Thursday, June 14, 2012

ಮಹಾಭಾರತ-ಕುರುಕ್ಷೇತ್ರ-ಭೀಷ್ಮ-ಅರ್ಜುನ-ಕೃಷ್ಣ

ಮಹಾಭಾರತ ನನಗೆ ಯುಕ್ತಿ, ಶಕ್ತಿ ಬೇಕಾದಾಗೆಲ್ಲ ಮೊಗೆ ಮೊಗೆದು ಕೊಡುವ ಅದ್ಭುತ ಕಾವ್ಯ..

ಬಾಲ್ಯದಲ್ಲಿ ಓದಿದ ಮಹಾಭಾರತದ ಚಿಕ್ಕ, ಪುಟ್ಟ ಕತೆಗಳು, ವೀರೋಚಿತ ಪಾತ್ರಗಳು, ಸಂಭಾಷಣೆ, ವ್ಯಕ್ತಿತ್ವ,  ಇವೆಲ್ಲವೂ ಮನದಾಳದಲ್ಲಿ ಸುಂದರ ಛಾಪನ್ನು ನನಗರಿವಿಲ್ಲದೆ ಒತ್ತಿ ಬಿಟ್ಟಿದ್ದವು.

ಬಿ.ಆರ್. ಚೋಪ್ರರವರ ಮಹಾಭಾರತ ದೂರದರ್ಶನದಲ್ಲಿ ಶುರುವಾದಾಗ ಮನಸಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಅದ್ಭುತ ಸಂಭಾಷಣೆ, ಅಭಿನಯ, ಕೃಷ್ಣನ ಮುಗ್ಧ ನಗು, ಭೀಷ್ಮನ ಪಾತ್ರದಾರಿ, ಅರ್ಜುನ ಬಾಣ ಬಿಡುವ ಶೈಲಿ.. ಒಂದೇ ಎರಡೇ ಎಲ್ಲವು ಸೊಗಸು..

ಈ ಲೇಖನ ಆ ಅದ್ಭುತ ಕಾವ್ಯಕ್ಕೆ ಒಂದು ಸಣ್ಣ ನುಡಿ ನಮನ.  ಅ ಅಮೋಘ ಕಾವ್ಯದ ಬಗ್ಗೆ ಏನೇ ಬರೆದರೂ ಅದು ಸಮುದ್ರದಿಂದ ಒಂದು ನೀರಿನ ಬಿಂದುವನ್ನು ಹೆಕ್ಕಿ ತೆಗೆದಂತೆ..

ಕುರುಕ್ಷೇತ್ರ ರಣಾಂಗಣದಲ್ಲಿ ಭೀಷ್ಮ ಅಜೇಯನಾಗಿರುತ್ತಾನೆ...ಅರ್ಜುನನ ಕದನ ಸಾಮರ್ಥ್ಯದ ಬಗ್ಗೆ ಕೃಷ್ಣನಿಗೆ ಅಸಹನೆ ಮೂಡುತ್ತದೆ..ತನ್ನ ಪ್ರತಿಜ್ಞೆಯನ್ನು ಮರೆತು ಕೃಷ್ಣ ತನ್ನ ಸುದರ್ಶನ ಚಕ್ರವನ್ನು ಹಿಡಿದು ರಥದಿಂದ ಧುಮುಕಿ ಭೀಷ್ಮನೆಡೆ ಸಾಗುತ್ತಾನೆ..ಆಗ ಅರ್ಜುನ ಕೃಷ್ಣ ಕಾಲು ಹಿಡಿದು ಕ್ಷಮೆ ಬೇಡುತ್ತಾನೆ, ಭೀಷ್ಮ ಆನಂದದಿಂದ ಫುಳಕಿತನಾಗುತ್ತಾನೆ.

ಇದನ್ನೇ ಈ ಕೆಳಗಿನ ಚಿತ್ರ ಪರಿಣಾಮಕಾರಿಯಾಗಿ ವಿವರಿಸುತ್ತದೆ ..

ಭೀಷ್ಮನಿಗೆ ಅರ್ಜುನ ತುಂಬಾ ಪ್ರೀತಿ ಪಾತ್ರನು.. ಅರ್ಜುನನಿಗೆ ಭೀಷ್ಮನ ಬಗ್ಗೆ ಅತೀವ ಗೌರವ..ಇಬ್ಬರು ಒಬ್ಬರಿಗೊಬ್ಬರು ಯುದ್ದದಲ್ಲಿ ಎದುರಾದಾಗ ಈ ಮಮಕಾರಗಳು ಡಿಕ್ಕಿ ಹೊಡೆದು ಇಬ್ಬರನ್ನು ಘಾಸಿಗೊಳಿಸುತ್ತದೆ ..ಆಗ ಕೃಷ್ಣ ಹೀಗೆ ಮುಂದುವರಿದರೆ ಯುದ್ಧ ಮುಗಿಯಲಾರದು ಎನಿಸಿ ತಾನೇ ಮಾಡಿದ ಪ್ರತಿಜ್ಞೆಯನ್ನು  (ಯುದ್ಧದಲ್ಲಿ ತಾನು ಆಯುಧ ಹಿಡಿಯುವುದಿಲ್ಲ)  ಮುರಿದು ಭೀಷ್ಮನೆಡೆಗೆ ಸುದರ್ಶನಧಾರಿಯಾಗಿ ಮುನ್ನುಗ್ಗುತಾನೆ..ಆಗ ಅರ್ಜುನ ಕೃಷ್ಣನನ್ನು ಸಮಾಧಾನಗೊಳಿಸಿ ಶಾಂತಗೊಳಿಸುತ್ತಾನೆ ...ಭೀಷ್ಮ ತನ್ನ ಅಭಿಲಾಷೆ ಈಡೇರಿದಕ್ಕಾಗಿ ಸಂತುಷ್ಟನಾಗಿ ಕೃಷ್ಣನನ್ನು ಸ್ತುತಿಸುತ್ತಾನೆ..(ಕೃಷ್ಣನನ್ನು ಆಯುಧಧಾರಿಯಾಗಿ ನೋಡಬೇಕೆನ್ನುವ  ಆಶಯ) 


ಈ ಪ್ರಸಂಗ ನನ್ನ ಮನಸಿಗೆ ಅನ್ನಿಸಿದ್ದು ಹೀಗೆ...

ನಮ್ಮ ಲಕ್ಷ್ಯ, ಗುರಿ, ಸಾಧನೆ  ಭೀಷ್ಮನನ್ನು, ನಮ್ಮನ್ನು ಅರ್ಜುನ , ಹಾಗು ನಮ್ಮ ಮನಸಾಕ್ಷಿ ಕೃಷ್ಣನನ್ನು ಪ್ರತಿನಿಧಿಸುತ್ತದೆ. ನಮ್ಮ ಶ್ರಮ, ಪರಿಶ್ರಮ ನಮ್ಮ ಗುರಿ ಕಡೆಗೆ ಇರಬೇಕು..ಅದು ವಿಚಲಿತವಾದಾಗ ನಮ್ಮ ಗುರಿ ನಮ್ಮನ್ನೇ ಸುಡಲು, ಪೀಡಿಸಲು ಶುರು ಮಾಡುತ್ತೆ..ಆಗ ನಮ್ಮ  ಮನಸಾಕ್ಷಿ ನಮ್ಮನ್ನು ಬಿಟ್ಟು ತಾನೇ ಗುರಿ ಮುಟ್ಟಲು ಸಿದ್ದವಾಗುತ್ತದೆ..ಮನಸಾಕ್ಷಿ ಇಲ್ಲದೆಯೇ ನಾವು ಗುರಿ ಸಾಧಿಸಲು ಸಾಧ್ಯವಿಲ್ಲ, ಅದರ ಸಹಾಯ, ಸಲಹೆ, ಮಾರ್ಗದರ್ಶನವಿಲ್ಲದೆ ನಾವು ಏನು ಮಾಡಲು ಆಗದು, ಅದೇ ನಮ್ಮನ್ನು ಬಿಟ್ಟು ಹೋಗಲು ಸಿದ್ಧವಾದರೆ ನಮ್ಮ ಅಧೋಗತಿಯೇ ಸರಿ..ಆಗ ಗುರಿ, ಸಾಧನೆ ನಮ್ಮನ್ನು ಕಂಡು ಕನಿಕರದ ನಗೆ ನಗುತ್ತದೆ...

ನಮ್ಮ ಮನಸಾಕ್ಷಿಯ ಜೊತೆ ನಾವು ನಮ್ಮ ಗುರಿಯೆಡೆಗೆ ತೆರೆಳಲು ಸಿದ್ದವಾದರೆ ಎಂತಹ ಅಡ್ಡಿ ಆತಂಕಗಳು ದೂರವಾಗಿ ಓಡುತ್ತವೆ..ಶಂಖನಾದ ನಮ್ಮ ಹುಮ್ಮಸ್ಸು, ಕೃಷ್ಣ ನಮ್ಮ ಮಾರ್ಗದರ್ಶಿ, ಇವೆರಡು ಜೊತೆ ಇದ್ದಾಗ ಅಸಾಧಾರಣ ಗುರಿ ಕೂಡ ಸಾಮಾನ್ಯವಾಗುತ್ತದೆ ಅಲ್ಲವೇ...

9 comments:

 1. ಆತ್ಮೀಯ ಶ್ರೀಕಾಂತ್,
  ಮಹಾಭಾರತದ ಪ್ರತಿ ಪಾತ್ರವು ಒಂದೊಂದು ನಮ್ಮ ಆಂತರ್ಯದ ಗುಣಗಳನ್ನು ಪ್ರತಿನಿಧಿಸುತ್ತವೆ. ಮನುಷ್ಯನ ಸಕಲಗುಣ ವಿಭಾಗವು ಅದರಲ್ಲಿ ಅಡಗಿದೆ. ನಮ್ಮ ಎಲ್ಲ ಪ್ರಶ್ನೆಗಳಿಗೆ ಸಮಾಧಾನಕೊಡುವ ಏಕೈಕ ಗ್ರಂಥಭಂಡಾರವೆಂದರೆ ಅದುವೇ ಮಹಾಭಾರತ, ಆದ್ದರಿಂದಲೇ ಈ ಮಹಾಕಾವ್ಯ ಇಂದಿಗೂ ಜೀವಂತವಾಗಿರುವುದು. ಈ ಎಲ್ಲವನ್ನು ಎಳೆ ಎಳೆಯಾಗಿ ಬಿಡಿಸಿ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಸಾದರ ಪಡಿಸಿದ್ದಾನೆ.
  ನಿನ್ನ ಯೋಚನಾ ಲಹರಿಗೆ ನನ್ನ ಅಭಿನಂದನೆಗಳು. ನಿನ್ನ ವಿಚಾರ ಹೀಗೆ ಹೊರಹೊಮ್ಮಲೆಂದು ಆಶಿಸುತ್ತೇನೆ.
  ಪ್ರಕಾಶ್

  ReplyDelete
 2. ಪಾತ್ರಗಳ ವ್ಯಕ್ತಿತ್ವ ನಮ್ಮ ಮನಸಿನ ಪಾತ್ರೆಯೊಳಗೆ ಇಳಿದಾಗ ನಮಗೆ ಸಿಗುವ ನೆಮ್ಮದಿ, ಆನಂದ ಅವರ್ಣನೀಯ...ನನ್ನ ಬದುಕನ್ನು ಮತ್ತೆ ಮತ್ತೆ ಹುರುಪಿನ ಮಾರ್ಗಕ್ಕೆ ತರುವಲ್ಲಿ ಮಹಾಭಾರತದ ಪಾಲು ಅಪಾರ..ನಿಮ್ಮ ಪದಗಳು ಇನ್ನಷ್ಟು ಉತ್ತೇಜನ ಕೊಡುತ್ತೆ..ಧನ್ಯವಾದಗಳು ಚಿಕ್ಕಪ್ಪ

  ReplyDelete
 3. ಶ್ರೀಕಾಂತ್ ಮಂಜುನಾಥ್ ಜೀ...

  ಮಹಾಭಾರತದಲ್ಲಿ ಜೀವನ...
  ಬದುಕಿನ ದರ್ಶನವಿದೆ...

  ಅಲ್ಲಿನ ಪಾತ್ರಗಳು.. ಘಟನೆಗಳು ಇಂದಿಗೂ ಪ್ರಸ್ತುತವಿದೆ...

  ನಮ್ಮ ದೈನಂದಿನ ಸಮಸ್ಯೆಗಳಿಗೆ ಅಲ್ಲಿ ಪರಿಹಾರವಿದೆ...

  ಎಲ್ಲವೂ ನಮ್ಮ ವೈಚಾರಿಕತೆಯ ಮಟ್ಟಕ್ಕೆ ಸಂಬಂಧಿಸಿದ್ದು...

  ಅದೆಷ್ಟು ಜನ ಇದರ ಬಗೆಗೆ...
  ಗೀತೆಯ ಬಗೆಗೆ ಭಾಷ್ಯ ಬರೆದಿದ್ದಾರೆ !!

  ಇನ್ನೂ ಬೇಕಾದಷ್ಟು ಜನ ಬರೆಯುವವರಿದ್ದಾರೆ...

  ನಿಮ್ಮ ಈ ಲೇಖನ ತುಂಬಾ ಸೊಗಸಾಗಿ ಮೂಡಿ ಬಂದಿದೆ...

  ಸ್ಪೂರ್ತಿ ಕೊಡುವಂಥಹ ಲೇಖನ...

  ReplyDelete
 4. ಧನ್ಯವಾದಗಳು ಪ್ರಕಾಶ್ji.....ನಿಮ್ಮ ಒಲುಮೆಯ ಪದಗಳು ಇನ್ನಷ್ಟು ಮನದಲ್ಲಿ ಶಂಖವನ್ನು ಊದಿಸುತ್ತೆ...ನನ್ನ ಭಾಗ್ಯ ನನ್ನ ಲೇಖನಕ್ಕೆ ಇಬ್ಬರು ಪ್ರಕಾಶ ಬೀರಿದ್ದಾರೆ..ಮೊದಲನೆಯವರು ನನ್ನ ಚಿಕ್ಕಪ್ಪ..ಎರಡನೆಯವರು ದೊಡ್ಡಣ್ಣ..ಸೂಪರ್...ಧನ್ಯೋಸ್ಮಿ...

  ReplyDelete
 5. ಮಹಾಭಾರತವೆಂದರೆ ಬೆರಗು..!! ಅಲ್ಲಿನ ಒಂದೊಂದು ಪಾತ್ರಗಳು ಒಂದೊಂದು ಅದ್ಭುತಗಳೇ..!! ಕೃಷ್ಣ, ಭೀಷ್ಮ , ಅರ್ಜುನರಂತಹ ಮಹಾನ್ ಪಾತ್ರಗಳನ್ನು ನಮ್ಮ ಆಂತರ್ಯದ ಗುಣಗಳಿಗೆ ಹೋಲಿಸಿ ಬರೆದದ್ದು ತುಂಬಾ ಇಷ್ಟವಾಯಿತು.. ಹೌದು ಮನಃಸಾಕ್ಷಿಯ ಮಾರ್ಗದರ್ಶನದಲ್ಲೇ ಸಾಧನೆ ಸಾದ್ಯ.. ಮನಃಸಾಕ್ಷಿ ತೊರೆದು ಹೊರಟರೆ ಸಾಧನೆ ನಮ್ಮೆಡೆಗೆ ಕನಿಕರದ ನಗೆ ಬೀರುತ್ತದೆ ಎನ್ನುವ ಮಾತು ತುಂಬಾ ಕಾಡುತ್ತದೆ.. ಮಹಾಭಾರತ ಪಾತ್ರಗಳೊಂದಿಗೆ ಮನಸಿನ ಬಣ್ಣಗಳನ್ನು ಬೆಸೆದಿದ್ದು ತುಂಬಾ ಇಷ್ಟವಾಯಿತು..

  ReplyDelete
 6. ಸಂಧ್ಯಾ ನಿಮ್ಮ ಮಾತುಗಳು ಮನಸಿಗೆ ತುಂಬಾ ಇಷ್ಟ ಆದವು....ಧನ್ಯವಾದಗಳು...ಮಹಾಭಾರತದಂತಹ ಅಮೋಘ ಕಾವ್ಯ ನಡೆದ ನಾಡಿನಲ್ಲಿ ನಾವು ಜನಿಸಿರುವುದು ನಮ್ಮ ಭಾಗ್ಯವೇ ಸರಿ...ಈ ಕಾವ್ಯದಿಂದ ಪಡೆದ ಸ್ಪೂರ್ತಿ..ನಿಜಕ್ಕೂ ಆಶಾದಾಯಕ...ಜೀವನದ ಪಥವನ್ನೇ ಬದಲಿಸಲು ಪ್ರೇರೇಪಿಸಿವುದು ಇದರ ಹೆಗ್ಗಳಿಕೆ!!

  ReplyDelete
 7. ಮಹಾಭಾರತದ ಪಾತ್ರಗಳೇ ಹಾಗೆ, ಪ್ರತಿ ಸನ್ನಿವೇಶ ಘಟನೆಗಳು ಇಂದಿನ ವಿಜ್ಞಾನ ಯುಗದಲ್ಲೂ ಪ್ರಸ್ತುತ ಎನಿಸುವಂತದ್ದು, ನಿಮ್ಮೆಲ್ಲಾ ವೈವಿದ್ಯಮಯ ಬರಹಗಳು ಮನಸ್ಸಿಗೆ ಹತ್ತಿರವಾಗುವಷ್ಟು ಸ್ಪರ್ಶದಾಯಕ ಶ್ರೀ.

  ReplyDelete
 8. ಮನೋ ಚಿಕಿತ್ಸಕ ಬರಹ. ಗುರಿಯ ಆಟಂಕಗಳನ್ನು, ಮನಸ್ಸಿನ ಆಯಾಮಗಳನ್ನು ಪಾತ್ರಗಳ ಜೊತೆ ಸಮೀಕರಿಸಿ, ನಮಗೆ ಸರಳವಾಗಿ ವಿವರಿಸಿದ ನಿಮಗೆ ಶರಣು.

  ReplyDelete