Monday, January 2, 2012

ನಮ್ಮ ಅಪ್ಪನ ಬಗ್ಗೆ ಏನೇ ಬರೆದರೂ ಅದು ಕಮ್ಮಿ ಎನ್ನುವುದು ನನ್ನ ಭಾವನೆ..

"ಮೊದಲು ಕಿವಿ ಹೋಯ್ತು....ಆಮೇಲೆ ಕಣ್ಣು ಹೋಯ್ತು..ಪ್ರಾಣ ಒಂದು ಉಳಿದಿದೆ"

ನನಗೆ ನಮ್ಮ ಅಪ್ಪ ಹೇಳಿದ ಕಡೆ ಸ್ಪಷ್ಟ ಮಾತುಗಳು...ಇನ್ನೂ ಕಿವಿಯಲ್ಲಿ ಗುಯ್ಯ್ಗಗುಟ್ಟುತ್ತ ಇದೆ...


ತಮ್ಮ ಇಡಿ ಜೀವನದಲ್ಲಿ ಛಲ ಹಾಗು ಆತ್ಮ ವಿಶ್ವಾಸದಿಂದ ಬೆಳೆದು ನಮ್ಮನ್ನು ಹಾಗೆ ಬೆಳಸಿದ ನಮ್ಮ ಅಪ್ಪ ಇಂದು ಸಂಜೆ ಸುಮಾರು ೫.೩೫ಕ್ಕೆ ನಮ್ಮನ್ನು ಹರಸಿ ಹೊರಟರು ...ಕಾಲನ ಕರೆ ಬಂದಾಗ ಯಾರು ನಿಲ್ಲುವುದಿಲ್ಲ ಎನ್ನುವ ಸತ್ಯ ನಮಗೆ ಅರಿವಾದ ಆ ಕ್ಷಣ ನಿಜಕ್ಕೂ ಯಾತನಮಯ .


ಬೇರೆಯವರ ಹುಟ್ಟು- ಸಾವಿನ  ಬಗ್ಗೆ  ಬರೆಯೋದು  ತುಂಬಾ  ಸುಲಭ..ತಮ್ಮ ಬಂಧು-ಮಿತ್ರರ ಬಗ್ಗೆ ಬರೆಯುವುದು ಕಷ್ಟ ಅಂತ ಪ್ರತೀತಿ..ಆದ್ರೆ ನಮ್ಮ ಅಪ್ಪ ನಮ್ಮ ಒಳಗೆ ಇದ್ದು ನನಗೆ ಬರೆಯೋದಕ್ಕೆ ಚೈತನ್ಯ ತುಂಬಿದ್ದರೆ ಅಂತ ನನ್ನ ಬಲವಾದ ನಂಬಿಕೆ...


ಜೀವನದ ಪ್ರತಿಯೊಂದು ಕ್ಷಣದಲ್ಲೂ  ತಾಳ್ಮೆ, ಮೃದು ಮನಸಿಗೆ ಹೆಸರಾಗಿದ್ದ ನಮ್ಮ ಅಪ್ಪ..ಅವರ ಅಂತಿಮ ಕ್ಷಣಗಳು ಯಾತನಮಯವಾಗಿದ್ದು ವಿಧಿ ವಿಪರ್ಯಾಸ.  ಪ್ರಾಯಶಃ ಆ ತಾಳ್ಮೆಯೇ ನಮ್ಮ ಮನಸನ್ನು ಹಿಡಿತದಲ್ಲಿರಿಸಿದೆ ಅಂದರೆ ತಪ್ಪಿಲ್ಲ..


ಸುಮಾರು ಎಪ್ಪತೊಂಬತ್ತು ಹುಟ್ಟು ಹಬ್ಬಗಳನ್ನ ಆಚರಿಸಿದ ಹಿರಿಯ ಜೀವ..ತನ್ನ ಎಂಬತ್ತನೇ ವರುಷಕ್ಕೆ ಕಾಲು ಇರಿಸಿದ ಸುಮಾರು ಮೂರು  ತಿಂಗಳ ತರುವಾಯ ತನ್ನ ನೆನಪನ್ನು ನಮಗೆ ನೀಡಿ ಹೋಗಿದ್ದಾರೆ...


ನಮ್ಮ ಅಪ್ಪನ ಬಗ್ಗೆ ಏನೇ ಬರೆದರೂ ಅದು ಕಮ್ಮಿ ಎನ್ನುವುದು ನನ್ನ ಭಾವನೆ...


ಅವರ ತಾಳ್ಮೆ, ಎಂತಹ ಸಮಯದಲ್ಲೂ ಅಸಹನೆಗೊಳ್ಳದ ಸ್ವಭಾವ ತನ್ನ ಎಲ್ಲ ಮಕ್ಕಳನ್ನು ಒಂದು ನೆಲೆಗಟ್ಟಿಗೆ ಮುಟ್ಟಿಸಲು ಪಟ್ಟ ಶ್ರಮ ಎಲ್ಲದಕ್ಕೂ ನಾವು ಚಿರಋಣಿ...


ಅಣ್ಣ ನೀವೆಲ್ಲೂ ಹೋಗಿಲ್ಲ...ನಮ್ಮೆಲ್ಲೆ ಇದ್ದೀರಾ...ನಮಗೆ ಮಾರ್ಗದರ್ಶನ ನೀಡುತ್ತ ಇರಿ...


ಹೋಗಿ ಬನ್ನಿ ಅಣ್ಣ...ನಿಮ್ಮ ಅಪ್ಪ, ಅಮ್ಮ, ಚಿಕ್ಕಮ್ಮ ಎಲ್ಲರೂ  ನಿಮಗಾಗಿ ಕಾಯುತ್ತ ಇದ್ದಾರೆ...


ನಿಮ್ಮ ಶ್ರಮ ಸಾರ್ಥಕವಾಗುವುದು ನಮ್ಮ ಸಾರ್ಥಕ ಜೀವನದಲ್ಲಿ...ಅದೇ ನಿಮಗೆ ನಾವು ತೋರುವ ಶ್ರದ್ದಾಂಜಲಿ...

2 comments:

 1. ಭಾವಪೂರ್ಣ ಶ್ರದ್ದಾಂಜಲಿ.
  ತುಂಬು ಜೀವನ ನಡೆಸಿ,ಯಶಸ್ವಿಯಾಗಿ ತನ್ನ ಪಾಲಿನ ಕರ್ತವ್ಯಗಳನ್ನು ತನ್ನ ಶಕ್ತಿ, ವಿವೇಕಕ್ಕನುಸಾರವಾಗಿ ನಿರ್ವಹಿಸಿ, ತನ್ನ ಮಕ್ಕಳ ಪುರೋಭಿವ್ರುದ್ದಿಯನ್ನು ಸದಾ ಕಾಲ ಬಯಸುತ್ತ ಸ್ನೇಹದಿಂದ ಬಾಳಿ ಈ ಜಗತ್ತಿನ ವ್ಯಾಮೋಹ ಕಳೆದುಕೊಂಡ ಪಿತೃ ಸಮಾನರಾದ ಮಂಜಣ್ಣ ಭಾವನವರಿಗೆ ನಮಸ್ಕಾರಗಳೊಂದಿಗೆ ಭಾವಪೂರ್ಣಶ್ರದ್ದಾಂಜಲಿ.
  ಹುಟ್ಟಿನೊಂದಿಗೆ ಸಾವಿನ ಕಡೆಗೆ ಪ್ರಯಾಣ. ಇರುವಷ್ಟು ಆಯಸ್ಸು ಮುಗಿಸಿ ನಮ್ಮ ನಮ್ಮ ಕರ್ಮಗಳನ್ನು ಯಥಾಶಕ್ತಿ ಮುಗಿಸಿ, ಅಷ್ಟರಲ್ಲಿ ಸಾಧ್ಯವಾದಮಟ್ಟಿಗೆ ಪುಣ್ಯ ಸಂಗ್ರಹ ಮಾಡಿ ಮುಂದಿನ ದಾರಿ ಸುಗಮ ಮಾಡಿಕೊಳ್ಳುವುದು ಎಲ್ಲರ ಆಶಯ. ಇರುವ ತನಕ ಒಂದು ಇರುವೆಗೂ ಹಿಂಸೆ ಮಾಡದ ಜೀವಿ ಅಂತ್ಯದಲ್ಲೇಕೆ ಯಾತನೆ ಅನುಭವಿಸಬೇಕು? ಈ ಪ್ರಶ್ನೆ ನನ್ನ ಗುರುವನ್ನು ಕೇಳಿದಾಗ " ಈ ಜನ್ಮದ ಋಣ ತೀರಿಸಲೆಂದೇ ಹುಟ್ಟಿರುವ ನಾವು ಎಷ್ಟೋ ಜನ್ಮದ ಪಾಪಸಂಚಯವನ್ನು ಮುಗಿಸಬೇಕಾಗುತ್ತದೆ. ಒಂದೊಂದು ಜನ್ಮದಲ್ಲಿ ಸ್ವಲ್ಪಸ್ವಲ್ಪವಾಗಿ ಮುಗಿಸಬೇಕಾಗುವ ಕಾರಣ ಪುನಃ ಪುನಃ ಜನ್ಮವೆತ್ತಬೇಕಾಗುತ್ತದೆ. ಜನ್ಮ ಸಂಸ್ಕಾರ ಮುಗಿಯುತ್ತ ಬಂದಂತೆ, ಕರ್ಮಬಂಧನ ಕಳಚುತ್ತದೆ. ಈ ಕರ್ಮಬಂಧನ ಕಳಚುವ ಸಮಯದಲ್ಲಿ ಜೀವಿಗೆ ಯಾತನಮಯ ಅಂತ್ಯ ಅನಿವಾರ್ಯವಾಗುತ್ತದೆ. ಉದಾಹರಣೆಗೆ, ಶ್ರೀ ರಾಮಕೃಷ್ಣ ಪರಮಹಂಸರು, ಮಹರ್ಷಿ ರಮಣರು, ಇವರೆಲ್ಲರೂ ಯಾತನಮಯ ಅಂತ್ಯವನ್ನು ಕಂಡವರೇ. ಆದರೆ ಅವರು ಅಂತ್ಯದವರೆಗೂ ದೇಹಭಾವದಲ್ಲಿ ಇರಲಿಲ್ಲ. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ. ಯಾತನಮಯ ಅಂತ್ಯ ಮುಂದಿನ ಜನ್ಮದ ಉತ್ಕೃಷ್ಟ ಬದುಕನ್ನು ಸೂಚಿಸುತ್ತದೆ. ಹೀಗಾಗಿ ಇರುವಷ್ಟು ದಿನದಲ್ಲಿ ಯಾರಿಗೂ ಕೇಡು ಎಣಿಸದ ಜೀವಿ ಅಂತ್ಯದಲ್ಲಿ ಯಾತನೆ ಅನುಭವಿಸುವುದರ ಸೂಚನೆ ಸದ್ಗತಿಯ ಮಾರ್ಗಕ್ಕೆ ಸುಲಭ " ಎಂದು ಹೇಳಿದ ಮಾತು ಇಲ್ಲಿ ಸತ್ಯವೆನಿಸುತ್ತದೆ.
  ಹಿರಿಯರ ಆದರ್ಶ, ತಾಳ್ಮೆ, ಸ್ನೇಹ ಮತ್ತು ಪ್ರೀತಿಯ ಮಾರ್ಗದಲ್ಲಿ ತೋರುತ್ತಿದ್ದ ಸಜ್ಜನಿಕೆಯು ಸ್ಮರಣೀಯ. ಇವರ ಅಗಲಿಕೆಯ ದುಃಖ ಮರೆಯುವುದು ಕಷ್ಟಸಾಧ್ಯ. ಇವರ ಆತ್ಮಕ್ಕೆ ಸದ್ಗತಿಯು ಪ್ರಾಪ್ತವಾಗಲೆಂದು ಭಗವಂತನಲ್ಲಿ ಅನನ್ಯ ಪ್ರಾರ್ಥನೆ.
  ನೀವು ದೇಹದಿಂದ ಮಾತ್ರ ದೂರವಾಗಿದ್ದೀರಿ, ಆದರೆ ನಮ್ಮೊಳಗೇ ಚೈತನ್ಯವಾಗಿ ಸ್ಫೂರ್ತಿಯಾಗಿ ಸದಾಕಾಲ ಇರುತ್ತೀರಿ ಎನ್ನುವುದು ಸತ್ಯ.

  ReplyDelete
 2. ಶ್ರೀ,
  ಮೊದಲನೆಯದಾಗಿ ನಿಮ್ಮ sms ನೋಡಿ ತುಂಬಾ ಬೇಜಾರಾಯಿತು. ಆಗ ನಾ ಶಿವಮೊಗ್ಗೆಯಲ್ಲಿ ಇದ್ದೆ. ಇವತ್ತು ನಿಮ್ಮ ಬ್ಲಾಗ್ನಲ್ಲಿ ನಿಮ್ಮ ತಂದೆಯವರಿಗೆ ಬರೆದ ಭಾವಪೂರ್ಣ ಶ್ರದ್ಧಾಂಜಲಿಯ ಬರವಣಿಗೆಗೆ ...ನಿಜವಾಗಲು ನಿಮ್ಮಲ್ಲಿ, ನಿಮ್ಮೊಳಗೆ ನಿಮ್ಮ ತಂದೆಯವರು ಇದ್ದಾರೆ ಎಂದೆನಿಸಿತು ...ಅವರ ಶಕ್ತಿ, ಪ್ರೋತ್ಸಾಹ, ಆಶೀರ್ವಾದ ನಿಮ್ಮೊಂದಿಗೆ ಇದೆ ಅನ್ನುವುದಕ್ಕೆ ಈ ಬರಹವೇ ಪ್ರತ್ಯಕ್ಷ ಸಾಕ್ಷಿ. ನಿಮ್ಮ ತಂದೆಯವರ ಆತ್ಮಕೆ ಶಾಂತಿ ಕೋರುವ ... ನಿಮ್ಮ ಗಿರಿ

  ReplyDelete