರದಿತ್ತು, ನಂತರ ದಾಬದ ಊಟ, ಕಡೆ ಪಕ್ಷ ಗೆಳೆಯರ ಮನೆಯಲ್ಲೇ ಉಳಿದುಬಿಡಬೇಕಿತ್ತು.. ಛೆ ನನ್ನ ಅವಿವೇಕತನ.. ಹೀಗೆ ನನ್ನನ್ನೇ ಹಳಿದುಕೊಳ್ಳುತ್ತಾ ಗಿರಿನಗರ ತಲುಪಿದೆ. ಅಲ್ಲಿಂದ ಹೊಸಕೆರೆಹಳ್ಳಿ ಕ್ರಾಸ್ ರಸ್ತೆಯಲ್ಲಿ ಸಾಗಿದರೆ ಮೈಸೂರು ರಸ್ತೆ ಸಿಗುತ್ತಿತ್ತು. ಅಲ್ಲಿಂದ ವಿಜಯನಗರದ ಮನೆ ಕೇವಲ ಎರಡು ಕಿ.ಮಿ.ಗಳು.
ವಿಧಿಯಿಲ್ಲ.. ಬೇರೆ ದಾರಿ ಕಾಣದ ಮುಂದುವರೆದೆ. ದೆವ್ವಗಳು ಮರದ ಮೇಲೆ ಕೂತು ನನ್ನ ಕಡೆ ಕೈ ತೋರಿಸಿ ಕುಹಕ ನಗೆ ಬೀರಿದಂತೆ ಕಂಡಿತು. ಜಪ ಜೋರಾಯಿತು.. ಇನ್ನಷ್ಟು ದೆವ್ವಗಳು ದಾರಿಯಲ್ಲಿ ನನ್ನ ಹೆಸರು ಕೂಗಿದಂತೆ ಭಾಸವಾಯಿತು.
ಢವಗುಟ್ಟುವ ಎದೆಯ ಬಡಿತ ಜೊತೆಯಲ್ಲಿ ಮುಂದೆ ಸಾಗಿದೆ. ಮೈ ಬೆವರಲು ಶುರುವಾಯಿತು, ಕೈ ನಡುಕ ಹತ್ತಿತು, ಕಾಲುಗಳು ಅದುರಲು ಶುರುಮಾಡಿದವು. ಭಯದಿಂದ ನೀರು ಆವಿಯಾದ ತುಟಿಗಳು ಜಪ ಮಾಡಲು ನಿರಾಕರಿಸಿದವು. ಸುಮಾರು ೫೦ ಮೀಟರುಗಳಷ್ಟು ದೂರದಲ್ಲಿ ಹತ್ತಾರು ದೇಹಗಳು ಕೈಯಲ್ಲಿ ಬಲೂನ್ ಹಿಡಿದು ಕೇಕೆ ಹಾಕುತ್ತ, ಕುಣಿಯುತ್ತಾ ಬರುತಿದ್ದವು.
"ಅಯ್ಯೋ ದೇವರೇ. ನನ್ನ ಅವಿವೇಕವನ್ನು ಮನ್ನಿಸಿಬಿಡು. ಈ ದೆವ್ವಗಳಿಂದ ನನ್ನನ್ನು ರಕ್ಷಿಸು" ಎಂದು ಬೇಡಿಕೊಳ್ಳುತ್ತಾ ನಿಧಾನವಾಗಿ ಮುಂದುವರೆದೆ. ನನ್ನ ಕಡೆ ವಕ್ರ ದೃಷ್ಟಿ ಬೀರುತ್ತಾ, ಹಲ್ಲು ಕಿರಿಯುತ್ತಾ, ಕೈ ತೋರಿಸಿಕೊಂಡು ನಗುತ್ತಾ ಆ ದೇಹಗಳು ನನ್ನನ್ನು ದಾಟಿ ಹಿಂದೆ ಹೋದವು.
ನಿಟ್ಟುಸಿರು ಬಿಡುತ್ತಾ ಮೈಸೂರು ರಸ್ತೆಗೆ ಬಂದೆ. ನನ್ನ ಹೃದಯ ಒಂದು ಕ್ಷಣ ನಿಂತೇ ಬಿಟ್ಟಿತು. ಅಲ್ಲಿನ ದೃಶ್ಯವನ್ನು ನೋಡಿ ಕಣ್ಣುಗಳ ರೆಪ್ಪೆ ಕೂಡ ಹಾಗೆಯೇ ಕೆಲ ಕ್ಷಣಗಳು ನಿಂತು ಬಿಟ್ಟವು. ಬಾಯಿಂದ ಮಂತ್ರದ ಶಬ್ಧಗಳು ಇಲ್ಲಾ, ಗಾಡಿ ಸದ್ದು ನನಗೆ ಕೇಳಿಸುತ್ತಿಲ್ಲ!
ಸಾವರಿಸಿಕೊಂಡು ನೋಡಿದೆ. ದೊಡ್ಡ ತೇರು, ಜನ ಸಾಗರ, ಪೊಲೀಸರು ಜನಗಳಿಗೆ ಹೋಗಿ ಹೋಗಿ ಬೇಗ ಹೋಗಿ ಎಂದು ಜನಸಾಗರವನ್ನು ಸರಿಸುತ್ತಿದ್ದರು. ಶ್ರೀರಾಮನವಮಿ ಪ್ರಯುಕ್ತ ತೇರು ಎಳೆದು ಮುಗಿದಿದ್ದರೂ.... .. ಜನಗಳು ಅಲ್ಲಿ ಇಲ್ಲಿ ಓಡಾಡುತ್ತಾ ತಿಂಡಿ ತಿನಿಸುಗಳನ್ನು ತಿನ್ನುತ್ತಾ, ಅದು ಇದು ನೋಡುತ್ತಿದ್ದರು.
ಶ್ರೀ ರಾಮನಿಗೆ ಮನದಲ್ಲಿ ನಮಿಸಿ, ಪವನ ಸುತ ಹನುಮಂತನಿಗೆ ಮನದಲ್ಲಿ ನಮಸ್ಕರಿಸಿ ಇಂದು ನನ್ನನ್ನು ರಕ್ಷಿಸಿದೆ ಎಂದೆ.
ಭರ್ರನೆ ವಿಜಯನಗರದ ಕಡೆಗೆ ಓಡಿತು ಗಾಡಿ.
"ನಾನು ಶ್ರೀಕಾಂತ" ಎಂದೇ
ಬಾಗಿಲು ತೆರೆದು "ಯಾಕೋ ಇಷ್ಟೊತ್ತಲ್ಲಿ ಬಂದೆ. ಅಲ್ಲೇ ಗೆಳೆಯರ ಮನೆಯಲ್ಲಿ ಇರಬಾರದಿತ್ತೆ. ಈ ಸರಿ ಹೊತ್ತಿನಲ್ಲಿ ಹಾಗೆಲ್ಲ ಬರಬಾರದು ಆಯ್ತಾ" ಅಂತ ಹುಸಿ ಮುನಿಸಿನಿಂದ ಗದರಿ, "ಊಟ ಮಾಡಿದೆಯ?"ಅಂದ್ರು ಅಣ್ಣ (ನನ್ನ ಅಪ್ಪ)
ಎಲ್ಲಿ ಹೋಗಿದ್ದೆ, ಏನು ಮಾಡುತಿದ್ದೆ ಎನ್ನುವ ಪ್ರಶ್ನೆಗಳ ಸುರಿಮಳೆ ನಿರೀಕ್ಷಿಸಿದ್ದ ನನಗೆ ಅವರ ಮಾತುಗಳಿಂದ ಹೃದಯ ತುಂಬಿ ಬಂತು. ತಂದೆಗೆ ಮಕ್ಕಳ ಮೇಲೆ ನಂಬಿಕೆಯಿದ್ದಾಗ ಅವರ ಹೆಸರಿಗೆ ಮಸಿಬಳಿಯುವ ಕೆಲಸ ಮಾಡೋಲ್ಲ ಎನ್ನುವ ತತ್ತ್ವ ನನ್ನ ಅಪ್ಪನದು!
(೨೦ನೆ ಏಪ್ರಿಲ್ ೨೦೧೩ ರ ಶನಿವಾರ ಗಾಳಿ ಅಂಜನೇಯ ದೇವಸ್ಥಾನದ ಹತ್ತಿರ ನಿಂತಿದ್ದ ಜನಸಾಗರ, ತೇರು, ಕಡಲೆ ಪುರಿ, ಬತ್ತಾಸು ಇವನ್ನೆಲ್ಲ ನೋಡಿ ಮನಸ್ಸು ೧೪ ವರ್ಷಗಳ ಹಿಂದೆ ನಡೆದಿದ್ದ ಈ ಪ್ರಸಂಗವನ್ನು ಮತ್ತೆ ಕಣ್ಣ ಮುಂದೆ ತಂದೊಡ್ಡಿತು. ಆ ಪ್ರಸಂಗವಾದ ನಂತರ ಅನೇಕ ಬಾರಿ ಮಧ್ಯ ರಾತ್ರಿಯ ನಂತರ ಓಡಾಡಿದಿದ್ದೇನೆ, ಕಾಡಲ್ಲಿ ಓಡಾಡಿದ್ದೇನೆ, ಬೆಟ್ಟ ಗುಡ್ಡಗಳಲ್ಲಿ ಮಲಗಿದ್ದೇನೆ. . ಆದರೆ ಇವತ್ತಿಗೂ ಅವತ್ತಿನ ಕ್ಷಣ ನೆನೆದರೆ ಮೈ ತುಸು ಕಂಪಿಸುವುದು ಸುಳ್ಳಲ್ಲ)
ಈವಿಲ್ ಡೆಡ್ ನಾನು ಸಂಗಮ್ ಚಿತ್ರಮಂದಿರದಲ್ಲಿ ನೋಡಿದ್ದೇ. ದೇವರ ದಯೆಯಿಂದ ಅದು ಬೆಳಗಿನ ಆಟ.
ReplyDeleteನಾನು ಚಾಮರಾಜ ಪೇಟೆ ಹಾಸ್ಟಲಿನಲ್ಲಿ ಓದುವಾಗ ಗೆಳೆಯರೆಲ್ಲ ದುಡ್ಡು ಕೂಡಿ ಹಾಕಿ ಮೀನರ್ವ ಚಿತ್ರ ಮಂದಿರದಲ್ಲಿ ವಂಶಿ ನಿರ್ಧೇಶನದ ತೆಲುಗು ಚಿತ್ರ 'ಅನ್ವೇಷಣಾ'ಗೆ ಹೋಗಿ ಎರಡನೇ ಆಟ ಮುಗಿಸಿ ಗುಂಪಾಗಿ ವಾಪಸಾಗುತ್ತಿದ್ದೆವು. ಆಗೆಲ್ಲ ನಾವು ಎರಡನೇ ಆಟಕ್ಕೆ ಹೋಗುತ್ತಿದ್ದದ್ದೇ ಬಣ್ಣ ಬಣ್ಣದ ಲುಂಗಿಗಳು ಉಟ್ಟು. ಅದೆಲ್ಲಿತ್ತೋ ಆ ಕಪ್ಪು ಬೆಕ್ಕು ನನ್ನ ಗೆಳೆಯ ಪುರುಷೀ ಮೇಲೆ ಎನ್.ಎಂ.ಎಚ್ ಹೊಟೇಲ್ ಮುಂದಿನ ಮರದಿಂದ ದೊಪ್ ಎಂದು ಬಿತ್ತು. 'ಅಯ್ಯೋ ದೆಯ್ಯಮುರಾ' ಅಂತ ಲುಂಗಿ ಕಳಚಿ ಬಿದ್ದರೂ ಗಮನೇ ಇಲ್ಲದೆ ಸಜ್ಜನ್ ರಾವ್ ಸರ್ಕಾಲ್ಲಿನ ವರೆಗೂ ಓಡಿದ.
ಅಂದ ಹಾಗೆ ಗಾಳಿ ಅಂಜನೇಯ ದೇವಸ್ಥಾನದ ಎಫೆಕ್ಟು ನೀವು ಬರೆದಂತೆ ನಿಜ.
ಸಣ್ಣ ವಯಸ್ಸಿನಲ್ಲಿ ಕೆಲವು ಘಟನೆಗಳು ಹಾಗೆ ಛಾಪು ಒತ್ತಿಬಿಡುತ್ತವೆ. ನಾ ನಿನ್ನ ಬಿಡಲಾರೆ ಸಿನಿಮಾ ನೋಡಿದಾಗಲೂ ಹಾಗೆ ಆಗಿತ್ತು. ಸೂಪರ್ ಪ್ರತಿಕ್ರಿಯೆ ಸರ್. ಲುಂಗಿ ಇಲ್ಲದ ಮಧ್ಯ ರಾತ್ರಿ ಆಹಾ ಸೂಪರ್ ನಿಮ್ಮ ಗೆಳೆಯರ ಸ್ಥಿತಿ!
Deleteಹಾ ಹಾ ...ಶ್ರೀಕಾಂತಣ್ಣ ಗಾಯತ್ರಿ ಮಂತ್ರ ಹಿಂಗೂ ಉಪಯೋಗ ಆಗುತ್ತೆ ಅಂತ ಗೊತ್ತಿರ್ಲಿಲ್ಲ :)
ReplyDeleteತುಂಬಾ ಚೆನ್ನಾಗಿದೆ ನಿಮ್ಮ ಭಯ ಪಡೋ ಸ್ನೇಹ ಬಳಗ ;)
I cant control my ha ha :)
ಹ ಹ ಹ.. ಹೌದು ಗಾಯತ್ರಿ ಮಂತ್ರದ ತಾಕತ್ತು ಗೊತ್ತಾದ ದಿನ ಅದು. ಹೌದು ಕೆಲವೊಮ್ಮೆ ಗೆಳಯರು ಹೀಗೂ ಮಾಡುವುದುಂಟು. ಕಾರಣ ಬೇರೆ ಇರುತ್ತವೆ. ಆದರೆ ಕೈ ಕೊಟ್ಟದ್ದು ಮಾತ್ರ ನಿರಂತರ ಕಾಡುತ್ತಿರುತ್ತದೆ. ಧನ್ಯವಾದ ಬಿ ಪಿ.
Deleteಹಾ ಹಾ...
ReplyDeleteಚೆನಾಗಿದೆ..ಶ್ರೀ....
ತಂಗಾಳಿಯಲ್ಲಿ ನಾನು ತೇಲಿ ಬಂದೆ...ಅಲ್ಲಲ್ಲ ನಿಮ್ ಬ್ಲಾಗಿನಲ್ಲಿ ನಾನು ಸೇರಿ ಹೋದೆ!!!
ಇಂದಿಗೂ ಎಷ್ಟೇ ಹೊತ್ತಿನಲ್ಲೂ ಜನ್ಮ ಜನ್ಮದ ಅನುಬಂಧ ಚಿತ್ರದ ತಂಗಾಳಿಯಲ್ಲಿ ನಾನು ತೇಲಿಬಂದೆ ಹಾಡನ್ನು ಒಬ್ಬನೇ ಕೇಳಿದರೆ ಸುತ್ತ ಮುತ್ತಾ ನೋಡಲು ಭಯ ಎನಿಸುತ್ತದೆ. ಸುಂದರ ಪ್ರತಿಕ್ರಿಯೆ ಚಿನ್ಮಯ್ ಧನ್ಯವಾದಗಳು
DeleteI remember seeing evil dead in HMT auditorium near mathikere. I was in 7th at that time. Ofcourse 10 mintues after the movie started I closed my ears and eyes and sat there, taking a peek once in a while. but today I see that movie and all I can do is laugh :).. nice write up..
ReplyDeleteಹ ಹ. ನಿವೇದಿತ ನಾನು ಸುಮಾರು ಆರು ಏಳು ವಯಸ್ಸಿನಲ್ಲಿ ನಾ ನಿನ್ನ ಬಿಡಲಾರೆ ಸಿನಿಮಾ ನಿಮ್ಮ ಹಾಗೆ ನೋಡಿದ್ದೇ. ದೆವ್ವದ ದೃಶ್ಯ ಬಂದಾಗೆಲ್ಲ ಸೀಟ್ ಕೆಳಗೆ ಕೂತು ಬಿಡುತಿದ್ದೆ. ಆಗ ಭಯ ಕಾದಿದ್ದು ಈಗ ತಮಾಷೆ ಎನಿಸುವುದು ಸುಳ್ಳಲ್ಲ. ಸುಂದರ ಪ್ರತಿಕ್ರಿಯೆ ಧನ್ಯವಾದಗಳು
Deleteಹಹಹಹ ಚೆನ್ನಾಗಿದೆ ... ರಾತ್ರಿಯಲ್ಲಿ ದೆವ್ವಗಳ ಜೊತೆಯಲ್ಲಿ :)
ReplyDeleteಅಕ್ಕಯ್ಯ.. ಇದೆ ಟೈಟಲ್ ಇಡುವ ಮನಸು ಇತ್ತು ರಾತ್ರಿಯಲ್ಲಿ ದೆವ್ವಗಳ ಜೊತೆಯಲ್ಲಿ.. ಆದರೆ ಮೊದಲೇ ಕ್ಲೂ ಸಿಕ್ಕಿ ಬಿಡುತ್ತೆ ಅಂತ ಬದಲಾಯಿಸಿದೆ. ಸುಂದರ ಟೈಟಲ್ ಧನ್ಯವಾದಗಳು
Deleteಭಯದ ಅನುಭವ ಸಕ್ಕತ್ತಾಗಿದೆ... ಹುಡುಗರಿಗೆ ಒಳಗೊಳಗೇ ಪುಕ್ಕಲುತನ ಇದ್ದರೂ ಧೈರ್ಯವಂತರೆಂದು ತೋರಿಸಿಕೊಳ್ಳುವ ಮನಸ್ಥಿತಿ ಇರುತ್ತದೆ ಎನ್ನುವುದು ನನ್ನ ಅನುಭವಕ್ಕೂ ಬಂದಿದೆ.. :)
ReplyDeleteಗಾಯತ್ರಿ ಮಂತ್ರವನ್ನು ಚೆನ್ನಾಗಿ ಉಪಯೋಗಿಸಿಕೊಂಡಿದ್ದಿರಿ.. ;)
ನಿಮಗೇ ಭಯ ಆಗಿತ್ತು ಅಂದಾಗ ನನಗೆ ಮೊದಲಿಗೆ ನೆನಪಿಗೆ ಬಂದಿದ್ದು ಟ್ರೆಕಿಂಗ್ ಹೇಗೆ ಮಾಡುತ್ತಿರಿ ಭಯ ಇಟ್ಟುಕೊಂಡು ಎಂಬ ವಿಚಾರ.. ಕೊನೆಗೆ ಆ ಅನುಮಾನವನ್ನೂ ನಿವಾರಿಸಿ ಲೇಖವನ್ನು ಪರ್ಫೆಕ್ಟ್ ಮಾಡಿದ್ದಿರಿ.. ಓದುಗನನ್ನು ನಗೆಗಡಲಲ್ಲಿ ತೇಲಿಸಿದ್ದಿರಿ...
-ಇಷ್ಟು ಹೇಳಿ ಸೂಪರ್ ಅಂತ ಮತ್ತೆ ಹೇಳಬೇಕೇ.. ? :)
ಪಿ ಎಸ್.. ಹೌದು ಭಯವಿದ್ದವರು ಚಾರಣ ಮಾಡಲು ಕಷ್ಟಸಾಧ್ಯ. ಈಗ ಅಭ್ಯಾಸವಾಗಿಬಿಟ್ಟಿದೆ. ಆದರೂ ಕೆಲವೊಮ್ಮೆ ಮೈ ನಡುಕ ಬರುವುದು ಸುಳ್ಳಲ್ಲ. ಆ ವಯಸ್ಸು ಅಂತಾದ್ದು. ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಲೋಲ್ಲಾ. ಮಾರನೆ ದಿನ ಎಲ್ಲರಿಗೂ ದೆವ್ವ ಬಿಡಿಸಿದ ಮೇಲೆ ಒಟ್ಟಿಗೆ ಊಟ ಮಾಡಿ ಇನ್ನಷ್ಟು ನಕ್ಕೆವು. ಸೂಪರ್ ಪ್ರತಿಕ್ರಿಯೆ. ಧನ್ಯವಾದಗಳು ಪಿ ಎಸ್
Delete
ReplyDeleteಇವಿಲ್ ಡೆಡ್ ಮೂವಿಯ ನಂತರದ ಚಿತ್ರಣವನ್ನು ಕಣ್ಣಾರೆ ಕಂಡಂತೆ ಆಯಿತು..:)
ನಿಮ್ಮ ಇವಿಲ್ ಡೆಡ್ ಕಥನ ದಿಲ್ ಧಡ್ ಧಡ್ ಅನ್ನುವಂತೆ ಇದೆ ...:)
ಸೂಪರ್ ಎಂಬುದು ಡಿಫಾಲ್ಟ್ ಎನ್ನುವುದು ನಿಮಗೂ ಗೊತ್ತು ಆಲ್ವಾ ... ಅಥವಾ ಹೇಳಲಾ ಮತ್ತೊಮ್ಮೆ ...:)
ನೀ ಮಿಡಿಯಲು ನಿಂತಾಗ ನಾ ನುಡಿಯಲು ಸಾಧ್ಯವೇ.. ಈ ಸಾಲುಗಳು ನೆನಪಿಗೆ ಬಂದವು ನಿನ್ನ ಪ್ರತಿಕ್ರಿಯೆ ನೋಡಿ. ಆ ದೃಶ್ಯ ನೆನದಾಗೆಲ್ಲ ಒಮ್ಮೆ ಮೈ ಜುಮ್ ಅನ್ನುವುದು ಇಂದಿಗೂ. ಸುಂದರ ಪ್ರತಿಕ್ರಿಯೆ ಎಸ್ ಪಿ, ಧನ್ಯವಾದಗಳು
Deleteಸಖತ್ತಾಗಿದೆ ಶ್ರೀಕಾಂತ್ ಜೀ :-)
ReplyDeleteನಾ ಇಂಗ್ಲೀಷ್ ಚಿತ್ರಗಳ ನೋಡೋಕೆ ಶುರು ಮಾಡಿದ್ದು ಇತ್ತೀಚೆಗಾದ್ದರಿಂದ ನಿಮ್ಮ ಎವಿಲ್ ಡೆಡ್ ಅನುಭವ ಆಗಲಿಲ್ಲ.. ಆದರೆ ಸಣ್ಣಕ್ಕಿದ್ದಾಗ ನಾನಿನ್ನ ಬಿಡಲಾರೆ ಸ್ವಲ್ಪ ಕಾಡಿದ್ದು ಹೌದು..ಅವಾಗ ದೂರದರ್ಶನದಲ್ಲಿ ಬರುತ್ತಿದ್ದ ಚಂದ್ರಕಾಂತ ಭಯ ಹುಟ್ಟಿಸುವಂತಿತ್ತು.. ಈಗ ಭಯಾನಕ ಚಿತ್ರಗಳೆಂದು ತೆಗೆದ ಕೆಲವು ಕಾಮಿಡಿಯಂತೆನಿಸಿದರೂ ಆಗಿನ ಅನುಭವ ನೆನೆದು ರೋಮಾಂಚನವಾಗುತ್ತದೆ ..
ಶ್ರೀರಾಮನ ಕಾಪಾಡಿದ ಅಂತಾಯ್ತು ನಿಮ್ಮ ಅಂದು :-)
ಅದಾದ ಮೇಲೆ ಪೇಟೆಯಿಂದ ಸುಮಾರು ಸಲ ನಮ್ಮನೆಗೆ ರಾತ್ರಿ ನಡೆದದ್ದಿದೆ. ನಮ್ಮನೆ ಹತ್ತಿರದ ದೊಡ್ಡ ನೇರಳೇಮರದಲ್ಲಿ ದೆವ್ವಗಳಿವೆ ಎಂದು ಸುಮಾರು ಜನ ಹೆದರುತ್ತಿದ್ದರು. ಹುಣ್ಣಿಮೆಯ ಬೆಳಕಲ್ಲಿ ತಂಗಾಳಿಗೆ ಹೊಯ್ದಾಡೋ ಕೊಂಬೆಗಳು, ನೇರಳೆ ಹಣ್ಣು ಕೊಯ್ಯಲೆಂದು ಹತ್ತಿದವರು ಅಲ್ಲೇ ಬಿಟ್ಟ ಪ್ಲಾಸ್ಟಿಕ್ ಕೊಟ್ಟೆಗಳು ಹೊಳೆದು ದೆವ್ವದಂತೆ ಕಾಣುತ್ತಿದ್ದವೇನೋ..ಆದರೆ ನಮ್ಮ ತಂದೆಯವರು ತುಂಬಿದ ಧೈರ್ಯವೋ ಅಥವಾ ನಮ್ಮನೆ ಹತ್ತಿರ ಎಂಬ ಧೈರ್ಯವೋ.. ನಮಗೆ ಏನೂ ಅನಿಸುತ್ತಿರಲೇ ಇಲ್ಲ
ಇನ್ನು ಟ್ರೆಕ್ಕಿಂಗ್ ಮತ್ತು ಭಯದ ಬಗ್ಗೆ. ಕುಮಾರಪರ್ವತ ಟ್ರೆಕ್ಕಿಂಗ್ ಸಮಯದಲ್ಲಿ ಇದರ ಧಾರಾಳ ಅನುಭವ ಆಗಿತ್ತು. ರಾತ್ರಿಯಲ್ಲಿ ನಡೆಯಬೇಕಾದ್ದು, ರಾತ್ರೆ ಹತ್ತಿದ ದಾರಿ ನೆನೆದರೆ ಆಗಿನ ಧೈರ್ಯಕ್ಕೆ ಅಬ್ಬಾ ಅನಿಸುತ್ತೆ ಈಗಲೂ.. ಕಾಡಾನೆಗಳಿವೆ ಅನ್ನೋ ಸುದ್ದಿಯ ನಡುವೆ ಬೆಟ್ಟದ ಮೇಲೆ ಟೆಂಟ್ ಹಾಕಿ ಮಲಗಿದ್ದೆವು. ರಾತ್ರಿ ಗಾಳಿಗೆ ಪರಪರ ಸದ್ದು. ಏನೆಂದು ಎದ್ದು ನೋಡೋ ಧೈರ್ಯ ಯಾರಿಗೆ ? ದಿನವಿಡೀ ನಡೆದ ದಣಿವು ಬೇರೆ. ಬೆಳಿಗ್ಗೆ ಎದ್ದು ನೋಡಿದರೆ ಸುತ್ತ ಸ್ವಲ್ಪ ದೂರದಲ್ಲಿ ದೊಡ್ಡ ಸಗಣಿಯ ರಾಶಿ. ಕಾಡೆಮ್ಮೆಯ ಆಗಮನದ ಸುಳಿವಂತೆ ಕಾಣುತ್ತಿತ್ತು ಅದು. ತೀರಾ ಯೋಚಿಸುತ್ತಾ ಕೂತಿದ್ದರೆ ಭಯಕ್ಕೆ ಬೆಟ್ಟ ಇಳಿಯೋಕೆ ಆಗ್ತಿರಲಿಲ್ಲ ! ಹಾಗೇ ಮತ್ತೆ ಧೈರ್ಯದ ಬಲದ ಮೇಲೆ ಇಳಿದಿದ್ದೆವು ಬೆಟ್ಟವನ್ನು..
ಎಲ್ಲಾ ನೆನಪುಗಳ ತಂದ ನಿಮ್ಮ ಲೇಖನಕ್ಕೆ ಮತ್ತೊಮ್ಮೆ ವಂದನೆಗಳು :-)
ಹಳ್ಳಿಯಲ್ಲಿ ಅಥವಾ ಪಟ್ಟಣದ ವಾತಾವರಣದಿಂದ ದೂರ ಇರುವ ಪ್ರದೇಶಗಳು ಹೆದರಿಕೆ ಹುಟ್ಟಿಸಲು ಪ್ರಶಸ್ತವಾದ ಜಾಗಗಳು. ಕತ್ತಲೆಯ ಹಾದಿಯಲ್ಲಿ ನಡೆವಾಗ ಪ್ರತಿಯೊಂದು ಬೃಹತ್ ಭೂತಗಳಾಗಿ ಕಾಣುವುದರಲ್ಲಿ ಸಂಶಯವೇ ಇಲ್ಲ. ಚಾರಣಗಳಲ್ಲೂ ಕೆಲವೊಮ್ಮೆ ಧಕ್ ಎನ್ನಿಸುತ್ತದೆ. ಸುಂದರ ಪ್ರತಿಕ್ರಿಯೆ. ಹಳೆಯದನ್ನು ನೆನಪಿಸಿಕೊಳ್ಳಲು ಒಂದು ಅವಕಾಶ. ಧನ್ಯವಾದಗಳು ಗೆಳೆಯ
Deleteha ha...... Srikanth...."
ReplyDeleteBelagninda ide firstu joraagi nakkiddu........
oLLe anubhava...
E-movie series na maneyalli Video Cassettes haakikondu naavella cousins noDiddu nenapaaytu. Adaralli nanna anna nobba tumbaa pukkala aadru nammellara jothe film nododu avana aase. Raggu hoddikondu ishtishte raggina madhye kannaayisi nodtidda.
oLLeya lekhana.....
:-) ಧನ್ಯವಾದಗಳು ರೂಪ. ಆ ದಿನಗಳ ಅನುಭವಗಳನ್ನ ಮೆಲುಕು ಹಾಕುತ್ತ ಇಂದು ಅಂದಿನ ದಿನವನ್ನು ನೋಡುವುದರಲ್ಲಿ ಸಂತಸವಿದೆ. ಇಂದಿಗೆ ನಗೆ ಬುಗ್ಗೆ ಉಕ್ಕಿಸುವ ಪ್ರಸಂಗ ಆ ದಿನಗಳಲ್ಲಿ ಕಾದಿದ್ದು ಸುಳ್ಳಲ್ಲ. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು
Deleteಇಂಗ್ಲೀಶ್ ಚಿತ್ರಗಳ ಸುದ್ದಿಗೆ ಬಂದ್ರೆ ನಾವು ಭಯಾನಕ ಅನ್ನಿಸೋ ದೆವ್ವ ಭೂತಗಳ ಚಿತ್ರಗಳನ್ನ ತೀರಾ ಇತ್ತೀಚಿನ ಮೂರ್ನಾಲ್ಕು ವರ್ಷಗಳ ಕಾಲ ಹಿಂದಿನವರೆಗೂ ಕಣ್ಣಾರೆ ಕಂಡ ಮಕ್ಕಳೇ ಅಲ್ಲ.. ನಮಗೆಲ್ಲ ಇಂಗ್ಲೀಶ್ ಮೂವಿಗಳು ಅಂದ್ರೆ ಬರೀ ಸೂಪರ್ ಹೀರೋ ಗಳದ್ದೇ ನೆನಪು.. ಅದು ಕೂಡಾ ನಮ್ಮೂರಿಗೆ ಕೇಬಲ್ ಬಂಡ ಹೊಸತರಲ್ಲಿ ಆಗೀಗ ಟೀವಿ ಯಲ್ಲಿ ನೋಡಿದ್ದು.. ನಾನು ಥಿಯೇಟರ್ ಗೆ ಹೋಗಿ ನೋಡಿದ ಮೊದಲ ಸಿನಿಮ ಬಹುಷಃ ಜಗ್ಗೇಶ್ ನ ಪಟ್ಟಣಕ್ಕೆ ಬಂದ ಪುಟ್ಟ ಸಿನಿಮಾ ಇರಬೇಕು. ಅದಾದ ನಂತರ ಬಹಳವೇ ವಿರಳ. ತೀರಾ ನಾನು ನನಗಾಗಿ ಒಂದು ಖಾಸಗೀತನವನ್ನ ಬೆಳೆಸಿ ಕೊಳ್ಳೋ ವರೆಗೂ ಥಿಯೇಟರ್ಗಳ ಪರಿಚಯ ನನಗಾಗಲೇ ಇಲ್ಲ. ಅದರಿಂದಾಚೆಗೂ ಕೆಲವೊಂದು ಭಯಾನಕ ಅನ್ನಿಸೋ ಚಿತ್ರಗಳನ್ನ ನೋಡಿದ್ದು ಅಂದ್ರೆ ಮಮ್ಮಿ ಸೀರೀಸ್ ಮತ್ತು ಅನಕೊಂಡ.. ನಮ್ಮ ಶಾಲೆಯಿಂದ ಮಕ್ಕಳನ್ನೆಲ್ಲ ಒಮ್ಮೆ ಅನಕೊಂಡ ಮೂವಿಗೆ ಕರ್ಕೊಂಡು ಹೋಗಿದ್ದರು.. ಅನಕೊಂಡ ವನ್ನ ತ್ರೀಡಿ ಕನ್ನಡಕದಲ್ಲಿ ಮುಖದ ಮುಂದೆಯೇ ತಂದಿಟ್ಟು ಕೊಂಡು ನೋಡೋದು ಅಂದ್ರೆ ಸಾಮಾನ್ಯ ಗುಂಡಿಗೆಯ ನಂದೂ.. ಆ ಹಾವು ಕಣ್ಮುಂದೆ ಬಂದ ಕೂಡಲೇ ಅದರ ಶಬ್ದ ಕಮ್ಮಿ ಆಗುವ ತನಕ ಬಲವಾಗಿ ಕಣ್ಮುಚ್ಚಿ ಫಿಲಂ ನೋಡ್ತಿದ್ದೆ..!!
ReplyDeleteಅದೆಲ್ಲ ಈಗ ನೆನಪಷ್ಟೇ.. ಭಯಾನಕ ಅನ್ನಿಸೋ ಕೆಲವು ಭೂತಗಳ ಚಿತ್ರ ನೋಡಿರೋದು ಅಂದ್ರೆ ರೆಸಿಡೆಂಟ್ ಈವಿಲ್ ಸೀರೀಸ್ ಮಾತ್ರ ಅದು ಕೂಡ ಟೀವಿಯಲ್ಲಿ.. ಅಷ್ಟು ಬಿಟ್ಟರೆ ನಮಗೂ ಹಾರರ್ ಮೂವಿಗೂ ಸಂಭಂಧವಿಲ್ಲ.. ಆದರೆ ನಿಮ್ಮ ಹಾರರ್ ಪ್ರಸಂಗ ನಗೆಯುಕ್ಕಿಸಿದ್ದಂತು ಸುಳ್ಳಲ್ಲ.. ಇಷ್ಟವಾಯ್ತು ಶ್ರೀ ಸಾರ್.. :)
ವೌ ನಿಮ್ಮ ಅನುಭವವೂ ಕಡಿಮೆ ಏನಿಲ್ಲ. ಸುಂದರವಾಗಿ ಬರೆದಿದ್ದೀರ. ಸುಂದರ ಅತಿ ಸುಂದರ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು ಸತೀಶ್
Delete