Thursday, April 24, 2014

ಆಹಾ ನನ್ನ ಜನ್ಮ ಪಾವನವಾಯಿತು!!!

ನಿನ್ನೆ ರಾತ್ರಿ ತಲೆ ಓಡುತ್ತಿರಲಿಲ್ಲ..ಸಾಮಾನ್ಯ ನನಗೆ ಹಾಗೆ ಆಗುವುದಿಲ್ಲ.. ಏನಾದರು ಬರೆಯಬೇಕು ಅಂದರೆ ಅಷ್ಟೇ ಬರುತ್ತದೆ..  

ಯಾಕೋ ಅಣ್ಣಾವ್ರು ಮನದಾಳಕ್ಕೆ ಬರಲು ಸತ್ಯಾಗ್ರಹ ಮಾಡುತ್ತಿದ್ದರು ಅನ್ನಿಸುತ್ತಿತು.. 

ಬೆಳಿಗ್ಗೆ ಇದ್ದೆ.. ಬರೆಯೋಕೆ ಶುರು ಮಾಡಿದೆ.. ಮುಗಿಯಿತು.. ಆಫೀಸ್ ಗೆ ಹೋದೆ.. ಕೆಲಸ ಕಾಯಕ ನಡೆಯುತ್ತಿತು.. 

ವಾಪಸ್ ಬರುವಾಗ.. ಯಾಕೋ ಅಣ್ಣಾವ್ರ ದರ್ಶನ ಮಾಡೋಣ ಅನ್ನಿಸಿತು... ಸರಿ ಕಾರನ್ನು ನಿಲ್ಲಿಸಿ ಸೀದಾ ಹೋದೆ.. 

ಹೆಜ್ಜೆ ಇಟ್ಟೆ.. 

"ಈ ನೋಡೋ ಇವನೇ ಕಣೋ.. ಚಿತ್ರಗಳನ್ನು ಹಾಕಿ ಲೇಖನ ಮಾಡಿದ್ದು.. ಇವನೇ ಕಣೋ ಶ್ರೀಕಾಂತ್ ಅಂದ್ರೆ" ಅಂತ ಯಾರೋ ಮಾತಾಡಿದ್ದು ಕೇಳಿಸಿತು.. 

ತಿರುಗಿ ನೋಡಿದೆ ಯಾರೂ ಕಾಣಲಿಲ್ಲ.. ಮೆಲ್ಲಗೆ ಕಣ್ಣರಳಿಸಿ ನೋಡಿದೆ.. ಕಿವಿಯಾನಿಸಿದೆ.. 

ಮೆಲ್ಲಗೆ ಅಣ್ಣಾವ್ರ ಅಕ್ಕ ಪಕ್ಕದಲ್ಲಿ ನಿಂತ ಶಿಲೆಗಳ ಮಧ್ಯೆದಲ್ಲಿ ಅರಳಿ ನಿಂತಿದ್ದ ಅಣ್ಣಾವ್ರ ಚಿತ್ರದ ಪಾತ್ರಗಳು ಮಾತಾಡುತ್ತಿರುವಂತೆ ಭಾಸವಾಯಿತು.. 

ನಿಧಾನವಾಗಿ ಅಣ್ಣಾವ್ರನ್ನು ನೋಡುತ್ತಲೇ ಮುಂದಡಿ ಇಟ್ಟೆ.. ಮಾತುಗಳು ಹೆಚ್ಚಾದವು.. ಅಲ್ಲಿದ್ದ ಎಲ್ಲಾ ಪಾತ್ರಗಳು ನನ್ನ ಕಂಡು ಸಂತಸದಿಂದ ಹರಸುತ್ತಿರುವಂತೆ  ಭಾಸವಾಯಿತು.. 

ಅಯ್ಯೋ ಇದೇನು ಕನಸೋ ನನಸೋ ಎಂದು ನನ್ನ ನಾನೇ ಚಿವುಟಿಕೊಂಡೆ.. 

"ಇದುವರೆವಿಗೂ ಶಿಲೆಯಾಗಿದ್ದ ನಮ್ಮನ್ನು ಅಲ್ಲಿಂದ ಎಬ್ಬಿಸಿ ಮಾತಾಡುವಂತೆ ಮಾಡಿದ್ದು ನೀನೆ ಕಾಂತ ಶ್ರೀಕಾಂತ..." 

ಒಂದೊಂದು ಪಾತ್ರಧಾರಿಯು ಹರಸುತ್ತಿದ್ದವು ಮಾತಾಡಿಸುತ್ತಿದ್ದವು.. 

ಸಂತಸಕ್ಕೆ ಎಣೆಯಿಲ್ಲ... 

ಹಾಗೆಯೇ ಸಾಗುತ್ತಾ ಭಕ್ತ ಕುಂಬಾರದ ಚಿತ್ರದ ಹತ್ತಿರ ಬಂದೆ..ವಿಠಲ ವಿಠಲ ಪಾಂಡುರಂಗ ಅನ್ನದೆ ಕಾಂತ ಕಾಂತ ಶ್ರೀಕಾಂತ ಎಂದ ಹಾಗೆ ಭಾಸವಾಯಿತು.. ಮನದಲ್ಲೇ ವಂದಿಸಿದೆ.. 

ನಾದಮಯ ಹಾಡಿನ ಚಿತ್ರದಲ್ಲಿ ಅಣ್ಣಾವ್ರು ತಾಳ ಮುದ್ರೆಯಿಂದ ಹೊರಬಂದು.. ಸೂಪರ್ ಅನ್ನುವ ಚಿನ್ಹೆಗೆ ತಮ್ಮಬೆರಳುಗಳನ್ನು ಮಡಚಿದರು.. ತುಂಬಾ ಚೆನ್ನಾಗಿದೆ ಕಾಂತ ಎನ್ನುವಂತೆ ಅರಿವಾಯಿತು., 

ಶಬ್ಧವೇದಿ ಚಿತ್ರದಲ್ಲಿ ಧೀರರ ಹಾಗೆ ಜೀಪಿನ ಜೊತೆಯಲ್ಲಿ ಸೊಂಟದ ಮೇಲೆ ಕೈಯನ್ನು ಇಟ್ಟುಕೊಂಡು.. ಗಂಭೀರವಾಗಿ ಅಂಗ್ಲ ಭಾಷೆಯಲ್ಲಿ 

"sri .. you gave a great article...great job...come back next time.. okey"  ಅಣ್ಣಾವ್ರ ಗಂಭೀರ ಕಂಠ ಉಲಿಯಿತು.. 

ಆನಂದಭಾಷ್ಪ..  ಆನಂದಭಾಷ್ಪ.. ಆನಂದಭಾಷ್ಪ.. ಆನಂದಭಾಷ್ಪ.. 

ತಡೆಯಲಾಗಲಿಲ್ಲ.. ಶಿರಬಾಗಿ ನಮಿಸಿ ಹೊರಬಂದೆ.. 

ಇಂದು ವಿಶೇಷ ದಿನ.. ಯಾಕೆ ಅಂದ್ರೆ ತುಂಬಾ ಸಲೀಸಾಗಿ ಬರೆದ ಲೇಖನ ಓದುಗರನ್ನು ಮುಟ್ಟಿದ್ದೆ ಅಲ್ಲದೆ ನನಗೆ ಒಂದು ಭಿನ್ನ ಅನುಭವ ಕೊಟ್ಟಿತು.. 

ಜೊತೆಯಲ್ಲಿ ಕೃಷ್ಣಮೂರ್ತಿ ಸರ್ ಕೊಟ್ಟ ತಾವೇ ರಚಿಸಿದ ಅಣ್ಣಾವ್ರ ರೇಖಾ ಚಿತ್ರ.. 


ಡಾ . ಕೃಷ್ಣ ಮೂರ್ತಿ ಸರ್ ರಚಿಸಿದ ಡಾ. ರಾಜ್ ಚಿತ್ರ 
ಶ್ರೀಯುತ ವೆಂಕಟೇಶ್ ಮೂರ್ತಿ ಸರ್ ಕೊಟ್ಟ ಅಣ್ಣಾವ್ರ ಹಸ್ತಾಕ್ಷರದ ಪ್ರತಿ... 

ಅಣ್ಣಾವ್ರ ಮುದ್ದಾದ ಬರಹ.. ಶ್ರೀ ವೆಂಕಟೇಶ್ ಮೂರ್ತಿ ಕೊಡುಗೆ

ಜೊತೆಯಲ್ಲಿ ಅಣ್ಣಾವ್ರ ಪಾತ್ರಗಳು ನನ್ನೊಡನೆ ಮಾತಾಡಿದ ಒಂದು ಅನುಭವ.. 

ಅಣ್ಣಾವ್ರ ಪಾತ್ರಗಳೊಡನೆ ಒಂದು ಕ್ಷಣ

ಅಣ್ಣಾವ್ರೆ ಇದುವರೆವಿಗೂ ನಿಮ್ಮ ಪುಣ್ಯ ಭೂಮಿಯ ಮುಂದೆ ಹಾದು ಹೋಗುವಾಗ ಅರಿವಿಲ್ಲದೆ ನನ್ನ ಕಾರಿನಲ್ಲಿ ನಿಮ್ಮ ಹಾಡುಗಳೇ ಬರುತ್ತಿದ್ದವು.. ಇಂದೂ ನೀವೇ ನನ್ನೊಡನೆ ಮಾತಾಡಲು ಬಂದಿದ್ದೀರಿ.. 


ನನಗೆ ಉತ್ಸಾಹ ಕೊಡುವ ತಾಣ.. ಇಂದು ಎಂದಿನಂತೆ ಅಲ್ಲ ತುಂಬಾ ತುಂಬಾ ವಿಶೇಷ

ನಿಮ್ಮ ಶೈಲಿಯಲ್ಲಿ ... "ಆಹಾ ನನ್ನ ಜನ್ಮ ಪಾವನವಾಯಿತು.. "


ಧನ್ಯೋಸ್ಮಿ ಅಣ್ಣಾವ್ರಿಗೆ.. !!! 

Tuesday, April 8, 2014

"ಸವಿ" ನೆನಪುಗಳು ಬೇಕು "ಸವಿ"ಯಲಿ ಬದುಕು

ನನಗೆ ಮತ್ತು ರಾಜನಿಗೆ ತುಂಬಾ ಇಷ್ಟವಾದ ಪುಟ್ಟಣ್ಣ ಅವರ ಸಿನಿಮಾ ನಾಗರಹಾವು.. ಯಾಕೋ ಗೊತ್ತಿಲ್ಲ ಆ ಸಿನಿಮಾದಲ್ಲಿ ಶಿವರಾಂ ಪಾತ್ರ ಪ್ರತಿ ಸಂಭಾಷಣೆಗೂ ಸ್ಪೆಷಾಲಿಟಿ ಅಂತ ಸೇರಿಸ್ತಾ ಇರ್ತಾರೆ..

ಆ ಸಿನಿಮಾ ಎಷ್ಟು ಬಾರಿ ಬಂದರೂ ಕೆಲವು ದೃಶ್ಯಗಳಿಗಾಗಿ ಪದೇ ಪದೇ ನೋಡುತ್ತಿರುತ್ತೇನೆ.. ಒಂದು ರಾಜನ ನೆನಪಲ್ಲಿ.. ಇನ್ನೊಂದು ಪುಟ್ಟಣ್ಣ ಅವರ ಚಿತ್ರಗಳ ಗುಂಗಿನಲ್ಲಿ... 

ಅರೆ ಇದೇನೂ.. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯುತ್ತಿದೆ ಅಂದ್ರಾ.. ಹಾಗೇನು ಇಲ್ಲ 

ನಮ್ಮದು ಒಂಥಾರ ಸ್ಪೆಷಾಲಿಟಿ.. 

ಎಂಟರ ನಂಟು ಬಿಡಿಸಲಾರದ ಗಂಟು ನಂಟು ಅನ್ನುತ್ತಾರೆ.. ನನ್ನ ಜೀವನದಲ್ಲಿ ಎಂಟು ಹೇಗೋ ಬಂದು ಆಟಕಾಯಿಸಿಕೊಳ್ಳುತ್ತದೆ.. 

ಹಿರಿಯರೆಲ್ಲ ಸಮಯ, ದಿನಾಂಕ ಗುರುತು ಮಾಡುತ್ತಿದ್ದರು. ನಾನು ಲೆಕ್ಕ ಪತ್ರದ ವಿಭಾಗದ ಕೆಲಸವಾಗಿದ್ದರಿಂದ ಮಾರ್ಚ್ ದಿನಾಂಕಗಳನ್ನು ಸಾರಾ ಸಗಟು ನಿರಾಕರಿಸಿ ಬಿಟ್ಟೆ.. ಜೂನ್ ಅಂದ್ರು...  ಅಲ್ಲಿ ತನಕ ಕಾಯುವ ತಾಳ್ಮೆ ಇರಲಿಲ್ಲ.. )..

ಏಪ್ರಿಲ್ ಅಂದ್ರೂ ಮನಸ್ಸು ಹಾರಾಡುತ್ತಿತ್ತು.. ದಿನಾಂಕ ಅಂದೇ... ಎಂಟು ಅಂದ್ರು.. ಹಿಡಿದದ್ದೇ ಗಬಕ್ ಅಂತ.. 

ಎಂಟು ಓಕೆ ಓಕೆ.. ಗೊತ್ತು ಮಾಡಿಬಿಡಿ ಅಂದೇ..  :-)

ಹೀಗೆ ನನ್ನ ಜೀವನದಲ್ಲಿನ ಎಂಟು ಅಂಕೆಯ ಬಗ್ಗೆ ಬರೆಯುತ್ತಾ ಹೋದರೆ.. ಬಿಡಿ.. ನಿಮಗೆ ತಲೆ ಬಿಸಿ ಬರುತ್ತದೆ.. ಈಗ ವಿಷಯಕ್ಕೆ ಬರೋಣ.. 

ಏಪ್ರಿಲ್ ಏಳಕ್ಕೆ ಛತ್ರಕ್ಕೆ ಹೋದೆವು.. ಬೇರೆಯವರ ಮದುವೆಗೆ ಓಡಾಡಿ.. ಅಣ್ಣಾವ್ರ "ಅಲ್ಲಿ ಇಲ್ಲಿ ನೋಡುವೆ ಏಕೆ" ಅನ್ನುತ್ತಾ "ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು" ಅಂತ ಬಂದ, ಕಂಡವರನ್ನೆಲ್ಲ ಕಣ್ಣಲ್ಲೇ ನೋಡುತ್ತಾ ಖುಷಿಸುವ ಮನ ನಮ್ಮ ಮದುವೆಯಲ್ಲಿ ಇರೋಲ್ಲ.. ಗೂಬೆಯ ತರಹ ಹಸೆ ಮಣೆಯ ಮೇಲೆ ಕೂತೆ.. ಛತ್ರದಲ್ಲಿದ್ದ ನೂರಾರು ಕಣ್ಣುಗಳು ನನ್ನ ಕ್ಷ ಕಿರಣಗಳಿಂದ ಅಳೆಯುತ್ತಿದವು.. 

ಕೆಲವರು ಅಯ್ಯೋ ಕಪ್ಪು ಬಿಳುಪು ಟಿ ವಿ ಅಂದರೆ.... ಇನ್ನು ಕೆಲವರು ನರಸಿಂಹರಾಜು ಎಲ್ಲಿ ಅಂತ ಕೇಳೋದೇ ಬೇಡ.. ಮಹಾಲಕ್ಷ್ಮಿ ಆಂಜನೇಯನ  ದೇವಸ್ಥಾನಕ್ಕೆ ಹೋಗೋದೇ ಬೇಡ.. ಹೀಗೆ ರಾಕೆಟ್ಗಳು ಹಾರುತ್ತಿದ್ದವು.. ಸ್ವಲ್ಪ ಸ್ವಲ್ಪ ನಮ್ಮ ಕಿವಿಗೂ ಬೀಳುತ್ತಿದ್ದವು.. 

ನನ್ನ ಸಿದ್ದಾಂತ ಒಂದೇ ಜೀವನದಲ್ಲಿ ಪುರುಸೊತ್ತಾಗಿದ್ದಾಗ ಈ ಮದುವೆ ಕಾರ್ಯ ಆಗಿಬಿಡಬೇಕು.... :-)  ಯಾಕೆ ಅಂದ್ರೆ ಮದುವೆ ಎನ್ನುವ ಕೆಲಸ ಮುಂದೆ ಹಾಕಿದಷ್ಟು ಸಮಸ್ಯೆಯನ್ನು ಹಿಂದಕ್ಕೆ ಎಳೆದುಕೊಂಡು ಬರುತ್ತಿರುತ್ತೇವೆ .. ಹೆಂಗೆ ನನ್ನ,,,,,,,, :-)

ಸರಿ ಭಾನುವಾರ ವ(ವಾನ)ರ ಪೂಜೆ ಆಯಿತು.. ಬೆಳಿಗ್ಗೆ ಸೋಮವಾರ ಧಾರೆ.. ತಲೆಗೆ ಬಿಗಿಗಿದ್ದ ಪೇಟ ತಲೆ ನೋವು ಕೊಡುತ್ತಿತ್ತು.. ಬೆಳಿಗ್ಗೆ ಕಾಫಿ ಸರಿಯಾಗಿ ಬಿದ್ದಿರಲಿಲ್ಲ.. ತಿಂಡಿ ಸರಿಯಾಗಿ ತಿಂದಿರಲಿಲ್ಲ (ಹೆಂಗೆ ತಿನ್ನೋಕೆ ಆಗುತ್ತೆ ನೀವೇ ಹೇಳಿ).. 

ಮಧ್ಯಾನ್ಹ ಆದರೂ ಶಾಸ್ತ್ರಗಳು ಮುಕ್ತಾಯ ಹಂತಕ್ಕೂ ಬಂದಿರಲಿಲ್ಲ.. ಭೂಮ ಸಿದ್ಧವಾಯಿತು.. ಆರು ಬಾಲಿನಲ್ಲಿ ಆರು ರನ್ ಬೇಕಾದರೆ ಇಡಿ ಕ್ರೀಡಾಂಗಣದಲ್ಲಿ ಎಲ್ಲರ ಕಣ್ಣುಗಳು ಪಿಚ್ ಮೇಲೆ ಇರುತ್ತದೆ ಅಲ್ಲವೇ.. ಹಾಗೆ ಭೂಮದೂಟದಲ್ಲಿ ನಮ್ಮ ಸುತ್ತಾ ಸುಮಾರು ಐವತ್ತು ಅರವತ್ತು ಮಂದಿ.. ವೀ ವಾಂಟ್ ಫೋರ್ .. ವೀ ವಾಂಟ್ ಸಿಕ್ಸರ್ ಅನ್ನುವ ಹಾಗೆ.. ಅದು ತಿನ್ಸು ಇದು ತಿನ್ಸು ಅಂಥಾ ಬೊಬ್ಬೆಇಡುತ್ತಿದ್ದರು .. 

ನನಗೆ ಬಿಟ್ಟಿದ್ದರೆ ಎಲ್ಲರಿಗೂ ಸರಿಯಾಗಿ ತಿನ್ನಿಸುವ ಕೋಪ ಇತ್ತು.. ಮೊದಲೇ ಹೊಟ್ಟೆ ಹಸಿವು(?).. ಜೊತೆಯಲ್ಲಿ ಬೆಳಿಗ್ಗೆ ಇಂದ.. ನನ್ನ ತಲೆಗಾಗದ ಪೇಟವನ್ನು ಬಲವಂತವಾಗಿ ಹಾಕಿ ತಲೆ ಮೇಲೆ ಬೇರೆ ಒಂದು ಬಿಟ್ಟಿದ್ದರು ಸರಿಯಾಗಿ ಪೇಟ ಕೂರಲೆಂದು.. ಅಸಾಧ್ಯ ತಲೆನೋವು.. ಹೊಟ್ಟೆ ಹಸಿವು.. ಹೋಮದ ಹೊಗೆ.. ನೂರಾರು ಕಣ್ಣುಗಳು ಬಿದ್ದು ದೃಷ್ಟಿಯಾಗಿದ್ದು (ಕಾಗೆಗೆ ದೃಷ್ಟಿಯೇ).. ಬಿಟ್ಟರೆ ಛತ್ರದಿಂದ ಓಡಿ ಹೋಗುವ ಆಸೆ.. 

ಹಾಗೂ ಹೀಗೂ ಭೂಮ ಮುಗಿಯಿತು.. ನಾನು ಮೊದಲು ಹೊಟ್ಟೆ ತುಂಬಾ ಊಟ ಮಾಡಿದ ನಂತರವೇ.. ಅಲ್ಲಿ ನೆರೆದಿದ್ದ ಅಭಿಮಾನಿ ದೇವರುಗಳ ಆಸೆ ಇಡೇರಿಸಿದ್ದು.. 

ಸರಿ ಸಂಜೆ ಆರತಕ್ಷತೆ... ಬೆಳಿಗ್ಗೆಯಿಂದ ಕೂತು ಕೂತು ಕಾಲುಗಳು ಬಾತುಕೊಂಡಿದ್ದರೆ .. ಸಂಜೆ ನಿಂತು ನಿಂತು.. ಕಾಲು ನೋಯುತ್ತಿತ್ತು.. ರಾತ್ರಿ ಹತ್ತೂವರೆ ಹನ್ನೊಂದು ಘಂಟೆಯ ತನಕ ನಡೆದ ಈ ಕಾರ್ಯಕ್ರಮ.. ಕಡೆಯಲ್ಲಿ ಸುಮಾರು ಹನ್ನೊಂದು ಘಂಟೆಗೆ.. ಛಾಯಾಚಿತ್ರಕಾರ.. (ಬಹುಷಃ ಹಿಂದಿನ ಜನ್ಮದಲ್ಲಿ ಅವನನ್ನು ಗೋಳಾಡಿಸಿದ್ದೆ ಅನ್ನಿಸುತ್ತೆ).. ಸರ್ ಸ್ವಲ್ಪ ನಕ್ಕು ಬಿಡಿ.. ಸಾರ್ ಅಷ್ಟೊಂದು ಹಲ್ಲು ಬೇಡ ಒಂದೆರಡು ಹಲ್ಲುಸಾಕು .. ಮೇಡಂ ನೀವು ಸರ್ ಭುಜದ ಮೇಲೆ ಕೈ ಹಾಕಿ.. ಹಾಗೆ .. ಹಾಗೆ ಇರೀ.. ನನಗೆ ಒಳಗೆ ಜ್ವಾಲಮುಖಿ.. ಆದ್ರೆ ಮುಖ ಮಾತ್ರ ಚಂದ್ರ(ಕಾಗೆ)ಮುಖಿ ಮಾಡಿಕೊಂಡು.. ಕೆಟ್ಟ ಕೆಟ್ಟದಾಗಿ ನಗುತ್ತಾ ಚಿತ್ರಗಳ ಮೆರವಣಿಗೆ ಮುಗಿಯಿತು.. 

"ಸಾರ್.. ವಿವಾಹ ಜೀವನ ಆನಂದಮಯವಾಗಿರಲಿ..ನಾನು ಬರುತ್ತೇನೆ ಸರ್"  ಅಂತ ಫೋಟೋಗ್ರಾಫರ್ ಹೇಳಿದಾಗ ನಾನು 

"ಗುರುಗಳೇ.. ನಿನ್ನೆಯಿಂದ ಗೋಳು ಹುಯ್ದು ಕೊಂಡಿದ್ದೀರ.. ಕೊಡಿ ಕ್ಯಾಮೆರ.. ನಾನು ನಿಮ್ಮ ಕೆಲವು ಫೋಟೋ ತೆಗೀತೀನಿ.. ಹಲ್ಲು ಬಿಡಿ.. ಅಷ್ಟೇ ಸಾಕು.. ಎರಡು ಹಲ್ಲು.. ಕೈ ಮೇಲೆ ಎತ್ತಿ  ಅಂತ.. ಪ್ರಾಣ ತಿಂದ್ರಲ್ಲ ಬನ್ನಿ" ಅಂತ ಕೈ ಎಳೆಯಲು ಶುರುಮಾಡಿದೆ.. 

ಗಾಬರಿ ಬಿದ್ದ ಆವಾ.. ಇಲ್ಲಾ ಸರ್.. ಹಾಗೇನು ಇಲ್ಲ.. ಹಿ ಹಿ" ಅಂತ ದೇಶಾವರಿ ನಗೆ ನಕ್ಕ..

ನಾ ಬಿಡಲಿಲ್ಲ.. ಬಲವಂತ ಮಾಡಿದೆ.. ಕಡೆಗೂ ಆ ಛಾಯಚಿತ್ರಕಾರನನ್ನು ಕರೆದು ಅವರ ಜೊತೆಯಲ್ಲಿ ನಿಂತು.. "ಈಗ ನಗ್ರಿ ಸರ್.. ನಾಲ್ಕು ಹಲ್ಲು ಬೇಡ ಕೇವಲ ಅರ್ಧ ಹಲ್ಲು ಸಾಕು.. ಮುರಿದ್ದಿದ್ದರು ಚಿಂತೆಯಿಲ್ಲ.. ಅಂತ ಜೋತು ಬಿದ್ದು ತೆಗೆಸಿಕೊಂಡೆ ಬಿಟ್ಟೆವು ಅವರ ಜೊತೆಗೆ ಚಿತ್ರವನ್ನು.. 

ಫೋಟೋಗ್ರಾಫರ್ ಗೆ ಫೋಟೋ!!! 


ಸರ್ ಇದುವರೆಗೂ ಯಾವುದೇ ಸಮಾರಂಭದಲ್ಲಿ ಹೀಗೆ ಆಗಿರಲಿಲ್ಲ.. ನೀವೇ ಫಸ್ಟ್ ಅಂದ್ರು.. 

ಹೌದು ಗುರುಗಳೇ... ಊರಿಗೆ ದಾರಿ ಆದ್ರೆ ಎಡವಟ್ಟನಿಗೆ ಒಂದು ದಾರಿ.. 

ಇಂತಹ ಒಂದು ಚಿತ್ರ ತೆಗೆಸಿಕೊಂಡು ಇಂದಿಗೆ ಹನ್ನೆರಡು  ವರ್ಷವಾಯಿತು.. 

ಎದೆ ತುಂಬಿ ಹಾಡುತ್ತೇನೆ.. "ಸವಿ" ನೆನಪುಗಳು ಬೇಕು "ಸವಿ"ಯಲಿ ಬದುಕು!!!!
........ ...... 
........ ...... 
........ ...... 
........ ...... 
........ ...... 
........ ...... 
........ ...... 
........ ...... 
........ ...... 
ಅಂದ ಹಾಗೆ ಸವಿತಾ ನಿಕ್ ನೇಮ್ ಅವರ ಅಮ್ಮನ ಮನೆಯ ಕಡೆಯಲ್ಲಿ "ಸವಿ"!!!!!!!
   

Monday, March 24, 2014

ಕಾಡುವ ಸುಡುಗಾಡು...... ಜೀವ ಒಡಲಿಂದ ದೂರಾದಂತೆ!!!!

"ನೀ ಇರಲು ಜೊತೆಯಲ್ಲಿ" ಒಳಗೆ ಜೀವ ಇರುವವರೆಗೂ.....

ಯಾಕೋ ಏನೋ ಗೊತ್ತಿಲ್ಲ ತುಂಬಾ ಕಾಡಲು ಹತ್ತಿತ್ತು.. ಒಂದು ಜೀವ ತಾನು ಪ್ರೀತಿಸುತ್ತಿದ್ದ ದೇಹವನ್ನು ಬಿಟ್ಟು ಹೋಗುವಾಗ ಹೇಗೆಲ್ಲ ಹಾಡುತ್ತಿರುತ್ತದೆ. ಅದರ ತಳಮಳವೇನು ತಿಳಿಯ ಬೇಕು ಎನ್ನಿಸಿತು..

ಸಹೋದ್ಯೋಗಿಯ ಪಿತ ಇಹಲೋಕದಿಂದ ಬಿಡುಗಡೆ ಪಡೆದು ಸುಂದರ ಲೋಕಕ್ಕೆ ಧಾವಿಸಿದ್ದ ಸಮಯ.. ಅಲ್ಲಿಯೇ ಕೂತಿದ್ದೆ..
ನಿರ್ಜೀವ ಎನ್ನಿಸಿಕೊಂಡ ಒಂದು ಕೃಶ ದೇಹ.. ಅದರಿಂದ ಹೊರಗೆ ನಿಂತು ಹಾಡುತ್ತಿದ್ದ ಆತ್ಮ... ಒಬ್ಬರನೊಬ್ಬರು ಅಗಲಿದ ಸಮಯ..  ಅವರಿಬ್ಬರ ಸಂಭಾಷಣೆ ಕಿವಿಗೆ ಬಡಿಯುತ್ತಿತ್ತು... !

"ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ"

ಆತ್ಮದೊಳಗೆ ಜೀವವಿದ್ದಾಗ.. ದೇಹದಲ್ಲಿ ಆತ್ಮವಿರುತ್ತದೆ.. ಆದರೆ ದೇಹ ಹೇಳುತ್ತದೆ

"ನಗುತ ನೀ ಕರೆದರೆ
ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ"

ಸುತ್ತಲು ಆ ದೇಹದ ಜೊತೆ ರಕ್ತ ಸಂಬಂಧ ಹೊಂದಿದ್ದವರು ಭಾವನಾತ್ಮಕ ಸಂಬಂಧ ಹೊಂದಿದ್ದವರು.. ಗುರುತು ಪರಿಚಯ ಇರುವವರ ಹಿಂಡೇ ನೆರೆದಿತ್ತು.. ಎಲ್ಲರ "ಮಾತಲ್ಲಿ ಏನೊ ಹೊಸತನ.. ಮಗುವನ್ನು ಹೋಲೋ ಹೂ ಮನ"

ಆತ್ಮ ತನ್ನ ಹಳೆಯ ದೇಹದ ಯಜಮಾನನಿಗೆ ಹೇಳುತ್ತಿತ್ತು.. "ರಸಕಾವ್ಯ ನಿನ್ನ ಯೌವ್ವನಾ.. ಎದೆ ತುಂಬಿ ನಿಂತೆ ಪ್ರತಿಕ್ಷಣ .. ಆಗ ಬಿಕ್ಕುತ್ತಾ ಬಿಕ್ಕುತ್ತಾ "ಹಳ್ಳಿ ಮಣ್ಣಲಿ" ಬೆರೆಯಬೇಕು ಎನ್ನುವ ಹಂಬಲ ಇತ್ತು.. ಇನ್ನಷ್ಟು ದಿನ ನೀನು ನನ್ನೊಳಗೆ ಇರಬೇಕು ಎನ್ನಿಸಿತ್ತು" ಆದರೆ "ಬಿರಿದ ಮಲ್ಲಿಗೆ" ನನ್ನ ಎದೆಯ ಮೇಲೆ ಹಾಕುತ್ತಿದ್ದಾರೆ.. ಎಲೆ ಆತ್ಮ ಬಂಧುವೇ "ಬೆರೆತೆ ಉಸಿರಲ್ಲಿ ಒಂದಾದಂತೆ" ನಾನು ನಿನ್ನೊಳಗೆ ಬೆರೆಯಲು ಸಾಧ್ಯವೇ.. ?

"ಈ ನೀಲಿ" ಆಕಾಶದಲ್ಲಿ ನನ್ನ "ಕಣ್ಣ ಬೆಳಕಲ್ಲಿ" ಏನು ಕಾಣುತ್ತಲೇ ಇಲ್ಲಾ.. "ಮನೆಯೆಲ್ಲ ಎಂದು ಬೆಳಗಲಿ" ಎಂದು ದುಡಿದ ಮನೆ ಮನ ಇಂದು ನನ್ನದಲ್ಲ.. ಆತ್ಮವೇ "ನೀ ತಂದ ಪ್ರೀತಿ ಲತೆಯಲಿ" ನನ್ನ ಜೀವನದಲ್ಲಿ "ನಗುವೆಂಬ ಹೂವು ಅರಳಲಿ" ಅಥವಾ ಮುದುಡಲಿ ಸದಾ ಗೆದ್ದೇ ಗೆಲ್ಲುವೆ ಎಂಬ ಆತ್ಮ ವಿಶ್ವಾಸ ಬೆಟ್ಟದಷ್ಟಿತ್ತು. ಸಂಕಟ ಬಂದಾಗ ಸುಂಕವೂ ಕಟ ಕಟ ಎಂದು ಬಾಗಿಲು ಬಡಿಯುತ್ತದೆ.. ಆತ್ಮವೇ "ಅಗಲಿ ನಿನ್ನನು ಬಾಳಲಾರೆನು.....  ಜೀವ ಒಡಲಿಂದ ದೂರಾದಂತೆ"  ಇಂದು ನೀನು ನನ್ನೋಳಗಿಲ್ಲ.. "ನೀ ಇರಲು ಜೊತೆಯಲ್ಲಿ" ಅಯ್ಯೋ ಇದು ಸಾಧ್ಯವೇ.. ದಾಸರ ಗಿಳಿಯು ಪಂಜರದೊಳಿಲ್ಲ ಗೀತೆ ನೆನಪಿಗೆ ಬರುತ್ತಿದೆ..

ಯಾಕೋ ಮೈಯೆಲ್ಲಾ ನಡುಗುತ್ತಿರುವಂತೆ ಭಾಸವಾಯಿತು.. ನೋಡಿದರೆ ಒಬ್ಬರಾಗಿ ಒಬ್ಬರು ಎಣ್ಣೆ ಸೀಗೆಕಾಯಿ ತಿಕ್ಕಿ ನಡು ಬೀದಿಯಲ್ಲಿ ಮಜ್ಜನ ಮಾಡಿಸುತ್ತಿದ್ದಾರೆ.. ಅಳುತ್ತಾ ಇರುವರು ಕೆಲವರು..ಅಯ್ಯೋ ಇಂದು ಇವರು ನಾಳೆ ನಾವು ಎನ್ನುವ ಸ್ಮಶಾನ ವೈರಾಗ್ಯದಲ್ಲಿ ಕೆಲವರು.. .. ದೇಹದಿಂದ ಆತ್ಮವೇಕೆ ಹೊರಕ್ಕೆ ಹೋಯಿತು ಎನ್ನುವ ಕುತೂಹಲ ತಣಿಯದ ಪ್ರಶ್ನೆಗಳಲ್ಲಿ ಮುಳುಗಿದವರು ಹಲವರು..

ಇವೆಲ್ಲದರ ಪರಿವೆ ಇಲ್ಲದೆ.. ಯಾವುದೋ ಪ್ರಾಣಿ ತನ್ನ ಚರ್ಮವನ್ನು ದಾನ ಮಾಡಿ...  ಅದರಿಂದ ಎದೆ ನಡುಗುವಂತೆ ಬಡಿಯುತ್ತಿರುವ ತಮಟೆ ಸದ್ದು.. ಅರೆ ಅರೆ ಯಾಕೆ ಹೀಗೆ ಬಡಿಯುತ್ತಿದ್ದಾರೆ.. ಬದುಕಿದ್ದವರು ಓಡಲಿ ಎಂದೇ.. ಅಥವಾ ಹೊರಗೆ ಹೋದ ಆತ್ಮ ಮತ್ತೆ ಬರಲು ರಹದಾರಿಯೇ.. ಯಾಕೆ.. ಹೀಗೆ.. ?

ನೋಡು ನೋಡುತ್ತಲೇ ಅಲ್ಲೇ ಒಬ್ಬ ಕುಳಿತಿದ್ದ ಭಾವುಕ ತದೇಕ ಚಿತ್ತದಿಂದ ತಮಟೆ ಸದ್ದನ್ನೇ ಕೇಳುತ್ತಾ.. ಬಡಕಲು ದೇಹವನ್ನೇ ನೋಡುತ್ತಿದ್ದ.. ಅವನೊಳಗೆ ಭಾವ ಸಾಗರದ ಅಲೆಗಳು ಬಡಿಯುತ್ತಾ ಬಡಿಯುತ್ತಾ ಕಣ್ಣಂಚಿಗೆ ಬಂದು ಬೀಳಲೋ ಬೇಡವೋ ಅಂತ ಅಪ್ಪಣೆ ಕೇಳುತ್ತಿದ್ದವು..!

ದೇಹಕ್ಕೆ ಮೆಲ್ಲನೆ ಬಿಸಿ ತಾಗ ತೊಡಗಿತು.. ಬೆಚ್ಚನೆ ಹೊದಿಕೆ.. ಘಮ ಘಮ ಗುಟ್ಟುವ ಹೂವಿನ ಹಾರ.. ಹಣೆಗೆ ವಿಭೂತಿ.. ಕುಂಕುಮ.. ಅಯ್ಯೋ ಈ ದೇಹಕ್ಕೆ ಬೇಕೇ.. ಇವೆಲ್ಲ ಅನ್ನುವಷ್ಟರಲ್ಲಿಯೇ.. ಹಟಾತ್ ನಾಲ್ಕೈದು ಮಂದಿ ದೇಹವನ್ನು ಎತ್ತಿ ಹೂವಿನ ಪಲ್ಲಕ್ಕಿ (?????)ಯಲ್ಲಿ ಕೂರಿಸಿದರು.. ಹೌದು ಕೂರಲು ಶಕ್ತಿಯಿಲ್ಲದೆ ಲೋಕ ಬಿಟ್ಟಿದ ದೇಹಕ್ಕೆ ವಿಪರೀತ ಮುತುವರ್ಜಿ ವಹಿಸಿ ಪಲ್ಲಕ್ಕಿ ಸಿದ್ಧಪಡಿಸಿದ್ದರು.. ಹೂವಿನ ಪರಿಮಳದ ಜೊತೆಯಲ್ಲಿ ಘಂ ಎನ್ನುವ ಗಂಧದ ಪರಿಮಳ.. ಊದುಬತ್ತಿಯ ಧೂಪ.. ಜೀವನವಿಡಿ ಹೊಗೆ ಹಾಕಿಸಿಕೊಳ್ಳದ ಈ ದೇಹಕ್ಕೆ ಇಂದು ಹೊಗೆಯಲ್ಲಿ ಅಭ್ಯಂಜನ..

 ಅಂತರಂಗದ ಅಗ್ನಿ ಬಹಿರಂಗದ ಅಗ್ನಿಯನ್ನು ಸಂಧಿಸುವ ತಾಣ!!!

ಆಫೀಸ್ಗೆ ಹೋಗಬೇಕು.. ಅಯ್ಯೋ ಬೆಳಿಗ್ಗೆಯಿಂದ ತಿಂಡಿ ತಿಂದಿಲ್ಲ.. ಬೇಗ ಮುಗಿದರೆ ಸಾಕು ಊರಿಗೆ ಹೋಗಬೇಕು.. ಬಸ್ ಎಷ್ಟೊತ್ತಿಗೆ.. ದೇಹದ ಉಸಾಭರಿಯನ್ನು  ಕೇಳುವವರೇ ಇಲ್ಲ.. ದೇಹ ಬೇಸರದಲ್ಲಿದ್ದಾಗ ಆತ್ಮ ನಗುತ್ತಾ ಹಾಡಲು ಶುರುಮಾಡಿತು... 

"ಹೆಂಡತಿ ಮಕ್ಕಳು  ಬಂಧು ಬಳಗ 
ರಾಜಯೋಗದ ವೈಭೋಗ 
ಕಾಲನು ಬಂದು ಬಾ ಎಂದಾಗ 
ಎಲ್ಲವೂ ಶೂನ್ಯ ಚಿತೆ ಏರುವಾಗ
ಎಲ್ಲಾ ಶೂನ್ಯ ಎಲ್ಲವೂ ಶೂನ್ಯ 
ಉಳಿಯುವುದೊಂದೇ ದಾನ ಧರ್ಮ ತಂದ ಪುಣ್ಯ"

ದೇಹಕ್ಕೆ ನಿಜದ ಅರ್ಥವಾಯಿತು

"ನಾನೇ ಎಂಬ ಭಾವ ನಾಶವಾಯಿತು.. ನೀನೆ ಎಂಬ ನೀತಿ ನಿಜವಾಯಿತು.. ಒಳಗಿನ ಕಣ್ಣನು ತೆರೆಸಿದೆಯೋ.. ಗೀತೆಯ ಮರ್ಮವಾ ತಿಳಿಸಿದೆಯೋ.. "


ಅರೆ ಕಣ್ಣಿಗೆ ಏನೋ ಬೀಳುತ್ತಿದ್ದೆ ಎಂದು ಮೇಲೆ ನೋಡಿತು ದೇಹ.. ಎಲ್ಲರೂ ಒಂದು ಹಿಡಿ ಮಣ್ಣನ್ನು ಹಾಕುತ್ತ ಹೋದರು.. ತಲೆಯೆಲ್ಲಾ ಮಣ್ಣು.. ಕಣ್ಣು ಬಿಡಲಾಗುತ್ತಿಲ್ಲ.. ಉಸಿರು ಸಿಕ್ಕಿಕೊಳ್ಳುತ್ತಿದೆ.. ಅರೆ ಇದೇನು ಕಣ್ಣಿಗೆ ಕಪ್ಪು ಕತ್ತಲೆ.. ಅರೆ ಅರೆ.. ಏನಾಗು.... "ಈ ದೇಹದಿಂದ ದೂರವಾದೆ ಏಕೆ ಆತ್ಮವೇ.. ಈ ಸಾವು ನ್ಯಾಯವೇ.. "

ಆತ್ಮ ಇನ್ನೊಂದು ದೇಹವನ್ನು ಹುಡುಕುತ್ತಾ.. ಹಾಡುತ್ತಾ ಸಾಗಿತು

ಇಲ್ಲಿಗೆ ಬರಲೇ ಬೇಕು !!!


"ಕಥೆ ಮುಗಿಯಿತೇ ಆರಂಭದ ಮುನ್ನಾ.. ಎಲ್ಲಿಗೆ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ.. !!!!

Thursday, March 6, 2014

ಮರೋ ಚರಿತ್ರಾ... ಕಾದು ಕಾದು ಮರೆಯಲಾರದ ಚರಿತ್ರಾ

ಕಾದು ಕುಳಿತಿವೆ..

ಅರಳಿ ಎಲೆಗಳ ನೆರಳು ಬಿಸಿಲಿನ ಆಟದ ಮಧ್ಯದಲ್ಲಿ.. 

ಮರದಲ್ಲಿದ್ದ ಹಕ್ಕಿಗಳು ತಮ್ಮಮರಿಗಳಿಗೆ ಅಲ್ಲಿ ಇಲ್ಲಿ ಹೆಕ್ಕಿ ತಂದಿದ್ದ ಕಾಳುಗಳನ್ನು ತಿನ್ನಿಸುತ್ತಿದ್ದವು..

"ಕೋಟಿ ದಂಡಾಲೋ ಶತ ಕೋಟಿ ದಂಡಾಲೋ"

ಗಣೇಶನ ಮೂರ್ತಿಯನ್ನು ಕೂರಿಸಿದ್ದ ಮಂಟಪದಿಂದ ಆಗಷ್ಟೇ ಬಿಡುಗಡೆಯಾಗಿ ಅಪಾರ ಸುದ್ಧಿ ಮಾಡಿದ್ದ "ಮರೋ ಚರಿತ್ರಾ" ಚಲನ ಚಿತ್ರದ ಹಾಡು ಕಿರುಚುತಿತ್ತು..

ಹಸಿದು ಬೆಂಡಾಗಿದ್ದ ಹಕ್ಕಿಯ ಮರಿಗಳು ತನ್ನ ತಾಯಿ ಹಕ್ಕಿ ಉಣಿಸಿದ್ದ ಕಾಳುಗಳನ್ನು ತಿಂದು ಸಂತೃಪ್ತರಾಗಿ ಹಾಡಿಗೆ ಹಿಮ್ಮೇಳದಂತೆ ಗಾನ ಸೇರಿಸುತ್ತಿದ್ದವು..

ಅಣ್ಣಾವ್ರ ಕವಿರತ್ನ ಕಾಳಿದಾಸ ಚಲನ ಚಿತ್ರ ಬರಲು ಇನ್ನು ಹಲವಾರು ವರ್ಷಗಳು ಇದ್ದವು ಇಲ್ಲ ಅಂದ್ರೆ...

"ಹೊಟ್ಟೆ ಚುರುಗುಟ್ ತಾ ಐತೆ ರಾಗಿ ಮುದ್ದೆ ತಿನ್ನೋ ಹೊತ್ತು" ಅಂತ ಹಾಡುತ್ತಿದ್ದವು ಆ ಮರದ ನೆರಳಲ್ಲಿ ಕೂತಿದ್ದರೂ ಹೊಟ್ಟೆಯ ಹಸಿವಿನ ಬೇಗೆ ತಾಳದೆ ಬಳಲುತಿದ್ದ ಎರಡು ಮುದ್ದು ಕಂದಮ್ಮಗಳು.. ತಮ್ಮ ತಾಯಿಯ ಬರುವಿಗೆ ಕಾಯುತ್ತಾ ಕುಳಿತಿದ್ದವು..

*********************************************************************************
"open it carefully..there is a surprise for you"

೧೯೯೪ ಮಾರ್ಚ್ ೨ ರಂದು ಬೆಳಿಗ್ಗೆ ಎದ್ದಾಗ ನನ್ನ ಪಕ್ಕದಲ್ಲಿ ಒಂದು ಲಕೋಟೆಯ ಮೇಲೆ ಈ ಮುದ್ದಾದ ಬರಹಗಳನ್ನು ಕಂಡು ಆಶ್ಚರ್ಯವಾಗಿತ್ತು.. ನಿಧಾನವಾಗಿ ತೆರೆದೇ..

"HMT" ಕೈಗಡಿಯಾರ ನಸು ನಗುತ್ತಿತ್ತು.. ಜೊತೆಯಲ್ಲಿ ಒಂದು ಸುಂದರ ಶುಭಾಶಯದ ಪತ್ರ "Happy Birthday Dear brother"  

ಪ್ರೀತಿಯ ಅಣ್ಣನಿಂದ ನನಗೆ ಸುಂದರ ಕೈಗಡಿಯಾರ ಮತ್ತು ಶುಭ ಹಾರೈಕೆ ಹೊತ್ತ ಗ್ರೀಟಿಂಗ್ ಕಾರ್ಡ್!

ಜೀವನದಲ್ಲಿ ಸಮಯ ನೋಡಿಕೊಳ್ಳಲು ಕೈಗೆ ಬಂದ ಮೊದಲ ನನ್ನದೇ ಅನ್ನಿಸುವ ಕೈಗಡಿಯಾರ!
*********************************************************************************
ಆಗ ತಾನೇ ಕಂಪ್ಯೂಟರ್ ಯಂತ್ರ ಕಣ್ಣು ಬಿಡುತ್ತಿದ್ದ ಸಮಯ.. ಜಗತ್ತನ್ನೆಲ್ಲ ಅದರಲ್ಲೂ ಭಾರತವನ್ನು ಈ ಕಂಪ್ಯೂಟರ್ ಎನ್ನುವ ಮಾಂತ್ರಿಕ ಶಕ್ತಿ ತನ್ನ ಕಬಂಧ ಬಾಹುಗಳಲ್ಲಿ ಸೆಳೆದುಕೊಳ್ಳಲು ಹವಣಿಸುತ್ತಿದ್ದ ಕಾಲ..

"ನೀನು ಕಂಪ್ಯೂಟರ್ ಕೋರ್ಸ್  ಗೆ ಸೇರಿಕೋ.. ಹೊಸದನ್ನು ಕಲಿ.. ನಾ ಅದಕ್ಕೆ ದುಡ್ಡು ಕೊಡುವೆ.. " ಎನ್ನುವ ೧೯೯೪-೯೫ ರಲ್ಲಿ ನಡೆದ ಈ ಮಾತುಗಳು ನನಗೆ ಒಂದು ಕ್ಷಣ ಗಾಬರಿ ಇನ್ನೊಂದು ಕಡೆ ಸಂತಸ ತಂದಿತ್ತು..

ಆಗ ಐದು ರುಪಾಯಿಗೆ ಈಗಿನ ಐವತ್ತು ರೂಪಾಯಿಯಷ್ಟು ಬೆಲೆ.. ಆಗಿನ ಕಾಲಕ್ಕೆ ಸುಮಾರು ಹದಿನೈದು ಸಾವಿರ ರೂಪಾಯಿಗಳಷ್ಟು ವ್ಯಯ ಮಾಡಿ ವಿಜಯನಗರದಲ್ಲಿನ ಕಂಪ್ಯೂಟರ್ ಪಾಯಿಂಟ್ ಎನ್ನುವ ಒಂದು ಕಲಿಕಾ ಶಾಲೆಯಲ್ಲಿ ಕಂಪ್ಯೂಟರ್ ಯಂತ್ರ ಅಂದರೆ ಏನು ಎಂದು ತಿಳಿದುಕೊಳ್ಳಲು ಸಹಾಯ ಮಾಡಿದ್ದು ನನ್ನ ಜೀವನಕ್ಕೆ ಒಂದು ಮಹತ್ತರ ತಿರುವು ನೀಡಿದ ನನ್ನ ಅಕ್ಕಾ..

ಅಲ್ಲಿಂದ ಆಚೆಗೆ ಜೀವನದಲ್ಲಿ ಮತ್ತೆ ತಿರುಗಿ ನೋಡುವ ಪ್ರಮೇಯ ಬರಲಿಲ್ಲ.. ದೇವರ ಅನುಗ್ರಹ..
*********************************************************************************
"ಬನ್ನಿ ಶ್ರೀ.. ಒಂದು ಪುಸ್ತಕ ಬಿಡುಗಡೆ ಸಮಾರಂಭ ಇದೆ.. ಹೋಗಿ ಬರೋಣ.. ".. ನನಗೆ ಈ ಸಭೆ ಸಮಾರಂಭಗಳು ಅಲರ್ಜಿ ಎನ್ನಿಸುತ್ತಿದ್ದ ಕಾಲ.. ಆದರೆ ಸ್ನೇಹಿತನ ಬಲವಂತಕ್ಕೆ ಹೋದೆ..

"ಇವರು ಶ್ರೀಕಾಂತ್ ಮಂಜುನಾಥ್ ಅಂತ.. ಬರೀತಾ ಇರ್ತಾರೆ.. "

"ಒಹ್ ಹೌದಾ ದ ನಮಸ್ಕಾರ ಚೆನ್ನಾಗಿದ್ದೀರಾ .. ಬನ್ನಿ ತಿಂಡಿ ತಿನ್ನಿ.. ಸಿಗ್ತೀನಿ ಮತ್ತೆ"

ಇದು ಪ್ರಕಾಶ್  ಹೆಗ್ಗಡೆ ಅವರನ್ನು ಮೊಟ್ಟ ಮೊದಲ ಬಾರಿ ಭೇಟಿ ಪ್ರಸಂಗ..
*********************************************************************************
ಹಾಗೆ ಸುಮ್ಮನೆ ಒಂದು ಫೇಸ್ ಬುಕ್ ಗೊಡೆಯಲ್ಲಿನ ಬರಹಕ್ಕೆ ಲೈಕ್ ಬಟ್ಟನ್ ಒತ್ತಿದೆ...

ತಕ್ಷಣ ಒಂದು ಸಂದೇಶ ಬಂದಿತು.. ಶ್ರೀಕಾಂತ್ ಮಂಜುನಾಥ್.. ನೀವು ನಿಮ್ಮ ಕುಟುಂಬದ ಸಂಗಡ ಬನ್ನಿ.. ನಾವೆಲ್ಲಾ ಒಂದು ಸುಂದರ ಜಾಗಕ್ಕೆ ಹೋಗುತ್ತಿದ್ದೇವೆ..

ಸರಿ ಸರ್ಜಿ.. ಬರುವುದಾದರೆ ಹೇಳುವೆ ಎಂದಿದ್ದೆ..

ಜೂನ್ ೨೩ ೨೦೧೨.. ಬೆಳಿಗ್ಗೆ ಆರು ಘಂಟೆಗೆ.. ಎದ್ದು ಹೊರಟಿದ್ದೆವು.. ಬಸ್ಸಲ್ಲಿ ಜನವೋ ಜನ.. ಯಾರ ಮುಖವೂ ಪರಿಚಯವಿಲ್ಲ.." ಶ್ರೀಕಾಂತ್ ಮಂಜುನಾಥ್ ಚೆನ್ನಾಗಿದ್ದೀರಾ.." ಎಂದ ಅಜಾದ್ ಸರ್.. ಕಾಂತ ಎಂದ ಮಹೇಶ್.. ಶ್ರೀಕಾಂತ್ ಮಂಜುಂಥ್ ಎಂದ ರೂಪ ಸತೀಶ್.. ಶ್ರೀಕಾಂತ್ ಎಂದ ಸಂಧ್ಯಾ ಭಟ್.. ಸುಮಧುರ ನಗೆ ನಕ್ಕ ಸುಲತ.. ಸರ್ ನಿಮ್ಮ ಕಾಮೆಂಟ್ ಗಳು ಸೂಪರ್ ಎಂದ ಸುದೇಶ್.. ಒಬ್ಬರೇ ಇಬ್ಬರೇ ಗುರುಪ್ರಸಾದ್, ಉಮೇಶ್ ದೇಸಾಯಿ ಸರ್, ನವೀನ ಮಾಸ್ಟರ್, ಗಿರೀಶ್, ಬನ್ನಿ ಸರ್ ನೀವು ಎಂದ ಶಿವೂ ಸರ್.. ಹೀಗೆ ಹೆಸರಿಸಲು ಜಾಗವೇ ಸಾಲದೇ ಕಡೆಗೆ ನನ್ನ ಎಲ್ಲರಿಗೂ ಪರಿಚಯಿಸಿದ ಪ್ರಕಾಶ್ ಹೆಗ್ಗಡೆ.. "ಇವರು ಶ್ರೀಕಾಂತ್ ಮಂಜುನಾಥ್ ಅಂತ .. ನನ್ನ ಬ್ಲಾಗ್ ನಲ್ಲಿ ಸುಂದರ ಕಾಮೆಂಟ್ ಹಾಕ್ತಾರೆ.. "...  ಹೀಗೆ ಶುರುವಾಯಿತು ಸುಮಧುರ ವ್ಯಕ್ತಿಗಳ ಪರಿಚಯ.. ಒಬ್ಬರಾದ ಮೇಲೆ ಒಬ್ಬರು ನನ್ನ ಮನಸನ್ನು ಆಕ್ರಮಿಸಿಕೊಳ್ಳುತ್ತಾ ಹೋದರು.. ಇಂದು ಬೆರಳಿಗೆ ಸಿಕ್ಕದ..  ಲೆಕ್ಕಕ್ಕೆ ಎಟುಕದಷ್ಟು ಪ್ರೀತಿ ವಿಶ್ವಾಸ ಹರಿಸುವ ಸುಮಧುರ ಹೃದಯಗಳ ಸಾಗರವೇ ನನ್ನನ್ನು ಆವರಿಸಿಕೊಂಡಿವೆ..
********************************************************************************
ಶ್ರೀಕಾಂತ್ ಜಿ ಆನೆ ನಡೆದದ್ದೇ ದಾರಿ.. ನಿಮಗೆ ಅನ್ನಿಸಿದ್ದು ನೀವು ಬರೆಯಿರಿ.. ಓದಲು ನಾವು ಇದ್ದೇವೆ.. ಇದನ್ನು ನಿಮ್ಮೊಳಗೆ ನಾನೊಬ್ಬ ಎಂದು ಆದರಿಸುವ.. ಬಾಲೂ ಸರ್.. ಬನ್ನಿ ಸರ್ ಮೈಸೂರಿಗೆ ಎಂದರು.. ಸರಿ ಹೋಗಿಯೇ ಬಿಡೋಣ ಅಂತ ಮೈಸೂರಿಗೆ ಹೋಗಿಯೇ ಬಿಟ್ಟೆವು.. . ಕೆಲವು ತಿಂಗಳ ಹಿಂದೆ ಸರ್ ಎಂದು ಮಾತಾಡುತಿದ್ದ ಸಂಧ್ಯಾ, ಸುಲತ, ಸುಷ್ಮಾ..  ಭಾಗ್ಯ.. .. ಬನ್ನಿ ಅಣ್ಣ.. ಹೋಗೋಣ ಅಂತ ತಮ್ಮ ಹೃದಯ ಸಿಂಹಾಸನದಲ್ಲಿ ಅಣ್ಣ ಎಂದು ನನಗೆ ಜಾಗ ಕೊಟ್ಟು.. ಆದರಿಸಲು ಶುರು ಮಾಡಿದರು...
********************************************************************************
ನಾನೂ.. ಕಾಮೆಂಟ್ ಹಾಕಲು ಭಯ ಪಡುತ್ತೇನೆ.. ಈ ಮಹಾನುಭಾವ ನೆಗೆಟಿವ್ ಕಾಮೆಂಟ್ ಹಾಕಿದರೆ ಸಾಕು ಎಲ್ಲಿಂದಲೋ ಫೋನ್ ಮಾಡಿ ಹೆದರಿಸುತ್ತಾರೆ ಎನ್ನುತ್ತಾ ಆತ್ಮೀಯರಾಗಿರುವ ಬದರಿ ಸರ್.. ನನ್ನನ್ನು ಲಾಫ್ಟರ್ ಚಾಂಪಿಯನ್ ಎನ್ನುವ ಪ್ರದೀಪ್.. ಕಾಂತ  ಎನ್ನುತ್ತಾ ಅಪ್ಪಿ ಕೊಳ್ಳುವ ಮಹೇಶ್.. ಹೀಗೆ ಬರೆಯುತ್ತಾ ಹೋದರೆ ಹನುಮನ ಬಾಲಕ್ಕಿಂತ ದೊಡ್ಡದಾಗುವ ದೊಡ್ಡ ಪಡೆಯೇ ಇದೆ.. ನಿಮ್ಮನ್ನು "ಶ್ರೀ" ಎನ್ನುತ್ತೇನೆ ಎನ್ನುವ ಸ್ಪೂರ್ತಿಗೆ ಹೆಸರಾದ ರೂಪ ಸತೀಶ್.. ಇವರನ್ನು ಅಕ್ಕ ಎನ್ನಲೇ, ದೇವಿ ಎನ್ನಲೇ.. ತಂಗಿ ಎನ್ನಲೇ.. ತಾಯಿ ಎನ್ನಲೇ.. ಊಹೂ ಇದಕ್ಕಿಂತ ಮಿಗಿಲು.. ಇವರನ್ನು ಶ್ರೀಮಾನ್ ಎನ್ನುತ್ತೇನೆ. ಆ ಹೆಸರು ನಾನೇ ಇಟ್ಟದ್ದು ಎನ್ನುವ ಉತ್ಸಾಹದ ಚಿಲುಮೆ ಅಜಾದ್ ಸರ್.. "ಶ್ರೀಕಾಂತ್  ಮಂಜುನಾಥ್ " ಎನ್ನುತ್ತಾ ಅಪ್ಪಿಕೊಂಡು ಪುಟ್ಟ ಕಂದನನ್ನು ಮುದ್ದು ಮಾಡುವಷ್ಟೇ ಆಪ್ತತೆಯಿಂದ ಪ್ರೀತಿಸುವ ಡಾಕ್ಟರ್ ಡಿ. ಟಿ. ಕೃಷ್ಣಮೂರ್ತಿ.. ಅಬ್ಬಾ ಒಬ್ಬರಿಗಿಂತ ಒಬ್ಬರು ಘಟಾನುಘಟಿಗಳು ತಮ್ಮ ಸ್ನೇಹದ ಸಂಕೋಲೆಯಲ್ಲಿ ನನ್ನನ್ನು ಬಂಧಿಸುವ ಇಂಥಹ ಬಳಗ ದೇವರು ಕೊಟ್ಟ ವರವೇ ಸರಿ
********************************************************************************
ಅಣ್ಣಾ ನಿಮ್ಮ ಶೈಲಿಯಲ್ಲಿ ಬರೆದಿದ್ದೇನೆ ನೋಡಿ ಎನ್ನುತ್ತಾ ಹುಟ್ಟು ಹಬ್ಬಕ್ಕೆ ಅಮೋಘ ಬರಹ ಕೊಟ್ಟ ಸತೀಶ್ ಬಿ ಕನ್ನಡಿಗ...

ಶ್ರೀ ನೀವು ಒಬ್ಬ ಉತ್ತಮಾತೀತ ಸ್ನೇಹಿತ.. ನಿಮ್ಮ ಹುಟ್ಟು ಹಬ್ಬಕ್ಕೆ ನಿಮ್ಮದೇ ಶೈಲಿಯಲ್ಲಿ ಉಡುಗೊರೆ ಕೊಡಬೇಕು ಅನ್ನಿಸಿತು.. ನನ್ನ ಅಪ್ಪನ ಹುಟ್ಟು ಹಬ್ಬದಂದೇ ನಿಮ್ಮ ಹುಟ್ಟು ಹಬ್ಬ... ಅದಕ್ಕಿಂತ ಇನ್ನೇನು ಬೇಕು ನನಗೆ.. ಎನ್ನುವ ನಿವೇದಿತ ಚಿರಂತನ್..

ಅಣ್ಣ ನಿಮ್ಮ ಹತ್ತಿರ ಮಾತಾಡುತ್ತಿದ್ದರೆ.. ನನ್ನ ಜೊತೆಯಲ್ಲಿ ಮಾತಾಡುತ್ತಿದ್ದೇನೆ ಎನ್ನಿಸುತ್ತದೆ.. ಎನ್ನುವ ಸಂಧ್ಯಾ ಪುಟ್ಟಿ..

ಅಣ್ಣಯ್ಯ ನೆಗೆಟಿವ್ ಕತೆಗೂ ಪಾಸಿಟಿವ್ ಕಾಮೆಂಟ್ ನೀಡುವ ನಿಮಗೆ ಹಾಟ್ಸ್ ಆಫ್ ಎನ್ನುತ್ತಾ ಗುಳಿ ಕೆನ್ನೆಯಲ್ಲಿ ನಗುವ ಪುಟ್ಟಿ ಸುಷ್ಮಾ

ಅಣ್ಣ ಎನ್ನಲೇ ಅಪ್ಪ ಎನ್ನಲೇ ಎಂದು ಗೊಂದಲವೇ ಕಾಣದ ಅಪ್ಪನಂತಿರೋ ಅಣ್ಣ ಎಂದು ಹೇಳುತ್ತಾಳೆ ತುಂಟ ಭಾಗ್ಯ ಪುಟ್ಟಿ..
ಸಾರೀ ಶ್ರೀ.. ನಿಮ್ಮ ತರಹ ಬರೆಯೋಕೆ ಬರೋಲ್ಲ.. ಆದರೂ ಶುಭಾಷಯ ಹೇಳುವೇ ಎನ್ನುವ ರೂಪ ಸತೀಶ್..

ಇವರ ಜೊತೆ ಮಡದಿ ಸವಿತಾ.. ಹಾಗೂ ನನ್ನ ಸ್ನೇಹಿತೆ ಕಂ ಮಗಳು ಶೀತಲ್ ಎಲ್ಲರೂ ಸೇರಿ ಹರಟಿದ್ದು ಬೆಳಗಿನ ಜಾವ ಮೂರು ಘಂಟೆಯ ತನಕ.. ಬೆಳಿಗ್ಗೆ ಎದ್ದ ಮೇಲೆ ಇನ್ನೊಮ್ಮೆ ಶುಭಾಶಯಗಳ ಜೊತೆಯಲ್ಲಿ ಕೇಕ್ ತಂದು.. ಇನ್ನೊಮ್ಮೆ ಆಚರಣೆ..

ಇತಿಹಾಸದಲ್ಲಿ ಕಂಡರಿಯದ ಈ ಶುಭಾಶಯಸಾಗರದ ಅಲೆಗಳು ಬಡಿದು ಬಡಿದು ಕಣ್ಣಲ್ಲಿ ಹಾಗೆಯೇ...

*********************************************************************************
ಇದೆಲ್ಲಾ ಸಾಧ್ಯವೇ.. ಎನ್ನುತ್ತಾ ಕಳೆದ ನಲವತ್ತೊಂದು ವರ್ಷಗಳ ಇತಿಹಾಸದ ಪುಟವನ್ನು ತಿರುವು ಹಾಕಿದರೆ... ಆಹಾ... ಯೋಚಿಸುತ್ತಾ ಕುಳಿತಿದ್ದಾಗ...

ಶ್ರೀ ಶ್ರೀ .. ಎಂದು ಯಾರೋ ಕೂಗಿದ ಹಾಗೆ ಆಯಿತು.. ಯಾರಪ್ಪ ಎಂದು ತಿರುಗಿದರೆ..

"ಅಲ್ಲಾ ಶ್ರೀ.. ನಿನಗೆ ಶುಭಾಶಯಗಳ ಮಹಾಪೂರವೇ ಹರಿಯಿತು ಅಂತ ನನ್ನನ್ನೇ ಮರೆತು ಬಿಡೋದೇ. .ಇಡಿ ರಾತ್ರಿ ಚಳಿಯಲ್ಲಿ ಒಬ್ಬನೇ ನಿಂತಿದ್ದೆ.. "

ಅಯ್ಯೋ ಗೊತ್ತಾಗಲೇ ಇಲ್ಲ ಪುಟ್ಟಾ.. ಇವರ ಪ್ರೀತಿಯ ಕಂಡು ನಾ ಮೂಕನಾಗಿ ಬಿಟ್ಟಿದ್ದೆ.. ಕಾರಣ ಇಡಿ ರಾತ್ರಿ ನನ್ನ ಪ್ರೀತಿ ಪಾತ್ರವಾದ ವಿಕ್ಟರ್ ಬೈಕನ್ನು ಗೇಟಿನ ಹೊರಗೆ ರಸ್ತೆಯಲ್ಲಿಯೇ ಮರೆತು ನಿಲ್ಲಿಸಿದ್ದೆ..

ಇಲ್ಲ ಬಿಡು ಶ್ರೀ ನನಗೆ ಅರ್ಥ ವಾಗುತ್ತೆ..  "ಅಂದು ಹೊಟ್ಟೆಗೆ  ಇಲ್ಲದೆ ತಾಯಿಯ ಬರುವನ್ನೇ ಕಾಯುತ್ತಾ ಕುಳಿತಿದ್ದಾ ಆ ಕಂದಮ್ಮ ಇಂದು ಮನಸ್ಸಿಗೆ ಹಸಿವೆ ಇಲ್ಲದಷ್ಟು ಪ್ರೀತಿ ವಿಶ್ವಾಸಗಳನ್ನು ಉಂಡು ಸಂತೃಪ್ತಿ ನಗೆಯ ಚೆಲ್ಲುವ ವ್ಯಕ್ತಿಯಾಗಿದ್ದಾನೆ ಎನ್ನುವ ಮಾತು ನಿಜವಾಗಿದ್ದರೆ ಅದಕ್ಕೆಲ್ಲ ಕಾರಣ ನಿನ್ನ ಸ್ನೇಹದ ಬಳಗ.. ಅಲ್ಲವೇ...ನೂರಕ್ಕೂ ಹೆಚ್ಚು ಶುಭಾಶಯ ಸಂದೇಶಗಳು.. ಮೆಚ್ಚುಗೆಗಳು, ಚಿತ್ರಗಳು.. ಕರೆಗಳು ಓಹ್.. ಇದೆಲ್ಲ ಒಂದು ಚರಿತ್ರೆಯೇ ಅಲ್ಲವೇ " ಎಂದಾಗ

ಅದರ ಜೊತೆಯಲ್ಲಿ ನಿಂತಿದ್ದ ನನ್ನ ರಿಟ್ಜ್  ಕಾರು.. ನಕ್ಕು ಕಣ್ಣು ಹೊಡೆದು ಸಮ್ಮತಿಸಿತು .

ಇದಕ್ಕೆಲ್ಲಾ ಕಾರಣೀಕರ್ತರು ಯಾರು ಗೊತ್ತೇ..

ನೀವೇ.. ಅಂದರೆ ಈ ಲೇಖನವನ್ನು ಓದುತ್ತಿರುವ ನನ್ನ ಕುಟುಂಬದ ಸದಸ್ಯರೇ ಆಗಿರುವ ನೀವೇ..

ಅದಕ್ಕೆ ಕಣ್ಣೊರೆಸಿಕೊಂಡು ಹೇಳುವೆ..

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು.. !!!

 ಅದಕ್ಕೆ ಹೇಳಿದ್ದು ಮರೋ ಚರಿತ್ರ ಅಲ್ಲವೇ ಅಲ್ಲಾ ಇದು ಮರೆಯಲಾರದ ಮರೆಯಲಾಗದ ಚರಿತ್ರೆ... !!!

Monday, February 24, 2014

ಸಂಗೀತದ ಅಲೆಗಳ ಮೇಲೆ ಜೇನಿನ ಹನಿಗಳು

ನನ್ನ ಸ್ಥಿತಿ  ಕಾಳಿ ಮಾತೆ ಹಾಲಿನ ಬಟ್ಟಲು ಹಾಗೂ ಮೊಸರಿನ ಬಟ್ಟಲಿನ್ನು ನೀಡಿದಾಗ ತೆನಾಲಿ ರಾಮಕೃಷ್ಣನ ಮನಸ್ಥಿತಿಯಂತಾಗಿತ್ತು.. 

ಜ್ಞಾನ ಎಂಬ ಹಾಲು.. ಧನ ಎಂಬ ಮೊಸರು.. ಯಾವುದು ಬೇಕು ಯಾವುದು ಬೇಡ.. 

ಸರಿ ಎರಡನ್ನೂ ಬೆರೆಸಿ ಕುಡಿದ ರಾಮಕೃಷ್ಣ ಅದನ್ನು ಕಾಳಿ ಮಾತೆಗೆ ವಿವರಿಸಿದ ಸುಂದರ ಸಮಾಧಾನದಲ್ಲಿ ನಾ ಹೊರ ನಡೆದೆ ಸಭಾಂಗಣದಿಂದ.. 

ಅರೆ ಶ್ರೀ ಏನು ಹೇಳುತಿದ್ದೀರಾ ಸರಿಯಾಗಿ ಹೇಳಬಾರದೆ... ಎಂದಾಗ..ಅಚಾನಕ್ ಡಾಕ್ಟರ್ ಡಿ ಟಿ ಕೃಷ್ಣಮೂರ್ತಿ (Dr. DTK) ಹೇಳಿದ ಮಾತು ನೆನಪಿಗೆ ಬಂತು.. 

"ಶ್ರೀಕಾಂತ್ ಮಂಜುನಾಥ್ ಈ ಕಾರ್ಯಕ್ರಮದ ಬಗ್ಗೆ ಒಂದು ಲೇಖನ ಬೇಕು ನಿಮ್ಮಿಂದ" 

"ಗುರುಗಳೇ ನಿಮ್ಮ ಆಜ್ಞೆ ಶಿರಸಾವಹಿಸಿ ಪಾಲಿಸುತ್ತೇನೆ" ಎಂದಿದ್ದೆ.. ತಗೊಳ್ಳಿ ನಿಮ್ಮ ಮುಂದೆ.. 

*******************

ಉಷಾ ಉಮೇಶ್ ಮೇಡಂ ಈ ಕಾರ್ಯಕ್ರಮದ ಬಗ್ಗೆ ಹೇಳಿದಾಗ ಒಮ್ಮೆ ಹಿಂಜರಿದಿದ್ದೆ.. ಹೋಗಲೋ ಬೇಡವೋ ಅಂತ.. ಆದರೆ ಗಡಿಯಾರ ರಾತ್ರಿ ಎಂಟು ಐವತ್ತು ಎಂದು ಹಲ್ಲು ಕಿರಿದಾಗ.. ಅಯ್ಯೋ ಎಂಥಹ ತಪ್ಪು ಮಾಡಿಬಿಡುತ್ತಿದ್ದೆ.. ಒಂದು ಸುಂದರ ಸಂಗೀತದ ರಸಾನುಭವ ಕಳೆದುಕೊಳ್ಳುತ್ತಿದ್ದೆ.. 

ಭಗೀರಥ ಗಂಗೆಯನ್ನು ಧರೆಗೆ ಹರಿಸಲು ಸ್ವರ್ಗಾದಿದೇವತೆಗಳನ್ನು ಬೇಡಿ ಕೊಂಡಾಗ.. ಗಂಗೆ ಹರಿಯಲು ಶುರುಮಾಡಿದಳು.. ಆಗ ಕಸಿವಿಸಿಗೊಂಡ ಭಗೀರಥ...  ಯಾಕೆಂದರೆ ರಭಸದಿಂದ ಗಂಗೆ ಹರಿಯಲು ಶುರುಮಾಡಿದಳು.. ಅಂತಹ ಗಂಗೆಯನ್ನು ಮತ್ತೆ ಜಟೆಯಲ್ಲಿ ಕಟ್ಟಿದ ಶಿವ .. ನಿಧಾನವಾಗಿ ಹರಿಯ ಬಿಟ್ಟಾ.. 

ಹಾಗೆಯೇ ಭಾನುವಾರ ೨೩ನೆ ತಾರೀಕು ಫೆಬ್ರುವರಿ ಸಂಜೆ ಸುಮಾರು ಐದು ಮೂವತ್ತು ಹೊತ್ತಿನತನಕ ರಭಸವಾಗಿ ಹರಿಯುತ್ತಿದ್ದ ಸಂಗೀತ ಗಂಗೆ ಮತ್ತೆ ದಶಕಗಳ ಹಿಂದೆ ಓಡಲು ಶುರುಮಾಡಿದಳು ಅದು ಹೇಗೆ.. ವಯ್ಯಾರದಿಂದ, ಸುಮಧುರ ಸಂಗೀತದ ಜೊತೆಯಲ್ಲಿ ಹರಿಯಲು ಶುರು ಮಾಡಿದಳು.. 


ಪ್ರತಿ ಹಾಡಿನ ಪದವನ್ನು ಅನುಭವಿಸಿ ಹೃದಯದೊಳಗೆ ಇಳಿಸಿಕೊಂಡು ಅದರ ಭಾವವನ್ನು ಹಾಡುತಿದ್ದ ರೀತಿ ಅದ್ಭುತ.. ಹಾಡಿನ ಚಿಕ್ಕ ಚಿಕ್ಕ ವಿಷಯಗಳನ್ನು ಹೆಕ್ಕಿ ಹೆಕ್ಕಿ ಉಣಬಡಿಸುತ್ತಿದ್ದ ನಿರೂಪಕರು.. ಒಂದೇ ಎರಡೇ.. ನನ್ನ ಮನಸ್ಸಿನಲ್ಲಿ ಹರಿದ ಭಾವಗಂಗೆಯನ್ನು ಪದಗಳ ಮೂಲಕ ತಲುಪಿಸುವ ಒಂದು ಪುಟ್ಟ ಪ್ರಯತ್ನ ಮಾಡುತ್ತಿದ್ದೇನೆ.. 


  • ಇಡಿ ಕಾರ್ಯಕ್ರಮ ಚೊಕ್ಕವಾಗಿ.. ಸಕ್ಕರೆ ಅಚ್ಚಿನ ಬೊಂಬೆಯ ಹಾಗೆ ಸಾಲಾಗಿ ಸುಂದರವಾಗಿ ಎರಕ ಮಾಡಲಾಗಿತ್ತು 
  • ಪ್ರತಿ ಹಾಡಿನಲ್ಲೂ ಮನಸ್ಸು, ಉಸಿರು ಇಟ್ಟು ಹಾಡುತ್ತಿದ್ದ ಪರಿ 
  • ಲತಾ ಮೇಡಂ ಅವರ ಧ್ವನಿ ಜೇನಿನಲ್ಲಿ ಅದ್ದಿದ ಗೋಡಂಬಿಯ ಹಾಗೆ ರುಚಿಸುತ್ತಾ ಸಾಗಿತ್ತು.. ಈ ಹಾಡನ್ನು ಎಷ್ಟು ಚೆನ್ನಾಗಿ ಹಾಡುತ್ತಾರೆ ಅಲ್ಲವೇ ಎಂದುಕೊಂಡು ಈ ಹಾಡು ಸೂಪರ್ ಅಂತ ಚಪ್ಪಾಳೆ ಹೊಡೆಯುತ್ತಾ ಇದ್ದರೇ ಕರಗಲು ಹೇಳುತ್ತಿದ್ದವು ಇರು ಶ್ರೀ ಇರು ಶ್ರೀ ... ಮುಂದಿನ ಹಾಡು ಕೇಳು.. ಆಮೇಲೆ ನಿರ್ಧರಿಸು ಅಂತ.. ಪ್ರತಿಯೊಂದು ಹಾಡು ಅವರ ಧ್ವನಿಯಲ್ಲಿ ಸಿಂಗರಿಸಿಕೊಳ್ಳುತ್ತಿದ್ದವು. ಧ್ವನಿಯಲ್ಲಿನ ಏರಿಳಿತ ಅದಕ್ಕೆ ತುಂಬುವ ಉಸಿರಿನ ಭಾವ.. ಆಹಾ ವಿವರಿಸಲು ಪದಗಳಿಲ್ಲ. ಗಾನ ಶಾರದೆ ಎನ್ನುವ ಹೆಸರನ್ನು ಲತಾ ಮೇಡಂಗೆ ಕೊಡಬೇಕು ಎಂದು ಡಾಕ್ಟರ್ ಡಿ ಟಿ ಕೃಷ್ಣಮೂರ್ತಿ ಹೇಳಿದಾಗ ಅಹುದು ಅಹುದು ಎಂದಿತು ಮನ.  

  • ಅಂಜಲಿ ಮೇಡಂ ಅವರು ಭಜನ್ ಗಳನ್ನೂ ಹಾಡುತ್ತಿದ್ದರೆ ಭಕ್ತಿಯಿಂದ ಕೈ ಮುಗಿಯಬೇಕು ಎನ್ನದು ನಿರ್ಧರಿಸುತಿತ್ತು.. ಯುಗಳ ಗೀತೆ ಹೇಳುತ್ತಿದ್ದರೆ ಹಾಗೆಯೇ ಆಗಸದಲ್ಲಿ ತೇಲಿ ಹೋಗುವ ಅನುಭವ.. ಜೇನಿನ ಮಳೆಯೋ ಹಾಲಿನ ಮಳೆಯೋ ಅನ್ನುವ ಅಣ್ಣಾವ್ರ ಹಾಡಿನಂತೆ ಪ್ರತಿ ಪದವೂ ಭಾವವೂ ಜೇನಿನಲ್ಲಿ ಹಾಲಿನಲ್ಲಿ ಮಿಂದು ಹೊರಗೆ ಬರುತಿದ್ದವು. ಕಣ್ಣು ಮುಚ್ಚಿ ಹಾಡನ್ನು ಕೇಳುತ್ತಾ ಕೂತರೆ ಕಣ್ಣ ಮುಂದೆ ಗಾನ ಸರಸ್ವತಿ ನಾಟ್ಯವಾಡಿದ ಅನುಭವ. ಗಾನ ಸರಸ್ವತಿ ನಮ್ಮಂ ಮುಂದೆಯೇ ನಿಂತು ಹಾಡುತಿದ್ದಾರೆ ಎನ್ನುವ ಅನುಭವ ತಂದು ಕೊಟ್ಟ ಅಂಜಲಿ ಮೇಡಂ ಅವರಿಗೆ ಧನ್ಯವಾದಗಳು.  
  •  "ದಿಲ್ ಹೂಂ ಹೂಂ ಕರೆ" ಸಂಗೀತದ ಅ ಆ ಇ ಈ ಗೊತ್ತಿಲ್ಲದ ನಾನು ಅವರ ಕರಗಳನ್ನು ಮುಟ್ಟಿ ಸರ್ ನಿಜವಾಗಿಯೂ ರೋಮಾಂಚನದ ಅನುಭವವಾಯಿತು ಎಂದಾಗ ನನಗೆ ಅರಿವಿಲ್ಲದೆ ಎದೆ ಬಡಿತ ಹೆಚ್ಚಾಗಿತ್ತು. ಆ ಆಳವಾದ ಧ್ವನಿ ಪದಗಳ ಅವಶ್ಯಕತೆಗೆ ತಕ್ಕಂತೆ ಭಾವ ಜೀವ ತುಂಬುತ್ತಿದ್ದ ಪರಿ ಆಹಾ.. ಅವರು ಹಾಡಿದ ಪರಿ ಹಾಡು ಮನಸ್ಸಿನ ಕಡಲಲ್ಲಿ ತಂಗಾಳಿ ಹೊತ್ತು ತರುತ್ತಿದ್ದ ಆಹ್ಲಾದಕರ ಅನುಭವ ನೀಡುತ್ತಿತ್ತು.. ಭಾನುವಾರದ ಸಂಜೆ ಈ ಮಟ್ಟಕ್ಕೆ ಉಲ್ಲಾಸದ ಹೂಮಳೆ ಸುರಿಸಿದ್ದು ಅರ್ಶದ್ ಸರ್ ಅವರ ಗಾಯನದ ತಾಕತ್. ಹಾಟ್ಸ್ ಆಫ್ ಸರ್ಜಿ 
  • ಸಂಗೀತ ಕೇಳುವಾಗ ಮನಸ್ಸು ಎತ್ತರಕ್ಕೆ ಎತ್ತರಕ್ಕೆಏರುತ್ತಿದ್ದರೆ.. ಕಾಲುಗಳು ಅರಿವಿಲ್ಲದೆ ತಾಳ ಹಾಕಲು ಭುವಿಯನ್ನು ಗಾಳಿಯನ್ನು ಒತ್ತುತ್ತಾ ಇರುತ್ತದೆ.. ಇವರ ಧ್ವನಿಯಲ್ಲಿ.. ಇವರ ಹಾಡುಗಾರಿಕೆಯಲ್ಲಿ ಶ್ರೋತೃಗಳು ತಲ್ಲೀನರಾಗುತ್ತಿದ್ದರೆ ಅವರ ಮನಸ್ಸು ಇದು ಹಕ್ಕಿಯಲ್ಲ ಆದರೆ ಹಾರ್ತೈತ್ತಲ್ಲ ಎನ್ನುತ್ತಾ ಸಂಗೀತ ಸಾಗರದ ನೌಕೆಯಲ್ಲಿ ತೇಲುತ್ತಿದ್ದವು. ರಾಜಶೇಖರ್  ಸರ್ ಸಂಗೀತದ ಅಲಾಪಗಳನ್ನು (ಕ್ಷಮಿಸಿ ನನಗೆ ಅದರ ಸರಿಯಾದ ರೂಪ ಗೊತ್ತಿಲ್ಲಾ), ಅದರ ಏರಿಳಿತಗಳನ್ನು, ಆಳದ ಧ್ವನಿಯಲ್ಲಿನ ಭಾವಗಳನ್ನು ಉಲಿಯುತಿದ್ದ ಬಗೆ ಇಂದು ಶಿವರಾತ್ರಿಯಾಗಿದ್ದರೆ ಎಷ್ಟು ಸೊಗಸಾಗಿ ಇರುತ್ತಿದ್ದವು ಎನ್ನಿಸುತ್ತಿತ್ತು.. ಮನ್ನಾಡೆಯವರ ಹಾಡಿನ ಜೊತೆಯಲ್ಲಿ ಅವರ ಧ್ವನಿಯನ್ನು ಧರೆಗಿಳಿಸಿದ ಅವರ ಧ್ವನಿಯ ತಾಕತ್ತಿಗೆ ನನ್ನ ನಮನಗಳು. ನಿಜಕ್ಕೂ ಮನ್ನಾಡೆಯವರೂ ಕೂಡ ತಲೆ ತೂಗುತ್ತಿದ್ದರು ಅನ್ನಿಸಿತು.  

  • ಮಹಾಂತೇಶ್ ಸರ್ ಹಾಡುಗಳನ್ನು ಹೇಳಿದ್ದು ಅಷ್ಟೇ ಅಲ್ಲಾ ಹಾಡಿನ ಹಿಂದಿನ ಚಿಕ್ಕ ಚೊಕ್ಕ ಘಟನೆಗಳನ್ನು ಹಂಚಿಕೊಂಡದ್ದು ಸೊಗಸು ಎನಿಸಿತು. ಅವರ ಸಿರಿ ಕಂಠದಲ್ಲಿ ಅರಳಿದ ಗೀತೆಗಳು ಜಲಪಾತದ ಸೊಬಗನ್ನು ಒಮ್ಮೆ ಬೀರಿದರೆ ಇನ್ನೊಮ್ಮೆ ಹರಿಯುವ ಝರಿಯ ವಯ್ಯಾರವನ್ನು ಕಣ್ಣ ಮುಂದೆ ತಂದಿತು. ಅವರ ಧ್ವನಿಯಲ್ಲಿ ಬಾನಿಗೊಂದು ಎಲ್ಲೇ ಎಲ್ಲಿದೆ ಹಾಡನ್ನು ಕೇಳಬೇಕು ಎನ್ನುವ ನನ್ನ ಮತ್ತು ಡಾಕ್ಟರ್ ಕೃಷ್ಣಮೂರ್ತಿಯವರ ಆಸೆ ಖಂಡಿತ ಇಡೇರಿಸುತ್ತಾರೆ ಎನ್ನುವ ನಂಬಿಕೆ ನಮ್ಮದು.  ಸುಂದರವಾದ ಹಾಡುಗಾರಿಕೆ ಜೊತೆಯಲ್ಲಿ ಅಷ್ಟೇನವಿರಾಗಿ ಅದನ್ನು ಪ್ರಸ್ತುತ ಪಡಿಸಿದ ಜಾಣ್ಮೆ ನಿಜಕ್ಕೂ ಗಮನೀಯ. 

  • "ಶಿಲೆಗಳು ಸಂಗೀತವ ಹಾಡಿವೆ" ಹಾಡನ್ನು ಈಗ ತಾನೇ ಹಾಡಿ ಬಂದೆ.. ಈಗ ನೋಡಿದರೆ ಇಲ್ಲಿನ ಶಿಲೆಗಳು ಆಗಲೇ ಗಂಧರ್ವ ಗಾಯನದಿಂದ ಮೂರ್ತಿಗಳಾಗಿವೆ ಎಂದು ಗಾಯಕರಿಗೆ ಅನ್ನಿಸಿತು. "ಮೇರೆ ನೈನಾ ಸಾವನ್" ಹಾಡು ಶಿಲೆಗಳಿಗೂ ಜೀವ ತುಂಬುವ ಹಾಡು.. ಅದನ್ನು ಅಷ್ಟೇ ಸುಮಧುರವಾಗಿ...  ಎಲ್ಲಾ ಗಾನಗಂಗೆಯಲ್ಲಿ ಮುಳುಗಿ ತೇಲುತ್ತಿದ್ದಾ ಶ್ರೋತೃಗಳಿಗೆ  ಅಮೃತವರ್ಷಿಣಿಯ ಸಿಂಚನ ಮಾಡಿದರು. (ಕ್ಷಮೆ ಇರಲಿ ಈ ಸುಮಧುರ ಗಾಯಕರ ಹೆಸರು ನೆನಪಿಗೆ ಬರ್ತಾ ಇಲ್ಲ). ಜೀವಂತಿಕೆ ತುಂಬಿದ್ದ ಹಾಡುಗಾರಿಕೆಗೆ ನಮಗರಿವಿಲ್ಲದೆ ಕರತಾಡನ ಅಪಾರ ಸದ್ದು ಮಾಡಿದವು.
  •   
  • ಇಡಿ ಕಾರ್ಯಕ್ರಮಕ್ಕೆ ಚೌಕಟ್ಟು ಒದಗಿಸಿದ್ದು ನಿರೂಪಣೆ.. ಪ್ರತಿ ರಾಗದ ಬಗ್ಗೆ ಚುಟುಕು ಮಾಹಿತಿ.. ಜೊತೆಯಲ್ಲಿ ತಬಲಾ ವಾದನ.. ಮತ್ತೆ ನಿರೂಪಣೆ.. ಒಂದು ಮನ ತುಂಬುವ ಕಾರ್ಯಕ್ರಮಕ್ಕೆ ಇಂಥಹ ನಿರೂಪಕ ನಿಜಕ್ಕೂ ಅನರ್ಘ್ಯ ರತ್ನವಿದ್ದಂತೆ. ಅವರ ಮಾತಿನ ಧ್ವನಿ ಇಷ್ಟವಾದರೆ.. ಅವರ ಬೆರಳುಗಳು ತಬಲಾದ ಮೇಲೆ ಮಾಡುತ್ತಿದ್ದಾ ಜಾದೂ ಅಷ್ಟೇ ಮನ ತುಂಬುತ್ತಿತ್ತು.

ಇಡಿ ಕಾರ್ಯಕ್ರಮವನ್ನು  ಒಂದು ಸುಂದರ ಪುಷ್ಪದ ಮಾಲಿಕೆಯನ್ನಾಗಿ ಪರಿವರ್ತಿಸಿದ್ದು ಅಂಜಲಿ ಮೇಡಂ ಹಾಗೂ ಲತಾ ಮೇಡಂ ಅವರ ತಂಡದ ಶ್ಲಾಘನೀಯ ಶ್ರಮ ಎನ್ನುವುದನ್ನು ಅರಿತಾಗ ವಾಹ್ ಇಂತಹಃ ಕಾರ್ಯಕ್ರಮಗಳು ಸದಾ ನೆಡೆಯುತ್ತಲಿರಲಿ.. ಮನ ಮುಟ್ಟುವ ಹಾಡುಗಳು ಮನಸ್ಸಿನ ಕದವನ್ನು ಸದಾ ತಟ್ಟುತ್ತಲಿರಲಿ ಎನ್ನುವ ಹಾರೈಕೆ ಮತ್ತು ಅಭಿಲಾಷೆಯೊಂದಿಗೆ ಸಭಾಂಗಣದಿಂದ ಹೊರಗೆ ಬಂದಾಗ.. ಜ್ಞಾನದ ಹಾಲು .. ಧನದ ಮೊಸರು ಎರಡನ್ನು ಕಾಳಿಮಾತೆಯನ್ನು ಒಪ್ಪಿಸಿ ಕುಡಿದು ಸಂತುಷ್ಟನಾದ ತೆನಾಲಿ ರಾಮಕೃಷ್ಣನ ಮನಸ್ಥಿತಿ ನನ್ನದಾಗಿತ್ತು..

ಈ ಕಾರ್ಯಕ್ರಮವನ್ನು ಆಯೋಜಿಸಿದ ಲತಾಮೇಡಂ ಹಾಗೂ ಅಂಜಲಿ ಮೇಡಂ ಮತ್ತು ಅವರ ತಂಡಕ್ಕೆ ಅಭಿನಂದನೆಗಳು. ಜೊತೆಯಲ್ಲಿ ಈ ಕಾರ್ಯಕ್ರಮದ ಬಗ್ಗೆ  ತಿಳಿಸಿ ಬರಬೇಕು ಎಂದು ಒತ್ತಾಯ ಮಾಡಿದ ಉಷಾ ಉಮೇಶ್ ಮೇಡಂ ಅವರಿಗೆ ಧನ್ಯವಾದಗಳು. 
ಇಡಿ ಕಾರ್ಯಕ್ರಮಕ್ಕೆ ಜೊತೆ ನೀಡಿ ನಕ್ಕು ನಲಿವಂತೆ ಮಾಡಿದ ಚಿರ ಯುವಕರಾದ ಡಾಕ್ಟರ್ ಕೃಷ್ಣಮೂರ್ತಿ ಸರ್ ಅವರಿಗೆ ನನ್ನ ಮನಸಾರೆ ವಂದನೆಗಳು. 
ಅಪಾರ ದಿನಗಳ ನಂತರ ಸಿಕ್ಕ ಸಂತೋಷಕುಮಾರ್, ಗಣೇಶ್, ಗುರುನಾಥ್ ಬೋರಗಿ, ಪರೇಶ್, ಮತ್ತು ಸ್ನೇಹಿತರಿಗೆ ಧನ್ಯವಾದಗಳು... 

Friday, February 7, 2014

"ಹುಟ್ಟು ಹಬ್ಬದ ಶುಭಾಶಯಗಳು ಟೀ"

ಶ್ರೀ : ದೇವರಗುಡಿಯ ಚಿತ್ರಗೀತೆ ಹೃದಯದಲ್ಲಿ ಹಾಡುತ್ತಿತ್ತು..  ತಲೆಗೂದಲನ್ನು ಹಾಗೆಯೇ ಬೆರಳಲ್ಲಿ ಸರಿ ಮಾಡಿಕೊಂಡು..
"ಕಣ್ಣು ಕಣ್ಣು ಒಂದಾಯಿತು.. 
ನನ್ನ ನಿನ್ನ ಮನಸೆರಿತು... 
ದಿನರಾತ್ರಿಯು ಕಂಡ ಕನಸು ನನಸಾಯಿತು"  ಹಾಡಿಕೊಂಡು ಬರುತ್ತಿದ್ದೆ 



ಸವಿ: "ಈ ಮೌನವ ತಾಳೆನು ಮಾತಾಡೆ ದಾರಿಯ ಕಾಣೆನು ಓ ರಾಜ" ಮಯೂರ ವರ್ಮ ಕನ್ನಡ ಕುಲದ ಮೊದಲ ರಾಜನಾದರೆ..ಆ ಮೌನದ ಮಾತಿಗೆ ಒರೆ ಹಚ್ಚಲು ಕಾಯುತ್ತ ನಿಂತಿದ್ದಳು ನನ್ನ ಮಾವನ ಮಗಳು!!!   

ಮನಸ್ಸು ತೆಳ್ಳಗೆ ಹಾರಾಡುತ್ತಿತ್ತು.. ಒಂದು ಸುಮಧುರ ಘಟನೆಗೆ ಸಾಕ್ಷಿಯಾಗಿತ್ತು ಗಡಿಯಾರ

ಶ್ರೀ: "ಈ ಸೊಗಸಾದ ಸಂಜೆ 
ನಿನ್ನನ್ನು ನೋಡುತಾ 
ನನ್ನನ್ನೇ ಮರೆತೇ.. "

ದೇವತಾ ಮನುಷ್ಯದಲ್ಲಿ ಅಣ್ಣಾವ್ರ ತರಹ ನಡೆಯುತ್ತಾ ಹಾಡುತ್ತಾ ಸಂಭ್ರಮಿಸಿದ್ದೆ.. ಕೊರಳಲ್ಲಿ ಮಫ್ಲರ್ ಇರಲಿಲ್ಲ ಅಷ್ಟೇ... ಹಾಗೆಯೇ ಆಟೋ ಹತ್ತಿ ಕೂತೆವು 



ಸವಿ : "ಸದಾ ಕಣ್ಣಲ್ಲೇ ಪ್ರಣಯದ ಕವಿತೆ ಹಾಡುವೆ 
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ"



ಕವಿರತ್ನ ಆಗದಿದ್ದರೂ ಮುಂದೆ ಒಂದು ದಿನ ಶ್ರೀ...  ನೀವು ಕಪಿ(ಕನ್ಯಾ ಪಿತೃ)ರತ್ನ ಆಗುತ್ತೀರ ಎನ್ನುವ ಭರವಸೆ ಮೂಡಿದೇ ಮನದಲ್ಲಿ... 

ಶ್ರೀ: "ನನ್ನ ಆಸೆ ಹಣ್ಣಾಗಿ ನನ್ನ ಬಾಳ ಕಣ್ಣಾದೆ
       ಮನವನು ಸೇರಿದೆ ಸಂತೋಷ ತುಂಬಿದೆ
       ಆಟೋದಲ್ಲಿ "ಆಟೋ ರಾಜ"ನ ಹಾಗೆ ಸುಮಧುರ ನಗೆಯನು ಚೆಲ್ಲುತ್ತಾ ಸಾಗಿದೆ 



ಹೀಗೆ ಸಾಗಿತ್ತು ನಮ್ಮ ಸಂಭಾಷಣೆಯ ವೈಕರಿ.. ಸಿನಿಮಾ ಸಿನಿಮಾ ಸಿನಿಮಾ ಅದೇನು ಹುಚ್ಚೋ ಅನ್ನಿಸುವಷ್ಟು ಹುಚ್ಚು ಬೆಳೆದಿತ್ತು.. ನನಗೆ... ಪ್ರತಿ ಮಾತಿನಲ್ಲೂ ಸಿನಿಮಾ www.ಇಣುಕಿನೋಡು.com ವೆಬ್ ಸೈಟಿಗೆ ಲಗ್ಗೆ ಹಾಕುತ್ತಿತ್ತು.. 


"ಶ್ರೀಕಾಂತ ಇಳಿಯೋ.. ಏನು ಕನಸ್ಸು ಕಾಂತ ಇದ್ದೀಯಾ ಹೆಂಗೆ" ಅಚಾನಕ್ಕಾಗಿ ಕಣ್ಣು ಬಿಟ್ಟೆ.. ಆಗ ತಿಳಿಯಿತು ಇಷ್ಟು ಹೊತ್ತು ಕಂಡದ್ದು ಮುಂದೆ ನಡೆಯುವ ನನಸಿಗೆ ಸಿದ್ಧತೆಯ ಕನಸು ಎಂದು.. 

ಅಣ್ಣ ನನ್ನನ್ನು ಬಸ್ ಸ್ಟ್ಯಾಂಡ್ ಗೆ ಬಿಡಲು ವಿಜಯನಗರದ ಆಟೋದಲ್ಲಿ ನನ್ನನ್ನು ಕರೆ ತಂದಿದ್ದ .. ನಾನು ಆಫೀಸ್ ಹೋಗುವ ತರಹ ಶಿಸ್ತಾಗಿ ಟಾಕು ಟೀಕಾಗಿ ಟ್ರಿಮ್ ಆಗಿ ಬಂದಿದ್ದೆ.. ಅಣ್ಣ ಆರಾಮಾಗಿ ಟೀ ಶರ್ಟ್ ಜೀನ್ಸ್ ಚಪ್ಪಲಿ ಹಾಕಿದ್ದ.. 

ಆ ಕಡೆಯಿಂದ ಸವಿ ಬಂದಳು.. ಹಲ್ಲು ಕಿರಿದಳು.. ನಾನು ಹಹಹ ... ಅದಕ್ಕೆ ಏನು ಕಮ್ಮಿ ಇರಲಿಲ್ಲ.. ಇದ್ದ ಬದ್ದ ಹಲ್ಲುಗಳೆಲ್ಲ ಕತ್ತಲೆಯಲ್ಲೂ ಬೆಳಕಾಗಿ ಕಂಡವು.. 

ಗಡಿಯಾರ.. ಮತ್ತು ಹೃದಯ ಕಿರುಚುತಿತ್ತು ಹೊತ್ತಾಯಿತು ಹೊತ್ತಾಯಿತು ಎಂದು... ಅಯಸ್ಕಾಂತ....  ಶ್ರೀಕಾಂತ ಎರಡಕ್ಕೂ ಬೇಕಿದ್ದು ಏಕಾಂತ.. 

ಬಿಟ್ಟರೆ ಸಾಕು ಎನ್ನಿಸುತ್ತಿತ್ತು ಮನಸ್ಸು.. 

"ನೀವು ಹೋಗ್ತೀರಾ?"

ಸವಿ ಸೋದರ ಮಾವ ಕೇಳಿದ ಪ್ರಶ್ನೆಗೆ ಉತ್ತರಿಸಲು ಸಮಯವಿರಲಿಲ್ಲ.. ಸುಮ್ಮನೆ ಹಲ್ಲು ಬಿಟ್ಟು ಇಬ್ಬರು ಬಸ್ ಹತ್ತಿದೆವು.. ಕೊಡೈಕೆನಾಲ್ ಬಸ್ಸ ಹಿಡಿಯಲು ಮಜೆಸ್ಟಿಕ್ ಸ್ಟ್ಯಾಂಡ್ ಗೆ.. 

ಸುಮಾರು ನಾಲ್ಕು ದಿನ ಪ್ರಣಯದ ಮಂಗಗಳ ಹಾಗೆ ಕೊಡೈ ಸುತ್ತಿದೆವು.. ಆದರೆ ನನ್ನ ತಲೆಯಲ್ಲಿ "ನೀವು ಹೋಗ್ತೀರಾ" ಪ್ರಶ್ನೆ ಘಟ್ಟ ಪ್ರದೇಶದಲ್ಲಿ ಬಳುಕುವ ರಸ್ತೆಯಂತೆ ಹಾಯುತ್ತಲೇ ಇತ್ತು.. 

ನನ್ನದು ಒಂದು ಕೆಟ್ಟ ಅಭ್ಯಾಸ.. ಯಾವುದೇ ವಿಚಾರ ತಲೆಗೆ ಬಂದರೆ.. ಆ ವಿಚಾರ ನಡೆದ ಸಮಯದ ಜೊತೆಯಲ್ಲಿ ಮತ್ತೆ ಹಿಂದೆ ನೆಡೆದು ಮತ್ತೆ ವರ್ತಮಾನಕ್ಕೆ ಬರುತ್ತೇನೆ.. 

ಸರಿ ಮತ್ತೆ rewind ಬಟನ್ ಒತ್ತಿದೆ.. ಹತ್ತು ನಿಮಿಷ.. 

ನಗಲು ಶುರು ಮಾಡಿದೆ.. 

"ಶ್ರೀ ಏನಾಯ್ತು ಶ್ರೀ ಏನಾಯ್ತು"

"ಹ ಹ ಹ ನಿನ್ನ ಸೋದರ ಮಾವ ಕೇಳಿದ ಪ್ರಶ್ನೆಯ ಅರ್ಥ ಈಗ ಗೊತ್ತಾಯಿತು.. "

"ಏನು ಅದು ಶ್ರೀ"

"ಮಧು ಚಂದ್ರಕ್ಕೆ ನಾನು ಆಫೀಸ್ಗೆ ಹೋಗುವಾ ಹಾಗೆ ಡ್ರೆಸ್ ಆಗಿದ್ದೆ.. ಅಣ್ಣ ಟೀ ಶರ್ಟ್ ಜೀನ್ಸ್ ಹಾಕಿಕೊಂಡು ಪ್ರವಾಸಕ್ಕೆ ಹೋಗುವ ತರಹ ಇದ್ದಾ.. ಹಾಗಾಗಿ ಅವರಿಗೆ ಈ ಸಂಶಯ ಬಂತು.. ಅಲ್ಲವೇ ಎಂದೇ"

ಸವಿ ನಗಲು ಶುರು ಮಾಡಿದಳು.. 

"ನನಗೂ ಹಾಗೆ ಆಗಿತ್ತು ಶ್ರೀ.. ನೀವು ನನ್ನನ್ನು ನೋಡಲು ಬಂದಾಗ... ನಿಮ್ಮ ಅಣ್ಣನೆ ಹುಡುಗ ಅಂದು ಕೊಂಡಿದ್ದೆ.. ನೀವೆಲ್ಲ ಹೋದಮೇಲೆಯೇ.. ತಿಳಿದದ್ದು.. ಈ ಕಪಿ ನನ್ನ ಬಾಳಿನ ನಾಯಕ ಎಂದು :-) "

ನಾನು ನಗಲೇ ಬೇಕಾಯಿತು.. ಕಾರಣ.. ಹೇಳಬೇಕೇ!!!!!!!

ಮನದಲ್ಲೇ ಹಾಡಿಕೊಂಡೆ.. 
"ಚೆಲುವೆಯ ನೋಟ ಚೆನ್ನಾ.. 
ಒಲವಿನ ಮಾತು ಚೆನ್ನ 
ಮಲ್ಲಿಗೆ ಹೂವೆ ನಿನ್ನ 
ನಗುವೂ ಇನ್ನೂ ಚೆನ್ನಾ"



ಸವಿ : "ಶ್ರೀ ನಿಮ್ಮ ಸಿನಿಮಾ ಹುಚ್ಚು ಗೊತ್ತಾಗಿದೆ ನನಗೆ.. ನಿಮಗೋಸ್ಕರ ಒಂದು ಹಾಡು ಹೇಳಬೇಕು ಅನ್ನಿಸುತ್ತಿದೆ."

ಶ್ರೀ : ಓಹ್ ಹೌದಾ ಹೇಳು ಹೇಳು ನಾ ಕೇಳುವ 

ಸವಿ: "ನಾ ಬೆಂಕಿಯಂತೆ ನೀ ಗಾಳಿಯಂತೆ 
       ಈ ಜೋಡಿ ಮುಂದೆ". 


ಶ್ರೀ : ಅಯ್ಯೋ ಅಯ್ಯೋ.. ಏನಿದು.. 

ಸವಿ : ಶ್ರೀ ಸುಮ್ಮನೆ ತಮಾಷೆ ಮಾಡಿದೆ.. ನೋಡಿ ಈ ಹಾಡು ನಿಮಗಾಗಿ 
        
        ಆಕಾಶವೆ ಬೀಳಲಿ ಮೇಲೆ.. 
        ನಾನೆಂದು... "

       


ಶ್ರೀ : ಸೂಪರ್.. ಸೂಪರ್.. ನಾ ಹೇಳಬೇಕಾದ ಹಾಡು ನೀನು ಹೇಳುತ್ತಿದ್ದೀಯ.. 

ನೋಡು ನಾವಿಬ್ಬರು ಹೇಳಬೇಕಾದ ಹಾಡು ಇದು.. 

"ಜನುಮ ಜನುಮದ ಅನುಬಂಧ 
ಹೃದಯ ಹೃದಯಗಳ ಪ್ರೇಮಾನುಬಂಧ"
​​



ಹೌದು ಶ್ರೀ ನಿಜವಾಗಿಯೂ ನಿಮ್ಮ ಮಾತು ಸರಿ.. ನಾವಿಬ್ಬರು ಹಾಗೆಯೇ ಇರೋಣ.. 

ಹೀಗೆ ಜೊತೆಯಲ್ಲಿ ಸಪ್ತಪದಿ ತುಳಿದ ನನ್ನ ಮನದನ್ನೆಗೆ ಇಂದು ಹುಟ್ಟಿದ ಹಬ್ಬದ ಸಂತಸ.. ಬಾಳಿನಲ್ಲಿ ಸಿಹಿಯು ಇರುತ್ತದೆ.. ಅತಿ ಸಿಹಿಯೂ ಬರುತ್ತದೆ.. ಅದನ್ನೆಲ್ಲ ಸಮನಾಗಿ ಸ್ವೀಕರಿಸಿ.. ಕಣ್ಣಿಗೆ ರೆಪ್ಪೆಯಂತೆ.. ಮೊಬೈಲ್ ಗೆ ಸಿಮ್ ಕಾರ್ಡ್ ತರಹ ಹೊಂದಿಕೊಂಡು  ಸಾಗುತ್ತಿರುವ ಜೀವನವನ್ನು ತುಂಬಿರುವ ಸವಿತಾಗೆ ಇಂದು ಜನುಮ ದಿನ.. ಪದಗಳ ಮಾಲಿಕೆಯನ್ನು ಈ ಶುಭಸಂಧರ್ಭದಲ್ಲಿ ನನ್ನ ಜೀವನದ ಸಂಗಾತಿಗೆ ಉಡುಗೊರೆಯಾಗಿ ಕೊಡುತ್ತಿದ್ದೇನೆ.. 

"ಅಪ್ಪಾ.. ಅಮ್ಮನಿಗೆ ಹೇಳುತ್ತೀರಲ್ಲ ಹಾಗೆ ಹೇಳಿ.. ವಿಶ್ ಮಾಡಿ ಅಪ್ಪ" ಅಂದಳು ನನ್ನ ಗೆಳತಿ ಹಾಗೂ ಮಗಳು ಶೀತಲ್.. 

"ಸರಿ ಪಾಪ ಹಾಗೆಯೇ ಹೇಳುತ್ತೇನೆ ಆಯ್ತಾ"



"ಹುಟ್ಟು ಹಬ್ಬದ ಶುಭಾಶಯಗಳು ಟೀ"

Tuesday, January 21, 2014

ಮಂಗಳದ ಈ ಸುದಿನ ಮಧುರವಾಗಲಿ !!!!!

"ನಿಮಗೆ.. ಎಲ್ಲೋ ಮಂಗಳವಾರದ ಭೂತ ಹಿಡಿದಿದೆ"

"ಯಾಕೋ ಮಂಗನ ತರಹ ಇರೋದು ಸಾಲದ... ಮಂಗಳವಾರ ಬೇಕಾ"

"ನಿನಗೆ ಮಂಗಳವಾರ... ತಲೆ ಹರಟೆ ನೀನು.. ನಿನಗೆ ಹೇಳಿದರೆ ಕೇಳ್ತೀಯ... ?"

"ನೀವು ಹಿಂದು ನಾ ಅಂತ ಅನುಮಾನ... ಯಾಕೆ ಹೀಗೆ ನೀವು"

"ಸಾರ್ ಮಂಗಳವಾರ ಯಾರೂ ಡೆಲಿವರಿ ತಗೊಳ್ಲೋಲ್ಲ ಸಾರ್.. ನಾಳೆ ತಗೊಳ್ಳಿ... ಛೆ ಈ ಪಾರ್ಟಿ ಗೆ ಎಷ್ಟು ಹೇಳಿದರೂ ಕೇಳೋಲ್ಲ.. ರೀ ಬೇಗ ಬೈಕ್ ನಾ ಡೆಲಿವರಿ ಮಾಡಿಬಿಡ್ರಿ ಒಳ್ಳೆ ವಿಚಿತ್ರ ಪ್ರಾಣಿ.. ಈ ತರಹ ನಾನು ಎಲ್ಲೂ ನೋಡಿಲ್ಲ"

"ಲೋ ಶಿವ.. ಈ ಕಾರನ್ನು ಮಂಗಳವಾರನೇ ರಿಜಿಸ್ಟರ್ ಮಾಡಿಸು.. ಇಲ್ಲ ಅಂದ್ರೆ ಈ ಗಿರಾಕಿ ನನ್ನ ತಲೆ ತಿಂದು ಬಿಡ್ತಾನೆ(ರೆ)... "

ಏನೋ ನಿನ್ನ ಮಂಗಳವಾರದ ಗೋಳು.. ಶುದ್ಧ ತಲೆಹರಟೆ.. ಯಾರ ಮಾತು ಕೇಳೋಲ್ಲ... ಅಮ್ಮ ನೀವಾದರೂ ಸ್ವಲ್ಪ ಬುದ್ಧಿ ಹೇಳಿ..."

??????????????????????????????????????

ಅನ್ನಿಸುತ್ತಿದೆಯ... 

ಬನ್ನಿ.. ಕೈಗಡಿಯಾರ ನೋಡಿಕೊಳ್ಳಿ.. ಹಾಗೆ ಅದನ್ನು ಹಿಂದೇ ತಿರುಗಿಸಿ.. ಆ ಹಾಗೆ ಸ್ವಲ್ಪ ಹಿಂದೆ ಇನ್ನು ಸ್ವಲ್ಪ ಹಿಂದೆ... ಹಾ ಹಾಗೆ ಬರ್ತಾ ಇರಿ... 

@#@#@#$%&%*^&^&^**&^ 

"ಶ್ರೀ ಯಾಕೋ ತುಂಬಾ ನೋಯುತ್ತಾ ಇದೆ.. ಬೇಗ ಬಂದು ಬಿಡಿ"

"ಸರಿ ಹೊರಟೆ"

ಹೊಸೂರು ರಸ್ತೆಯಲ್ಲಿ ಸುಮಾರು ಒಂದೂವರೆ ತಿಂಗಳ ಹಿಂದೆ ಖರೀದಿ ಮಾಡಿದ್ದ..ವಿಕ್ಟರ್ ಬೈಕ್ ಓಡುತ್ತಿತ್ತು ಶಾಂತವಾಗಿ.. ಸೀದಾ ಸೀತಾ ಸರ್ಕಲ್ ಹತ್ತಿರ ಬಂದೆ.. 

"ಅಲ್ಲೇ ಇದ್ದಾಳೆ ನೋಡಿ ಮಾತಾಡಿಸಿ" ಎಂದರು ಹೆಣ್ಣು ಕೊಟ್ಟವರು 

"ಹೇಗಿದ್ದೀಯ"

"ಏನೋ ಶ್ರೀ ಗೊತ್ತಾಗ್ತಾ ಇಲ್ಲ.. ಡಾಕ್ಟರ್ ಹೇಳಿದರು.. ಅದಕ್ಕೆ ಬಂದೆ.. ನಿಮ್ಮ ಅಮ್ಮನಿಗೆ ಫೋನ್ ಮಾಡಿ.. ವಿಷಯ ಹೇಳಿ"

"ಸರಿ ಇಲ್ಲೇ ಕೂತಿರು ಬರುತ್ತೇನೆ" ಎಂದು ಹೇಳಿ ಫೋನ್ ಬೂತ್ ಹುಡುಕಿಕೊಂಡು ಬಂದೆ (ಮೊಬೈಲ್ ಯುಗವಲ್ಲ ಅದು)

ಮನೆಗೆ ವಿಷಯ ಮುಟ್ಟಿಸಿ ಲಗುಬಗೆಯಿಂದ ಮತ್ತೆ ಓಡಿ ಬಂದೆ.... 

ಗಾಬರಿಯಾಯಿತು.. ಆಕೆ ಇರಲಿಲ್ಲ...  ಬಿಸಿ ಹಾಲು ಕುಡಿದ ಬೆಕ್ಕಿನಂತೆ ಆ ಕಡೆ ಈ ಕಡೆ ಅಲೆದಾಡಿದೆ.. 

"ಶ್ರೀಕಾಂತ್... ಯಾಕೋ ನೋವು ಅಂದ್ಲು ಅದಕ್ಕೆ ಒಳಗೆ ಕರೆದುಕೊಂಡು ಹೋಗಿದ್ದಾರೆ.. ನಿಮ್ಮ ಮನೆಗೆ ವಿಷಯ ತಿಳಿಸಿ.. ಸ್ವಲ್ಪ ಸಿದ್ಧತೆ ಮಾಡಿಕೊಂಡು ಬರಲಿ" 

ಸಮಯ ಸಂಜೆ ಏಳು ಘಂಟೆ    

ಮತ್ತೆ ಫೋನಿನ ಬಾಯಿಗೆ ಬಾಯಿ ಕೊಟ್ಟೆ.. "ಅಮ್ಮ ಬೇಗ ಬಂದು ಬಿಡು...."

ಮತ್ತೆ ಒಳಗೋಡಿದೆ.. 

ಅಲ್ಲಿ ಮತ್ತೆ ಯಾರೂ ಕಾಣಲಿಲ್ಲ.. ಕೋಣೆಗೆ ಹೋಗಿ ನೋಡಿದೆ.. ಹಾಸಿಗೆ ಖಾಲಿ.. 

"ಓಹ್ ನೀವಾ ಕೆಳಗಡೆ ಕರೀತಾ ಇದ್ದಾರೆ ಬೇಗ ಹೋಗಿ"

ಹೃದಯದ ಬಡಿತ ಶತಕಾರಾಧನೆ ಮಾಡುತ್ತಿತ್ತು.. 

ಗಡಿಬಿಡಿಯಿಂದ ಕೆಳಗೆ ಓಡಿ ಬಂದೆ

ಹೆಣ್ಣು ಕೊಟ್ಟವರು... ದಂತ ಪಂಕ್ತಿಗಳನ್ನು ಬೀರುತ್ತಾ.. "ತಗೊಳ್ಳಿ ಬಾಯಿ ಸಿಹಿ ಮಾಡಿಕೊಳ್ಳಿ.."

ನನಗೆ ಮೇಲೆ ತಿರುಗುತ್ತಿರುವ ಪಂಕ ವೇಗವೋ ಅಥವಾ ನನ್ನ ತಲೆಯೋ ಅನುಮಾನ ಬಂತು.. ತಲೆ ಗಟ್ಟಿಯಾಗಿ ಹಿಡಿದುಕೊಂಡೆ.. ಚಾವಟಿ ಇರಲಿಲ್ಲ ಆದರೆ ತಲೆ ಸುತ್ತುತ್ತಿತ್ತು.. ಹಾಗೆ ಕುಳಿತೆ 

"ನೋಡಿ ಇಲ್ಲಿ ನೋಡಿ ಇಲ್ಲಿ... "

"ಕಣ್ಣನ್ನು ನಿಧಾನವಾಗಿ ಬಿಟ್ಟು ನೋಡಿದೆ"

ಅರೆ ಅರೆ... ಸೂಪರ್ ಸೂಪರ್... ಮನಸ್ಸು ಹಾರಾಡಿತು

ಹಾಗೆ ಮನಸ್ಸಲ್ಲೇ ಕೈಮುಗಿದೆ... ಮತ್ತೆ ಫೋನಿನ ಕಡೆ ಓಡಿದೆ 

"ಅಮ್ಮಾ.... "

"ಏನಾಯ್ತು "  

 "ಹೆಣ್ಣು ಮಗು... " ಆನಂದದಿಂದ ಕಿರುಚಿದ್ದೆ 

"ವಾಹ್ ಲಕ್ಷ್ಮಿ ಬಂದಳು ಕಣೋ... "

ಫೋನಿನಲ್ಲೇ ಅಮ್ಮಾ ಆನಂದ ಭಾಷ್ಪ.. "ಬೇಗ ಬಂದು ಬಿಡಮ್ಮ"

ಮತ್ತೆ ಮರಳಿ ಬಂದೆ 

"ಶ್ರೀ ಬೆಳಿಗ್ಗೆ ಇಂದ ಏನು ತಿಂದಿಲ್ಲ.. ಏನಾದರೂ ತಿಂದು ಬನ್ನಿ.. "

"ಇಲ್ಲಾ ಕಣೆ.. ನಾ ಅರಾಮಿದ್ದಿನಿ.. ತಲೆ ಕೆಡಿಸಿಕೊಳ್ಳಬೇಡ... ಸಿಹಿ ತಿಂದೆನಲ್ಲ ನನಗೆ ಸಾಕು"

ಒಂದು ಸುಂದರ ಚಲನ ಚಿತ್ರದ ಕಥೆಯಲ್ಲಿ ನಡೆದ ಹಾಗೆ.. ಎಲ್ಲವೂ ಸುಸೂತ್ರವಾಗಿ ನಡೆಯಿತು.. ಯಾರಿಗೂ ಆತಂಕವಿಲ್ಲ.. ಯಾರಿಗೂ ನೋವಿಲ್ಲ.. 

ಈ ಮಗುವಿಗೆ ಒಂದು ಸುಂದರ ಹೆಸರು ಬೇಕು... ಯಾರಿಗೂ ಹಿಂಸೆ ಕೊಡದೆ ಭುವಿಗೆ ಬಂದ ಈ ಕೂಸಿಗೆ ಅಷ್ಟೇ ಸುಕೋಮಲ ಹೆಸರು ಬೇಕು ಎನ್ನುವ ಹಂಬಲವಿತ್ತು ... 

ಮೊದಲಿಂದಲೂ ಒಂಥರಾ ಕ್ರಾಕ್ ತರಹನೆ ಯೋಚನೆ ಮಾಡುತ್ತಿದ್ದ ನನಗೆ ಹೊಳೆದದ್ದು ನಾ ಬಹುವಾಗಿ ಮೆಚ್ಚಿದ್ದ ರೇಡಿಯೋ ಸಿಟಿ ೯೧ (ಆವಾಗ ಬರಿ ೯೧) ಬೆಳಿಗ್ಗೆ ಹನ್ನೊಂದು ಘಂಟೆಯಿಂದ ಒಂದು ಘಂಟೆಯವರಗೆ ಕಾರ್ಯಕ್ರಮ ನಿರೂಪಕಿಯಾಗಿದ್ದ "ಶೀತಲ್ ಅಯ್ಯರ್".. ಅವರ ಧ್ವನಿಗೆ ಮರುಳಾಗಿದ್ದೆ.. ಅವರ ಧ್ವನಿಯನ್ನು ರೆಕಾರ್ಡ್ ಮಾಡಿಕೊಳ್ಳಬೇಕು ಸದಾ ಕೇಳಿಕೊಳ್ಳಬೇಕು ಅನ್ನುವಷ್ಟು ಹುಚ್ಚು... .. ಸರಿ ಹೆಸರು ಸಿಕ್ಕೆ ಬಿಟ್ಟಿತು... 




ಕೋಗಿಲೆ ಕಂಠ .... ಶೀತಲ್ ಅಯ್ಯರ್!!!

"ನಿಮಗೆ ಏನು ಇಷ್ಟವೋ ನನಗೂ ಅದೇ ಇಷ್ಟಾ ಶ್ರೀ.. " ಮನದನ್ನೆ ಉವಾಚ.. ಸರಿ ಸ್ವರ್ಗಕ್ಕೆ ಒಂದು ಎರಡು ಮೂರೇ ಗೇಣು!!!

"ಶೀತಲ್ ಶೀತಲ್ ಶೀತಲ್" ಹೆಸರು ಖಾಯಂ ಆಯಿತು.. 

ಕೆಲದಿನಗಳ ನಂತರ.. ಹೀಗೆ ಏನೋ ಯೋಚನೆ ಮಾಡುತ್ತಾ ಕುಳಿತಿದ್ದಾಗ.. 

ಹಾಗೆ ಕ್ಯಾಲೆಂಡರ್ ಕಡೆ ನೋಡಿದೆ.. 

ಬೆಚ್ಚಿ ಬಿದ್ದೆ 

೨೧ನೆ ಜನವರಿ ೨೦೦೩.. ಮಂಗಳವಾರ.. ಎದೆ ಬಡಿತ ಹೆಚ್ಚಿತು.. 

ಆಸ್ಪತ್ರೆ ಹೆಸರು "ವಿನಾಯಕ ಹಾಸ್ಪಿಟಲ್" ಎದೆ ತಾಳ ತಪ್ಪುತ್ತಿತ್ತು 

"ಸಂಕಷ್ಟ ಚತುರ್ಥಿ" ತಲೆ ಸುತ್ತ ತೊಡಗಿತು

ನನಗೆ ಇಷ್ಟವಾದ ದಿನ, ಇಷ್ಟವಾದ ದೇವರ ವ್ರತ ಆಚರಿಸುವ ದಿನ.. ನಾನು ಅಂದು ಉಪವಾಸವಿದ್ದೆ.. ಮಡದಿಗೆ ತಿನ್ನೋಕೆ ಸೇರದೆ ಅವಳು ಉಪವಾಸ.. 

ಒಂದು ರೀತಿಯಲ್ಲಿ ವ್ರತ ಮಾಡಿ ಪಡೆದ ಮಗು ಎನ್ನುವಂತೆ ಭುವಿಗೆ ಜಾರಿದ ಶೀತಲ್.. ಹೆಸರಿನ ಹಾಗೆಯೇ ಶಾಂತ ಸ್ವಭಾವ.. 

ಶಾಲೆಯಲ್ಲಿ "ನಿಮ್ಮ ಬೆಸ್ಟ್ ಫ್ರೆಂಡ್ ಹೆಸರು ಹೇಳಿ" ಎಂದು ಎಲ್ಲರನ್ನು ಕೇಳಿದಾಗ.. ಇವಳ ಸರದಿ ಬಂದಾಗ ಹೇಳಿದ್ದು 

"ಶ್ರೀಕಾಂತ್ ಕೆ ಎಂ"

"ಶೀತಲ್.. ಆ ಹೆಸರಿನವರು ಯಾರು ಇಲ್ಲವಲ್ಲ ನಿನ್ನ ಕ್ಲಾಸ್ ನಲ್ಲಿ"

"ಅವರು ನನ್ನ ಅಪ್ಪ" ಎಂದು ಹೆಮ್ಮೆಯಿಂದ ಹೇಳಿದ ಸುಪುತ್ರಿ.. 

ಐದು ವರ್ಷಗಳ ಹಿಂದೆ ನನ್ನ ಹುಟ್ಟು ಹಬ್ಬಕ್ಕೆ.. ಶುಭಾಷಯ ಪತ್ರವನ್ನು ಬರೆದಾಗ.. ಹೃದಯ ಆನಂದದಿಂದ ಮುತ್ತಿನ ಮಳೆಯನ್ನೇ ಸುರಿಸಿತ್ತು... 

ದೇವರು ಕೊಟ್ಟ ಮಗು. ದೇವರು ಕೊಟ್ಟ ಸ್ನೇಹಿತೆ.. ಅಪ್ಪ ನೀವು ಗೆಲ್ಲುತ್ತೀರ.. ಗೆಲ್ಲಲೇ ಬೇಕು ಎಂದು ನನಗೆ ಸ್ಫೂರ್ತಿ ನೀಡುವ ಶೀತಲ್ ಗೆ ಇಂದು ಜನುಮದಿನ.. ಹುಟ್ಟಿದ ನಂತರ ಮೊದಲ ಬಾರಿಗೆ ಮಂಗಳವಾರವೇ ಬಂದಿದೆ... 


ನನ್ನ ಮುದ್ದು ಸ್ನೇಹಿತೆ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು!!!