Saturday, January 21, 2012

ನಾಲ್ಕು ತಲೆಮಾರಿನ ಹಿರಿಯರ ಒಂದು ಸಂಭಾಷಣೆ!!!

ಮಗ, ಪಿತ, ಪಿತಾಮಹ, ಪ್ರಪಿತಾಮಹ ಎಲ್ಲರು ಇಹಲೋಕದಿಂದ ನಿರ್ಗಮನವಾದ ಮೇಲೆ ನಡೆಸಿದ  ಸಂಭಾಷಣೆ

ಮಗ: ಮಂಜುನಾಥ  (ನಮ್ಮ ಅಪ್ಪ)
ಪಿತ: ರಂಗಸ್ವಾಮಿ (ನಮ್ಮ ಅಜ್ಜಯ್ಯ)
ಪಿತಾಮಹ : ವೆಂಕಟಕೃಷ್ಣಯ್ಯ (ನಮ್ಮ ಮುತ್ತಜ್ಜ)
ಪ್ರಪಿತಾಮಹ: ಲಿಂಗಪ್ಪಯ್ಯ(ನಮ್ಮ ಮುತ್ತಜ್ಜನ ತಂದೆ)
  
ನಮ್ಮ ಪ್ರಪಿತಾಮಹ ದೇವಲೋಕದ ಉದ್ಯಾನವನದಲ್ಲಿ ವಿಹರಿಸುತ್ತಿದ್ದ ಸಂಧರ್ಭ 
ದೇವದೂತರು : ಎಲೈ ಪುಣ್ಯ ಜೀವಿಯೇ ನಿಮ್ಮನ್ನು  ಅನಂದಲೋಕಕ್ಕೆ ಕರೆದೊಯ್ಯಲು ಬಂದಿದ್ದೇವೆ..ನಮ್ಮ ಜೊತೆ ನಡೆಯಿರಿ! 

ಪ್ರಪಿತಾಮಹ: ದೇವದೂತರೆ..ಏಕೆ ಏನಾಯಿತು?..ನಮ್ಮ ಕುಟುಂಬದವರೆಲ್ಲ ಭೂಲೋಕದಲ್ಲಿ ಕ್ಷೇಮವಾಗಿದ್ದರೆ ತಾನೇ? 

ದೇವದೂತರು: ಚೆನ್ನಾಗಿ ಇದ್ದಾರೆ!...ನಿಮ್ಮ ಮರಿ ಮೊಮ್ಮಗ ಮಂಜಣ್ಣ ತನ್ನ ವೈಕುಂಟಯಾತ್ರೆ  ಮುಗಿಸಿ ಬರುತ್ತಾ ಇದ್ದಾರೆ..ಅವರ  ಮಕ್ಕಳು ಶ್ರಾದ್ಧ ಕಾರ್ಯದಲ್ಲಿ ಸಪಿಂಡಿಕರಣ ಮಾಡಿ ನಿಮ್ಮನ್ನ ಆನಂದಲೋಕಕ್ಕೆ ತೆರಳಲು ದಾರಿ ಮಾಡಿ ಕೊಟ್ಟಿದ್ದಾರೆ.ಆನಂದ ಲೋಕಕ್ಕೆ ತಲುಪಲು ಇನ್ನು ಹನ್ನೆರಡು ಮಾಸಗಳು ಬೇಕು..ಅದಕ್ಕೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಿ....

ಪ್ರಪಿತಾಮಹ: ಇರಿ ಹಾಗಾದರೆ ನನ್ನ ಮಗ, ಮೂಮ್ಮಗನನ್ನು ನೋಡಿ ಮಾತಾಡಿಸಿ ಬರುತ್ತೇನೆ

ದೇವದೂತರು : ಸರಿ ಬೇಗ ಬಂದು ಬಿಡಿ

ಪ್ರಪಿತಾಮಹ: ಮಗು ವೆಂಕಟಕೃಷ್ಣಯ್ಯ, ನನ್ನ ಮೊಮ್ಮಗ ರಂಗಸ್ವಾಮಿಯ ಎರಡನೇ ಕುಲಪುತ್ರ ಮಂಜಣ್ಣ ಇಲ್ಲಿಗೆ ಬರುತ್ತಾ ಇದ್ದಾನಂತೆ ಇದು ನಿಜವೇ.?.

ಪಿತಾಮಹ: ಹೌದು ಅಣ್ಣ  ನನ್ನ ಮೊಮ್ಮಗ ಮಂಜಣ್ಣ ಇಹಲೋಕ ಯಾತ್ರೆ ಮುಗಿಸಿ ಬರುತ್ತಾ ಇದ್ದಾನೆ..

ಪಿತ : ಅಯ್ಯೋ ಮಂಜಣ್ಣ ಯಾಕೆ ಏನಾಯ್ತು, ನನ್ನ ಮೊದಲ ಮಗಳು ಇಲ್ಲಿಗೆ ಬಂದಾಗಲೇ ದುಖಃವಾಗಿತ್ತು. ಅದು ಕಳೆದು ಇನ್ನೂ ಆರೇಳು ತಿಂಗಳು ಕಳೆದಿಲ್ಲ ಆಗಲೇ ನನ್ನ ಕುಟುಂಬದ ಇನ್ನೊಂದು ಕುಡಿ ಇಲ್ಲಿಗೆ ಬರುತ್ತಿದೆ..ಏನು ಮಾಡಲಿ..ನರಸುಗೆ ಹೇಗೆ ಹೇಳಲಿ..(ಇವರಿಬ್ಬರ ಸಂಭಾಷಣೆ ಇನ್ನೊಂದು ಬ್ಲಾಗ್ನಲ್ಲಿ ಬರುತ್ತೆ) 

ಪ್ರಪಿತಾಮಹ : ಮಗು ರಂಗ..ದುಃಖ ಪಡಬೇಡ..ನಿಮ್ಮನ್ನೆಲ್ಲ ಬಿಟ್ಟು ಆನಂದಲೋಕಕ್ಕೆ ಹೋಗುವುದು ನನಗೂ ಕಷ್ಟ

ಅಷ್ಟರಲ್ಲಿ ದೇವದೂತರು ಬರುತ್ತಾರೆ...

ಪ್ರಪಿತಾಮಹ: ದೇವದೂತರೆ..ನನ್ನ ಮಗ ವೆಂಕಟ ಭೂಮಿ ಬಿಟ್ಟು ಬಂದಾಗ ಮಂಜುವಿಗೆ ಕೇವಲ ಎರಡು ತಿಂಗಳು, ನಾನು ನೋಡೇ ಇಲ್ಲ...ಒಮ್ಮೆ ಅವನ ಧ್ವನಿ ಕೇಳಬೇಕು ಅಂತ ಅನ್ನಿಸುತ್ತಿದೆ..ಮಾತಾಡಬಹುದೇ..

ದೇವದೂತರು: ಆಗಲಿ..ನೀವೆಲ್ಲರೂ ಜೋರಾಗಿ ಕೂಗಿ ಮಾತಾಡಿ..ಅವರಿಗೆ ಕೇಳುತ್ತದೆ...ಮಾತಾಡಿ

ಎಲ್ಲರೂ ಕೂಗುತ್ತಾರೆ : ಮಂಜು ಎಲ್ಲಿದ್ದಿಯ, ಹೇಗೆ ಬರುತ್ತಾ ಇದ್ದೀಯ...ದಾರಿಯಲ್ಲಿ ಕಷ್ಟವೆನಿಲ್ಲವಷ್ಟೇ?

ಮಂಜಣ್ಣ(ಜೋರಾಗಿ ಕೂಗುತ್ತ ದೊಡ್ಡ ದ್ವನಿಯಲ್ಲಿ ಅಲ್ಲಿಂದಲೇ ಮಾತಾಡುತ್ತಾರೆ) : ಯಾರು ಅದು ..ಓಹ್ ಅಣ್ಣ, ತಾತ, ಪ್ರಪಿತಾಮಹ ಎಲ್ಲರು ಕೂಗುತಿದ್ದಾರೆ...ನಿಮ್ಮೆಲ್ಲರಿಗೂ ನಮಸ್ಕಾರ..ಹೌದು ನನ್ನ ಯಾತ್ರೆ ಪುಷ್ಯ ಮಾಸದ ಒಂಭತ್ತನೇ ದಿನ ದಿನ ಶುರುವಾಯ್ತು...ಇನ್ನೊಂದು ವರ್ಷದಲ್ಲಿ ನೀವಿರುವಲ್ಲಿಗೆ ಬರುತ್ತೇನೆ..ನಾನು ಚೆನ್ನಾಗಿದ್ದೀನಿ..ನನ್ನ ಅರೋಗ್ಯ ಕೂಡ ಚೆನ್ನಾಗಿದೆ..ಇಲ್ಲಿ ಯಮ ಕಿಂಕರರು ನನಗೆ ತೊಂದರೆ ಮಾಡುತ್ತಿಲ್ಲ..ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ..

ಪ್ರಪಿತಾಮಹ : ಮಂಜು..ನೀನು ಇಲ್ಲಿಗೆ ಬರುವ ಸುದ್ದಿ ಕೇಳಿ ದುಃಖವಾಯಿತು..ಆದ್ರೆ ಏನೋ ಮಾಡೋದು ನೀನು ಬರುವ ಕಾರಣ ನನಗೆ ಅನಂದಲೋಕಕ್ಕೆ ರಹದಾರಿ ಸಿಗುತ್ತಿದೆ..ಒಂದು ಕಡೆ ಮುಕ್ತಿ ಸಿಕ್ಕಿತಲ್ಲ ಅನ್ನುವ ಸಂತೋಷ..ಇನ್ನೊಂದು ಕಡೆ ನನ್ನ ಮಗ, ಮೊಮ್ಮಗನನ್ನು ಬಿಟ್ಟು ಹೋಗಬೇಕಲ್ಲ ಅನ್ನುವ ದುಃಖ..

ಮಂಜು: ಅಜ್ಜಯ್ಯ, ಪ್ರಪಿತಾಮಹ  ನಿಮ್ಮನ್ನ ನಾನು ನೋಡಿದ ನೆನಪೇ ಇಲ್ಲ..ಯಾಕೆಂದರೆ ನಾನು ಕೇವಲ ಎರಡು ತಿಂಗಳ ಮಗುವಾಗಿದ್ದೆ..ಅಲ್ಲಿಗೆ ಬಂದು ನೋಡುತ್ತೇನೆ..ಅಣ್ಣ ತಾತನನ್ನು ಚೆನ್ನಾಗಿ ನೋಡಿಕೊಳ್ಳಿ ನಾನು ಅಲ್ಲಿಗೆ ಬಂದು ನಿಮಗೆ ಸಹಾಯ ಮಾಡುತ್ತೇನೆ 

ಪಿತ: ಮಂಜಣ್ಣ ಅದು ನನಗೆ ಗೊತ್ತು..ನೀನೇನೂ ಯೋಚನೆ ಮಾಡಬೇಡ ಇಲ್ಲಿ ನರಸು ಇದ್ದಾಳೆ, ಗೌರಿ ಇದ್ದಾಳೆ, ಗೋಪಾಲ ಇದ್ದಾನೆ ..ನೀನು ಬಂದ ಮೇಲೆ ನನಗೆ ಇನ್ನೂ ಬಲ ಬರುತ್ತದೆ..

ದೇವದೂತರು : ಸರಿ ಹೊರಡಿ..ನಾವು ಇನ್ನೂ ಒಂದು ವರುಷ ನಡೆಯುತ್ತಾ ಅನಂದಲೋಕಕ್ಕೆ ಸಾಗಬೇಕು..

ಪ್ರಪಿತಾಮಹ : ಮಕ್ಕಳೇ  ನಾನು ಹೊರಟೆ...ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ..ಎಲ್ಲರಿಗೂ ಶುಭವಾಗಲಿ!!!

ಪಿತ, ಪಿತಾಮಹ: ಹೋಗಿ ಬನ್ನಿ..ನಿಮ್ಮ ಆಶಿರ್ವಾದ ನಮ್ಮ ಮೇಲೆ ಇದೆ..ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ನಿಮಗೆ ಶುಭವಾಗಲಿ!!!!

2 comments:

  1. ಆತ್ಮೀಯ ಶ್ರೀಕಾಂತನಿಗೆ,
    ನಿನ್ನ ಭಾವನಾ ಲಹರಿಯಲ್ಲಿ ಮೂಡಿಬಂದ ಸೃಜನಾತ್ಮಕ ಮಾತುಗಳು ಒಂದು ಪ್ರಹಸನಕ್ಕಾಗಿ ಹೇಳಿ ಮಾಡಿಸಿದಂತಿದೆ. ಕುಟುಂಬ ವರ್ಗದವರೆಲ್ಲ ಸೇರಿದಾಗ ಈ ಪ್ರಹಸನ ಅಭಿನಯಿಸಲ್ಪಟ್ಟರೆ ತುಂಬಾ ಬಾವುಕವಾಗಿ ಮೂಡುತ್ತದೆ.
    ನಿನ್ನ ಬಾವನೆಗಳಲ್ಲಿ ಒಂದು ಮಾರ್ಪಾಡು ಬೇಕು. ಆನಂದ ಲೋಕದ ವಿಹಾರಕ್ಕೆ ಒಂದು ವರ್ಷ ಬೇಡ. ಆನಂದ ಲೋಕದಲ್ಲಿ ಬೇಜಾರು, ದುಃಖದ ಮಾತೆ ಇರದು. ಕಲ್ಪನೆಯಲ್ಲಿ ಇವೆಲ್ಲ ಸರಿಯೇನಿಸಿದರು, ಆನಂದಲೋಕದ ಹೆಸರೇ ಮಿಕ್ಕೆಲ್ಲವನ್ನು ಸೂಚಿಸುತ್ತದೆ, ಅಲ್ಲವೇ! ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಮುಂಬಡ್ತಿ. ಅಷ್ಟೇ!
    ಅದೇನೇ ಇರಲಿ, ಒಂದಷ್ಟು ಸಂಭಾಷಣೆ ನೆನಪಿನ ದೋಣಿಯಲ್ಲಿ ತೇಲಿಸುತ್ತದೆ.
    ಹೀಗಂದು, ನಿನ್ನ ಆತ್ಮೀಯ,
    ಪ್ರಕಾಶ್.

    ReplyDelete
  2. ಶ್ರೀಕಾಂತನಿಗೆ,
    "Shraddha is a wonderful imaginative communion with the dead " ಎಂದು ಡಾ|| ರಾಧಾಕೃಷ್ಣನ್ ಹೇಳಿದ ಮಾತು ಇಲ್ಲಿ ಪ್ರಸ್ತುತ ಎನಿಸುತ್ತದೆ. ಶ್ರಾದ್ಧಕ್ಕೆ ಬಂದ ನಿಮಂತ್ರಕರು ಊಟ ಮಾಡಿ, ಮಂದಸ್ಮಿತರಾಗಿ ಹೊರಟಾಗ ನಮ್ಮ ಮನಸ್ಸಿನಲ್ಲಿ " ಇವತ್ತು ನನ್ನ ಜನ್ಮ ಸಾಫಲ್ಯವಾಯಿತು, ನಿಮ್ಮಲ್ಲಿ ಸತ್ತ ನನ್ನ ತಂದೆಯನ್ನೂ, ಅಜ್ಜನನ್ನು ನೋಡಿದ ತೃಪ್ತಿ ನನಗಾಗಿದೆ" ಎಂದು ಎರಡು ಹನಿ ಕಣ್ಣೇರು ನಮಗರಿವಿಲ್ಲದಂತೆ ಬಂದರೆ ಶ್ರಾದ್ಧ ಸಾರ್ಥಕವಲ್ಲವೆ ಶ್ರೀಕಾಂತ? ನಿನ್ನ ಪತ್ರ ನೋಡುವಾಗ ಈ ಭಾವನೆಯನ್ನು ನಿನ್ನ ಮತ್ತು ನಿನ್ನ ಸಹೋದರರಲ್ಲಿ ಇರುವುದನ್ನು ನಾನು ಇಲ್ಲಿಂದಲೇ ಕಾಣುತ್ತಿದ್ದೇನೆ. ಧನ್ಯವಾದ ಆ ಕ್ಷಣಗಳಿಗೆ ಯಾವ ಹೋಲಿಕೆಯು ಇಲ್ಲ.
    ನಿನ್ನ ಶ್ರದ್ಧೆಗೆ ನನ್ನ ನಮನ. ಹೃದಯದ ಅಂತರಾಳದಿಂದ ಬಂದ ಈ ಮಾತು ಬರೆವಾಗ ನನಗರಿವಿಲ್ಲದಂತೆ ಆನಂದಭಾಷ್ಪ ಉದುರಿತು.
    ನಿನ್ನ ಚಿಕ್ಕಪ್ಪ.

    ReplyDelete